Homeಸಾಹಿತ್ಯ-ಸಂಸ್ಕೃತಿಕಥೆಬೆಳ್ಳಿ ತಿಂಮ ನೂರೆಂಟು ಹೇಳಿದ :ಬೀಚಿ - ಯೋಗೇಶ್ ಮಾಸ್ಟರ್

ಬೆಳ್ಳಿ ತಿಂಮ ನೂರೆಂಟು ಹೇಳಿದ :ಬೀಚಿ – ಯೋಗೇಶ್ ಮಾಸ್ಟರ್

- Advertisement -
- Advertisement -

“ತಿಂಮ, ನಾಟಕ ನೋಡಿದೆಯೇನೋ?” ಬುದ್ಧನ ನಾಟಕ ನೋಡಲು ರಾತ್ರಿ ಮಗನ ಕಳುಹಿಸಿದ್ದ ತಂದೆ ಬೆಳಗ್ಗೆ ಕೇಳಿದ.
“ನೋಡಿದೆ ಅಪ್ಪಾ.”
“ಎಲ್ಲಾ ಅರ್ಥ ಆಯ್ತೇನೋ?”
“ಆಯ್ತಪ್ಪಾ” ಎನ್ನುವ ತಿಂಮ ಮತ್ತೆ ನೆನಪಿಸಿಕೊಂಡು ಹೇಳುತ್ತಾನೆ, “ಆದರೆ, ಒಂದರ್ಥ ಆಗಲಿಲ್ಲ. ಬುದ್ಧ ರಾಜ್ಯ, ಹೆಂಡತಿ, ಮಗ; ಎಲ್ಲವನ್ನೂ ಬಿಟ್ಟು ಹೋದವನು, ತಗಡಿನ ಬಿಲ್ಲೆ ಕೊಡ್ತೀವಿ ಅಂದ ತಕ್ಷಣ ಓಡಿ ಬಂದುಬಿಟ್ಟನಲ್ಲಪ್ಪಾ?”ಬೀಚಿಯ ಬೆಳ್ಳಿ ತಿಂಮ ಒಬ್ಬ ಬಾಲಕ. ಅವನು ತಾನು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ನೋಡುವುದನ್ನೆಲ್ಲಾ ಪ್ರಶ್ನಿಸುತ್ತಾನೆ. ಅವನ ಪ್ರಶ್ನೆಗಳು ಸಮಾಜವು ಯಾವುದನ್ನು ಗಂಭೀರ ಅಂತ ಪರಿಗಣಿಸುತ್ತದೋ ಅದನ್ನು ಲೇವಡಿ ಮಾಡುತ್ತದೆ. ಹೀಗೆ ವ್ಯಂಗ್ಯವಾಡುವುದು ವ್ಯವಸ್ಥೆಯನ್ನು ಪ್ರತಿಭಟಿಸುವ, ಚಿಂತನೆಗೆ ಹಚ್ಚುವ ಬೀಚಿಯವರ ರೀತಿ.

ಬುದ್ಧ ತಗಡಿನ ಬಿಲ್ಲೆಗೆ ಓಡಿ ಬರುವುದು, ತಿಂಮನಿಗೆ ನಾಟಕ ಮತ್ತು ವಾಸ್ತವದ ಅರಿವಿಲ್ಲ ಅಂತಲ್ಲ. ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ, ಅದಕ್ಕೆ ಪ್ರಶಸ್ತಿ ಬರಲೆಂದು ಅರ್ಜಿ ಹಾಕುವುದನ್ನು, ಲಾಬಿ ಮಾಡುವ ವಾಸ್ತವವನ್ನು ಅದು ಅಣಕಿಸುತ್ತದೆ.

ರಸ್ತೆಯಲ್ಲಿ ಯಾರಿಗೋ ಕೈಕೋಳ, ಕಾಲ್ಗಳಿಗೆ ಸರಪಳಿ ಹಾಕಿ ಎಳೆದೊಯ್ಯುತ್ತಿದ್ದ ಗಲಾಟೆ. ತಿಂಮ ಕೇಳಿದ ಅದೇನೆಂದು. ಜೈಲಿಗೆಂದರು ಯಾರೋ. ‘ಜೈಲಿಗೋ ಇಷ್ಟು ರಂಪು! ನಾನೆಲ್ಲೋ ಸ್ಕೂಲಿಗೆ ಎಂದುಕೊಂಡೆ’ ಎನ್ನುತ್ತಾ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತಾನೆ ತಿಂಮ.

“ಇವತ್ತು ಬರುವ ಅತಿಥಿಯ ಮೂಗಿನ ಬಗ್ಗೆ ಏನೂ ಮಾತಾಡಬೇಡ” ಎಂದು ತಂದೆ ಎಚ್ಚರಿಸಿರುತ್ತಾನೆ. ಅತಿಥಿ ಬಂದಾಗ ಅವರನ್ನೇ ನೋಡಿಕೊಂಡು ತಿಂಮ ಕುಳಿತಿರುತ್ತಾನೆ. ಅತಿಥಿಗೂ ಅದು ಗಮನಕ್ಕೆ ಬಂದು, ಯಾಕಪ್ಪಾ ಎಂದು ಕೇಳುತ್ತಾರೆ. ಅವನು ಏನಿಲ್ಲ ಎಂದು ತಂದೆಗೆ ಕೇಳುತ್ತಾನೆ. “ಅಪ್ಪಾ, ಇವರ ಮೂಗಿನ ಬಗ್ಗೆ ಏನೂ ಮಾತಾಡಬೇಡಾಂದೆ. ಆದರೆ, ಇವರಿಗೆ ಮೂಗೇ ಇಲ್ಲ!” ಎಂದು ಮಕ್ಕಳ ಮುಖವಾಡವಿಲ್ಲದ ಮನಸ್ಸನ್ನು ತೋರಿಸುವ ಮಗುವಿನ ಮನೋವಿಜ್ಞಾನ ಬೀಚಿಯದು.

“ಹಸುವಿಗೆ ನಾಲ್ಕಿರುತ್ತವೆ. ನನಗೆ ಎರಡಿವೆ. ಏನದು ಹೇಳು?” ಶಾಲೆಗೆ ಸೇರಿಸಿಕೊಳ್ಳುವ ಉಪಾಧ್ಯಾಯಿನಿ ತಿಂಮನ ಪರೀಕ್ಷಿಸಿದಳು. ಅವನಿಗೆ ಕಂಡದ್ದು ಹೇಳಿದ. ಶಿಕ್ಷಕಿ ಮುಜುಗರಗೊಂಡು ಇವನು ದೊಡ್ಡ ತರಗತಿಗೆ ಹೋಗಬೇಕೆನ್ನುವಳು. ಪಾಪ, ಕಾಲುಗಳೆಂಬ ಉತ್ತರ ಅವಳು ಬಯಸಿದ್ದಳು. ಕಿರಿಯ ಪೀಳಿಗೆ ದಡ್ಡರಿರುತ್ತಾರೆಂದು ಕಡೆಗಣಿಸದಿರಲು ಬೀಚಿ ಹಿರಿಯರಿಗೆ ಎಚ್ಚರಿಸುತ್ತಾರೆ.

ಪಶುವೈದ್ಯರು ಹಸುವಿಗೆ ಹೇಗೆ ಗುಳಿಗೆ ನುಂಗಿಸಬೇಕೆಂದು ಹೇಳಿ ತಿಂಮನ ಕಳುಹಿಸಿದ್ದರು. ಸ್ವಲ್ಪ ಹೊತ್ತಿಗೆ ತಿಂಮ ಗಾಬರಿಯಿಂದ ಮರಳಿ ಹಸುವಿಗೆ ಗುಳಿಗೆ ನುಂಗಿಸಲಾಗಲಿಲ್ಲವೆಂದು ಹೇಳಿದ.
“ಯಾಕೋ, ಗೊಟ್ಟದಲ್ಲಿ (ಬಿದಿರಿನ ಕೊಳವೆ) ಗುಳಿಗೆ ಇಟ್ಟೆಯೇನೋ?”
“ಇಟ್ಟೆ.”
“ಗೊಟ್ಟವನ್ನು ಹಸುವಿನ ಗಂಟಲಿಗಿಟ್ಟೆಯೇನೋ?”
“ಇಟ್ಟೆ.”
“ಜೋರಾಗಿ ಊದಿದೆಯೇನೋ?”
“ನಾನು ಊದುವಷ್ಟರಲ್ಲಿ ಅದೇ ಊದಿಬಿಟ್ಟಿತು!” ತಿಂಮನ ಗಾಬರಿಯ ಕಾರಣ ಅದು.
ವ್ಯವಸ್ಥೆಯನ್ನು ಬದಲಿಸುತ್ತೇನೆಂದು ಹೋದವರನ್ನು ವ್ಯವಸ್ಥೆಯೇ ಬದಲಿಸುವ ಕತೆ ಈ ತಿಂಮನಲ್ಲಿ.
ಈ ಪುಸ್ತಕದ ಪ್ರತಿ ಈಗ ನನ್ನಲ್ಲಿಲ್ಲ. ಆದರೆ ಸಂದರ್ಭಾನುಸಾರವಾಗಿ ಬೇಕಾದ ಪುಟಗಳು ನನ್ನೊಳಗೆ ತೆರೆದುಕೊಂಡಿರುತ್ತವೆ.
“ತಿಂಮ, ಚೌಡಯ್ಯನವರ ಪಿಟೀಲು ಕೇಳಿದ್ಯೇನೋ?”
“ಕೇಳಿದೆ. ಕೊಡಲಿಲ್ಲಪ್ಪಾ.”…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧದ ದೂರಿಗೆ ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ಕಳುಹಿಸಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...