Homeಮುಖಪುಟರಿಲಾಯನ್ಸ್‌ನಿಂದ MSP ಗಿಂತಲೂ ಅಧಿಕ ಬೆಲೆಗೆ ಭತ್ತ ಕೊಳ್ಳುವಿಕೆ: ವಾಸ್ತವವೇನು?

ರಿಲಾಯನ್ಸ್‌ನಿಂದ MSP ಗಿಂತಲೂ ಅಧಿಕ ಬೆಲೆಗೆ ಭತ್ತ ಕೊಳ್ಳುವಿಕೆ: ವಾಸ್ತವವೇನು?

ಸೋನಾ ಮಸೂರಿ ಭತ್ತಕ್ಕೆ ತೆಲಂಗಾಣ ರೈತರು ಕ್ವಿಂಟಾಲ್‌ಗೆ 2200 ರಿಂದ 2500 ರೂ ಪಡೆಯುತ್ತಿದ್ದಾರೆ.

- Advertisement -
- Advertisement -

ರಾಜ್ಯದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ನಂತರ ಮೊದಲು ಬಾರಿಗೆ ರಾಯಚೂರು ಜಿಲ್ಲೆಯಲ್ಲಿ ರಿಲಾಯನ್ಸ್ ರಿಟೈಲ್ ಲಿಮಿಟೆಡ್ ವತಿಯಿಂದ MSP (ಕನಿಷ್ಟ ಬೆಂಬಲ ಬೆಲೆ) ಗಿಂತಲೂ ಅಧಿಕ ಬೆಲೆಗೆ 1000 ಕ್ವಿಂಟಾಲ್ ಭತ್ತ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ ಸರ್ಕಾರ 1868ರೂ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ ರಿಲಾಯನ್ಸ್ 1950ರೂಗೆ (82 ರೂ ಅಧಿಕ) ಸುಮಾರು 1100 ರೈತರಿಂದ ಭತ್ತ ಕೊಳ್ಳಲು ಮುಂದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆದರೆ ರಿಲಾಯನ್ಸ್‌ನಿಂದ MSP ಗಿಂತಲೂ ಅಧಿಕ ಬೆಲೆಗೆ ಭತ್ತ ಖರೀದಿಯನ್ನು ಸಂಪೂರ್ಣ ಸುಳ್ಳು ಎಂದು ರೈತ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. “ರಿಲಾಯನ್ಸ್‌ನಿಂದ MSP ಗಿಂತಲೂ ಅಧಿಕ ಬೆಲೆಗೆ ಭತ್ತ ಖರೀದಿ ಎಂಬುದು ದೊಡ್ಡ ಪ್ರಹಸನವಾಗಿದೆ. ಎಂಎಸ್‌ಪಿ ಇರುವುದು ಸಾಮಾನ್ಯ ಮತ್ತು ಗ್ರೇಡ್ ಎ ಭತ್ತಕ್ಕಾಗಿ ಮಾತ್ರ. ಸೋನಾ ಮಸೂರಿಗೆ ತೆಲಂಗಾಣ ರೈತರು ಕ್ವಿಂಟಾಲ್‌ಗೆ 2200 ರಿಂದ 2500 ರೂ ಪಡೆಯುತ್ತಿದ್ದಾರೆ. ಬಾಸ್ಮತಿ, ಗೋಬಿಂದಭಾಗ್ ಸೋನಾ ಮಸೂರಿಯಂತಹ ಸೂಪರ್ ಫೈನ್ ವೆರೈಟಿಗಳಿಗೆ ಎಂಎಸ್‌ಪಿ ಅರ್ಥಹೀನ” ಎಂದು ಆಲ್‌ ಇಂಡಿಯಾ ಕಿಸಾನ್ ಸಭಾ ಟ್ವೀಟ್ ಮಾಡಿದೆ.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್‍ ಮಾತನಾಡಿ “ಇದು ರೈತರನ್ನು ದಿಕ್ಕು ತಪ್ಪಿಸುವ ಹುನ್ನಾರವಾಗಿದೆ. ಸೋನಾ ಮಸೂರಿಗಾಗಲಿ ಅಥವಾ ಜ್ಯೋತಿ ಭತ್ತಕ್ಕಾಗಲಿ ಇದುವರೆಗೂ ಕೇಂದ್ರ ಸರ್ಕಾರ MSP ನಿಗಧಿ ಮಾಡಿಲ್ಲ. ಅದಕ್ಕಾಗಿ ನಾವು ಬಹಳ ವರ್ಷಗಳಿಂದ ಒತ್ತಾಯ ಮಾಡುತ್ತಿದ್ದೇವೆ. ಆ ಹಿನ್ನೆಲೆಯಲ್ಲಿ ಇದನ್ನು ಮರೆ ಮಾಚಿ ತಪ್ಪು ಸಂದೇಶಗಳನ್ನು ಕೊಡುತ್ತಿದ್ದಾರೆ. ಇದನ್ನು ರೈತರು ನಂಬಬಾರದು ಮತ್ತು ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಬೇಕು” ಎಂದಿದ್ದಾರೆ.

ಚಿಂತಕರಾದ ಸುರೇಶ್ ಕಂಜರ್ಪಣೆಯವರು ಈ ಕುರಿತು ವಿವರವಾಗಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. “ಇದೊಂದು ಡೋಲು ಹೊಡೆಯುವ ಖದೀಮ ಸುದ್ದಿ ನೋಡಿ! ರಿಲಯನ್ಸ್ ಕರ್ನಾಟಕದ ರೈತರಿಂದ ಎಂಎಸ್ ಪಿಗಿಂತ ಹೆಚ್ಚಿನ ಬೆಲೆಗೆ ರೈತರ ಉತ್ಪಾದಕ ಸಂಘದಿಂದ ನೇರವಾಗಿ ಕೊಳ್ಳಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ವಾಸ್ತವವಾಗಿ ನೋಡುವುದಾದರೆ ರಿಲಾಯನ್ಸ್ ರೈತರಿಂದ ಕೊಳ್ಳುತ್ತಿರುವುದು ಕೇವಲ ನೂರು ಟನ್ ಮಾತ್ರ. ಇನ್ನು ಸೋನಾ ಮುಸ್ಸೋರಿತಳಿ, ಸೂಪರ್ ಫೈನ್ ವೆರೈಟಿ, ಇದನ್ನು ಸರಕಾರ ಕೊಳ್ಳುವುದಿಲ್ಲ! ಮಾಮೂಲಿಯಾಗಿ ಇದಕ್ಕೆ ಎಂಎಸ್ ಪಿಗಿಂತ ಹೆಚ್ಚಿನ ಬೆಲೆ ದೊರಕುತ್ತಿದೆ” ಎಂದಿದ್ದಾರೆ.

ಕರ್ನಾಟಕದ ಭತ್ತದ ಉತ್ಪಾದನೆ 30 ಲಕ್ಷ ಟನ್. ಇದರಲ್ಲಿ ರಾಯಚೂರಿನ ಪಾಲು ಐದು ಲಕ್ಷ ಟನ್. ಅಂದರೆ ಈ ರಿಲಯನ್ಸ್ ಕೊಳ್ಳುತ್ತಿರುವ ಪ್ರಮಾಣ ಒಂದು ಕೂದಲ ತೂಕ!!! ಈ ಪುಟಗೋಸಿ ಪ್ರಮಾಣವನ್ನು ಸಾವಿರ ರೈತರಿಂದ ಕೊಳ್ಳುತ್ತಿದೆ ಅಂದರೆ ತಲಾವಾರು ಎಷ್ಟು ಕ್ವಿಂಟಾಲ್ ಆಯಿತು? ಎಂದು ಅವರು ಪ್ರಶ್ನಿಸಿದ್ದಾರೆ.

ಈ ಚೌಕಿದಾರನ ಕಾಯಿದೆ ವಿರೋದಿಸುವುದಕ್ಕೆ ಕಾರಣ ಇಲ್ಲೇ ಇದೆ. ರೈತರು ಸಾಗಣೆ, ಲೋಡಿಂಗ್ ಅನ್ ಲೋಡಿಂಗ್ ವೆಚ್ಚ ಭರಿಸಬೇಕು. ತೇವಾಂಶ 16%ಕ್ಕಿಂತ ಕಡಿಮೆ ಇದ್ದರೆ ಮಾತ್ರ ಖರೀದಿ. ಉಳಿದ ಸಾವಿರಾರು ಟನ್ ಭತ್ತವನ್ನು ಏನು ಮಾಡಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಿಂಧನೂರು ಎಪಿಎಂಸಿ ವ್ಯವಸ್ಥಾಪಕರನ್ನು ಮಾತನಾಡಿಸಿದಾಗ, “ನಮ್ಮಲ್ಲಿ ಸಾಮಾನ್ಯ ಭತ್ತ ಮತ್ತು ಎ ಗ್ರೇಡ್ ಭತ್ತ ಎಂಬ ಎರಡು ವಿಭಾಗಗಳನ್ನು ಮಾಡುತ್ತೇವೆ. ಸೋನಾ ಮಸೂರಿ ಸಾಮಾನ್ಯ ಭತ್ತದಲ್ಲಿ ಬರುತ್ತದೆ. ಅದಕ್ಕೆ ಕೇಂದ್ರ ಸರ್ಕಾರ 1868ರೂ ನಿಗಧಿ ಮಾಡಿದೆ. ಅದರ ತೇವಾಂಶ 17% ಗಿಂತ ಕಡಿಮೆ ಇರಬೇಕು” ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೃಷಿ ಕಾಯ್ದೆಗಳು ಜಾರಿಯಾದಾಗಿನಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ನಡುವೆ ಅಂಬಾನಿ-ಅದಾನಿಯಂತಹ ಕಾರ್ಪೊರೇಟ್‌ಗಳ ಹಿತಕ್ಕಾಗಿ ಈ ಕಾಯ್ದೆಗಳನ್ನು ತರಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.

(ಈ ಲೇಖನವನ್ನು ಸೋನಾ ಮಸೂರಿ ಭತ್ತಕ್ಕೆ ಬೆಂಬಲ ಬೆಲೆ ಇದೆಯೇ ಇಲ್ಲವೇ ಎಂಬುದರ ಕುರಿತು ರೈತ ಮುಖಂಡರ ನಡುವೆ ಉಂಟಾದ ಗೊಂದಲದಿಂದಾಗಿ ನಂತರ ಪರಿಷ್ಕರಣೆ ಮಾಡಲಾಗಿದೆ)


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ’ಬಾಲಾಕೋಟ್ ದಾಳಿಯಲ್ಲಿ 300 ಜನರ ಸಾವನ್ನು ಪಾಕಿಸ್ತಾನ ಒಪ್ಪಿಕೊಂಡಿದೆ’ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...