Homeಅಂತರಾಷ್ಟ್ರೀಯಭಾರತದ ಸೈನಿಕರು ಯಾಕೆ ಮಾಲ್ಡಿವ್ಸ್‌ನಲ್ಲಿದ್ದಾರೆ?

ಭಾರತದ ಸೈನಿಕರು ಯಾಕೆ ಮಾಲ್ಡಿವ್ಸ್‌ನಲ್ಲಿದ್ದಾರೆ?

- Advertisement -
- Advertisement -

ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಮಾ.15ರೊಳಗೆ ಭಾರತ ತನ್ನ ಮಿಲಿಟರಿ ಸಿಬ್ಬಂದಿಯನ್ನು ವಾಪಾಸ್ಸು ಕರೆಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಭಾರತೀಯ ಸೇನಾ ಸಿಬ್ಬಂದಿ ಮಾಲ್ಡೀವ್ಸ್‌ನಲ್ಲಿ ಇರುವಂತಿಲ್ಲ. ಇದು ಅಧ್ಯಕ್ಷ ಡಾ.ಮೊಹಮ್ಮದ್ ಮುಯಿಝು ಮತ್ತು ಸರಕಾರದ ನೀತಿಯಾಗಿದೆ ಎಂದು ಅಧ್ಯಕ್ಷರ ಕಚೇರಿಯ ಸಾರ್ವಜನಿಕ ನೀತಿ ಕಾರ್ಯದರ್ಶಿ ಅಬ್ದುಲ್ಲಾ ನಜೀಮ್ ಇಬ್ರಾಹಿಂ ಹೇಳಿದ್ದಾರೆ.

ಮಾಲ್ಡೀವ್ಸ್ ಮತ್ತು ಭಾರತವು ಸೈನ್ಯವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಮಾತುಕತೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿವೆ. ಭಾನುವಾರ ಬೆಳಗ್ಗೆ ಮಾಲ್ಡಿವ್ಸ್‌ನ ಮಾಲೆಯಲ್ಲಿರುವ ವಿದೇಶಾಂಗ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ಈ ಸಮಿತಿ ತನ್ನ ಮೊದಲ ಸಭೆಯನ್ನು ನಡೆಸಿದೆ. ಸಭೆಯಲ್ಲಿ ಭಾರತೀಯ ಹೈಕಮಿಷನರ್ ಮುನು ಮಹಾವರ್ ಕೂಡ ಭಾಗವಹಿಸಿದ್ದರು ಎಂದು ಮಾಲ್ಡೀವಿಯನ್ ಮಾದ್ಯಮ ವರದಿಗಳು ತಿಳಿಸಿವೆ. ಆದರೆ ತಕ್ಷಣಕ್ಕೆ ಈ ಬಗ್ಗೆ ಭಾರತೀಯ ಮಾದ್ಯಮಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಮಾಲ್ಡೀವ್ಸ್‌ ದ್ವೀಪದಲ್ಲಿ ಭಾರತೀಯ ಸೈನಿಕರ ಯಾವುದೇ ದೊಡ್ಡ ತುಕಡಿ ಇರುವುದಿಲ್ಲ. ಇತ್ತೀಚಿನ ಸರ್ಕಾರಿ ಅಂಕಿಅಂಶಗಳ ಪ್ರಕಾರ ಮಾಲ್ಡೀವ್ಸ್‌ನಲ್ಲಿ 88 ಭಾರತೀಯ ಸೇನಾ ಸಿಬ್ಬಂದಿಗಳು ಇದ್ದಾರೆ. ಮಾಲ್ಡೀವ್ಸ್ ಸೈನಿಕರಿಗೆ ಯುದ್ಧ ತರಭೇತಿ ಮತ್ತು ರಕ್ಷಣಾತ್ಮಕ ಕಾರ್ಯಾಚರಣೆ ಬಗ್ಗೆ ತರಭೇತಿ ನೀಡಲು ಅವರನ್ನು ಕಳುಹಿಸಲಾಗಿದೆ. ಆದರೆ ಮಾಲ್ಡೀವಿಯನ್ ಕೆಲ ಪ್ರಜೆಗಳು, ರಾಜಕಾರಣಿಗಳು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ‘ಇಂಡಿಯಾ ಔಟ್’ ಅಭಿಯಾನವು ಕೂಡ ನಡೆದಿದೆ. ಭಾರತದ ಸೈನಿಕರು ಮಾಲ್ಡಿವ್ಸ್‌ನಲ್ಲಿರುವುದು ದೇಶದ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಮಾಲ್ಡೀವ್ಸ್‌ನ ಕೆಲ ವಿಶ್ಲೇಷಕರು ಕೂಡ ಹೇಳುತ್ತಾರೆ.

ಮಾಲ್ಡೀವ್ಸ್‌ನಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಭಾರತ-ವಿರೋಧಿ ಬೆಳವಣಿಗೆಗಳು ಮತ್ತಷ್ಟು ಉಲ್ಬಣಗೊಂಡಿದ್ದವು. ಅಲ್ಲಿ ಭಾರತದ ವಿರುದ್ಧದ ಅಭಿಪ್ರಾಯ ಹೆಚ್ಚಳವಾಗಿತ್ತು. ಇಬ್ರಾಹಿಂ ಮೊಹಮ್ಮದ್ ಸೋಲಿಹ್ ನೇತೃತ್ವದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷವು ಭಾರತದ ಜೊತೆ ಆಪ್ತವಾಗಿತ್ತು.  ಪೀಪಲ್ಸ್ ನ್ಯಾಶನಲ್ ಕಾಂಗ್ರೆಸ್ ಮತ್ತು ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ ಪಕ್ಷದ ಒಕ್ಕೂಟವು 2023ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವನ್ನು ಕಂಡಿತ್ತು. ಮಾಲ್ಡಿವ್ಸ್‌ನ ಹಾಲಿ ಅಧ್ಯಕ್ಷ ಮುಯಿಝು ಚೀನಾ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಮಾಲ್ಡೀವ್ಸ್‌ನ ಹೊಸ ಸರ್ಕಾರ ಭಾರತದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಚೀನಾದತ್ತ ಒಲವು ತೋರಿಸಿದೆ. ಇತ್ತೀಚೆಗೆ ಭಾರತ ಮತ್ತು ಮಾಲ್ಡೀವ್ಸ್‌ ನಡುವೆ ಶೀತಲ ಸಮರ ನಡೆಯುತ್ತಿದ್ದಾಗಲೇ ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಝು ಅವರು ಚೀನಾಗೆ ಭೇಟಿ ನೀಡಿದ್ದರು. ಈ ವೇಳೆ ಮಾಲ್ಡೀವ್ಸ್‌ ರಾಜಧಾನಿ ಮಾಲೆಯ ಅಭಿವೃದ್ಧಿಗೆ 130 ಮಿಲಿಯನ್ ಡಾಲರ್ ನೆರವು ನೀಡಲು ಚೀನಾ ಒಪ್ಪಿಕೊಂಡಿದೆ. ಉಭಯ ದೇಶಗಳು ಕೃಷಿ ಸಹಕಾರ ಒಪ್ಪಂದಕ್ಕೂ ಸಹಿ ಹಾಕಿವೆ.

ಭಾರತದ ಸೈನಿಕರು ಯಾಕೆ ಮಾಲ್ಡಿವ್ಸ್‌ನಲ್ಲಿದ್ದಾರೆ?

ಭಾರತ, ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್‌ಗೆ ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುದೀರ್ಘ ಕಾಲದಿಂದ ಸಹಾಯವನ್ನು ಮಾಡುತ್ತಾ ಬಂದಿದೆ. ಭಾರತದ ಸೈನಿಕರು ನಿಜವಾದ ಮಿಲಿಟರಿ ಕಾರ್ಯಾಚರಣೆಗಾಗಿ ದ್ವೀಪವನ್ನು ಪ್ರವೇಶಿಸಿದ್ದು ನವೆಂಬರ್ 1988ರಲ್ಲಿ. ಆಗಿನ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಅವರ ಸರ್ಕಾರದ ಕೋರಿಕೆಯ ಮೇರೆಗೆ ದಂಗೆಯನ್ನು ವಿಫಲಗೊಳಿಸಲು ಭಾರತದ ಮಿಲಿಟರಿ ಪಡೆಯು ದ್ವೀಪವನ್ನು ಪ್ರವೇಶಿಸಿತ್ತು. ತ್ವರಿತ ಕಾರ್ಯಾಚರಣೆ ನಡೆಸಿ ಭಾರತೀಯ ಪಡೆಗಳು ಅಧ್ಯಕ್ಷರನ್ನು ರಕ್ಷಿಸಲು ಮತ್ತು ಬಂಡುಕೋರರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದವು.

ಮಾಲ್ಡಿವ್ಸ್‌ನಲ್ಲಿ ‘ಇಂಡಿಯಾ ಔಟ್’ ಅಭಿಯಾನವು 2020ರ ನಂತರ ಪ್ರಾರಂಭವಾಗಿತ್ತು. ಚೀನಾ ಪರ ಒಲವನ್ನು ಹೊಂದಿರುವ ಪ್ರಗತಿಶೀಲ ಪಕ್ಷದ (ಪಿಪಿಎಂ) ಅಬ್ದುಲ್ಲಾ ಯಮೀನ್ ಅಬ್ದುಲ್ ಗಯೂಮ್ ಅವರು 2013ರಲ್ಲಿ ಅಧ್ಯಕ್ಷರಾದಾಗಿನಿಂದಲೂ ಭಾರತದ ವಿರುದ್ಧ ಮಾಲ್ಡಿವ್ಸ್‌ನಲ್ಲಿ ಅಸಮಾಧಾನವು ಭುಗಿಲೆದ್ದಿತ್ತು.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ನಿಯಮಗಳ ಪ್ರಕಾರ, ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಗೆ ತರಬೇತಿ ನೀಡಲು ಭಾರತೀಯ ಅಧಿಕಾರಿಗಳನ್ನು ಮಾಲ್ಡೀವ್ಸ್‌ಗೆ ಕಳುಹಿಸಲಾಗಿದೆ. ಅವರ ನೇತೃತ್ವದಲ್ಲಿ ಈ ಹೆಲಿಕಾಪ್ಟರ್‌ಗಳು ಕಾರ್ಯನಿರ್ವಹಿಸುತ್ತವೆ. ಭಾರತ ಮತ್ತು ಮಾಲ್ಡಿವ್ಸ್‌ ನಡುವೆ ವಿವಿಧ ವಿಚಾರಗಳಲ್ಲಿ ರಾಜತಾಂತ್ರಿಕ ಒಪ್ಪಂದವು ನಡೆಯುತ್ತಿದೆ.

ಪ್ರಧಾನಿ ಮೋದಿ ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು. ಇದಕ್ಕೆ ಮಾಲ್ಡೀವ್ಸ್‌ ಸಚಿವರು ಟೀಕೆ ವ್ಯಕ್ತಪಡಿಸಿದ್ದರು. ಈ ವಿಚಾರ ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಸಂಬಂಧ ಹದೆಗೆಡುವಂತೆ ಮಾಡಿತ್ತು. ಪ್ರಧಾನಿ ಮೋದಿಯನ್ನು ಟೀಕಿಸಿದ ಮೂವರು ಸಚಿವರನ್ನು ಮಾಲ್ಡೀವ್ಸ್‌ ಸರ್ಕಾರ ಸಂಪುಟದಿಂದ ವಜಾ ಮಾಡಿತ್ತು.

ಇದನ್ನು ಓದಿ: ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ: ಪುರಿ ಶಂಕರಾಚಾರ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಥುರಾ ಭೂ ವಿವಾದ: ಫೆಬ್ರವರಿ 29ರಂದು ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ

0
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರವರಿ 29ಕ್ಕೆ ನಿಗದಿಪಡಿಸಿದೆ. ಶಾಹಿ ಈದ್ಗಾ ಇಂತೇಜಾಮಿಯಾ ಸಮಿತಿಯು ಕತ್ರ...