Homeಕರ್ನಾಟಕಮತ್ತೆ ಮಾರ್ದನಿಸಿದ ನೈಸ್ ಹಗರಣ; ಏನಿದರ ಒಳ ಹುನ್ನಾರ?

ಮತ್ತೆ ಮಾರ್ದನಿಸಿದ ನೈಸ್ ಹಗರಣ; ಏನಿದರ ಒಳ ಹುನ್ನಾರ?

- Advertisement -
- Advertisement -

ನೈಸ್ ಮತ್ತು ಬಿಎಂಐಸಿ ಯೋಜನೆಗೆ 28 ವರ್ಷಗಳ ಹಿಂದೆ ಒಪ್ಪಿಗೆ ನೀಡಲಾಯ್ತು. 25 ವರ್ಷಗಳ ಹಿಂದೆ ಈ ಕುರಿತು ಒಪ್ಪಂದವಾಯಿತು. ಇಷ್ಟೆಲ್ಲಾ ವರ್ಷಗಳಲ್ಲಿ ಎಷ್ಟು ನೀರು ಹರಿಯತೋ, ಆದರೆ ರಸ್ತೆ ನಿರ್ಮಾಣವಾಗುವುದರ ಬದಲು ಇದರ ಸುತ್ತ ಹಗರಣಗಳು ಸುತ್ತಿಕೊಂಡಿದ್ದೇ ಹೆಚ್ಚು. ಈಗ ನೈಸ್ ಮತ್ತೆ ಮಾದನಿಸಿದ್ದು, ಒಪ್ಪಂದದ ನಿಯಮಗಳನ್ನು ಪದೇಪದೇ ಉಲ್ಲಂಘಿಸಿರುವುದರಿಂದ ನೈಸ್ ರಸ್ತೆ ಮತ್ತು ಅದರ ಸುತ್ತಲಿನ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ತನಿಖೆ ನಡೆಸಬೇಕೆಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಒತ್ತಾಯಿಸುತ್ತಿವೆ.

ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿಯವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ “ಅಕ್ರಮಗಳ ಆಗರವಾಗಿರುವ ನೈಸ್ ಯೋಜನೆಯ ಭೂಮಿಯನ್ನು ಸರ್ಕಾರ ಸಂಪೂರ್ಣವಾಗಿ ವಾಪಸ್ ಪಡೆಯಬೇಕು. ರಸ್ತೆ ಕಾಮಗಾರಿಗೆ ರೈತರಿಂದ ಸ್ವಾಧೀನಕ್ಕೆ ಪಡೆದ ಭೂಮಿಯನ್ನು ಮಾರಾಟ ಮಾಡಿ ರಿಯಲ್ ಎಸ್ಟೇಟ್ ದಂಧೆ ನಡೆಸಲಾಗಿದೆ. ಈ ಕುರಿತು ಸಿಬಿಐ ತನಿಖೆಗೆ ವಹಿಸಬೇಕು. ಜಂಟಿ ಸದನ ಸಮಿತಿಯ ವರದಿಯ ಶಿಫಾರಸ್ಸಿನ ಅನ್ವಯ ಯೋಜನೆಯನ್ನು ಸಂಪೂರ್ಣ ಮುಟ್ಟುಗೋಲು ಹಾಕಿಕೊಳ್ಳಬೇಕು. ಯೋಜನೆ ರದ್ದುಗೊಳಿಸಿ ರೈತರ ಭೂಮಿಯನ್ನು ಉಳಿಸಬೇಕು. ಟೋಲ್ ಕೂಡ ಹೆಚ್ಚುವರಿಯಾಗಿ ಸಂಗ್ರಹ ಆಗಿದ್ದು, ಅದರ ಲೆಕ್ಕಪರಿಶೋಧನೆ ನಡೆಸಿ ಹಣವನ್ನು ವಸೂಲಿ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.

“ಈಗ ಬ್ರಾಂಡ್ ಬೆಂಗಳೂರು ಎಂದು ಜಪ ಮಾಡುತ್ತಿರುವವರೇ ಹಿಂದೆ ನೈಸ್‌ನೊಳಕ್ಕೆ ನೈಸಾಗಿ ಸೇರಿಕೊಂಡು ಸಹಕಾರ ನೀಡಿದ್ದರು. ಈಗ ಅಧಿಕಾರಕ್ಕೂ ಏರಿದ್ದಾರೆ. ಅದಕ್ಕೆ ಎರಡೂ ಪಕ್ಷಗಳ ವತಿಯಿಂದ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೇವೆ. ಅಲ್ಲದೆ, ನೈಸ್ ರಸ್ತೆಯ ಸುತ್ತಮುತ್ತ ನಮ್ಮ ಪಕ್ಷವೂ ಒಳಗೊಂಡಂತೆ ಬೇರೆ ಯಾವುದೇ ಪಕ್ಷದ ರಾಜಕಾರಣಿಗಳ ಭೂಮಿ ಇದ್ದರೆ ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ” ಎಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್‌ರವರ ಮೇಲೆ ಆರೋಪ ಮಾಡಿದ್ದಾರೆ.

ಏನಿದು ನೈಸ್ ವಿವಾದ? ಈಗ ಇದು ಮತ್ತೆ ಚರ್ಚೆಗೆ ಬರಲು ಕಾರಣವೇನು ಎಂಬುದನ್ನು ತಿಳಿಯಬೇಕಾದರೆ ಈ ಯೋಜನೆಯ ಹುಟ್ಟು, ವಿರೋಧ ಮತ್ತು ನಡೆದುಬಂದ ಹಾದಿಯನ್ನು ಹಿಂದಿರುಗಿ ನೋಡಬೇಕಾಗಿದೆ.

ಮೊದಲ MOU

20 ಫೆಬ್ರವರಿ 1995ರಂದು ಕರ್ನಾಟಕದ ಸಿಎಂ ಆಗಿದ್ದ ಹೆಚ್.ಡಿ ದೇವೇಗೌಡರು ಆಗಿನ ಮ್ಯಾಸಚೂಸೆಟ್ಸ್‌ನ ಗವರ್ನರ್ ವಿಲಿಯಂ ಎಫ್. ವೆಲ್ಡ್‌ರನ್ನು ಭೇಟಿಯಾಗಿ ನೈಸ್ ಯೋಜನೆಯ ಬಗ್ಗೆ ಚರ್ಚಿಸಿದರು. ಆಗ ಕರ್ನಾಟಕ ರಾಜ್ಯದಲ್ಲಿ ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳುವಲ್ಲಿ ಕಲ್ಯಾಣಿ ಗ್ರೂಪ್ ಆಫ್ ಕಂಪನೀಸ್, ಎಸ್‌ಎಬಿ ಎಂಜಿನಿಯರಿಂಗ್ ಅಂಡ್ ಕನ್ಸ್‌ಟ್ರಕ್ಷನ್ ಕಂಪನಿಗಳ ಸಹಯೋಗದೊಂದಿಗೆ ಮ್ಯಾಸಚೂಸೆಟ್ಸ್ ರಾಜ್ಯದಲ್ಲಿ ನೋಂದಾಯಿಸಲಾದ ವನಾಸ್ಸೆ ಹ್ಯಾಂಗೆನ್ ಬ್ರಸ್ಟ್ಲಿನ್ ಇಂಕ್ ಕಂಪನಿ ಒಳಗೊಂಡಿರುವ ಮೂರು ಸಂಸ್ಥೆಗಳ ಒಕ್ಕೂಟದ ಹಿತಾಸಕ್ತಿಗಳ ಒಪ್ಪಂದ (MOU) ಏರ್ಪಟ್ಟಿತು. ಆಗ SAB ಕಂಪನಿ ಪರವಾಗಿ ಅಶೋಕ್ ಖೇಣಿ, ಕಲ್ಯಾಣಿ ಗ್ರೂಪ್ ಆಫ್ ಕಂಪನೀಸ್ ಪರವಾಗಿ ಅವರ ಸೋದರ ಸಂಬಂಧಿ ಬಿ.ಎನ್ ಕಲ್ಯಾಣಿ ಸಹಿ ಹಾಕಿದರೆ ಕರ್ನಾಟಕ ಸರ್ಕಾರದ ಪರವಾಗಿ PWD ಇಲಾಖೆಯ ಕಾರ್ಯದರ್ಶಿ ಸಿ.ಆರ್.ರಮೇಶ್ ಸಹಿ ಹಾಕಿದ್ದರು. ಸಿಎಂ ದೇವೇಗೌಡ ಮತ್ತು ವೆಲ್ಡ್ ಅವರು ಈ ಎಂಒಯುಗೆ ಸಾಕ್ಷಿಯಾದರು.

ನಂತರ 1996ರಲ್ಲಿ ಅಶೋಕ್ ಖೇಣಿ ಆ ಮೂರು ಸಂಸ್ಥೆಗಳನ್ನು ಒಟ್ಟುಗೂಡಿಸಿ NICE (ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್) ಸಂಸ್ಥೆ ಹುಟ್ಟುಹಾಕಿದರು. 3 ಏಪ್ರಿಲ್ 1997ರಂದು ಅಶೋಕ್ ಖೇಣಿ ಮತ್ತು ರಾಜ್ಯ ಸರ್ಕಾರದ ನಡುವೆ ಫ್ರೇಮ್‌ವರ್ಕ್ ಒಪ್ಪಂದ ಏರ್ಪಟ್ಟು ಹೆದ್ದಾರಿ ಕಾಮಗಾರಿಗಳಿಗೆ ಅನುಮೋದನೆ ದೊರೆಯಿತು ಮತ್ತು 10 ವರ್ಷದಲ್ಲಿ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಯ್ತು. ಆದರೆ ಈ ಸಮಯದಲ್ಲಿ ಒಪ್ಪಂದ ಖೇಣಿ ಪರವಾಗಿತ್ತು. ರಾಜ್ಯ ಸರ್ಕಾರ ಖೇಣಿ ಎದುರು ಸಂಪೂರ್ಣ ತಲೆಬಾಗಿತ್ತು. ಒಪ್ಪಂದದ ಮಧ್ಯಸ್ಥಗಾರರು ಸಹ ಲಂಡನ್ ಮೂಲದವರಾಗಿದ್ದರು ಎಂಬ ದೂರುಗಳು ಕೇಳಿಬಂದಿದ್ದವು. ಮೊದಲಿನಿಂದಲೂ ನೈಸ್ ಸಂಸ್ಥೆಯೊಂದಿಗೆ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಉದಾಹರಣೆಗೆ, ರಾಜ್ಯದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿ ಎಂಒಯು ಮತ್ತು ಫ್ರೇಮ್‌ವರ್ಕ್ ಒಪ್ಪಂದ ಎರಡಕ್ಕೂ ಸಹಿ ಹಾಕಿದ್ದ ಸಿ.ಆರ್.ರಮೇಶ್ ಅವರು ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರ ನೈಸ್‌ಗೆ ಸಲಹೆಗಾರರಾಗಿ ಸೇರಿ ಅವರ ಪರವಾಗಿ ಕೆಲಸ ಮಾಡಿದ್ದರು!

ಒಪ್ಪಂದದ ಪ್ರಕಾರ ಬೆಂಗಳೂರಿನಿಂದ ಮೈಸೂರಿಗೆ 111 ಕಿ.ಮೀಗಳ ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಕ್ಸ್‌ಪ್ರೆಸ್‌ವೇ, ಬೆಂಗಳೂರಿನಲ್ಲಿ ಸಂಪರ್ಕ ರಸ್ತೆಗಳು, ರಿಂಗ್‌ರೋಡ್‌ಗಳು ಮತ್ತು 5 ಕೈಗಾರಿಕಾ ಟೌನ್‌ಶಿಪ್‌ಗಳನ್ನು ಕಟ್ಟಲು 149 ಹಳ್ಳಿಗಳಲ್ಲಿನ 20,193 ಎಕರೆ ಭೂಮಿ ಅಗತ್ಯವಿದೆ ಎನ್ನಲಾಗಿತ್ತು. ಒಂದಷ್ಟು ಸರ್ಕಾರಿ ಭೂಮಿ ಒದಗಿಸಿ, ಭೂಸ್ವಾಧೀನಕ್ಕೆ ಸಹಕಾರ ನೀಡುವುದು ಸರ್ಕಾರದ ಕೆಲಸವಾದರೆ ಟೋಲ್ ಸಂಗ್ರಹ, ಟೌನ್‌ಶಿಪ್‌ಗಳಿಂದ ಆದಾಯ ಪಡೆದು 30 ವರ್ಷಗಳ ನಂತರ ಎಕ್ಸ್‌ಪ್ರೆಸ್‌ವೇಅನ್ನು ಸರ್ಕಾರಕ್ಕೆ ಮರಳಿಸುವುದಾಗಿ ನೈಸ್ ಒಪ್ಪಿತ್ತು. ಆದರೆ 25 ವರ್ಷ ಕಳದರೂ ಬೆಂಗಳೂರು-ಮೈಸೂರು ನಡುವಿನ ಆ ರಸ್ತೆ ನಿರ್ಮಾಣವಾಗಲೇ ಇಲ್ಲ. ಸದ್ಯ ಬೆಂಗಳೂರಿನ ಮಾದಾವರದಿಂದ ಎಲೆಕ್ಟ್ರಾನಿಕ್ ಸಿಟಿಯವರೆಗೆ 41 ಕಿ.ಮೀ ಉದ್ದದ ರಿಂಗ್‌ರೋಡ್ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕೆ 9 ಕಿ.ಮೀ ಸಂಪರ್ಕ ರಸ್ತೆಯು ಹೊಂದಿಕೊಂಡಿದೆ. ಅದು ಬಿಟ್ಟರೆ ಬೆಂಗಳೂರಿನಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಬಿಎಂಐಸಿ ರಸ್ತೆ ಯೋಜನೆ ನೆನೆಗುದಿಗೆ ಬಿದ್ದಿದೆ.

ಭುಗಿಲೆದ್ದ ಹೋರಾಟಗಳು

ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ರಸ್ತೆಗೆ ರೈತರು ಮತ್ತು ಸಾಮಾಜಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಿದರು. ಕರ್ನಾಟಕ ವಿಮೋಚನಾ ರಂಗ ಮೊದಲು ಈ ಹೋರಾಟವನ್ನು ಕೈಗೆತ್ತಿಕೊಂಡಿತ್ತು. ಆ ನಂತರ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್ ದೊರೆಸ್ವಾಮಿಯವರು, ಮಂಡ್ಯದ ಸಿ.ಬಂಧೀಗೌಡರ ನೇತೃತ್ವದಲ್ಲಿ ಒಕ್ಕೂಟಗಳು ರಚನೆಯಾಗಿ ರೈತರ ಜಮೀನುಗಳ ಭೂ ಸ್ವಾಧೀನವನ್ನು ವಿರೋಧಿಸಿ ಪ್ರತಿಭಟಿಸಲಾಯಿತು. ಪರಿಸರ ಅನುಮತಿ ಪಡೆಯಲು ನೈಸ್ ಕಂಪನಿ ಪಬ್ಲಿಕ್ ಹಿಯರಿಂಗ್ ನಡೆಸಲು ಮುಂದಾಗಿತ್ತು. ಆದರೆ ಯಾವುದೇ ಪೂರ್ವ ಮಾಹಿತಿ ಒದಗಿಸಿಲ್ಲ ಮತ್ತು ಕನ್ನಡದಲ್ಲಿ ಮಾಹಿತಿಯಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಆ ಸಭೆಗಳು ನಡೆಯದಂತೆ ತಡೆದರು. ಆ ಸಂದರ್ಭದಲ್ಲಿ ಬೇರೆಬೇರೆ ಕಾರಣಗಳಿಗೆ ರೈತ ಸಂಘದಲ್ಲಿ ಭಿನ್ನಾಭಿಪ್ರಾಯ ಮೂಡಿ ಪ್ರೊ.ನಂಜುಂಡಸ್ವಾಮಿ ಮತ್ತು ಕೆ.ಎಸ್ ಪುಟ್ಟಣ್ಣಯ್ಯನವರ ಎರಡು ಬಣಗಳಾಗಿದ್ದವು. ಆದರೂ ಆ ಇಬ್ಬರೂ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿ ಈ ಪಬ್ಲಿಕ್ ಹಿಯರಿಂಗ್‌ಗಳನ್ನು ವಿರೋಧಿಸಿ ಹಿಮ್ಮೆಟ್ಟಿಸಿದರು. ಬಿಎಂಐಸಿ ವಿರೋಧಿ ಒಕ್ಕೂಟ ಅಸ್ತಿತ್ವಕ್ಕೆ ಬಂದು ಹಲವಾರು ಜಾಥಾಗಳು ನಡೆದವು.

1999ರಲ್ಲಿ ಕರ್ನಾಟಕದಲ್ಲಿ ಎಸ್.ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆಗ ಖೇಣಿಗೆ ಯಾವುದೋ ರೀತಿಯಲ್ಲಿ ಸಂಬಂಧ ಎನ್ನಲಾದ ಬಿ.ಎಸ್ ಪಾಟೀಲ್ ಎಂಬುವರು ಮುಖ್ಯ ಕಾರ್ಯದರ್ಶಿಗಳಾಗಿದ್ದರು. ಅವರು ನೈಸ್ ಪರವಾಗಿ ನಿಂತು 177 ಹಳ್ಳಿಗಳನ್ನು ಸೇರಿಸಿ ಬಿಎಂಐಸಿ ಪ್ಲಾನಿಂಗ್ ಅಥಾರಿಟಿಯನ್ನು ಸ್ಥಾಪಿಸಿದರು. ಆಗ ಈ ಭಾಗದಲ್ಲಿ ಯಾರೇ ಅಭಿವೃದ್ಧಿ ಚಟುವಟಿಕೆ, ಲೇಔಟ್ ಮಾಡುವುದಾದರೆ ಆ ಅಥಾರಿಟಿಯ ಅನುಮತಿ ಪಡೆಯಬೇಕೆಂದು ನಿಯಮ ರೂಪಿಸಲಾಗಿತ್ತು. ಇದು ಆ ಭಾಗದ ಜನರನ್ನು ರೊಚ್ಚಿಗೇಳುವಂತೆ ಮಾಡಿತ್ತು. ಹಾಗಾಗಿ ಬೆಂಗಳೂರು-ಮೈಸೂರು ರಸ್ತೆ ಯೋಜನೆಗೆ ತಡೆ ಬಿತ್ತು.

ಆದರೆ ಬೆಂಗಳೂರಿನ ಸುತ್ತ ಈ ಯೋಜನೆಗೆ ಹೆಚ್ಚಿನ ಪ್ರತಿರೋಧವಿರಲಿಲ್ಲ. ಜನ ನೈಸ್‌ಗಾಗಿ ತಮ್ಮ ಜಮೀನು ಮಾರಲು ಸಿದ್ಧರಿದ್ದರು ಮತ್ತು ಹೋರಾಟಗಳನ್ನು ಟೀಕಿಸುತ್ತಿದ್ದರು. ಹಾಗಾಗಿ ಬೆಂಗಳೂರಿನಲ್ಲಿ 41 ಕಿ.ಮೀ ಉದ್ದದ ರಿಂಗ್ ರಸ್ತೆ ಕಾಮಗಾರಿ ನಡೆಯತ್ತಿತ್ತು. ಅಲ್ಲದೇ ಡಿ.ಕೆ ಶಿವಕುಮಾರ್ ಖೇಣಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಯೋಜನೆಯ ಪರವಾಗಿದ್ದರು ಎಂಬ ಆರೋಪಗಳಿದ್ದವು. ಅಲ್ಲದೆ ಅದೇ ಸಂದರ್ಭದಲ್ಲಿ ಅವರು ಹೆಚ್.ಡಿ ದೇವೇಗೌಡರನ್ನು ಎದುರು ಹಾಕಿಕೊಂಡಿದ್ದರು. 1999ರಲ್ಲಿ ಸಾತನೂರಿನಲ್ಲಿ ಹೆಚ್.ಡಿ ಕುಮಾರಸ್ವಾಮಿಯವರನ್ನು ಸೋಲಿಸಿದ್ದ ಡಿಕೆಶಿ 2002ರಲ್ಲಿ ನಗರಾಭಿವೃದ್ದಿ ಖಾತೆಯ ಸಚಿವರು ಮತ್ತು ರಾಜ್ಯ ನಗರ ಯೋಜನಾ ಮಂಡಳಿಯ ಅಧ್ಯಕ್ಷರಾಗಿದ್ದರು. ಆಗ ಬಿಎಂಐಸಿ ಪ್ಲಾನಿಂಗ್ ಅಥಾರಿಟಿಯ ಅಧ್ಯಕ್ಷರೂ ಆಗಿದ್ದರಿಂದ ನೈಸ್ ಏಳಿಗೆಯಲ್ಲಿ ಅವರ ಹಿತಾಸಕ್ತಿಗಳು ಇವೆ ಎಂಬ ಆರೋಪಗಳಿದ್ದವು. 2002ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಎದುರು ಸೋತಿದ್ದ ಡಿಕೆಶಿ 2004ರಲ್ಲಿ ದೇವೇಗೌಡರ ವಿರುದ್ಧ ತೇಜಸ್ವಿನಿಗೌಡ ಎಂಬ ಮಹಿಳೆಯನ್ನು ಅಭ್ಯರ್ಥಿಯನ್ನಾಗಿಸಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ದೇವೇಗೌಡರನ್ನು ಸೋಲಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು.

ದೇವೇಗೌಡರ ರಂಗಪ್ರವೇಶ

ಈ ನಡುವೆ ಇಡೀ ಯೋಜನೆಗೆ ಬೇಕಿದ್ದ 20,193 ಎಕರೆ ಭೂಮಿ ಸಾಲುವುದಿಲ್ಲ ಎಂದು ಹೇಳಿ ಅದನ್ನು 27,000 ಎಕರೆಗಳಿಗೆ ವಿಸ್ತರಿಸಲಾಯಿತು. ಹೆಚ್ಚುವರಿ ಭೂಮಿಯನ್ನು ಬೆಂಗಳೂರು ಸುತ್ತಲೇ ಸ್ವಾದೀನ ಪಡಿಸಿಕೊಳ್ಳಲು ಮತ್ತು ರಸ್ತೆ ಜೋಡಣೆಯಂತಹ ವಿವಿಧ ಕಾಮಗಾರಿಗಳಿಗೆ ನೈಸ್ ಮುಂದಾಯಿತು. ಆಗ ಬೆಂಗಳೂರು ಸುತ್ತಮುತ್ತಲೂ ಜಮೀನು ಕಳೆದುಕೊಳ್ಳುವವರು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಅಷ್ಟರಲ್ಲಿ ಕೆಲ ಜಮೀನುಗಳು ಬಿಬಿಎಂಪಿ ವಲಯಕ್ಕೆ ಬಂದು ಅವುಗಳ ದರ ಗಗನಕ್ಕೇರಿತ್ತು. ಅಂತಹ ಸಂದರ್ಭದಲ್ಲಿ ನೈಸ್ ಭೂಸ್ವಾಧೀನಕ್ಕೆ ಮುಂದಾದಾಗ ತೀವ್ರ ವಿರೋಧ ವ್ಯಕ್ತವಾಯಿತು. ಮುಖ್ಯವಾಗಿ ಕೆ.ಇ.ಬಿ ಇಂಜಿನಿಯರ್ ಆಗಿದ್ದ ವಿಜಯ್ ಕುಮಾರ್ ಎಂಬುವವರ ಜಮೀನು ಸ್ವಾಧೀನಕ್ಕೆ ನೈಸ್ ಮುಂದಾದಾಗ, ಅವರು ಹಲವರ ಜೊತೆಗೂಡಿ ತಮ್ಮ ಜಮೀನು ಉಳಿಸುವಂತೆ ದೇವೇಗೌಡರ ಮೊರೆ ಹೋದರು. ಈ ಹೊತ್ತಿಗೆ ದೇವೇಗೌಡರು ಮತ್ತು ಖೇಣಿ-ಡಿಕೆಶಿ ನಡುವೆ ಹಲವಾರು ಭಾರೀ ತಿಕ್ಕಾಟಗಳು ನಡೆದಿದ್ದವು. ಈ ಎಲ್ಲದರ ಪರಿಣಾಮ ದೇವೇಗೌಡರು ನೈಸ್ ವಿರುದ್ಧದ ಹೋರಾಟಕ್ಕೆ ಧುಮುಕಿದರು.

ಇದನ್ನೂ ಓದಿ: ಭಾವೀ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬ: ಸರ್ಕಾರಕ್ಕೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಬೆಂಗಳೂರಿನಲ್ಲಿ ದೇವೇಗೌಡರ ನೇತೃತ್ವದಲ್ಲಿ ಭೂಸ್ವಾಧೀನ ವಿರೋಧಿಸಿ ಹಲವಾರು ಹೋರಾಟಗಳು ನಡೆದಿದ್ದವು. ಒಂದು ಪ್ರತಿಭಟನೆಗಂತೂ ಅಂದು ಸಿಎಂ ಆಗಿದ್ದ ಸ್ವತಃ ಧರ್ಮಸಿಂಗ್ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಮನವಿ ಆಲಿಸಿದ್ದರು. ಹಾಗಾಗಿ ಅನಿವಾರ್ಯವಾಗಿ ಬಿಎಂಐಸಿ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಹಿಂದೆ ಸರಿಯಿತು. ಬದಲಿಗೆ ಬೆಂಗಳೂರಿನ ರಿಂಗ್ ರೋಡ್ ಅಭಿವೃದ್ಧಿಪಡಿಸಿ ಟೋಲ್ ವಸೂಲಿ ಶುರು ಮಾಡಿಕೊಂಡಿತು. ಈ ವೇಳೆಗಾಗಲೇ ಬಿಎಂಐಸಿ ವಿರುದ್ಧ ಕೋರ್ಟ್‌ಗಳಲ್ಲಿ ಸುಮಾರು 550 ಪ್ರಕರಣಗಳು ದಾಖಲಾಗಿದ್ದವು. ಐದಾರು ಪ್ರಕರಣಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.

ಜಂಟಿ ಸದನ ಸಮಿತಿ ರಚನೆ

2013ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮತ್ತೆ ಖೇಣಿ ವಿರುದ್ಧದ ಪ್ರತಿಭಟನೆಗಳು ಆರಂಭವಾಗಿದ್ದವು. ನಗರದ ಸುತ್ತ ವರ್ತುಲ ರಸ್ತೆ ಕೇವಲ 40-50 ಕಿ.ಮೀ ಮಾತ್ರ ನಿರ್ಮಾಣಗೊಂಡಿದೆ. ರಸ್ತೆ ನಿರ್ಮಾಣಕ್ಕಿಂತ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನೈಸ್ ನಿರತವಾಗಿದೆ ಎಂಬ ಆರೋಪ ಶಾಸಕರು, ಸಾರ್ವಜನಿಕರು, ಭೂಮಿ ಕಳೆದುಕೊಂಡ ರೈತರದ್ದಾಗಿತ್ತು. ಈ ಮಧ್ಯೆ ನೈಸ್ ಕಂಪನಿಯ ವಿಪರೀತ ಟೋಲ್ ಹೇರಿಕೆಯೂ ಆಕ್ರೋಶಕ್ಕೆ ತುತ್ತಾಗಿತ್ತು. ಸಹಸ್ರಾರು ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬರುತ್ತಲೇ ಇದ್ದದ್ದರಿಂದಾಗಿ ಸಿದ್ದರಾಮಯ್ಯನವರ ಸರ್ಕಾರ ಸಚಿವ ಟಿ.ಬಿ ಜಯಚಂದ್ರರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಿದರು.

ಸಮಿತಿಯು 2016ರಲ್ಲಿ 350 ಪುಟಗಳ ವರದಿ ನೀಡಿ ಒಪ್ಪಂದದಲ್ಲಿರುವ 30 ಷರತ್ತುಗಳಲ್ಲಿ 26 ಷರತ್ತುಗಳನ್ನು ನೈಸ್ ಸಂಸ್ಥೆ ಉಲ್ಲಂಘಿಸಿದೆ, ರಸ್ತೆಗೆ ಮಾತ್ರವಲ್ಲದೇ ವಾಣಿಜ್ಯ ಉದ್ದೇಶಕ್ಕೆ ಜಮೀನು ಸ್ವಾಧೀನ ಪಡಿಸಿಕೊಂಡಿದೆ ಮತ್ತು ಮಾರುಕಟ್ಟೆ ದರಕ್ಕಿಂತ ಕಡಿಮೆ ಹಣವನ್ನು ರೈತರಿಗೆ ನೀಡಲು ಮುಂದಾಗಿದೆ ಎಂದಿತ್ತು.

ಕಂಪನಿಯ ವಶದಲ್ಲಿರುವ 11,600 ಎಕರೆ ಹೆಚ್ಚುವರಿ ಜಮೀನನ್ನು ವಶಕ್ಕೆ ಪಡೆಯಬೇಕು, ಕಂಪನಿ ಅಕ್ರಮವಾಗಿ ಸಂಗ್ರಹಿಸಿರುವ 1,350 ಕೋಟಿ ರೂ ಟೋಲ್ ಶುಲ್ಕವನ್ನು ಮರು ವಸೂಲಿ ಮಾಡಬೇಕು ಮತ್ತು ಉನ್ನತ ತನಿಖೆಗೆ ಆದೇಶಿಸಬೇಕೆಂಬ ಶಿಫಾರಸ್ಸುಗಳು ವರದಿಯಲ್ಲಿದ್ದವು. ಆದರೆ ಸಿದ್ದರಾಮಯ್ಯನವರ ಸರ್ಕಾರವಾಗಲೀ, ಆ ನಂತರ ಬಂದ ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರವಾಗಲೀ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಮತ್ತೆ ಭುಗಿಲೆದ್ದ ನೈಸ್ ಹಗರಣ ವಿವಾದ- ಎಚ್‌ಡಿಕೆ-ಬೊಮ್ಮಾಯಿ ಉದ್ದೇಶವೇನು?

ರಾಜ್ಯದಲ್ಲಿ 2023ರಲ್ಲಿ ಬಹುಮತದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮತ್ತೆ ನೈಸ್ ಹಗರಣದ ಚರ್ಚೆ ಮುನ್ನಲೆಗೆ ಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಈ ಬಗ್ಗೆ ಹೋರಾಟ ನಡೆಸಲು ಸಿದ್ಧವಾಗಿವೆ. ಇದಕ್ಕೆ ಮುಖ್ಯ ಕಾರಣ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರನ್ನು ಕಟ್ಟಿ ಹಾಕುವುದೇ ಆಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ನಂ.2 ಸ್ಥಾನದಲ್ಲಿರುವ ಡಿ.ಕೆ ಶಿವಕುಮಾರ್ ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಸಾಕಷ್ಟು ಓಡಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರ ಹಂಚಿಕೆಯ ಪ್ರಕಾರ ಸಿಎಂ ಗಾದಿಗೇರುವ ಆಕಾಂಕ್ಷೆಯಲ್ಲಿದ್ದಾರೆ. ಅಷ್ಟು ಮಾತ್ರವಲ್ಲದೇ ಬಿಜೆಪಿ ಆಡಳಿತದಲ್ಲಿ ನಡೆದ ಪಿಎಸ್‌ಐ ಹಗರಣ, ಬಿಟ್‌ಕಾಯಿನ್ ಹಗರಣಗಳ ತನಿಖೆಗೆ ಉತ್ಸುಕರಾಗಿದ್ದಾರೆ. ಇದು ಬೊಮ್ಮಾಯಿಯವರಿಗೆ ಬೇಕಾಗಿಲ್ಲ. ಇನ್ನು ಒಕ್ಕಲಿಗ ಸಮುದಾಯದ ಡಿಕೆಶಿ ಸಿಎಂ ಆಗುವುದು ಕುಮಾರಸ್ವಾಮಿಯವರಿಗೆ ಬೇಕಾಗಿಲ್ಲ. ಹಾಗಾಗಿ ಅವರಿಬ್ಬರು ನೈಸ್ ಗುಮ್ಮ ತೋರಿಸಲು ಮುಂದಾಗಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್, “ನೈಸ್ ಯೋಜನೆ ಆರಂಭವಾಗಿದ್ದು ಹೆಚ್.ಡಿ ದೇವೇಗೌಡರು ಸಿಎಂ ಆಗಿದ್ದಾಗ. ಇನ್ನು ಯೋಜನೆಯಲ್ಲಿ ಅಕ್ರಮವಾಗಿದ್ದರೆ ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಏಕೆ ತನಿಖೆ ಮಾಡಲಿಲ್ಲ? ನಾವು ಹಗರಣ ಮಾಡಿಲ್ಲ. ನಾವು ಕಾನೂನುಬಾಹಿರವಾಗಿ ನಡೆದುಕೊಂಡಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಿ” ಎಂದು ಸವಾಲು ಹಾಕಿದ್ದಾರೆ.

“ನಾನು 2018ರಲ್ಲಿ ಸಿಎಂ ಆಗಿದ್ದಾಗ ನೈಸ್ ವಿರುದ್ಧ ಕ್ರಮ ಕೈಗೊಳ್ಳದಂತೆ ಕಾಂಗ್ರೆಸ್ ಕಟ್ಟಿ ಹಾಕಿತ್ತು” ಎಂಬ ಕುಮಾರಸ್ವಾಮಿಯವರ ಆರೋಪವನ್ನು ಸಿಎಂ ಸಿದ್ದರಾಮಯ್ಯನವರು ತಳ್ಳಿ ಹಾಕಿದ್ದಾರೆ. “ಕಾಂಗ್ರೆಸ್ ಕೈ ಕಟ್ಟಿ ಹಾಕಿತ್ತು ಎಂಬುದು ಸುಳ್ಳು. ಸಾಲಮನ್ನಾ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಬೆಂಬಲ ನೀಡಲಿಲ್ಲವೇ? ಕಾಂಗ್ರಸ್ ಕೈಕಟ್ಟಿ ಹಾಕಿತ್ತು ಎಂದು ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದರೆ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಆದರೂ ಸಿದ್ದರಾಮಯ್ಯನವರಿಗೂ ಡಿಕೆಶಿ ಸಿಎಂ ಆಗುವುದು ಬೇಕಿಲ್ಲದಿರುವುದರಿಂದ ನೈಸ್ ಹಗರಣವನ್ನು ಅವರೂ ಸಹ ಬಳಸಿಕೊಳ್ಳಬಹುದು ಎಂಬ ಆರೋಪಗಳಿವೆ.

ಒಟ್ಟಿನಲ್ಲಿ ಸರ್ಕಾರಗಳು, ಅಲ್ಲಿನ ಅಧಿಕಾರಗಳು ಶಾಮೀಲಾದರೆ ಹೇಗೆ ಜನರ ಭೂಮಿ ಬಂಡವಾಳಿಗರ ಪಾಲಾಗುತ್ತದೆ? ಬಂಡವಾಳಶಾಹಿಗಳು ಕಾನೂನುಗಳನ್ನು ಹೇಗೆ ಗಾಳಿಗೆ ತೂರಿ ದೋಚುತ್ತಾರೆ ಎಂಬುದಕ್ಕೆ ನೈಸ್ ಕರ್ಮಕಾಂಡ ತಾಜಾ ಉದಾಹರಣೆಯಾಗಿದೆ. ಸಾವಿರಾರು ಎಕರೆ ಭೂಮಿ ಲಪಟಾಯಿಸಿರುವ ನೈಸ್ ಪ್ರತಿನಿತ್ಯ ಟೋಲ್ ಲೂಟಿಯನ್ನು ಸಹ ಮಾಡುತ್ತಿದೆ. ಆದರೂ ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರ ಬಂದರೂ ಕ್ರಮ ತೆಗೆದುಕೊಳ್ಳಲು ಮುಂದಾಗದೆ ತಮ್ಮತಮ್ಮ ರಾಜಕೀಯ ಲಾಭಗಳಿಗೆ ಅದನ್ನು ಬಳಸಿಕೊಳ್ಳುತ್ತಿರುವುದು ದುರಂತ. ಖೇಣಿ ಮಾತ್ರವಲ್ಲದೆ ಇಂತಹ ಎಷ್ಟೋ ಉದ್ಯಮಿಪತಿಗಳು ಜನರಿಗೆ ವಂಚಿಸುತ್ತಿದ್ದಾರೆ ಎಂಬುದರ ಕುರಿತು ಎಚ್ಚೆತ್ತುಕೊಂಡು ಹೋರಾಟ ರೂಪಿಸುವ ಜವಾಬ್ದಾರಿ ಪ್ರಜ್ಞಾವಂತರ ಮೇಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

10 ವರ್ಷ ಅಧಿಕಾರದಲ್ಲಿದ್ದು, ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಿದ್ದರೆ ಅವರು ಮತ್ತೆ ಅಧಿಕಾರಕ್ಕೆ ಬರಬಾರದು:...

0
10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಕೇಸರಿ ಪಕ್ಷವು 'ಹಿಂದೂಗಳು ಅಪಾಯದಲ್ಲಿದ್ದಾರೆ' (ಹಿಂದೂ ಖತ್ರೆ ಮೇ) ಎಂದು ಹೇಳುವುದನ್ನು ಮುಂದುವರಿಸಿದರೆ, ಪಕ್ಷ ಅಧಿಕಾರಕ್ಕೆ ಮರಳುವ ಅಗತ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ, ಅಂತಹ ಪಕ್ಷ ಅಧಿಕಾರಕ್ಕೆ...