Homeಅಂಕಣಗಳುಉತ್ತರ ಕನ್ನಡ ಜಿಲ್ಲೆ: ಬಿಜೆಪಿಯ ಕಳೆಗುಂದಿದ ಹಳೆ ಮುಖಗಳು ವರ್ಸಸ್ ಕಂಗೆಟ್ಟ ಕಾಂಗ್ರೆಸಿಗರು!

ಉತ್ತರ ಕನ್ನಡ ಜಿಲ್ಲೆ: ಬಿಜೆಪಿಯ ಕಳೆಗುಂದಿದ ಹಳೆ ಮುಖಗಳು ವರ್ಸಸ್ ಕಂಗೆಟ್ಟ ಕಾಂಗ್ರೆಸಿಗರು!

- Advertisement -
- Advertisement -

ಉತ್ತರ ಕನ್ನಡದ ಚುನಾವಣಾ ಆಖಾಡದಲ್ಲೀಗ ಯುದ್ಧೋನ್ಮಾದ! ಜಿಲ್ಲೆಯ ಆರು ಅಸೆಂಬ್ಲಿ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗು ಬಿಜೆಪಿಯ ರಣ ಕಲಿಗಳ್ಯಾರೆಂದು ಘೋಷಣೆಯಾಗಿದೆ. ಕಾಂಗ್ರೆಸ್ ಕುಮಟಾ ಒಂದನ್ನು ಬಿಟ್ಟು ಉಳಿದೆಲ್ಲೆಡೆ ಸಮರ ಸಾರಿದ ಸರಿಸುಮಾರು 15-16 ದಿನದ ನಂತರ ಬಿಜೆಪಿ ರಣ ವೀಳ್ಯ ನೀಡಿದೆ. ಕಾಂಗ್ರೆಸ್‌ನ ಮೂರನೇ ಪಟ್ಟಿಯಲ್ಲಿ ನೇರ ಸೋನಿಯಾ ಗಾಂಧಿ ಪರಿವಾರದ ಒತ್ತಾಸೆಯಿಂದಲೇ ಕುಮಟಾದ ಅಭ್ಯರ್ಥಿ ಹಸರು ಪ್ರಕಟವಾಗಿದೆ. ಕಾಂಗ್ರೆಸ್ ಟಿಕೆಟ್ ಘೋಷಣೆಯಾದಾಗ ಆ ಪಕ್ಷದ ಹಿರಿಯರಾದ ಮಾಜಿ ಮಂತ್ರಿ ಆರ್.ವಿ.ದೇಶಪಾಂಡೆ ಮತ್ತು ಮಾಜಿ ಕೇಂದ್ರಮಂತ್ರಿ ಮಾರ್ಗರೆಟ್ ಆಳ್ವರಿಗೆ ಪಕ್ಷ ಗೆಲ್ಲಿಸುವ ಬದ್ಧತೆ-ಸಿದ್ಧತೆ-ಆಸಕ್ತಿ-ರಣತಂತ್ರ ಯಾವುದೂ ಇಲ್ಲವೆಂಬಂತೆ ಜಿಲ್ಲೆಯ ಜನರಿಗೆ ಭಾಸವಾಗಿತ್ತು. ಇತ್ತ ಬಿಜೆಪಿ ಜಿಲ್ಲೆಯ ಅಷ್ಟೂ ಕ್ಷೇತ್ರದ ಹುರಿಯಾಳುಗಳ ಪಟ್ಟಿ ಒಂದೇ ಏಟಿಗೆ ಬಿಡುಗಡೆ ಮಾಡುತ್ತಿದ್ದಂತೆ ಆ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತರು ಬೆಚ್ಚಿಬಿದ್ದಿದ್ದಾರೆ; ಜಿಲ್ಲೆಯಲ್ಲಿ ಅಚ್ಚರಿ ಮೂಡಿದೆ.

ಒಬ್ಬ ಸ್ಪೀಕರ್, ಒಬ್ಬ ಮಂತ್ರಿ ಮತ್ತು ಮೂವರು ಶಾಸಕರನ್ನು ಹೊಂದಿರುವ ಬಿಜೆಪಿ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಲಿದೆ ಎಂಬ ಮಾತು ಜೋರಾಗಿ ಕೇಳಿಬಂದಿತ್ತು. ಸತತ ಆರು ಸಲ ಶಾಸಕರಾಗಿ ಆಯ್ಕೆಯಾಗಿರುವ ಸ್ಪೀಕರ್ ಕಾಗೇರಿ ಹೆಗಡೆಗೆ, ಕುಂದಾಪುರದ ಹಾಲಾಡಿ, ಹುಬ್ಬಳ್ಳಿಯ ಶೆಟ್ಟರ್, ಶಿವಮೊಗ್ಗದ ಈಶ್ವರಪ್ಪ ವಗೈರೆಗಳಂತೆ “ಕಡ್ಡಾಯ ನಿವೃತ್ತಿ” ಸನ್ನಿಹಿತ; ಸಂಘ ಪರಿವಾರ ಹಾಗು ಬಿಜೆಪಿ ಪಕ್ಷಗಳೆರಡಕ್ಕೂ ಬೇಡವಾಗಿರುವ ಸಂಸದ ಅನಂತಕುಮಾರ್ ಹೆಗಡೆ ಬದಲಿಗೆ ಕಾಗೇರಿಯವರನ್ನು ಎಂಪಿ ಅಭ್ಯರ್ಥಿ ಮಾಡಲಾಗುತ್ತದೆ ಎಂಬ ಚರ್ಚೆಗಳು ಬಿಜೆಪಿ ಬಿಡಾರದಲ್ಲಿ ನಡೆದಿತ್ತು.

ಕಾರವಾರದ ರೂಪಾಲಿ ನಾಯ್ಕ್, ಕುಮಟಾದ ದಿನಕರ ಶೆಟ್ಟಿ, ಭಟ್ಕಳದ ಸುನಿಲ್ ನಾಯ್ಕ್ ಹಾಗು ಯಲ್ಲಾಪುರದ ಶಿವರಾಮ ಹೆಬ್ಬಾರ್ ಬಗ್ಗೆ ಮೂಲ ಬಿಜೆಪಿಗರಿಗೆ ಸಮಾಧಾನವಿಲ್ಲ; ಬಿಜೆಪಿಯ ಅಸಲಿ ತತ್ವಾದರ್ಶದ ಬದ್ಧತೆಯಿಲ್ಲದ ಸದ್ರಿ ಶಾಸಕರ ಕಾರ್ಯವೈಖರಿ ಸಂಘ ಶ್ರೇಷ್ಠರಿಗೆ ಬೇಜಾರು ತರಿಸಿದೆ; ಕೆಲಸಕ್ಕೆ ಬಾರದ ಈ “ಪಂಚರತ್ನ”ಗಳು ಕಳೆದೈದು ವರ್ಷದಲ್ಲಿ ಸಾಧಿಸಿರುವ ಆರ್ಥಿಕೋನ್ನತಿ ಸಾರ್ವಜನಿಕರಲ್ಲಿ ಅನೇಕ ಅನುಮಾನ-ಆಕ್ರೋಶಕ್ಕೆ ಎಡೆಮಾಡಿದೆ; ಬಿಜೆಪಿಯ ಒಳಗಿನ ಮತ್ತು ಹೊರಗಿನ “ಕಾವು” ಈ ಐವರು ಎಮ್ಮೆಲ್ಲೆಗಳಲ್ಲಿ ಕನಿಷ್ಠ ಇಬ್ಬರನ್ನಾದರೂ ಅಪೋಷನ ಪಡೆಯಲಿದೆ ಎಂಬ ಭಾವನೆ ಜಿಲ್ಲೆಯಲ್ಲಿ ಮೂಡಿತ್ತು.

ನಾವಿಕನಿಲ್ಲದ ನಾವೆಯಂತಾಗಿರುವ ಕಾಂಗ್ರೆಸ್‌ಗಿಂತ ಬಲಾಢ್ಯ ಹಿಂದುತ್ವ ನಾಯಕ ಮೋದಿ ಹಿಡಿತದಲ್ಲಿರುವ ಕೇಸರಿ ಪಾರ್ಟಿಯ ಅಭ್ಯರ್ಥಿಗಳ ಬಗ್ಗೆ ಜಿಲ್ಲೆಯಲ್ಲಿ ದೊಡ್ಡ ಕುತೂಹಲವಿತ್ತು. ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಆರೋಪ ಹಾಗು ಜನಾಕ್ರೋಶಕ್ಕೆ ತುತ್ತಾಗಿರುವ ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್ ಸಿಗಲಾರದೆನ್ನಲಾಗಿತ್ತು. ಕೇಸರಿ ಟೀಮ್ ಮಾಡಿಸಿದ್ದ ಸರ್ವೆಗಳಲ್ಲೂ ಈ ಅಂಶಗಳೇ ಪ್ರಧಾನವಾಗಿ ದಾಖಲಾಗಿವೆ; ಹಾಗಾಗಿ ಕನಿಷ್ಠ ಮೂರು ಕ್ಷೇತ್ರದಲ್ಲಾದರೂ ಹೊಸ ಮುಖಗಳಿಗೆ ಬಿಜೆಪಿ ಅವಕಾಶ ಕೊಡುತ್ತದೆ ಎಂಬ ಮಾತು ವ್ಯಾಪಕವಾಗಿ ಕೇಳಿಬಂದಿತ್ತು. ಆದರೆ ಕೇಸರಿ ಟಿಕೆಟ್ ಘೋಷಣೆಯಾದಾಗ ಸಂಘ ಸರದಾರರು ಹೊಸ ಪ್ರಯೋಗ ಮಾಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಕಳೆಗುಂದಿದ ಹಳೆ ಮುಖಗಳು ನಿರಾಯಾಸವಾಗಿ ಬಿಜೆಪಿಯ ಮೊದಲ ಪಟ್ಟಿಯಲ್ಲೇ ಟಿಕೆಟ್ ದಕ್ಕಿಸಿಕೊಂಡಿವೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿ ಅಥವಾ ಸಂಘ ಪರಿವಾರ ಮಾಡಿಸಿವೆ ಎನ್ನಲಾಗಿರುವ ಆಂತರಿಕ ಸರ್ವೆಗಳು ನಗೆಪಾಟಲಿಗೀಡಾಗಿವೆ.

ಬಿಜೆಪಿಯ ಸರ್ವೆಗಳು ಬೋಗಸ್ಸಾ? ಸಮೀಕ್ಷಾ ವರದಿಗಳನ್ನೆಲ್ಲ ಬಿಜೆಪಿ ಟಿಕೆಟ್ ಕಮಿಟಿ ಕಡೆಗಣಿಸಿ ಹಣ ಬಲ, ಜಾತಿ ಲಾಬಿಗೆ ಮಣಿಯಿತಾ? ಸೋಲುತ್ತಾರೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಬಲವಾಗಿದ್ದರೂ, ಸರ್ವೆ-ಸಮೀಕ್ಷೆಗಳನ್ನೆಲ್ಲ ಕಡೆಗಣಿಸಿ ಬಿಜೆಪಿ ಟಿಕೆಟ್ ಮಾರಾಟ ಮಾಡಲಾಯಿತೆ? ಎಂದು ಜನರು ಮಾತಾಡಿಕೊಳ್ಳುತ್ತಿದ್ದು, ಈಗ ಈ ವ್ಯರ್ಥ ಸರ್ವೆ ಕಸರತ್ತಿನ ಸುತ್ತಲೇ ಜಿಲ್ಲೆಯಾದ್ಯಂತ ರೋಚಕ ಚರ್ಚೆಗಳಾಗುತ್ತಿವೆ. ಜಿಲ್ಲೆಯ ಆರು ಕ್ಷೇತ್ರದಲ್ಲಿ ಎದುರಾಳಿಗಳು ಫಿಕ್ಸ್ ಆಗಿರುವ ಈ ಹೊತ್ತಿನಲ್ಲಿ ರಣಕಣದ ಜಿದ್ದಾಜಿದ್ದಿಯ ಸಾಧ್ಯಾಸಾಧ್ಯತೆಯ ಕುರಿತ ಎರಡನೇ ಸುತ್ತಿನ ಅವಲೋಕನ ಇಲ್ಲಿದೆ.

ಕಾರವಾರ-ರೂಪಾಲಿಗೆ ಒಳೇಟು?

ಜಿಲ್ಲೆಯಲ್ಲಿ ಹೆಚ್ಚು ವಿವಾದ, ಊಹಾಪೋಹ ಸೃಷ್ಟಿಸಿದ್ದ ಕ್ಷೇತ್ರ ಕರಾವಳಿಯ ಕಾರವಾರ. ಬಿಜೆಪಿಯ ಶಾಸಕಿ ರೂಪಾಲಿ ನಾಯ್ಕ್ ವಿರುದ್ಧ “ಕಾರವಾರ ರಿಪಬ್ಲಿಕ್” ಎಂದೇ ಅಡ್ಡ ಹೆಸರಿಂದ ಪ್ರಸಿದ್ಧವಾಗಿರುವ ಪತ್ರಿಕಾ “ಉದ್ಯಮ”, ಸಮಾಜ “ಸೇವೆ” ಮತ್ತು ಕೇಸರಿ “ಕಾರಣ”ವೇ ಮುಂತಾದ ನಾನಾ ವಲಯದ ಕೆಲವು “ಖ್ಯಾತ”ನಾಮರ ತಂಡವೊಂದು ರೂಪಾಲಿಗೆ ಬಿಜೆಪಿ ಟಿಕೆಟ್ ತಪ್ಪಿಸುವ ತಂತ್ರಗಾರಿಕೆ ಮಾಡಿತ್ತೆಂಬ ಮಾತು ಟಾಕ್ ಆಫ್ ದಿ ಕಾನ್‌ಸ್ಟಿಸ್ಟುಯೆನ್ಸಿ ಆಗಿತ್ತು. ತಮ್ಮ ತಂಡದ ನವಪುರೋಹಿತಶಾಹಿ ಶೂದ್ರನೊಬ್ಬನನ್ನು ಶಾಸಕ ಮಾಡುವ ದೂ(ದು)ರಾಲೋಚನೆ ಈ ಬಳಗದ್ದಾಗಿತ್ತು. ಇದೇ ಹೊತ್ತಿಗೆ ಶಾಸಕಿ ಮೇಲೆ ಬಲವಾದ ಭ್ರಷ್ಟಾಚಾರದ ಆರೋಪಗಳೂ ಕೇಳಿಬಂದಿತ್ತು. ಪತ್ರಿಕೆಗಳಿಗೆಲ್ಲ ಪದೇಪದೇ ಪೇಜುಗಟ್ಟಲೆ ಜಾಹಿರಾತು ಕೊಡುವ, ಕೊಡುಗೈ ದಾನಿಯಾಗಿ ಲಕ್ಷಗಟ್ಟಲೆ ದಾನ ಮಾಡುವ ಮತ್ತು ಕೋಟಿ ಬಜೆಟ್‌ನಲ್ಲಿ ಅದ್ಧೂರಿಯಾಗಿ ಮಗನ ಮದುವೆ ಮಾಡಿದ್ದ ರೂಪಾಲಿ ನಾಯ್ಕರ ಆರ್ಥಿಕ ಚೈತನ್ಯ ಬಿಜೆಪಿ ಭಿನ್ನಮತೀಯರಿಗೆ ಅಸ್ತ್ರವಾಗಿತ್ತು.

ರೂಪಾಲಿ ನಾಯ್ಕ

ಸ್ಥಳೀಯವಾಗಿ ರೂಪಾಲಿ ನಾಯ್ಕ್‌ಗೆ ಕೇಸರಿ ಟಿಕೆಟ್ ವಂಚಿಸುವ ತಂತ್ರಗಾರಿಕೆ ಜೋರಾಗುತ್ತಿದ್ದಂತೆಯೆ ಶಾಸಕಿ ಸಂಘ ಶ್ರೇಷ್ಠರು ಮತ್ತು ತಾನು “ಅಪ್ಪಾಜೀ” ಎಂದು ಕರೆಯುವ ಮಾಜಿ ಸಿಎಂ ಯಡಿಯೂರಪ್ಪರ ಮೂಲಕ ಲಾಬಿ ಬಿರುಸುಗೊಳಿಸಿಕೊಂಡರು. ಜಿಲ್ಲಾ ಬಿಜೆಪಿಯಲ್ಲಿ ಪ್ರಭಾವಿಯಾಗಿರುವ ಹೊನ್ನಾವರ ಮೂಲದ ಒಬ್ಬ ಸಂಘಿ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನು ಒಲಿಸಿಕೊಂಡ ಅಪಾರ ಆರ್ಥಿಕ ಸಂಪನ್ಮೂಲದ ರೂಪಾಲಿ ನಾಯ್ಕ್ ಟಿಕೆಟ್‌ಗೆ ಪ್ರಬಲ ಪೈಪೋಟಿ ಕೊಟ್ಟ ನಗರಸಭೆಯ ಅಧ್ಯಕ್ಷ ಡಾ.ನಿತಿನ ಪಿಕಳೆಯನ್ನು ಅಂತೂ ಹಿಮ್ಮೆಟ್ಟಿಸಿ ಬಿಜೆಪಿ ಅಭ್ಯರ್ಥಿತನ ಪಡೆಯಲು ಯಶಸ್ವಿಯಾಗಿದ್ದಾರೆಂದು ಮೂಲ ಬಿಜೆಪಿಗರು ಪಿಸುಗುಡುತ್ತಿದ್ದಾರೆ.

ಕಾರವಾರ ಮತ್ತು ಅಂಕೋಲಾದಲ್ಲಿ ಒಂದು ಸುತ್ತುಹೊಡೆದರೆ ಬಿಜೆಪಿಯ ರೂಪಾಲಿಯವರನ್ನು ಸೋಲಿಸಲು ಎಲ್ಲ ಪಕ್ಷದವರೂ ಒಂದಾದಂತೆ ಕಾಣಿಸುತ್ತದೆ. ಕಾಂಗ್ರೆಸ್ ಹುರಿಯಾಳು ಮಾಜಿ ಶಾಸಕ ಸತೀಶ್ ಸೈಲ್, ಜೆಡಿಎಸ್‌ನ ಮಾಜಿ ಮಂತ್ರಿ ಆನಂದ ಅಸ್ನೋಟಿಕರ್, ಬಿಜೆಪಿಯ ಭಿನ್ನ ಮತೀಯರು ಮತ್ತು ಸಂಘ ಸರದಾರರು ರಹಸ್ಯವಾಗಿ ರೂಪಾಲಿ ವಿರುದ್ಧ ರಣವ್ಯೂಹ ರಚಿಸುತ್ತಿದ್ದಾರೆನ್ನಲಾಗುತ್ತಿದೆ. 2008ರಲ್ಲಿ ಆಪರೇಷನ್ ಕಮಲಕ್ಕೆ ಬಲಿಯಾಗಿ ಚುನಾವಣಾ ಆಖಾಡಕ್ಕಿಳಿವ ತಾಕತ್ತು ಕಳೆದುಕೊಂಡಿರುವ ಆನಂದ ಅಸ್ನೋಟಿಕರ್ ತನ್ನ ಪರಮಾಪ್ತ-ಕಾರವಾರ ತಾ.ಪಂ. ಮಾಜಿ ಅಧ್ಯಕ್ಷ ಚಂದ್ರಹಾಸ ಕೋಠಾರ್‌ಕರ್ ಮಡದಿ ಮಾಜಿ ಜಿಪಂ ಸದಸ್ಯೆ ಚೈತ್ರಾರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸಿ ರೂಪಾಲಿಗೆ ಆಕೆಯ ತಂದೆ ಸಂಬಂಧದ ಮೂಲಕ ಬರುತ್ತಿದ್ದ ಪಡ್ತಿ ಸಮುದಾಯದ ಓಟ್ ಕಟ್ ಮಾಡಲು ಯೋಚಿಸಿದ್ದರೆ, ಕಟ್ಟರ್ ಕೇಸರಿಗರು ಮಾಜಿ ಶಾಸಕ ಗಂಗಾಧರ ಭಟ್‌ರನ್ನು ಪಕ್ಷೇತರರಾಗಿ ನಿಲ್ಲಿಸಿ ಬಿಜೆಪಿಗೆ ಸೊನಗಾರರ (ದೈವಜ್ಞ ಬ್ರಾಹ್ಮಣ) ಮತ ಹೋಗದಂತೆ ತಡೆಯೊಡ್ಡುವ ಪ್ಲಾನ್ ಹಾಕಿದ್ದಾರೆನ್ನಲಾಗಿದೆ.

ಸತೀಶ್ ಸೈಲ್

ಅದಿರು ಉದ್ಯಮಿ ಕಾಂಗ್ರೆಸ್‌ನ ಸತೀಶ್ ಸೈಲ್‌ಗೆ ರೂಪಾಲಿಯವರ ಋಣಾತ್ಮಕ ಪರಿಸ್ಥಿತಿಯೇ ವರವಾಗಿದೆ. ಕಾರವಾರ-ಅಂಕೋಲಾ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಿರುವ ಸೈಲ್‌ಗೆ ದೊಡ್ಡ ರೀತಿಯ ಭಿನ್ನಮತದ ಕಾಟವೇನಿಲ್ಲ. ಕಾರವಾರದ ಕಾಳಿ ನದಿ ದಂಡೆಗುಂಟ ಸೈಲ್ ಅಬ್ಬರವಿದ್ದರೆ ಅಂಕೋಲಾ ತಾಲೂಕಿನಲ್ಲಿ ರೂಪಾಲಿಯವರಿಗೆ ವರ್ಚಸ್ಸಿದೆ. ಸದ್ಯದ ಟ್ರೆಂಡ್ ಗಮನಿಸಿದರೆ ಕಾಂಗ್ರೆಸ್‌ನ ಸತೀಶ್ ಸೈಲ್ ಗೆಲ್ಲಬಹುದೆನಿಸುತ್ತದೆ.

ಕುಮಟಾ: ಹಾಲಕ್ಕಿಗಳಿಗೆ ಮೋಸ!

ಕುಮಟಾ ಅಸೆಂಬ್ಲಿ ಕ್ಷೇತ್ರ ಬುಡಕಟ್ಟು ಹಾಲಕ್ಕಿ ಒಕ್ಕಲಿಗರ ಸೀಮೆ; ಈ ಕುಮಟಾ-ಹೊನ್ನಾವರದಲ್ಲಿ ಹಾಲಕ್ಕಿ ಮತದಾರರೇ ಪ್ರಥಮ ಬಹುಸಂಖ್ಯಾತರು. ಸಾಮಾಜಿಕ-ರಾಜಕೀಯ-ಆರ್ಥಿಕವೆ ಮುಂತಾದ ಬದುಕಿನ ಅಷ್ಟೂ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದಿರುವ ಈ ಸಮುದಾಯಕ್ಕೆ ರಾಮಕೃಷ್ಣ ಹೆಗಡೆ ಮತ್ತು ಬಂಗಾರಪ್ಪರ ರಾಜಕೀಯ ಇಚ್ಛಾಶಕ್ತಿಯಿಂದ ಎರಡು ಬಾರಿ ಶಾಸಕ ಸ್ಥಾನ ದಕ್ಕಿದ್ದು ಬಿಟ್ಟರೆ ಅದಕ್ಕೂ ಹಿಂದೆ ಮತ್ತು ಮುಂದೆಲ್ಲ ಆಗಿದ್ದು ಮೋಸ-ವಂಚನೆಯೆ. ಒಕ್ಕಲಿಗರ ಆದಿ ಚುಂಚನಗಿರಿ ಮಠ ಈ ಸಾಂಸ್ಕೃತಿಕ ಶ್ರೀಮಂತಿಕೆಯ ವಿಶಿಷ್ಟ-ವೈವಿಧ್ಯಮಯ ಜನಾಂಗವನ್ನು ತಮ್ಮದೆನ್ನುತ್ತಿದೆ. ಆದರೆ ಹಾಲಕ್ಕಿಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಡಿಸಲು ಆದಿ ಚುಂಚನಗಿರಿ ಮಠ ಬದ್ಧತೆಯಿಂದ ತೋರಿಸಲಿಲ್ಲವೆಂಬ ಕೊರಗು ಆ ಜನಾಂಗಕ್ಕಿದೆ.

ಈ ಸಲ ಹಾಲಕ್ಕಿ ಜನಾಂಗ ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಅವಕಾಶ ಸಿಗುವ ಆಶಾಭಾವನೆಯಲ್ಲಿತ್ತು. ಹಾಲಕ್ಕಿ ಸಮುದಾಯಕ್ಕೆ ಈ ಬಾರಿ ಬಿಜೆಪಿ ಕುಮಟಾದಲ್ಲಿ ಟಿಕೆಟ್ ಕೊಡುತ್ತದೆಂಬ ನಿರೀಕ್ಷೆ ಮೂಡಿತ್ತು. ಬಿಜೆಪಿಗರ ನಡುವೆ ಗುರುತಿಸಿಕೊಂಡಿದ್ದ ಆ ಜನಾಂಗದ ಪಿಎಚ್‌ಡಿ ಪದವೀಧರ ತರುಣ ಡಾ.ಶ್ರೀಧರ ಗೌಡರಿಗೆ ಕೇಸರಿ ಟಿಕೆಟ್ ಪಕ್ಕಾ ಎಂಬ ಮಾತು ಕಮಲ ಪಾಳೆಯದಿಂದ ತೇಲಿಬಿಡಲಾಗಿತ್ತು. ಈ ಮಾತಿಗೆ ಪುಷ್ಠಿ ಎಂಬಂತೆ ಎರಡು ತಿಂಗಳ ಹಿಂದೆ ಶ್ರೀಧರ ಗೌಡ ಇನ್ನೂ 11 ವರ್ಷ ಸರಕಾರಿ ನೌಕರಿಗೆ ಅವಕಾಶವಿದ್ದ ಮಾಸ್ತರಿಕೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಆದರೆ ಚುನಾವಣಾ ರಾಜಕಾರಣದಲ್ಲಿ ಪಳಗಿದ ಆಗಾಧ ಆರ್ಥಿಕ ಸಂಪನ್ಮೂಲದ ಶಾಸಕ ದಿನಕರ ಶೆಟ್ಟಿಗೆ ಬಿಜೆಪಿ ಮತ್ತೆ ಮಣೆಹಾಕಿದೆ. ಅಲ್ಲಿಗೆ ಸಂಘ ಪರಿವಾರ ನಂಬಿಸಿ ಮೋಸ ಮಾಡಿತೆಂಬ ಹತಾಶೆ ಹಾಲಕ್ಕಿಗಳಲ್ಲಿ ಭುಗಿಲೆದ್ದಿದೆ.

ದಿನಕರ ಶೆಟ್ಟಿ

ಇಂಥ ಪ್ರಶಸ್ತ ಅವಕಾಶವನ್ನು ಬಳಸಿಕೊಂಡು ಕಾಂಗ್ರೆಸ್ ಹಾಲಕ್ಕಿಗಳಿಗೆ ಟಿಕೆಟ್ ಕೊಡುಬಹುದಿತ್ತು. ಆದರೆ ಈ ಹಿಂದುತ್ವದ ಪ್ರಯೋಗಶಾಲೆಯಲ್ಲಿ ಈಗ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಪಂಗಡದ “ಅಪರಿಚಿತ”ನನ್ನು ರಣಕಣಕ್ಕಿಳಿಸಿ ಸೋಲುವ ಪ್ರಯೋಗ ಮಾಡುತ್ತಿದೆ ಎಂಬ ಮಾತು ಕ್ಷೇತ್ರದಲ್ಲಿ ಜೋರಾಗಿ ಕೇಳಿಬರುತ್ತಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವ ತನ್ನ ತಾಯಿ ಕೇಂದ್ರ ಮಾಜಿ ಮಂತ್ರಿ ಮಾರ್ಗರೆಟ್ ಆಳ್ವ ಮೂಲಕ ನೇರ ಸೋನಿಯಾ-ರಾಹುಲ್ ಮೇಲೆಯೆ ಒತ್ತಡ ಹಾಕಿಸಿ ಕೈ ಪಕ್ಷದ ಅಭ್ಯರ್ಥಿತನ ಪಡೆದಿದ್ದಾರೆ. ನಿವೇದಿತ್ ಕುಮಟಾ ಟಿಕೆಟ್‌ಗೆ ಬೇಡಿಕೆಯಿಟ್ಟು ಅರ್ಜಿ ಹಾಕಿದವರಲ್ಲ; ಕ್ಷೇತ್ರಕಾರ್ಯ ಮಾಡಿದವರಲ್ಲ; ದಿಢೀರ್ ಎಂದು ಟಿಕೆಟ್ ಹಿಡಿದುಕೊಂಡು ಕುಮಟೆಯಲ್ಲಿ ಪ್ರತ್ಯಕ್ಷವಾಗಿರುವ ನಿವೇದಿತ್‌ಗೆ, 1994ರಲ್ಲಿ ಕಾಂಗ್ರೆಸ್ ಹುರಿಯಾಳಾಗಿ ಹೀನಾಯವಾಗಿ ಸೋತಿದ್ದ ಇಬ್ರಾಹಿಂ ಉಪ್ಪಾರ್‌ಕರ್ ಗತಿಯೇ ಬರಲಿದೆ ಎಂದು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು ಹೇಳುತ್ತಿದ್ದಾರೆ. ಒಮ್ಮೆ ಬಿಜೆಪಿ ಮತ್ತೊಮ್ಮೆ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿರುವ ಕ್ಷೇತ್ರದ ಎರಡನೇ ಬಹುಸಂಖ್ಯಾತ ದೀವರು (ಈಡಿಗ) ಜಾತಿಯ ಸೂರಜ್ ನಾಯ್ಕ್ ಈಗ ಮತ್ತೆ ತೆನೆ ಹೊತ್ತ ಮಹಿಳೆಯ ಚಿಹ್ನೆಯಡಿ ಅದೃಷ್ಟ ಪರೀಕ್ಷೆಯ ಪ್ರಯತ್ನ ನಡೆಸಿದ್ದಾರೆ.

ಮೇಲ್ನೋಟಕ್ಕೆ ತ್ರಿಕೋನ ಕಾಳಗ ಎಂಬಂತೆ ಅನಿಸುತ್ತದೆ. ಸ್ಥಳೀಯರ ದೊಡ್ಡ ಮಟ್ಟದ ವಿರೋಧದ ನಡುವೆಯೂ ಹೈಗರ ರಾಮಚಂದ್ರಾಪುರ ಮಠದ ಬೆಂಬಲದಿಂದ ಕೇಸರಿ ಟಕೆಟ್ ಗಿಟ್ಟಿಸಿದ್ದಾರೆ ಎನ್ನಲಾಗುತ್ತಿರುವ ಶಾಸಕ ದಿನಕರ ಶೆಟ್ಟಿ ವಿರದ್ಧ ಅಂಡರ್‌ಕರಂಟ್ ಇದೆ; ಬಿಜೆಪಿ ರಣತಂತ್ರಗಾರರು ಮತ್ತು ಸ್ಥಳೀಯ ಆರೆಸ್ಸೆಸ್‌ನ ಸೂತ್ರಧಾರರೆನ್ನಲಾಗಿರುವ ಕೊಂಕಣಿ (ಜಿಎಸ್‌ಬಿ) ಸಮುದಾಯದ ಮುಂದಾಳುಗಳು ದಿನಕರ ಶೆಟ್ಟಿ ವಿರುದ್ಧ ತಿರುಗಿಬಿದ್ದಿದ್ದಾರೆ; ಕ್ಷೇತ್ರದ ಮೂರನೇ ದೊಡ್ಡ ಬಹುಸಂಖ್ಯಾತರಾದ ಹವ್ಯಕ ಬ್ರಾಹ್ಮಣರಿಗೆ ದಿನಕರ ಶೆಟ್ಟಿ ಬಗ್ಗೆ ಸಮಾಧಾನವಿಲ್ಲ. ಹಿಂದಿನ ಬಾರಿಯಂತೆ ಪರೇಶ್ ಮೇಸ್ತ ಸಾವಿನಿಂದ ಉದ್ಭವಿಸಿದಂಥ ಹಿಂದುತ್ವದ ಉನ್ಮಾದವಿಲ್ಲ. ತಮ್ಮವರಿಗೆ ಸರಕಾರಿ ಉದ್ಯೋಗ ಬಿಡಿ, ಟಿಕೆಟ್ ಕೊಡದೆ ಕಮಲ ಕಮಾಂಡರ್‌ಗಳು ವಂಚಿಸಿದರೆಂಬ ಆಕ್ರೋಶ ನಿರ್ಣಾಯಕ ಹಾಲಕ್ಕಿಗಳಿಗಿದೆ. ಕಳೆದ ಇಪ್ಪತ್ತೈದು ವರ್ಷದಿಂದ ಕೇವಲ ಎರಡೂವರೆ ಸಾವಿದಷ್ಟೂ ಇರದ ತೀರಾ ಸಣ್ಣ ಗಾಣಿಗ ಸಮುದಾಯದ ಈ ನಿರ್ದಿಷ್ಟ “ಶೆಟ್ಟಿ ಕುಟುಂಬ”ದ ರಾಜಕಾರಣ ಕ್ಷೇತ್ರದಲ್ಲಿ ರೇಜಿಗೆ ಮೂಡಿಸಿದೆ. ಇಷ್ಟೆಲ್ಲಾ ಮೈನಸ್ ಪಾಯಿಂಟ್‌ಗಳ ಮಧ್ಯೆ ಕುಗ್ಗಿರುವ ಬಿಜೆಪಿಯ ದಿನಕರ ಮತ್ತೆ ಉದಯಿಸುವುದು ಹಿಂದಿನಷ್ಟು ಸುಲಭವಲ್ಲ ಎನ್ನಲಾಗುತ್ತಿದೆ.

ನಿವೇದಿತ್ ಆಳ್ವ

ಕಳೆದೆರಡು ಬಾರಿ ಸೋತಿರುವ, 2018ರಲ್ಲಿ ಬಿಜೆಪಿ ಟಿಕೆಟ್‌ಗಾಗಿ ಕೌ ಬ್ರಿಗೇಡ್ ನಾಯಕನಾಗಿ ಹಿಂಸಾತ್ಮಕ ಕಾರ್ಯಾಚರಣೆ ನಡೆಸಿ ವಾರಗಟ್ಟಲೆ ಜೈಲಲ್ಲುಳಿದು ಬಂದರೂ ಸಂಘ ಪರಿವಾರದಿಂದ ವಂಚಿಸಲ್ಪಟ್ಟನೆಂಬ ಅನುಕಂಪ ಜೆಡಿಎಸ್‌ನ ಸೂರಜ್ ನಾಯ್ಕ್‌ಗೆ ಇದೆಯಾದರೂ ಮುಸಲ್ಮಾನರು ನಂಬುವ ಸ್ಥಿತಿಯಲ್ಲಿಲ್ಲ. ಪರೇಶ್ ಮೇಸ್ತ ಪ್ರಕರಣಕ್ಕಿಂತ ಸ್ವಲ್ಪ ಮೊದಲು ಚಂದಾವರದ ಮಸೀದಿ ಮತ್ತು ಮುಸಲ್ಮಾನ ಸುಮುದಾಯದ ಮೇಲಾದ ದಾಳಿಯ ರೂವಾರಿಯೆ ಈ ಸೂರಜ್ ನಾಯ್ಕ್ ಎಂಬ ಆರೋಪಗಳನ್ನು ಮುಸ್ಲಿಮರು ಇವತ್ತಿಗೂ ಮರೆತಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಕರಾವಳಿಯಲ್ಲಿ ಕೇಸರಿ ಪಡೆಗೆ ಎಮ್ಮೆಲ್ಲೆ ಕೊಯ್ಲಿಗೆ “ಹತಾರ”ವಾಗಿದ್ದ ಪರೇಶ್ ಮೇಸ್ತ ಪ್ರಕರಣದ ಮೂಲ ಬೀಜವಿರುವುದೇ ಈ ಚಂದಾವರ ಮಸೀದಿ ದಾಳಿಯಲ್ಲಿ; ಕೆಲವು ದಿನಗಳ ಹಿಂದೆ ಜೆಡಿಎಸ್ ನಾಯಕಾಗ್ರೇಸ ಕುಮಾರಸ್ವಾಮಿಯವರನ್ನು ಕರೆಸಿ ಅವರೊಂದಿಗೆ ಚಂದಾವರ ಮಸೀದಿಗೆ ಸೂರಜ್ ನಾಯ್ಕ್ ಹೋಗಿಬಂದು ಪಾಪ ಪ್ರಾಯಶ್ಚಿತ್ತಕ್ಕೆ ಪ್ರಯತ್ನಿಸಿದ್ದಾರೆ; ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಮ್‌ರನ್ನು ಕರೆಸಿ ಮುಸ್ಲಿಮರಿಗೆ ಒಲಿಸುವ ಸ್ಕೆಚ್ ಸಹ ಹಾಕಲಾಗಿದೆ ಎನ್ನಲಾಗುತ್ತಿದೆ; ಇದೆಲ್ಲ ಅದೆಷ್ಟು ವರ್ಕ್‌ಔಟ್ ಆಗುತ್ತದೋ ಕಾದುನೋಡಬೇಕಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.ಇತ್ತ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದೆ ಎಂಬುದು ಸಾಮಾನ್ಯ ಅನಿಸಿಕೆ. ಕ್ಷೇತ್ರದ ಜಾತಿ ಸಮೀಕರಣ, ಹಿಂದುತ್ವ ಹಿಡನ್ ತಂತ್ರಗಾರಿಗಳನ್ನೆಲ್ಲ ಪರಿಗಣಿಸದೆ ಜನ ಸಂಪರ್ಕವಿಲ್ಲದ ನಿವೇದತ್‌ಗೆ ಕಣ್ಣುಮುಚ್ಚಿಕೊಂಡು ಟಿಕೆಟ್ ಕೊಟ್ಟು ಮೂರ್ಖತನ ಮಾಡಿದೆ; ಮುಸ್ಲಿಮ್, ಕ್ರಿಶ್ಚಿಯನ್ ಮತದಾರರೊಂದಿಗೆ ಇನ್ನ್ಯಾವ ಜಾತಿ-ಪಂಗಡದ ಮತ ಸೆಳೆಯಬಹುದೆಂಬ ಲೆಕ್ಕಾಚಾರ ನಿವೇದಿತ್ ಆಳ್ವರ ಚುನಾವಣಾ ಉಸ್ತುವಾರಿಗಳ ಬುದ್ಧಿಮತ್ತೆಗೂ ನಿಲುಕದ ಒಗಟಾಗಿದೆ. ಕಾಂಗ್ರೆಸ್ ಟಿಕೆಟ್ ಸಿಗದೆ ಕೆರಳಿರುವ ಮಾಜಿ ಶಾಸಕಿ ಶಾರದಾ ಶೆಟ್ಟಿ ಪಕ್ಷೇತರರಾಗಿ ಸೆಡ್ಡು ಹೊಡೆಯಲು ಅಣಿಯಾಗಿದ್ದಾರೆ. ಶಾರದಾ ಕಾಂಗ್ರೆಸ್‌ನ ನಿವೇದಿತ್‌ಗಿಂತ ಬಲಾಢ್ಯ ಅಭ್ಯರ್ಥಿ ಎನ್ನಲಾಗುತ್ತಿದೆ. ಸದ್ಯಕ್ಕಂತು ಯಾರು ಗೆಲ್ಲುತ್ತಾರೆಂದು ಹೇಳಲಾಗದು; ಈಗಷ್ಟೇ ಅಖಾಡ ನಿಧಾನಕ್ಕೆ ಹದವಾಗುತ್ತಿದೆ. ಒಂದು ವಾರದ ನಂತರ ಗೆಲ್ಲುವ ಕುದುರೆಯ ಚಿತ್ರಣ ಮೂಡಬಹುದೆಂದು ಸಮರಾಂಗಣದ ನಾಡಿ ಬಲ್ಲವರು ಹೇಳುತ್ತಾರೆ.

ಭಟ್ಕಳ: ಗೆಲ್ಲುವ ಕುದುರೆ ಕಾಂಗ್ರೆಸ್‌ನ ವೈದ್ಯ

ಕಳೆದ ಚುನಾವಣೆಯಲ್ಲಿ ಸೋತ ಕ್ಷಣದಿಂದಲೇ 2023ರ ಚುನಾವಣೆ ಮೇಲೆ “ದೂರ ದೃಷ್ಟಿ”ಯಿಟ್ಟು ಕ್ಷೇತ್ರದಾದ್ಯಂತ ಓಡಾಡಿಕೊಂಡಿದ್ದ ಮಾಜಿ ಶಾಸಕ ಮಂಕಾಳ್ ವೈದ್ಯ ನಿರೀಕ್ಷೆಯಂತೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ್ದಾರೆ. ಪರೇಶ್ ಮೇಸ್ತ ಹೊನ್ನಾವರದ ಕೆರೆಯೊಂದರಲ್ಲಿ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ಸಾವಪ್ಪಿದ್ದನ್ನೇ ಬಂಡವಾಳ ಮಾಡಿಕೊಂಡಾಗಲೂ ಬಿಜೆಪಿ ಭಟ್ಕಳದಲ್ಲಿ ಗೆದ್ದಿದ್ದು ಕೇವಲ 5,930 ಮತಗಳಿಂದ. ಹೊನ್ನಾವರ-ಭಟ್ಕಳ ಕ್ಷೇತ್ರದ ಮೂಲೆಮೂಲೆಯಲ್ಲಿ ಬೇರುಗಳನ್ನು ಹೊಂದಿರುವ ವೈದ್ಯ ಗೆಲ್ಲುತ್ತಾರೆಂದು ಕಳೆದ ಆರು ತಿಂಗಳಿಂದ ನಡೆದ ಬಹುತೇಕ ಸರ್ವೆಗಳು ಹೇಳಿವೆ. ಧನಾಧಾರಿತ ರಾಜಕಾರಣದ ಜತೆ ಜನರ ಕಷ್ಟ-ಸುಖಕ್ಕೆ ಸ್ಪಂದಿಸುವ ವೈದ್ಯ, ಬಿಜೆಪಿಯ ಪಾರ್ಟಿ ಪರ್ಸೆಂಟ್ ಎಮ್ಮೆಲ್ಲೆಯೆಂದೇ ಜನಜನಿತವಾಗಿರುವ ಬಿಜೆಪಿಯ ಸುನಿಲ್ ನಾಯ್ಕ್‌ಗಿಂತ ಧಾರಾಳ ಎಂಬ ಅಭಿಪ್ರಾಯವಿದೆ.

ಮಂಕಾಳ್ ವೈದ್ಯ

ಕಾಂಗ್ರೆಸ್ ಕ್ಯಾಂಡಿಡೇಟ್ ವೈದ್ಯರಿಗೆ ಸ್ವಪಕ್ಷದಲ್ಲಿ ಸೋಲಿಸುವರ ಕಾಟವಿಲ್ಲ. ಕ್ಷೇತ್ರದಲ್ಲಿ ಗಣನೀಯವಾಗಿರುವ ಮೀನುಗಾರ ಪಂಗಡದ (ಮೊಗೇರ) ವೈದ್ಯ ಬಹುಸಂಖ್ಯಾತ ದೀವರ ಓಟುಗಳನ್ನು ದೊಡ್ಡ ಮಟ್ಟದಲ್ಲಿ ಪೆಡೆಯಲಾಗದಿದ್ದರೂ ನಾಮಧಾರಿಯೇತರರ ಮತ ಒಟ್ಟುಗೂಡಿಸುವ ತಂತ್ರಗಾರಿಕೆಯಲ್ಲಿ ನಿಸ್ಸೀಮ. ನಿರ್ಣಾಯಕ ಮತದಾರರಾದ ನವಾಯತ ಮುಸ್ಲಿಮರ ಜತೆ ಸೌಹಾರ್ದ ಸಂಬಂಧವಿರುವ ವೈದ್ಯರಿಗೆ ಈ ಬಾರಿ ಬಿಜೆಪಿಯ ಸಾಂಪ್ರದಾಯಿಕ ಮತದಾರರಾದ ಕೊಂಕಣಿ ಮತ್ತು ಬ್ರಾಹ್ಮಣರು ಒಲಿಯುವ ಲಕ್ಷಣ ಕಾಣಿಸುತ್ತಿದೆ. ಬಿಜೆಪಿ ಹುರಿಯಾಳು ಶಾಸಕ ಸುನಿಲ್ ನಾಯ್ಕ್‌ರನ್ನು ಸ್ವಜಾತಿ ದೀವರ ಒಂದು ಬಣ ವಿರೋಧಿಸುತ್ತಿದೆ. ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ್ ಮತ್ತು ಕಾಸ್ಕಾರ್ಡ್ ಬ್ಯಾಂಕಿನ ಮಾಜಿ ಉಪಾದ್ಯಕ್ಷ ಈಶ್ವರ ನಾಯ್ಕ್ ಸಿಟ್ಟಿನಲ್ಲಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ: ಬಿಜೆಪಿಯಲ್ಲಿ ’ಸಂಘಿ’ ಆಪರೇಷನ್; ರಣತಂತ್ರವಿಲ್ಲದ ಕಾಂಗ್ರೆಸ್!

ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಆರೋಪಗಳಿಂದ ತತ್ತರಿಸುತ್ತಿರುವ ಶಾಸಕ ಸುನಿಲ್‌ಗೆ ಯಾವ ಸರ್ವೆಯನ್ನೂ ಪರಿಗಣಿಸದೆ, ನಿಷ್ಠಾವಂತ ಕೇಸರಿ ಕಾರ್ಯಕರ್ತರ ವಿರೋಧದ ನಡುವೆಯೂ ಅಭ್ಯರ್ಥಿ ಮಾಡಿರುವುದು ಬಿಜೆಪಿಗೆ ಕಂಟಕಕಾರಿಯಾಗಿದೆ. ಸ್ವಜಾತಿ ದೀವರಲ್ಲಿ ಪ್ರಭಾವಿಯಾಗಿರುವ ಹೈಕೋರ್ಟ್ ನ್ಯಾಯವಾದಿ ನಾಗೇಂದ್ರ ನಾಯ್ಕ್ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿರವುದು ಸುನಿಲ್‌ಗೆ ಬರುತ್ತಿದ್ದ ಸ್ವಜಾತಿ ಓಟ್ ಕಟ್ ಮಾಡಲಿದೆ. ಸೆಕ್ಯುಲರ್ ಗುಣಧರ್ಮದ ನಾಗೇಂದ್ರ ನಾಯ್ಕರನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಿಸಲು ಮೂರ್‍ನಾಲ್ಕು ಬಾರಿ ಸುಪ್ರೀಮ್‌ಗೆ ಶಿಫಾರಸು ಮಾಡಲಾಗಿದ್ದರೂ ಕೇಂದ್ರ ಹಿಂದುತ್ವವಾದಿ ಸರಕಾರ ಹಿಂದೇಟು ಹಾಕುತ್ತಿರುವದು ಕ್ಷೇತ್ರದಲ್ಲಿ ಚರ್ಚೆಯ ಸಂಗತಿಯಾಗಿದೆ. ಇದೆಲ್ಲ ಕಾಂಗ್ರೆಸ್‌ನ ಮಂಕಾಳು ವೈದ್ಯರನ್ನು ನಿರಾಯಾಸವಾಗಿ ಗೆಲ್ಲಿಸಲಿದೆ ಎಂಬ ಮಾತು ಕ್ಷೇತ್ರದ ರಾಜಕೀಯ ಕಟ್ಟೆಯಲ್ಲಿ ಜೋರಾಗಿದೆ.

ಶಿರಸಿ: ಕಾಗೇರಿಯವರಿಗೆ ಕಠಿಣವಾಗುತ್ತಿರುವ ಕಣ!

ಶಿರಸಿ-ಸಿದ್ಧಾಪುರ ವಿಧಾನಸಭಾ ಕ್ಷೇತ್ರ 2008ರ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಹೈಗರ (ಹವ್ಯಕ ಬ್ರಾಹ್ಮಣ) ಮೀಸಲು ಕ್ಷೇತ್ರ ಎಂಬಂತಾಗಿದೆ. ಇದು ದೀವರ (ಈಡಿಗ) ಮೀಸಲು ಕ್ಷೇತ್ರವಾಗುವ ಅನುಕೂಲತೆ-ಸಾಧ್ಯತೆ ಹೆಚ್ಚಿದ್ದರೂ ಹಿಂದುಳಿದ ವರ್ಗದವರಿಗೆ ಒಗ್ಗಟ್ಟಿನ ಅನಿವಾರ್ಯತೆ ಅರ್ಥವಾಗದಿರುವುದು ಮತ್ತು ಹಿಂದುತ್ವ ಯಾಮಾರಿಸುತ್ತಿರುವುದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಮೂರು ಬಾರಿ ನಿರಾಯಾಸವಾಗಿ ಗೆಲ್ಲಿಸಿದೆ; ಕ್ಷೇತ್ರದಲ್ಲಿ ಹೈಗರಿಗಿಂತ ದೀವರು ಹೆಚ್ಚಿದ್ದಾರೆ, ಪರಿಶಿಷ್ಟ ಜಾತಿ ಮತ್ತು ಮುಸಲ್ಮಾನರು ನಿರ್ಣಾಯಕರು. ಈ ಬಾರಿ ಕಾಗೇರಿಯವರಿಗೆ ಪಿಚ್ ಪ್ರತಿಕೂಲವಾಗಿ ಹದಗೊಳ್ಳುತ್ತಿದೆ; ಕ್ಷೇತ್ರದ ಮಂದಿಗೆ ಕಾಗೇರಿ ಬೇಡವೆನಿಸಿದರೆ, ಬಿಜೆಪಿ ಬಗ್ಗೆ ಬೇಜಾರು ಬಂದಿದೆ ಎಂಬ ಮಾತು ಕೇಳಿಬರುತ್ತಿದೆ.

ಕಾಗೇರಿ

ಬಿಜೆಪಿಯ ಹಳೆ ಹುಲಿ ಕಾಗೇರಿ ಹಾಗು ಕಾಂಗ್ರೆಸ್‌ನ ಭೀಮಣ್ಣ ನಾಯ್ಕ್ ಸಾಂಪ್ರದಾಯಿಕ ಎದುರಾಳಿಗಳು. ಮಾಜಿ ಸಿಎಂ ಬಂಗಾರಪ್ಪರ ಭಾಮೈದರಾದ ಭೀಮಣ್ಣ ಸ್ವಜಾತಿ ದೀವರ ನಡುವೆ ಸಮನ್ವಯತೆ ಸಾಧಿಸಲಾಗದೆ ಸೋಲುತ್ತಿದ್ದಾರೆ ಎನ್ನಲಾಗಿದೆ. ದೇಶಪಾಂಡೆ ಗುಂಪಿನಲ್ಲಿ ಗುರುತಿಸಿಕೊಂಡಿರುವ ಭೀಮಣ್ಣರಿಗೆ ಮಾರ್ಗರೆಟ್ ಆಳ್ವ ಬಣದಲ್ಲಿರುವ ದೀವರು ವಿರೋಧಿಸುತ್ತ ಬಂದಿದ್ದರು. ಆದರೆ ಈ ಬಾರಿ ಅವರೆಲ್ಲ ಒಂದಾಗಿ ಭೀಮಣ್ಣರನ್ನು ಗೆಲ್ಲಿಸುವ ತೀರ್ಮಾನ ಮಾಡಿದ್ದಾರೆ; ಬಿಜೆಪಿಯಲ್ಲಿನ ದೀವರ ಲೀಡರ್‌ಗಳು ಭೀಮಣ್ಣರಿಗೆ ಸಹಕರಿಸುವ ಭರವಸೆ ಕೊಟ್ಟಿದ್ದಾರೆನ್ನಲಾಗಿದೆ. ಕ್ಷೇತ್ರದಲ್ಲಿ ಓಡಾಡಿದರೆ ದೀವರಲ್ಲಿ ಅಪರೂಪದ ಹೊಂದಾಣಿಕೆ ಈ ಬಾರಿ ಆಗಿರುವುದು ಗೋಚರಿಸುತ್ತದೆ. ಬಂಗಾರಪ್ಪನವರ ಕಾಲದಿಂದ ಪಾರ್ಲಿಮೆಂಟ್, ಶಿರಸಿ ವಿಧಾನಸಭಾ ಕ್ಷೇತ್ರ, ಪಕ್ಕದ ಯಲ್ಲಾಪುರ ಉಪ-ಚುನಾವಣೆ, ವಿಧಾನ ಪರಿಷತ್ ಇಲೆಕ್ಷನ್ ಹೀಗೆ ಸತತ ಸೋತಿರುವ ಭೀಮಣ್ಣನವರ ಬಗ್ಗೆ ಈ ಸಲ ಅನುಕಂಪದ ಅಲೆಯೆದ್ದಿದೆ ಎನ್ನಲಾಗುತ್ತಿದೆ.

ಕಾಗೇರಿಗೆ ಸಿದ್ಧಾಪುರ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ-ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ್ ಟಿಕೆಟ್ ಎದುರಾಳಿಯಾಗಿದ್ದರು. ನಿಗಮ-ಮಂಡಳಿ ಹುದ್ದೆಯೂ ಕೆ.ಜಿ.ನಾಯ್ಕರಿಗೆ ಸಿಗದಂತೆ ಕಾಗೇರಿ ಮಾಡಿದರೆಂಬ ಸಿಟ್ಟು ದೀವರರಲ್ಲಿದೆ. ನಾಯ್ಕ್‌ಗೆ ಸಂಸದ ಅನಂತ್ ಹೆಗಡೆ ಕುಮ್ಮಕ್ಕಿರುವುದು ಬಹಿರಂಗ ರಹಸ್ಯ. ಭಿನ್ನಮತೀಯ ಕಾಟದಲ್ಲಿ ಕಾಗೇರಿ ಸುಸ್ತಾದಂತಿದೆ. ಸಂಸದ ಅನಂತ್ ಹೆಗಡೆ-ಕಾಗೇರಿ ನಡುವೆ ಲಾಗಾಯ್ತಿನಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸ್ವಜಾತಿ ಹೈಗರಲ್ಲಿ ಒಂದು ಬಣ ಕಾಗೇರಿಯನ್ನು ಒಪ್ಪುವುದಿಲ್ಲ; ಹಿಂದಿನೆರಡು ಚುನಾವಣೆಯಲ್ಲಿ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ ಹೆಗಡೆ ಜೆಡಿಎಸ್ ಕ್ಯಾಂಡಿಡೇಟಾಗಿ ಕಾಗೇರಿಗೆ ಬೆವರಿಳಿಸಿದ್ದರು.

ಭೀಮಣ್ಣ ನಾಯ್ಕ್

ಕಾಗೇರಿ ಜತೆಗಿನ ವೈಮನಸ್ಸಿನಿಂದಾಗಿ ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ್ದ ಶಶಿಭೂಷಣ ಹೆಗಡೆ ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿದ್ದಾರೆ. ಕ್ಷೇತ್ರದಲ್ಲಿ ಪ್ರಬಲ ವಿರೋಧ ವ್ಯಕ್ತವಾಗುತ್ತಿರುವುದರಿಂದ ವಿಚಲಿತರಾಗಿರುವ ಕಾಗೇರಿ ಶಶಿಭೂಷಣ ಹೆಗಡೆಯವರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ; ಆದರೆ ಶಶಿಯ ಸಹಕಾರದ ಹೊರತಾಗಿಯೂ ಹೈಗರ ತಂಡವೊಂದು ಕಾಗೇರಿ ವಿರುದ್ಧವಿದೆ. ಈ ಬಳಗ ಕಾಂಗ್ರೆಸ್ ಟಿಕೆಟ್ ಸಿಗದೆ ಬಂಡೆದ್ದಿರುವ ಜಿ.ಪಂ ಮಾಜಿ ಸದಸ್ಯ ವೆಂಕಟೇಶ ಹೆಗಡೆ ಹೊಸಬಾಳೆಗೆ ಪಕ್ಷೇತರರಾಗಿ ಕಣಕ್ಕಿಳಿಸುವ ಸ್ಕೆಚ್ ಹಾಕಿದೆ. ಹೈಗರ ಓಟು ವೆಂಕಟೇಶ ಹೆಗಡೆ ಒಡೆದರೆ ಕಾಗೇರಿಯವರಿಗೆ ಹಾನಿಯಾಗಲಿದೆ. ಸತತ ಆರು ಬಾರಿ (3 ಸಲ ಯಲ್ಲಾಪುರ, 3 ಸಲ ಶಿರಸಿ) ಶಾಸಕರಾಗಿರುವ ಕಾಗೇರಿಯವರಿಗೆ ಬಿಜೆಪಿ ಹೈಕಮಾಂಡ್ ಈ ಬಾರಿ ವಿಶ್ರಾಂತಿಗೆ ಕಳುಹಿಸಲಿದೆ ಎಂಬ ಸುದ್ದಿ ಹರಿದಾಡಿತ್ತು. ಕಾಗೇರಿ ನೇರ ಮೋದಿಯವರನ್ನು ಭೇಟಿಯಾಗಿ ಬಂದ ನಂತರ ಕೊಂಚ ಗೆಲುವಾಗಿದ್ದರು. ಟಿಕೆಟ್ ಏನೋ ಸಿಕ್ಕಿತು; ಗೆಲುವಿಗೆ ತಿಣುಕಾಡಬೇಕಾಗಿದೆ. ಕಾಗೇರಿ-ಭೀಮಣ್ಣರ ಮಧ್ಯೆ ಸಮಬಲದ ಮೇಲಾಟ ಏರ್‍ಪಟ್ಟಿದೆ. 2013ರಂತೆ ಫೋಟೋ ಫಿನಿಶ್ ಫಲಿತಾಂಶ ಬರಲಿದೆ ಎಂಬ ಮಾತು ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ.

ಯಲ್ಲಾಪುರ: ಆಪರೇಷನ್ ಕಮಲದ ಹೆಬ್ಬಾರ್‌ಗೆ ಸಂಕಟ!

ಅಧಿಕಾರದಾಸೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಸಚಿವ ಶಿವರಾಮ್ ಹಬ್ಬಾರ್ ಸಂಘಿ ಸಿದ್ಧಾಂತ ಬದ್ಧತೆಯಿಲ್ಲದ ವಲಸಿಗ; ಅವರಿಗೆ ಕೇಸರಿ ಟಿಕೆಟ್ ಸಿಗಲಾರದು. ಶುದ್ಧ ಸಂಘ ನಿಷ್ಠನೊಬ್ಬನಿಗೆ ಛಾನ್ಸ್ ಕೊಡಲಾಗುತ್ತದೆ ಎಂಬ ಸುದ್ದಿ ಹಲವು ತಿಂಗಳುಗಳಿಂದ ಯಲ್ಲಾಪುರ ಕ್ಷೇತ್ರದಲ್ಲಿ ಹರಿದಾಡುತ್ತಿತ್ತು. ಆದರೆ ಹೆಬ್ಬಾರ್ ನಿರಾಯಾಸವಾಗಿ ಮತ್ತೆ ಬಿಜೆಪಿಯ ಅಭ್ಯರ್ಥಿಯಾಗಿ ಅವತರಿಸಿದ್ದಾರೆ. ಹವ್ಯಕ ಬ್ರಾಹ್ಮಣ ಜಾತಿಯ ಹೆಬ್ಬಾರ್‌ರ ಸಾಂಪ್ರದಾಯಿಕ ಎದುರಾಳಿ ಮಾಜಿ ಎಮ್ಮೆಲ್ಲೆ ವಿ.ಎಸ್.ಪಾಟೀಲ್‌ರನ್ನು ಕಾಂಗ್ರೆಸ್ ಆಖಾಡಕ್ಕೆ ಇಳಿಸಿದೆ. 2008ರಲ್ಲಿ ಯಲ್ಲಾಪುರ ಕ್ಷೇತ್ರ ರಚನೆಯಾದಾಗಿನಿಂದ ಪಾಟೀಲ್-ಹೆಬ್ಬಾರ್ ಪ್ರತಿ ಸಲ (2019ರ ಉಪಚುನಾವಣೆ ಬಿಟ್ಟು) ಮುಖಾಮುಖಿಯಾಗುತ್ತ ಬಂದಿದ್ದಾರೆ. ಮೊದಲ ಹೋರಾಟದಲ್ಲಿ ಲಿಂಗಾಯತ ಸಮುದಾಯದ ಪಾಟೀಲ್ ಬಿಜೆಪಿಯಿಂದ ಶಾಸಕನಾಗಿದ್ದರು. ಉಳಿದೆರಡು ಸಲ ಸ್ವಪಕ್ಷದ ಸಂಸದ ಅನಂತ ಹೆಗಡೆ ಕಾಂಗ್ರೆಸ್‌ನ ಹೆಬ್ಬಾರ್‌ಗೆ ನೆರವಾದ್ದರಿಂದ ಪಾಟೀಲ್ ಸೋಲುವಂತಾಗಿತ್ತು ಎಂಬ ಮಾತು ಈಗಲೂ ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ.

ಶಿವರಾಮ್ ಹಬ್ಬಾರ್

ಸರಳ-ಸೌಮ್ಯ ಸ್ವಭಾವದ ಪಾಟೀಲ್ ಅಂದಿನ ಸಿಎಂ ಯಡಿಯೂರಪ್ಪರ ಸಖ್ಯದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ಜನಾನುರಾಗಿಯಾಗಿದ್ದಾರೆ. ಆಪರೇಷನ್ ಕಮಲದ ಮೂಲಕ ಹೆಬ್ಬಾರ್ ಬಿಜೆಪಿ ಸೇರಿದಾಗ ನಡೆದ ಉಪ-ಚುನಾವಣೆಯಲ್ಲಿ ಸ್ವಜಾತಿ ನಾಯಕಾಗ್ರೇಸ ಯಡಿಯೂರಪ್ಪರ ಮಾತಿಗೆ ಕಟ್ಟುಬಿದ್ದು ಪಾಟೀಲ್ ಕ್ಷೇತ್ರ ತ್ಯಾಗ ಮಾಡಿದ್ದರು. ಪಾಟೀಲ್‌ಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷತೆ ಕೊಡಲಾಗಿತ್ತು. ಆದರೆ ದಿನಕಳೆದಂತೆ ಹೆಬ್ಬಾರ್-ಪಾಟೀಲ್ ನಡುವೆ ಮನಸ್ತಾಪ ಬೆಳೆಯಿತು. ಮಂತ್ರಿ ಹೆಬ್ಬಾರ್ ದಂಡಿನ ದಬ್ಬಾಳಿಕೆ ಹೆಚ್ಚಾದಾಗ ಪಾಟೀಲ್ ಸಿಡಿದೆದ್ದು ಕಾಂಗ್ರೆಸ್ ಸೇರಿಕೊಂಡರು.

ಯಲ್ಲಾಪುರ-ಮುಂಡಗೋಡದಲ್ಲಿ ಕಾಂಗ್ರೆಸ್‌ಗೆ ಭದ್ರಬುನಾದಿಯಿದೆ. ಈ ಬೇಸ್ ಓಟ್ ಜತೆ ಇಷ್ಟು ಕಾಲ ಬಿಜೆಪಿಗೆ ಹೋಗುತ್ತಿದ್ದ ಲಿಂಗಾಯತ ಸಮುದಾಯದ ಮತಗಳು ಪಾಟೀಲರಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ಬರಲಿದೆ. ಪಾಟೀಲ್ ಸಚಿವ ಹೆಬ್ಬಾರ್‌ಗಿಂತ ಹೆಚ್ಚು ಜನಪರ ಕೆಲಸಗಾರ; ಬಿಜೆಪಿಯಿಂದ ಪಾಟೀಲ್‌ಗೆ ಅನ್ಯಾಯವಾಗಿದೆ ಎಂಬ ಭಾವನೆ ಕ್ಷೇತ್ರದಲ್ಲಿದೆ. ಜತೆಗೆ ಇದು ನನ್ನ ಕೊನೆಯ ಚುನಾವಣೆ; ಒಂದು ಅವಕಾಶ ಕೊಡಿಯೆಂದು ಪಾಟೀಲ್ ಕೇಳುತ್ತಿರುವುದು ಅನುಕಂಪಕ್ಕೆ ಕಾರಣವಾಗಿದೆ.

ವಿ.ಎಸ್.ಪಾಟೀಲ್‌

ಹೈಗರು ಹೆಚ್ಚಿರುವ ಯಲ್ಲಾಪುರದಲ್ಲಿ ಹೆಬ್ಬಾರ್ ಪ್ರಭಾವ ಜಾಸ್ತಿಯಾದರೆ, ಕಾಂಗ್ರೆಸ್ ಕ್ಯಾಂಡಿಡೇಟ್ ಪಾಟೀಲ್ ಮುಂಡಗೋಡಲ್ಲಿ ಶಕ್ತಿಶಾಲಿಯಾಗಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಶಿರಸಿ ತಾಲೂಕಿನ ಬನವಾಸಿ ಹೋಬಳಿ ನಿರ್ಣಾಯಕವಾಗಲಿದೆ. ಇಲ್ಲಿ ಲಿಂಗಾಯತರು ಗಣನೀಯವಾಗಿದ್ದಾರೆ. ಶಿರಸಿ ಕ್ಷೇತ್ರದ ಕಾಂಗ್ರೆಸ್ ಹುರಿಯಾಳು, ಡಿಸಿಸಿ ಮಾಜಿ ಅಧ್ಯಕ್ಷ ಭೀಮಣ್ಣ ನಾಯ್ಕ್ ಸಮುದಾಯದ ದೀವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತರು ಮತ್ತು ಭೀಮಣ್ಣರಿಂದ ದೀವರು ಕಾಂಗ್ರೆಸ್‌ಗೆ ಒಲಿವ ಸೂಚನೆ ಗೋಚರಿಸುತ್ತಿದೆ. ಇದೆಲ್ಲಕಿಂತ ಹೆಚ್ಚಾಗಿ ಯಲ್ಲಾಪುರ-ಮುಂಡಗೋಡು ಬದಲಾವಣೆ ಮೂಡಲ್ಲಿದೆ. ಕಾಂಗ್ರೆಸ್‌ನ ಪಾಟೀಲ್ ಗೆಲುವಿನ ಗೆರೆಯತ್ತ ದಾಪುಗಾಲು ಹಾಕುತ್ತಿದ್ದಾರೆ ಎಂದು ಆಖಾಡದ ಚಹರೆ ಬಲ್ಲವರು ಹೇಳುತ್ತಾರೆ.

ಹಳಿಯಾಳ: ಘೋಟನೇಕರ್ ಕಿಂಗ್ ಮೇಕರ್?

ಹಳಿಯಾಳ ಎಂಟು ಬಾರಿ ಶಾಸಕನಾಗಿರುವ, ಒಮ್ಮೆ ತಾವೇ ಸಲುಹಿದ ಸ್ವಜಾತಿ (ಕೊಂಕಣಿ) ಹುಡುಗನ ಕೈಲಿ ಅಪಮಾನಕರ ಸೋಲನುಭವಿಸಿದ್ದ ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆಯ ಕ್ಷೇತ್ರ; ಆಯಕಟ್ಟಿನ ಅಧಿಕಾರ ಸ್ಥಾನಗಳನ್ನೇರಿ ಇಳಿಯುತ್ತ ನಾಲ್ಕು ದಶಕದ ರಾಜಕಾರಣ ಮಾಡಿರುವ ದೇಶಪಾಂಡೆ ಜಿಲ್ಲಾ ನಾಯಕನಾಗುವುದಿರಲಿ ಕನಿಷ್ಠ ಹಳಿಯಾಳದಲ್ಲಿ ಗೆಲ್ಲುವುದಕ್ಕೂ ತಿಣುಕಾಡಬೇಕಾಗಿರುವುದು ವಿಪರ್ಯಾಸ ಎಂದು ಜಿಲ್ಲೆಯ ರಾಜಕಾರಣದ ನಾಡಿಮಿಡಿತ ಬಲ್ಲವರು ಅಭಿಪ್ರಾಯಪಡುತ್ತಾರೆ.

ದೇಶಪಾಂಡೆ

ದೇಶಪಾಂಡೆಯವರ ಹಳಿಯಾಳ ರಾಜಕಾರಣದ ದೊಡ್ಡ ಫಲಾನುಭವಿಗಳೆಂದರೆ ಮಾಜಿ ಎಮ್ಮೆಲ್ಸಿಗಳಾದ ವಿ.ಡಿ.ಹೆಗಡೆ ಹಾಗು ಎಸ್.ಎಲ್.ಘೋಟನೇಕರ್. ತಮ್ಮ ಪರಮಾಪ್ತ ಒಡನಾಡಿಗಳಾದ ಈ ಇಬ್ಬರನ್ನೂ ದೇಶಪಾಂಡೆ ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಕಳುಹಿಸಿದ್ದರು. ಆದರೆ ಇಬ್ಬರೂ ದೇಶಪಾಂಡೆಗೆ ತಿರುಗಿಬಿದ್ದು ಹಳಿಯಾಳ ಅಸೆಂಬ್ಲಿ ಅಖಾಡದಲ್ಲಿ ಸೆಡ್ಡು ಹೊಡೆದಿದ್ದಾರೆ. 2008ರ ಚುನಾವಣೆಯಲ್ಲಿ ವಿ.ಡಿ.ಹೆಗಡೆ ತಮ್ಮ ಮಗ ಸುನಿಲ್ ಹೆಗಡೆಯನ್ನು ದೇಶಪಾಂಡೆ ಎದುರು ಜೆಡಿಎಸ್ ಅಭ್ಯರ್ಥಿಯಾಗಿ ನಿಲ್ಲಿಸಿದ್ದರು. ಸಣ್ಣ ಅಂತರದಲ್ಲಿ ಸುನಿಲ್ ಗುರುವನ್ನು ಮಣಿಸಿ ದಾಖಲೆ ಮಾಡಿದ್ದರು. ಆದರೆ ಆ ಬಳಿಕದ ಎರಡು ಚುನಾವಣೆಯಲ್ಲಿ ಒಮ್ಮೆ ಜೆಡಿಎಸ್ ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸಿದರೂ ಗೆಲ್ಲಲಾಗಲಿಲ್ಲ.

ಈಗ ಸುನಿಲ್ ಹೆಗಡೆ ಬಿಜೆಪಿ ಹುರಿಯಾಳಾಗಿ ಮತ್ತು ಘೋಟನೇಕರ್ ಜೆಡಿಎಸ್ ಉಮೇದುವಾರನಾಗಿ ಹಳೆ ಹುಲಿ ದೇಶಪಾಂಡೆಗೆ ಮುಖಾಮುಖಿಯಾಗಿ ನಿಂತಿದ್ದಾರೆ. ದೇಶಪಾಂಡೆ ತಾವು ಜನತಾ ಪರಿವಾರ ಮತ್ತು ಕಾಂಗ್ರೆಸ್‌ನ ಮುಂದಾಳಾಗಿ ಹಲವರನ್ನು ಎಮ್ಮೆಲ್ಸಿ ಮಾಡಿದ್ದಾರೆ. ಆದರೆ ಒಬ್ಬರಿಗೆ ಒಂದು ಅವಕಾಶವನ್ನಷ್ಟೇ ಕೊಡುತ್ತಿದ್ದ ದೇಶಪಾಂಡೆ ಘೋಟನೇಕರ್‌ಗೆ ಮಾತ್ರ ಎರಡು ಬಾರಿ ಎಮ್ಮೆಲ್ಸಿಯಾಗುವಂತೆ ನೋಡಿಕೊಂಡಿದ್ದರು. ಇದು ಹಳಿಯಾಳ ಕ್ಷೇತ್ರವನ್ನು ಉಳಿಸಿಕೊಳ್ಳುವ ದೇಶಪಾಂಡೆಯವರ ರಕ್ಷಣಾತ್ಮಕ ಆಟವಾಗಿತ್ತು. ಮರಾಠ ಬಾಹುಳ್ಯದ ಹಳಿಯಾಳದಲ್ಲಿ ತೀರಾ ಅಲ್ಪಸಂಖ್ಯಾತ ಕೊಂಕಣಿ ಸಮುದಾಯದ ದೇಶಪಾಂಡೆಯವರಿಗೆಗೆ ಮರಾಠರ ಮೇಲೆ ಪ್ರಭಾವವಿದ್ದ ಘೋಟನೇಕರ್‌ರನ್ನು ತೆಕ್ಕೆಯಲ್ಲಿಟ್ಟುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಸ್ಥಳೀಯ ಜಾತಿ ಸಮೀಕರಣದ ಮರ್ಮ ಬಲ್ಲವರು ಹೇಳುತ್ತಾರೆ.

ಎಸ್.ಎಲ್.ಘೋಟನೇಕರ್

ಎರಡನೆ ಬಾರಿ ಘೋಟನೇಕರ್ ಎಮ್ಮೆಲ್ಸಿಯಾದಾಗ ದೇಶಪಾಂಡೆಯವರಿಗೆ ಸರಿಸಮನಾಗಿ ನಿಲ್ಲುವ ಪ್ರಯತ್ನ ಮಾಡಿದರು. ಇದರಿಂದ ಸಹಜವಾಗಿಯೇ ದೇಶಪಾಂಡೆಯವರಿಗೆ ಕೋಪ ಬಂತು. ವೈಮನಸ್ಸು ಹೆಚ್ಚಾಗುತ್ತ ಹೋಯಿತು. ಮೂರನೆ ಬಾರಿ ಎಮ್ಮೆಲ್ಸಿಗೆ ಸ್ಪರ್ಧಿಸಲಾರೆ; ತಾನು ಹಳಿಯಾಳ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಘೋಟನೇಕರ್ ನೇರಾನೇರ ದೇಶಪಾಂಡೆಗೆ ತಿರುಗಿ ನಿಂತರು. ಕೆಪಿಸಿಸಿಗೆ ದೇಶಪಾಂಡೆ ವಿರುದ್ಧ ದೂರುಕೊಟ್ಟು ಟಿಕೆಟ್‌ಗೆ ಬೇಡಿಕೆಯಿಟ್ಟರು. ಟಿಕೆಟ್ ಸಿಗಲಾರದೆಂದು ಖಾತ್ರಿಯಾದಾಗ ತನ್ನ ಪರಮಾಪ್ತ ಮಿತ್ರ ಸಚಿವ ಹೆಬ್ಬಾರ್‌ರನ್ನು ಹಿಡಿದುಕೊಂಡು ಬಿಜೆಪಿ ಸೇರಲು ಹವಣಿಸಿದರು. ಆದರೆ ಬಿಜೆಪಿ ಬಾಗಿಲಲ್ಲಿ ಬದ್ಧ ವೈರಿ ಸುನಿಲ್ ಹೆಗಡೆ ಅಡ್ಡನಿಂತು ತಡೆಯೊಡ್ಡಿದರು. ಬೇರೆ ಆಯ್ಕೆಯಿಲ್ಲದೆ ಘೋಟನೇಕರ್ ಜೆಡಿಎಸ್ ಸೇರಿ ಯುದ್ಧ ಸನ್ನದ್ಧರಾಗಿದ್ದಾರೆ.

ಹಳಿಯಾಳ ಅಖಾಡದಲ್ಲೀಗ ತ್ರಿಕೋನ ಕಾಳಗ ನಡೆದಿದೆ. ಕ್ಷೇತ್ರದ ಪ್ರಥಮ ಬಹುಸಂಖ್ಯಾತ ಮರಾಠ ಸಮುದಾಯದ ಘೋಟನೇಕರ್ ಎಂಟ್ರಿಯಿಂದ ಕಾಂಗ್ರೆಸ್‌ನ ದೇಶಪಾಂಡೆ ಹಾಗು ಬಿಜೆಪಿಯ ಸುನಿಲ್ ಹೆಗಡೆ ಇಬ್ಬರಲ್ಲೂ ನಡುಕ ಮೂಡಿದೆ. ಘೋಟನೇಕರ್ ಮೇಲೆ ಮರಾಠ ಸಮುದಾಯದ ಹಣ ಲಪಟಾಯಿಸಿದ ಆರೋಪ-ಕೇಸ್ ಇದೆ; ದಲಿತ ದೌರ್ಜನ್ಯದ ಪ್ರಕರಣವಿದೆ. ಆದರು ಮರಾಠರ ಮಧ್ಯೆ ಒಂದಿಷ್ಟು ಪ್ರಭಾವ ಉಳಿಸಿಕೊಂಡಿದ್ದಾರೆ. ದೇಶಪಾಂಡೆ ಎಂದರಾಗದ ಮುಸ್ಲಿಮರೂ ಹಿಂದಿದ್ದಾರೆ. ಇದು ಕಿಂಗ್ ಆಗುವಷ್ಟಲ್ಲದಿದ್ದರೂ ತನಗರಿವಿಲ್ಲದೆ ದೇಶಪಾಂಡೆ ಅಥವಾ ಸುನಿಲ್ ಹೆಗಡೆ ಪಾಲಿಗೆ ಕಿಂಗ್ ಮೇಕರ್ ಆಗುವಷ್ಟಿದೆ ಎಂದು ಚುನಾವಣಾ ವಿಶ್ಲೇಷಕರು ಲೆಕ್ಕಹಾಕುತ್ತಾರೆ.

ಸುನಿಲ್ ಹೆಗಡೆ

ಹಳಿಯಾಳ ಆಖಾಡದ ಸೋಲು-ಗೆಲುವಿನ ಗಣಿತ ಘೋಟನೇಕರ್ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಘೋಟನೇಕರ್ ಮರಾಠರ ಓಟು ಹೆಚ್ಚುಪಡೆದರೆ ಬಿಜೆಪಿಗೆ ಹಾನಿ; ಮುಸ್ಲಿಮರ ಮತ ಸೆಳೆದಷ್ಟೂ ಕಾಂಗ್ರೆಸ್‌ಗೆ ಖೋತಾ. ಘಾಡಿ ಮಾಸ್ತರ್ ನಂತರದ ಈ ನಾಲ್ಕು ದಶಕದಲ್ಲಿ ಮರಾಠರ ಸಾಮ್ರಾಜ್ಯದಲ್ಲಿ ತೀರಾ ಸಣ್ಣ ಜಾತಿಯಾದ ಕೊಂಕಣಿ “ದೊರೆ”ಗಳು ಆಳ್ವಿಕೆ ನಡೆಸಿದ್ದಾರೆ. ಈ ಬಾರಿ ಮರಾಠರ ಸ್ವಾಭಿಮಾನ ಗೆಲ್ಲಬೇಕು ಎಂದು ಹೇಳುತ್ತಿರುವ ಘೋಟನೇಕರ್ ಸ್ವಜಾತಿಯ ಮುಕ್ಕಾಲು ಪಾಲಿನಷ್ಟಾದರೂ ಮತ ಪಡೆದರಷ್ಟೆ “ಕಿಂಗ್”ಆಗುತ್ತಾರೆ; ಇಲ್ಲದಿದ್ದರೆ ಕಿಂಗ್ ಮೇಕರ್ ಎಂಬ ಮಾತು ಕೇಳಿ ಬರುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...