Homeಅಂಕಣಗಳುಜೆಎನ್‍ಯು, ಜಾಮಿಯಾ ಮತ್ತು ಬೀದರ್‌ ಪ್ರಕರಣ: ನಮ್ಮ ಪೊಲಿಸರು ಹಿಂಗ ಯಾಕ ಅದಾರ?

ಜೆಎನ್‍ಯು, ಜಾಮಿಯಾ ಮತ್ತು ಬೀದರ್‌ ಪ್ರಕರಣ: ನಮ್ಮ ಪೊಲಿಸರು ಹಿಂಗ ಯಾಕ ಅದಾರ?

- Advertisement -
- Advertisement -

ಎಲ್ಲಾ ಮುಗದ ಮ್ಯಾಲ ಬರತಾರ. ಬೇಕಾದವರನ್ನ ಸಟಕ್ಕನ ಹಿಡೀತಾರ. ಬ್ಯಾಡಾದವರು ಕಣ್ಣೆದುರಿಗೆ ಇದ್ದರೂ ನೋಡದಂಗ ಇರತಾರ. ಎಲ್ಲಾ ಗೊತ್ತಿದ್ದೂ ತಪ್ಪು ಮಾಡತಾರೋ, ಅಥವಾ ಅವರಿಗೆ ತಿಳಿಯಂಗಿಲ್ಲೋ? ಸ್ವಂತ ಬುದ್ಧಿಯಿಂದ ಮಾಡತಾರೋ ಅಥವಾ ಯಾರದರ ಒತ್ತಡದಾಗ ಮಾಡತಾರೋ?

ಈ ಪ್ರಶ್ನೆಗಳಿಗೆ ಉತ್ತರ ಸರಳ. ಅವರು ದಡ್ಡರೇನಲ್ಲ. ಕಾಲಕ್ಕೆ ತಕ್ಕ ಹಂಗ ಬದಲಾಗೋ ಬುದ್ಧಿವಂತರು. ಆದರ ಅವರಿಗೆ ಸ್ವತಂತ್ರ ಇಲ್ಲ. ಅವರು ಆಳುವವರ ಹಂಗಿಗೆ ಬಿದ್ದವರು. ರಾಜಕೀಯ ಕಾರಣಕ್ಕಾಗಿ ನಿರ್ಧಾರ ಬದಲಿಸೋರು. ಅವರ ಕೆಲಸ ವೃತ್ತಿಪರತೆಗೆ ತಕ್ಕಂಗ ಅಲ್ಲ. ಅವರ ನಿಯತ್ತು ವಸ್ತು ನಿಷ್ಠ ಅಲ್ಲ. ವ್ಯಕ್ತಿ ನಿಷ್ಠ.
ಯಾಕ ಹಿಂಗ?

ಯಾಕಂದರ ಅವರು ರಾಜಕಾರಣಿಗಳ ಮುಲಾಜಿನ್ಯಾಗ ಇರತಾರ. ಅವರ ವರ್ಗಾವಣೆ- ನೇಮಕ- ಬದಲಾವಣೆಗೆ ಅವರು ಅಧಿಕಾರಿಗಳ ಕಡೆ ಹೋಗಂಗಿಲ್ಲ, ಎಮ್ಮೆಲ್ಲೆ ಸಾಹೇಬರ ಕಡೆ ಹೋಗತಾರ. ಅವರು ಹೂಂ ಅಂದರ ಇರತಾರ, ಇಲ್ಲಾ ಅಂದರ ಹೋಗತಾರ. ಅವರಿಗೆ ಬೇಕಾದಲ್ಲೆ, ಬೇಕಾಷ್ಟು ದಿನಾ ಇರತಾರ. ಅವರ ಮನಸು ತಗದರ ಹೋಗತಾರ.

ಹಿಂಗಿರುವಾಗ ಶಾಸಕರು ತಮ್ಮ ಕ್ಷೇತ್ರದ ಅನಭಿಷಕ್ತ ದೊರೆಯಾಗತಾರ. ದ್ವೇಷದ ರಾಜಕಾರಣ ಮಾಡತಾರ. ಬೇಕಾದವರನ್ನ ಒದ್ದ ಒಳಗ ಹಾಕಸತಾರ. ಬ್ಯಾಡಾದವರನ್ನ ಊರಾಗ ಮೆರಸತಾರ. ಒಮ್ಮೆ ಏನಾತಪಾ ಅಂದರ ಒಬ್ಬ ಪ್ರಭಾವಿ ರಾಜಕಾರಣಿಯ ಕ್ಷೇತ್ರದೊಳಗ ಒಂದು ಅತ್ಯಾಚಾರ ಪ್ರಕರಣ ಆತು. ಅದರ ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಬ್ಯಾರೆ ಬ್ಯಾರೆ ಕೋಮಿನವರು ಇದ್ದರು. ಆರೋಪಿ ಶಾಸಕರ ಕೋಮಿನವರು ಆಗಿದ್ದರು. ಮುಂದ ಜಗಳ ಆಗತದ ಅಂತ ಹೇಳಿ ಶಾಸಕರು ತಲಿ ಓಡಿಸಿದರು. ಪೊಲೀಸ ಇನ್ಸಪೆಕ್ಟರ್‍ನ ಕರದು ಪ್ರಕರಣ ಬದಲಾವಣೆ ಮಾಡಿಸಿದರು. ಅತ್ಯಾಚಾರವನ್ನ ಗುಂಪು ಅತ್ಯಾಚಾರ ಅಂತ ಬದಲಾಯಿಸಲಾತು. ಸಂತ್ರಸ್ತೆಯ ಜಾತಿಯ ಹುಡುಗನೊಬ್ಬನ ಹೆಸರು ಅದರಾಗ ಸೇರಿಸಲಾಯಿತು. ಸಾರ್ವಜನಿಕ ಶಾಂತಿಗೆ ಭಂಗ ಬರಲಾರದಂಗ ಮಾಡೇವಿ ಅಂತ ಶಾಸಕರು ಹೇಳಿಕೊಂಡು ಅಡ್ಡಾಡಿದರು. ಸತ್ಯ ಏನಂದರ ಹೊಸದಾಗಿ ಹೆಸರು ಸೇರಿಸಿದ ಹುಡುಗ ಆ ಊರು ಬಿಟ್ಟು 20 ವರ್ಷ ಆಗಿತ್ತು. ಆತ ಕೆಲಸ ಹುಡುಕಿಕೊಂಡು ಬಾಂಬೆಗೆ ಹೋಗಿದ್ದ. ಅವನಿಗೆ ಈ ಪ್ರಕರಣದ ಬಗ್ಗೆ ಗೊತ್ತ ಇರಲಿಲ್ಲ.

ಆತ ಪ್ರಕರಣ ನಡದ ದಿವಸ ಊರಾಗ ಇರಲಿಲ್ಲ ಅಂದದ್ದಕ್ಕ, ಮತ್ತು ಇತರ ಕಾರಣಗಳಿಗೆ ಆ ಪ್ರಕರಣ ಬಿದ್ದು ಹೋತು. ನಿಜವಾದ ಆರೋಪಿ ಹೊರಗ ಬಂದ.

ಇಷ್ಟೆಲ್ಲಾ ಯಾಕ ಆತು ಅಂದರ ಆ ಇನ್ಸಪೆಕ್ಟರ್ ಆ ಶಾಸಕರ ಶಿಫಾರಸಿನ ಮೇಲೆ ಆ ಪೊಲೀಸ ಠಾಣೆಗೆ ಬಂದಿದ್ದ. ಆತ ಕಾನೂನಿಗೆ – ವ್ಯವಸ್ಥೆಗೆ- ಹಿರಿಯ ಅಧಿಕಾರಿಗಳ ಸಕಾರಣ ಸಲಹೆಗೆ ತಲೆ ಬಾಗದೇ ತನ್ನನ್ನು ತಂದ ಶಾಸಕರಿಗೆ ತಲೆ ಬಾಗಿದ. ಹಿಂಗ ಮಾಡೋ ಶಿಫಾರಸಿಗೆ ಮಿನಿಟ್ ಸಿಸ್ಟಂ ಅಂತ ಹೆಸರು. ಅದು ಹೋಗದ ಹೊರತು ಆ ಇಲಾಖೆ ಉದ್ಧಾರ ಸಾಧ್ಯ ಇಲ್ಲ ಅಂತ ತಿಳಿದವರ ಅಂಬೋಣ.

ಈ ಶಿಫಾರಸು ಮಾಡಬಾರದು ಅಂತ ಒಂದು ಕಾನೂನು ಅದ. ಅದು ಎಲ್ಲಿಂದ ಬಂತಪಾ ಅಂದರ, ಸುಪ್ರೀಂ ಕೋರ್ಟಿನ ಆದೇಶದಿಂದಾ ಬಂತು.

ಪದ್ಮಶ್ರೀ ಪ್ರಕಾಶ ಸಿಂಗ ಅವರು 1996 ದಾಗ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕರಾಗಿ ನಿವೃತ್ತರಾದರು. ಅದೇ ವರ್ಷ ಅವರು ಸುಪ್ರೀಂಕೋರ್ಟಿನ್ಯಾಗ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು.

ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನಿಂದ 2007ದಾಗ ಒಂದು ತೀರ್ಪು ಬಂತು. ಅದರ ಪ್ರಕಾರ ಪೊಲೀಸ ವ್ಯವಸ್ಥೆಯ ರಾಜಕೀಕರಣ ನಿಲ್ಲಬೇಕು. ಪೊಲೀಸರ ವರ್ಗಾವರ್ಗಿ, ವಿವಿಧ ಸ್ಥಾನಗಳಿಗೆ ನೇಮಕ ಮುಂತಾದವು ಕೇವಲ ಅವರವರ ಸಾಮಥ್ರ್ಯದ ಮ್ಯಾಲ ಇರಬೇಕು. ಅವರ ರಾಜಕೀಯ ನಿಲುವುಗಳಿಗೆ ತಕ್ಕಂಗ ಇರಬಾರದು. ಇದನ್ನ ಸಾಧಿಸಲಿಕ್ಕೆ ವಲಯ ಹಾಗೂ ರಾಜ್ಯ ಮಟ್ಟದಾಗ ಹಿರಿಯ ಅಧಿಕಾರಿಗಳ ಸಮಿತಿ ನೇಮಕ ಮಾಡಬೇಕು, ಮಾನವ ಸಂಪನ್ಮೂಲಕ್ಕ ಸಂಬಂಧಪಟ್ಟಂಗ, ವರ್ಗಾವರ್ಗಿ ಸಂಬಂಧಪಟ್ಟಂಗ ಎಲ್ಲಾ ನಿರ್ಧಾರ ಅವರ ತೊಗೋಬೇಕು ಅಂತ ತೀರ್ಪು ಬಂತು. ಯಾವುದೇ ಅಧಿಕಾರಿನ ಎರಡು ವರ್ಷಕ್ಕಿಂತ ಕಮ್ಮಿ ಸಮಯದಾಗ ವರ್ಗ ಮಾಡಬಾರದು ಅಂತ ಆದೇಶ ಬಂತು.

ಇದನ್ನ ಒಂದು ವರ್ಷದ ತನಕಾ ಕಟ್ಟುನಿಟ್ಟಿನ ಆದೇಶ ಅಂತ ಹೇಳಿ ಪಾಲಸಬೇಕು. ನಂತರ ಇದೇ ಮಾದರಿಯ ಕಾನೂನು ರಾಜ್ಯ ಶಾಸನಸಭೆಯೊಳಗ ಪಾಸು ಮಾಡಬೇಕು ಅಂತ ಆತು. ಅದಕ್ಕ ಕರ್ನಾಟಕದ ಘನ ಸರಕಾರ ಪಟಕ್ಕನ `ಎಸ್ ಸರ್’ ಅಂತ ಹೇಳಿತು. `ಹಂಗ ಮಾಡತೇವಿ’ ಅಂತ ಹೇಳಿ ಬರವಣಿಗೆಯೊಳಗ ಮಾತು ಕೊಟ್ಟಿತು.
ಮೊದಲ ಎರಡು ವರ್ಷ ಅಜಯ ಕುಮಾರ ಸಿಂಗ ಪೊಲೀಸ ಮಹಾ ನಿರ್ದೇಶಕರು ಇದ್ದರು, ಎಸ್‌. ಎಮ್ ಜಾಮದಾರ ಗೃಹ ಇಲಾಖೆ ಕಾರ್ಯದರ್ಶಿ ಇದ್ದರು. ಆವಾಗ ಎಲ್ಲಾ ಸುಪ್ರೀಂಕೊರ್ಟಿನ ಆದೇಶ ಪ್ರಕಾರ ನಡೀತು. ಸಿಂಗ ನಿವೃತ್ತರಾದರು, ಜಾಮದಾರ ಅವರು ವರ್ಗಾವಣೆ ಆದರು. ಆ ನಂತರ ಬಂದ ಹಿರಿಯ ಅಧಿಕಾರಿಗಳಿಗೆ ಅದು ಇಷ್ಟ ಇರಲಿಲ್ಲ. ಅವರು ಮತ್ತ ಮೊದಲಿನ ಹಂಗ ರಾಜಕೀಯ ನಾಯಕರ ಮಾತು ಕೇಳಿ ವರ್ಗಾವಣೆ ಶುರು ಮಾಡಿದರು.

ಈಗ ಮತ್ತ ಹಂಗ ಆಗೇದ. ದೆಹಲಿಯ ಜೆಎನ್‍ಯುದಾಗ, ಜಾಮಿಯಾದಾಗ, ಉತ್ತರ ಪ್ರದೇಶದಾಗ, ಬೀದರಿನ ಶಾಹೀನ ಸಾಲಿ ಪ್ರಕರಣದಾಗ, ಪೊಲೀಸರು ವಸ್ತುನಿಷ್ಠವಾಗಿ ನಡೆದುಕೊಳ್ಳದೇ ವ್ಯಕ್ತಿ ನಿಷ್ಠವಾಗಿ ನಡೆದುಕೊಂಡಿದ್ದಕ್ಕ ಅವರು ತಪ್ಪು ಮಾಡಲಾರದ ಸಜ್ಜನರ ವಿರುದ್ಧವಾಗಿ, ಅಪರಾಧಿಗಳ ಪರವಾಗಿ ನಡಕೊಂಡಾರ.

ಯಾಕಂದರ ನಾವು ಸುಪ್ರೀಂಕೋರ್ಟನ್ನ ನಮಗ ಬೇಕಂದಾಗ ಉಪಯೋಗಿಸತೇವಿ. ನಮಗ ಅನುಕೂಲ ಇದ್ದಾಗ ಪಾಲಸತೇವಿ, ಇಲ್ಲದಾಗ ಬಿಡತೇವಿ ಅದಕ್ಕ ಇಷ್ಟಲ್ಲಾ ರಂಜ್-ತಂಜ್ ಆಗಲಿಕ್ಕೆ ಹತ್ತೇದ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...