Homeರಾಜಕೀಯಸೋಲಲು ಸಿದ್ಧವಾಗಿರುವ ಅಪ್ಪ-ಮಗನನ್ನು ಸೋಲಿಸಲು ಎದುರಾಳಿಗಳೇ ಇಲ್ಲ!

ಸೋಲಲು ಸಿದ್ಧವಾಗಿರುವ ಅಪ್ಪ-ಮಗನನ್ನು ಸೋಲಿಸಲು ಎದುರಾಳಿಗಳೇ ಇಲ್ಲ!

- Advertisement -
- Advertisement -

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರ ಮೇಲೆ ವಿನಾಕಾರಣ ಚುನಾವಣೆ ಹೇರಿದ ಯಡಿಯೂರಪ್ಪ ಮತ್ತವರ ಪುತ್ರ ಬಸ್ಟಾಂಡ್ ರಾಘು, ಊರೂರು ಸುತ್ತಿ ಓಟು ಕೇಳುತ್ತಿದ್ದರೆ ಸ್ಪರ್ಧೆಗೆ ಅಭ್ಯರ್ಥಿಗಳೇ ಸಿಗದ ದುಸ್ಥಿತಿಯಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಎಂಬ ಗಾಂಪರಗುಂಪು ತಡಬಡಾಯಿಸುತ್ತ ಜನರಿಗೆ ಮನರಂಜನೆ ನೀಡುತ್ತಿದೆ. ಅನಗತ್ಯವಾಗಿ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಿಗೆ ಮೇಲೆ ಚುನಾವಣಾ ಆಯೋಗ ಚುನಾವಣೆ ಹೇರಿದ್ದರ ಕುರಿತಾಗಿ ಆಗಬೇಕಿದ್ದ ಚರ್ಚೆ ನಡೆಯದೇ ಇರುವುದು ನಾಡಿನ ಪ್ರಜ್ಞಾವಂತ ಸಮೂಹದ ನಿಷ್ಕ್ರಿಯತೆಗೆ ಕನ್ನಡಿಯಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಸುಪುತ್ರ ಬಿ.ವೈ.ರಾಘವೇಂದ್ರನನ್ನ ಕಣಕ್ಕಿಳಿಸಿ ಸಾರೆಕೊಪ್ಪ ಬಂಗಾರಪ್ಪ ಶಾಶ್ವತವಾಗಿ ಮೂಲೆಗುಂಪಾಗುವಂತೆ ಮಾಡಿದರು. ಬಂಗಾರಪ್ಪನವರಿಗೆ ಅದೇ ಕೊನೆಯ ಚುನಾವಣೆಯಾಯಿತು ಹಾಗೂ ಅವರ ರಾಜಕಾರಣವೂ ಕೊನೆಗೊಂಡಿತ್ತು. ಅವತ್ತು ಮಗನಿಗೆ ಬಿಜೆಪಿ ಟಿಕೆಟ್ ಕೊಡಲು ಯಡ್ಡಿ ಆಡಿದ ಆಟ ಒಂದೆರೆಡಲ್ಲ. ದೇವರಾಣೆಗೂ ಮಗನಿಗೆ ಟಿಕೆಟ್ ಕೊಡಲ್ಲ ಎಂದಿದ್ದ ಯಡ್ಡಿ ನಂತರ ರಾಘುವನ್ನು ಕಣಕ್ಕಿಳಿಸಿ ನೂರಾರು ಕೋಟಿ ಹಣ ಖರ್ಚು ಮಾಡಿ ಗೆಲ್ಲಿಸಿದ್ದರು. ಇದೀಗ ವಿರೋಧ ಪಕ್ಷದ ನಾಯಕನಾಗಿರುವ ಸಂದರ್ಭದಲ್ಲಿ ಮತ್ತೆ ಮಗನನ್ನು ಕಣಕ್ಕಿಳಿಸಿ ಮತ್ತೆ ಕೋಟಿ ಕೋಟಿ ಹಣ ಖರ್ಚು ಮಾಡುವ ಲೆಕ್ಕಾಚಾರದಲ್ಲಿದ್ದಾರೆ.
2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಗ್ಯಾಂಗಿಗೆ ಒಂದೊಂದು ಸೀಟೂ ಮುಖ್ಯವಾಗಿತ್ತು. ಯಡ್ಡಿಯನ್ನು ಕೇಂದ್ರ ಕೃಷಿ ಸಚಿವ ಮಾಡುತ್ತೇವೆ ಎಂಬುದಾಗಿ ರಾಜ್ಯದ ಲಿಂಗಾಯಿತರ ಮೂಗಿಗೆ ತುಪ್ಪ ಸವರಿ ಯಡ್ಡಿಯನ್ನು ಗೆಲ್ಲಿಸಲಾಗಿತ್ತು. 3 ಲಕ್ಷ ಮತಗಳ ಅಂತರದಿಂದ ಪರಮಭ್ರಷ್ಟ ಯಡ್ಡಿ ಮೋದಿ ಅಲೆಯನ್ನೂ ಬಳಸಿಕೊಂಡು ಗೆದ್ದು ಬಂದಿದ್ದಾಗಿತ್ತು. ನಂತರ ಕೇಸುಗಳ ನೆವ ಹೇಳಿ ಯಡ್ಡಿಗೆ ಕೇಂದ್ರ ಸಚಿವ ಸ್ಥಾನವನ್ನು ನೀಡದೆ ಸತಾಯಿಸಲಾಗಿತ್ತು. ಮತ್ತೆ ಮುಖ್ಯಮಂತ್ರಿಯ ಕನಸು ಹೊತ್ತು 2018ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಯಡ್ಡಿಗೆ ಮತ್ತೆ ನಿರಾಶೆಯೇ ಗತಿಯಾಯಿತು. ಇದೆಲ್ಲ ಬೆಳವಣಿಗೆನಂತರ ಇದೀಗ ಅನವಶ್ಯಕ ಚುನಾವಣೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನ ತಲೆಕೊಡುವಂತಾಗಿದೆ.
ತಮ್ಮ ಐಲುತನ, ಸ್ವಾರ್ಥದಿಂದಾಗಿ ಶಿವಮೊಗ್ಗ ಜನರ ಮೇಲೆ ಚುನಾವಣೆ ಹೇರುವಂತಾಯಿತು ಎಂಬ ಕನಿಷ್ಟ ಪಾಪಪ್ರಜ್ಞೆಯೂ ಇಲ್ಲದೆ ಯಡ್ಡಿ-ರಾಘು ಜೋಡಿ ಶಿವಮೊಗ್ಗದ ಬೀದಿಗಳಲ್ಲಿ ಓಟು ಕೇಳುತ್ತಾ ಹೊರಟಿದೆ. 2019 ಲೋಕಸಭಾ ಚುನಾವಣೆಯಲ್ಲಿ ರಾಘುವಿಗೆ ಟಿಕೇಟ್ ತಪ್ಪಿಸುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ಈಶ್ವರಪ್ಪ ಮತ್ತೊಂದೆರೆಡು ಹೆಸರುಗಳನ್ನು ತೇಲಿಬಿಟ್ಟು ತಮಾಷೆ ನೋಡುತ್ತಿರುವಾಗಲೇ ಚುನಾವಣೆ ಘೋಷಣೆಯಾಗಿ ರಾಘು ಅಭ್ಯರ್ಥಿಯಾಗುವಂತಾಯಿತು. 6 ತಿಂಗಳ ಅಧಿಕಾರಾವಧಿಗೆ ಸಂಸದರಾಗಲು ಬಿಜೆಪಿಯಲ್ಲೂ ಯಾರೂ ಇಲ್ಲವಾಗಿರುವುದರಿಂದ ಸಂಘ ಪರಿವಾರವೂ ಬೇರೆ ಆಟಕಟ್ಟಲು ಹೋಗಲಿಲ್ಲ. ಇದೀಗ ಈಶ್ವರಪ್ಪ ರಾಘವೇಂದ್ರನನ್ನೂ ಯಾರಿಂದಲೂ ಸೋಲಿಸಲಾಗುವುದಿಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ.
ರಾಘವೇಂದ್ರನೇ ಗೆಲ್ಲುವ ಅಭ್ಯರ್ಥಿ ಅಂತ ಬಿಜೆಪಿ ಠೇಂಕಾರದಿಂದ ಚುನಾವಣೆಗೆ ಹೊರಟಿದ್ದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್‍ನಲ್ಲಿ ಸ್ಮಶಾನಮೌನ ಮನೆ ಮಾಡಿದೆ. ಎರಡೂ ಪಕ್ಷಗಳಲ್ಲಿ ಸ್ಪರ್ಧೆಗಿಳಿಯಲು ಯಾರೂ ತಯಾರಿಲ.್ಲ ಕೆಲವು ಡಮ್ಮಿ ಹೆಸರುಗಳು ಚಾಲ್ತಿಯಲ್ಲಿ ಇದ್ದಾವಾದರೂ ನಾಮಪತ್ರ ಸಲ್ಲಿಕೆ ಆರಂಭವಾದ ನಂತರವೂ ಮೈತ್ರಿಕೂಟದ ಅಭ್ಯರ್ಥಿಯಾರೆಂಬುದು ಖಚಿತವಾಗಿಲ್ಲ. ಸ್ವಯಂಕೃತಾಪರಾಧದಿಂದಲೇ ಸೋತು ಕುಳಿತಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕಿಮ್ಮನೆ ರತ್ನಾಕರ್ ಸ್ಪರ್ಧೆಗಿಳಿಯಲು ಆಸಕ್ತಿ ತೋರಿದ್ದರಾದರೂ ಅವರು ಹಿಂದೆ ಸರಿದಿದ್ದಾರೆ. ಕಿಮ್ಮನೆ ರತ್ನಾಕರ್ ಕಣಕ್ಕಿಳಿದಿದ್ದರೆ ಚುನಾವಣೆಗೊಂದು ನೈತಿಕ ಆಯಾಮವಾದರೂ ಸಿಗುತ್ತಿತ್ತು. ಪರಮಭ್ರಷ್ಟ ಅಪ್ಪ ಮಗನನ್ನು ಧಿಕ್ಕರಿಸಲು, ಪ್ರಶ್ನಿಸಲು ಮತದಾರರಿಗೆ ಪ್ರಾಮಾಣಿಕ ಅಭ್ಯರ್ಥಿಯೊಬ್ಬರ ಸಿಕ್ಕಿದಂತಾಗುತ್ತಿತ್ತು. ಅದೂ ಆಗಲಿಲ್ಲ. ಮೊದಲಿಂದಲೂ ಕೇಳಿಬರುತ್ತಿರುವ ಹೆಸರು ಜೆಡಿಎಸ್‍ನ ಮಧುಬಂಗಾರಪ್ಪರದ್ದು. ಚುನಾವಣೆ ಘೋಷಣೆಯಾದದ್ದೇ ತಡ ಅವರು ಕುಟುಂಬ ಸಮೇತ ಯೂರೋಪ ಪ್ರವಾಸ ಹೊರಟುಬಿಟ್ಟರು. ಬೇಳೂರು ಗೋಪಾಲಕೃಷ್ಟ ಸ್ಪರ್ಧಿಸುವ ಹುಮ್ಮಸ್ಸಿನಲ್ಲಿದ್ದಾರಾದರೂ ಅವರನ್ನೂ ಕಾಂಗ್ರೆಸ್‍ಗೆ ಕರೆತಂದಿದ್ದ ಕಾಗೋಡು ತಿಮ್ಮಪ್ಪರೇ ಅಡ್ಡಿಯಾಗಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ 2019ರ ಲೋಕಸಭಾ ಚುನಾವಣೆ ಎದುರಿಸಲು ತೀರ್ಮಾನ ಮಾಡಿದ್ದಾಗಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷ ಸ್ಪರ್ಧಿಸಬೇಕೆಂಬ ಕುರಿತು ಚರ್ಚೆ ನಡೆದಿತ್ತು. ಇದೀಗ ಸ್ಪರ್ಧಿಸಲು ಪ್ರಬಲ ಅಭ್ಯರ್ಥಿಗಳೆಲ್ಲ ಹಿಂದೆ ಸರಿಯುತ್ತಿರುವುದರಿಂದಾಗಿ ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್ ಬಿಟ್ಟು ಕೊಡಲು ಮಾತುಕತೆ ನಡೆದಿದೆ.
ಸೊರಬದಲ್ಲಿ ಸೋತನಂತರ ಮಧುಬಂಗಾರಪ್ಪ ಜಿಲ್ಲೆಗೂ ಬರುತ್ತಿಲ್ಲ, ಸೊರಬ ಕ್ಷೇತ್ರದಲ್ಲೂ ಕಾಣಿಸಿಕೊಂಡಿಲ್ಲ. ಗೆದ್ದುಮೈತ್ರಿ ಸರ್ಕಾರದಲ್ಲಿ ಸಚಿವರಾಗುವ ಆತುರದಲ್ಲಿದ್ದ ಮಧುಬಂಗಾರಪ್ಪ ಸೋತನಂತರ ಎಂಎಲ್‍ಸಿಯಾಗಲು, ರಾಜಕೀಯ ಕಾರ್ಯದರ್ಶಿಯಂತಹ ಸ್ಥಾನಮಾನ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಗೂಟದ ಕಾರಿನಲ್ಲಿ ಸೊರಬ ಕ್ಷೇತ್ರಕ್ಕೆ ಕಾಲಿಡುತ್ತೇನೆ ಎಂದು ಸೋತ ನಂತರವೂ ಹೇಳಿಕೊಂಡಿದ್ದ ಮಧುಬಂಗಾರಪ್ಪ ಜೆಡಿಎಸ್‍ನ ಅಪ್ಪ-ಮಗನ ವಿರುದ್ದ ಮುನಿಸಿಕೊಂಡಿದ್ದಾರೆ. ಈಗ ಕಾಗೋಡು ತಿಮ್ಮಪ್ಪ ಸಿದ್ದರಾಮಯ್ಯ ಇಬ್ಬರೂ ಸೇರಿ ಮಧುವನ್ನೂ ಜೆಡಿಎಸ್‍ನಿಂದಲಾದರೂ ಸ್ವರ್ಧಿಸು, ಕಾಂಗ್ರೆಸ್‍ನಿಂದಲಾದರೂ ಸ್ಪರ್ಧೆಗೆ ಇಳಿಯುವಂತೆ ಮನವೊಲಿಸುತ್ತಿದ್ದಾರೆ. ಚುನಾವಣೆ ಖರ್ಚಿಗೆ 25ಕೋಟಿ ಕೊಡುವುದಾದರೆ ಸ್ಪರ್ಧಿಸುವುದಾಗಿ ಮಧುಬಂಗಾರಪ್ಪ ಷರತ್ತು ಹಾಕಿದ್ದಾರೆ. ವಿದೇಶಿ ಪ್ರವಾಸ ಮೊಟಕುಗೊಳಿಸಿ ಮಧು ವಾಪಸ್ಸಾದ ನಂತರವಷ್ಟೇ ಅವರ ಸ್ಪರ್ಧೆ ಕುರಿತು ಅಂತಿಮ ತೀರ್ಮಾನ ಪ್ರಕಟವಾಗಲಿದೆ. ಹೀಗಾಗಿ ಮಧು ಸ್ಪರ್ಧೆಗೆ ಒಪ್ಪದಿದ್ದರೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಲಗೋಡು ರತ್ನಾಕರ್‍ರನ್ನೂ ಕಣಕ್ಕಿಳಿಸಲು ಕಾಂಗ್ರೆಸ್ ವರಿಷ್ಟರು ತಯಾರಿ ನಡೆಸಿದ್ದಾರೆ. ಒಟ್ಟಾರೆ ಈಡಿಗ ಸಮುದಾಯಕ್ಕೆ ಟಿಕೆಟ್ ನೀಡುವ ತೀರ್ಮಾನವಾಗಿದೆ.
ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ 6,06,216ಮತ ಪಡೆದು ಗೆದ್ದಿದ್ದರು. ಆಗ ಮೋದಿ ಹವಾ ಜೋರಾಗಿತ್ತು. ಕಾಂಗ್ರೆಸ್‍ನ ಮಂಜುನಾಥ ಭಂಡಾರಿ 2,42,911 ಮತ, ಗೀತಾ ಶಿವರಾಜ್ ಕುಮಾರ್ 2,40,636 ಮತ ಪಡೆದಿದ್ದರು. 2014ರ ಚುನಾವಣೆಯಲ್ಲಿ ಬಂಗಾರಪ್ಪ ಸ್ಪರ್ಧಿಸಿ ಸೋತಾಗ ರಾಘವೇಂದ್ರ ಗೆದ್ದದ್ದು 52 ಸಾವಿರ ಮತಗಳ ಅಂತರದಿಂದ. ಕಾಂಗ್ರೆಸ್‍ನ ಈಡಿಗ ಸಮುದಾಯದ ಓಟ್ ಬ್ಯಾಂಕ್ ಅನ್ನು ಯಡ್ಡಿ ವ್ಯವಸ್ಥಿತವಾಗಿ ಒಡೆದು ಹಾಕಿದ್ದೇ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಲು ಕಾರಣವಾಗಿತ್ತು.
ಎಷ್ಟು ಕೋಟಿ ಖರ್ಚಾದರೂ ಸರಿ ಗೆಲ್ಲುತ್ತೇವೆ ಎಂಬ ಠೇಂಕಾರದಲ್ಲಿ ಯಡ್ಡಿ-ರಾಘು ಜೋಡಿ ಹೊರಟಿದೆ. ಚುನಾವಣೆಗೆ ಮೊದಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸೋಲೊಪ್ಪಿದೆ. ಆದರೆ ಜಿಲ್ಲೆಯ ಜನ ಮಾತ್ರ ಬಿಜೆಪಿಯನ್ನೇ ಗೆಲ್ಲಿಸುವ ಹಠದಲ್ಲಿ ಇಲ್ಲ. ಆದರೆ ಚುನಾವಣೆಗೆ ಮೊದಲೇ ಸೋಲೋಪ್ಪಿಕೊಳ್ಳುವವರನ್ನು ಯಾರು ತಾನೆ ಬಚಾವು ಮಾಡಲು ಸಾಧ್ಯ. ಇದು ಸದÀ್ಯದ ಶಿವಮೊಗ್ಗ ಲೋಕಸಭಾ ಚುನಾವಣಾ ಚಿತ್ರಣ.

– ಈಶ್ವರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...