Homeಮುಖಪುಟಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡರ ರಾಜಕೀಯ ಮುಗಿದಂತೆ

ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡರ ರಾಜಕೀಯ ಮುಗಿದಂತೆ

- Advertisement -
- Advertisement -

| ಎನ್.ಗೌಡ |

ದೇವೇಗೌಡರ ರಾಜಕೀಯ ಗ್ರಾಫ್ ಅತ್ಯಂತ ಪಾತಾಳಕ್ಕಿಳಿದ ಹಲವು ಸಂದರ್ಭಗಳು ಕಳೆದ ನಾಲ್ಕು ದಶಕಗಳಲ್ಲಿ ಬಂದು ಹೋಗಿವೆ. ಆದರೆ, ಅವರು ಮತ್ತೆ ಮತ್ತೆ ಫೀನಿಕ್ಸ್ (ಧೂಳಿನಿಂದ ಮೇಲೆದ್ದು ಬರುತ್ತೇನೆ ಎಂದು ವಿದಾಯ ಭಾಷಣದಲ್ಲಿ ಪ್ರಧಾನಿ ದೇವೇಗೌಡರು ಸಂಸತ್ತಿನಲ್ಲಿ ಅಬ್ಬರಿಸಿದ್ದರು)ನಂತೆ ಮೇಲೇಳುತ್ತಾ ಬರುತ್ತಾರೆ. ಹಾಗೆ ಮೇಲೆದ್ದು ಬರುವಾಗ ಅವರಿಗೆ ಸಾಥ್ ಕೊಟ್ಟ ಕೆಲವು ನಿರ್ದಿಷ್ಟ ಭಾಗಗಳಿವೆ. ನಿಧಾನಕ್ಕೆ ಅಂತಹ ಕ್ಷೇತ್ರಗಳ ಮೇಲೆ ಅವರ ಹಿಡಿತವೂ ಹೆಚ್ಚಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಸಹಾ ಅವುಗಳಲ್ಲಿ ಒಂದು. ಭೌಗೋಳಿಕವಾಗಿ ಒಂದು ಕಡೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುರ ತಾಲೂಕುಗಳಿಗೆ ಅದು ಹೊಂದಿಕೊಂಡಿರುವುದೂ ಅದಕ್ಕೆ ಕಾರಣವಿರಬಹುದು. ಇದೇ ಕ್ಷೇತ್ರದ ಎಂಎಲ್‍ಎ ಕೆ.ಸಿ.ನಾರಾಯಣಗೌಡ ಈಗ ರಾಜೀನಾಮೆ ಕೊಟ್ಟು ಮುಂಬೈನ ಸೋಫಿಟೆಲ್ ಸೇರಿಕೊಂಡಿರುವವರಲ್ಲಿ ಒಬ್ಬರು.

ಕೆ.ಆರ್.ಪೇಟೆ ಕೃಷ್ಣ ಅವರು ಈ ಕ್ಷೇತ್ರದಲ್ಲಿ ಸಾಕಷ್ಟು ಕಾಲ ದೇವೇಗೌಡರ ಪಕ್ಷವನ್ನು ಪ್ರತಿನಿಧಿಸಿದ್ದ ಹಿರಿಯ ರಾಜಕಾರಣಿ. ಒಮ್ಮೆ ಸಂಸತ್ ಸದಸ್ಯರೂ (ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ) ಆಗಿದ್ದ ಅವರು 2004ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಧಿಕಾರಕ್ಕೆ ಬಂದಾಗ ಸ್ಪೀಕರ್ ಆಗಿದ್ದರು. ನಂತರದ ಜೆಡಿಎಸ್-ಬಿಜೆಪಿ ಮೈತ್ರಿಯನ್ನೂ (ದೇವೇಗೌಡರ ಸೂಚನೆಗಳಿಗನುಗುಣವಾಗಿ) ಸ್ಪೀಕರ್ ಆಗಿ ನಿಭಾಯಿಸಿದ್ದರು. 2008ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್‍ನ ಕೆ.ಬಿ.ಚಂದ್ರಶೇಖರ್ ಎದುರು ಸೋತಿದ್ದರು. ಕೇವಲ 3,500 ಮತಗಳಿಂದ ಸೋತಿದ್ದರಿಂದ ನಂತರದ ಸಾಲಿನಲ್ಲಿ, ಅಂದರೆ 2013ರಲ್ಲೂ ತಮಗೇ ಟಿಕೆಟ್ ಎಂದು ಕೃಷ್ಣ ಭಾವಿಸಿದ್ದು ಸಹಜವಾಗಿತ್ತು. ಆದರೆ ಮುಂಬೈನಲ್ಲಿ ಹೋಟೆಲ್ ಮತ್ತಿತರ ಬಿಸಿನೆಸ್ ಮಾಡಿಕೊಂಡಿದ್ದ ಕೆ.ಸಿ.ನಾರಾಯಣಗೌಡರು ಅಷ್ಟು ಹೊತ್ತಿಗೆ ಕೆ.ಆರ್.ಪೇಟೆಯಲ್ಲಿ ‘ಸಮಾಜ ಸೇವೆ’ ಶುರು ಹಚ್ಚಿಕೊಂಡಿದ್ದರು.

ಹಣದ ಕುಳಗಳಿಗೆ ಮೊದಲ ಆದ್ಯತೆ ಕೊಡುವ ದೇವೇಗೌಡರ ಮನದಿಂಗಿತ ಅರಿವಾಗತೊಡಗಿ ಕೃಷ್ಣರಿಗೆ ಆತಂಕ ಶುರುವಾಯಿತು. ‘ಏನು ಮಾಡೋಣ ಗುರುಗಳೇ, ನಮಗೂ ಚುನಾವಣೆ ನಡೆಸಲು ಹಣದ ಅಗತ್ಯ ಇರುತ್ತೆ. ಬಹಳ ಕಷ್ಟದಲ್ಲಿದ್ದೇವೆ’ ಎಂದರು ದೊಡ್ಡಗೌಡರು. ಪ್ರಾಮಾಣಿಕತೆ ಮತ್ತಿತರ ಸಾರ್ವಜನಿಕ ಮೌಲ್ಯಗಳನ್ನು ಇನ್ನೂ ಉಳಿಸಿಕೊಂಡಿದ್ದ ಕೃಷ್ಣರಿಗೆ ಬೇರೆ ದಾರಿಯಿರಲಿಲ್ಲ. ದೇವೇಗೌಡರ ಬಳಿ ಹೋಗಿ ‘ನಾನು ಅನ್ಯಾಯದ ಹಣ ಸಂಪಾದನೆ ಮಾಡಿಲ್ಲ; ನನ್ನದೊಂದು ಸೈಟ್ ಇದೆ. ಅದನ್ನು ಮಾರಿ ಎಷ್ಟು ಹಣ ಬರುತ್ತೋ ಅಷ್ಟನ್ನು ಕೊಡುತ್ತೇನೆ’ ಎಂದರು. ‘ಸರಿ ನೋಡೋಣ’ ಎಂದ ದೊಡ್ಡಗೌಡರು, ಟಿಕೆಟ್ ಕೊಟ್ಟಿದ್ದು ಕೆ.ಸಿ.ನಾರಾಯಣಗೌಡರಿಗೆ!

ಬೇಸತ್ತ ಕೃಷ್ಣ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್‍ನ ಪಾರಂಪರಿಕ ಓಟ್‍ಬ್ಯಾಂಕ್ ಮತ್ತು ತಮ್ಮ ಕುಟುಂಬದ ಹಿಡಿತ ಎರಡನ್ನೂ ಹೊಂದಿದ್ದ ಕೆಬಿಸಿ ಎರಡನೇ ಸ್ಥಾನಕ್ಕೆ ಬಂದರು. 30,000 ಮತಗಳನ್ನು ಪಡೆದ ಕೃಷ್ಣ ಅವರು ಮೂರನೇ ಸ್ಥಾನದಲ್ಲಿದ್ದರು. ಹೀಗಿದ್ದೂ ಜೆಡಿಎಸ್ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಗೆದ್ದರು. ಇದು ದೇವೇಗೌಡರು ಮತ್ತು ಅವರ ಪಕ್ಷಕ್ಕೆ ಕೆ.ಆರ್.ಪೇಟೆ ಮತದಾರರು ತೋರಿದ ನಿಷ್ಠೆಯ ಪ್ರತೀಕವಾಗಿತ್ತು. ಅದು 2018ರ ಚುನಾವಣೆಯಲ್ಲೂ ಎದ್ದು ಕಂಡಿತು.

ಈ ಸಾರಿ ಕೆ.ಸಿ.ಎನ್.ಗೆ ಟಿಕೆಟ್ ಇಲ್ಲ ಎಂಬ ಸಂದೇಶ ಹರಿದಾಡಲು ಆರಂಭವಾಯಿತು. ಅದಕ್ಕೆ ತಕ್ಕಂತೆ ಟಿಕೆಟ್ ಹಂಚಿಕೆಯ ಮೊದಲ ಪಟ್ಟಿಗಳಲ್ಲಿ ಕೆ.ಆರ್.ಪೇಟೆ ಕ್ಷೇತ್ರದ ಅಭ್ಯರ್ಥಿಯ ಘೋಷಣೆಯೂ ಆಗಲಿಲ್ಲ. ಅನಿವಾರ್ಯವಾಗಿ ಮತ್ತೊಮ್ಮೆ ಕಪ್ಪ ಸಲ್ಲಿಸಿ ನಾರಾಯಣಗೌಡರು ಟಿಕೆಟ್ ಪಡೆದುಕೊಂಡರು. ತಾನು ಭ್ರಷ್ಟಾಚಾರ ಮಾಡಲಿಲ್ಲ, ಪಕ್ಷಕ್ಕೆ ನಿಷ್ಠನಾಗಿದ್ದೆ, ಇದ್ದುದರಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೇನೆ, ನನ್ನಂಥವನಿಗೆ ಹೀಗೆ ಮಾಡಿದರಲ್ಲಾ ಎಂಬ ಸಿಟ್ಟು ನಾರಾಯಣಗೌಡರಲ್ಲಿ ಹುಟ್ಟಿಕೊಂಡು ಬೆಳೆದು ಇದೀಗ ಅದು ಬಂಡಾಯವೇಳುವವರೆಗೆ ಕೊಂಡೊಯ್ದಿದೆ. ಏಕೆಂದರೆ, ಸ್ವತಃ ದುಡ್ಡಿನ ಕುಳವಾದ ಗೌಡರಿಗೆ ಬಿಜೆಪಿಯ 30 ಕೋಟಿ ಆಸೆ ಹುಟ್ಟಿಸಿರಲಾರದು. ಆದರೆ ನಾರಾಯಣಗೌಡರು ಮರೆಯುತ್ತಿರುವ ಒಂದು ವಿಷಯವಿದೆ. ಈ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕೃಷ್ಣ ಅವರೂ ಕೆ.ಬಿ.ಸಿಗೇ ಬೆಂಬಲಿಸಿದ್ದರೂ, ನಾರಾಯಣಗೌಡರು 17,000ಕ್ಕೂ ಹೆಚ್ಚು ಅಂತರದಿಂದ ಗೆಲ್ಲಲು ಜೆಡಿಎಸ್ ಟಿಕೆಟ್ಟೇ ಕಾರಣ. ದೇವೇಗೌಡರು ಕೆ.ಆರ್.ಪೇಟೆಯವರಿಗೆ ಅದೇನು ಮಾಯ ಮಾಡಿದ್ದಾರೋ ಗೊತ್ತಿಲ್ಲ ಎಂದು ಜನ ಆಡಿಕೊಳ್ಳುವ ಹಾಗೆ ಫಲಿತಾಂಶ ಬಂದಿತು.

ಬಹುಶಃ ಇದೇ ಪರಿಸ್ಥಿತಿ ಎಚ್.ವಿಶ್ವನಾಥ್‍ರಿಗೂ ಉಂಟಾಗಬಹುದು. ಏಕೆಂದರೆ ಕೆ.ಆರ್.ನಗರದಲ್ಲಿ ಮತ್ತೆ ಗೆಲ್ಲಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ಇದ್ದ ವಿಶ್ವನಾಥ್‍ರಿಗೆ ಜಿಟಿಡಿ ಪ್ರತಿನಿಧಿಸುತ್ತಿದ್ದ ಹುಣಸೂರನ್ನು ದೇವೇಗೌಡರು ಕೊಡಿಸಿದ್ದರು. ಇನ್ನೊಬ್ಬ ಜೆಡಿಎಸ್ ಶಾಸಕ ಮಹಾಲಕ್ಷ್ಮಿ ಲೇಔಟ್‍ನ ಗೋಪಾಲಯ್ಯರ ಪರಿಸ್ಥಿತಿ ಮಾತ್ರ ಭಿನ್ನ ಇರಬಹುದು. ನಗರ ಪ್ರದೇಶದಲ್ಲಿ ಬಿಜೆಪಿಗೆ ಸೇರಿದರೆ ಅನುಕೂಲವೂ ಉಂಟಾಗಬಹುದು. ಆದರೆ ಜೆಡಿಎಸ್‍ನ ಬೆಂಬಲ ಇಲ್ಲದೇ ಎಚ್.ವಿಶ್ವನಾಥ್ ಮತ್ತೆ ಹುಣಸೂರಿನಲ್ಲಿ ಗೆಲ್ಲುವುದು ಅನುಮಾನ.

ಕೆ.ಆರ್.ಪೇಟೆಯ ವಿಚಾರದಲ್ಲಿ ಅಂತಹ ಯಾವ ಅನುಮಾನವೂ ಇಲ್ಲ ಎಂಬುದು ಮಂಡ್ಯ ಜಿಲ್ಲೆಯ ರಾಜಕಾರಣ ಗೊತ್ತಿದ್ದವರ ಅನಿಸಿಕೆ. ಮೊನ್ನಿನ ಲೋಕಸಭಾ ಚುನಾವಣೆಯ ಅಲೆಯ ಸ್ವರೂಪ ಬೇರೆ ಇತ್ತು. ಅದನ್ನು ಇಟ್ಟುಕೊಂಡು ‘ದೇವೇಗೌಡರ ಕುಟುಂಬಕ್ಕೆ ಅವಮಾನ ಮಾಡಿದ’ ನಾರಾಯಣಗೌಡರನ್ನು ಕೆ.ಆರ್.ಪೇಟೆಯ ಜನರು ಬಿಜೆಪಿ ಅಭ್ಯರ್ಥಿಯನ್ನಾಗಿ ಗೆಲ್ಲಿಸುವುದು ಸಾಧ್ಯವೇ ಇಲ್ಲ ಎಂಬುದು ಸ್ಥಳೀಯರ ಅನಿಸಿಕೆ. ಅಲ್ಲಿಗೆ ನಾರಾಯಣಗೌಡರ ರಾಜಕಾರಣ ಮುಗಿಯಿತೇ ಎಂಬ ಪ್ರಶ್ನೆಗೆ ಮುಂದಿನ ತಿಂಗಳುಗಳು ಉತ್ತರ ನೀಡುತ್ತವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...