Homeಮುಖಪುಟದೆಹಲಿ ಮಹಿಳೆಯರಿಗೆ ಪ್ರಯಾಣ ಉಚಿತ: ಸಮಾನತೆಯ ಹಾದಿಯಲ್ಲೊಂದು ಪರಿಣಾಮಕಾರಿ ಹೆಜ್ಜೆ

ದೆಹಲಿ ಮಹಿಳೆಯರಿಗೆ ಪ್ರಯಾಣ ಉಚಿತ: ಸಮಾನತೆಯ ಹಾದಿಯಲ್ಲೊಂದು ಪರಿಣಾಮಕಾರಿ ಹೆಜ್ಜೆ

ಕರ್ನಾಟಕದ ಬೆಂಗಳೂರಿನಲ್ಲೂ ವಾಹನಗಳ ದಟ್ಟಣೆ ಮಿತಿಮೀರಿದೆ ಹಾಗೂ ಬಸ್ ಮತ್ತು ಮೆಟ್ರೊ ಪ್ರಯಾಣದ ದರಗಳು ದೇಶದಲ್ಲೇ ಎಲ್ಲಕ್ಕಿಂತ ಹೆಚ್ಚು. ಹಾಗಾಗಿ ಕರ್ನಾಟಕ ಸರಕಾರವೂ ಇಂತಹ ಒಂದು ಕ್ರಮವನ್ನು ಕೈಗೊಳ್ಳಲು ಇದು ಸಕಾಲ.

- Advertisement -
- Advertisement -

| ನ್ಯಾಯಪಥ ಸಂಪಾದಕೀಯ |

ಮೊನ್ನೆ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ದೆಹಲಿಯಲ್ಲಿ ಮಹಿಳೆಯರಿಗೆ ಬಸ್ ಹಾಗೂ ಮೆಟ್ರೊ ಪ್ರಯಾಣ ಉಚಿತಗೊಳಿಸಲು ದೆಹಲಿ ಸರಕಾರ ಯೋಜನೆ ರೂಪಿಸಲಿದೆ ಎಂದು ತಿಳಿಸಿದರು. ಇದು ಖಂಡಿತವಾಗಿಯೂ ಒಂದು ಸ್ವಾಗತಾರ್ಹ ಕ್ರಮ.

ಕಳೆದ ಹಲವು ದಶಕಗಳಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ನಮ್ಮ ದೇಶದಲ್ಲಿ ಮಹಿಳೆಯರ ಸ್ಥಿತಿ ಇನ್ನೂ ದುಸ್ತರವಾಗಿದೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಎಲ್ಲಾ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆಯುವವರು ಬಾಲಕಿಯರೇ ಆಗಿದ್ದರೂ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಅನುಪಾತ ಇನ್ನೂ ಕಡಿಮೆ ಇದೆ. ಒಂದೇ ಕೆಲಸಕ್ಕೆ ಮಹಿಳೆಯರು ಪಡೆಯುವ ವೇತನ ಪುರುಷರು ಪಡೆಯುವ ವೇತನಕ್ಕಿಂತ ಕಡಿಮೆಯಾಗಿರುವುದೂ ವಾಸ್ತವ.

ಉದ್ಯೋಗಗಳಲ್ಲೂ ಮಹಿಳೆಯರ ಭಾಗವಹಿಸುವಿಕೆ ಪುರುಷರಿಗಿಂತ ತುಂಬಾ ಕಡಿಮೆಯಾಗಿದೆ. ಇದರೊಂದಿಗೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯದಲ್ಲೂ ಮಹಿಳೆಯರ ಪ್ರಾತಿನಿಧ್ಯ ಕಡಿಮೆ. ಶಿಕ್ಷಣವನ್ನು ತೊರೆಯುವ ಮಕ್ಕಳಲ್ಲಿ ಹೆಚ್ಚಿನವರು ಬಾಲಕಿಯರೇ. ಇಂತಹ ಸನ್ನಿವೇಶದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಕ್ರಾಂತಿಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯಕ. ಆ ನಿಟ್ಟಿನಲ್ಲಿ ಆಗಬೇಕಾದ ನೂರಾರು ಕ್ರಮಗಳಲ್ಲಿ ದೆಹಲಿ ಬಸ್ ಮತ್ತು ಮೆಟ್ರೊ ಪ್ರಯಾಣವನ್ನು ಮಹಿಳೆಯರಿಗೆ ಉಚಿತಗೊಳಿಸುವಂತಹವು ಒಂದು.

ದೆಹಲಿಯಲ್ಲಿ ಕಳೆದ ವರ್ಷ ಬಸ್ ಮತ್ತು ಮೆಟ್ರೊ ಪ್ರಯಾಣದರವನ್ನು ಹೆಚ್ಚಿಸಿದಾಗ ಅದರಿಂದ ತೊಂದರೆಗೊಳಗಾದವರು ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ದಿನಕ್ಕೆ ಸರಾಸರಿ ಒಂದು ನೂರು ರೂಪಾಯಿಗಳನ್ನು ಪ್ರಯಾಣಕ್ಕೆ ಖರ್ಚು ಮಾಡುವುದು ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಈ ಕ್ರಮದಿಂದ ಆ ಹೊರೆ ಕಡಿಮೆಯಾಗಲಿದ್ದು, ಉಳಿತಾಯವಾಗುವ ಹಣವನ್ನು ತಮಗಾಗಿ, ತಮ್ಮ ಕುಟುಂಬಕ್ಕಾಗಿ ಬಳಸಲು ಸಹಕಾರಿಯಾಗಲಿದೆ. ಇದನ್ನು ಪುರುಷ ವರ್ಸಸ್ ಮಹಿಳೆ ಎಂದು ನೋಡಬಾರದು. ಪ್ರಯಾಣವನ್ನು ಉಚಿತವಾಗಿಸಿರುವುದು ಇಲ್ಲಿನ ಮಹಿಳೆಯರಿಗೇ ಹೊರತು ಅನ್ಯ ಗೃಹಗಳಿಂದ ಬಂದ ಜೀವಿಗಳಿಗಲ್ಲ. ಈ ಕ್ರಮದಿಂದ ಆಗುವ ಲಾಭ, ಅವರ ಕುಟುಂಬಕ್ಕೆ ಮತ್ತು ಇಡೀ ಸಮಾಜಕ್ಕೇ ಆಗಲಿದೆ.

ದೆಹಲಿಯಲ್ಲಿ ಮತ್ತು ದೇಶದ ಇತರೆಡೆಯಲ್ಲಿ ಮಹಿಳೆಯರ ಸುರಕ್ಷತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಮಹಿಳೆಯರಿಗೆ ಸಾರ್ವಜನಿಕ ಸಾರಿಗೆಯೇ ಅತ್ಯಂತ ಸುರಕ್ಷಿತವಾದದ್ದು ಎನ್ನುವುದರಲ್ಲಿ ಸಂಶಯವಿಲ್ಲ. ಸಾರ್ವಜನಿಕ ಪ್ರಯಾಣವನ್ನು ಉಚಿತಗೊಳಿಸುವುದರಿಂದ ಹೆಚ್ಚೆಚ್ಚು ಮಹಿಳೆಯರು ಸಾರ್ವಜನಿಕ ಸಾರಿಗೆಯನ್ನು ಬಳಸಿ, ಅದನ್ನು ಇನ್ನಷ್ಟು ಸುರಕ್ಷಿತವಾಗಿಸುವಲ್ಲಿ ಸಹಕಾರಿಯಾಗಲಿದೆ. ಮಹಿಳೆಯರ ಆರ್ಥಿಕ ಸ್ವಾತಂತ್ರ ಇನ್ನೂ ಪುರುಷರಿಗೆ ಹೋಲಿಸುವಷ್ಟು ಇಲ್ಲವಾದುದರಿಂದ, ಒಂದು ಸಣ್ಣ ಸ್ವಾತಂತ್ರ್ಯವನ್ನೂ ದೆಹಲಿಯ ಮಹಿಳೆಯರು ಅನುಭವಿಸಲಿದ್ದಾರೆ.

ಈ ಕ್ರಮದಿಂದ ವರ್ಷಕ್ಕೆ 700 ಕೋಟಿಗಳಷ್ಟು ಹಣ ವ್ಯಯಿಸಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇತರ ಯೋಜನೆಗಳಿಗೆ ಮಾಡುವ ಖರ್ಚಿಗೆ ಹೋಲಿಸಿದರೆ ಇದು ದೊಡ್ಡ ಹೊರೆಯಾಗಲಾರದು ಮತ್ತು ಇಂತಹ ಕಲ್ಯಾಣ ಯೋಜನೆಗಳನ್ನು ರೂಪಿಸುವುದು ಸರಕಾರದ ಒಂದು ಪ್ರಮುಖ ಕರ್ತವ್ಯ. ಹಾಗೂ ಇಂತಹ ಕಲ್ಯಾಣ ಯೋಜನೆಗಳಿಂದ ಸಮಾಜದಲ್ಲಿ ಆಗುವ ಬದಲಾವಣೆಗಳಿಂದ ಒಟ್ಟಾರೆ ಆರ್ಥಿಕತೆಗೆ ಬಲ ಸಿಗುವುದೂ ಸಾಬೀತಾಗಿರುವ ಸತ್ಯ.

ಇದರೊಂದಿಗೆ, ದೇಶದ ಎಲ್ಲಾ ನಗರಗಳಲ್ಲಿ ವಾಹನಗಳ ದಟ್ಟಣೆ ನಿಭಾಯಿಸಲಾಗದಷ್ಟು ಹೆಚ್ಚುತ್ತಲೇ ಇದೆ. ಅದಕ್ಕಿರುವ ಒಂದೇ ಉತ್ತರ ಸಾರ್ವಜನಿಕ ಸಾರಿಗೆ. ಸದ್ಯ ದೆಹಲಿಯ ಮೆಟ್ರೋಗಳಲ್ಲಿ ಪ್ರಯಾಣಿಸುವ ಮಹಿಳೆಯರು 33%ರಷ್ಟಿದ್ದಾರೆ. ಈ ಕ್ರಮದಿಂದ ಇನ್ನಷ್ಟು ಮಹಿಳೆಯರು ಸಾರ್ವಜನಿಕ ಸಾರಿಗೆಯನ್ನು ಬಳಸಲಾರಂಭಿಸಿದರೆ ವಾಹನದಟ್ಟಣೆಯಲ್ಲಿ ಇಳಿಮುಖ ಕಾಣಬಹುದಾಗಿದೆ. ದೆಹಲಿಯು ಸಂಪೂರ್ಣ ರಾಜ್ಯದ ಸ್ಥಾನಮಾನವನ್ನು ಹೊಂದಿಲ್ಲವಾದುದರಿಂದ ಕೇಂದ್ರ ಸರಕಾರದ ಸಹಕಾರ ಬೇಕಾಗುತ್ತದೆ. ಹಾಗಾಗಿ ಕೇಂದ್ರ ಸರಕಾರವೂ ಚುನಾವಣಾ ಲೆಕ್ಕಾಚಾರಗಳನ್ನು ಮಾಡದೇ ಸಂಪೂರ್ಣ ಸಹಕಾರ ನೀಡಬೇಕು. ಹಾಗೂ ಈ ಯೋಜನೆಯನ್ನು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿ ನೋಡುವುದು ಸಮಂಜಸವಲ್ಲ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಯೋಜನೆಯೇ ಆದರೂ, ಅದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತಿದ್ದಲ್ಲಿ ಸ್ವಾಗತಿಸಬೇಕು.

ಕರ್ನಾಟಕದ ಬೆಂಗಳೂರಿನಲ್ಲೂ ವಾಹನಗಳ ದಟ್ಟಣೆ ಮಿತಿಮೀರಿದೆ ಹಾಗೂ ಬಸ್ ಮತ್ತು ಮೆಟ್ರೊ ಪ್ರಯಾಣದ ದರಗಳು ದೇಶದಲ್ಲೇ ಎಲ್ಲಕ್ಕಿಂತ ಹೆಚ್ಚು. ಬಸ್ ಪ್ರಯಾಣದರದ ಹೊರೆಯಿಂದಾಗಿ ಅನೇಕ ಮಹಿಳೆಯರು ಹಲವಾರು ಕಿಲೋಮೀಟರ್‍ಗಳಷ್ಟು ದೂರ ನಡೆದುಕೊಂಡೇ ಹೋಗಬೇಕಾದದ್ದನ್ನು ನಾವು ನೋಡಿದ್ದೇವೆ. ದುಬಾರಿ ಮೆಟ್ರೊ ಮತ್ತು ಬಸ್ ದರಗಳಿಂದ ಹಾಗೂ ವಾಹನದಟ್ಟಣೆಗಳಿಂದ ಆಗುವ ಸಂಕಷ್ಟಗಳನ್ನು ಬಗೆಹರಿಸಲೂ ಕರ್ನಾಟಕ ಸರಕಾರವೂ ಇಂತಹ ಒಂದು ಕ್ರಮವನ್ನು ಕೈಗೊಳ್ಳಲು ಇದು ಸಕಾಲ.

ಮೇಲೆ ಹೇಳಿದ ಈ ಎಲ್ಲಾ ತಾಂತ್ರಿಕ ಮತ್ತು ಇತರೆ ವಿಷಯಗಳಿಗೂ ಮಿಗಿಲಾದ ಪರಿಣಾಮಗಳನ್ನು ಸೃಷ್ಟಿಸುವ ಸಾಮಥ್ರ್ಯ ಈ ಯೋಜನೆಗಿದೆ. ದೇಶ ಎಷ್ಟೇ ಮುಂದುವರೆದಿದ್ದರೂ ಮಹಿಳೆಯರ ಸ್ವಾತಂತ್ರ್ಯಕ್ಕೆ ಇರುವ ಕಡಿವಾಣಗಳು ಕಡಿಮೆಯಾಗಿಲ್ಲ. ಹೆಚ್ಚಿನ ಮಹಿಳೆಯರ ಪ್ರತಿಯೊಂದು ಹೆಜ್ಜೆಗೂ ಆ ಮನೆಯ ಪುರುಷನ ಸಮ್ಮತಿ ಇರಲೇಬೇಕು. ಅನೇಕ ಮಹಿಳೆಯರಿಗೆ ಮನೆಯಲ್ಲಿ ಮಾತನಾಡುವ, ವಿಚಾರ ಮಾಡುವ ಅವಕಾಶವಿಲ್ಲ. ಇದರೊಂದಿಗೆ ಅವರಿಗೆ ಆರ್ಥಿಕ ಸ್ವಾವಲಂಬನೆ ಇಲ್ಲದಿದ್ದರೆ ಅವರ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ನಮ್ಮ ಪುರುಷಪ್ರಧಾನ ಸಮಾಜ ಮಹಿಳೆಯರ ಸಬಲೀಕರಣದ ಪ್ರತಿಯೊಂದು ಹೆಜ್ಜೆಯನ್ನು ಏನಾದರೊಂದು ಕಾರಣ ನೀಡಿ ವಿರೋಧಿಸುತ್ತಲೇ ಇರುತ್ತದೆ. ಇಂತಹ ಸಮಯದಲ್ಲಿ ಇದೊಂದು ಪುಟ್ಟ ಹೆಜ್ಜೆಯಾದರೂ ಸ್ವಚ್ಛಂದವಾಗಿ ಹಾರಾಡಲು ರೆಕ್ಕೆಪುಕ್ಕಗಳನ್ನು ಬೆಳೆಸುವ ಪ್ರಯತ್ನ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು ‘ವೃತ್ತಿ’ ಎಂದು ಪಟ್ಟಿ ಮಾಡಿದ...

0
ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರಕಾರ ಮತ್ತೆ ಮುಜುಗರಕ್ಕೆ ಈಡಾಗಿದ್ದು, ಉತ್ತರಪ್ರದೇಶ ಪೊಲೀಸ್ ಮೊಬೈಲ್ ಅಪ್ಲಿಕೇಶನ್ UPCOPನಲ್ಲಿ ಬಾಡಿಗೆದಾರರ ಪರಿಶೀಲನೆಗಾಗಿ ವೃತ್ತಿ ಬಗ್ಗೆ ಪಟ್ಟಿ ಮಾಡಿದೆ. ಅವುಗಳಲ್ಲಿ 'ಮಾದಕ ದ್ರವ್ಯಗಳ ಕಳ್ಳಸಾಗಣೆ', 'ಜುಗಾರಿ',  ಮತ್ತು...