ಜೆಡಿಎಸ್‌-ಕಾಂಗ್ರೆಸ್‌ ಶಾಸಕರ ರಾಜಿನಾಮೆ ಕೊಡಿಸಿದ್ದು ಅಮಿತ್‌ ಶಾರಲ್ಲವೇ?: ಯಡಿಯೂರಪ್ಪ ಹೀಗೆ ಹೇಳಿದ್ದೇಕೆ ಗೊತ್ತಾ?

ಬಿ.ಎಸ್.ಯಡಿಯೂರಪ್ಪ ಇತಿಹಾಸ ನಿರ್ಮಿಸಿದ್ದಾರೆ. ಅದೂ ನಾಲ್ಕು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಮೂಲಕ. ಯಡಿಯೂರಪ್ಪ ಈಗ ರಾಜಿನಾಮೆ ಕೊಡಲಿ ಇಲ್ಲವೇ ಬಿಡಲಿ ಅವರ ದಾಖಲೆಯಂತೂ ಮುರಿಯಲು ಸಧ್ಯಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಯಡಿಯೂರಪ್ಪ ಅವರಂತೆ ಜೈಲಿಗೆ ಹೋಗಿ ಬಂದವರೂ ಯಾರೂ ಇಲ್ಲ. ಕೆ.ಜೆ.ಪಿ ಪಕ್ಷ ಕಟ್ಟಿ ಮತ್ತೆ ಮಾತೃ ಪಕ್ಷ ಬಿಜೆಪಿಗೆ ಮರಳಿ ಮುಖ್ಯಮಂತ್ರಿಯೂ ಆದರು. ಬೇರೆ ಯಾರಿಗೂ ಆ ಛಾನ್ಸ್ ಸಿಗಲಿಲ್ಲ ಬಿಡಿ. ಇಂತಹ ಪ್ರಸಂಗಗಳು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಹಿಂದೆಯೂ ನಡೆದಿಲ್ಲ. ಮುಂದೆಯೂ ಸಂಭವಿಸುವುದಿಲ್ಲ. ಒಂದೇ ಪಕ್ಷದಲ್ಲಿ ನಾಲ್ಕು ಬಾರಿ ಅಧಿಕಾರದ ಗದ್ದುಗೆ ಏರಿದವರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಮಾತ್ರ.

ಯಡಿಯೂರಪ್ಪ ಬೇಕಂತಲೇ ಮಾತಾಡಿರುವಂತಿರುವ ವಿಡಿಯೋ ಕೇಳಿ..

ಯಡಿಯೂರಪ್ಪ ಹಿಂದೆಯೂ ಕಷ್ಟ ಅನುಭವಿಸಿದರು. ಸ್ವಪಕ್ಷದವರೇ ಕಾಲೆಳೆದಿದ್ದು ಹೆಚ್ಚು. ಮಾಜಿ ಕೇಂದ್ರ ಸಚಿವ ದಿವಂಗತ ಎಚ್.ಎನ್. ಅನಂತ ಕುಮಾರ್ ಮತ್ತು ಯಡಿಯೂರಪ್ಪ ನಡುವೆ ಶೀತಲ ಸಮರ ಕೊನೆಯವರೆಗೂ ಇತ್ತು. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯಲು ಅನಂತ್ ಕುಮಾರ್ ಪಾತ್ರವೂ ಇತ್ತು. ಆ ಕಾರಣಕ್ಕಾಗಿಯೇ ಒಂದು ಅವಧಿಯ ಸರ್ಕಾರದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಾಣಬೇಕಾದ ಪರಿಸ್ಥಿತಿ ಬಂತು.

ಜೈಲಿಗೆ ಹೋಗಿ ಬಂದ ಮೇಲೆ ಯಡಿಯೂರಪ್ಪ ಸ್ವಲ್ಪ ಮಂಕಾಗಿದ್ದಾರೆ. ವಯಸ್ಸು ಅವರನ್ನು ಬಾಧಿಸುತ್ತಿದೆ. ಆದರೂ ಮುಖ್ಯಮಂತ್ರಿ ಪಟ್ಟದಲ್ಲಿ ಮುಂದುವರಿಯಲು ಹೆಣಗುತ್ತಿದ್ದಾರೆ. ಹಿಂದೆ ಅನಂತಕುಮಾರ್ ಕಿರುಕುಳ ಇತ್ತು. ಅವರು ಹೋದ ಮೇಲೆ ಈಗ ಹಲವು ಮಗ್ಗಲು ಮುಳ್ಳುಗಳು ಯಡಿಯೂರಪ್ಪ ಅವರನ್ನು ಚುಚ್ಚುತ್ತಿವೆ. ಆರ್.ಎಸ್.ಎಸ್ ಮುಖಂಡ ಸಂತೋಷ್ ಅನಂತ್ ಸ್ಥಾನದಲ್ಲಿ ಕುಳಿತು ಯಡಿಯೂರಪ್ಪ ಅವರಿಗೆ ತಿವಿಯುತ್ತಿದ್ದಾರೆ. ಸಚಿವ ಸಿ.ಟಿ.ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಂದಿಲ್ಲೊಂದು ಬಗೆಯಲ್ಲಿ ಸರ್ಕಾರ ಮತ್ತು ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಲೇ ಇದ್ದಾರೆ. ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ್ ಸವದಿ, ಡಾ.ಅಶ್ವತ್ಥನಾರಾಯಣ ಮತ್ತು ಕೇಂದ್ರ ಸಚಿವ ಸದಾನಂದಗೌಡ ಅವರು ಹೈಕಮಾಂಡ್ ನಾಯಕರಿಗೆ ಆಪ್ತರಾಗಿದ್ದಾರೆ. ಹೀಗಾಗಿ ಯಡಿಯೂರಪ್ಪ ಬಲಹೀನರಾಗಿದ್ದಾರೆ.

ಕರ್ನಾಟಕದ ಬಿಜೆಪಿಯಲ್ಲಿ ಈಗ ಎರಡು-ಮೂರು ಬಣಗಳು ಸಕ್ರಿಯವಾಗಿ ಕಾರ್ಯಚರಿಸುತ್ತಿವೆ. ಬಣಗಳ ಪ್ರಾಬಲ್ಯ ಬಿಗಿಗೊಂಡಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆದರಿದಂತೆ ಕಾಣುತ್ತಿದ್ದಾರೆ. ರಾಜ್ಯದಲ್ಲಿ ಪ್ರವಾಸ ಹೋದಕಡೆಯಲ್ಲಾ ಮಾಧ್ಯಮಗಳ ಮುಂದೆ ಏನೂ ಮಾತನಾಡದೆ ಕುಗ್ಗಿ ಹೋಗಿದ್ದಾರೆ. ನೆರೆ ಪರಿಹಾರವು ಬಿಡುಗಡೆಯಾಗಿಲ್ಲ. ಹೈಕಮಾಂಡ್ ನಾಯಕರ ಕೃಪಾಕಟಾಕ್ಷವೂ ಇಲ್ಲ ಎಂಬುದು ಖಚಿತವಾಗಿರುವುದರಿಂದ  ಯಡಿಯೂರಪ್ಪ ಕೂಡ ಹೊಸ ದಾಳಗಳನ್ನು ಉರುಳಿಸುತ್ತಿದ್ದಾರೆ.

ಅನರ್ಹ ಶಾಸಕರು ಶಾಸಕರ ಬಿಜೆಪಿ ಸೇರ್ಪಡೆ ಅಥವಾ ಟಿಕೆಟ್ ನೀಡುವ ಸಂಬಂಧ ದ್ವಂದ್ವ ಹೇಳಿಕೆಗಳು ಪ್ರಕಟವಾಗುತ್ತಿರುವುದು ನಡೆದಿದೆ. ಇಂತಹ ಸಮಯದಲ್ಲಿ ಅನರ್ಹರ ಬೆನ್ನಿಗೆ ನಿಂತಿರುವುದು ಮುಖ್ಯಮಂತ್ರಿ ಒಬ್ಬರೇ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜಿನಾಮೆ ನೀಡುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಬಲವಿತ್ತು. ಅವರೇ ಶಾಸಕರು ಮುಂಬೈನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು ಎಂಬ  ಹೇಳಿಕೆ ಈಗ ವಿವಾದ ಸೃಷ್ಟಿಸಿದೆ. ಇಂತಹ ಹೇಳಿಕೆ ನೀಡುವ ಮೂಲಕ ಹೈಕಮಾಂಡ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ ತನ್ನ ಸ್ಥಾನವೂ ಭದ್ರವಾಗಿರಬೇಕು. ಮತ್ತೆ ಯಾರೂ ನನ್ನ ವಿರುದ್ಧ ಪಿತೂರಿ ನಡೆಸಬಾರದು ಎಂಬ ಉದ್ದೇಶ ಈ ಹೇಳಿಕೆಯಲ್ಲಿದ್ದಂತಿದೆ.

ಅನರ್ಹ ಶಾಸಕರಿಗೆ ಅಮಿತ್ ಶಾ ಬೆಂಬಲದ ಹೇಳಿಕೆ ಬಿಜೆಪಿಗೆ ಡ್ಯಾಮೇಜ್ ತಂದೊಡ್ಡಲಿದೆ. ಯಡಿಯೂರಪ್ಪ ಅವರಿಗೂ ಬೇಕಾಗಿರುವುದು ಇದೇ. ತನಗೆ ಪದೇ ಪೇದೆ ಕಿರುಕುಳ ಕೊಡುವವರನ್ನು ಸಹಿಸಿಕೊಳ್ಳಲು ಹೇಗೆ ಸಾಧ್ಯ. ಅದೇ ಕಾರಣಕ್ಕೆ ಯಡಿಯೂರಪ್ಪ ಈ ರೀತಿ ಹೇಳಿಕೆ ನೀಡಿ ಚುಚ್ಚುತ್ತಿದ್ದಾರೆ. ಇಲ್ಲದಿದ್ದರೆ ಅಧಿಕಾರದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಬಿಜೆಪಿಯ ವೀರಶೈವ ಲಿಂಗಾಯತರು ಹೇಳುವ ಮಾತು. ಅಂತೂ ಯಡಿಯೂರಪ್ಪ ಆಟ ಎಷ್ಟು ದಿನ ನೋಡಬೇಕು.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here