ದೇಶದ ರಾಜಧಾನಿ ದೆಹಲಿಯಿಂದ ಕೇವಲ 200 ಕಿ.ಮೀ ದೂರದ ಊರಾದ ಹಾಥ್ರಸ್ ‌ನಲ್ಲಿ ಕಾಲ ಸರಿದೇ ಇಲ್ಲ ಎನಿಸುತ್ತದೆ. ದೆಹಲಿಯ ಗದ್ದುಗೆಯಲ್ಲಿ ನಡೆಯುವ ಯಾವ ಪ್ರಗತಿಪರ ಕಾಯ್ದೆ-ಕಾನೂನುಗಳು, ಯೋಜನೆಗಳು, ಅವುಗಳ ಬಗ್ಗೆ ಚರ್ಚೆಗಳು ಮತ್ತದರ ಲಾಭಗಳು ಯಾವುವೂ ಅಲ್ಲಿಗೆ ಮುಟ್ಟುವುದೇ ಇಲ್ಲ. ಅಲ್ಲಿ ಮೇಲ್ಜಾತಿಯ ಠಾಕೂರ್‌ಗಳು ಮಾಡಿದ್ದೇ ಕಾನೂನು, ಅದನ್ನು ತೆಪ್ಪಗೆ ಪಾಲಿಸುವುದಷ್ಟೇ ಅಧಿಕಾರಿಗಳ ಕೆಲಸ. ಇದೆಲ್ಲಾ ಕೇವಲ ಬಿಜೆಪಿ ಬಂದಮೇಲೆ ಶುರುವಾಗಿದೆ ಎಂದೇನೂ ಅಲ್ಲ, ಆದರೆ ಬಿಜೆಪಿಯ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿ ಬಂದಮೇಲೆ ಇಂಥ ಕೆಲಸಗಳಿಗೆ ಸರಕಾರಿ ಶ್ರೀರಕ್ಷೆ ಹಾಗೂ ಅಭಯಹಸ್ತ ದೊರೆತಿದ್ದಂತೂ ನಿಜ.

ಜಾತಿವ್ಯವಸ್ಥೆಯ ಅನಿಷ್ಟಗಳು, ದಲಿತರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು, ಮೂಢನಂಬಿಕೆ, ಕಂದಾಚಾರಗಳೆಲ್ಲ ಸೇರಿ ಉತ್ತರ ಪ್ರದೇಶ ಹಾಗೂ ಅನೇಕ ಉತ್ತರ ಭಾರತದ ಎಷ್ಟೊ ರಾಜ್ಯಗಳು ಮಾನವಹಕ್ಕುಗಳ ಗಣತಿಯಲ್ಲಿ ಬಹಳ ಹಿಂದೆ ಬೀಳುತ್ತವೆ.

ಹಾಥ್ರಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಯತ್ನ ದೇಶದ ಜನರ ಎದುರು ಬಂದಿದ್ದು ಘಟನೆ ನಡೆದ 2 ವಾರಗಳ ನಂತರ! ಅದೂ ಕೂಡ ಎಷ್ಟೋ ಜನರ ನಿರಂತರ ಪ್ರಯತ್ನಗಳ ನಂತರ. ದೇಶದ ಅನಿಷ್ಟ ಜಾತಿ ವ್ಯವಸ್ಥೆಯ ಅರಿವೇ ಇಲ್ಲದೆ ಒಳ್ಳೆಯ ಶಾಲೆಗಳಲ್ಲಿ ಓದಿ ಜೀವನದಲ್ಲಿ ಮೇಲೆ ಬಂದ ಕೆಲವರಿಗೆ ದೆಹಲಿಯ “ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ” ಮತ್ತು ಹಾಥ್ರಸ್‌ನ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ನಡುವೆ ಇರುವ ವ್ಯತ್ಯಾಸಗಳೂ ಕಾಣುವುದಿಲ್ಲ. ಹಾಗೆ ಕಾಣದೇ ಇರುವಂತೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಟಿಆರ್‌ಪಿ ಜರ್ನಲಿಸ್ಟ್‌ಗಳು ಯಶಸ್ವಿಯಾಗಿ ಮಾಡುತ್ತಾರೆ.

ಘಟನೆಯ ವಿವರಗಳು

ಸೆಪ್ಟೆಂಬರ್ 14ನೇ ತಾರೀಕು ಹಾಥ್ರಸ್ ಜಿಲ್ಲೆಯ ಹಳ್ಳಿಯೊಂದರಲ್ಲಿ ತಾಯಿಯ ಜೊತೆಗೆ ಹೊಲದಲ್ಲಿ ಹುಲ್ಲು ಕೀಳಲು ಹೋಗಿದ್ದ ದಲಿತ ಯುವತಿಯನ್ನು ಅಲ್ಲಿಂದಲೇ ಎಳೆದೊಯ್ದು ಠಾಕೂರ್ ಎಂಬ ಮೇಲ್ಜಾತಿಗೆ ಸೇರಿದ 4 ಯುವಕರಾದ ಸಂದೀಪ್, ಲವಕುಶ್, ರಾಮು ಹಾಗೂ ರವಿ, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅವಳನ್ನು ಅರೆಜೀವಗೊಳಿಸಿ ಅಲ್ಲಿಂದ ಪರಾರಿಯಾಗಿದ್ದರು. ಮಗಳನ್ನು ಅಂಥ ಸ್ಥಿತಿಯಲ್ಲಿ ಕಂಡ ತಾಯಿ ಕೂಡಲೇ ತನ್ನ ಮಗ ಹಾಗೂ ಇತರರ ಸಹಾಯದಿಂದ ಹತ್ತಿರದ ‘ಚಾಂದಪಾ’ ಪೊಲೀಸ್ ಠಾಣೆಗೆ ಕರೆದೊಯ್ದು ಅತ್ಯಾಚಾರದ ದೂರು ದಾಖಲಿಸಿ ಕೂಡಲೇ ಆಸ್ಪತ್ರೆಗೆ ಮಗಳನ್ನು ದಾಖಲಿಸಲು ಬೇಡಿಕೊಂಡರೂ ಪೊಲೀಸರು ಮಾತ್ರ ದೂರು ದಾಖಲಿಸಲಿಲ್ಲ. ಆಂಬ್ಯುಲೆನ್ಸ್ನ್ನೂ ಕರೆಸಲಿಲ್ಲ. ಠಾಣೆಯ ಎದುರಿಗೆ ಇರುವ ಸಿಮೆಂಟ್ ನೆಲದ ಮೇಲೆ ಯುವತಿಯನ್ನು ಮಲಗಿಸಲಾಗಿತ್ತು. ಕಾಮುಕರು ಅವಳದೇ ದುಪಟ್ಟಾದಿಂದ ಕುತ್ತಿಗೆಗೆ ಬಿಗಿದು ಎಳೆದಾಡಿದ್ದರಿಂದ ನಾಲಿಗೆ ಹೊರಬಂದು ದೊಡ್ಡದಾಗಿ ಗಾಯವಾಗಿತ್ತು. ಪೊಲೀಸರು ನಿರ್ಲಕ್ಷö್ಯದಿಂದ ಅವಳ ಜೊತೆ ಮಾತಾಡುತ್ತಿರುವ ವಿಡಿಯೋ ರೆಕಾರ್ಡಿಂಗ್ ಲಭ್ಯವಿದೆ. ಅಲ್ಲಿಂದ ಯುವತಿಯನ್ನು ಅಲಿಘರ್‌ನ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಘಟನೆಯ 11ನೇ ದಿನ ಅವಳ ದೇಹದಿಂದ ಸ್ಯಾಂಪಲ್‌ನ್ನು ಸಂಗ್ರಹಿಸಿ ಫೊರೆನ್ಸಿಕ್ ಲ್ಯಾಬ್‌ಗೆ ಕಳಿಸಲಾಯಿತು. 2 ವಾರಗಳ ನಂತರ ಯುವತಿಯಲ್ಲಿ ಯಾವುದೇ ಸುಧಾರಣೆ ಕಾಣದಿದ್ದಾಗ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಎಲ್ಲ ಅಮಾನವೀಯ ಘಟನೆಗಳನ್ನು ಗೆಲ್ಲದ ಯುವತಿ 29ನೇ ಸೆಪ್ಟೆಂಬರ್‌ಗೆ ಕೊನೆಯುಸಿರೆಳೆದಳು.

ಯುವತಿ ಸಾಯುವವರೆಗೆ ನಡೆದದ್ದು ಒಂದು ಕತೆಯಾದರೆ ನಂತರ ನಡೆದದ್ದು ಮಾತ್ರ ಪ್ರಜಾಪ್ರಭುತ್ವದಲ್ಲಿ ಇನ್ನೂ ಸ್ವಲ್ಪ ನಂಬಿಕೆ ಉಳಿಸಿಕೊಂಡವರ ಪಾಲಿಗೆ ಆಘಾತಕಾರಿ ಬೆಳವಣಿಗೆ. ಯುವತಿಯ ಸಾವಿನ ಸುದ್ದಿಯಿಂದ ಹಾಥ್ರಸ್‌ಗೆ ಬಂದಿದ್ದ ಎಲ್ಲಾ ಮೀಡಿಯಾದ ಕಣ್ಣು ತಪ್ಪಿಸಿ, ಹುಡುಗಿಯ ಮನೆಯವರನ್ನು ಕೂಡಿಹಾಕಿ ಅವರ ಮೊಬೈಲ್‌ಗಳನ್ನು ಕಿತ್ತುಕೊಂಡ ಪೊಲೀಸರು ಮಧ್ಯರಾತ್ರಿ 2.30ರ ಸುಮಾರಿಗೆ ಎಲ್ಲರ ಕಣ್ಣು ತಪ್ಪಿಸಿ ಪೆಟ್ರೋಲ್ ಹಾಗೂ ಕೆರೊಸಿನ್ ಬಳಸಿ ಶವವನ್ನು ಸುಟ್ಟುಹಾಕಿದರು. ಮಗಳಿಗೆ ಅಂತಿಮ ವಿಧಿಗಳನ್ನಾದರೂ ಮಾಡುತ್ತೇವೆ ಎಂದು ಬೇಡಿಕೊಂಡ ಕುಟುಂಬದ ಸದಸ್ಯರನ್ನು ದೂರ ಇಟ್ಟು ಶವವನ್ನು ಸುಟ್ಟು ಹಾಕಲಾಯಿತು. ಪೊಲೀಸರ ದುರಾದೃಷ್ಟಕ್ಕೆ ತನುಶ್ರಿ ಪಾಂಡೆ ಎಂಬ ಪತ್ರಕರ್ತೆ ಮಧ್ಯರಾತ್ರಿಯಲ್ಲಿ ಇವರ ಎಲ್ಲ ಕುಕರ್ಮಗಳನ್ನು ರೆಕಾರ್ಡ್ ಮಾಡಿಕೊಂಡು ದಿಟ್ಟತನದಿಂದ ಪೊಲೀಸರನ್ನು ಪ್ರಶ್ನಿಸಿದಳು. ಇಡೀ ದೇಶ ಉತ್ತರಪ್ರದೇಶದ ಪೊಲೀಸರ ಕಾರ್ಯ ಹಾಗೂ ಸರಕಾರದ ಧೋರಣೆಯನ್ನು ಖಂಡಿಸುತ್ತಿರಬೇಕಾದರೆ ಅಲ್ಲಿಯ ಎಡಿಜಿಪಿ ಪ್ರಶಾಂತ್‌ಕುಮಾರ್ ಪತ್ರಿಕಾ ಹೇಳಿಕೆ ಕೊಟ್ಟು ಯುವತಿಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದದ್ದಲ್ಲದೆ ಆಕೆಯ ದೇಹದಲ್ಲಿ ಯಾವುದೇ ವೀರ್ಯ ಪತ್ತೆಯಾಗಿಲ್ಲ ಎಂದು ಹೇಳಿದರು. ಅದೇ ಸಮಯದಲ್ಲಿ ಹಾಥ್ರಸ್‌ನ ಜಿಲ್ಲಾ ಮ್ಯಾಜಿಸ್ಟ್ರಟ್ ಯುವತಿಯ ಕುಟುಂಬದವರನ್ನು ಬೆದರಿಸುತ್ತಿರುವ ವಿಡಿಯೋ ಕೂಡ ಹೊರಬಂದಿತ್ತು. ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೊರಟ ಕಾಂಗ್ರೆಸ್‌ನ ರಾಹುಲ್‌ಗಾಂಧಿ, ಪ್ರಿಯಾಂಕಾಗಾಂಧಿ ಹಾಗೂ ಟಿಎಂಸಿ ಪಕ್ಷದ ಡೆರೆಕ್ ಓಬ್ರಿಯನ್ ಅವರನ್ನು ದಾರಿಯಲ್ಲಿ ತಡೆದ ಉತ್ತರಪ್ರದೇಶ ಪೊಲೀಸರು ಅವರೆಲ್ಲರ ಮೇಲೆ ದೈಹಿಕ ಹಲ್ಲೆ ಕೂಡ ಮಾಡಿದರು.

ಇದೆಲ್ಲ ನಡೆದದ್ದು ಸಂತನೆಂದು ಹೇಳಿಕೊಂಡು ಆಡಳಿತ ನಡೆಸುತ್ತಿರುವ ವ್ಯಕ್ತಿಯ ರಾಜ್ಯದಲ್ಲಿ. ಇಷ್ಟೆಲ್ಲ ಆದರೂ ಈ ಯೋಗಿ ಘಟನೆಯ ಬಗ್ಗೆ ಬಾಯಿ ಬಿಟ್ಟಿಲ್ಲ. ಇವರ ಪೋಷಕರಾದ ಮಹಾಯೋಗಿಗೆ ಟ್ರಂಪ್ ದಂಪತಿಗೆ ಕೋವಿಡ್‌ನಿಂದ ಗುಣಮುಖವಾಗಲೆಂದು ಟ್ವೀಟಿಸಲು, ನವಿಲಿನೊಂದಿಗೆ, ಬಾತುಕೋಳಿಯೊಂದಿಗೆ ಫೋಟೊಶೂಟ್ ಮಾಡುವುದರಿಂದ ಹೊರತು ಪುರುಸೊತ್ತಿಲ್ಲ. ಇಂಥದ್ದರಲ್ಲಿ ನಿಜವಾದ ಪ್ರಶ್ನೆಕೇಳಬೇಕಾಗಿದ್ದ ಟಿವಿ ಜರ್ನಲಿಸ್ಟ್‌ಗಳಲ್ಲಿ ಬಹುತೇಕರು ಡ್ರಗ್ಸ್‌ನಲ್ಲಿ ಮುಳುಗಿ ವೀಕ್ಷಕರಿಗೆ ನಶೆ ಹಚ್ಚಿದ್ದಾರೆ.

ಪ್ರಶ್ನೆಗಳು ಮತ್ತು ಲೋಪದೋಷಗಳು

ಹಾಥ್ರಸ್‌ನ ದಲಿತ ಯುವತಿಯ ಸಾವಿನಲ್ಲಿ ಎಷ್ಟೋ ಉತ್ತರ ಸಿಗದ ಪ್ರಶ್ನೆಗಳು ಉಳಿದುಹೋಗುತ್ತವೆ. ಅವುಗಳೆಂದರೆ, ನಿರ್ಭಯಾ ಘಟನೆಯ ನಂತರ ಬಂದ ತಿದ್ದುಪಡಿಗಳು ಹೆಸರಿಗೆ ಮಾತ್ರವೇ ಇವೆಯೇ? ಸಂತ್ರಸ್ತೆ ಠಾಣೆಗೆ ಬಂದಿದ್ದರೂ ಪೊಲೀಸರು ದೂರು ದಾಖಲಿಸಲಿಲ್ಲ ಏಕೆ? ಬೆನ್ನುಮೂಳೆ ಮುರಿದು, ನಾಲಿಗೆ ಕತ್ತರಿಸಿ, ಮೈತುಂಬಾ ಗಾಯಗಳಾಗಿದ್ದಾಗೂ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಿಲ್ಲವೇಕೆ? ಆಸ್ಪತ್ರೆಯಲ್ಲಿ ಅತ್ಯಾಚಾರ ಸಂತ್ರಸ್ತೆ ಎಂದು ಗೊತ್ತಿದ್ದು 11 ದಿನಗಳ ಕಾಲ ಸ್ಯಾಂಪಲ್ ಪಡೆದಿರಲಿಲ್ಲವೇಕೆ? ಘಟನೆಯ ನಂತರ ಹೆಚ್ಚೆಂದರೆ ೪ ದಿನಗಳ ಕಾಲ ದೇಹದಲ್ಲಿ ಸಾಕ್ಷಿ ಸಿಗಬಹುದು ಎಂದು ವೈದ್ಯರಿಗೆ ಗೊತ್ತಿರಲಿಲ್ಲವೆ?

ಯುವತಿಯ ದೇಹದಲ್ಲಿ ಯಾವುದೇ ವೀರ್ಯ ಸಿಕ್ಕಿಲ್ಲ. ಆದ್ದರಿಂದ ಇದು ರೇಪ್ ಅಲ್ಲ ಎಂದು ಹೇಳುವ ಪೊಲೀಸ್ ವರಿಷ್ಠಾಧಿಕಾರಿಗೆ ಕಾಂಡೋಮ್ ಉಪಯೋಗಿಸಿದಾಗಲೂ ವೀರ್ಯ ಸಿಗುವುದಿಲ್ಲ ಎಂಬ ಕನಿಷ್ಟ ಜ್ಞಾನವೂ ಇಲ್ಲವೇ?

ಹೊಸ ತಿದ್ದುಪಡಿನಂತರ ಸಂಭೋಗ ಎಂದರೆ ಕೇವಲ ದೇಹದ ಅಂಗದಿಂದ ಮಾತ್ರವಲ್ಲ ಅದು ಇತರ ವಸ್ತ್ರಗಳನ್ನು ಉಪಯೋಗಿಸಿಯೂ ಮಾಡಬಹುದು ಎಂದು ವ್ಯಖ್ಯಾನಿಸಿರುವುದು ಎಡಿಜಿಪಿಗೆ ಗೊತ್ತಿಲ್ಲವೆಂದರೆ ಇನ್ನು ಸಾಮಾನ್ಯ ಪೊಲೀಸರ ಪಾಡೇನು?

ಮಧ್ಯರಾತ್ರಿಯಲ್ಲಿ ಶವವನ್ನು ಸುಟ್ಟುಹಾಕಿ, ಮುಂದೇನಾದರೂ ಹೆಚ್ಚಿನ ತನಿಖೆಗಾಗಿ ಶವವನ್ನು ಮರಳಿ ಶವಪರೀಕ್ಷೆಗೆ ಒಳಪಡಿಸಬಹುದಾಗಿದ್ದ ಅವಕಾಶವನ್ನು ಕೊನೆಗೊಳಿಸಿದ್ದು ಯಾರನ್ನು ರಕ್ಷಿಸಲು ಮತ್ತು ಯಾರ ಆದೇಶದ ಮೇರೆಗೆ?

ಈ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ, ಆದರೆ ಇದರ ಹಿಂದೆ ಅಡಗಿರುವ ಮತ್ತು ದಿನದಿಂದ ದಿನಕ್ಕೆ ವಿಕಾರಗೊಳ್ಳುತ್ತ ಸಾಗುತ್ತಿರುವ ಜನರ ಮನಸ್ಥಿತಿ ಇನ್ನೂ ಭಯ ಹುಟ್ಟಿಸುತ್ತದೆ.

ಪ್ರಖ್ಯಾತ ಯೂಟ್ಯೂಬ್ ಧೃವ್‌ರಾಠಿ Whataboutism ಎಂಬ ಶಬ್ದವನ್ನು ಬಳಸುತ್ತಾರೆ. ಅದೇನೆಂದರೆ ಯಾವುದೇ ಘಟನೆಯ ಬಗ್ಗೆ ಯಾರಾದರೂ ಧ್ವನಿ ಎತ್ತಿದರೆ ಕೂಡಲೇ ಟ್ರೋಲ್‌ಆರ್ಮಿ ಹಾಗೂ ನವದೇಶಭಕ್ತರು ತದ್ವಿರುದ್ಧ ಪ್ರಶ್ನೆ ಎತ್ತಿ, ಪ್ರಶ್ನೆ ಕೇಳುವವರನ್ನು ಬೆದರಿಸುವುದು ಅಥವಾ ಕೀಳು ಭಾಷೆಯಲ್ಲಿ ಅವಮಾನಿಸುವುದು.
ಮುಸ್ಲಿಂ ಯುವತಿಯ ಮೇಲೆ ಅನ್ಯಾಯ ಆಗಿದೆ ಎಂದರೆ ಹಿಂದೂ ಯುವತಿಗೆ ಆದಾಗ ನೀನೆಲ್ಲಿದ್ದೆ ಎನ್ನುವುದು ಹಿಂದೂ ಹುಡುಗಿ, ಆದರೆ ಕೆಳಜಾತಿಯವರ ಮೇಲೆ ದೌರ್ಜನ್ಯಕ್ಕೆ ಧ್ವನಿ ಎತ್ತಿದರೆ ಮೇಲ್ಜಾತಿಯವರ ಮೇಲೆ ಇಂಥದ್ದಾಗ ನೀನ್ಯಾಕೆ ಪ್ರತಿಕ್ರಿಯಿಸಲಿಲ್ಲ ಎನ್ನುವುದು. ಇಂಥ ಪ್ರತಿಕ್ರಿಯೆಗಳು ತಮ್ಮದೇ ವಲಯದಲ್ಲಿ ತಮ್ಮ ಅಸಹನೆ, ಅಸಮಾಧಾನ ವ್ಯಕ್ತಪಡಿಸುವವರ ಧೈರ್ಯವನ್ನು ಉಡುಗಿಸುತ್ತವೆ.

ಹಾಥ್ರ‍್ರಸ್‌ನಲ್ಲಿ ದಲಿತ ಯುವತಿಯ ಶವವನ್ನು ಸುಟ್ಟಿದ್ದು ಹೇಗೆ ಪ್ರಶ್ನೆಗಳನ್ನು ಉಳಿಸುತ್ತದೋ ಹಾಗೆಯೇ ತೆಲಂಗಾಣದಲ್ಲಿ ರೇಪ್ ಆರೋಪಿಗಳ ಮೇಲೆ ನಡೆದ ಎನ್‌ಕೌಂಟರ್ ಕೂಡ ಪ್ರಶ್ನೆಗಳನ್ನು ಉಳಿಸುತ್ತವೆ. ವಿಪರ್ಯಾಸವೆಂದರೆ ತೆಲಂಗಾಣದಲ್ಲಿ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಿದಾಗ ಪೊಲೀಸರನ್ನು ಕೊಂಡಾಡಿದ, ಅವರ ಮೇಲೆ ಹೂಮಳೆ ಸುರಿದ ಜನ, ಎನ್‌ಕೌಂಟರ್ ಸಮರ್ಥಿಸಿ ಇಂಥವರಿಗೆ ಇನ್ಮೇಲೆ ಹೀಗೇ ಆಗಬೇಕು ಎಂದು ಹೇಳಿದ ಜನರಾರೂ ಹಾಥ್ರಸ್‌ನ ಯುವತಿಯ ಮೇಲೆ ಅತ್ಯಾಚಾರ ಮಾಡಿದವರ ವಿಚಾರದಲ್ಲಿ ಧ್ವನಿ ಎತ್ತುತ್ತಿಲ್ಲ. ದೇಶದ ಆಕ್ರೋಶವನ್ನು ಸಮಾಧಾನಮಾಡುವ ನಿಟ್ಟಿನಲ್ಲಿ ಅಲಹಾಬಾದ್ ಹೈಕೋರ್ಟ್ ಹಾಥ್ರಸ್‌ನ ಎಲ್ಲ ಅಧಿಕಾರಿಗಳನ್ನು ಕರೆಸಿ ಛೀಮಾರಿ ಹಾಕಿದೆ. ಉತ್ತರಪ್ರದೇಶದಲ್ಲಿ ನ್ಯಾಯ ದೊರಕುವ ಭರವಸೆಯೇ ಇಲ್ಲದ ಯುವತಿಯ ಕುಟುಂಬ ಅದ್ಯಾವ ಭರವಸೆಯಿಂದ ನ್ಯಾಯಕ್ಕಾಗಿ ಕಾಯಬೇಕೋ ಗೊತ್ತಿಲ್ಲ.

ರಾಜಲಕ್ಷ್ಮಿ ಅಂಕಲಗಿ
ಸಾಮಾಜಿಕ ಕಾರ್ಯಕರ್ತೆ, ಹೈಕೋರ್ಟ್ ವಕೀಲರು


ಇದನ್ನೂ ಓದಿ: ಹತ್ರಾಸ್ ಪ್ರಕರಣ ತನಿಖೆ: CBI ತಂಡದಲ್ಲಿ SC/ST/OBC ಸಮುದಾಯದವರಿಲ್ಲ- ಚಂದ್ರಶೇಖರ್ ಆಜಾದ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ರಾಜಲಕ್ಷ್ಮಿ ಅಂಕಲಗಿ
+ posts

LEAVE A REPLY

Please enter your comment!
Please enter your name here