ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಗಡಿ ಜಿಲ್ಲೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಂದಿನ ಸಂಪುಟ ಸಭೆಯಲ್ಲಿ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಸೋಮವಾರ ತಿಳಿಸಿದ್ದಾರೆ.
ಪ್ರವಾಹ ಮತ್ತು ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಬೆಳಗಾವಿಯಲ್ಲಿ ಅಧಿವೇಶನಗಳನ್ನು ನಡೆಸಲಾಗಿಲ್ಲ. ಅದರ ಬದಲಿಗೆ ಬೆಂಗಳೂರಿನಲ್ಲಿ ಅಧಿವೇಶನವನ್ನು ನಡೆಸಲಾಗಿತ್ತು. ಗಡಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ 2006 ರಿಂದ ವರ್ಷಕ್ಕೊಮ್ಮೆ ವಿಧಾನಮಂಡಲದ ಅಧಿವೇಶನಗಳನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: ಸರ್ಕಾರದ ಆದೇಶದ ಹೊರತಾಗಿಯೂ ಸ್ಥಳಾಂತರವಾಗದ ಸಕ್ಕರೆ ನಿರ್ದೇಶನಾಲಯ; ಆಯುಕ್ತರು ಹೇಳಿದ್ದೇನು?
ನಿನ್ನೆ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ, “ನಾವು ಚಳಿಗಾಲದ ಅಧಿವೇಶನದ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ಮುಂದಿನ ಸಂಪುಟ ಸಭೆಯಲ್ಲಿ ದಿನಾಂಕವನ್ನು ನಿಗದಿಪಡಿಸಲಾಗುವುದು. ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ” ಎಂದು ಹೇಳಿದ್ದಾರೆ. ಅಂದುಕೊಂಡಂತೆ ನಡೆದರೆ, ಆಪರೇಷನ್ ಕಮಲ ಮೂಲಕ 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬೆಳಗಾವಿಯಲ್ಲಿ ನಡೆಯಲಿರುವ ಮೊದಲ ವಿಧಾನಮಂಡಲ ಅಧಿವೇಶನ ಇದಾಗಿದೆ.
ನವೆಂಬರ್ ಅಂತ್ಯದಲ್ಲಿ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವಂತೆ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಳೆದ ವಾರ ಪತ್ರ ಬರೆದಿದ್ದರು. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ಚಿಂತನೆ ನಡೆಸುತ್ತಿದ್ದು, ಅದನ್ನು ಸಂಪುಟದ ಒಪ್ಪಿಗೆಗಾಗಿ ಇಡಲಾಗುವುದು ಎಂದು ಬೊಮ್ಮಾಯಿ ಅವರು ಕಳೆದ ತಿಂಗಳು ಹೇಳಿದ್ದರು.
ಈ ಮಧ್ಯೆ ಸೋಮವಾರ ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ ಕುರಿತಂತೆ ಅಧಿಕಾರಿಗಳ ಪೂರ್ವ ಸಿದ್ಧತೆ ಸಭೆ ನಡೆಸಲಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, “2018 ರ ನಂತರ ಬೆಳಗಾವಿಯಲ್ಲಿ ಅಧಿವೇಶನ ನಡೆದಿರಲಿಲ್ಲ. ಈ ಬಾರಿ ವಿಧಾನಮಂಡಲದ ಕಲಾಪಗಳ ನೇರಪ್ರಸಾರ ವ್ಯವಸ್ಥೆ ಮಾಡಲಾಗುತ್ತಿದೆ. ನವೆಂಬರ್ 20 ರೊಳಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿವೇಶನ ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡಿಸೆಂಬರ್‌ನಲ್ಲಿ ಅಧಿವೇಶನ ನಡೆಯುವುದು ಖಚಿತವಾಗಿದ್ದು, ದಿನಾಂಕವನ್ನು ಸರ್ಕಾರ ನಿರ್ಧರಿಸಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಲೋಕಸಭೆ ಸ್ಪೀಕರ್ ಭಾಷಣ ಸ್ವೀಕಾರಾರ್ಹವೇ?
ನೆರೆಯ ಮಹಾರಾಷ್ಟ್ರ ಬೆಳಗಾವಿ ತನಗೆ ಸೇರಿದ್ದು ಎಂದು ಈ ವರೆಗೆ ಹೇಳಿಕೊಳ್ಳುತ್ತಾ ಬಂದಿದೆ. ಈ ಮಧ್ಯೆ ಸರ್ಕಾರಿ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರಿಸುವ ಕೆಲಸವನ್ನೂ ಕರ್ನಾಟಕ ಸರ್ಕಾರ ಮಾಡುತ್ತಿದೆ. ವರ್ಷಕ್ಕೊಮ್ಮೆ ಸುಮಾರು ಎರಡು ವಾರಗಳ ಕಾಲ ನಡೆಯುವ ಅಧಿವೇಶನ ಹೊರತುಪಡಿಸಿದರೆ ಸುವರ್ಣ ವಿಧಾನಸೌಧ ಕಟ್ಟಡ ಬಹುತೇಕ ಬಳಕೆಯಾಗದೆ ಉಳಿದಿದೆ.
ನಾಗರಿಕರ ಅನುಕೂಲಕ್ಕಾಗಿ ಮತ್ತು ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ಉದ್ದೇಶದಿಂದ ಕೆಲವು ಸರ್ಕಾರಿ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂಬುವುದು ಉತ್ತರ ಕರ್ನಾಟಕ ಜನರ ಬಹುಕಾಲದ ಬೇಡಿಕೆಯಾಗಿತ್ತು.
2018 ರಲ್ಲಿ, ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವು, ಪ್ರಾದೇಶಿಕ ಅಸಮತೋಲನವನ್ನು ಪರಿಹರಿಸಲು ಕೆಲವು ಸರ್ಕಾರಿ ಇಲಾಖೆಗಳು, ಮಂಡಳಿಗಳು ಮತ್ತು ಆಯೋಗಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಲು ತಾತ್ವಿಕವಾಗಿ ಅನುಮೋದನೆ ನೀಡಿತ್ತು. ಇದರ ನಂತರ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಗೊಳ್ಳುವ ರಾಜ್ಯ ಮಟ್ಟದ ಸರ್ಕಾರಿ ಕಚೇರಿಗಳನ್ನು ಒಂದು ತಿಂಗಳೊಳಗೆ ಗುರುತಿಸಿ ಕಾರ್ಯಗತಗೊಳಿಸುವಂತೆ ಕಳೆದ ವರ್ಷ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದರು.
ಇದನ್ನೂ ಓದಿ: ವಿಧಾನಸಭಾ ಅಧಿವೇಶನ: ಕಾಂಗ್ರೆಸ್‌ನ ’ಎತ್ತಿನಗಾಡಿ ಚಲೋ’ ಪ್ರತಿಭಟನೆ ಚಿತ್ರಗಳಲ್ಲಿ ನೋಡಿ