Homeಕರ್ನಾಟಕಎಫ್ ಐ ಆರ್ ಹಾಕಿ ಜರ್ನಲಿಸಂ ಬೆದರಿಸೋದು ತಪ್ಪು. ಆದ್ರೆ ಜರ್ನಲಿಸಂ ಅಂದ್ರೆ ಏನು ಗೊತ್ತೆ...

ಎಫ್ ಐ ಆರ್ ಹಾಕಿ ಜರ್ನಲಿಸಂ ಬೆದರಿಸೋದು ತಪ್ಪು. ಆದ್ರೆ ಜರ್ನಲಿಸಂ ಅಂದ್ರೆ ಏನು ಗೊತ್ತೆ ಭಟ್ರೆ?

ಸಾಗರದ ಸ್ಥಿತಿವಂತರಲ್ಲದ ಬ್ರಾಹ್ಮಣ ಕುಟುಂಬವೊಂದರ ಹುಡುಗಿಯ ಮೇಲೆ ರಾಮಚಂದ್ರಾಪುರದ ಮಠದ ಸ್ವಾಮಿಯ ಭಾವ ಜಗದೀಶ್ ಶರ್ಮ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾನೆಂಬ ಆರೋಪ ಬರುತ್ತದೆ. ಅದರ ಬಗ್ಗೆ ಬರೆಯುವುದಿರಲಿ, ವಿಜಯಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ಟರು, ಆ ಕುಟುಂಬದ ಮೇಲೆ ಒತ್ತಡ ತಂದು ಸುಮ್ಮನಿರಿ ಎಂದು ಹೇಳಿದ್ದಾರೆಂದು ಆ ಕುಟುಂಬ ಆರೋಪ ಮಾಡುತ್ತದೆ. ಅಷ್ಟೇ ಅಲ್ಲದೇ ಎಡಿಟರ್ಸ್ ಗಿಲ್ಡ್ ಗೆ ದೂರನ್ನೂ ನೀಡುತ್ತದೆ.

- Advertisement -
- Advertisement -

 | ನೀಲಗಾರ |

ವಿಶ್ವೇಶ್ವರ ವಾಣಿ ಪತ್ರಿಕೆಯ ಸಂಪಾದಕರ ಮೇಲೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಮೇ 26ರಂದು ಎಫ್‍ಐಆರ್ ದಾಖಲಾಗಿದೆ. ಅವರ ಪತ್ರಿಕೆಯಲ್ಲಿ ಹಿಂದಿನ ದಿನ ಮುಖ್ಯಮಂತ್ರಿಗಳ ಪುತ್ರ, ಮಂಡ್ಯ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯ ವಿರುದ್ಧ ಅವಹೇಳನಕಾರಿ ಸುಳ್ಳು ಸುದ್ದಿ ಪ್ರಕಟಿಸಲಾಯಿತೆಂಬುದು ಆರೋಪ. ನಿಖಿಲ್ ಬಗ್ಗೆ ಮಾತ್ರವಲ್ಲದೇ, ಅವರ ತಾತ ಮಾಜಿ ಪ್ರಧಾನಿ ದೇವೇಗೌಡರಿಗೂ ಅವಮಾನ ಮಾಡುವಂತಹ ಸುದ್ದಿ ಅದಾಗಿತ್ತೆಂಬುದು ದೂರುದಾರರ ಆರೋಪ. ದೂರುದಾರ ಪ್ರದೀಪ್ ಕುಮಾರ್ ಜೆಡಿಎಸ್‍ನ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಎಂದು ಹೇಳಲಾಗುತ್ತಿದೆ.

ಮೇಲ್ನೋಟಕ್ಕೆ ವಿಶ್ವೇಶ್ವರ ವಾಣಿಯಲ್ಲಿ ಪ್ರಕಟವಾದ ಸುದ್ದಿ ಸುಳ್ಳು ಎಂದೇ ತೋರುತ್ತಿದೆ. ಆದರೆ, ಅದಕ್ಕಾಗಿ ಸರ್ಕಾರದ ಚುಕ್ಕಾಣಿ ಹಿಡಿದವರು ಕ್ರಿಮಿನಲ್ ಕೇಸುಗಳನ್ನು ಜಡಿದು, ಪತ್ರಕರ್ತರ ಬಾಯಿ ಮುಚ್ಚಿಸುವುದು ಸರಿಯೇ? ಅದು ಯಾರೇ ಆಗಿರಲಿ, ಸರ್ವಥಾ ತಪ್ಪು. ಕುಮಾರಸ್ವಾಮಿಯವರು ಇದರಲ್ಲಿ ಎಳ್ಳಷ್ಟಾದರೂ ಭಾಗಿಯಾಗಿದ್ದರೆ, ಅದಕ್ಕಿಂತ ಖಂಡನೀಯವಾದ ಸಂಗತಿ ಇನ್ನೊಂದಿಲ್ಲ. ಜೊತೆಗೆ ಪತ್ರಕರ್ತರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಾರೆಂಬ ಆರೋಪಿಗಳಾಗಿರುವ ನರೇಂದ್ರ ಮೋದಿ ಮತ್ತು ಅಮಿತ್‍ಷಾ ಸಾಲಿನಲ್ಲಿ ಇವರೂ ನಿಲ್ಲಬೇಕು.

ಹೀಗಾಗಿ ‘ಪತ್ರಿಕೆ’ಯು ಕನಿಷ್ಠ ಪ್ರಾಥಮಿಕ ತನಿಖೆಯನ್ನಾದರೂ ಮಾಡಬೇಕೆಂದು ಹೊರಟಿತು. ದೂರುದಾರ ಪ್ರದೀಪ್‍ರನ್ನು ಮಾತಾಡಿಸಿದೆವು. ಆತನ ಮಾತಿನಲ್ಲೇ ಖಚಿತವಾದದ್ದು, ಆತ ಗೌಡರ ಕುಟುಂಬದ ಅಭಿಮಾನಿ. ಹಾಗಿದ್ದಾಗ, ಅದರ ಜೊತೆಗೇ ಅಂಟಿಕೊಂಡಿರುವ ಜಾತಿ ಪ್ರೇಮವೂ ಇರಬಹುದು, ಅದರ ಅಂದಾಜು ಸಿಗಲಿಲ್ಲ. ಆತ ಹೇಳಿದ ಒಂದು ಮಾತು ತಮಾಷೆ ಎನಿಸಿತು. ‘ಅಲ್ಲಾ ಸಾರ್, ನಿಖಿಲ್ ಹೋಗಿ ಗೌಡರಿಗೆ ಬಯ್ದ ಅಂತ ಇವರು ಬರೆದುಬಿಟ್ಟರೆ, ನಾಳೆ ಇನ್ನೂ ಯಾರ್ಯಾರೋ ಹೋಗಿ ಅವರನ್ನ ಬಯ್ಯಲ್ವಾ? ಗೌಡರ ಮರ್ಯಾದೆ ಏನಾಗ್ಬೇಕು ಹೇಳಿ’ ಎಂಬುದು ಆತನ ಒಂದು ವಾದ. ಈ ದೂರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯಿರಲಿ, ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ರವಿಕುಮಾರ್ ರಿಗೂ ತಿಳಿಸಿಲ್ಲವಂತೆ. ದೂರು ದಾಖಲಾದ ನಂತರ ರವಿಕುಮಾರ್ ಫೋನ್ ಮಾಡಿ ‘ಯಾಕಪ್ಪಾ ಹೀಗೆ ಮಾಡಿದೆ?’ ಎಂದು ಕೇಳಿದ್ದಷ್ಟೇ ಮಿಕ್ಕವರಿಗೂ ಇದಕ್ಕೂ ಇರುವ ಸಂಬಂಧವಂತೆ.

ಇದು ಅಧಿಕಾರ ದುರುಪಯೋಗ ಮಾಡಿಕೊಂಡು, ಜೆಡಿಎಸ್ ನಾಯಕರೇ ಮಾಡಿಸಿರುವ ಕೆಲಸ ಎಂದು ‘ಪತ್ರಿಕೆ’ ಕೆದಕಿತು. ‘ಸಾರ್ ಅಲ್ಲಿನ ಸಿಸಿಟಿವಿ ಚೆಕ್ ಮಾಡಿಸಿ. ಮೊದಲ ದಿನ ನನ್ನ ದೂರು ತೆಗೆದುಕೊಳ್ಳಲೂ ಅವರು ಸಿದ್ಧರಿರಲಿಲ್ಲ. ಆ ಥರಾ ಹೈಲೆವೆಲ್ ಇನ್‍ಫ್ಲುಯೆನ್ಸ್ ಇರುವುದಾದರೆ ಆಗಲೇ ದೂರು ದಾಖಲಾಗುತ್ತಿರಲಿಲ್ಲವೇ?’ ಎನ್ನುವುದು ಪ್ರದೀಪ್ ಸಮಜಾಯಿಷಿ. ಇದೇ ಮಾತನ್ನು ಇನ್ಸ್ ಪೆಕ್ಟರ್ ಪಾಟೀಲರ ಮುಂದಿಟ್ಟೆವು. ‘ಪ್ರದೀಪ್ ಕುಮಾರ್, ತನ್ನ ದೂರಿನಲ್ಲೇ ಯಾವ ಸೆಕ್ಷನ್‍ಗಳಡಿ ಕೇಸು ಬುಕ್ ಮಾಡಬೇಕೆಂದು ಬರೆದುಕೊಂಡು ಬಂದಿದ್ದರು. ಅವುಗಳಲ್ಲಿ ಮಾನನಷ್ಟಕ್ಕೆ ಸಂಬಂಧಿಸಿದ ಸೆಕ್ಷನ್‍ಗಳನ್ನು ನಾವು ಹಾಕಲು ಸಾಧ್ಯವಿರಲಿಲ್ಲ. ಹಾಗಾಗಿ ವಾಪಸ್ ಕಳಿಸಿದೆವು. ಮತ್ತೆ ಎರಡನೇ ದಿನ ಬಂದು ಒತ್ತಾಯಿಸಿದರು. ಕೋರ್ಟಿನಲ್ಲಿ ಎಫ್‍ಐಆರ್ ಮುಂದಿಟ್ಟಾಗ ಆ ಸೆಕ್ಷನ್‍ಗಳನ್ನು ತೆಗೆಯಬಹುದಾದ್ದರಿಂದ, ಆ ಸೆಕ್ಷನ್‍ಗಳನ್ನು ಹಾಕಿ ಎಫ್‍ಐಆರ್ ಮಾಡಿ ಕಳಿಸಿದೆವು. ನಂತರ ಕೋರ್ಟಿನಲ್ಲಿ ಸರಿಪಡಿಸಿದೆವು’ ಎನ್ನುತ್ತಾರೆ.

ಮೇಲ್ನೋಟಕ್ಕೆ ವಿಚಾರ ಇಷ್ಟೇ ಎನಿಸಿದ್ದರಿಂದ, ಇನ್ನೂ ಇದನ್ನು ಎಳೆಯಲು ಹೋಗಲಿಲ್ಲ. ಆದರೆ, ಪ್ರದೀಪ್‍ಕುಮಾರ್ ತನ್ನ ಲೆಟರ್ ಹೆಡ್‍ನಲ್ಲಿ ಜೆಡಿಎಸ್ ಕಾನೂನು ವಿಭಾಗ ಎಂದು ಹಾಕಿರದೇ ಇದ್ದರೆ, ರಾಜ್ಯದಲ್ಲಿ ಜೆಡಿಎಸ್ ಅಧಿಕಾರದಲ್ಲಿ ಇಲ್ಲದೇ ಹೋಗಿದ್ದರೆ ಒಬ್ಬ ಪ್ರಭಾವಿ ಸಂಪಾದಕರ ಮೇಲೆ ಪೊಲೀಸರು ಎಫ್‍ಐಆರ್ ಹಾಕುತ್ತಿದ್ದರೆ ಎಂಬ ಪ್ರಶ್ನೆ ಇದ್ದೇ ಇದೆ. ಇಷ್ಟರ ಮೇಲೂ ಜೆಡಿಎಸ್ ನಾಯಕರ ಅಥವಾ ಮುಖ್ಯಮಂತ್ರಿಗಳ ಪ್ರಭಾವವನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗುವುದಿಲ್ಲ. ಆದರೆ ದೂರೊಂದು ಬಂದಾಗ ಎಫ್‍ಐಆರ್ ಮಾಡೋದೇ ಇಲ್ಲ ಎಂದು ಪೊಲೀಸರು ಹೇಳುವಂತಿಲ್ಲ. ಅವರ ವ್ಯಾಪ್ತಿ ಮೀರಿ ಸೆಕ್ಷನ್‍ಗಳನ್ನು (ಈ ಪ್ರಕರಣದಲ್ಲಿ ಮಾಡಿದ ಹಾಗೆ) ಹಾಕುವಂತಿಲ್ಲ. ಈಗ ಅದನ್ನೂ ಸರಿ ಮಾಡಿಕೊಂಡಿದ್ದಾರೆ.

ಇಷ್ಟರೊಂದಿಗೆ ಈ ಪ್ರಕರಣ ಮುಕ್ತಾಯವಾಯಿತೇ? ಇಲ್ಲ. ಮುಖ್ಯಮಂತ್ರಿಗಳ ಪ್ರಭಾವ ಇದ್ದರೂ, ಬಿಟ್ಟರೂ ಇಂತಹದೊಂದು ಎಫ್‍ಐಆರ್‍ಅನ್ನು ನಾವೆಲ್ಲರೂ ಖಂಡಿಸಲೇಬೇಕು. ಅಲ್ಲಿಂದ ಮುಂದಕ್ಕೆ ಎರಡು ಪ್ರಶ್ನೆಗಳು ಏಳುತ್ತವೆ. ಮರುದಿನದ ತನ್ನ ಪತ್ರಿಕೆಯಲ್ಲಿ ವಿಶ್ವೇಶ್ವರಭಟ್ಟರು ಎಮರ್ಜೆನ್ಸಿ ಇನ್ ಕರ್ನಾಟಕ ಎಂದು ಮುಖಪುಟದಲ್ಲಿ, ಪುಟವಿಡೀ ಸುದ್ದಿ ಮಾಡಿದರು. ಅದರಲ್ಲೂ ಸುಳ್ಳಿರಬಹುದಾದ ‘ಪ್ರಧಾನಿ ಕಚೇರಿಯಿಂದ ಮತ್ತು ರಾಹುಲ್‍ಗಾಂಧಿಯಿಂದ ವಿವರಣೆ ಕೇಳಿಕೆ’ಗಳನ್ನೂ ಪ್ರಕಟಿಸಿದರು. ಇಂತಹ ಎಮರ್ಜೆನ್ಸಿ ಕರ್ನಾಟಕದಲ್ಲಿ ಇದೆಯೇ ಎಂಬುದು ಮೊದಲನೇ ಪ್ರಶ್ನೆ.

ದೇಶದ ಬೇರೆ ಬೇರೆ ಭಾಗಗಳಲ್ಲಿ ಪತ್ರಕರ್ತರ ಹತ್ಯೆಗಳಾದಾಗ ಅದನ್ನು ಖಂಡಿಸುವುದಿರಲಿ, ಒಂದು ಪ್ರಕರಣದಲ್ಲಿ ಅದನ್ನು ಸಮರ್ಥಿಸುವಂತೆ ಬರೆದ ವಿಶ್ವೇಶ್ವರ ಭಟ್ಟರದು ಜರ್ನಲಿಸಮ್ಮಾ ಎಂಬುದು ಎರಡನೇ ಪ್ರಶ್ನೆ. ಇವೆರಡನ್ನೂ ಮುಂದಿಡದಿದ್ದರೆ ತಪ್ಪಾಗುತ್ತದೆ.

ಮೊದಲನೆಯದಾಗಿ, ಎಫ್‍ಐಆರ್‍ಅನ್ನು ಖಂಡಿಸುವುದರಲ್ಲಿ ‘ಪತ್ರಿಕೆ’ಯೂ ಸೇರುತ್ತದೆ. ಆದರೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮುಖ್ಯಮಂತ್ರಿಗಳಿಗೆ ಬರೆದ ಖಂಡನಾ ಪತ್ರದಲ್ಲೇ ಹೇಳಿರುವಂತೆ ‘ಈ ಪ್ರಕರಣದ ಬಗ್ಗೆ ತಮಗೆ ಗೊತ್ತಿರದೆಯೂ ಇರಬಹುದು’. ತಾನು ಮತ್ತು ತನ್ನಿಡೀ ಪರಿವಾರದೊಂದಿಗೆ ಕಾಂಗ್ರೆಸ್‍ಅನ್ನು ಸಂಪೂರ್ಣ ಬದ್ನಾಮ್ ಮಾಡಿ, ಹೀಗಳೆಯುತ್ತಿರುವಾಗಲೇ ಇದೇ ಭಟ್ಟರು ಸಿದ್ದರಾಮಯ್ಯನವರ ಸರ್ಕಾರದಿಂದ ಹಲವು ಬಗೆಯ ಕೊಡುಗೆಗಳನ್ನು ಪಡೆದಿದ್ದರು! ಅದೇ ಸಿದ್ದರಾಮಯ್ಯನವರು ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸರ್ಕಾರ ಇದು. ಎಫ್‍ಐಆರ್ ಹಾಕಲೂ ಹಿಂದೆ ಮುಂದೆ ನೋಡಿ, ನಂತರ ಸೆಕ್ಷನ್ನುಗಳನ್ನು ಬದಲಿಸಿಕೊಂಡ ಪೊಲೀಸರು ವಿಶ್ವೇಶ್ವರಭಟ್ಟರಿಗೆ ಯಾವ ಕಿರುಕುಳವೂ ಕೊಟ್ಟದ್ದು ಕಾಣುತ್ತಿಲ್ಲ. ಸ್ವತಃ ಮುಖ್ಯಮಂತ್ರಿಯವರು ಸದರಿ ಸುದ್ದಿ ಪ್ರಕಟಣೆಯಿಂದ ತನ್ನ ಮನಸ್ಸಿಗೆ ನೋವಾಗಿದೆ ಮತ್ತು ಸಂಬಂಧಪಟ್ಟ ಸಂಪಾದಕರೊಂದಿಗೆ ಮಾತನಾಡಿ ಅದನ್ನು ಗಮನಕ್ಕೆ ತಂದಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಅದರಲ್ಲಿ ಖಾರ ಇರಲಿಲ್ಲ, ಬದಲಿಗೆ ಮನವಿ ಇತ್ತು!!

ಆಗಿಂದಾಗ್ಗೆ ಕುಮಾರಸ್ವಾಮಿ ಮಾಧ್ಯಮಗಳ ಕುರಿತು ಕಿಡಿ ಕಾರಿದ್ದಾರೆ, ಒಮ್ಮೆ ಪ್ರಚೋದನಕಾರಿ ಮಾತುಗಳನ್ನೂ ಆಡಿದ್ದಾರೆ. ಆದರೆ, ಇದು ಮತ್ತು ಹಿಂದಿನ ಸರ್ಕಾರದ ವಿರುದ್ಧ ಜಿದ್ದಿಗೆ ಬಿದ್ದಿರುವ ಮಾಧ್ಯಮಗಳು, ವಿರೋಧಪಕ್ಷಗಳಿಗಿಂತಲೂ ಹೆಚ್ಚಾಗಿ ಸರ್ಕಾರವನ್ನು ಇಳಿಸಲು ಕುತ್ಸಿತ ಪ್ರಚಾರ ಮಾಡುತ್ತಿರುವಾಗ ಆಡಿರುವ ಸಿಟ್ಟಿನ ಮಾತಷ್ಟೇ ಎಂಬುದು ಎಲ್ಲರಿಗೂ ಗೊತ್ತು. ಯಾವ ಎಮರ್ಜೆನ್ಸಿಯೂ ಕರ್ನಾಟಕ ಸರ್ಕಾರದಿಂದ ಇಲ್ಲವೆಂಬುದು ಭಟ್ಟರಿಗೂ ತಿಳಿದಿದೆ.

ಇನ್ನು ಎರಡನೆಯ ಪ್ರಶ್ನೆ, ಭಟ್ಟರದ್ದು ಯಾವ ರೀತಿಯ ಜರ್ನಲಿಸಂ ಎಂಬುದು. ಈಗಾಗಲೇ ಮೇಲೆ ಹೇಳಿದಂತೆ ಜರ್ನಲಿಸ್ಟರ ಕೊಲೆಯಾದಾಗ, ಅದನ್ನು ಸಮರ್ಥಿಸುವ ಅಥವಾ ದಿಕ್ಕುತಪ್ಪಿಸುವ ವರದಿ/ಸ್ಟೋರಿ ಬರೆಯುವುದು ಜರ್ನಲಿಸಂ ಹೇಗಾಗುತ್ತದೆ? ಅದನ್ನು ಈ ಭಟ್ಟರು ಮಾಡಿದರು. ಗೌರಿ ಲಂಕೇಶರ ಹತ್ಯೆಯಾದ ಸ್ವಲ್ಪ ಹೊತ್ತಿನಲ್ಲೇ ತಮ್ಮ ಕೆಲಸ ಶುರು ಹಚ್ಚಿಕೊಂಡಿದ್ದ ಅವರು ನಕ್ಸಲೈಟರ ತಲೆಗೆ ಕೊಲೆ ಆರೋಪ ಹಚ್ಚಲು ನೋಡಿದ್ದರು. ಶೀರ್ಷಿಕೆ ಕೊಡುವುದರ ಬಗ್ಗೆಯೇ ಪುಸ್ತಕ ಬರೆದಿರುವ ಅವರು, ಅತ್ಯಂತ ನೀಚ ರೀತಿಯ ಶೀರ್ಷಿಕೆಯನ್ನು ನೀಡಿ ಬರಹವೊಂದನ್ನೂ ಬರೆದರು.

ಅಂತಹ ಮಾತುಗಳು, ಅದರಲ್ಲೂ ಮಹಿಳೆಯರ ಕುರಿತ ಅವರ ಮನೋಭಾವ ಹೊಸದೇನಲ್ಲ. ಎಲ್ಲಾ ವಿರೋಧ ಪಕ್ಷಗಳೂ ಒಂದು ವೇದಿಕೆಗೆ (ಹಿಂದಿಯಲ್ಲಿ ಮಂಚ್) ಬರಬೇಕೆಂದು ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ಕೊಟ್ಟಿದ್ದರು. ಅದನ್ನು ಮಮತಾ ಬ್ಯಾನರ್ಜಿ ಎಲ್ಲರನ್ನೂ ತನ್ನ ಮಂಚಕ್ಕೆ ಕರೆದಿದ್ದಾರೆ ಎಂದು ಈ ಪತ್ರಕರ್ತರು ಬಹಿರಂಗವಾಗಿ ಬರೆದರು.

ತಮ್ಮ ಸಂಪಾದಕತ್ವದಲ್ಲಿ ನಡೆಯುತ್ತಿದ್ದ ವಿ.ಕ ಮತ್ತು ನಂತರ ಕ.ಪ್ರ.ದಲ್ಲಿ ಜ್ಞಾನಪೀಠ ಪುರಸ್ಕೃತ ಬರಹಗಾರರಾದ ಗಿರೀಶ್ ಕಾರ್ನಾಡ್, ಅನಂತಮೂರ್ತಿಯವರ ವಿರುದ್ಧ ದಾಳಿಯನ್ನು ಸಂಘಟಿಸಿದರು. ಯಾರದ್ದೇ ಬರಹದ ಅಥವಾ ಸಾರ್ವಜನಿಕ ಜೀವನದಲ್ಲಿರುವವರ ಬದುಕಿನ ಕುರಿತಾಗಿಯೂ ಟೀಕೆ, ವಿಮರ್ಶೆ ಸಹಜ. ಆದರೆ, ಇಂತಹ ಧೀಮಂತ ಬರಹಗಾರರ ಅನಿಸಿಕೆಗಳ ವಿರುದ್ಧ ಅಭಿಪ್ರಾಯಗಳನ್ನು ಆಹ್ವಾನಿಸಿ ಅವುಗಳನ್ನು ಮುಖಪುಟದಲ್ಲಿ ದೀರ್ಘವಾಗಿ ಪ್ರಕಟಿಸಿ ದಾಳಿಯನ್ನು ನಡೆಸಲಾಯಿತು. ಮುಸ್ಲಿಮರ ವಿರುದ್ಧ ಸುಳ್ಳುಗಳಿಂದ ಕೂಡಿದ ಪ್ರಚೋದನಕಾರಿ ಬರಹಗಳನ್ನು ಪ್ರತಾಪಸಿಂಹರಂಥವರ ಕೈಲಿ ಬರೆಸಲಾಯಿತು. ಇದನ್ನೇ ಹೊಸ ರೀತಿಯ ಜರ್ನಲಿಸಂ ಎಂಬಂತೆ ಬಿಂಬಿಸತೊಡಗಿ, ಆಗ ಏರತೊಡಗಿದ್ದ ಪತ್ರಿಕೆಯ ಪ್ರಸಾರಕ್ಕೂ ಇದೇ ಕಾರಣವೆಂಬಂತೆ ತೋರಿಸಿದರು. ಈ ಪತ್ರಿಕೆಯ ಮಾಲೀಕರಾಗಿದ್ದ ವಿಜಯ ಸಂಕೇಶ್ವರರ ವ್ಯವಹಾರದ ಚಾಣಾಕ್ಷತೆ ಎಲ್ಲರಿಗೂ ಗೊತ್ತಿದ್ದದ್ದೇ. ಇದನ್ನು ಮಾರಿದ ನಂತರ ಆರಂಭಿಸಿ ವಿಜಯವಾಣಿಯನ್ನೂ ಅವರು ತಮ್ಮದೇ ವ್ಯವಹಾರ ಬುದ್ಧಿಯಿಂದ ನಂಬರ್ 1 ಮಾಡಿದರು. ವಿಜಯ ಕರ್ನಾಟಕದ ಯಶಸ್ಸಿಗೆ ವಿಶ್ವೇಶ್ವರ ಭಟ್ಟರೇ ಕಾರಣ ಎಂಬುದನ್ನು ಸ್ವತಃ ಅವರೇ ನಿಧಾನಕ್ಕೆ ಸುಳ್ಳು ಮಾಡತೊಡಗಿದರು.

ಕುಸಿಯುತ್ತಿದ್ದ ಕನ್ನಡಪ್ರಭಕ್ಕೆ ಟ್ಯಾಬ್ಲಾಯ್ಡ್ ಶೈಲಿಯ ಬರಹಗಳು ಮತ್ತು ಆಕ್ರಮಣಕಾರಿ ರೀತಿಯ ವರದಿಗಳನ್ನು ಮಾಡುವ ಮೂಲಕ ಎಚ್.ಆರ್.ರಂಗನಾಥ್ ಕೆಟ್ಟ ರೀತಿಯಲ್ಲಿ ಚೇತರಿಕೆ ನೀಡಿದ್ದರು ಮತ್ತು ಅವರ ನಂತರ ಹಾಗೆಯೇ ಅದನ್ನು ಮುಂದುವರೆಸಿಕೊಂಡು ಹೋಗಿದ್ದ ಶಿವಸುಬ್ರಹ್ಮಣ್ಯರನ್ನು ಪಕ್ಕಕ್ಕೆ ಸರಿಸಿ ವಿ.ಭಟ್ ಅಲ್ಲಿಗೆ ಹೋಗಿದ್ದರು. ನಂ.1 ಪತ್ರಿಕೆ ವಿಜಯ ಕರ್ನಾಟಕ ರೂಪಿಸಿದ್ದೇ ತಾವು ಎಂಬ ಇಮೇಜ್ ರೂಪಿಸಿಕೊಂಡಿದ್ದವರು, ಕ.ಪ್ರ.ಕ್ಕೆ ಹೋಗ್ತಾ ಇದ್ದ ಹಾಗೇ ‘ನೋಡ್ತಾ ಇರಿ, ಏನೇನ್ ಮಾಡ್ತೀವಿ’ ಎಂದೆಲ್ಲಾ ತಮ್ಮದೇ ಪತ್ರಿಕೆಯಲ್ಲಿ ಗುಟುರು ಹಾಕಿದರು. ಆದರೆ, ಅದನ್ನು ಇನ್ನಷ್ಟು ಮೇಲಕ್ಕೆ ತೆಗೆದುಕೊಂಡು ಹೋಗುವುದು ಅವರಿಂದ ಆಗಲಿಲ್ಲ. ಸುವರ್ಣ ನ್ಯೂಸ್‍ನಲ್ಲೂ ಅಷ್ಟೇ. ಶಶಿಧರ ಭಟ್ಟರ ನಂತರ ಸುವರ್ಣ ನ್ಯೂಸ್ ರಂಗನಾಥ್ ಕಾಲದಲ್ಲಿ 2ನೇ ಸ್ಥಾನಕ್ಕೆ ಬಂದಿತ್ತು. ಕ.ಪ್ರ. ಮತ್ತು ಸುವರ್ಣ ನ್ಯೂಸ್ ಎರಡರಲ್ಲೂ ಮಹತ್ತರವಾದುದೇನನ್ನೂ ಸಾಧಿಸದ ವಿ.ಭಟ್‍ಗೆ ಗೇಟ್‍ಪಾಸ್ ಸಿಕ್ಕಿತು.

ಅಲ್ಲಿಂದ ಹೊರಹೋಗುವ ಮುನ್ನ ವಿ.ಭಟ್ಟರು ಯಾವ ಬಗೆಯ ಜರ್ನಲಿಸಂಅನ್ನು ಅಲ್ಲಿ ಮಾಡಿದ್ದರು ಎಂಬುದನ್ನು ಸ್ವಲ್ಪ ವಿವರವಾಗಿಯೇ ನೋಡಬೇಕು.

2012 ಮಾರ್ಚ್ 29, ಸುವರ್ಣ ನ್ಯೂಸ್‍ನ ಕಟ್ಟೆಚ್ಚರ ಕಾರ್ಯಕ್ರಮದಲ್ಲಿ ಸೆಕ್ಸ್ ವಿಡಿಯೋವೊಂದನ್ನು ಪ್ರಸಾರ ಮಾಡಲಾಯಿತು. ಆಗ ಇದರ ಸಂಪಾದಕ ವಿಶ್ವೇಶ್ವರ ಭಟ್. ಹುಡುಗಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ನಡೆಸಿದ ಪ್ರಣಯದ ಹಸಿಬಿಸಿ ದೃಶ್ಯಗಳನ್ನು ಪ್ರಸಾರ ಮಾಡಿದರು. ಸರಿಯಾಗಿ ಮಬ್ಬು ಮಾಡದೇ, ಆಕೆಯ ಸಹಪಾಠಿಗಳನ್ನು ಮಾತಾಡಿಸಲಾಯಿತು. ಆಕೆಯ ವಿಳಾಸವನ್ನೂ ನೀಡಲಾಯಿತು. ಆಕೆ ನಂತರ ಆತ್ಮಹತ್ಯೆಗೆ ಪ್ರಯತ್ನಿಸಿದಳು. ಇದರ ಕುರಿತು ಅವರಿಗೆ ಏನೂ ಅನ್ನಿಸುವುದು ಸಾಧ್ಯವಿರಲಿಲ್ಲ. ಇದನ್ನು ಜರ್ನಲಿಸಂ ಎನ್ನಬಹುದೇ?

ಸುವರ್ಣ ನ್ಯೂಸ್‍ನಲ್ಲಿ ಅವರು ಮುಖ್ಯಸ್ಥರಾಗಿದ್ದಾಗ, ಕೆ.ಸಿ.ಜನರಲ್ ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರ ಹಿಂದೆ ಸುವರ್ಣದ ಸ್ಟಿಂಗ್ ಟೀಂ ಚಿತ್ರೀಕರಿಸುತ್ತಿದ್ದರು. ಒಂದಾದ ನಂತರ ಒಂದು ಆಸ್ಪತ್ರೆಗೆ ವೈದ್ಯರುಗಳು ಆ ರೋಗಿಯನ್ನು ಸುತ್ತಿಸುತ್ತಿದ್ದಂತೆ, ಈ ಟೀಂ ಸಹಾ ಸುತ್ತುತ್ತಲೇ ಹೋಯಿತು. ಅಂತಿಮವಾಗಿ, ಸ್ಟಿಂಗ್ ಟೀಂ ನಿರ್ವಹಿಸುತ್ತಿದ್ದ ಟೀಂ ಲೀಡರ್ ಇನ್ನು ಸಾಕು ಎಂದು ತೀರ್ಮಾನಿಸಿ, ಕ್ಯಾಮೆರಾ ತೋರಿಸಿದ್ದರಿಂದ ರೋಗಿಗೆ ಚಿಕಿತ್ಸೆ ದೊರೆಯಿತು. ಆದರೆ, ರೋಗಿಗೆ ಏನಾಗಿದ್ದರೂ ಪರವಾಗಿಲ್ಲ, ಇದನ್ನು ಮುಂದುವರೆಸಬೇಕಿತ್ತು ಎಂದು ವಿಶ್ವೇಶ್ವರ ಭಟ್ ನಂತರ ಟೀಂ ಲೀಡರ್‍ಗೆ ಬೈದಿದ್ದರು! ಆ ಟೀಂ ಲೀಡರ್ ಭಟ್ಟರ ಜೊತೆ ಹೊರ ಹೋಗಿ ಮತ್ತೆ ವಾಪಸ್ ಈಗ ಅಲ್ಲಿಯೇ ಬಂದು ಪ್ರತಿಷ್ಠಾಪನೆಗೊಂಡಿದ್ದಾರೆ. ತಂಡದಲ್ಲಿದ್ದ ಇತರ ಪತ್ರಕರ್ತರು ಇದನ್ನು ಸಾಕ್ಷಾತ್ ಅವರ ಬಾಯಿಂದಲೇ ಕೇಳಿ ಗಾಬರಿಯಾಗಿದ್ದರು. ಬಹುಶಃ ಪತ್ರಕರ್ತರೆಂದರೆ ಯಾವ ಮಾನವೀಯತೆಯೂ ಇರಬಾರದು, ಸುದ್ದಿ ರೋಚಕವಾದಷ್ಟೂ ಒಳ್ಳೆಯದು ಎಂದು ನೋಡಬೇಕು ಎಂದು ವಿ.ಭಟ್ಟರ ಸಂಹಿತೆ ಹೇಳುತ್ತದೆಯೇ?

ಶಾಸಕ ಹರತಾಳು ಹಾಲಪ್ಪನ ಹಗರಣ ನಡೆದಾಗ ಯಾವ ನೀತಿ ಸಂಹಿತೆಯೂ ಇಲ್ಲದೇ ಅದನ್ನು ಬ್ರೇಕ್ ಮಾಡಿದ್ದು ಇದೇ ವಿ.ಭಟ್. ಇದರ ಹಿಂದೆ ಡೀಲ್ ನಡೆದಿತ್ತು ಎಂಬ ವದಂತಿಗಳಿಗೆ ತೋರಿಸಬಹುದಾದ ಪುರಾವೆ ಇಲ್ಲವಾದರೂ, ನಿಜಕ್ಕೂ ಪುರಾವೆಗಳಿರುವ ಕುಲಬಾಂಧವ ರಾಘವೇಶ್ವರ ಸ್ವಾಮಿಗೆ ಬೆಂಗಾವಲಾಗಿ ನಿಂತರು. ಇದು ಯಾವ ಪ್ರಮಾಣಕ್ಕೆ ಹೋಯಿತೆಂದರೆ, ರಾಘವೇಶ್ವರರ ವಿರೋಧಿಗಳಿಗೆ ಬೆದರಿಸುವಷ್ಟು.

ಸಾಗರದ ಸ್ಥಿತಿವಂತರಲ್ಲದ ಬ್ರಾಹ್ಮಣ ಕುಟುಂಬವೊಂದರ ಹುಡುಗಿಯ ಮೇಲೆ ರಾಮಚಂದ್ರಾಪುರದ ಮಠದ ಸ್ವಾಮಿಯ ಭಾವ ಜಗದೀಶ್ ಶರ್ಮ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾನೆಂಬ ಆರೋಪ ಬರುತ್ತದೆ. ಅದರ ಬಗ್ಗೆ ಬರೆಯುವುದಿರಲಿ, ವಿಜಯಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ಟರು, ಆ ಕುಟುಂಬದ ಮೇಲೆ ಒತ್ತಡ ತಂದು ಸುಮ್ಮನಿರಿ ಎಂದು ಹೇಳಿದ್ದಾರೆಂದು ಆ ಕುಟುಂಬ ಆರೋಪ ಮಾಡುತ್ತದೆ. ಅಷ್ಟೇ ಅಲ್ಲದೇ ಎಡಿಟರ್ಸ್ ಗಿಲ್ಡ್ ಗೆ ದೂರನ್ನೂ ನೀಡುತ್ತದೆ.

ಸದನದಲ್ಲಿ ನೀಲಿ ಚಿತ್ರವನ್ನು ಶಾಸಕರು ನೋಡಿದಾಗ, ಅದನ್ನು ತೋರಿಸಿದ ಪರಿ ಎಲ್ಲರಿಗೂ ಗಾಬರಿ ಮೂಡಿಸಿತು. ನಂತರ ಮೇಟಿ ಪ್ರಕರಣದಲ್ಲಿ ಚಾನೆಲ್‍ಗಳು ಇನ್ನೂ ಹದಗೆಡಲು ಬೇಕಾದ ಮಾದರಿಯನ್ನು ಇದು ನಿರ್ಮಿಸಿತ್ತು. ಒಬ್ಬ ಧೂರ್ತ ನೀಲಿಚಿತ್ರ ನೋಡಿದ, ನೀವು ಕೋಟ್ಯಂತರ ಜನರು ನೋಡುವಂತೆ ಮಾಡಿದಿರಿ ಎಂದು ಸಂಪಾದಕೀಯ ಬ್ಲಾಗ್‍ನಲ್ಲಿ ಅಂದೇ ಬರೆದು ಎಚ್ಚರಿಸಿದ್ದರು. ಇವರು ಸಂಪಾದಕರಾಗಿದ್ದಾಗ, ಪ್ರಸಾರ ಮಾಡಿದ ಸುದ್ದಿಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ಅಂತರ್ಜಾಲದಿಂದ ಹೇಗೆ ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂಬುದನ್ನೂ ಪ್ರಸಾರ ಮಾಡಲಾಯಿತು.

ಆದರೆ, ಅವರು ಸಂಪಾದಕರಾಗಿ ಸುವರ್ಣ ನ್ಯೂಸ್‍ನಲ್ಲಿ ಹೋಗಿ ಕುಳಿತಾಗ ಅಲ್ಲಿನ ಸಿಬ್ಬಂದಿಗೆ ಹೇಳಿದ ಮಾತುಗಳು ಇವಲ್ಲ. ನೋಡೀ. ನಮ್ಮಲ್ಲಿ ರಾಮ್‍ರಾಜ್ ಬನಿಯನ್‍ನ ಜಾಹೀರಾತುಗಳು ಬರುತ್ತವಾ ಅಥವಾ ಫೋರ್ಡ್ ಕಾರ್ ನ ಜಾಹೀರಾತುಗಳು ಬರುತ್ತವಾ ಎಂಬುದರ ಮೇಲೆ ನಮ್ಮ ಸ್ಟಾಂಡರ್ಡ್ ಎಂಥದು ಎಂಬುದು ಗೊತ್ತಾಗುತ್ತದೆ. ಎನ್‍ಡಿಟಿವಿಗೆ ಉಳಿದವರಿಗಿಂತ ಟಿಆರ್‍ಪಿ ಕಡಿಮೆಯಿದ್ದರೂ, ಅದರ ಗುಣಮಟ್ಟ ಬಹಳ ಹೆಚ್ಚಿದೆ ಮತ್ತು ಕ್ಲಾಸ್ ಜನ ಅದನ್ನು ನೋಡುತ್ತಾರೆ. ನಮ್ಮ ಟಿವಿಯೂ ಹಾಗೇ ಆಗಬೇಕು ಎಂದೆಲ್ಲಾ ಹೇಳಿದ್ದರು. ಆದರೆ, ಮಾಡಿದ್ದೇನು ಗೊತ್ತೇ? ಟಿವಿಯನ್ನು ಫೋರ್ಡ್ ಕಾರ್ ಅಲ್ಲ, ಇಚ್‍ಗಾರ್ಡ್ ಮಟ್ಟಕ್ಕೆ ಇಳಿಸಿಬಿಟ್ಟರು ಎಂದು ಸುವರ್ಣದ ವರದಿಗಾರರು ಮಾತಾಡುತ್ತಾರೆ.

ಇನ್ನು ಇವರ ಅಪೂರ್ವ ಶೋಧ ಪ್ರತಾಪ ಸಿಂಹನೆಂಬ ಪ್ರತಿಭೆಯು, ತನ್ನ ಪ್ರತಿಭೆಯನ್ನು ಹೇಗೆಲ್ಲಾ ವಿಸ್ತರಿಸಿಕೊಂಡಿದ್ದಾರೆಂಬುದನ್ನು ಮೊನ್ನೆ ಲೋಕಸಭಾ ಚುನಾವಣೆಗೆ ಮುಂಚೆ ಹೊರಬಿದ್ದ ಆಡಿಯೋಗಳಲ್ಲಿ ಲೋಕವೆಲ್ಲಾ ಕೇಳಿತು. ಇವರು ಸಂಪಾದಕರಾಗಿದ್ದಾಗ ಕನ್ನಡಪ್ರಭದಲ್ಲಿ ‘ವೈದಿಕ ಸಂಸ್ಕೃತಿಯಲ್ಲಿ ದಾಂಪತ್ಯ ರಹಸ್ಯ’ ಎಂಬ ಲೇಖನವೊಂದನ್ನು ಪ್ರಕಟಿಸಿದರು. ಅದರಲ್ಲಿ ಯಾವ ಸಮಯದಲ್ಲಿ ಸಂಭೋಗ ಮಾಡಿದರೆ ಎಂತಹ ಮಕ್ಕಳು ಹುಟ್ಟುತ್ತವೆ ಎಂಬ ‘ವೈಜ್ಞಾನಿಕ ವಿಶ್ಲೇಷಣೆ’ ಮಾಡಲಾಗಿತ್ತು. ವಿವರಗಳಿಗೆ ಹೋಗುವ ಅಗತ್ಯವಿಲ್ಲವಾದರೂ, ಇಂತಹವುಗಳು ಭಟ್ಟರ ಜರ್ನಲಿಸಂನ ಲೆವೆಲ್‍ಅನ್ನು ತೋರುತ್ತದೆ.

ಹಣಕಾಸಿನ ಸಾಚಾತನಕ್ಕೆ ಕೊಡಬಹುದಾದ ಅತ್ಯುತ್ತಮ ನಿದರ್ಶನವೆಂದರೆ, ಬಳ್ಳಾರಿ ರೆಡ್ಡಿಗಳ ಜೊತೆಗಿನ ಸಂಬಂಧದ್ದು. ನ್ಯಾ.ಸಂತೋಷ್ ಹೆಗಡೆ ಅವರು ನೀಡಿದ್ದ ಲೋಕಾಯುಕ್ತ ವರದಿಯ ಅಡಕಗಳಲ್ಲಿ ಯು.ವಿ.ಸಿಂಗ್ ಅವರ ವರದಿಯೂ ಒಂದು. ಅದರಲ್ಲಿ ಜನಾರ್ಧನ ರೆಡ್ಡಿಯಿಂದ ವಶಪಡಿಸಿಕೊಳ್ಳಲಾದ ದಾಖಲೆಗಳಲ್ಲಿ ಆತನಿಂದ ಹಣ ಪಡೆದ ಪತ್ರಕರ್ತರ ಪಟ್ಟಿಯಲ್ಲಿ ವಿಭಟ್ ಎಂಬ ಹೆಸರೂ ಇತ್ತು. ಇದು ಜಗಜ್ಜಾಹೀರಾದ ನಂತರವೂ ನೈತಿಕತೆಯ ಪಾಠವನ್ನು ಹೇಳಲು ಅವರಿಗೆ ಯಾವ ಹಿಂಜರಿಕೆಯೂ ಇಲ್ಲ.

ವಿ.ಭಟ್ಟರ ನಂತರ ವಿ.ಕ. ಪತ್ರಿಕೆಯನ್ನು ನಡೆಸಿದ ರಾಘವನ್‍ರು ಮತ್ತು ಆ ನಂತರ ಬಂದ ಸುಗತ ಅವರೂ ವಿ.ಕ.ವನ್ನು ನಂಬರ್ 1 ಸ್ಥಾನದಲ್ಲೇ ಉಳಿಸಿಕೊಂಡರು. ವಿ.ಭಟ್ ಹೋದಲ್ಲೆಲ್ಲಾ ಯಾವುದೂ ಏಳಿಗೆಯಾಗಲಿಲ್ಲ. ಹಾಗಾದರೆ, ಅವರ ಪ್ರತಿಭೆ (ನೀತಿ ಸಂಹಿತೆ, ಪತ್ರಿಕೋದ್ಯಮದ ಘನತೆ, ಕನಿಷ್ಠ ಮಾನವೀಯ ಗುಣ ಇವೆಲ್ಲವನ್ನೂ ಪಕ್ಕಕ್ಕಿಟ್ಟರೂ)ಯ ಲೆವೆಲ್ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ.
ಆದರೆ, ಹವ್ಯಕ ಸಮುದಾಯಕ್ಕೆ ಕೆಟ್ಟ ಹೆಸರು ತಂದ ಇಬ್ಬರು ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿ ನಿಲ್ಲುವುದರಲ್ಲಿ ಸಂಶಯವೇ ಇಲ್ಲ. ಇದಕ್ಕೆ ಮೂರು ಕಾರಣಗಳಿವೆ. ಒಂದು, ಕೆಟ್ಟ ಪತ್ರಿಕೋದ್ಯಮಕ್ಕೆ ನಾಂದಿ ಹಾಡಿ ಅದರಲ್ಲಿ ಹಲವು ಹವ್ಯಕ ಮಾಣಿಗಳನ್ನೇ ತಂದು ಕೂರಿಸಿ, ಅದೇ ದಾರಿಯಲ್ಲಿ ನಡೆಯುವ ಮಾರ್ಗ ತೋರಿಸಿದ್ದು. ಕಳೆದ 20 ವರ್ಷಗಳಿಂದ ಕನ್ನಡ ಪತ್ರಿಕೋದ್ಯಮ ಈ ಕುಲಗೆಟ್ಟ ಸ್ಥಿತಿಗೆ ಇಳಿದಿದ್ದಕ್ಕೆ ಹವ್ಯಕರೇ ಕಾರಣ ಎಂದು ಎಲ್ಲರೂ ಆಡಿಕೊಳ್ಳುವಂತೆ ಆಯಿತು. ಹಾಗೆಯೇ ಹವ್ಯಕ ಸಮುದಾಯದ ಕುರಿತು ಪರಿಚಯವಿಲ್ಲದವರಿಗೂ ಪರಿಚಯ ಮಾಡಿಸಿದ ಇನ್ನೊಬ್ಬ ವ್ಯಕ್ತಿ ರಾಘವೇಶ್ವರ ಸ್ವಾಮೀಜಿ. ಅವರ ಎಲ್ಲಾ ಅಸಹ್ಯದ ವ್ಯವಹಾರಗಳಿಗೂ ಬೆಂಬಲಕ್ಕೆ ನಿಂತಿದ್ದು ಇದೇ ವಿ.ಭಟ್.

ಹಾಗಾಗಿಯೇ ಹವ್ಯಕ ಸಮ್ಮೇಳನದಲ್ಲಿ ‘ಎಲ್ಲಾ ಮಾಧ್ಯಮ ಸಂಸ್ಥೆಗಳಲ್ಲೂ ನಾವೇ ಇದ್ದೇವೆ’ ಎಂದು ವಿ.ಭಟ್ ಹೇಳಿದಾಗ ಕೇಳಿದವರಿಗೆ ಅಭಿಮಾನವೇನೂ ಮೂಡಲಿಲ್ಲ. ನಿರ್ಲಜ್ಜೆಯಿಂದ ಆಡುತ್ತಿರುವ ಮಾತು ಎಂಬಂತೆ ಸಜ್ಜನರು ಆ ಆಡಿಯೋವನ್ನು ಕೇಳಿದರು. ಜರ್ನಲಿಸಂಗೂ ಇವರಿಗೂ ಯಾವುದೇ ಸಂಬಂಧವೇ ಇಲ್ಲ. ಹೆದರಿಕೆಯಿಂದ, ಪ್ರಭಾವದ ಕುರಿತ ಆತಂಕದಿಂದಲೂ ಜನರು ಮೆಚ್ಚುಗೆಯ ಮಾತುಗಳನ್ನು ಆಡಬಹುದು; ಎದುರು ತಿರುಗಿ ಬೀಳದೇ ಇರಬಹುದು. ಆದರೆ, ಅದನ್ನು ಗೌರವವೆಂದು ಭಾವಿಸಿದರೆ ಮೂರ್ಖತನವಾದೀತು ಅಷ್ಟೇ. ಅಂತಹ ಸ್ಥಿತಿಯಲ್ಲಿ ವಿ.ಭಟ್ಟರು ಇದ್ದಾರೆ. ಅವರು ಅದರಿಂದ ಹೊರಬರುತ್ತಾರೆಂದು ನಿರೀಕ್ಷಿಸುವುದೂ ಮೂರ್ಖತನವೇ.

ಎಫ್‍ಐಆರ್ ಹಾಕಿದ್ದನ್ನು ಒಪ್ಪದೇ, ವಿ.ಭಟ್ಟರದ್ದನ್ನು ಜರ್ನಲಿಸಂ ಎಂತಲೂ ಒಪ್ಪದೇ ಇರಲು ಕಾರಣಗಳು ಕೇವಲ ಇಷ್ಟೇ ಅಲ್ಲ. ಆದರೆ, ಎಷ್ಟೇ ಕೆಟ್ಟ ಜರ್ನಲಿಸ್ಟಾದರೂ ಅವರ ಮೇಲೆ ದಾಳಿ ಮಾಡಬಹುದು ಎಂಬಂತೆ ಸುಮ್ಮನಿದ್ದರೆ, ಅವರಿಗೂ ನಮಗೂ ವ್ಯತ್ಯಾಸವಿರುವುದಿಲ್ಲ ಅಷ್ಟೇ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...