ನೇರಳೆ ಹಣ್ಣಿನ ಮರವೂ, ನರೇಂದ್ರ ಮೋದಿಯವರೂ?…ಡಿ.ಉಮಾಪತಿ

0

1960ರಲ್ಲಿ ಪ್ರಸಿದ್ಧ ಕತೆಗಾರ ಕೃಷ್ಣಚಂದರ್ ಅವರು ಬರೆದ ಹಿಂದೀ ಕತೆಯೊಂದರಲ್ಲಿ ಇಂದಿನ ಸರ್ಕಾರದ ಟೀಕೆ ಇದೆ ಎಂದು ಆಕ್ಷೇಪಿಸಿ ಆ ಕತೆಯನ್ನು ಮೊನ್ನೆ ಮೊನ್ನೆ ಹತ್ತನೆಯ ತರಗತಿಯ ಪಠ್ಯಕ್ರಮದಿಂದ ತೆಗೆದು ಹಾಕಲಾಗಿದೆ.

ಪ್ರಸಿದ್ಧ ಹಿಂದೀ ಲೇಖಕ ಕೃಷ್ಣ ಚಂದರ್ ಅವರ ‘ಜಾಮೂನ್ ಕಾ ಪೇಡ್’ (ನೇರಳೆ ಮರ) ಎಂಬ ವಿಡಂಬನಾತ್ಮಕ ಲಘು ಕತೆಯನ್ನು ಕೇಂದ್ರ ಸರ್ಕಾರ ಐಸಿಎಸ್‍ಇ ಹತ್ತನೆಯ ತರಗತಿ ಶಾಲಾ ಪಠ್ಯದಿಂದ ತೆಗೆದುಹಾಕಿದೆ. 2015ರಲ್ಲಿ ಈ ಕತೆ ಪಠ್ಯಕ್ರಮಕ್ಕೆ ಸೇರಿತ್ತು.

ಸರ್ಕಾರೀ ಸಚಿವಾಲಯದ ಮುಂದಿನ ಹಸಿರು ಅವರಣದ ನೇರಳೆ ಮರವೊಂದು ಬಿದ್ದು ಅದರ ಅಡಿಗೆ ಸಿಕ್ಕಿಹಾಕಿಕೊಂಡ ವ್ಯಕ್ತಿಯೊಬ್ಬನ ಕತೆಯಿದು. ಮುಂಜಾನೆ ಮಾಲಿಯ ಗಮನಕ್ಕೆ ಬರುವ ಈ ಸಂಗತಿ ಸರ್ಕಾರಿ ಕರ್ಮಚಾರಿಗಳು ಮತ್ತು ಅಧಿಕಾರಿಗಳಿಗೆ ತಿಳಿಯುತ್ತದೆ. ಆದರೆ ಅವರೆಲ್ಲ ಈ ವ್ಯಕ್ತಿಯನ್ನು ಹಿಡಿದೆತ್ತಿ ಪಾರು ಮಾಡುವುದಿಲ್ಲ. ಬದಲಾಗಿ ಹೊಣೆಯನ್ನು ಮತ್ತೊಬ್ಬರಿಗೆ ಹೊರಿಸಿ ತಾವು ಪಾರಾಗುವ ವ್ಯಂಗ್ಯವಿದು.

1914-1977ರ ಅವಧಿಯಲ್ಲಿ ಜೀವಿಸಿದ್ದ ಕೃಷ್ಣ ಚಂದರ್ ಅವರು ಈ ಕತೆಯನ್ನು ಬರೆದದ್ದು 1960ರಲ್ಲಿ. ಕೆಲ ಸರ್ಕಾರಿ ಅಧಿಕಾರಿಗಳು ಈ ಕತೆಯಲ್ಲಿ ಹಾಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಯನ್ನು ಕಂಡರಂತೆ. ಹೀಗಾಗಿ ಕತೆಗೆ ಅರ್ಧಚಂದ್ರ ಪ್ರಯೋಗ ಆಗಿದೆ. 2020 ಮತ್ತು 2021ರ ಐ.ಸಿ.ಎಸ್.ಇ. ಪರೀಕ್ಷೆಗಳಲ್ಲಿ ಈ ಕತೆಯ ಕುರಿತು ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ ಎಂದು ನೋಟಿಸೊಂದರಲ್ಲಿ ತಿಳಿಯಪಡಿಸಲಾಗಿದೆ.
ಹತ್ತನೆಯ ತರಗತಿಯ ಶಾಲಾ ಮಕ್ಕಳು ಓದುವಂತಹ ಕತೆಯಲ್ಲ ಇದು ಎಂಬ ವಿವರಣೆಯನ್ನು ನೀಡಿರುವ ಐಸಿಎಸ್‍ಇ, ಯಾಕೆ ಏನು ಎಂಬ ಯಾವುದೇ ಸಮಜಾಯಿಷಿ ನೀಡಿಲ್ಲ.

ರಾತ್ರಿ ಬೀಸಿದ ಭಾರೀ ಬಿರುಗಾಳಿಯ ಕಾರಣ ಸಚಿವಾಲಯದ ಹುಲ್ಲುಹಾಸಿನ ನೇರಳೆ ಮರವೊಂದು ನೆಲಕ್ಕುರುಳುತ್ತದೆ. ಪ್ರಸಿದ್ಧ ಕವಿಯೊಬ್ಬನು ಅದರ ಕೆಳಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಮುಂಜಾನೆ ಈ ಸಂಗತಿಯನ್ನು ಗಮನಿಸುವ ಮಾಲಿ ಧಾವಿಸಿ ಹೋಗಿ ಚಪರಾಸಿಗೆ ತಿಳಿಸುತ್ತಾನೆ. ಚಪರಾಸಿ ಗುಮಾಸ್ತನ ಬಳಿ ತೆರಳುತ್ತಾನೆ. ಗುಮಾಸ್ತ ಸೂಪರಿಂಟಿಂಡೆಂಟ್ ಬಳಿಗೆ ಧಾವಿಸುತ್ತಾನೆ. ತುಸು ಹೊತ್ತಿನ ನಂತರ ಮರದ ಕೆಳಗೆ ಸಿಕ್ಕಿಹಾಕಿಕೊಂಡ ವ್ಯಕ್ತಿಯ ಸುತ್ತಮುತ್ತ ಗುಂಪು ಜಮಾಯಿಸುತ್ತದೆ. ಮರ ಬಿಡುತ್ತಿದ್ದ ರಸಭರಿತ ನೇರಳೆ ಹಣ್ಣಿನ ಚರ್ಚೆ ನಡೆಯುತ್ತದೆ. ಇನ್ನಷ್ಟು ಮಾಲಿಗಳು, ಚಪರಾಸಿಗಳು ಹಾಗೂ ಗುಮಾಸ್ತರೆಲ್ಲ ಕೈ ಹಾಕಿದರೆ ಮರದಡಿಯ ವ್ಯಕ್ತಿಯನ್ನು ಹೊರಗೆಳೆಯಬಹುದು ಎನ್ನುತ್ತಾನೆ ಮಾಲಿ. ಮಾಲಿ ಹೇಳುವುದು ಸರಿಯೆಂದು ಬಹಳಷ್ಟು ಮಂದಿ ಮರವನ್ನು ಸರಿಸಲು ಮುಂದಾಗುತ್ತಾರೆ. ನಿಲ್ಲಿ, ನಾನು ಅಂಡರ್ ಸೆಕ್ರೆಟರಿ ಅವರನ್ನು ಕೇಳಬೇಕು ಎನ್ನುತ್ತಾನೆ ಸೂಪರಿಂಟಿಂಡೆಂಟ್. ಅಂಡರ್ ಸೆಕ್ರೆಟರಿಯು ಡೆಪ್ಯೂಟಿ ಸೆಕ್ರೆಟರಿ ಬಳಿ ಹೋಗುತ್ತಾನೆ. ಡೆಪ್ಯೂಟಿ ಸೆಕ್ರೆಟರಿ ಜಾಯಿಂಟ್ ಸೆಕ್ರೆಟರಿ ಮುಂದೆ ಹಾಜರಾಗುತ್ತಾನೆ. ಜಾಯಿಂಟ್ ಸೆಕ್ರೆಟರಿಯು ಚೀಫ್ ಸೆಕ್ರೆಟರಿ ಬಳಿಗೆ ತೆರಳುತ್ತಾನೆ. ಚೀಫ್ ಸೆಕ್ರೆಟರಿಯು ಜಾಯಿಂಟ್ ಸೆಕ್ರೆಟರಿಗೆ ಏನೋ ಹೇಳುತ್ತಾನೆ. ಜಾಯಿಂಟ್ ಸೆಕ್ರೆಟರಿ ಡೆಪ್ಯೂಟಿ ಸೆಕ್ರೆಟರಿಗೆ, ಡೆಪ್ಯೂಟಿಯು ಅಂಡರ್ ಸೆಕ್ರೆಟರಿಗೆ ಅದನ್ನು ಹೇಳುತ್ತಾನೆ. ಕಡತ ಕಾಲ್ಚೆಂಡಾಗುತ್ತದೆ. ಅರ್ಧ ದಿನ ಕಳೆದೇ ಹೋಗಿರುತ್ತದೆ. ಊಟದ ವಿರಾಮ. ಮರದ ಬಳಿ ಸೇರಿದ ಗುಂಪು ಪುನಃ ವ್ಯಕ್ತಿಯನ್ನು ಪಾರು ಮಾಡಲು ತಾನೇ ಮುಂದಾಗುತ್ತದೆ. ಅಷ್ಟರಲ್ಲಿ ಸೂಪರಿಂಟಿಂಡೆಂಟ್ ಕಡತ ಹಿಡಿದು ಓಡಿಬರುತ್ತಾನೆ. ಈ ಮರವನ್ನು ನಾವಾಗಿಯೇ ಸರಿಸುವಂತಿಲ್ಲ. ನಾವು ವಾಣಿಜ್ಯ ಇಲಾಖೆಯವರು. ಮರ ಕೃಷಿ ಇಲಾಖೆಯಡಿ ಬರುತ್ತದೆ. ಕಡತದ ಮೇಲೆ ತುರ್ತು ಎಂದು ಬರೆದು ಕೃಷಿ ಇಲಾಖೆಗೆ ಕಳಿಸುತ್ತೇನೆ. ಅಲ್ಲಿಂದ ಜವಾಬು ಬರುತ್ತಲೇ ಮರವನ್ನು ಸರಿಸೋಣ ಎಂದು ಜನರನ್ನು ತಡೆಯುತ್ತಾನೆ. ಮರವನ್ನು ಸರಿಸುವ ಜವಾಬ್ದಾರಿ ನಿಮ್ಮದೇ ಎಂದು ವಾಣಿಜ್ಯ ಮತ್ತು ಕೃಷಿ ಇಲಾಖೆ ಪರಸ್ಪರ ದೂಷಿಸುತ್ತವೆ.

ಮರುದಿನವೂ ಕಡತ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ, ಒಬ್ಬ ಅಧಿಕಾರಿಯಿಂದ ಮತ್ತೊಬ್ಬ ಅಧಿಕಾರಿಗೆ ಸುತ್ತಾಡುತ್ತಲೇ ಇರುತ್ತದೆ. ಹಣ್ಣು ಬಿಡುವ ಮರವಾದ ಕಾರಣ ತೋಟಗಾರಿಕೆ ಇಲಾಖೆಗೆ ಹೊತ್ತು ಹಾಕುವ ಹೊತ್ತಿಗೆ ಸಂಜೆಯಾಗಿರುತ್ತದೆ. ಜನ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಮರವನ್ನು ಕತ್ತರಿಸುವ ಪರಿಸ್ಥಿತಿಯನ್ನು ತಡೆಯಲು ಸುತ್ತ ಪೆÇಲೀಸ್ ಕಾವಲು ಹಾಕಲಾಗಿರುತ್ತದೆ. ಮರದಡಿ ಸಿಕ್ಕಿ ಹಾಕಿಕೊಂಡ ವ್ಯಕ್ತಿಯ ಕುರಿತು ದಯೆ ತೋರುವ ಪೆÇಲೀಸ್ ಪೇದೆಯೊಬ್ಬ, ಆತನಿಗೆ ಉಣ್ಣಿಸಲು ಮಾಲಿಗೆ ಅನುಮತಿ ನೀಡುತ್ತಾನೆ. ನಿಮ್ಮ ಕಡತ ಸಂಚರಿಸುತ್ತಿದೆ. ನಾಳೆ ತೀರ್ಮಾನ ಆಗುವ ವಿಶ್ವಾಸ ಇದೆ ಎಂದು ಮಾಲಿ ಮರದಡಿಯ ವ್ಯಕ್ತಿಗೆ ತಿಳಿಸುತ್ತಾನೆ. ಮೂರನೆಯ ದಿನ ತೋಟಗಾರಿಕೆ ಇಲಾಖೆಯಿಂದ ಕಡತ ವಾಪಸು ಬರುತ್ತದೆ. ಫಲ ಬಿಡುವ ಮರವನ್ನು ಕಡಿಯಲಾಗದು ಎಂದಿರುತ್ತದೆ.

ಆದರೆ ವ್ಯಕ್ತಿಯನ್ನು ಪಾರು ಮಾಡಲು ಯಾರೂ ಮುಂದಾಗುವುದಿಲ್ಲ. ಅತ್ತ ಇತ್ತ ಜಗ್ಗಾಡುವ ಈ ಸಂಗತಿ ನಾಲ್ಕು ದಿನಗಳ ನಂತರ ಮುಖ್ಯಕಾರ್ಯದರ್ಶಿಯವರ ಮೇಜನ್ನು ತಲುಪುತ್ತದೆ. ಆ ನಂತರವೂ ಜವಾಬ್ದಾರಿಯನ್ನು ಒಂದು ಸರ್ಕಾರಿ ಇಲಾಖೆಯು ಮತ್ತೊಂದು ಸರ್ಕಾರಿ ಇಲಾಖೆಗೆ ದಾಟಿಸಿ ಕೈ ತೊಳೆದುಕೊಳ್ಳುವ ಪ್ರಯತ್ನಗಳು ನಡೆದಿರುತ್ತವೆ. ಕೃಷಿವನ ಇಲಾಖೆಯಿಂದ ಸಂಸ್ಕೃತಿ ಇಲಾಖೆಗೆ ತಲುಪುತ್ತದೆ. ಮರದ ಕೆಳಗೆ ಸಿಕ್ಕಿಹಾಕಿಕೊಂಡಿರುವ ವ್ಯಕ್ತಿ ಒಬ್ಬ ಪ್ರಸಿದ್ಧ ಕವಿಯಾಗಿದ್ದ ಕಾರಣ ವಿಷಯ ಸಂಸ್ಕೃತಿ ಇಲಾಖೆಗೆ ರವಾನೆಯಾಗಿರುತ್ತದೆ.

ಸಂಸ್ಕೃತಿ ಇಲಾಖೆಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡುತ್ತಾನೆ. ಮರದ ಕೆಳಗೆ ಸಿಕ್ಕಿ ಹಾಕಿಕೊಂಡಿರುವ ಪ್ರಸಿದ್ಧ ಕವಿಗೆ ಪ್ರಶಸ್ತಿ ಗಳಿಸಿಕೊಟ್ಟಿದ್ದ ಪುಸ್ತಕವನ್ನು ಹೊಗಳುತ್ತಾನೆ. ಮತ್ತು ಕವಿಯನ್ನು ಪಾರು ಮಾಡುವುದು ತನ್ನ ಕೆಲಸ ಅಲ್ಲವೆಂದು ಖುದ್ದು ಕವಿಗೇ ಹೇಳುತ್ತಾನೆ. ಆ ನಂತರ ಕವಿ ಮರದ ಕೆಳಗೆ ಸಿಕ್ಕಿಹಾಕಿಕೊಂಡಿರುವ ಕಡತ ಆರೋಗ್ಯ ಇಲಾಖೆಯನ್ನು ತಲುಪುತ್ತದೆ. ಈ ಇಲಾಖೆ ಕಡತವನ್ನು ವಿದೇಶ ಮಂತ್ರಾಲಯಕ್ಕೆ ಸಾಗ ಹಾಕುತ್ತದೆ. ಈ ನೇರಳೆ ಮರವನ್ನು ನೆರೆಯ ದೇಶದ ಪ್ರಧಾನಮಂತ್ರಿ ಇಲ್ಲಿಗೆ ಬಂದಾಗ ನೆಟ್ಟಿದ್ದೇ ಅದಕ್ಕೆ ಕಾರಣ.

ಈ ಮರವನ್ನು ಕತ್ತರಿಸಲು ವಿದೇಶೀ ಮಂತ್ರಾಲಯ ಒಪ್ಪುವುದಿಲ್ಲ. ನೆರೆಯ ದೇಶದ ಪ್ರಧಾನಿ ನೆಟ್ಟಿದ್ದ ಈ ಮರವನ್ನು ಕಡಿದರೆ ಉಭಯ ದೇಶಗಳ ನಡುವಣ ಸೌಹಾರ್ದ ಸಂಬಂಧ ಕೆಟ್ಟು ಹೋಗಬಹುದು ಎನ್ನುತ್ತದೆ. ಕಡೆಗೆ ಈ ವಿಷಯ ಪ್ರಧಾನಮಂತ್ರಿಯವರ ಸನ್ನಿಧಾನಕ್ಕೆ ಬರುತ್ತದೆ. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮರವನ್ನು ಕತ್ತರಿಸಲು ಒಪ್ಪಿಗೆ ನೀಡುತ್ತಾರೆ. ಈ ಆದೇಶದ ಕಡತವನ್ನು ಖುದ್ದು ಸೂಪರಿಂಟಿಂಡೆಂಟ್ ನೇರಳೆ ಮರದಡಿ ಸಿಕ್ಕಿ ಹಾಕಿಕೊಂಡಿದ್ದ ಕವಿಯ ಬಳಿಗೆ ಬರುತ್ತಾನೆ. ನೋಡಪ್ಪಾ, ಪ್ರಧಾನಿ ಎಲ್ಲ ಅಂತಾರಾಷ್ಟ್ರೀಯ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡು ಮರ ಕತ್ತರಿಸಲು ಅನುಮತಿ ಕೊಟ್ಟಿದ್ದಾರೆ, ನಾಳೆ ಈ ಮರವನ್ನು ಕತ್ತರಿಸಿ ನಿನ್ನನ್ನು ಬಚಾವು ಮಾಡಲಾಗುವುದು ಎಂದು ಕೂಗಿ ಹೇಳುತ್ತಾನೆ. ಬಳಿ ಬಂದು ಅವನ ಭುಜ ಅಲುಗಿಸಿ ಮತ್ತೆ ಹೇಳುತ್ತಾನೆ. ಆದರೆ ಕವಿಯ ಕೈ ತಣ್ಣಗಾಗಿರುತ್ತದೆ. ಕಣ್ಣು ಗುಡ್ಡೆಗಳ ಬೆಳಕು ಆರಿರುತ್ತದೆ. ಇರುವೆಗಳ ದೊಡ್ಡ ಸಾಲೊಂದು ಆತನ ಬಾಯಿಯೊಳಕ್ಕೆ ಹೊಗುತ್ತಿರುತ್ತದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here