Homeಮುಖಪುಟಹೊಸ ಭಾರತೀಯ "ಕ್ರಿಮಿನಲ್" ಕಾನೂನುಗಳ ಒಳಹೊರಗೆ

ಹೊಸ ಭಾರತೀಯ “ಕ್ರಿಮಿನಲ್” ಕಾನೂನುಗಳ ಒಳಹೊರಗೆ

- Advertisement -
- Advertisement -

ದೇಶದ ಕ್ರಿಮಿನಲ್ ನ್ಯಾಯವ್ಯವಸ್ಥೆಗೆ ಪ್ರಸ್ತಾಪಿತ ಬದಲಾವಣೆಗಳು, ಬಾಕಿ ಉಳಿದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವ್ಯಾಖ್ಯಾನ, ಅನ್ವಯ ಮತ್ತು ಪರಿಣಾಮಗಳ ಕುರಿತು ಸಂಕೀರ್ಣವಾದ ಪ್ರಶ್ನೆಗಳನ್ನು ಎತ್ತುತ್ತವೆ. ಇದರ ಆರ್ಥ ಖಂಡಿತವಾಗಿಯೂ ಭಾರತೀಯ ನ್ಯಾಯಾಲಯಗಳಿಗೆ ಇನ್ನಷ್ಟು ಹೊರೆಯೇ ಆಗಬಹುದು.

ಈ ಲೇಖನವನ್ನು ಬರೆಯುತ್ತಿರುವಾಗ ನನಗೆ ಒಬ್ಬರು ನ್ಯಾಯಾಧೀಶರೊಬ್ಬರು ನೆನಪಾಗುತ್ತಿದ್ದಾರೆ. ಅಷ್ಟೇನೂ ಅಪಾಯಕಾರಿಯಲ್ಲದ ಪ್ರಕರಣಗಳಲ್ಲೂ ದೂರಗಾಮಿ ಪರಿಣಾಮ ಬೀರಬಲ್ಲ ನಿರ್ದೇಶನಗಳನ್ನು ನೀಡಿ, ವ್ಯವಸ್ಥೆಯನ್ನು ತಳಮಳಗೊಳಿಸುವ ಅಭ್ಯಾಸವಿದ್ದ ನ್ಯಾಯಾಧೀಶರವರು. ಅವರ ಬಗ್ಗೆ ವಕೀಲರ ಸಂಘದಲ್ಲಿ ಇದ್ದ ಲಘು ಹಾಸ್ಯದ ಟೀಕೆ ಎಂದರೆ ಅವರು ಕೋಲಾ ಒಂದರ ಜಾಹೀರಾತಿನ ಶೀರ್ಷಿಕೆಯೊಂದರಿಂದ ಪ್ರೇರಿತರಾಗಿದ್ದಾರೆ ಎಂಬುದು. ಅದೆಂದರೆ, “ಆಜ್ ಕುಚ್ ತೂಫಾನಿ ಕರ್ತೇ ಹೈಂ” (ಇವತ್ತು ಬಿರುಗಾಳಿ ಎಬ್ಬಿಸುವಂತಹ ಏನನ್ನಾದರೂ ಮಾಡೋಣ). ಅನಾಣ್ಯೀಕರಣ, ವಿಧಿ 370ರ ರದ್ದತಿ ಮುಂತಾದ ಕೆಲವು ಪ್ರಕರಣಗಳ ನಂತರ ನಾವು ಈಗ ನಮ್ಮ ಸರಕಾರದಿಂದ ಇಂತದ್ದನ್ನು ನಿರೀಕ್ಷಿಸುವಂತಾಗಿದೆ.

ಭಾರತೀಯ ನ್ಯಾಯ ಸಂಹಿತೆ 2023 (ಇಂಡಿಯನ್ ಪೀನಲ್ ಕೋಡ್- ಐಪಿಸಿಯ ಬದಲು), ಭಾರತೀಯ ನಾಗರಿಕ್ ಸುರಕ್ಷಾ ಸಂಹಿತಾ 2023 (ಕ್ರಿಮಿನಲ್ ಪ್ರೊಸೀಜರ್ ಕೋಡ್- ಸಿಆರ್‌ಪಿಸಿ ಬದಲು) ಭಾರತೀಯ ಸಾಕ್ಷ್ಯ ಬಿಲ್ 2023 (ಇಂಡಿಯನ್ ಎವಿಡೆನ್ಸ್ ಆಕ್ಟ್ ಬದಲು) ಎಂಬ ಮಸೂದೆಗಳನ್ನು ಭಾರತೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ವಸಾಹತುಶಾಹಿ ಪರಂಪರೆಯ ಹಿಡಿತದಿಂದ ಬಿಡುಗಡೆಗೊಳಿಸುವ ಘೋಷಣೆಯೊಂದಿಗೆ ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಇವು ಅಂಥ ಮೂಲಭೂತ ಬದಲಾವಣೆಯ ಸಂಕೇತವಾಗಿವೆ.

ಇಂಡಿಯನ್ ಪೀನಲ್ ಕೋಡ್ 1860 (ಐಪಿಸಿ), ಕ್ರಿಮಿನಲ್ ಪ್ರೊಸೀಜರ್ ಕೋಡ್ 1973 (ಸಿಆರ್‌ಪಿಸಿ- ಇದು ಸ್ವಾತಂತ್ರ್ಯೋತ್ತರದ ಕಾನೂನು ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ 1872- ಈ ಮೂರೂ ಕಾನೂನುಗಳು ಸಂಪೂರ್ಣವಾಗಿ ಬದಲಾವಣೆಗೆ ಅರ್ಹವಾಗಿರುವಷ್ಟು, ಹೊರಗಿನ ನೈತಿಕತೆಯನ್ನು ಹೊಂದಿದ್ದ ಅಥವಾ ನ್ಯಾಯಶಾಸ್ತ್ರೀಯ ವಿವೇಚನೆಗೆ ಭಾರವಾಗಿದ್ದವೇ ಎಂಬುದು ಪ್ರಶ್ನೆ. ನನ್ನ ಯೋಚನೆ ಪ್ರಕಾರ ಹಾಗಿರಲಿಲ್ಲ. ಬಹಳಷ್ಟು ಅಪರಾಧಗಳಿಗೆ ಸಂಬಂಧಿಸಿದಂತೆ, ಅವುಗಳ ವಿಚಾರಣಾ ವಿಧಾನ, ಶಿಕ್ಷೆ ವಿಧಿಸುವ ಅವಕಾಶ, ಅದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಹೇಳುವ ಅವಕಾಶವಿರುವ ಸಮಗ್ರವಾದ ಕಾಯಿದೆಗಳಾಗಿವೆ. ಇವುಗಳಲ್ಲಿ ಸಾಕ್ಷ್ಯ ಕಾಯಿದೆಯು ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಗಳೆರಡರ ವಿಚಾರಣೆಗಳಿಗೂ ಅನ್ವಯವಾಗುತ್ತದೆ. ಐಪಿಸಿಯ ಕೆಲವು ವಿಧಿಗಳಲ್ಲಿ ಖಂಡಿತವಾಗಿಯೂ ಒಂದು ರೀತಿಯ ಸಾಮಾಜಿಕ ನೈತಿಕತೆಯ ವಾಸನೆ ಹೊಡೆಯುತ್ತದೆ ಮತ್ತು ಇಷ್ಟೆಲ್ಲಾ ದಶಕಗಳ ನಂತರ ಅವು ಅನುಚಿತವಾಗಿವೆ ಎಂಬುದು ನಿಜ. ಉದಾಹರಣೆಗೆ ವ್ಯಭಿಚಾರ, ಅನೈಸರ್ಗಿಕ ಲೈಂಗಿಕ ಅಪರಾಧಗಳು- ಇವುಗಳನ್ನು ಭಾರತದ ಸುಪ್ರೀಂ ಕೋರ್ಟೇ ಕಿತ್ತುಹಾಕಿದೆ. ಈಗಿನ ಹೊಸ ಕಾನೂನಿನಲ್ಲಿ ವಿಧಿ 377 ಮಾಯವಾಗಿರುವಾಗಲೇ ವ್ಯಭಿಚಾರವನ್ನು ಮತ್ತೆ ಪರಿಚಯಿಸಲಾಗಿದೆ. ಈ ವಿಧಿಯನ್ನು ಮತ್ತೊಮ್ಮೆ ಪ್ರಶ್ನೆ ಮಾಡುವುದು ಬಹುತೇಕ ಖಂಡಿತವಾಗಿದೆ.

ಕಿತ್ತುಹಾಕುವುದಲ್ಲ, ಮರುರೂಪಿಸಿರುವುದು

ದೇಶದ್ರೋಹದ ಕಾನೂನನ್ನು ಕಿತ್ತುಹಾಕಲಾಗಿದೆ ಎಂಬ ಅಧಿಕೃತ ಹೇಳಿಕೆಯು ಅಪ್ಯಾಯಮಾನವಾದ ಅಚ್ಚರಿ ಹುಟ್ಟಿಸಿತ್ತು. ಆದರೆ, ಹೊಸ ಕಾನೂನು ಹಾಗೇನನ್ನೂ ಮಾಡುವುದಿಲ್ಲ. ಹೊಸ ಮಸೂದೆಯ ವಿಧಿ 150 ಇನ್ನಷ್ಟು ಕಠಿಣವಾದ ಕರಾಳ ಅಂಶಗಳನ್ನು ಪರಿಚಯಿಸುವುದರ ಜೊತೆಗೆ, ಇನ್ನಷ್ಟು ಕಠಿಣ ಶಿಕ್ಷೆಗಳನ್ನು ಹಾಗೂ ’ಬುಡಮೇಲು ಚಟುವಟಿಕೆ’ಯಂತಹ ಮುಂತಾದ ಹೆಚ್ಚು ಅಸ್ಪಷ್ಟವಾದ ಮತ್ತು ವಿಷಯಾಧಾರಿತ ಸ್ವೇಚ್ಛೆಯ ವ್ಯಾಖ್ಯಾನಗಳಿಗೆ ಆವಕಾಶ ಮಾಡಿಕೊಡುವ ಅಂಶಗಳನ್ನು ಹೊಂದಿದೆ. ಇದು ಒಮ್ಮೆ ಕಾನೂನಾಗಿಬಿಟ್ಟರೆ, ಈ ಒಂದು ವಿಧಿಯೇ ಆರೋಪಿಯ ತಲೆಯ ಮೇಲೆ ಬೆಟ್ಟದಂತೆ ಕೂರಲಿದೆ. ವೈವಾಹಿಕ ಅತ್ಯಾಚಾರದ ಉಲ್ಲೇಖವೇ ಇಲ್ಲಿಲ್ಲ. ಹೊಸ ಪ್ರಕ್ರಿಯಾ ಸಂಹಿತೆಯು ಹತ್ತು ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ಶಿಕ್ಷೆ ವಿಧಿಸಬಹುದಾದಂಥ ಪ್ರಕರಣಗಳಲ್ಲಿ ತೊಂಬತ್ತು ದಿನಗಳ ತನಕ ಪೊಲೀಸ್ ಕಸ್ಟಡಿ ವಿಧಿಸಲು ಅವಕಾಶ ಒದಗಿಸುವುದು ಆತಂಕಕಾರಿಯಾಗಿದೆ. ಇದು ವಿಶೇಷವಾಗಿ ಬಿಡುಗಡೆಯಲ್ಲಿ ಕೊನೆಗೊಳ್ಳುವ ಪ್ರಕರಣಗಳಲ್ಲಿ ಗಂಭೀರವಾದ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುವ ಸಾಧ್ಯತೆ ಇದೆ. ಕೆಲವು ಮರಣದಂಡನೆ ವಿಧಿಸಬಹುದಾದ ಪ್ರಕರಣಗಳಲ್ಲಿ ನಾನು ಸುಪ್ರೀಂಕೋರ್ಟಿನಲ್ಲಿ ಆರೋಪಿಗಳ ಪರ ವಾದಿಸಿರುವುದರಿಂದ ಮರಣದಂಡನೆ ವಿಧಿಸುವುದಕ್ಕೆ ಸಂಬಂಧಿಸಿದ ಕಾನೂನು ಕಳೆದ ಕೆಲವು ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡಿದೆ ಎಂದು ಸಾಕಷ್ಟು ಖಚಿತವಾಗಿ ಹೇಳಬಲ್ಲೆ. ವಿವರವಾದ ಉಪಶಮನ ವರದಿಗಳು, ಆರೋಪಿಯ ಮಾನಸಿಕ ಪರೀಕ್ಷೆ, ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿ ನ್ಯಾಯಬದ್ಧ ವಾದಕ್ಕೆ ಅವಕಾಶ, ಮರಣದಂಡನೆ ವಿಧಿಸುವುದಕ್ಕೆ ಮಾನದಂಡವಾದ ಜಟಿಲವಾದ ’ಅಪರೂಪದಲ್ಲಿ ಅಪರೂಪ’ ಪ್ರಕರಣಗಳನ್ನು ನಿರ್ಧರಿಸುವುದನ್ನು ನ್ಯಾಯಾಧೀಶರ ವಿವೇಚನೆಗೆ ಬಿಡುವುದಕ್ಕೆ ಕಡಿವಾಣ- ಇತ್ಯಾದಿಯಾಗಿ ಸುಪ್ರೀಂಕೋರ್ಟಿನ ಈಚೆಗಿನ ತೀರ್ಪುಗಳು ಇದಕ್ಕೆ ಕಾರಣ.

ಇದನ್ನೂ ಓದಿ: ಬ್ರಿಟಿಷರ ಕರಾಳ ದೇಶದ್ರೋಹ ಕಾನೂನಿಗೆ ಮನ್ನಣೆ; ಇತಿಹಾಸದ ಕಸದಬುಟ್ಟಿಗೆ ಅರ್ಹವಾದ ಕಾನೂನು ಆಯೋಗದ ವರದಿ

ಮರಣದಂಡನೆಯನ್ನೇ ರದ್ದು ಮಾಡುವುದು ಒತ್ತಟ್ಟಿಗಿರಲಿ; ಮರಣದಂಡನೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಹೊಸ ನ್ಯಾಯಶಾಸ್ತ್ರೀಯ ವಿವೇಚನೆಗಳಲ್ಲಿ ಬಹಳಷ್ಟನ್ನು ಈ ಹೊಸ ಕಾನೂನು ವಿವರವಾಗಿ ಅಧಿಕೃತಗೊಳಿಸಬಹುದು ಎಂದು ಯಾರಾದರೂ ನಿರೀಕ್ಷಿಸಿದ್ದಿರಬಹುದಿತ್ತು ಮತ್ತು ಇದು ನಾಗರಿಕ ಸಮಾಜದ ಕೆಲವು ಜನವಿಭಾಗಗಳ ಬಹುಕಾಲದ ಬೇಡಿಕೆಯೂ ಆಗಿದೆ ಕೂಡಾ. ಆದರೆ ಹೊಸ ಪ್ರಕ್ರಿಯಾ ಸಂಹಿತೆಯು ಮರಣದಂಡನೆಯನ್ನು ದೃಢಪಡಿಸುವ ಮೊದಲು ಇನ್ನಷ್ಟು ತನಿಖೆಗೆ ಆದೇಶಿಸುವ ವಿವೇಚನೆಯನ್ನು ಕೇವಲ ಹೈಕೋರ್ಟುಗಳ ವಿವೇಚನೆಗೆ ಬಿಟ್ಟಿದೆ ಅಷ್ಟೇ.

ಸ್ವಾಗತಾರ್ಹ ವಿಧಿಗಳು

ಈ ಮಸೂದೆಗಳಲ್ಲಿ ಸ್ವಾಗತಾರ್ಹ ಸೇರ್ಪಡೆಗಳು ಎಂದರೆ, ವಿಧಿಸಬಹುದಾದ ಶಿಕ್ಷೆಯಲ್ಲಿ ಮೂರನೇ ಒಂದು ಭಾಗದಷ್ಟು ಕಾಲ ಜೈಲಿನಲ್ಲಿ ಕಳೆದಿರುವ ಮೊದಲ ಬಾರಿಯ ಅಪರಾಧಿಗಳಿಗೆ ಸ್ವಯಂಚಾಲಿತವಾಗಿ ಜಾಮೀನು ನೀಡುವುದರ (ಪ್ರಸ್ತುತ ಇದು ಪೂರ್ಣಾವಧಿಯಲ್ಲಿ ಅರ್ಧಭಾಗವನ್ನು ಜೈಲಿನಲ್ಲಿ ಕಳೆದವರಿಗೆ ಲಭ್ಯವಿದೆ), ಅತ್ಯಾಚಾರದ ಸಂತ್ರಸ್ತರು, ಮಾನಸಿಕ ಆರೋಗ್ಯದ ಸಮಸ್ಯೆ ಇರುವವರ ಹೇಳಿಕೆಗಳನ್ನು ಅವರ ಮನೆಯಲ್ಲಿಯೇ ಹೆತ್ತವರು/ ಪೋಷಕರು/ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು/ ವಿವರಣೆಕಾರರ ಸಮ್ಮುಖದಲ್ಲಿ ವಿಡಿಯೋ ರೆಕಾರ್ಡಿಂಗ್ ಮೂಲಕ ದಾಖಲಿಸುವುದು, ಆರೋಪಗಳನ್ನು ರೂಪಿಸುವುದಕ್ಕೆ ನಿಗದಿತ ಅರವತ್ತು ದಿನಗಳ ಅವಧಿ ನಿಗದಿ (ಆರೋಪಪಟ್ಟಿ ಸಲ್ಲಿಸುವ ಅವಧಿಯ ವಿಸ್ತರಣೆಯಿಂದ ಇದು ಪ್ರಯೋಜನವಿಲ್ಲದಂತೆ ಆಗಬಹುದು ಮತ್ತು ಆರೋಪಿಯ ಜಾಮೀನಿನ ಸಾಧ್ಯತೆಯನ್ನು ಇದು ವಿಳಂಬಗೊಳಿಸುತ್ತದೆ), ವಿವಿಧ ಗಂಭೀರ ಪ್ರಕರಣಗಳ ಅಪರಾಧ ಸ್ಥಳಗಳಿಗೆ ವಿಧಿವಿಜ್ಞಾನ (ಫೊರೆನ್ಸಿಕ್) ತಜ್ಞರ ಭೇಟಿ ಮತ್ತು ವಿಡಿಯೋ ದಾಖಲಾತಿಗೆ ಆವಕಾಶ ಮುಂತಾದವುಗಳು. ವಾದಗಳು ಮುಗಿದನಂತರ ತೀರ್ಪು ನೀಡಲು ಮೂವತ್ತು ದಿನಗಳ ಕಾಲಮಿತಿಯು (ಇದನ್ನು ಅರವತ್ತು ದಿನಗಳಿಗೆ ವಿಸ್ತರಿಸಲು ಸಾಧ್ಯವಿದೆ) ವಿಚಾರಣಾ ನ್ಯಾಯಾಧೀಶರ ಮೇಲೆ ಅನಗತ್ಯ ಒತ್ತಡ ಹೇರಬಹುದು. ಇಂಥ ಕಾಲಮಿತಿಗಳು ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಕಾರಣವಾಗಬಹುದಾದರೂ, ಅವಸರದ ತೀರ್ಪುಗಳು, ಅದರಲ್ಲೂ ಹಲವಾರು ಸಾಕ್ಷಿಗಳು ಇರುವ ಸಂಕೀರ್ಣ ಪ್ರಕರಣಗಳಲ್ಲಿ ನ್ಯಾಯದಾನದ ಹೆಚ್ಚು ವಿಶಾಲವಾದ ಪ್ರಕ್ರಿಯೆಗೆ ಹಾನಿಯುಂಟುಮಾಡಬಹುದು. ಆರೋಪಪಟ್ಟಿ ಸಲ್ಲಿಕೆ ಆದ ನಂತರ ಗೈರುಹಾಜರು ಅಥವಾ ನಾಪತ್ತೆಯಾದ ಆರೋಪಿಗಳನ್ನು ಅವರ ಗೈರುಹಾಜರಿಯಲ್ಲೇ ವಿಚಾರಣೆಗೆ ಒಳಪಡಿಸಿ ಶಿಕ್ಷೆ ವಿಧಿಸಬಹುದಾದ ಅವಕಾಶ ಕುತೂಹಲಕಾರಿಯಾಗಿದೆ. ಈತನಕ ಇಂಥ ಆರೋಪಿಗಳನ್ನು ’ಘೋಷಿತ ಅಪರಾಧಿಗಳು’ ಎಂದು ಪರಿಗಣಿಸಲಾಗುತ್ತಿತ್ತು. ಇಂಥ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವುದು ಇನ್ನು ಮುಂದೆ ಗ್ರೀಕರ ಯುದ್ಧನೃತ್ಯದಂತೆ ಆಗಲಿದೆ. ಗುಂಪು ಹತ್ಯೆಗಳಿಗೆ ಮರಣದಂಡನೆ ವಿಧಿಸುವ ಅವಕಾಶವು ನಮ್ಮ ಈಗಿನ ಸಾಮಾಜಿಕ ಸಂದರ್ಭದಲ್ಲಿ ದೂರಗಾಮಿ ಪರಿಣಾಮ ಬೀರಬಹುದು. ಭವಿಷ್ಯದಲ್ಲಿ ಪೊಲೀಸ್ ಮತ್ತು ತನಿಖಾ ಸಂಸ್ಥೆಗಳು ಈ ಅವಕಾಶಗಳನ್ನು ನಿಷ್ಪಕ್ಷಪಾತದಿಂದ ಸಮಾನವಾಗಿ ಅನ್ವಯಿಸುವವೇ ಎಂಬುದು ಜಿಜ್ಞಾಸೆಯ ವಿಷಯವಾಗಿದೆ.

ಈ ಮೂರು ಕಾನೂನುಗಳು ಮತ್ತು ಮನಿ ಲಾಂಡರಿಂಗ್ ಆಕ್ಟ್ 2002, ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯಿದೆ, 1967 (ಯುಎಪಿಎ), ಲೈಂಗಿಕ ಆಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012 (ಪೋಕ್ಸೋ), ಮಾದಕ ವಸ್ತುಗಳು ಮತ್ತು ಮಾನಸಿಕ ಪರಿಣಾಮಬೀರುವ ವಸ್ತುಗಳ (Psychotropic Substances) ಕಾಯಿದೆ, 1985 ಇಂತಾ ವಿಶೇಷ ಕಾಯಿದೆಗಳ ಮೇಲೆ ಭಾರತದ ಕ್ರಿಮಿನಲ್ ನ್ಯಾಯವ್ಯವಸ್ಥೆಯು ನಿಂತಿರುತ್ತವೆ ಎಂಬುದನ್ನು ಮರೆಯಬಾರದು. ಇವು ಮತ್ತು ಇಂಥ ಕೆಲವು ಕಾಯಿದೆಗಳು ಅಪರಾಧಗಳು, ಸಾಕ್ಷ್ಯ ಒದಗಿಸುವ ಹೊಣೆಗಾರಿಕೆ ಮತ್ತು ವಿಚಾರಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬದಲಾಯಿಸಲಾರದಂಥ ನಿಬಂಧನೆಗಳನ್ನು ಹೊಂದಿವೆ. ಅದು ಇನ್ನೂ ಬದಲಾಗದೇ ಉಳಿದಿದೆ. ಇವುಗಳಲ್ಲಿ ಹೆಚ್ಚಿನವು ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳ ಅವಕಾಶವನ್ನೂ ಒದಗಿಸುತ್ತವೆ. ಸುಪ್ರೀಂಕೋರ್ಟಿನ ಆದೇಶಕ್ಕೆ ಅನುಗುಣವಾಗಿ ಶಾಸಕರು ಮತ್ತು ಸಂಸತ್ ಸದಸ್ಯರ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಅವಕಾಶ ಒದಗಿಸಲಾಗಿದೆ. ಇದನ್ನು ಕರಡು ಮಸೂದೆಯಲ್ಲಿ ಕ್ರೋಢೀಕರಿಸುವುದು ಸ್ವಾಗತಾರ್ಹವಾಗಿರುತ್ತಿತ್ತು.

ನಿರೀಕ್ಷಿತ ತಿದ್ದುಪಡಿಗಳು

2018ರ ತನಕ ಐಪಿಸಿಯನ್ನು78 ಸಲ, ಸಿಆರ್‌ಪಿಸಿಯನ್ನು 19 ಸಲ ಮತ್ತು ಸಾಕ್ಷ್ಯ ಕಾಯಿದೆಯನ್ನು 30 ಸಲ ತಿದ್ದುಪಡಿ ಮಾಡಲಾಗಿದೆ. ನ್ಯಾಯಮೂರ್ತಿಗಳಾದ ಮಳಿಮಠ್ ಮತ್ತು ವರ್ಮಾ ಸಮಿತಿಗಳ ಶಿಫಾರಸ್ಸುಗಳ ಹಿನ್ನೆಲೆಯಲ್ಲಿ ಅಪ್ರಾಪ್ತ ವಯಸ್ಕರು, ಮಹಿಳೆಯರು ಮತ್ತು ಕಿರುಕುಳಕ್ಕೆ ಒಳಗಾದ ಖೈದಿಗಳ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಹಲವಾರು ತಿದ್ದುಪಡಿಗಳನ್ನು ತರಲಾಗಿದೆ. ದಿವಾಳಿ ಕಾಯಿದೆ 2016 ಸಂಪೂರ್ಣ ಬದಲಾವಣೆಯ ಒಂದು ಉದಾಹರಣೆಯಾಗಿದ್ದು, ಈಗಾಗಲೇ ಆರು ತಿದ್ದುಪಡಿಗಳನ್ನು ಕಂಡಿದೆ. ಸಂಸದೀಯ ಸಮಿತಿಯು ಒಮ್ಮೆ ಈ ಮಸೂದೆಗಳನ್ನು ಅಂಗೀಕರಿಸಿದ ನಂತರ ಅವುಗಳಿಗೆ ಸಂಬಂಧಿಸಿದಂತೆಯೂ ಇದನ್ನೇ ನಿರೀಕ್ಷಿಸಬಹುದು.

ತಿದ್ದುಪಡಿಗಳು, ಅದಕ್ಕಿಂತಲೂ ಹೆಚ್ಚಾಗಿ ಹೊಸ ಕಾಯಿದೆಗಳು ಅವುಗಳ ಜೊತೆಗೆ, ಮುಖ್ಯವಾಗಿ ಬಾಕಿ ಇರುವ ಪ್ರಕರಣಗಳ ಮೇಲೆ ಅವುಗಳ ಪರಿಣಾಮದ ಕುರಿತಂತೆ ಹಲವಾರು ಸಂಕೀರ್ಣ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸಾಮಾನ್ಯ ನಿಯಮವೆಂದರೆ ಪ್ರತಿಕ್ರಿಯಾತ್ಮಕ ಬದಲಾವಣೆಗಳು ಹಿಂದಿನ ಉದಾಹರಣೆಗಳನ್ನು ಅವಲಂಬಿಸಿದ್ದು, ಸ್ಪಷ್ಟವಾಗಿ ಹೇಳದ ಹೊರತು ಬಹುತೇಕ ಉಳಿದ ಬದಲಾವಣೆಗಳು ನಿರೀಕ್ಷಿತವಾಗಿರುತ್ತವೆ. ಇದಕ್ಕೆ ಹೆಚ್ಚುವರಿಯಾಗಿ, ಅಪರಾಧ ನಡೆದ ಹೊತ್ತಿನಲ್ಲಿ ಅದು ಕಾನೂನುಪ್ರಕಾರ ಆಪರಾಧವಾಗಿರದೇ ಇದ್ದಲ್ಲಿ ಯಾವುದೇ ವ್ಯಕ್ತಿಗೆ ಶಿಕ್ಷೆ ವಿಧಿಸುವಂತಿಲ್ಲ ಅಥವಾ ಆಗಿನ ಕಾನೂನಿನಲ್ಲಿ ಇರುವುದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸುವಂತಿಲ್ಲ ಎಂಬ ಸಂವಿಧಾನದ ವಿಧಿ 20 ಕೂಡಾ ಸೇರುತ್ತದೆ. ಬಾಕಿ ಇರುವ ಕಲಾಪಗಳು ಮತ್ತು ವಿಚಾರಣೆಗಳಿಗೆ ಈ ಮೂರು ಮಸೂದೆಗಳ ಅನ್ವಯವನ್ನು ಹೊರತುಪಡಿಸಲಾಗಿದೆಯಾದರೂ, ಬೇರೆಬೇರೆ ಪರಿಸ್ಥಿತಿಗಳಲ್ಲಿ ಈ ಕಾನೂನುಗಳು ಸಾಕಷ್ಟು ಬೇರೆಯಾಗಿ ಅನ್ವಯವಾಗುತ್ತವೆ ಎಂಬ ಕುರಿತು ನ್ಯಾಯಾಲಯಗಳಲ್ಲಿ ಇವುಗಳ ವ್ಯಾಖ್ಯಾನಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಪ್ರಶ್ನೆಗಳು ಏಳಬಹುದು. ಇದರ ಒಟ್ಟು ಪರಿಣಾಮವೆಂದರೆ, ಪ್ರಕರಣಗಳ ವಾಸ್ತವಿಕ ವಿಚಾರಣೆಗಳು ಇನ್ನಷ್ಟು ವಿಳಂಬವಾಗಿ ಮುಖ್ಯವಾಗಿ ಆರೋಪಿಗಳು ಇನ್ನೂ ಕಸ್ಟಡಿಯಲ್ಲಿ ಇರುವ ಸಂದರ್ಭದಲ್ಲಿ ವಾದಿ ಮತ್ತು ಪ್ರತಿವಾದಿಗಳಿಬ್ಬರ ಹತಾಶೆಗೆ ಕಾರಣವಾಗಬಹುದು. ಮೇಲಾಗಿ ಹಲವಾರು ಹೊಸ ವಿಧಿಗಳನ್ನು ಅವು ಮೂಲಭೂತ ಹಕ್ಕುಗಳ ಮೇಲೆ ಬೀರುವ ಪರಿಣಾಮಗಳ ಆಧಾರದಲ್ಲಿ ವಿಧಿ 226 ಮತ್ತು 32ರ ಅನ್ವಯ ಪ್ರಶ್ನಿಸುವ ಅರ್ಜಿಗಳನ್ನು ನಿರೀಕ್ಷಿಸಬಹುದು. ಇಲ್ಲಿ ಕಾರ್ಯಾಂಗವನ್ನು ಸರಿದೂಗಿಸಿ ಸಂತ್ರಸ್ತರು ಮತ್ತು ಆರೋಪಿಗಳಿಬ್ಬರ ಹಕ್ಕುಗಳನ್ನು ಒಂದೇ ರೀತಿಯಲ್ಲಿ ರಕ್ಷಿಸುವ ಜವಾಬ್ದಾರಿ ನ್ಯಾಯಾಂಗದ ಕಡೆಗೆ ಸರಿಯುತ್ತದೆ.

ಈ ಕಾನೂನುಗಳ ಶೀರ್ಷಿಕೆಗಳನ್ನು ಹಿಂದಿ/ ಸಂಸ್ಕೃತದಲ್ಲಿ ಇಟ್ಟಿರುವ ಕುರಿತು ಹೇಳಲೇಬೇಕು. ಉಪಶೀರ್ಷಿಕೆಗಳು ಇನ್ನೂ ಇಂಗ್ಲಿಷಿನಲ್ಲಿಯೆ ಇರುವಾಗ ಇದು ಕೇವಲ ಸಾಂಕೇತಿಕವಾದ ಮೇಲ್ಮೈಯ ಅಲಂಕಾರದಂತೆ ಕಾಣುತ್ತದೆ. ಮಧುರೆ ಅಥವಾ ಮೇಘಾಲಯದಲ್ಲಿ ಈ ಕಾನೂನುಗಳನ್ನು ಒಬ್ಬರು ಮ್ಯಾಜಿಸ್ಟ್ರೇಟರ ಮುಂದೆ ಹೇಗೆ ಉಲ್ಲೇಖಿಸಲಾಗುತ್ತದೆ ಎಂದು ನಾನು ಆಚ್ಚರಿಪಡುತ್ತೇನೆ. ಕಾನೂನುಗಳು ಮತ್ತು ಕಾನೂನು ಬರಹಗಳು ಸಾಮಾನ್ಯ ವಾದಿ, ಪ್ರತಿವಾದಿಗಳಿಗೆ ಅರ್ಥವಾಗುವಂತೆ ಸರಳವಾಗಿರಬೇಕು ಎಂಬ ಸಂವಾದವು ಸದ್ಯಕ್ಕೆ ಕಾನೂನು ಪ್ರಪಂಚದಲ್ಲಿ ನಡೆಯುತ್ತಿದೆ. ಇಲ್ಲಿ ಮೊದಲಿಗೆ ಶೀರ್ಷಿಕೆಯನ್ನೇ ಅರ್ಥಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ಭಾರತೀಯ ಸಂವಿಧಾನದ ವಿಧಿ 1 “ಇಂಡಿಯಾ ದಟ್ ಇಸ್ ಭಾರತ್” ಎಂದೇ ಆರಂಭವಾಗುತ್ತದೆ. ಈ ಕರಡು ಮಸೂದೆಯನ್ನು ಬರೆದವರು ಯಾವುದೇ ಹಿಂಜರಿಕೆ ಇಲ್ಲದೇ “ಭಾರತೀಯ” ಎಂದು ಉಲ್ಲೇಖಿಸಿದ್ದಾರೆ. ಕಾನೂನುಗಳನ್ನು ಇಂಡಿಯನೈಸ್ ಅಥವಾ ಭಾರತೀಕರಣಗೊಳಿಸಲು ಕೇವಲ ಅವುಗಳಿಗೆ ಹಿಂದಿ ಮತ್ತು ಸಂಸ್ಕೃತದ ಹೆಸರಿಡುವುದಕ್ಕಿಂತ ಹೆಚ್ಚಿನದ್ದು ಬೇಕಾಗುತ್ತದೆ.

ಆದಿತ್ಯ ಸೋಂಧಿ
ಸುಪ್ರೀಂಕೋರ್ಟಿನ ಹಿರಿಯ ವಕೀಲ. (ಸಂಶೋಧನಾ ನೆರವು: ವಕೀಲರಾದ ಮೇಘನಾ ಟಿ.ಎಂ. ಮತ್ತು ನವಮಿ ಕೃಷ್ಣಮೂರ್ತಿ)

ಕನ್ನಡಕ್ಕೆ: ನಿಖಿಲ್ ಕೋಲ್ಪೆ
(ಈ ಲೇಖನ ಮೊದಲು ಇಂಗ್ಲಿಷ್‌ನಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...