Homeಅಂಕಣಗಳುನಾವೆಂದೂ ಜಾತಿ ರಾಜಕಾರಣ ಮಾಡಿದವರಲ್ಲ

ನಾವೆಂದೂ ಜಾತಿ ರಾಜಕಾರಣ ಮಾಡಿದವರಲ್ಲ

- Advertisement -
- Advertisement -

| ಯಾಹೂ |

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರೇ ಬೆಳಗುತ್ತಿದೆ. ಆದರೆ ಈಗ ಬೆಳಕಷ್ಟೇ ಸಾಲದು, ಬೆಂಗಳೂರಿಗರಿಗೆ ಕುಡಿಯಲೋಸ್ಕರ ಲಿಂಗನಮಕ್ಕಿ ನೀರು ಕೊಡಲು ಮಂಗನಂತಹ ರಾಜಕಾರಣಿಗಳು ಯೋಜನೆ ರೂಪಿಸಿದ್ದಾರಂತಲ್ಲಾ. ಅತ್ತ ಲಿಂಗನಮಕ್ಕಿ ಕತೆಯೇನಾಗಿದೆಯೆಂದರೆ, ಒಂದು ಕಾಲದಲ್ಲಿ ವರ್ಷಪೂರ್ತಿ ಭೋರ್ಗರೆಯುತ್ತಿದ್ದ ಜೋಗ, ಡ್ಯಾಂ ಕಟ್ಟಿದ ಮೇಲೆ ನಿಂತು ಹೋಯ್ತು. ಗುಡ್ಡಗಳ ಜವುಗಿನಿಂದ ಅಳುತ್ತಿದ್ದ ಜೋಗ ಈಗ ಗಟ್ಟಿ ಮನಸ್ಸು ಮಾಡಿ ಅದನ್ನು ನಿಲ್ಲಿಸಿದೆ. ಆದರೆ ರಾಜಕಾರಣಿಗಳು ಬರುವ ಪ್ರವಾಸಿಗರಿಗಾಗಿ ಮಾರ್ಕೆಟ್ ನಿರ್ಮಿಸಿ ಬಾಡಿಗೆ ಕೊಟ್ಟಿದ್ದಾರೆ. ಐಶಾರಾಮಿ ಐಬಿ ಕಟ್ಟಿಸಿದ್ದಾರೆ. ಜೊತೆಗೆ ಮುನಿಸಿಕೊಂಡ ಶರಾವತಿಯನ್ನು ಬೆಂಗಳೂರಿನವರೆಗೂ ಎಳೆದು ತರಲು ಯೋಜಿಸಿದ್ದಾರೆ. ಈ ಮೂರ್ಖರ ದೆಸೆಯಿಂದ ಈಗಾಗಲೇ ಗಾಜನೂರು ಬಲದಂಡೆ ತೋಡಲಾಗಿದೆ. ಭದ್ರಾ ಮೇಲ್ದಂಡೆ ಪಾತಾಳದಲ್ಲಿ ಹರಿಯಬೇಕಿದೆ. ಎತ್ತಿನಹೊಳೆ ತಿರುಗಿಸಲಾಗಿದೆ. ಇದಲ್ಲದೆ ಮಳೆ ನೀರು ಸಂಗ್ರಹಕ್ಕಾಗಿ ಇಡೀ ಕರ್ನಾಟಕದಲ್ಲಿ ಕೃಷಿ ಹೊಂಡ ತೋಡಿದ್ದಾರೆ. ಈ ಕೃಷಿ ಹೊಂಡದಲ್ಲಿ ನೀರು ತುಂಬುವ ಬದಲು ಜನಗಳ ಜೇಬು ಎಷ್ಟು ತುಂಬಿದೆ ಎಂದರೆ, ಇವರ ಕಡೆಯವರು ಯಾವ ಕೋಳಿಗಳನ್ನೂ ಬಿಡುತ್ತಿಲ್ಲ, ಯಾವ ಬ್ರಾಂಡಿ ಶಾಪನ್ನೂ ಬಿಡುತ್ತಿಲ್ಲ. ಇಂತವೇ ಹೋಗಿ ವಿಧಾನಸೌಧದಲ್ಲಿ ಕುಳಿತಿರುವುದರಿಂದ ಶರಾವತಿಗೆ ಕಂಟಕ ಎದುರಾಗಿದೆ. ಆದರದು ಅಷ್ಟು ಸುಲಭವಲ್ಲವಂತಲ್ಲಾ ಥೂತ್ತೇರಿ.

ನಿಜಕ್ಕೂ ಈಗ ದೇಶ ಅವ್ಯಕ್ತ ಕ್ಷೋಭೆಯಿಂದ ಕೂಡಿದೆ. ಕ್ರಿಕೆಟ್ ಮ್ಯಾಚನ್ನ ಸಂಭ್ರಮಿಸಲಾಗುತ್ತಿಲ್ಲ. ಏಕೆಂದರೆ ಟಿವಿಯಲ್ಲಿರುವ ಮೂರ್ಖರು ಕ್ಯಾಪ್ಟನ್ ಕೊಯ್ಲಿ ಜೊತೆಗೆ ಮೋದಿ ಫೋಟೊವನ್ನ ಹಾಕುತ್ತಿದ್ದಾರೆ. ನಮ್ಮ ಕ್ರಿಕೆಟಿಗರಿಗೆ ಮೋದಿ ಕೋಚ್ ಎಂಬುದು ಗೊತ್ತೇ ಇರಲಿಲ್ಲ. ಆದಿರಲಿ ಕರ್ನಾಟಕದ ಮಟ್ಟಿಗೆ ಭೀಕರವಾದ ಬಿಕ್ಕಟ್ಟುಗಳಿವೆ. ಶರಾವತಿ, ಐಎಂಎ ದರೋಡೆ, ಜಿಂದಾಲ್ ಭೂಹಗರಣ ಇವೆಲ್ಲ ಸಮಸ್ಯೆಗಳು ತೊಡರಿಕೊಂಡಿರುವಾಗ, ನಮ್ಮ ಮಾಜಿ ಪ್ರಧಾನಿಗಳಾದ ದೇವೇಗೌಡರು ಮಧ್ಯಂತರ ಚುನಾವಣೆಯ ಧಮಕಿ ಹಾಕಿ ರಾಜಕಾರಣಿಗಳನ್ನು ಬೆಚ್ಚಿಸಿದ್ದಾರಲ್ಲಾ. ಈ ಬಗ್ಗೆ ಅವರನ್ನೇ ಮಾತನಾಡಿಸಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್; “ಜಾಡಿಸಿ ಹೊದಿ, ಅವರನ್ನು ಥೂ ಎಂದು ಉಗಿ ಜಾಡಿಸಿ…..” ಹಲೋ…
“ನಮಸ್ಕಾರ ಸಾರ್ ನಾನು ಯಾಹೂ.”
“ಗೌರಿ ಸಿಸ್ಟರ್ ಪತ್ರಿಕೆ ಬರ್ತಾಯಿದೆಯಾ.”
“ಬರ್ತಾಯಿದೆ ಸಾರ್.”
“ಒಂದು ಕಳಿಸಿ ಕೊಡಿ.”
“ಆಯ್ತು ಸಾರ್, ಒಂದೆರಡು ಪ್ರಶ್ನೆ ಕೇಳಬೇಕು.”
“ಕೇಳಿ.”
“ಮಧ್ಯಂತರ ಚುನಾವಣೆ ಎದುರಿಸೋಣ ಅಂದಿದ್ದಿರಲ್ಲಾ ಸಾ.”
“ಈ ದೇವೇಗೌಡ ಯಾವತ್ತು ಚುನಾವಣೆಗೆದಿರಿಲ್ಲ.”
“ನೀವು ಹೆದರಲ್ಲ ಸಾರ್, ಆದ್ರೆ ಎಮ್ಮೆಲ್ಲೆಗಳು ಬೆಚ್ಚಿ ಬಿದ್ದವುರೆ.”
“ಈಚಿನ ಚುನಾವಣೆ ಅಂದ್ರೆ ಹುಡುಗಾಟದ ಮಾತಲ್ಲ ಕೋಟಿಗಳ ಮಾತು.”
“ಅಕಸ್ಮಾತ್ ನೀವು ಚುನಾವಣೆಗೋದ್ರೆ ನಿಮಿಗೆ ಇಪ್ಪತ್ತೈದು, ಕಾಂಗ್ರೆಸ್‍ಗೆ ಐವತ್ತು, ಬಿಜೆಪಿಗೆ ಮೆಜಾರಿಟಿ ಬರುತ್ತಲ್ಲವಾ ಸಾರ್.”
“ಅದನ್ನು ತಮ್ಮಿಂದ ಕೇಳಿ ತಿಳಕೊಬೇಕಾಗಿಲ್ಲ ನನಿಗೂ ಗೊತ್ತು.”
“ಸಾರಿ ಸಾರ್, ನಿಮ್ಮ ಅನುಭವ ಮತ್ತೆ ಆತ್ಮವಿಶ್ವಾಸ ಒಂದೊಂದು ಸಾರಿ ಕೈ ಕೊಟ್ಟಿದೆಯಲ್ಲವ ಸಾರ್.”
“ಯಾವಾಗ.”
“ಕುಮಾರಣ್ಣ ಇಪ್ಪತ್ತು ತಿಂಗಳು ಮುಗಿಸಿದ ಮೇಲೆ, ಎಡೂರಪ್ಪನಿಗೆ ಬೆಂಬಲ ಕೊಡದು ಬೇಡ ಅಂತ ಹಟ ಹಿಡಿದ್ರಿ.”
“ಅದು ನನ್ನ ಭಾಗದ ಸರಿಯಾದ ತೀರ್ಮಾನ.”
“ಆದ್ರೆ ಎಡೂರಪ್ಪ ನಿಮ್ಮ ಕೈಲಿ ಗೂಸಾ ತಿಂದೋರಂಗೆ ಇಡೀ ಕರ್ನಾಟಕದಲ್ಲಿ ಅಳತ ತಿರುಗಾಡಿದರು. ಬಹುಮತ ಪಡೆದ್ರು ನೀವು ಇಪ್ಪತ್ತೈದು ಸೀಟಿಗೆ ನಿಂತೋದ್ರಿ ಅಲ್ಲವ ಸಾರ್.”
“ಹೌದು, ನನಿಗೆ ಇಪ್ಪತ್ತೈದು ಸೀಟು ಬಂದಿದ್ಕೆ ಯಾವ ಬೇಸರನೂ ಇಲ್ಲ. ಆದ್ರೆ ಕುಮಾರ ಬಿಜೆಪಿಗೆ ಸಪೋರ್ಟ್ ಮಾಡಿದ್ರೆ ನಾನು ಮುಖ ಎತ್ತಿಕೊಂಡು ರಾಜಕಾರಣ ಮಾಡಕ್ಕಾಗ್ತಿತ್ತ.”
“ಯಾಕೆ ಸಾರ್.”
“ನೀನು ಬಿಜೆಪಿಗೋಗಿ ಮುಖ್ಯಮಂತ್ರಿ ಆಗೋದಾದ್ರೆ ನನ್ನ ಹೆಣ ನೋಡಬೇಕಾಗತ್ತೆ ಅಂತ ಕುಮಾರನಿಗೆ ಹೇಳಿದ್ದೆ. ಲೋಕಸಭೆಲಿ ನಿಂತು ನಾನಿಲ್ಲದಾಗ ನನ್ನ ಮಗನನ್ನ ಕರೆದುಕೊಂಡೋಗಿ ಬಿಜೆಪಿಯವರು ಅಧಿಕಾರ ಹಿಡಿದ್ರು ಅಂತ ಹೇಳಿದ್ದೆ. ಇಷ್ಟಾದ ಮೇಲೆ ನಾನು ಎಡೂರಪ್ಪನಿಗೆ ಸಪೋರ್ಟ್ ಮಾಡು ಅನ್ನಕ್ಕಾಗತ್ತ.”
“ಇಲ್ಲ ಸಾರ್, ರಾಜಕಾರಣದಲ್ಲಿ ನೈತಿಕತೆ ಅಂದ್ರೆ ಇದೆ ಅಲ್ಲವ ಸಾರ್.”
“ನಾನು ಯಾವತ್ತಿಗೂ ಬಿಜೆಪಿಯವರ ಜೊತೆ ಸರಸ ಆಡಿದವನಲ್ಲ.”
“ನಿಜ ಸಾರ್, ಅಷ್ಟೇ ಅಲ್ಲ ಮಾಜಿ ಪ್ರಧಾನಿಗಳಾಗಿದ್ದು ಆ ಮೋದಿ ಬಗ್ಗೆ ಮಾತಾಡಲಿಲ್ಲ. ರಫೇಲ್ ಹಗರಣ, ಹುಸಿ ಯುದ್ಧ ಮತ್ತೆ ಮೋದಿ ಸುಳ್ಳು ಬಗ್ಗೆನೂ ಚಕಾರ ಎತ್ತಲಿಲ್ಲ.”
“ನನ್ನ ರಾಜಕಾರಣ ಅದಲ್ಲ.”
“ಇನ್ನೊಂದು ವಿಷಯ ಸಾರ್, ಕಾಂಗ್ರೆಸ್‍ನವರು ನೀವು ಸರಕಾರ ಮಾಡಿ ಅಂತ ಹೇಳಿದಾಗ, ಖರ್ಗೆ ಮುಖ್ಯಮಂತ್ರಿ ಆಗಲಿ ಅಂದ್ರಂತೆ. ಈಗ ಚುನಾವಣೆಗೆ ಹೋಗೋದರ ಬದಲು ಖರ್ಗೆ ಮಾಡಿ ಕೈ ತೊಳಕೊಂಡ್ರೆಂಗೇ.”
“ಅದಷ್ಟು ಸುಲಭವಲ್ಲ ಕಾಂಗೈನಲ್ಲೇ ವಿರೋಧ ಇದೆ.”
“ನೀವು ಮನಸು ಮಾಡಿದ್ರೆ ಆಗತ್ತೆ ಸಾರ್. ಆಗ ಹಾಸನ ಜಿಲ್ಲಾ ಪಂಚಾಯ್ತಿಗೆ ಹರಿಜನರ ಹುಡುಗನ್ನ ಅಧ್ಯಕ್ಷನ್ನ ಮಾಡಿದ್ರಿ. ಈಗ ಅಂತ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ ಸಾರ್.”
“ಈ ಬಗ್ಗೆ ತೀರ್ಮಾನ ತಗೋಬೇಕಾದವರು ಕಾಂಗ್ರೆಸಿಗರು. ಮುಖ್ಯವಾಗಿ ನನ್ನನ್ನ ತುಮಕೂರಲ್ಲಿ ನಿಲ್ಲಿಸಿ ಸೋಲಿಸಿದಂತಹ ಮಹಾ ನಾಯಕರು ಈ ಬಗ್ಗೆ ಮನಸು ಮಾಡಬೇಕು.”
“ನಿಮ್ಮನ ತುಮಕೂರಲ್ಲಿ ನಿಲ್ಲಂಗೆ ಮಾಡಿದ ಮಹಾ ನಾಯಕರು ಮುಟ್ಟಿನೋಡಿಕಳಂಗಾಯ್ತು ಸಾರ್. ಮೈಸೂರು ಒಕ್ಕಲಿಗರು ಕಾಂಗ್ರೆಸ್‍ಗೆ ಓಟಾಕಲಿಲ್ಲ. ತುಮಕೂರು ಕುರುಬ್ರು ನಿಮಗೆ ಓಟು ಮಾಡಲಿಲ್ಲ ಅಲ್ಲವ ಸಾರ್.”
“ಹಾಗೇಳಕ್ಕೆ ಬರಲ್ಲ.”
“ಅಂಗಂದ್ರೆ ಮುದ್ದ ಹನುಮೇಗೌಡರನ್ನ ಮುದ್ದು ಮಾಡೋರು ನಿಮ್ಮನ್ನ ಮುಗಿಸಿದ್ರು ಅಂದಂಗಾಗತ್ತೆ.”
“ಸೋಲನ್ನ ನಾನು ಒಪ್ಪಿಕಂಡಿದ್ದಿನಿ.”
“ಒಪ್ಪದೆಯಿದ್ರೆ ಗೆಲವು ಅಂತ ಅನ್ನಕ್ಕಾಗಲ್ಲ ಸಾರ್. ಆದ್ರೆ ನಿಮ್ಮ ತೀರ್ಮಾನ ಸರಿಯಿರಲಿಲ್ಲ. ಆದ್ರು ನೀವು ಸಿದ್ದರಾಮಯ್ಯ ಈಗ ಒಂದಾಗಿರಬೇಕು ಸಾರ್.”
“ಅದರಗತ್ಯ ಇದಿಯಾ.”
“ಇದೆ ಸಾರ್, ನಿಮ್ಮಿಬ್ಬರ ರಾಜಕಾರಣದಿಂದ ಅಣ್ಣ ತಮ್ಮಂದಿರಂಗಿದ್ದ ಕುರುಬ್ರು ಒಕ್ಕಲಿಗರು ವೈರಿಗಳಾಗಿದ್ದಾದಾರೆ, ನೀವು ಒಂದಾದ್ರೆ ಲಿಂಗಾಯಿತರ ಹೆದರಿಸಬವುದು.”
“ಈ ತರದ ಜಾತಿ ಲೆಕ್ಕಾಚಾರದ ರಾಜಕಾರಣವನ್ನ ಈ ದೇವೇಗೌಡ ಎಂದೂ ಮಾಡಿಲ್ಲ.”
“ಮತ್ಯಾಕೆ ಸಾರ್, ಜಾತ್ಯಾತೀತವಾಗಿದ್ದ ಒಕ್ಕಲಿಗರು ಹಿಂಗಾದ್ರು.”
“ಹ್ಯಂಗಾಗಿದಾರೆ.”
“ಒಂದು ಕಾಲದಲ್ಲಿ ಸಿಂಧ್ಯನ ಎದುರಿಗೆ ನಿಮ್ಮನ್ನೇ ಸೋಲಸತಿದ್ರು. ದೇವರಾಜ ಅರಸು ಎದುರಿಗೆ ತಿಮ್ಮೇಗೌಡನ್ನ ಸೋಲಿಸತಿದ್ರು, ಚಿಗರಿಗೌಡನ ಎದುರಿಗೆ ಎಚ್.ಬಿ.ಕೃಷ್ಣಪ್ಪನ್ನ ಸೋಲಿಸಿದ್ರು. ಆದ್ರೀಗ ಅವುರೂ ಲಿಂಗಾಯತರಂಗೆ ಆಗ್ಯವುರೆ ಇದನ್ಯಲ್ಲ ನೋಡಿದ್ರೆ ಕಮ್ಯುನಿಟಿ ಲೀಡ್ರು ಹೊಣೆಗಾರಾಗಬೇಕಾಗತ್ತೆ ಸಾರ್.”
“ನೋಡಿ ಕಾಲ ಬದಲಾಗಿದೆ ಆದ್ರಿಂದ ರಾಜಕಾರಣ ತುಂಬ ವ್ಯಾಪಿಸಿಕೊಂಡಿದೆ. ಸರಕಾರಿ ಜನ ಕೂಡ ತಮ್ಮ ಜನಾಂಗದ ಲೀಡರನ್ನ ಆಶ್ರಯಿಸಿದಾರೆ, ಒಬ್ಬ ರಾಜಕಾರಣಿ ಎಲ್ಲ ಜನಾಂಗದವರ ಕೆಲಸಗಳನ್ನ ಮಾಡಿದ್ರೆ ಹೀಗಾಗತಿರಲಿಲ್ಲ. ನಾವು ಎಂದೂ ಜಾತಿ ರಾಜಕಾರಣ ಮಾಡಿದವರಲ್ಲ. ಕುಟುಂಬದ ರಾಜಕಾರಣವನ್ನೂ ಮಾಡಿದವರಲ್ಲ. ಭ್ರಷ್ಟ ಕೆಲಸ ಮಾಡಕ್ಕೆ ನಮ್ಮಿಂದ ಸಾಧ್ಯವಾಗಲೇಯಿಲ್ಲ. ಆದ್ರಿಂದ ಕಳೆದ ಅರವತ್ತು ವರ್ಷಗಳಿಂದ ರಾಜಕಾರಣದಲ್ಲಿದ್ದೀನಿ. ಇದು ಜನರ ಆಶೀರ್ವಾದಗಳಿಂದ ಮಾಡಿಕೊಂಡು ಬಂದ ರಾಜಕಾರಣವೇ ಪರಂತೂ. ಇನ್ಯಾರಿಂದ್ಲೂ ಅಲ್ಲ.”
“ಇನ್ನೊಂದು ಗುರುತರವಾದ ಆಪಾದನೆ ಸಾರ್, ನೀವು ಕುರುಬ ಜನಾಂಗದವರಂತೆ ನಿಜವ.”
“ಯಾವ ಬೋಸುಡಿ ಮಗ ಅಂಗಂದೋನು.”
“ಥೂತ್ತೇರಿ.”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...