Homeಮುಖಪುಟ"ಕೃತಕ ಬುದ್ಧಿಮತ್ತೆ ಜಾಗತಿಕವಾಗಿ 40 ಶೇ. ಉದ್ಯೋಗದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ"

“ಕೃತಕ ಬುದ್ಧಿಮತ್ತೆ ಜಾಗತಿಕವಾಗಿ 40 ಶೇ. ಉದ್ಯೋಗದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ”

- Advertisement -
- Advertisement -

ಕೃತಕ ಬುದ್ಧಿಮತ್ತೆ (Artificial Intelligence) ಪ್ರಪಂಚದಾದ್ಯಂತ ಉದ್ಯೋಗ ಭದ್ರತೆಗೆ ದೊಡ್ಡ ಅಪಾಯವನ್ನುಂಟು ಮಾಡಲಿದೆ. ಆದರೆ, ಇದು ಉತ್ಪಾದನಾ ಮಟ್ಟವನ್ನು ಹೆಚ್ಚಿಸಲು ಮತ್ತು ಜಾಗತಿಕ ಬೆಳವಣಿಗೆಯನ್ನು ಉತ್ತೇಜಿಸಲು ಅವಕಾಶ ನೀಡಲಿದೆ ಎಂದು ಇಂಟರ್‌ನ್ಯಾಷನ್ ಮಾನಿಟರಿ ಫಂಡ್ (ಐಎಂಎಫ್‌) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶ್ವ ಆರ್ಥಿಕ ಸಭೆಗೆ ಹೊರಡುವ ಮುನ್ನ ವಾಷಿಂಗ್ಟನ್‌ನಲ್ಲಿ ಸಂದರ್ಶನವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಧಾರಿತ ಆರ್ಥಿಕತೆಗಳಲ್ಲಿನ 60 ಪ್ರತಿಶತ ಉದ್ಯೋಗಗಳ ಮೇಲೆ ಎಐ ತಂತ್ರಜ್ಞಾನ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಎಐ ಕಡಿಮೆ ಪರಿಣಾಮ ಬೀರಲಿದೆ. ಆದರೆ, ಜಾಗತಿಕವಾಗಿ 40 ಪ್ರತಿಶತದಷ್ಟು ಉದ್ಯೋಗದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ” ಎಂದು ಹೊಸ ಐಎಂಎಫ್ ವರದಿಯನ್ನು ಉಲ್ಲೇಖಿಸಿ ಕ್ರಿಸ್ಟಲಿನಾ ಹೇಳಿದ್ದಾರೆ.

ಭಾನುವಾರ ಸಂಜೆ ಪ್ರಕಟಗೊಂಡ ಐಎಂಎಫ್ ವರದಿಯು, ಎಐ ತಂತ್ರಜ್ಞಾನ ಜಾಗತಿಕ ಉದ್ಯೋಗ ವಲಯದ ಮೇಲೆ ಅರ್ಧದಷ್ಟು ಮಾತ್ರ ಋಣಾತ್ಮಕ ಪರಿಣಾಮ ಬೀರಲಿದೆ. ಇನ್ನರ್ಧ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ಪಾದನೆ ಹೆಚ್ಚಿಸಿಕೊಳ್ಳುವ ಮೂಲಕ ಲಾಭ ಪಡೆಯಲಿದೆ ಎಂದಿದೆ.

ಎಐ ತಂತ್ರಜ್ಞಾನ ಜಾಗತಿಕ ಉದ್ಯೋಗ ವಲಯದ ಮೇಲೆ ಸಂಪೂರ್ಣ ಋಣಾತ್ಮಕ ಪರಿಣಾಮ ಬೀರಬಹುದು ಅಥವಾ ಧನಾತ್ಮಕ ಪರಿಣಾಮ ಬೀರಬಹುದು. ಧನಾತ್ಮಕ ಪರಿಣಾಮ ಬೀರಿದರೆ ಉತ್ಪಾದನಾ ಮಟ್ಟ ಹೆಚ್ಚಳಗೊಂಡು ಆದಾಯದ ಮಟ್ಟವು ಹೆಚ್ಚಾಗಬಹುದು ಎಂದು ಜಾರ್ಜಿವಾ ಹೇಳಿದ್ದಾರೆ.

ಕಡಿಮೆ ಆದಾಯದ ದೇಶಗಳು ಕೃತಕ ಬುದ್ದಿಮತ್ತೆಯ ಲಾಭವನ್ನು ಪಡೆಯಲು ನಿರ್ದಿಷ್ಟ ಗುರಿ ತಲುಪಲು ನಾವು ಸಹಾಯ ಮಾಡಬೇಕು ಎಂದು ಜಾರ್ಜಿವಾ ತಿಳಿಸಿದ್ದಾರೆ.

ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿನ ಕಾರ್ಮಿಕ ಮಾರುಕಟ್ಟೆಗಳು ಎಐನಿಂದ ಸಣ್ಣ ಆರಂಭಿಕ ಪರಿಣಾಮವನ್ನು ನೋಡಲಿದೆ. ಆದರೆ, ಕೆಲಸದ ಸ್ಥಳದಲ್ಲಿ ಅದರ ಏಕೀಕರಣದ ಮೂಲಕ ಉಂಟಾಗುವ ವರ್ಧಿತ ಉತ್ಪಾದಕತೆಯಿಂದ ಅವು ಕಡಿಮೆ ಲಾಭವನ್ನು ಪಡೆಯಲಿದೆ ಎಂದು ಐಎಂಎಫ್ ವರದಿ ಭವಿಷ್ಯ ನುಡಿದಿದೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ಸಾಲದ ಹೊರೆಗಳನ್ನು ನಿಭಾಯಿಸಲು ಮತ್ತು ಖಾಲಿಯಾದ ಆರ್ಥಿಕ ವ್ಯವಸ್ಥೆಯನ್ನು ತುಂಬಲು ದೇಶಗಳು ಯೋಚಿಸುತ್ತಿರುವ ಹಿನ್ನೆಲೆ, ವಿಶ್ವದಾದ್ಯಂತ ಹಣಕಾಸಿನ ನೀತಿಗೆ 2024 “ಬಹಳ ಕಠಿಣ ವರ್ಷ” ಎಂದು ಜಾರ್ಜಿವಾ ಹೇಳಿದ್ದಾರೆ.

ಈ ವರ್ಷ ಜಾಗತಿಕವಾಗಿ ಶತಕೋಟಿ ಜನರು ಚುನಾವಣೆ ಎದುರಿಸಲಿದ್ದಾರೆ. ಜನಬೆಂಬಲವನ್ನು ಗಳಿಸಲು ವೆಚ್ಚ ಹೆಚ್ಚಿಸಲು ಮತ್ತು ತೆರಿಗೆ ಕಡಿತಗೊಳಿಸಲು ಇದು ಸರ್ಕಾರಗಳ ಮೇಲೆ ಒತ್ತಡ ಹೇರಬಹುದು. ಜಗತ್ತಿನ ಸುಮಾರು 80 ದೇಶಗಳಲ್ಲಿ ಚುನಾವಣೆ ನಡೆಯಲಿವೆ. ಚುನಾವಣೆಗಾಗಿ ಪಕ್ಷಗಳು ಮಾಡುವ ಖರ್ಚಿನಿಂದ ಉಂಟಾಗುವ ಒತ್ತಡ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುವುದು ನಮಗೆ ಗೊತ್ತಿದೆ ಎಂದು ಜಾರ್ಜಿವಾ ತಿಳಿಸಿದ್ದಾರೆ.

ಪ್ರಪಂಚದಾದ್ಯಂತದ ಸರ್ಕಾರಗಳು ಈ ವರ್ಷ ದೊಡ್ಡ ಮೊತ್ತವನ್ನು ಚುನಾವಣೆಗಾಗಿ ಖರ್ಚು ಮಾಡಲಿವೆ. ಈ ಮೂಲಕ ಹೆಚ್ಚಿನ ಹಣದುಬ್ಬರದ ವಿರುದ್ಧದ ಹೋರಾಟದಲ್ಲಿ ಅವುಗಳು ಸಾಧಿಸಿದ ಕಠಿಣವಾದ ಪ್ರಗತಿಯನ್ನು ದುರ್ಬಲಗೊಳಿಸಲಿವೆ ಎಂದು ಜಾರ್ಜಿವಾ ಹೇಳಿದ್ದಾರೆ.

ಐಎಂಎಫ್‌ನ ಚುಕ್ಕಾಣಿ ಹಿಡಿದು ಜಾರ್ಜಿವಾ ಐದು ವರ್ಷಗಳ ಅವಧಿಯನ್ನು ಪೂರೈಸಿದ್ದು, ಈ ವರ್ಷ ಮತ್ತೊಮ್ಮೆ ಆಯ್ಕೆ ಬಯಸಿದ್ದಾರಾ? ಎಂಬುವುದಕ್ಕೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.

ಇದನ್ನೂ ಓದಿ : ಭಾರತೀಯ ಸೇನೆ ವಾಪಸ್‌ಗೆ ಮಾರ್ಚ್‌ 15ರ ಗಡುವು ನೀಡಿದ ಮಾಲ್ಡೀವ್ಸ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಅನಿಮೇಟೆಡ್ ವೀಡಿಯೊ ಹಂಚಿಕೊಂಡ ಬಿಜೆಪಿ: ‘ಎಕ್ಸ್‌’ ಬಳಕೆದಾರರು ತರಾಟೆ

0
ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಬಿಂಬಿಸುವ, ಮುಸ್ಲಿಮರ ಬಗ್ಗೆ ಕಾಂಗ್ರೆಸ್‌ ತುಷ್ಟೀಕರಣ ಮಾಡುತ್ತದೆ ಎಂದು ಪ್ರತಿಪಾದಿಸುವ ಅನಿಮೇಟೆಡ್ ವೀಡಿಯೊವೊಂದನ್ನು ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಎಚ್ಚರ..ಎಚ್ಚರ..ಎಚ್ಚರ.. ಎಂಬ...