Homeಮುಖಪುಟಕಾರ್ಮಿಕ ಕಾಯ್ದೆ ತಿದ್ದುಪಡಿಗಿದೆ ಹುನ್ನಾರದ ಇತಿಹಾಸ : ಎಸ್‌. ಬಾಲನ್

ಕಾರ್ಮಿಕ ಕಾಯ್ದೆ ತಿದ್ದುಪಡಿಗಿದೆ ಹುನ್ನಾರದ ಇತಿಹಾಸ : ಎಸ್‌. ಬಾಲನ್

- Advertisement -
- Advertisement -

ಎಲ್ಲಾ ಕಾರ್ಖಾನೆಗಳು, ಗಣಿಗಳು, ಪ್ರತಿಷ್ಠಾನಗಳು ಹಾಗೂ ಬಿಸಿನೆಸ್‍ಗಳನ್ನು 35 ಕಾರ್ಮಿಕ ಕಾನೂನುಗಳ ವ್ಯಾಪ್ತಿಯಲ್ಲಿ ಬರದಂತೆ ಉತ್ತರಪ್ರದೇಶ, ಗುಜರಾತ ಮತ್ತು ಮಧ್ಯಪ್ರದೇಶದ ಬಿಜೆಪಿ ಆಡಳಿತದ ಸರಕಾರಗಳಲ್ಲಿ ಕಾರ್ಮಿಕ ಕಾನೂನುಗಳನ್ನು ಅಮಾನತುಗೊಳಿಸಲಾಗಿದೆ; ಇದನ್ನು ಉತ್ತರಪ್ರದೇಶ 1000 ದಿನಗಳ ಕಾಲ, ಗುಜರಾತ 1,200 ದಿನಗಳ ಕಾಲ ಹಾಗೂ ಮಧ್ಯಪ್ರದೇಶ 1,000 ದಿನಗಳ ಕಾಲ ಜಾರಿ ಮಾಡಿದೆ ಹಾಗೂ ಇತರ ಬಿಜೆಪಿ ಆಡಳಿತ ರಾಜ್ಯಗಳು ಇಂತಹದ್ದೇ ಸುಗ್ರೀವಾಜ್ಞೆಯನ್ನು ಹೊರಡಿಸುವ ಪ್ರಕ್ರಿಯೆಯಲ್ಲಿವೆ. ಕೇಂದ್ರ ಸರಕಾರವು ಇತರ ಬಿಜೆಪಿಯೇತರ ರಾಜ್ಯಗಳಿಗೂ ಈ ರೀತಿಯ ಬದಲಾವಣೆಗಳನ್ನು ಅಂಗೀಕರಿಸಬೇಕು ಎಂದು ಸೂಚಿಸಿದೆ.

ಈ ಸುಗ್ರೀವಾಜ್ಞೆಗಳು ಕ್ರೂರ, ಅನಾಗರಿಕ ಹಾಗೂ ದೇಶವನ್ನು ಹಿಂದೊಯ್ಯುವ ಕ್ರಮಗಳಾಗಿದ್ದು, ಎಲ್ಲಾ ಖಾಯಂ ಸ್ವರೂಪದ ನೌಕರಿಗಳನ್ನೇ ಅಮಾನತ್ತುಗೊಳಿಸುತ್ತದೆ.

ಆ ರೀತಿ ಮಾಡಲಾಗಿರುವ ಪ್ರಮುಖ ಕಾಯಿದೆಗಳು:

1. ಕೈಗಾರಿಕಾ ವ್ಯಾಜ್ಯ ಕಾಯಿದೆ- 1947 (Industrial dispute Act-1947)
2. ಕಾರ್ಖಾನೆಗಳ ಕಾಯಿದೆ- 1948 (Factories Act -1948)
3. ಟ್ರೇಡ್ ಯೂನಿಯನ್ ಕಾಯಿದೆ -1926
4. ಸಮಾನ ವೇತನ ಕಾಯಿದೆ (Equal remuneration Act-)
5. ಗುತ್ತಿಗೆ ಪದ್ಧತಿಯ ನಿಯಂತ್ರಣ ಮತ್ತು ನಿರ್ಮೂಲನಾ ಕಾಯಿದೆ -1970 (Contract regulation and abolishion Act-1970.)
6. ಬೋನಸ್ ಪಾವತಿ ಕಾಯಿದೆ -1965 (Payment of Bonus Act- 1965.)
7. ಕನಿಷ್ಠ ವೇತನ ಕಾಯಿದೆ-1948 (Minimum Wages Act-1948)
8. ನೌಕರರ ಪಿಎಫ್ ಕಾಯಿದೆ-1952 (Employees PF Act-1952.)
9. ಅಂತರರಾಜ್ಯ ವಲಸೆ ಕಾರ್ಮಿಕರ ಕಾಯಿದೆ-1979 (Interstate migrant labour act-1979.)
10. ಗ್ರಾಚ್ಯುಟಿ ಕಾಯಿದೆ-1972
ಭಾರತದ ದುಡಿಯುವ ವರ್ಗಕ್ಕೆ ಉದ್ಯೋಗ, ವೇತನ ಮತ್ತು ಸಾಮಾಜಿಕ ರಕ್ಷಣೆಯನ್ನು ಖಾತ್ರಿಪಡಿಸಲು ಎರಡನೆಯ ಮಹಾಯುದ್ಧದ ಹಾಗೂ ಭಾರತದ ಸ್ವಾತಂತ್ರ್ಯದ ನಂತರ 45 ಕೇಂದ್ರೀಯ ಹಾಗೂ 200 ರಾಜ್ಯಮಟ್ಟದ ಕಾಯಿದೆಗಳನ್ನು ತರಲಾಗಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಆದರೆ, ಈಗಿನ ಕ್ರಮಗಳನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಉನ್ನತ ಮಟ್ಟದ ಕಾರ್ಪೋರೇಟ್‍ಗಳಿಗೆ (ಸ್ಥಳೀಯ ಮತ್ತು ವಿದೇಶದ ಬಹುರಾಷ್ಟ್ರೀಯ/ಟಿಎನ್‍ಸಿ) ಹೆಚ್ಚಿನ ನೇರ ಮತ್ತು ತಕ್ಷಣದ ಅನುಕೂಲಗಳನ್ನು ಒದಗಿಸಿವೆ, ಆ ಅನುಕೂಲಗಳು ಹೀಗಿವೆ:

1. ಕಾರ್ಮಿಕ ಯೂನಿಯನ್‍ಗಳ ನಿರ್ಮೂಲನೆ
2. ಕೆಲಸದ ಸ್ಥಳಗಳಲ್ಲಿ ಕಾರ್ಪೋರೇಟ್ ಮಿಲಿಟರಿ ಶಿಸ್ತನ್ನು ತರುವುದು
3. ಕಾರ್ಪೋರೇಟ್‍ಗಳ ಅಸಲಿ ಸಂಪತ್ತನ್ನು ಹೆಚ್ಚಿಸುವುದು (ಮುಕೇಶ್ ಅಂಬಾನಿಯ ಸಂಪತ್ತು 2014ರಲ್ಲಿ 22 ಶತಕೋಟಿ, ಬಿಲಿಯನ್ ಡಾಲರ್‍ಗಳಿದ್ದರೆ, 2018ರಲ್ಲಿ 55 ಶತಕೋಟಿ ಡಾಲರ್‍ಗಳಾಗಿದೆ.)

ಕಾರ್ಖಾನೆ ಕಾಯಿದೆ-1948ರನ್ನು ಅಮಾನತ್ತುಗೊಳಿಸುವುದೆಂದರೆ, ಒಂದು ದಿನಕ್ಕೆ ಕೆಲಸದ ಅವಧಿಯು 8 ಗಂಟೆಗಳಿಂದ 14 ಗಂಟೆಗಳಾಗಲಿದ್ದು, ಅದರೊಂದಿಗೆ ಸಂಬಳಸಹಿತ ಸಾರ್ವಜನಿಕ ರಜಾದಿನ, ಕ್ಯಾಷುವಲ್ ರಜೆ, ಅನಾರೋಗ್ಯ ರಜೆ, ಸವಲತ್ತಿನ ರಜೆ, ವಾರ್ಷಿಕ ರಜೆ, ಗಳಿಸಿದ ರಜೆ, ಹೆಚ್ಚುವರಿ ಕೆಲಸ (ಓವರ್‍ಟೈಮ್) ಸವಲತ್ತು, ಕ್ಯಾಂಟೀನ್, ಶೌಚಾಲಯ, ವಾತಾಯನ ವ್ಯವಸ್ಥೆ, ನೈರ್ಮಲ್ಯದ ವ್ಯವಸ್ಥೆ ಇತ್ಯಾದಿಗಳು ಇರುವುದಿಲ್ಲ ಎಂದು.

ಗ್ರ್ಯಾಚುವಟಿ ಕಾಯಿದೆ ಮತ್ತು ಉದ್ಯೋಗಿಗಳ ಪಿಎಫ್ ಕಾಯಿದೆಯನ್ನು ಅಮಾನತ್ತುಗೊಳಿಸುವುದರ ಅರ್ಥ, ನಿವೃತ್ತಿಯ ಸಮಯದಲ್ಲಿ ಕೆಲಸಗಾರರು ಬರಿಗೈಯಲ್ಲಿ ಮನೆಗೆ ತೆರಳಬೇಕೆಂದು.

ಟ್ರೇಡ್ ಯುನಿಯನ್ ಕಾಯಿದೆ ಮತ್ತು ಕೈಗಾರಿಕಾ ವ್ಯಾಜ್ಯ ಕಾಯಿದೆಯನ್ನು ಅಮಾನತ್ತುಗೊಳಿಸುವುದರ ಅರ್ಥ, ಸಾಮೂಹಿಕವಾಗಿ ಚೌಕಾಶಿ ಮಾಡುವುದು, ಸಂಧಾನ, ರಾಜಿ ಮಾಡಿಕೊಳ್ಳುವುದು ಹಾಗೂ ನ್ಯಾಯ ನಿರ್ಣಯ ಮಾಡುವ ಅವಕಾಶವನ್ನು ಸಂಪೂರ್ಣವಾಗಿ ಹಿಂಪಡೆದಂತೆ.

ಅಂತರರಾಜ್ಯ ವಲಸೆ ಕಾರ್ಮಿಕರ ಕಾಯಿದೆಯನ್ನು ಅಮಾನತ್ತುಗೊಳಿಸುವುದರ ಅರ್ಥ, ವಲಸೆ ಕಾರ್ಮಿಕರನ್ನು ಇತರ ರಾಜ್ಯಗಳಿಂದ ಕರೆಸುವುದು ಮತ್ತು ಕಳುಹಿಸುವುದರ ಬಗ್ಗೆ ಇರಬೇಕಾದ ಹೊಣೆಗಾರಿಕೆಯಿಂದ ನುಣುಚಿಕೊಂಡಂತೆ (ವಲಸೆ ಕಾರ್ಮಿಕರನ್ನು ಕಳುಹಿಸುವ ರಾಜ್ಯಗಳೆಂದರೆ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಒರಿಸ್ಸಾ, ಝಾರ್ಖಂಡ ಮತ್ತು ಛತ್ತೀಸಗಢಗಳು). ಈ ರಾಜ್ಯಗಳಲ್ಲಿನ ದುಡಿಯುವ ಜನರನ್ನು ಜೀತದಾಳುಗಳಾಗಿಸಲಾಗುವುದು.

ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸಮಾನ ಸಂಭಾವನೆ ಕಾಯಿದೆಯನ್ನು ಅಮಾನತ್ತುಗೊಳಿಸುವುದರ ಅರ್ಥ, ಕೆಲಸಗಾರರಿಗೆ ಹಸಿವಿನ ವೇತನ ನೀಡುವುದೆಂದರ್ಥ. ಆದರೆ ಈ ಆಳ್ವಿಕೆಯ ಅಡಿಯಲ್ಲಿ ಲೇಬರ್ ಇಲಾಖೆಗಳ ಮಧ್ಯಪ್ರವೇಶ ಇಲ್ಲವಾಗುತ್ತದೆ. (ನಿಜಾರ್ಥದಲ್ಲಿ ಲೇಬರ್, ಕಾರ್ಮಿಕ ಇಲಾಖೆಗಳು ಕಾರ್ಪೋರೇಟ್ ಇಲಾಖೆಗಳಾಗಿ ಬದಲಾಗುತ್ತವೆ.)

ಕಾರ್ಮಿಕ ಕಾನೂಗಳನ್ನು ಅಮಾನತ್ತುಗೊಳಿಸುವ ಈ ಕ್ರಮ ಭಾರತ ಸಂವಿಧಾನದ ಆರ್ಟಿಕಲ್ 39ರ ಉಲ್ಲಂಘನೆಯಾಗಿದೆ. ಅದರೊಂದಿಗೆ ಭಾರತದ ಸಂವಿಧಾನದ ಆರ್ಟಿಕಲ್ 14, 19 ಹಾಗೂ 21ರ ಉಲ್ಲಂಘನೆಯೂ ಆಗುತ್ತದೆ.

ಬಂಡವಾಳಶಾಹಿ ವ್ಯವಸ್ಥೆಯ (ಕ್ಯಾಪಿಟಲಿಸಂ) ಬಿಕ್ಕಟ್ಟು

1929-33ರ ಆರ್ಥಿಕ ಮಹಾಬಿಕ್ಟಟ್ಟಿನಿಂದ (ದಿ ಗ್ರೇಟ್ ಡಿಪ್ರೆಷನ್) ಬಂಡವಾಳಶಾಹಿ ವ್ಯವಸ್ಥೆಯು ಎರಡನೆಯ ಮಹಾಯುದ್ಧದ ತನಕ ಚೇತರಿಸಿಕೊಳ್ಳಲೇ ಇಲ್ಲ. ಅತ್ಯಂತ ಕೈಗಾರೀಕರಣಗೊಂಡಿದ್ದ ದೇಶಗಳನ್ನು ಒಳಗೊಂಡು ಅತ್ಯಂತ ಹಿಂದುಳಿದ ದೇಶಗಳ ಮೇಲೂ ಆ ಬಿಕ್ಕಟ್ಟು ಪರಿಣಾಮ ಬೀರಿತ್ತು. ಮೊದಲ ಎರಡು ವರ್ಷಗಳಲ್ಲಿ ಅಂದರೆ 1929-31ರಲ್ಲಿ ಜರ್ಮನಿ ಮತ್ತು ಅಮೇರಿಕದ ಕೈಗಾರಿಕಾ ಉತ್ಪನ್ನ ಶೇಕಡಾ 33ರಷ್ಟು ಕುಸಿದಿತ್ತು. ಮುಂದುವರೆದ ದೇಶಗಳಲ್ಲಿ ನಿರುದ್ಯೋಗ ದರವು ಹೆಚ್ಚಿತ್ತು; ಬ್ರಿಟನ್‍ನ ನಿರುದ್ಯೋಗ ದರ 22-23% ಇದ್ದರೆ ಜರ್ಮನಿಯಲ್ಲಿ 44%.

ಬ್ರಿಟನ್ ಮತ್ತು ಅಮೇರಿಕ ದೇಶಗಳು ರೂಸ್‍ವೆಲ್ಟ್‍ನ ಹೊಸ ಒಪ್ಪಂದದೊಂದಿಗೆ ಜಾನ್ ಮೆನಾರ್ಡ್ ಕೀನ್ಸ್‍ನ ಕಲ್ಯಾಣ ಆರ್ಥಿಕತೆಯನ್ನು ಪ್ರಾರಂಭಿಸಿದವು. ಆದರೆ, ಆ ಕ್ರಮಗಳು ಅಪವಾದ ಎನ್ನಬಹುದಾದಷ್ಟು ವಿರಳವಾಗಿದ್ದವು. ಆಡಳಿತ ವರ್ಗಕ್ಕೆ ಅದಕ್ಕಿಂತ ಹೆಚ್ಚು ಆಕರ್ಷಕವಾದ ಪರಿಹಾರವಾಗಿದ್ದು, ಬಲಪಂಥ ಅಥವಾ ಫ್ಯಾಸಿಸಂ ಕಡೆಯ ನಡಿಗೆ. ಇಟಲಿ ಆಗಲೇ ಫ್ಯಾಸಿಸ್ಟ್ ರಾಷ್ಟ್ರವಾಗಿತ್ತು. ಉದಾರ ದೇಶವಾಗಿದ್ದ ಜಪಾನ್ ದೇಶವು 1930-31ರಲ್ಲಿ ರಾಷ್ಟ್ರೀಯ- ಮಿಲಿಟರಿ ಆಳ್ವಿಕೆಯ ಕಡೆ ಮುಖ ಮಾಡಿತು. ಜರ್ಮನಿಯು 1933ರಲ್ಲಿ ನಾಝಿಗಳನ್ನು ಅಧಿಕಾರಕ್ಕೆ ತಂದಿತು. 1935ರ ಸಮಯದಲ್ಲಿ ಬಂಡವಾಳಶಾಹಿ ವ್ಯವಸ್ಥೆಯು ಫ್ಯಾಸಿಸಂನಲ್ಲಿಯೇ ತನ್ನ ಉದ್ಧಾರವನ್ನು ಕಾಣುತ್ತಿತ್ತು, ಆರ್ಥಿಕ ಬಂಡವಾಳದ ಅತ್ಯಂತ ಪ್ರತಿಗಾಮಿ ಹಾಗೂ ಅತ್ಯಂತ ಅವಕಾಶವಾದಿ ಅಪಾಯಗಳ ಬಹಿರಂಗ ಭಯೋತ್ಪಾದನೆಯ ಸರ್ವಾಧಿಕಾರದ ಆಳ್ವಿಕೆಯನ್ನು ಸ್ಥಾಪಿಸುವಲ್ಲಿ ಬಂಡವಾಳಶಾಹಿ ವ್ಯವಸ್ಥೆ ಕೆಲಸ ಮಾಡಿತು. “ಫ್ಯಾಸಿಸಂ ಆಳ್ವಿಕೆಯು ದೊಡ್ಡ ಬಂಡವಾಳಶಾಹಿಯ ಸದಸ್ಯರಿಗೆ ನೇರವಾದ ಹಾಗೂ ತಕ್ಷಣದ ಅನುಕೂಲಗಳನ್ನು ಒದಗಿಸಿತು. ಕಾರ್ಮಿಕ ಯೂನಿಯನ್‍ಗಳ ನಿರ್ಮೂಲನೆ ಹಾಗೂ ಕೆಲಸದ ಸ್ಥಳಗಳಲ್ಲಿ ಫ್ಯಾಸಿಸ್ಟ್ ಶಿಸ್ತು ಅಳವಡಿಸುವುದರಿಂದ ಫ್ಯಾಸಿಸ್ಟ್ ಜರ್ಮನಿಯ ಉನ್ನತ ವಿಭಾಗದ ಕೆಲಸವನ್ನು 15% ಹೆಚ್ಚಳ ಮಾಡಿತು.”

ಭಾರತದಲ್ಲಿಯ ಆಳುವ ವರ್ಗವು 1990ರಿಂದ ಬಿಸಿನೆಸ್ ಸ್ನೇಹಿಯಾಗಿರುವ ಸರಕಾರಗಳನ್ನು ಬಯಸುತ್ತ ಬಂದಿದೆ. ಅದು ಸಾಕಾರಗೊಂಡಿದ್ದು ವಾಜಪೇಯಿ ಆಳ್ವಿಕೆಯಲ್ಲಿ; ಆಗ ಸಂಘಟಿತ ವಲಯದಲ್ಲಿ (ಸಾರ್ವಜನಿಕ ಮತ್ತು ಖಾಸಗಿ ಎರಡೂ ವಲಯಗಳಲ್ಲಿ) ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೀಡುವುದನ್ನು ಕಾನೂನಾತ್ಮಕಗೊಳಿಸಲಾಯಿತು. ಸಚಿವರ ಒಂದು ತಂಡದ ಶಿಫಾರಸ್ಸಿನ ಆಧಾರದ ಮೇಲೆ ಭಾರತದ ಸರ್ವೋಚ್ಚ ನ್ಯಾಯಾಲಯವು (ಸುಪ್ರೀಮ್ ಕೋರ್ಟ್) ಉತ್ಪಾದನಾ ಮತ್ತು ಸೇವಾ ವಲಯಗಳ ಪ್ರಮುಖ ಮತ್ತು ಪ್ರಮುಖವಲ್ಲದ (ಕೋರ್ ಮತ್ತು ನಾನ್-ಕೋರ್) ಕ್ಷೇತ್ರಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗವನ್ನು ಕಾನೂನಾತ್ಮಕಗೊಳಿಸಿತು. 2004ರಿಂದ 2014ರವರೆಗೆ ಕಾರ್ಮಿಕರ ಶೋಷಣೆ ಹೆಚ್ಚುತ್ತಲೇ ಬಂದಿದೆ. ಮೋದಿಯವರ ಆಳ್ವಿಕೆಯಲ್ಲಿ ಕಾರ್ಪೋರೇಟ್‍ಗಳು ತುರ್ತಾದ ಹಾಗೂ ವ್ಯಾಪಕವಾದ ಕಾರ್ಮಿಕ ಸುಧಾರಣೆಗಳನ್ನು ಬಯಸಿದ್ದರು. ಮೋದಿಯ ಮೊದಲ ಟರ್ಮ್‍ನಲ್ಲಿ ಉದ್ಯೋಗಕ್ಕೆ ಹಾಗೂ ಸಾಮಾಜಿಕ ರಕ್ಷಣೆಗೆ ಸಂಬಂಧಿಸಿದ 45 ಕೇಂದ್ರೀಯ ಕಾನೂನುಗಳನ್ನು ಹಾಗೂ 200 ರಾಜ್ಯ ಕಾನೂನುಗಳನ್ನು 4 ಕೋಡ್‍ಗಳ ಅಡಿಯಲ್ಲಿ ತರಲು ಎಲ್ಲಾ ರೀತಿಯ ಪ್ರಯತ್ನಗಳು ನಡೆದವು. ಆದಾಗ್ಯೂ ಬಂಡವಾಳಶಾಹಿಗಳು ಟ್ರೇಡ್ ಯೂನಿಯನ್‍ಗಳನ್ನು ಕಿತ್ತೆಸೆಯಬೇಕೆಂದು ಹಾಗೂ ಇತರ ರಕ್ಷಣಾ ಕಾನೂನುಗಳನ್ನು ತೆಗೆಯಬೇಕೆಂದು ಬಯಸುತ್ತಿದ್ದವು. ಕೊನೆಗೆ ಗುಜರಾತ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಈ ಕೆಲಸವನ್ನು ಮುಂದುವರೆಸಿ ಇಡೀ ದುಡಿಯುವ ವರ್ಗ ಮತ್ತು ಅವರ ಕುಟುಂಬಗಳು ಅಂದರೆ ಜನಸಂಖ್ಯೆಯ 77% ಜನರು ಬಂಡವಾಳಶಾಹಿಗಳ (ಅವರನ್ನು ಬ್ರಾಹ್ಮಣ ಮತ್ತು ಬನಿಯಾ ವರ್ಗವೆಂದೂ ಕರೆಯಲಾಗುತ್ತದೆ.) ಗುಲಾಮರಾಗುವಂತೆ ಮಾಡಿದರು.

ಇಲ್ಲಿ ನೆನಪಿಡಬೇಕಾದ ಅಂಶವಂದರೆ, ಜರ್ಮನಿ, ಜಪಾನ್, ಕೋರಿಯ, ಯುಕೆ ಮತ್ತು ಅಮೇರಿಕ ದೇಶಗಳು ಅತ್ಯಂತ ಹೆಚ್ಚಿನ ಕಾರ್ಮಿಕ ಯುನಿಯನ್‍ಗಳನ್ನು ಹೊಂದಿದ ದೇಶಗಳು. ಆದರೆ ಎಲೆಕ್ಟ್ರಾನಿಕ್ಸ್, ಆಟೋಮೋಬೈಲ್ ಮತ್ತು ಐಟಿ-ಬಿಟಿ ಕಂಪನಿಗಳಲ್ಲಿ ಅತ್ಯಂತ ಮುಂದುವರೆದ ದೇಶಗಳಾಗಿವೆ.

ಆರ್ಥಿಕತೆಯು ದೇಶವನ್ನು ಮೇಲೆತ್ತಬೇಕೆಂದರೆ ಆ ದೇಶದಲ್ಲಿ ಬೇಡಿಕೆ ಹೆಚ್ಚಿರಬೇಕು ಹಾಗೂ ಅದನ್ನು ಮಾಡಬೇಕಾದರೆ ಜನರ ಖರೀದಿ ಮಾಡುವ ಶಕ್ತಿಯನ್ನು ಹೆಚ್ಚಿಸಬೇಕಾಗುತ್ತದೆ.

2019 ಸೆಪ್ಟೆಂಬರ್‍ನಲ್ಲಿ ಕಾರ್ಪೋರೇಟ್ ತೆರಿಗೆಯಲ್ಲಿ ಅತ್ಯಂತ ದೊಡ್ಡ ಕಡಿತ ಮಾಡಿದ್ದರಿಂದ ಭಾರತವು ಒಂದೂವರೆ ಲಕ್ಷ ಕೋಟಿಯ ನಷ್ಟವನ್ನು ಅನುಭವಿಸಿತು. ಈ ಮೇಲೆ ಹೇಳಿದ ಸುಗ್ರೀವಾಜ್ಞೆಗಳ ಮೂಲಕ ಪ್ರಸಕ್ತ ಆಡಳಿತವು ಬಂಡವಾಳಶಾಹಿಗಳಿಗೆ ಸ್ವರ್ಗ ನೀಡಿ, ಶ್ರೀಮಂತರ ಮತ್ತು ಬಡವರ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸಲಿದೆ.

ಕಾರ್ಮಿಕರ ಕೆಲಸದ ಮತ್ತು ಜೀವನದ ಈಗಿನ ಸ್ಥಿತಿಯು ಬಂಡಾಯ ಮಾಡುವುದನ್ನು ಅನಿವಾರ್ಯವಾಗಿಸುತ್ತಿವೆ. ದುಡಿಯುವ ವರ್ಗದ ನೋವಿಗೆ ಟ್ರೇಡ್ ಯುನಿಯನ್‍ಗಳೊಂದೇ ಉತ್ತರ. ಒಂದು ಘನತೆಯುಳ್ಳ ಜೀವನೋಪಾಯವನ್ನು ಸಾಂದರ್ಭಿಕ ಮತ್ತು ವಾಡಿಕೆಯ ಪ್ರತಿಭಟನೆಯಿಂದ ಗಳಿಸಲು ಆಗುವುದಿಲ್ಲ.

ಇತಿಹಾಸವು 1848-1871ರ ಮಧ್ಯೆ ಅನೇಕ ಕ್ರಾಂತಿಕಾರಿ ಹೋರಾಟಗಳನ್ನು ಕಂಡಿದೆ. ಚೈನಾದಲ್ಲಿ 1851ರ ತಾಯಿ ಕ್ರಾಂತಿ, 1857ರಲ್ಲಿ ಭಾರತದ ಮೊದಲ ಸ್ವಾತಂತ್ರ ಸಂಗ್ರಾಮ, 1871ರಿಂದ 1905ರ ತನಕ ಮಾಕ್ರ್ಸ್‍ವಾದ ಮತ್ತು ಭಿನ್ನಮತದ ವಿಸ್ತರಣೆ, 1905-1917ರ ದಂಗೆಗಳು ಮತ್ತು ಕ್ರಾಂತಿ, 1917-1949ರ ಅವಧಿಯ ಸೋವಿಯತ್ ಕ್ರಾಂತಿ, ಚೀನಾ ಕ್ರಾಂತಿ ಮತ್ತು ನಾಝಿ ಜರ್ಮನಿಯ ಸೋಲು.

ಇಂದಿನ ದಿನದಲ್ಲಿ ಕಾರ್ಪೋರೇಟ್‍ಗಳು ಫ್ಯಾಸಿಸಂನ ಸಿದ್ಧಾಂತದಲ್ಲಿ ತಮ್ಮ ಉದ್ಧಾರವನ್ನು ಕಾಣುತ್ತಿದ್ದಾರೆ. ಸಿಎಎ ತಂದಿದ್ದು ಹಾಗೂ ಕಾರ್ಮಿಕ ಕಾನೂನುಗಳನ್ನು ಅಮಾನತ್ತುಗೊಳಿಸುವ ಸುಗ್ರೀವಾಜ್ಞೆಗಳನ್ನು ತರುತ್ತಿರುವುದು ಖಂಡಿತವಾಗಿಯೂ ದುಡಿಯುವ ವರ್ಗದ ಮೇಲೆ ಅಂತರಯುದ್ಧ ನಡೆಸಿದಂತೆಯೇ ಸರಿ.

  • ಎಸ್‌. ಬಾಲನ್‌ (ವಕೀಲರು ಮತ್ತು ಹಿರಿಯ ಕಾರ್ಮಿಕ ಮುಖಂಡರು)
  • ಅನುವಾದ – ರಾಜಶೇಖರ್‌ ಅಕ್ಕಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...