Homeಕರ್ನಾಟಕಉಡುಪಿ ವಿಡಿಯೋ ಪ್ರಕರಣ: ಹಾಸ್ಟೆಲ್ ಮಕ್ಕಳ ಹುಚ್ಚಾಟವೂ, ಹಿಡನ್ ಹಿಂದುತ್ವದ ಹಿಕಮತ್ತೂ!!

ಉಡುಪಿ ವಿಡಿಯೋ ಪ್ರಕರಣ: ಹಾಸ್ಟೆಲ್ ಮಕ್ಕಳ ಹುಚ್ಚಾಟವೂ, ಹಿಡನ್ ಹಿಂದುತ್ವದ ಹಿಕಮತ್ತೂ!!

- Advertisement -
- Advertisement -

ಉಡುಪಿಯನ್ನು ಬಲಪಂಥೀಯರು ಒಂದೇ ವರ್ಷದ ಒಳಗೆ ಹಿಂದುತ್ವದ ಹರಾಕಿರಿ ಮೂಲಕ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದ್ದಾರೆ! ಸ್ಥಳೀಯ ಪ್ಯಾರಾ ಮೆಡಿಕಲ್ ಕಾಲೇಜಿನ ತುಂಟ ಹುಡುಗಿರು ಮಾಡಿದ ದುಬಾರಿ ಕುಚೇಷ್ಟೆಯನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿ-ಸಂಘ ಪರಿವಾರಿಗರು ಹಿಂದುತ್ವ ರಾಜಕಾರಣದ ಮೈಲೇಜಿಗೆ ಹವಣಿಸುತ್ತಿದ್ದಾರೆ. ಕಳೆದ ವರ್ಷ ಸರಿಸುಮಾರು ಇದೇ ಹೊತ್ತಲ್ಲಿ ಬಲಪಂಥೀಯ ಕೃಪಾಪೋಷಿತ ಹಿಜಾಬ್ ಪ್ರಕರಣದಿಂದ ಉಡುಪಿ ದೇಶವಿದೇಶದಲ್ಲಿ ಸದ್ದು ಮಾಡಿತ್ತು. ಕಳೆದ ಅಸೆಂಬ್ಲಿ ಚುನಾವಣೆಯ ಹೀನಾಯ ಸೋಲಿನಿಂದ ಹತಾಶರಾಗಿರುವ ಹಿಂದುತ್ವದ ಫೇಕ್ ಫ್ಯಾಕ್ಟರಿ “ತಂತ್ರಜ್ಞರು” ಮೂವರು ಮುಸ್ಲಿಮ್ ವಿದ್ಯಾರ್ಥಿನಿಯರು ಮಾಡಿದ ಹುಚ್ಚಾಟದ ತಮಾಷೆಯ ಸುತ್ತ ಹಿಂದು ಹೆಣ್ಣಿನ ಮಾನ, ಜಿಹಾದ್, ಹಿಡನ್ ಕ್ಯಾಮೆರಾ, ವಿಡಿಯೋ ಚಿತ್ರೀಕರಣವೇ ಮುಂತಾದ ಹಸಿಹಸಿ ಸುಳ್ಳುಗಳನ್ನು ಪೋಣಿಸುತ್ತ ರಾಜಕೀಯ ಮರುಹುಟ್ಟಿಗೆ ಮಸಲತ್ತು ಮಾಡುತ್ತಿದ್ದಾರೆಂದೇ ವ್ಯಾಖ್ಯಾನಿಸಲಾಗುತ್ತಿದೆ.

ನೇತ್ರಜ್ಯೋತಿ ಹಾಸ್ಟೆಲ್‌ನಲ್ಲಿ ಆಗಿದ್ದೇನು?

ಉಡುಪಿಯ ಹೆಸರಾಂತ ನೇತ್ರ ತಜ್ಞ ಡಾ.ಕೃಷ್ಣಪ್ರಸಾದ್ ಮತ್ತವರ ಪತ್ನಿ ರಶ್ಮಿ ಕೃಷ್ಣಪ್ರಸಾದ್ ಆಪ್ಟೋಮೆಟ್ರಿ ಅಂಡ್ ಪ್ಯಾರಾಮೆಡಿಕಲ್ ಸಯನ್ಸ್ ಕಾಲೇಜೊಂದನ್ನು ನಡೆಸುತ್ತಿದ್ದಾರೆ. ಸದರಿ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್‌ನ ಮೂವರು ಮುಸ್ಲಿಮ್ ಹುಡುಗಿಯರು ತಮ್ಮದೇ ಸಮುದಾಯದ ಗೆಳತಿಯೊಬ್ಬಳಿಗೆ ಕಾಡಿ, ಫ್ರಾಂಕ್ (ಕುಚೇಷ್ಟೆ) ಮಾಡುವ ಪ್ಲಾನು ಹಾಕಿಕೊಂಡಿದ್ದಾರೆ. ಆಕೆ ಶೌಚಾಲಯಕ್ಕೆ ಹೋದಾಗ ಹೊರಗೆ ನಿಂತು ಮೇಲಿನ ಗ್ಯಾಪ್‌ನಿಂದ ಮೊಬೈಲ್ ಹಿಡಿದು ಚಿತ್ರೀಕರಿಸುವ ಯೋಜನೆ ಹುಡುಗಿಯರದಾಗಿತ್ತು. ಜುಲೈ 18ರಂದು ಈ ಹುಡುಗಿಯರು ತಮ್ಮ ಗೆಳತಿ ಶೌಚಾಲಯದಲ್ಲಿ ಇದ್ದಾಳೆಂದು ಭಾವಿಸಿ ಚಿತ್ರೀಕರಣ ಮಾಡಿದ್ದಾರೆ. ಆದರೆ ಒಳಗಿದ್ದದ್ದು ಅವರ ಗೆಳತಿಯಾಗಿರದೆ ಬೇರೊಬ್ಬ ಹಿಂದು ಹುಡುಗಿ. ಆಕೆಗೆ ತನ್ನ ನೆತ್ತಿಯ ಮೇಲೆ ಮೊಬೈಲ್ ಒಂದು ಸರಿದಾಡುತ್ತಿರುವುದು ಅರಿವಾಗಿದೆ; ತಕ್ಷಣ ಹೊರಬಂದಿದ್ದಾಳೆ. ಹೊರಗಿದ್ದ ಕುಚೇಷ್ಟೆಯ ಮೂರೂ ಹುಡುಗಿಯರು ಗುರಿ ತಪ್ಪಿ ಮುಜುಗರಕ್ಕೀಡಾಗಿದ್ದಾರೆ. ಆ ಕೂಡಲೆ ಈ ಮುಸ್ಲಿಮ್ ಸಮುದಾಯದ ಮೂವರೂ ವಿದ್ಯಾರ್ಥಿನಿಯರು ತಮ್ಮ ಹಿಂದು ಸಹಪಾಠಿಯ ಕ್ಷಮೆ ಯಾಚಿಸಿ ಆಕೆಯ ಎದುರೇ ವಿಡಿಯೋ ಡಿಲೀಟ್ ಮಾಡಿದ್ದಾರೆ. ಆತುರ-ಆತಂಕದಲ್ಲಿ ಮಾಡಿದ್ದ ಆ ವಿಡಿಯೋ ಸ್ಪಷ್ಟವಾಗಿಯೂ ಇರಲಿಲ್ಲ ಎಂದು ಆ ನಾಲ್ಕೂ ಹುಡುಗಿಯರು ಮತ್ತು ಕಾಲೇಜಿನ ಪ್ರಾಚಾರ್ಯರು ಪೊಲೀಸರ ಮುಂದೆ ಹೇಳಿದ್ದಾರೆ.

ಈ ಘಟನೆ ಬಗ್ಗೆ ಹಾಸ್ಟೆಲ್ಲಿನ ಹುಡುಗಿಯರಿಗೆಲ್ಲ ಗೊತ್ತಾಗಲು ತಡವಾಗಲಿಲ್ಲ. ಸಂತ್ರಸ್ತ ಹುಡುಗಿ ಗೆಳತಿಯರ ಕುಚೇಷ್ಟೆಯನ್ನು ಮನ್ನಿಸಿದ್ದರೂ ಮಾನಸಿಕವಾಗಿ ಆಘಾತಗೊಂಡಿದ್ದಳು. ಇದನ್ನು ಯಾರೋ ಒಂದೆರಡು ದಿನದ ಬಳಿಕ ಪ್ರಾಚಾರ್ಯರ ಗಮನಕ್ಕೆ ತಂದಿದ್ದಾರೆ. ಪ್ರಾಚಾರ್ಯರು ಮತ್ತು ಆಡಳಿತ ಮಂಡಳಿಯ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ತರಲೆ ತರುಣಿಯರು ಮತ್ತು ಸಂತ್ರಸ್ತ ವಿದ್ಯಾರ್ಥಿನಿಯ ಪಾಲಕರನ್ನು ಕರೆಸಿದ್ದಾರೆ. “ನಾವೆಲ್ಲ ಸಹಪಾಠಿ ಗೆಳತಿಯರು; ಒಟ್ಟಿಗೆ ಇರುವವರು. ಏನೋ ತಮಾಷೆಗೆ ಮಾಡಲು ಹೋಗಿ ಎಡವಿದ್ದಾರೆ. ನನ್ನಂತೆ ಅವರೂ ಹೆಣ್ಣುಮಕ್ಕಳು. ಇದನ್ನು ಇಲ್ಲಿಗೆ ಮುಗಿಸೋಣ. ಪೊಲೀಸ್ ಕಂಪ್ಲೇಂಟು ಮತ್ತಿತರ ಕಾನೂನು ಪ್ರಕ್ರಿಯೆ ಎಂದು ವಿವಾದವಾಗುವುದು ಬೇಡ. ಇದು ನಮ್ಮ ನಾಲ್ವರ ಭವಿಷ್ಯದ ಪ್ರಶ್ನೆ. ಹಾಗಾಗಿ ಇಲ್ಲಿಗೆ ಎಲ್ಲ ಮುಗಿಸೋಣ” ಎಂದು ಸಂತ್ರಸ್ತ ಹುಡುಗಿ ಹೇಳಿದಳಷ್ಟೇ ಅಲ್ಲ, ತಾಯಿಯ ಸಮಕ್ಷಮದಲ್ಲಿಯೇ ಕಾನೂನು ಕ್ರಮ ಬೇಡವೆಂದು ಲಿಖಿತವಾಗಿ ಬರೆದೂ ಕೊಟ್ಟಿದ್ದಾಳೆ. ಪ್ರಾಚಾರ್ಯರ ಕೊಠಡಿಯಲ್ಲೆ ಎಲ್ಲವೂ ತನಿಖೆಯಾಗಿ ಒಮ್ಮತದಲ್ಲಿ ಇತ್ಯರ್ಥವಾಗಿದೆ.

ವಾರದ ನಂತರ ವಿವಾದವಾಯ್ತ!

ಕಾಲೇಜಿನ ಅಂಗಳದಲ್ಲಿ ತಪ್ಪಿನ ಅರಿವಾಗಿ ಕ್ಷಮೆ ಕೋರಿ ಸುಖಾಂತ್ಯವಾಗಿದ್ದ “ವಿಡಿಯೋ ಪ್ರಕರಣ” ಒಂದು ವಾರದ ನಂತರ ಇದ್ದಕ್ಕಿದ್ದಂತೆ ಬಲಪಂಥೀಯರ ’ಧರ್ಮಕಾರ್ಯಾಚರಣೆ’ಯ “ವಸ್ತು”ವಾಗಿಬಿಟ್ಟಿತು! ತನ್ನ ಸಹಪಾಠಿ ಹಿಂದು ವಿದ್ಯಾರ್ಥಿನಿಯರದೇ ಅಶ್ಲೀಲ ವಿಡಿಯೋ ಹರಿಬಿಟ್ಟರೂ ಸುಮ್ಮನಿರುವ ಬಲಪಂಥೀಯ ಬಹಾದ್ದೂರರಿಗೆ ಮತ್ತು ಸಂಘ ಪರಿವಾರದ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ತೀರ್ಥಹಳ್ಳಿ ಅಧ್ಯಕ್ಷ ಪ್ರತೀಕ್ ಗೌಡಗೆ ಉಡುಪಿ ವಿಡಿಯೋ ಪ್ರಕರಣದಲ್ಲಿ ಮುಸಲ್ಮಾನ ಹುಡುಗಿಯರಿರುವುದು ಜಿಹಾದ್ ಭೂತವಾಗಿ ಕಾಣಿಸಿದೆ! ಯಾವ ಕ್ಷುಲ್ಲಕ ಘಟನೆಯಾದರೂ ಸರಿ, ಅದರಲ್ಲಿ ಮುಸಲ್ಮಾನರಿದ್ದಾರೆಂದರೆ ದೊಡ್ಡ ವಿವಾದವಾಗಿಸಿ ಹಿಂದುತ್ವ ಪ್ರಚಾರ ಮತ್ತು ದ್ವೇಷಕ್ಕೆ ಬಳಸಿಕೊಳ್ಳಲು ಸದಾ ಸನ್ನದ್ಧವಾಗಿರುವ ಸಂಘಿಗಳು ಉಡುಪಿ ಪ್ರಕರಣ ಬಿಡುತ್ತಾರಾ? ನೋಡುನೋಡುತ್ತಿದ್ದಂತೆಯೆ ಉಡುಪಿ ನೆಮ್ಮದಿ ಕಳೆದುಕೊಳ್ಳುವಂತಾಯಿತು; ಸುಮಾರು ಎರಡು ದಶಕದ ಹಿಂದೆ ಹಾಜಬ್ಬ-ಹಸನಬ್ಬ ಎಂಬ ಬ್ಯಾರಿ ಜಾನುವಾರು ವ್ಯಾಪಾರಿಗಳನ್ನು ಬೆತ್ತಲೆಮಾಡಿ ಬಡಿದ “ಸಾಹಸ”ದ ಬಳಿಕ ಕೇಸರಿ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಯಶ್ಪಾಲ್ ಸುವರ್ಣ ಈಗ ಉಡುಪಿಯ ಶಾಸಕ; ಹಿಜಾಬ್ ವಿವಾದ ಭುಗಿಲೆದ್ದಾಗ ಕಾಲೇಜಿಗೆ ನುಗ್ಗಿ ಹಿಜಾಬ್‌ಧಾರಿ ಹುಡುಗಿಯರನ್ನು ಹೊರಗೆಳೆದು ತಂದ “ಖ್ಯಾತಿ”ಯ ಈ ಯಶ್ಪಾಲ್ ಮುಂದೆನಿಂತು ತಲೆಬುಡವಿಲ್ಲದ ಇಸ್ಲಾಮೋಫೋಬಿಕ್ ಹೇಳಿಕೆ-ಪ್ರತಿಭಟನೆ ಶುರುಹಚ್ಚಿಕೊಂಡರು! “ನೇತ್ರಜ್ಯೋತಿ ಕಾಲೇಜಿನ ಹಾಸ್ಟೆಲ್ ಪ್ರಕರಣಕ್ಕೆ ಜಿಹಾದಿ ನಂಟಿದೆ; ಹಿಂದು ಹುಡುಗಿಯರನ್ನು ಮತಾಂತರಿಸುವ ಹುನ್ನಾರವಿದೆ. ಹಾಸ್ಟೆಲ್ ಬಾತ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಇಡಲಾಗಿತ್ತು” ಎಂದೆಲ್ಲಾ ವ್ಯವಸ್ಥಿತ ಅಪಪ್ರಚಾರ ಆಗಲಾರಂಭಿಸಿತು. ಬಿಜೆಪಿಯ ರಾಜ್ಯಮಟ್ಟದ ಮುಖಂಡಮಣಿಗಳೂ ಇಂಥದೆ ಸುಳ್ಳು-ಕಪೋಲಕಲ್ಪಿತ ಒಂದೆಳೆಯ ವಾದ ಮಂಡಿಸತೊಡಗಿದರು.

ಇದಕ್ಕೆ ಸಮಾನಾಂತರವಾಗಿ ಸಂಘ ಪರಿವಾರದ ಫೇಕ್ ಫ್ಯಾಕ್ಟರಿಗಳಲ್ಲಿ ಇನ್ನಷ್ಟು ನಕಲಿ ನರೇಟಿವ್‌ಗಳು ಜನ್ಮತಳೆಯಹತ್ತಿದವು. ನೇತ್ರಜ್ಯೋತಿ ಕಾಲೇಜಿನ ಮುಸ್ಲಿಮ್ ಹುಡುಗಿಯರು ಹಿಂದು ಹುಡುಗಿಯರು ಬಾತ್‌ರೂಮ್ ದೃಶ್ಯಗಳನ್ನು ಹಿಡನ್ ಕ್ಯಾಮರಾದಿಂದ ಸೆರೆಹಿಡಿದು ಮುಸ್ಲಿಮ್ ಹುಡುಗನೊಬ್ಬನಿಗೆ ಕಳುಹಿಸುತ್ತಾರೆ; ಆತ ವಿವಿಧ ಮುಸ್ಲಿಮ್ ವಾಟ್ಸ್‌ಆಪ್ ಗ್ರೂಪ್‌ಗಳಿಗೆ ಹಂಚುತ್ತಾನೆ. ತನ್ಮೂಲಕ ಹಿಂದು ಹುಡುಗಿಯರ ಬ್ಲಾಕ್‌ಮೇಲ್ ಮಾಡಿ ಜಿಹಾದಿಗೆ-ಮತಾಂತರಕ್ಕೆ ಬಳಸಿಕೊಳ್ಳಲಾಗುತ್ತಿದೆ; ಇಂಥ ಘಟನೆ ಹಿಂದಿನಿಂದಲೂ ಸದರಿ ಕಾಲೇಜಿನಲ್ಲಿ ಆಗುತ್ತಿದೆ ಎಂಬಿತ್ಯಾದಿ ಪ್ರಚೋದನಾಕಾರಿ ಕತೆಗಳನ್ನು ಹೆಣೆದು ಹರಿಬಿಡಲಾಯಿತು. ’ಒನ್ ಇಂಡಿಯಾ’ ಎಂಬ ಹಿಂದುತ್ವದ ಟೂಲ್‌ನಂತಿರುವ ಯೂಟ್ಯೂಬ್ ಚಾನೆಲ್‌ನಲ್ಲಿ ಎಲ್ಲಿಯದೋ ಸ್ನಾನಗೃಹದ ವಿಡಿಯೋವನ್ನು ಎಡಿಟ್ ಮಾಡಿ- ಇದು ನೇತ್ರಜ್ಯೋತಿ ಹಾಸ್ಟೆಲ್ ತುಣುಕು- ಎಂದು ಹಸಿಹಸೀ ಸುಳ್ಳು ಪ್ರಸಾರ ಮಾಡಲಾಯಿತು. ಇದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ಉಡುಪಿಯಲ್ಲಿ ಹಿಂದುತ್ವ ಕೆರಳಿತು. ಸಂಘಪರಿವಾರದ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ತಲೆಯಲ್ಲಿ ಇಲ್ಲಸಲ್ಲದ್ದು ತುಂಬಿ ಬೀದಿಗಿಳಿಸಲಾಯಿತು.

ಕಾಲೇಜಿನ ಹೊರಗೆ ಹಾಸ್ಟೆಲ್ ಹುಡುಗಿಯರ ಫನ್ ಪ್ರಕರಣಕ್ಕೆ ಮತೀಯ ಬಣ್ಣ ಬಳಿಯಲಾಗುತ್ತಿರುವುದನ್ನು ಕಂಡು ಕಂಗಾಲಾದ ಕಾಲೇಜಿನ ಆಡಳಿತ ಮಂಡಳಿ ಆರೋಪಿ ಮುಸ್ಲಿಮ್ ವಿದ್ಯಾರ್ಥಿನಿಯರು ಪರವಾನಗಿ ಇಲ್ಲದಿದ್ದರೂ ಹಾಸ್ಟೆಲ್‌ನಲ್ಲಿ ಮೊಬೈಲ್ ಬಳಸಿದ ತಪ್ಪಿಗಾಗಿ ಕಾಲೇಜಿನಿಂದ ಅಮಾನತು ಮಾಡಿತಲ್ಲದೆ, ಪೊಲೀಸರಿಗೆ ದೂರುಕೊಟ್ಟಿತು; ವಿಡಿಯೋಕ್ಕೆ ಬಳಸಲಾಗಿದೆ ಎನ್ನಲಾದ ಮೊಬೈಲ್‌ಅನ್ನು ಪೊಲೀಸರಿಗೆ ಹಸ್ತಾಂತರಿಸಿತು. ಆಡಳಿತ ಮಂಡಳಿಯ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ಪತ್ರಿಕಾಗೋಷ್ಠಿ ಕರೆದು “ಇದು ಹುಡುಗಿಯರ ತಮಾಷೆ ಪ್ರಸಂಗ; ಇದರಲ್ಲಿ ಯಾವುದೇ ಮತೀಯ ಷಡ್ಯಂತ್ರವಿಲ್ಲ; ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಅಥವಾ ಮೊಬೈಲ್ ಇಡಲು ಸ್ಥಳಾವಕಾಶವಿಲ್ಲ. ಹೊರಗಿನಿಂದ ಮೊಬೈಲ್‌ಅನ್ನು ಕೈಲಿ ಹಿಡಿದೇ ವಿಡಿಯೋ ಚಿತ್ರೀಕರಣಕ್ಕೆ ಪ್ರಯತ್ನ ಮಾಡಲಾಗಿದೆ. ಅದನ್ನು ವಿದ್ಯಾರ್ಥಿನಿಯರೇ ಡಿಲಿಟ್ ಕೂಡ ಮಾಡಿದ್ದಾರೆ” ಎಂದು ಹೇಳಿದರು.

ಮತ್ತೊಂದೆಡೆ ಪೊಲೀಸರು ತನಿಖೆಯನ್ನು ಎಲ್ಲ ಆಯಾಮದಲ್ಲಿ ಪರಿಣಾಮಕಾರಿಯಾಗಿಯೇ ಕೈಗೊಂಡರು. ಆರೋಪಿ ವಿದ್ಯಾರ್ಥಿನಿಯರು ಮತ್ತು ಆಡಳಿತ ಮಂಡಳಿ ಮೇಲೆ ಪ್ರತ್ಯೇಕ ಸ್ವಯಂಪ್ರೇರಿತ ದೂರನ್ನು ಮಲ್ಪೆ ಪೊಲೀಸರ ದಾಖಲಿಸಿದರು. ನಾವು ಮೊಬೈಲ್ ಜಾಲಾಡಿದ್ದೇವೆ.ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳಿಸಿದ್ದೇವೆ. ಅದರಲ್ಲಿ ಯಾವುದೇ ಅಶ್ಲೀಲ ವಿಡಿಯೋಗಳಿಲ್ಲ; ಮೊಬೈಲ್‌ನಿಂದ ಆಕ್ಷೇಪಾರ್ಹ ವಿಡಿಯೋ ಬೇರೆ ಮೊಬೈಲ್ ಅಥವಾ ಸಾಮಾಜಿಕ ಜಾಲ ತಾಣಕ್ಕೆ ಹಂಚಿಕೆಯಾದ ಪುರಾವೆಗಳೂ ಸಿಕ್ಕಿಲ್ಲ; ಕಿಡಿಗೇಡಿಗಳು ಬೇರ್‍ಯಾವುದೋ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿಸಿ “ಉಡುಪಿ ಹಾಸ್ಟೇಲ್ ಕೇಸ್” ಎಂದು ಬಿಂಬಿಸುತ್ತಿದ್ದಾರೆ; ಸಾರ್ವಜನಿಕರು ಇಂಥ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಎಸ್ಪಿ ಅಕ್ಷಯ್ ಹಾಕೆ ಹೇಳಿಕೆ ನೀಡಿದರು. ಇಷ್ಟಾದರೂ ಸಂಘ ಪರಿವಾರದ ತಲೆಬುಡವಿಲ್ಲದ ನಕಲಿ ನರೇಟಿವ್‌ಗಳು ಮಾತ್ರ ನಿಲ್ಲಲೇ ಇಲ್ಲ. ಇಸ್ಲಾಮೋಫೋಬಿಕ್ ವದಂತಿಗಳನ್ನು ಯೋಜನಾಬದ್ಧವಾಗಿ ಹಬ್ಬಿಸಲಾಯಿತು. ಸುಳ್ ಸುದ್ದಿ ದೇಶದ ಗಡಿ ದಾಟಿ ಆಚೆಗೂ ಹೋಯಿತು. ಕಾಲೇಜಿನ ಅಂಗಳದಲ್ಲಿ ಬಗೆಹರಿದಿದ್ದ ಮಕ್ಕಳಾಟಿಕಯ ಅತಿರೇಕದ ಅವಾಂತರ ಇಷ್ಟೊಂದು ಸೆನ್‌ಸೇಶನಲ್ ಸುದ್ದಿ ಆಗಿದ್ದು ಹೇಗೆಂದು ಮೂಲ ಹುಡುಕುತ್ತ ಹೋದರೆ ಉಡುಪಿಯ ಕಟ್ಟರ್ ಸಂಘಿ ಫ್ಯಾಮಿಲಿಯ ಹುಡುಗಿ ರಶ್ಮಿ ಸಾಮಂತ್ ಎದುರಾಗುತ್ತಾರೆ!

ಮತೀಯ ಆಯಾಮ ನೀಡಿದ ರಶ್ಮಿ ಸಾಮಂತ್!!

ಹುಡುಗಿಯರ ಹಾಸ್ಟೆಲ್‌ನ ವಿಡಿಯೋ ಅವಾಂತರ ಬಗೆಹರಿದು ಎಲ್ಲ ತಣ್ಣಗಾಗಿದ್ದಾಗ ಹಠಾತ್ ಕೋಮು ಕಾವೇರುವಂತಾಗಿದ್ದೇ ಈ ರಶ್ಮಿ ಸಾವಂತ್‌ರ ಮತೀಯ ಮನಃಸ್ಥಿತಿಯ ಟ್ವೀಟ್‌ನಿಂದ. ಪ್ರಕರಣ ಕಾಲೇಜಿನ ಮಟ್ಟದಲ್ಲೇ ಇತ್ಯರ್ಥವಾದ ವಾರದ ಮೇಲೆ ಈ ರಶ್ಮಿ ಸಾಮಂತ್‌ಗೆ ಅದ್ಹೇಗೋ ಗೊತ್ತಾಗಿದೆ. ಗೊತ್ತಾಗಿದ್ದೇ ತಡ, ಜನಾಂಗೀಯ ದ್ವೇಷ, ಹಿಂದುತ್ವವಾದದಂಥ ಇಸ್ಲಮೋಫೋಬಿಕ್ ಜಾಯಮಾನದ ರಶ್ಮಿ ಸಾಮಂತ್ ನೇತ್ರಜ್ಯೋತಿ ಕಾಲೇಜಿನ ಹುಂಬ ಹುಡುಗಿಯರ ಮತೀಯ ಸೋಂಕಿಲ್ಲದ ತಮಾಷೆಗೆ ಮುಸಲ್ಮಾನ ದ್ವೇಷದ ನಂಜಿನ ನಂಟು ಥಳಕುಹಾಕಿ ಟ್ವೀಟ್ ಮಾಡಿದ್ದಾರೆ. ಇದನ್ನು ಬಳಸಿಕೊಂಡ ಬಿಜೆಪಿಯ ಐಟಿ ಸೆಲ್ ಕಮಾಂಡರ್ ಅಮಿತ್ ಮಾಳವೀಯ ತನ್ನ ಪಕ್ಷದ ಸಿದ್ಧಾಂತಕ್ಕೆ ತಕ್ಕಂತೆ ಟ್ವೀಟಿಸಿದ್ದಾರೆ. ಅದರ ಬೆನ್ನಿಗೆ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಆಯ್ಕೆ ಜಂಜಾಟದಲ್ಲಿ ಹೈರಾಣಾಗಿದ್ದ ರಾಜ್ಯ ಬಿಜೆಪಿ ಭೂಪರು ಮತ್ತು ಅಸಹಿಷ್ಣುತೆಯ ಸುಳ್‌ಸುದ್ದಿ ಸಂಘಿ ಶೂರರು ಒಟ್ಟೊಟ್ಟಿಗೆ ’ಜಾಗೃತ’ರಾಗಿಬಿಟ್ಟಿದ್ದಾರೆ. ಆನಂತರ ನಡೆದದ್ದೆಲ್ಲ ಮನುಷ್ಯ ಸಂಬಂಧ ಕೆಡಿಸುವ ಹಿಂದುತ್ವದ ಅಸಲಿ ವರಸೆಗಳೆ!!

ಇದನ್ನೂ ಓದಿ: ಉಡುಪಿ ಪ್ರಕರಣ ರಾಜಕೀಕರಣಗೊಳಿಸಬೇಡಿ, ಪೊಲೀಸರು ಕಾನೂನಿನಂತೆ ನಡೆದುಕೊಂಡಿದ್ದಾರೆ: ಖುಷ್ಬೂ ಸುಂದರ್

ಉಡುಪಿಯ ’ಇಲ್ಲದ ವಿಡಿಯೋ’ವನ್ನು ಇರುವಂತೆ ಬಿಂಬಿಸಿ ಹಿಂದುತ್ವದ ದೃಷ್ಟಿಕೋನದಿಂದ ಮೊಟ್ಟಮೊದಲು ಪ್ರತಿಕ್ರಿಯಿಸಿದ ರಶ್ಮಿ ಸಾಮಂತ್ ನಡೆ-ನುಡಿಗಳ ಬಗ್ಗೆ ಈಗ ಪರ-ವಿರೋಧದ ಚರ್ಚೆಗಳಾಗುತ್ತಿದೆ. ಅಷ್ಟಕ್ಕೂ ಈ ರಶ್ಮಿ ಸಾಮಂತ್ ಯಾರು? ಬಿಜೆಪಿ ಘಟಾನುಘಟಿಗಳೇಕೆ ಆಕೆಯ ಟ್ವೀಟ್‌ಗೆ ಅಷ್ಟೊಂದು ಮಹತ್ವ ಕೊಟ್ಟರು? ಎಂಬುದು ಕುತೂಹಲಕರವಾಗಿದೆ. ಹಿಂದುತ್ವದ ಬಗ್ಗೆ ಮಾತಾಡುವ ಉಡುಪಿಯ ಮಣಿಪಾಲ ಮೂಲದ ರಶ್ಮಿ ಸಾಮಂತ್ ಉನ್ನತ ಶಿಕ್ಷಣ ಪಡೆದದ್ದು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ. ಹಿಂದೂ ಇಕಾನಾಮಿ ಫೋರಮ್‌ನ ಕಾರ್ಯದರ್ಶಿ ದಿನೇಶ್ ಸಾವಂತ್ ಮಗಳೀಕೆ. ದಿನೇಶ್ ಸಾವಂತ್ ಸಂಘ ಪರಿವಾರದ ಚಿಂತನ ಚಿಲುಮೆಯಲ್ಲಿ ಗುರುತಿಸಲ್ಪಟ್ಟವರು; ಮಗಳು ಉತ್ತರ ಪ್ರದೇಶ್ ಸಿಎಂ ಆದಿತ್ಯನಾಥ್ ಆದಿಯಾಗಿ ಬಿಜೆಪಿಯ ದಿಲ್ಲಿ ಮಟ್ಟದ ಹಲವು ನಾಯಕರಿಗೆ ಆಪ್ತಳು. ಮೆಕಾನಿಕಲ್ ಇಂಜಿನಿಯರ್ ಆಗಿರುವ ರಶ್ಮಿ ಆಕ್ಸ್‌ಫರ್ಡ್‌ನ ಲಿನಾಕ್ರೆ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಗ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿದ್ದರು. ಆಕ್ಸ್‌ಫರ್ಡ್ ವಿವಿಯ ವಿದ್ಯಾರ್ಥಿ ಸಂಘದ ಮೊದಲ ಭಾರತೀಯ ಮೂಲದ ಅಧ್ಯಕ್ಷೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ರಶ್ಮಿ ತನ್ನ ಜನಾಂಗೀಯ ದ್ವೇಷದ ಸ್ವಭಾವದಿಂದ ಹೆಚ್ಚು ದಿನ ಆ ಸ್ಥಾನದಲ್ಲಿ ಇರಲಾಗಲಿಲ್ಲ.

ಬರ್ಲಿನ್ ಹತ್ಯಾಕಾಂಡವನ್ನು ತಮಾಷೆಯ ಸಂಗತಿಯಾಗಿಸಿಕೊಂಡು ತುಚ್ಛೀಕರಿಸಿ 2017ರಲ್ಲಿ ಇನ್‌ಸ್ಟಾಗ್ರಾಮ್ ಪೋಸ್ಟ್ ಒಂದನ್ನು ರಶ್ಮಿ ಸಾಮಂತ್ ಹಾಕಿದ್ದರು; 2019ರಲ್ಲಿ “ಚಿಂಗ್ ಚಾಂಗ್” (ಚೀನಿಯರ ಅವಮಾನಿಸುವ ಜನಾಂಗೀಯ ನಿಂದನೆಯ ಪದ)ನೊಂದಿಗೆ ಮಲೇಷಿಯಾದಲ್ಲಿದ್ದೇನೆ ಎಂದು ಪೋಸ್ಟ್ ಹಾಕಿದ್ದರು. ಮಂಗಳಮುಖಿಯರು ಮತ್ತು ಯಹೂದಿ ವಿರೋಧಿ ಪೋಸ್ಟ್ ಕೂಡ ಹಾಕಿದ್ದರು. ರಶ್ಮಿ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾದ ನಂತರ ಈ ಪೋಸ್ಟ್ ಭೂತಗಳೆಲ್ಲ ಎದ್ದು ಬೆನ್ನಿಗೆ ಬಿದ್ದಿದ್ದವು. ಆಕ್ಸ್‌ಫರ್ಡ್ ವಿದ್ಯಾರ್ಥಿ ಸಮೂಹವನ್ನು ರಶ್ಮಿ ನಡವಳಿಕೆ ಕೆರಳಿಸಿತ್ತು. ಇದು ಭಾರತ-ಬ್ರಿಟನ್ ನಡುವೆ ಮಾತುಕತೆ ನಡೆಯಬೇಕಾದ ಮಟ್ಟದ ಗಂಭೀರತೆಯನ್ನೂ ಸೃಷ್ಟಿಸಿತ್ತು. ವಿದ್ಯಾರ್ಥಿಗಳು ರಶ್ಮಿ ರಾಜೀನಾಮೆಗೆ ಪಟ್ಟು ಹಿಡಿದರು. ರಶ್ಮಿ ಒಂದು ಹಂತದಲ್ಲಿ ಕ್ಷಮೆ ಯಾಚಿಸಿದರೂ ಹುದ್ದೆಯಲ್ಲಿ ಮುಂದುವರಿಯಲಾಗಲಿಲ್ಲ. ಜನಾಂಗೀಯ ದ್ವೇಷ- ಮತ್ತು ಅದರೆಡೆಗಿನ ಅಸಡ್ಡೆಗಾಗಿ ರಾಜೀನಾಮೆ ಕೊಡಬೇಕಾಗಿ ಬಂತು! ಇಂಥ ಮನಃಸ್ಥಿತಿಯ ರಶ್ಮಿ ಸಾಮಂತ್, ಉಡುಪಿಯ ಫೇಕ್ ವಿಡಿಯೋವನ್ನು ಅಸಹನೆಯ ಹಿಂದುತ್ವದ ಪ್ರತಿಪಾದನೆಗೆ ಬಳಸಿಕೊಂಡಿದ್ದರಲ್ಲಿ ಅಚ್ಚರಿಯೇನೂ ಇಲ್ಲ; ಆದರೆ ಸುಳ್ಳು ಸುದ್ದಿಗಾಗಿ ಕೆಲವರು ಬಂಧಿಸಲ್ಪಟ್ಟರೂ ಮತೀಯ ಷಡ್ಯಂತ್ರದ ಟ್ವೀಟ್‌ನಿಂದ ಪ್ರಕ್ಷುಬ್ಧತೆಗೆ ಮೂಲವಾದ ರಶ್ಮಿ ಮಾತ್ರ ನಿರಾತಂಕವಾಗಿ ಉಡುಪಿಯಲ್ಲಿ ಓಡಾಡುತ್ತ ಬಲಪಂಥೀಯ ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವುದು ಪ್ರಜ್ಞಾವಂತರನ್ನು ಚಿಂತೆಗೀಡುಮಾಡಿದೆ!

ಡಾ.ಕೃಷ್ಣಪ್ರಸಾದ್ ಪ್ರಭಾವ!

ಸಂಘ ಪರಿವಾರದಲ್ಲಿ ಮಹಿಳಾ ಹೋರಾಟಗಾರ್ತಿ ಎಂದು ಗುರುತಿಸಲ್ಪಡುವ ರಶ್ಮಿ ಸಾಮಂತ್‌ರ ಉಡುಪಿ ವಿಡಿಯೋ ಟ್ವೀಟ್ ಸಹಜವಾಗಿಯೇ ಬಿಜೆಪಿ ಮತ್ತು ಬಲಪಂಥೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ; ರಾಷ್ಟ್ರೀಯ ಮಹಿಳಾ ಆಯೋಗದ ಮಂಡೆಯನ್ನೂ ಬಿಸಿಮಾಡಿದೆ. ಮಹಿಳಾ ಆಯೋಗ ಅವಸರವಸರದಲ್ಲಿ ಆಯೋಗದ ಸದಸ್ಯೆ ಖುಷ್ಬು ಸುಂದರ್‌ರನ್ನು ಉಡುಪಿಗೆ ಓಡಿಸಿತು. ಮಣಿಪುರದಲ್ಲಿ ಮಹಿಳೆಯರ ಮೇಲೆ ಘನಘೋರ ಅತ್ಯಾಚಾರ, ಅನಾಚಾರ, ಹಿಂಸಾಚಾರ ಆಗುತ್ತಿದ್ದರೂ ತಲೆಕೆಡಿಸಿಕೊಳ್ಳದ ರಾಷ್ಟ್ರೀಯ ಮಹಿಳಾ ಆಯೋಗ ಕೇಸರಿ ಪಡೆಗೆ ಅನುಕೂಲ ಕಲ್ಪಿಸಲು ಉಡುಪಿಯತ್ತ ಮುಖಮಾಡಿದೆ ಎಂಬ ಟೀಕೆಗಳು ಕೇಳಿಬಂದವು. ಅತ್ತ ಹಿಂದುತ್ವದ ಪರಿವಾರದಲ್ಲಿ ಖುಷ್ಬು ತಮ್ಮ ಪರ ಮಾತನಾಡುತ್ತಾರೆಂಬ ಸಂಭ್ರಮ ಶುರುವಾಯಿತು. ಆದರೆ ಖುಷ್ಬು ಸುಂದರ್‌ಗೆ ವಾಸ್ತವ ಮರೆಮಾಚಲಾಗಲಿಲ್ಲ. ಇದಕ್ಕೆ ಕಾರಣವೂ ಇದೆ. ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಒಡೆಯ ಡಾ.ಕೃಷ್ಣಪ್ರಸಾದ್ ಬಿಜೆಪಿ-ಸಂಘಪರಿವಾರದಲ್ಲಿ ಪ್ರಭಾವಿ. ಯಡಿಯೂರಪ್ಪ ಸಿಎಂ ಆಗಿದ್ದಾಗ “ವಿಷನ್ ಕಮಿಟಿ”ಯ ಅಧ್ಯಕ್ಷರಾಗಿದ್ದವರು. ಹಾಗಾಗಿ ಡಾ.ಕೃಷ್ಣಪ್ರಸಾದ್ ಬಿಜೆಪಿ-ಸಂಘ ಪರಿವಾರದಿಂದ ಯಾರೇ ಬಂದರೂ ವಸ್ತುಸ್ಥಿತಿಯನ್ನು ಕನ್ವಿನ್ಸ್ ಮಾಡಿ ವಿವಾದ ದೊಡ್ಡದಾಗದಂತೆ ನಿಭಾಯಿಸುತ್ತಿದ್ದಾರೆ.

ಕಾಲೇಜಿನ ಆಡಳಿತಾಧಿಕಾರಿ ಅಬ್ದುಲ್ ಖಾದರ್ ಮತ್ತು ಶೌಚಾಲಯದ ವಿಡಿಯೋ ಮಾಡಿದ ಆರೋಪ ಎದುರಿಸುತ್ತಿರುವ ಮೂವರು ವಿದ್ಯಾರ್ಥಿನಿಯರು ಮುಸ್ಲಿಮ್ ಸಮುದಾಯದವರು; ಹಾಗಾಗಿ ಆರೋಪಿ ಹುಡುಗಿಯರನ್ನು ರಕ್ಷಿಸುವ ತಂತ್ರಗಾರಿಕೆ ಆಗುತ್ತಿದೆ ಎಂದು ಸಂಘಿ ಪಡೆ ಹುಯಿಲೆಬ್ಬಿಸಿತ್ತು. ಜತೆಗೆ ಹಿಂದು ಹುಡುಗಿಯರ ಖಾಸಗಿ ವಿಡಿಯೋ ಚಿತ್ರೀಕರಣ ಈ ಹಿಂದೆಯೂ ಈ ಕಾಲೇಜಿನಲ್ಲಾಗಿದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಅವ್ಯಾಹತವಾಗಿ ಹಂಚಿಕೆಯಾಗಿತ್ತು. ಮತ್ತೊಂದೆಡೆ ರಶ್ಮಿ ಸಾಮಂತ್ ಜಿಹಾದಿ ಹುಳುಬಿಟ್ಟಿದ್ದರು. ಹಿಂದು ಹುಡುಗಿಯರ ಮಾನಕ್ಕೆ ಈ ಕಾಲೇಜಲ್ಲಿ ಕುತ್ತುಬರುತ್ತಿದೆ ಎಂಬರ್ಥದ ಆರೋಪ ಹೊರಿಸಿದ್ದರು. ಒಂದು ಕಡೆ ಡಾ.ಕೃಷ್ಣಪ್ರಸಾದರಿಗೆ ತಮ್ಮ ಶೈಕ್ಷಣಿಕ ಸಂಸ್ಥೆಯ ಪ್ರತಿಷ್ಠೆ ಮುಕ್ಕಾಗದಂತೆ, ಅದರ ಭವಿಷ್ಯ ಬರಡಾಗದಂತೆ ಕಾಪಾಡುವ ಅನಿವಾರ್ಯತೆ; ಮತ್ತೊಂದೆಡೆ ರಶ್ಮಿ ಸಾಮಂತ್‌ಗೆ ತಾನು ಹೊರಿಸಿದ ಆರೋಪ ಸಮರ್ಥಿಸಿಕೊಳ್ಳುವುದರ ಜತೆಗೆ ಅದನ್ನು ಸಾಬೀತುಪಡಿಸಿ ಹಿಂದುತ್ವದ ಹಿಡನ್ ಅಜೆಂಡಾಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದ ದರ್ದು. ಈ ಎರಡು ವೈರುಧ್ಯದ ಹಿತಾಸಕ್ತಿ ಸಂಘರ್ಷದ ಸಂದಿಗ್ಧದಲ್ಲಿ ತಮ್ಮ ಅಭಿಪ್ರಾಯವನ್ನು ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ವ್ಯಕ್ತಪಡಿಬೇಕಾಗಿಬಂತು!

ಡಾ.ಕೃಷ್ಣಪ್ರಸಾದ್

ಪೊಲೀಸರು ಮತ್ತು ಕಾಲೇಜಿನ ಆಡಳಿತಗಾರರೊಂದಿಗೆ ಚರ್ಚಿಸಿದ ನಂತರ ಖುಷ್ಬು “ಪೊಲೀಸರ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಿದೆ; ಈಗಲೇ ಘಟನೆಗೆ ಕೋಮು ಬಣ್ಣಬಳಿದು ತೀರ್ಪು ನೀಡಬೇಡಿ. ಕಾಲೇಜು ಹಾಸ್ಟೆಲ್‌ನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಪೊಲೀಸರಿಗೆ ಸದ್ಯಕ್ಕೆ ಸಿಕ್ಕಿಲ್ಲ…” ಎಂದು ತಾನು ಕಂಡುಕೊಂಡ ಸತ್ಯವನ್ನು ಮಾಧ್ಯಮದವರ ಮುಂದೆ ಹೇಳಿದರು. ಅಲ್ಲಿಗೆ ಜಗಳಗಂಟ ಸ್ವಭಾವದ ಸಂಘಿ ಸರದಾರರ ರಣೋತ್ಸಾಹಕ್ಕೆ ತಣ್ಣೀರೆರಚಿದಂತಾಯಿತು. ಈಗ ಹತಾಶರಾಗಿರುವ ಸಂಘಿಗಳು ಖುಷ್ಬು ಸುಂದರ್ ಮೇಲೆ ಮುಗಿಬಿದ್ದಿದ್ದಾರೆ; ಖುಷ್ಬುರವರ ಪೂರ್ವಾಶ್ರಮ ಕೆದಕಿ ಮೂದಲಿಸಲಾರಂಭಿಸಿದ್ದಾರೆ. ಈ ವಿವಾದ ಲೋಕಸಭೆ ಚುನಾವಣೆಯವರೆಗೆ ಬೆಳೆಸುವ ಸಂಚು ಸಹ ನಡೆದಿದೆ ಎನ್ನಲಾಗುತ್ತಿದೆ. ಹಿಂದುತ್ವದ ಹುಚ್ಚಾಟ ವಿರೋಧಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರಕ್ಕೂ ಕರಾವಳಿಯ ಫೇಕ್ ಸುದ್ದಿ ಫ್ಯಾಕ್ಟರಿಗಳ ಬಾಗಿಲು ಎಳೆಯಲಾಗುತ್ತಿಲ್ಲವೆಂಬ ದುರಂತಕ್ಕೆ ಪ್ರಜ್ಞಾವಂತರು ಬೇಸರಿಸುತ್ತಾರೆ.

ಬಲಪಂಥೀಯರ ಉಡುಪಿ ವಿಡಿಯೋ ಮೂಲವಸ್ತು “ಹಿಂದು ಹುಡುಗಿಯ ಮಾನ”; ಆದರೆ ಸಂಘಿಗಳ ಹೋರಾಟ-ಹಾರಾಟ ನೋಡಿದರೆ ಹಿಂದೂ ಹುಡುಗಿಯರ ಮಾನ ಹಿಂದುತ್ವವಾದಿಗಳೇ ಕಳೆಯುತ್ತಿರುವಂತಿದೆ; ಯಾವುದೇ ವ್ಯಕ್ತಿಯ ಪ್ರೈವೆಸಿಯ ಸೂಕ್ಷ್ಮ ವಿಷಯವಿಟ್ಟುಕೊಂಡು ಧರ್ಮಕಾರಣದ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿರುವಂತೆ ಕಾಣಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಂತ್ರಸ್ತ ಹುಡುಗಿಯೇ, “ನಾನು ಹೆಣ್ಣು; ಆ ಅತಿರೇಕದ ತಮಾಷೆ ಮಾಡಿದವರೂ ಹೆಣ್ಣುಗಳು. ನಾವು ಸಹಪಾಠಿಗಳು; ಇದು ನಮ್ಮ ಭವಿಷ್ಯದ ಪ್ರಶ್ನೆ. ವಿಡಿಯೋ ಕೂಡ ಡಿಲಿಟ್ ಆಗಿದೆ; ಎಲ್ಲಿಯೂ ಶೇರ್ ಆಗದಿರುವುದರಿಂದ ತೊಂದರೆ ಆಗಿಲ್ಲ. ನಾನಿದನ್ನು ಇಲ್ಲಿಗೆ ಮುಗಿಸಲು ಬಯಸಿದ್ದೇನೆ” ಎಂದು ತುಂಬ ಸೂಕ್ಷ್ಮತೆಯಿಂದ ಮತ್ತು ಉದಾತ್ತತೆಯಿಂದ ಹೇಳಿದ್ದಾಳೆ; ಎಲ್ಲವನ್ನು ಕ್ಷಮಿಸಿ ಮರೆತುಬಿಟ್ಟಿದ್ದಾಳೆ. ಆ ಪುಟ್ಟ ಬಾಲಕಿಗಿರುವ ಮಾನವೀಯತೆ, ದೂರದೃಷ್ಟಿ ಹಿಂದೂ ಹೆಣ್ಣಿನ ಮಾನದ ಬಗ್ಗೆ ಉದ್ದುದ್ದ ವ್ಯಾಖ್ಯಾನ ಮಾಡುತ್ತ ವೇದಾಂತ ಹೇಳುವ “ಧರ್ಮಾತ್ಮ”ರಿಗೆ ಇಲ್ಲದಾಗಿರುವುದು ಕರಾವಳಿಯ ದುರಂತವೇ ಸರಿ!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...