ಮಹಾರಾಷ್ಟ್ರ ಬಿಜೆಪಿ ಬಿಕ್ಕಟ್ಟು: ಫಡ್ನವೀಸ್ ವಿರುದ್ಧ ಸಿಡಿದ ಪಂಕಜಾ ಮುಂಡೆಗೆ ಖಡ್ಸೆ, ಮೆಹ್ತಾ ಬಲ!

ಸರ್ಕಾರ ರಚಿಸುವ ವಿಫಲ ಯತ್ನಕ್ಕೆ ಮುಂದಾಗಿ ಕೈಸುಟ್ಟುಕೊಂಡ ನಂತರ ಮಹಾರಾಷ್ಟ್ರ ಬಿಜೆಪಿಯೊಳಗೆ ಎಲ್ಲವೂ ನೆಟ್ಟಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸದೆ, ದೇವೇಂದ್ರ ಫಡ್ನವೀಸ್‌ರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಯತ್ನಿಸಿದ ಹೈಕಮಾಂಡ್‌ನ ಆತುರದ ಕ್ರಮದ ವಿರುದ್ಧ ಈಗ ಒಬ್ಬೊಬ್ಬರೇ ಸಿಡಿದೇಳುತ್ತಿದ್ದಾರೆ. ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ದಿವಂಗತ ಗೋಪಿನಾಥ ಮುಂಡೆಯವರ ಜನ್ಮದಿನದ ಪ್ರಯುಕ್ತ ಭೀಡ್‌ನಲ್ಲಿ ಅವರ ಮಗಳು ಪಂಕಜಾ ಮುಂಡೆ ಇಂದು ಆಯೋಜಿಸಿದ್ದ ರ್‍ಯಾಲಿ ಭಿನ್ನಮತದ ಮತ್ತೊಂದು ಮಜಲಿಗೆ ಸಾಕ್ಷಿಯಾಯಿತು.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದ ಭದ್ರ ಕೋಟೆಯಾಗಿದ್ದ ಪಾರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲನುಭವಿಸಿದ ನಂತರ ಪಂಕಜಾ ಮುಂಡೆ ಬಹಿರಂಗವಾಗಿಯೇ ಪಕ್ಷದ ವಿರುದ್ಧ ಕಿಡಿಕಾರಿದ್ದರು. ತಮ್ಮ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗಳ ಬ್ಯಾನರ್‌ಗಳಲ್ಲಿ ಬಿಜೆಪಿ ಚಿಹ್ನೆಯನ್ನು ತೆರವುಗೊಳಿಸಿ ಪಕ್ಷ ತೊರೆಯುವರೇ ಎಂಬ ಅನುಮಾನ ಮೂಡಿಸಿದ್ದರು.

ತನ್ನ ಸೋಲಿಗೆ ಸ್ವಪಕ್ಷೀಯರ, ಮುಖ್ಯವಾಗಿ ದೇವೇಂದ್ರ ಫಡ್ನವೀಸ್‌ರ ಚಿತಾವಣೆಯೇ ಕಾರಣ ಎನ್ನುವ ಬಲವಾದ ಸಂಶಯ ಪಂಕಜಾ ಅವರಿಗಿದೆ. ಹಿಂದಿನ ಫಡ್ನವೀಸ್ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ, ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಪಂಕಜಾ ತಮ್ಮ ಕುಟುಂಬದ ಪ್ರಭಾವ ಬಳಸಿಕೊಂಡು ಮುಂದಿನ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದರಿಂದಾಗಿಯೇ ತನಗೆ ಆಕೆ ಪ್ರತಿಸ್ಪರ್ಧಿಯಾಗದಿರಲೆಂದು ಫಡ್ನವೀಸ್, ಪಂಕಜಾರನ್ನು ಸೋಲಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದರಿಂದ ಸಿಟ್ಟಿಗೆದ್ದಿರುವ ಪಂಕಜಾ ಫಲಿತಾಂಶ ಬಂದ ಕ್ಷಣದಿಂದಲೂ ಪಕ್ಷ ತೊರೆಯುವ ಸೂಚನೆಗಳನ್ನು ನೀಡುತ್ತಲೇ ಬಂದಿದ್ದರು. ಪ್ರತಿವರ್ಷದಂತೆ ಈ ವರ್ಷವೂ ತನ್ನ ತಂದೆಯ ಜನ್ಮದಿನವಾದ ಡಿಸೆಂಬರ್ ೧೨ರಂದು ನಡೆಸುವ ರ್‍ಯಾಲಿಯಲ್ಲಿ ತನ್ನ ಮುಂದಿನ ನಿರ್ಧಾರ ಘೋಷಿಸುವುದಾಗಿ ಹೇಳಿದ್ದರು. ಹಾಗಾಗಿ ಇವತ್ತಿನ ರ್‍ಯಾಲಿಗೆ ವಿಶೇಷ ಮಹತ್ವ ಬಂದಿತ್ತು.

ರ್‍ಯಾಲಿಯಲ್ಲಿ ಪಕ್ಷ ತೊರೆಯುವ ಬಗ್ಗೆ ಸ್ಪಷ್ಟವಾಗಿ ಘೋಷಿಸದೆ ಹೋದರು, ತಾನು ಇನ್ಮುಂದೆ ಬಿಜೆಪಿ ಕೋರ್ ಕಮಿಟಿಯ ಸದಸ್ಯೆಯಾಗಿ ಉಳಿದಿಲ್ಲ ಎನ್ನುವ ಮೂಲಕ ಪಕ್ಷದಿಂದ ಈಗ ಮೊದಲಿಗಿಂತ ದೂರ ಸರಿದಿದ್ದೇನೆ ಎಂಬ ಸುಳಿವು ನೀಡಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಒಳಗೊಂಡಂತೆ ರಾಜ್ಯದ ಘಟಾನುಘಟಿ ನಾಯಕರು ಭಾಗವಹಿಸಿದ್ದ ರ್‍ಯಾಲಿಯ ವೇದಿಕೆಯಲ್ಲಿ ಪರೋಕ್ಷವಾಗಿ ದೇವೇಂದ್ರ ಫಡ್ನವೀಸ್‌ರನ್ನು ಪಂಕಜಾ ತರಾಟೆಗೆ ತೆಗೆದುಕೊಂಡದ್ದು ವಿಶೇಷವಾಗಿತ್ತು.

ಏಕನಾಥ್ ಖಡ್ಸೆ

ಕುಮಾರಿ ಮುಂಡೆ ತರಹ ಬೇರೆಬೇರೆ ಕಾರಣಗಳಿಗೆ ಫಡ್ನವೀಸ್ ನಾಯಕತ್ವದ ಮೇಲೆ ಮುನಿಸಿಕೊಂಡಿರುವ ಏಕನಾಥ್ ಖಡ್ಸೆ ಮತ್ತು ಪ್ರಕಾಶ್ ಮೆಹ್ತಾ ಕೂಡಾ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಪಂಕಜಾ ಮುಂಡೆಯ ಜೊತೆಗೆ ಬಂಡಾಯಕ್ಕೆ ಕೈಜೋಡಿಸಿರುವ ಸೂಚನೆ ನೀಡಿರೋದು ಬಿಜೆಪಿಯ ಭಿನ್ನಮತದ ಬೇಗುದಿಯನ್ನು ಹೆಚ್ಚಿಸಿದೆ.

ಪ್ರಕಾಶ್ ಮೆಹ್ತಾ

“ಒಂದು ಚುನಾವಣೆಯ ಸೋಲಿನ ಬಗ್ಗೆ ನಾನು ಅಷ್ಟಾಗಿ ತಲೆಕೆಡಿಸಿಕೊಳ್ಳುವವಳಲ್ಲ. ಆದರೆ ಪರಿಸ್ಥಿತಿಗಳು ಹೇಗಿವೆಯೆಂದರೆ ನನ್ನನ್ನು ಹತಾಶೆಗೆ ತಳ್ಳುತ್ತಿವೆ. ಆದರೆ ನಾನು ಖಂಡಿತ ಪಕ್ಷ ತೊರೆಯುವುದಿಲ್ಲ. ಬೇಕಾದರೆ ಪಕ್ಷಕ್ಕೆ ನಾನು ಬೇಡವಾಗಿದ್ದರೆ, ಪಕ್ಷವೇ ನಿರ್ಧಾರ ತೆಗೆದುಕೊಳ್ಳಲಿ. ಕೆಲವರು ನನ್ನನ್ನು ‘ಮಹಾತ್ವಾಕಾಂಕ್ಷಿ ಹೆಣ್ಣು’ ಅಂತ ಬ್ರಾಂಡ್ ಮಾಡಿದಾರೆ. ನನ್ನ ವಿರುದ್ಧ ಪಕ್ಷಕ್ಕೆ ಕಿವಿಚುಚ್ಚಿದ್ದಾರೆ. ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಅಂತ ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಯಾವತ್ತೂ ನಾನು ಆ ಮಾತು ಹೇಳಿದವಳಲ್ಲ. ಆದ್ರೆ ನನ್ನದೊಂದು ಪ್ರಶ್ನೆ ಇದೆ. ಒಬ್ಬ ವ್ಯಕ್ತಿ ಮಹತ್ವಾಕಾಂಕ್ಷಿಯಾಗುವುದೇ ತಪ್ಪಾ? ರಾಜ್ಯವನ್ನು ಒಬ್ಬ ಮಹಿಳೆ ಮುನ್ನಡೆಸಬಾರದಾ?” ಎಂದು ರ್‍ಯಾಲಿಯಲ್ಲಿ ಪಂಕಜಾ ಕಿಡಿಕಾರಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಅವರು ಪಾರ್ಲಿ ಕ್ಷೇತ್ರದಲ್ಲಿ ಎನ್‌ಸಿಪಿಯಿಂದ ಸ್ಪರ್ಧಿಸಿದ್ದ ತಮ್ಮ ಸೋದರ ಸಂಬಂಧಿಯಾದ ಧನಂಜಯ್ ಮುಂಡೆ ವಿರುದ್ಧ ಸೋಲನುಭವಿಸಿದ್ದರು. ತನ್ನ ಭಾಷಣದಲ್ಲಿ ಈ ಸೋಲಿಗೆ ನಡೆದಿದ್ದ ತಂತ್ರಗಾರಿಕೆಯ ಪ್ರಚೋದನೆಗಳನ್ನು ಉಲ್ಲೇಖಿಸಿದ್ದ ಪಂಕಜಾ ಮುಂಡೆ ನಮ್ಮದೇ ಕೆಲ ನಾಯಕರಿಗೆ (ದೇವೇಂದ್ರ ಫಡ್ನವೀಸ್‌ರನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ) ನಾನು ಗೆಲ್ಲುವುದು ಇಷ್ಟವಿರಲಿಲ್ಲ. ಹಾಗಾಗಿ ಸೋಲಬೇಕಾಯಿತು ಎಂದಿದ್ದಾರೆ.

“ನಾನು ಪಕ್ಷ ತ್ಯಜಿಸುವುದಿಲ್ಲ. ಆದರೆ 2020ರ ಜನವರಿ 27ರಂದು ಔರಂಗಾಬಾದ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ” ಎಂದು ಸಾರುವ ಮೂಲಕ, ಪಕ್ಷ ತೊರೆದು ತನ್ನನ್ನು ಸೋಲಿಸಿದವರಿಗೆ ಹಾದಿ ಸುಲಭ ಮಾಡಿಕೊಡುವುದಿಲ್ಲ, ಬದಲಿಗೆ ಪಕ್ಷದೊಳಗೆ ಬಂಡಾಯದ ತಿದಿ ಊದುತ್ತೇನೆ ಎಂಬ ಸುಳಿವು ನೀಡಿದ್ದಾರೆ. ಇಂದಿನ ರ್‍ಯಾಲಿಯಲ್ಲಿ ಏಕನಾಥ್ ಖಡ್ಸೆ ಮತ್ತು ಪ್ರಕಾಶ್ ಮೆಹ್ತಾರಂತಹ ಅತೃಪ್ತರ ಉಪಸ್ಥಿತಿ ಅದನ್ನು ಒತ್ತಿಹೇಳುತ್ತಿದೆ.
ಅಂದಹಾಗೆ, ಪಂಕಜಾ ಮುಂಡೆಯ ತಂಗಿ ಪ್ರೀತಮ್ ಮುಂಡೆ ಭೀಡ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ. ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ದಿವಂಗತ ಪ್ರಮೋದ್ ಮಹಾಜನ್‌ರ ಸೋದರ ಸೊಸೆಯೂ ಹೌದು. ಹಾಗಾಗಿ ಮಹಾರಾಷ್ಟ್ರ ರಾಜಕಾರಣದಲ್ಲಿ ಪಂಕಜಾ ಮುಂಡೆ ಕುಟುಂಬಕ್ಕೆ ರಾಜಕೀಯ ಪ್ರಭಾವವಿದೆ. ಪಂಕಜಾ ಮುಂಡೆ ಬಿಜೆಪಿ ತೊರೆದು ಶಿವಸೇನೆ ಸೇರಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

1 COMMENT

LEAVE A REPLY

Please enter your comment!
Please enter your name here