Homeಕರ್ನಾಟಕಎದಿ ಬ್ಯಾನಿಯ ಹಾಡಿ ತೋರಿದ ಚೆನ್ನಣ್ಣ ವಾಲೀಕಾರರ ಸ್ಮರಣೆ - ಭಗತರಾಜ ನಿಜಾಮಕಾರಿ

ಎದಿ ಬ್ಯಾನಿಯ ಹಾಡಿ ತೋರಿದ ಚೆನ್ನಣ್ಣ ವಾಲೀಕಾರರ ಸ್ಮರಣೆ – ಭಗತರಾಜ ನಿಜಾಮಕಾರಿ

- Advertisement -
- Advertisement -

ಮರದ ಮೇಲಿನ ಗಾಳಿಗೆ ಹಕ್ಕಿಯೊಂದು ರೆಕ್ಕೆ ಬಿಚ್ಚಿ `ಕರಿತೆಲೆ ಮಾನವನ ಜೀಪದ’ ಹಾಡು ಹಾಡುತ್ತಿತ್ತು. `ಬಂಡೆದ್ದ ದಲಿತರ ಬೀದಿಹಾಡುಗಳು’, `ಪ್ಯಾಂಥರ್ಸ್ ಪದ್ಯಗಳು’, `ಧಿಕ್ಕಾರದ ಹಾಡುಗಳು’, `ಡಪ್ಪಿನಾಟ’ಗಳೊಂದಿಗೆ ಆ ಭೀಮಕಾಯ `ಬೆಳ್ಯ’ ಕುಣಿಯುತ್ತಲಿದ್ದ. ದಣಿವರಿವು ಅವನಿಗೆ ಗೊತ್ತಿಲ್ಲ. ಊಟಕ್ಕೆ ಕರೆದರೆ ಶತಮಾನದ ಸೇಡು ತೀರಿಸಿಕೊಳ್ಳುತಿದ್ದ. ರಾಯಚೂರಿನ ಕಡುಬಿಸಿಲಲ್ಲಿ ಬರೆಯಲು ಕುಳಿತರೆ, ಬರಿಮೈ, ಸುರಿವ ಬೆವರು, ಬಣ್ಣಬಣ್ಣದ ಹೂವುಗಳ ಲುಂಗಿ, ಬೆರಳಲ್ಲಿ ಪೆನ್ನು, ಸರಸರನೆ ಬಿಳಿಹಾಳೆಯ ತುಂಬ ಹಾವಿನಂತೆ ಹರಿದಾಡುತ್ತಿತ್ತು. ಹೆಪ್ಪುಗಟ್ಟಿದ ಸಮುದ್ರ, ಬೋಧಿವೃಕ್ಷದ ಹೂವು ಅರಳುತ್ತಿದ್ದವು.

ಇಂತಪ್ಪ ನಮ್ಮ ಚೆನ್ನಣ್ಣ ವಾಲೀಕಾರರು ಮೂಲತಃ ಜಾನಪದ ಲೋಕದ ಮನುಷ್ಯ. ಜಾನಪದದಲ್ಲಿಯೇ ಸಂಶೋಧನೆ ಮಾಡುತ್ತಿದ್ದರೆ ಅವರಿಗೆ ದೊಡ್ಡ ಪ್ರಶಸ್ತಿ ತಪ್ಪದೇ ಬರುತ್ತಿತ್ತು. ಆದರೆ ಅವರಿಗೆ ಪ್ರಶಸ್ತಿ, ಬಿರುದು-ಬಾವಲಿಗಳಿಗಿಂತ ತನ್ನ ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರನಾಗುವುದು ಮುಖ್ಯವಾಗಿತ್ತು. “ಯಾವ ಅP್ಷÀರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ” ಎಂದು ಕೈಯಲ್ಲಿ ಡಪ್ಪು ಹಿಡಿದು, ಸಾರ್ವಜನಿಕ ವೇದಿಕೆಗಳ ಮೇಲೆ ಧ್ವನಿ ಎತ್ತಿ ಹಾಡುತ್ತಿದ್ದ ಚೆನ್ನಣ್ಣ, ಹೈದ್ರಾಬಾದ ಕರ್ನಾಟಕ ಪ್ರದೇಶದ ದಲಿತರ ದನಿಯಾಗಿ ಹಗಲಿರುಳು ಶೋಷಿತರ ಬಗ್ಗೆ ಚಿಂತಿಸುತ್ತಿದ್ದರು. ಅವರ ಬಗ್ಗೆ ಹಲವಾರು ಕವನ, ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರವಾಸಕಥನ ಬರೆದುದಲ್ಲದೆ ಅವರೊಂದಿಗೆ ಪ್ರಾಮಾಣಿಕವಾಗಿ ಬದುಕಿದರು. ದೇಶದಲ್ಲಿರುವ ಅಸಹಿಷ್ಣುತೆ, ಜಾತೀಯತೆ, ಶೋಷಕರ ಬಲ, ಅವನತಿಗೆ ಜಾರುತ್ತಿರುವ ಮನುಕುಲದ ಮೌಲ್ಯಗಳನ್ನು ತಮ್ಮ ಸಾಹಿತ್ಯ ಬೋಧನೆಗಳಲ್ಲಿ ತರುತ್ತಿದ್ದರು.

ಧರ್ಮಸ್ಥಳದಲ್ಲಿ ಜರುಗುತ್ತಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (1979) ದಲಿತರಿಗಾಗಿ ಒಂದು ಗೋಷ್ಠಿ ಏರ್ಪಡಿಸಲು ವಿನಂತಿಸಿಕೊಂಡರೆ, ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು `ಸಾಹಿತ್ಯದಲ್ಲಿ ದಲಿತ-ಬಲಿತ-ಕಲಿತ ಎನ್ನುವುದಿಲ್ಲ’ ಎಂದು ಹೀಯಾಳಿಸಿದರು. ಆಗ ಜಂಬಣ್ಣ ಅಮರಚಿಂತ, ಬೋಳಬಂಡೆಪ್ಪ ಮತ್ತು ವಾಲೀಕಾರ ಧಿಕ್ಕಾರದ ಕೂಗು ಪತ್ರಿಕೆಯಲ್ಲಿ ಬಂದಿತು. ಸಾರಸ್ವತ ಲೋಕದಲ್ಲಿ ಅಲ್ಲೋಲ ಕಲ್ಲೋಲ ಎದ್ದಿತು. ಅದುವೇ ಬಂಡಾಯ ಸಾಹಿತ್ಯ ಚಳವಳಿಯ ಹುಟ್ಟಿಗೆ ಪ್ರೇರಣೆಯಾಯಿತು. ಈ ಚಳವಳಿಯ ಹುಟ್ಟಿಗೆ ಕಾರಣರಾದ ರಾಯಚೂರಿನ ಮೂವರು ಸಾಹಿತಿಗಳಲ್ಲಿ ಮೊದಲಿಬ್ಬರು ಬಾರದ ಲೋಕಕ್ಕೆ ಹೋಗಿಯಾಗಿದೆ.

ಈಗ ಮೂರನೆಯವರಾದ ಚೆನ್ನಣ್ಣ 24-11-2019 ರಂದು ರಾತ್ರಿ ಅವರನ್ನು ಕೂಡಿಕೊಂಡರು. ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಶಂಕರವಾಡಿ ಗ್ರಾಮದ ತಳವಾರ ಜನಾಂಗದ ಸಾಬಮ್ಮ-ಧೂಳಪ್ಪನ ಮಗನಾಗಿ (1943) ಚೆನ್ನಣ್ಣ ಜನಿಸಿದರು. ರಾಯಚೂರಿನ ಹಮದರ್ದ್ ಶಾಲೆಗೆ ಕನ್ನಡ ಮಾಸ್ತರರಾಗಿ ಬಂದು ಸೇರಿದರು. ಬಳಿಕ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಡೆದು, ರಾಯಚೂರಿನ ಎಲ್.ವಿ.ಡಿ. ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬಳಿಕ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿ ನಿವೃತ್ತರಾದರು. ಅವರು ತಮ್ಮ ಸೃಜನಶೀಲ ಬರವಣಿಗೆ ಮತ್ತು ಪ್ರಗತಿಪರ ಚಿಂತನೆಗಳಿಂದಾಗಿ ನಾಡಿನ ಎಲ್ಲ ಭಾಗದ ಲೇಖಕರಿಗೂ ಸಾಹಿತ್ಯಾಭಿಮಾನಿಗಳಿಗೂ ಚಿರಪರಿಚಿತರು. ಕನ್ನಡ ಸಾಹಿತ್ಯದಲ್ಲಿ ದಲಿತ ಪ್ರಜ್ಞೆ ಮತ್ತು ಬಂಡಾಯ ಚಿಂತನೆಗೆ ಅಡಿಪಾಯ ಹಾಕಿದವರು. ಈ ಭಾಗದ ಜನಪದ ಸಾಹಿತ್ಯಕ್ಕೆ ಜೀವ ತುಂಬಲು, ಹಗಲಿರುಳು ಎನ್ನದೆ ತಿರುಗಾಡಿ ಗ್ರಾಮದೇವತೆಗಳ ಬಗ್ಗೆ ಅಧ್ಯಯನ ಮಾಡಿ ಪಿಹೆಚ್.ಡಿ., ಪಡೆದವರು. ದೇವದಾಸಿಯವರ, ಆದಿವಾಸಿಗಳ, ಜೋಗತಿಯವರ ಜೀವನವನ್ನು ಅಭ್ಯಸಿಸಿ, ಕೆಳಜನರ ನೋವು ಕುಂಡುಂಡ, ಹಿಂದುಳಿದ ವರ್ಗಗಳ ದಲಿತ ಸಾಹಿತಿಯೆಂದು ಗುರುತಿಸಿಕೊಂಡವರು. ಎಂ.ಎಲ್.ಸಿ.ಯಾಗಿಯೊ, ವಿಶ್ವವಿದ್ಯಾಲಯವೊಂದರ ಉಪ-ಕುಲಪತಿಯಾಗಿ ನೇಮಕವಾಗುವ ಅವಕಾಶ ಅವರಿಗಿತ್ತು. ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗುವ ಅವಕಾಶವಿತ್ತು. ಇದರಿಂದ ವಂಚಿತರಾದರು. ಯಾವುದನ್ನೂ ಬಯಸದೆ ಇದ್ದಂತೆ ಇರಲಿ ಬಂದಂತೆ ಬರಲಿ ಎಂದು ಬದುಕಿದರು.

ಚೆನ್ನಣ್ಣ `ಮರದ ಮೇಲಿನ ಗಾಳಿ’ ಕವನ ಸಂಕಲನದಿಂದ ಸಾಹಿತ್ಯ ರಚನೆ ಪ್ರಾರಂಭಿಸಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದರು. ಕಾವ್ಯ ಸಣ್ಣಕಥೆ, ವಚನ, ಕಾದಂಬರಿ, ನಾಟಕ, ಡಪ್ಪಿನ ಹಾಡು, ಮೊಹರಂ ಪದಗಳು, ಪ್ರವಾಸ ಕಥನಗಳು, ಸಂಶೋಧನೆ ಮುಂತಾದ ಪ್ರಕಾರಗಳಲ್ಲಿ 66 ಕೃತಿಗಳನ್ನು ಪ್ರಕಟಿಸಿದರು. ಇವರ `ಕರಿತಲಿ ಮಾನವನ ಜೀಪದ’ (ಕಾವ್ಯ) `ಬೆಳ್ಯ’ (ಕಾದಂಬರಿ) ಅಪರೂಪದ ಕೃತಿಗಳು. ಸಾವಿರ ಪುಟಗಳ `ವೋಮಾ-ವೋಮ’ವು, ಎಲ್ಲೂ ಅರ್ಧವಿರಾಮ ಪೂರ್ಣವಿರಾಮವಿಲ್ಲದೆ, ಯಾವುದೇ ಅಧ್ಯಾಯಗಳಿಲ್ಲದೆ ಸಾಗುವ ಮಹಾಕಾವ್ಯ. ಚೆನ್ನಣ್ಣ ಇತ್ತೀಚೆಗೆ ಬುದ್ಧನ ತತ್ವಗಳಿಗೆ ಮಾರುಹೋಗಿದ್ದರು. ಧರ್ಮ ಎಂದರೆ ಮನುಷ್ಯ. ಮನುಷ್ಯನೆಂದರೆ ಸಹಿಷ್ಣುತೆಯ ತೋಟ ಎನ್ನುತ್ತಿದ್ದರು. ಜೀವನದ ಕೊನೆಯ ದಿನಗಳಲ್ಲಿ ಬುದ್ಧನ ಕುರಿತು ಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದರು.

ಚೆನ್ನಣ್ಣ ಈ ಭಾಗದ ಸೃಜನಶೀಲ ದೈತ್ಯ ಲೇಖಕರು. ಆದರೆ ಅವರ ಸಾಹಿತ್ಯವನ್ನು ಓದುವ ವ್ಯವಧಾನ ಕಳೆದುಕೊಂಡಿರುವ ಪ್ರಸಿದ್ಧ ಲೇಖಕರು ಅವರ ಬಗ್ಗೆ ಉದಾಸೀನ ತಾಳಿದರು. ಕೆಲವು ಮಹನೀಯರು ಅವರ `ಮ್ಯೋಮಾ-ಮ್ಯೋಮ’ವನ್ನು ತಲೆದಿಂಬಿಗೆ ಹೋಲಿಸಿದರು. ಚೆನ್ನಣ್ಣ ಓದಲು ಕಳುಹಿಸಿದ ಕೃತಿಯನ್ನು ಕೆಲವರು ತಾವು ಓದದೆ ತಮ್ಮ ವಿದ್ಯಾರ್ಥಿನಿಯರಿಗೆ ಕೊಟ್ಟು ಹೀಯಾಳಿಸುತ್ತಿದ್ದರು. ಹೈದ್ರಾಬಾದ್-ಕರ್ನಾಟಕ ಪ್ರದೇಶದ ಪ್ರಸಿದ್ಧ ಲೇಖಕರು ಚೆನ್ನಣ್ಣನವರ ಕೃತಿಯ ಬಗ್ಗೆ ಮಾತಾಡದೆ ಅವರ ವ್ಯಕ್ತಿಗತ ಸಂಗತಿಗಳನ್ನೇ ಹೇಳುತ್ತಿದ್ದರು. ಆದರೂ ಚನ್ನಣ್ಣ ನಗುನಗುತ್ತಲೆ ಕೊನೆಯ ಉಸಿರು ಇರುವ ಶುದ್ಧಮನಸ್ಸಿನ ಬದ್ಧ ಲೇಖಕರಾಗಿ ಉಳಿದರು.

ಥಟ್ ಅಂತ ನೋಡಿದ ಕ್ಷಣ
ಬಯಲಾಟದ ಭೀಮನು
ದೊಡ್ಡಾಟದ ಬಕಾಸುರನು
ನಾಟಕದ ಖಳನಾಯಕನು
ಸ್ವಲ್ಪ ಸಮೀಪ ಹೋದರೆ-
ಗೆಳೆಯರೆ ಮಾವಂದಿರರು
ಮಕ್ಕಳಿಗೆ ಚಂದಮಾಮಾ ಇವನು

ಇನ್ನೂ ಹತ್ತಿರ ಹೋಗಿ ಇಣುಕಿದರೆ-
ಜನಪದ ಲೋಕವೇ ತೆರೆದುಕೊಳ್ಳುತ್ತದೆ
ಕಲ್ಲು ದೇವ-ದೇವತೆಯರಿಗೆ ಮಾತು ಬರುತ್ತದೆ
ಕಳಸ ಹೊತ್ತ ಗುಡಿಗಳು ಏಳುತ್ತವೆ
ನಮ್ಮ-ನಿಮ್ಮ ನಡುವೆ ಇರುವ ಇವನು
ಜೀವಂತ-ಜೀವಸೆಲೆ ಹುಡುಕುತ್ತಿರುವ ಜಲಗಾರನು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...