Homeಮುಖಪುಟ36 ಕೋಟಿ ‘ಗಂಟಿ’ನಲ್ಲಿ ತುಂಡು ತುಂಡು ವ್ಯವಹಾರ ಕನ್ನಡ ವಿವಿಯಲ್ಲೊಂದು ಕಟ್ಟಡ ‘ಕಸುಬು’!

36 ಕೋಟಿ ‘ಗಂಟಿ’ನಲ್ಲಿ ತುಂಡು ತುಂಡು ವ್ಯವಹಾರ ಕನ್ನಡ ವಿವಿಯಲ್ಲೊಂದು ಕಟ್ಟಡ ‘ಕಸುಬು’!

- Advertisement -
- Advertisement -

| ಪಿ.ಕೆ.ಮಲ್ಲನಗೌಡರ್ |

ಒಂದೇ ಸಂಕೀರ್ಣ. ಅದರಲ್ಲಿ ನಾಲ್ಕು ವಿಭಾಗಗಳಿಗೆ ಅವಕಾಶ ಕಲ್ಪಿಸಬೇಕು. ಆದರೆ ಮೂರು ಪ್ರತ್ಯೇಕ ಕಟ್ಟಡಗಳು ಎಂಬಂತೆ ತುಂಡು ಗುತ್ತಿಗೆಗಳನ್ನು ನೀಡಲಾಗಿದೆ. ಕಟ್ಟಡ ನಿರ್ಮಾಣ ಕುರಿತಂತೆ ಸರ್ಕಾರ ವಿಧಿಸಿದ್ದ 3ನೇ ಷರತ್ತಿನ ಉಲ್ಲಂಘನೆ ಇದು.

ತಮ್ಮಲ್ಲೇ ಇರುವ ಪರಿಣಿತ ಇಂಜಿನಿಯರ್‍ಗಳನ್ನು ಬಿಟ್ಟು ಬೇರೆ ಸರ್ಕಾರಿ ಸಂಸ್ಥೆಗೆ ಕಟ್ಟುವ ಗುತ್ತಿಗೆ ಕೊಟ್ಟು ಅದಕ್ಕೆ ಸ್ಪೆಷಲ್ಲಾಗಿ ಕಮೀಷನ್ ಅನ್ನೂ ನೀಡಲಾಗಿದೆ. ಅವಧಿನಂತರ ಮುಕ್ತಾಯಗೊಂಡ ಕಾಮಗಾರಿಗಳಿಗೆ ಗುತ್ತಿಗೆ ಒಪ್ಪಂದದ ಷರತ್ತಿನನ್ವಯ ಲಿಕ್ವಿಡಿಟಿ ಡ್ಯಾಮೇಜಸ್ ವಿಧಿಸಿಲ್ಲ. ಆ ಸಂಸ್ಥೆಗೆ ದಂಡವನ್ನೂ ವಿಧಿಸಿಲ್ಲ..

ಹೀಗೆ ಇಲ್ಲಿ ನಿಯಮಗಳ ಉಲ್ಲಂಘನೆಯ ಸರಣಿಯೇ ಎದುರಾಗುತ್ತಾ ಹೋಗುತ್ತದೆ. ಇದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತು (ರೂಸಾ) ನೇಮಿಸಿದ್ದ ತನಿಖಾ ಸಮಿತಿ ನೀಡಿರುವ ವರದಿಯಲ್ಲಿ ಕಂಡ ಕೆಲವು ನಿಯಮಬಾಹಿರ ಸ್ಯಾಂಪಲ್ಲುಗಳಷ್ಟೇ.

ಇದು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ಕಟ್ಟಡ ನಿರ್ಮಾಣವನ್ನು ರೊಕ್ಕ ಮಾಡಿಕೊಳ್ಳುವ ಕಸುಬನ್ನಾಗಿ ಪರಿವರ್ತಿಸಿದ ಕತೆಯಿದು. ಕನ್ನಡ ಭಾಷೆ, ಸಂಸ್ಕøತಿ, ಆಚರಣೆ, ಅಸ್ಮಿತೆಗಳನ್ನು ಕಟ್ಟಲು ತಮ್ಮ ವಿದ್ವತ್ತನ್ನು, ಕನ್ನಡ ಕಾಳಜಿಯನ್ನು, ಸಮತಾವಾದ ಕಲಿಸಿದ ಪಾರದರ್ಶಕತೆ ಮತ್ತು ಜನಪರ ಆಶೋತ್ತರಗಳನ್ನು ಬಳಸಿಕೊಳ್ಳಬಹುದು ಎಂದು ನಿರೀಕ್ಷೆ ಹುಟ್ಟಿಸಿದ್ದ ದಿಟ್ಟ ಹೆಣ್ಣುಮಗಳು ಮಲ್ಲಿಕಾ ಘಂಟಿ ಮೇಡಂ ಅವರು ಕುಲಪತಿಯಾಗಿದ್ದ ಅವಧಿಯಲ್ಲಿ ನಡೆದ 36 ಕೋಟಿಗಳ ಅಪರಾತಪರಾದ ಪ್ರಕರಣವಿದು. ತನಿಖೆಯಲ್ಲಿ ಇದು ಸಾಬೀತಾಗಿ ಇದರಲ್ಲಿ ಭಾಗಿಯಾದ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಲು ತನಿಖಾ ಸಮಿತಿ ಶಿಫಾರಸು ನೀಡಿದೆ. ಕನ್ನಡ ಕಟ್ಟಬೇಕಾಗಿದ್ದ ‘ಅಕ್ಕ’ ಕಟ್ಟಡ ಕಟ್ಟುವುದರಲ್ಲಿ ಆಸಕ್ತಿ ತೋರಿ ‘ರೊಕ್ಕ’ ಮಾಡಿದರೇ ಎಂಬ ಪ್ರಶ್ನೆಗಳು ಎದ್ದಿವೆ, ಆರೋಪಗಳು ಕೇಳಿ ಬಂದಿವೆ. ತನಿಖಾ ವರದಿ ಕೂಡ ಇದನ್ನೇ ಹೇಳುತ್ತಿದೆ. ಅಕ್ಕ ಕೊಟ್ಟಿರುವ ಪ್ರತಿಕ್ರಿಯೆಯಲ್ಲಿ ಎಲ್ಲ ಸರಿಯಾಗೇ ನಡದೈತಿ ಬಿಡು, ಕಟ್ಟಡ ಕೆಲ್ಸ ಪಕ್ಕಾ ಆಗೈತಿ, ಯಾವ ತಪ್ಪೂ ನಡದಿಲ್ಲ ಎಂಬ ಮಾತುಗಳಿವೆ. ಆದರೆ ಇದಕ್ಕೆ ಮಲ್ಲಿಕಾ ಅಕ್ಕ ಯಾವ ಪುರಾವೆಯನ್ನೂ ಒದಗಿಸಿಲ್ಲ.

ಏನಿದು ಕಟ್ಟಡ ಕಸುಬು?

ತನಿಖಾ ವರದಿಯನ್ನು ಆಧರಿಸಿ ಈ ಕಟ್ಟಡ ಕಸುಬು ಪ್ರಕರಣದ ಸಾರಾಂಶವನ್ನು ಹೀಗೆ ಹೇಳಬಹುದು:
ಡಾ. ಮಲ್ಲಿಕಾ. ಎಸ್. ಘಂಟಿಯವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಅವಧಿಯಲ್ಲಿ (9.9.2015-21.02.2019) ಕಾಮಗಾರಿಗಳ ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅದೇ ವಿಶ್ವವಿದ್ಯಾಲಯದ ಅಧೀಕ್ಷಕ ಸೋಮನಾಥ. ಎಚ್.ಎಂ. ಅಂದಿನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ 16.09.2017ರಂದು ಲಿಖಿತ ದೂರು ಸಲ್ಲಿಸಿದ್ದರು. 30.01.2018ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಭ್ರಷ್ಟಾಚಾರ ಆರೋಪದ ದೂರಿನ ತನಿಖೆಗೆ ನಾಲ್ವರು ತಜ್ಞರ ಸಮಿತಿಯನ್ನು 21.08.2018ರಂದು ನೇಮಿಸಿತ್ತು. ರಾಜ್ಯ ಲೆಕ್ಕಪತ್ರ ಇಲಾಖೆಯ ಲೆಕ್ಕಾಧಿಕಾರಿಗಳಾದ ವಿಶ್ವನಾಥ್, ಎಲ್.ವಿ.ಉಮಾಪತಿ, ಉನ್ನತ ಶಿಕ್ಷಣ ಪರಿಷತ್ತು ಲೆಕ್ಕಾಧಿಕಾರಿ ಹೆಚ್.ಸಿ.ಜಯಪ್ರಕಾಶ್ ಮತ್ತು ಲೋಕೋಪಯೋಗಿ ಇಲಾಖೆ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರ ಪರಶುರಾಮರೆಡ್ಡಿ ಒಳಗೊಂಡ ಸಮಿತಿಯು 2018ರ ಅಗಸ್ಟ್ 27 ಮತ್ತು 28ರಂದು ಡಾ. ಘಂಟಿಯವರು ಕುಲಪತಿಯವರಾಗಿದ್ದ ಅವಧಿಯಲ್ಲೇ ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ದೂರುದಾರರು ಸಲ್ಲಿಸಿರುವ ದೂರಿನ ಪ್ರಕಾರ, ರೂಸಾ ಮತ್ತು ಇತರೆ ಅನುದಾನಗಳ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಿ, ಸರಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದು, ತನಿಖಾ ಸಮಿತಿಯ ವರದಿಯ ಪ್ರಕಾರ ಸಂಬಂಧಪಟ್ಟವರಿಂದ ವಿವರಣೆ ಪಡೆದು, ನಿಯಮಾನುಸಾರ ಕ್ರಮಕೈಗೊಂಡು ಸರಕಾರಕ್ಕೆ ವರದಿ ಸಲ್ಲಿಸುವಂತೆ ತಿಳಿಸಿದೆ.

ತನಿಖಾ ಸಮಿತಿಯು ವರದಿಯಲ್ಲಿ ಸಾಬೀತುಪಡಿಸಿದ ಅಂಶಗಳೇನು ?

ನಾಲ್ಕು ನಿಕಾಯಗಳಾದ ಭಾಷೆ, ಸಮಾಜ ವಿಜ್ಞಾನ, ಲಲಿತ ಕಲೆ, ವಿಜ್ಞಾನ ನಿಕಾಯಗಳ ತರಗತಿಗಳ ಸಂಕೀರ್ಣಗಳುಳ್ಳ ರೂ. 6.50 ಕೋಟಿ ಮೊತ್ತದ ಒಂದೇ ಕಟ್ಟಡದ ನಕ್ಷೆಯನ್ನು 4 ಭಾಗಗಳಾಗಿ ವಿಭಜಿಸಿ ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ. ಸರಕಾರದ ಇಲಾಖೆಗಳು ಯಾವುದೇ ಕಾಮಗಾರಿಗಳನ್ನು ವಿಭಜಿಸಿ ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ವಹಿಸಬಾರದೆಂದು ಸರಕಾರ ವಿಧಿಸಿದ್ದ (3)ನೇ ಷರತ್ತನ್ನು ಉಲ್ಲಂಘಿಸಲಾಗಿದೆ.

ರೂಸಾ ಅನುದಾನದಲ್ಲಿ ರೂ. 86.26 ಲಕ್ಷ ಹಣವನ್ನು ಕೆ.ಟಿ.ಪಿ.ಪಿ. ಕಾಯ್ದೆ ಉಲ್ಲಂಘಿಸಿ ತುಂಡುಗುತ್ತಿಗೆ ಮೂಲಕ ಖರ್ಚು ಮಾಡಿದ್ದನ್ನು ತಪಾಸಣಾ ಸಮಿತಿಯು ಒಪ್ಪದ ಕಾರಣ, ವಿಶ್ವವಿದ್ಯಾಲಯವು ತನ್ನ ಅಭಿವೃದ್ಧಿ ಅನುದಾನದಿಂದ ಈ ಮೊತ್ತವನ್ನು ರೂಸಾ ಖಾತೆಗೆ ಹಿಂದಿರುಗಿಸಿದೆ. ಹಣ ವರ್ಗಾಯಿಸಿದ ಮಾತ್ರಕ್ಕೆ ಉಲ್ಲಂಘಿಸಿರುವ ನಿಯಮ ಕಾಯ್ದೆಬದ್ಧವಲ್ಲ.

ಭಾಷಾ ನಿಕಾಯ ಮತ್ತು ವಿಜ್ಞಾನ ನಿಕಾಯದ ತರಗತಿಗಳ ಕಟ್ಟಡಗಳ ಬಿಲ್ ಮತ್ತು ಎಂ.ಬಿ. ಪುಸ್ತಕಗಳನ್ನು ವಿಧಿಸಿದ್ದ ಷರತ್ತು ಅನ್ವಯ ಕೆ.ಆರ್.ಐ.ಡಿ.ಎಲ್. ಸಂಸ್ಥೆಯವರು ವಿಶ್ವವಿದ್ಯಾಲಯಕ್ಕೆ ಒಪ್ಪಿಸಿಲ್ಲ. ಕಾರ್ಯಾದೇಶದ ಅನುಸಾರ ವಿವಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಬಿಲ್‍ಗಳ ನ್ಶೆಜತೆಯನ್ನು ಪರಿಶೀಲಿಸಿಲ್ಲ.

ಸರ್ಕಾರದ ಲೋಕೋಪಯೋಗಿ ಇಲಾಖೆ ಆದೇಶವನ್ನು ಉಲ್ಲಂಘಿಸಿ, ಕ್ರಿಯಾಶಕ್ತಿ ಕಟ್ಟಡದ ವಿವಿಧ ಭಾಗಗಳಿಗೆ ಒಟ್ಟು 23 ಅಂದಾಜುಗಳನ್ನು ವಿಭಜಿಸಿ, ತುಂಡುಗುತ್ತಿಗೆ ಆಧಾರದ ಮೇಲೆ ವಹಿಸಿರುವುದು ಕಾನೂನುಬಾಹಿರವಾಗಿದೆ.

ವಿಶ್ವವಿದ್ಯಾಲಯವು ತಾಂತ್ರಿಕ ವಿಭಾಗದ ಇಂಜಿನಿಯರ್‍ಗಳನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ವಿಫಲವಾಗಿದೆ. ವಿವಿ ಇಂಜಿನಿಯರ್‍ಗಳ ಮೂಲಕ ಕಾಮಗಾರಿಗಳನ್ನು ನಿರ್ವಹಿಸದೆ ಅಂದಾಜಿನ ಮೊತ್ತದಲ್ಲಿ ಶೇ. 8ರಷ್ಟು ಸೇವಾ ಶುಲ್ಕವನ್ನು ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ನೀಡಿ, ಆರ್ಥಿಕ ನಷ್ಟ ಉಂಟುಮಾಡಿದ್ದಾರೆ.
ಅವಧಿನಂತರ ಮುಕ್ತಾಯಗೊಂಡ ಕಾಮಗಾರಿಗಳಿಗೆ ಗುತ್ತಿಗೆ ಒಪ್ಪಂದದ ಷರತ್ತಿನನ್ವಯ ಲಿಕ್ವಿಡಿಟಿ ಡ್ಯಾಮೇಜಸ್ ವಿಧಿಸಿಲ್ಲ. ಕಾಮಗಾರಿ ವಿಳಂಬಕ್ಕೆ ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ದಂಡ ವಿಧಿಸಿಲ್ಲ.

ಸರಕಾರದ ಲೋಕೋಪಯೋಗಿ ಇಲಾಖೆ ಆದೇಶದ ಪ್ರಕಾರ ಕಾರ್ಯಪಾಲಕ ಅಭಿಯಂತರರಿಗೆ ಸಿವಿಲ್ ಕಾಮಗಾರಿಗೆ 10 ಲಕ್ಷ ರೂಪಾಯಿ ಮತ್ತು ವಿದ್ಯುಚ್ಛಕ್ತಿ ಕಾಮಗಾರಿಗಳಿಗೆ ಒಂದು ಲಕ್ಷ ರೂಪಾಯಿಗಳವರೆಗೆ ಮಾತ್ರ ತಾಂತ್ರಿಕ ಪರಿಶೀಲನೆ ಮಾಡುವ ಅಧಿಕಾರವಿದೆ. ಆದರೆ, ಕೆ.ಆರ್.ಐ.ಡಿ.ಎಲ್. ಸಂಸ್ಥೆಯ ಕಾರ್ಯಪಾಲಕ ಅಭಿಯಂತರರು ರೂ. 22.65 ಕೋಟಿ ಮೊತ್ತಕ್ಕೆ ಮೇಲುಸಹಿ ಮಾಡಿ, ಸರ್ಕಾರಿ ಆದೇಶಗಳಲ್ಲಿನ ಆರ್ಥಿಕ ಪ್ರತ್ಯಾಯೋಜನೆಗಳನ್ನು ಉಲ್ಲಂಘನೆ ಮಾಡಿದ್ದಾರೆ.

ತನಿಖಾ ಸಮಿತಿಯು ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿರುವಂತೆ, ಕಾಮಗಾರಿಗಳ ಅನುಷ್ಠಾನದಲ್ಲಿ ಆಗಿರುವ ಲೋಪಗಳ ಬಗ್ಗೆ ಸಂಬಂಧಪಟ್ಟವರಿಂದ ವಿವರಣೆ ಪಡೆದು ನಿಯಮಾನುಸಾರ ಕ್ರಮ ಕೈಗೊಂಡು ಸರಕಾರಕ್ಕೆ ಈಗ ವರದಿ ಸಲ್ಲಿಸಬೇಕಾಗಿದೆ. ತಪ್ಪಿತಸ್ಥರಿಗೆ ದೊಡ್ಡ ಪ್ರಮಾಣದ ದಂಡ ಮತ್ತು ಜೈಲು ಶಿಕ್ಷೆಯೂ ಆಗುವ ಸಾಧ್ಯತೆಗಳಿವೆ.

ಕನ್ನಡ ವಿಶ್ವವಿದ್ಯಾಲಯದ 2014-15 ಮತ್ತು 2015-16ನೇ ಸಾಲಿನ ರಾಜ್ಯ ಲೆಕ್ಕಪತ್ರ ಇಲಾಖೆಯ ತಪಾಸಣಾ ವರದಿಯಲ್ಲಿ, ಕೆ.ಟಿ.ಪಿ.ಪಿ. ಕಾಯ್ದೆಯನ್ನು ಪೂರ್ಣವಾಗಿ ಪಾಲಿಸದಿರುವುದಕ್ಕೆ ಮತ್ತು ಕಾಯ್ದೆಯ ಉಲ್ಲಂಘನೆಗೆ ಸೆಕ್ಷನ್ 23ರ ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಮತ್ತು ರೂ.5000/- ದಂಡ ವಿಧಿಸಲು ನಿಯಮವಿದೆ. ವಿಶ್ವವಿದ್ಯಾಲಯದವರು ಸಲ್ಲಿಸಿದ್ದ ಉತ್ತರವನ್ನು ಲೆಕ್ಕತಪಾಸಣೆಯಲ್ಲಿ ಒಪ್ಪಿಲ್ಲ. ಮುಂದುವರೆದು, ನಿಯಮ ಉಲ್ಲಂಘಿಸಿದ್ದಕ್ಕೆ ಕಾರ್ಯಕಾರಿ ಸಮಿತಿ ಸದಸ್ಯರು, ಕಟ್ಟಡ ಸಲಹಾ ಸಮಿತಿ ಸದಸ್ಯರು, ತಾಂತ್ರಿಕ ವಿಭಾಗದ ಎಇಇ, ಜೆ.ಇ, ಹಣಕಾಸು ಅಧಿಕಾರಿಗಳು ಸಂಪೂರ್ಣ ಜವಾಬ್ದಾರರೆಂದು ಉಲ್ಲೇಖಿಸಲಾಗಿದೆ.

ಡಾ. ಘಂಟಿಯವರ ಅವಧಿಯಲ್ಲಿ ಅಧಿಕಾರದಲ್ಲಿದ್ದ (ಈಗಲೂ ಬಹುತೇಕರು ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ) ತಾಂತ್ರಿಕ ವಿಭಾಗದ ಮುಖ್ಯಸ್ಥ ಜೆ.ಎಸ್ .ನಂಜಯ್ಯನವರ್, ಕುಲಸಚಿವ ಡಾ.ಡಿ. ಪಾಂಡುರಂಗಬಾಬು, ಹಣಕಾಸು ಅಧಿಕಾರಿಗಳಾದ ಡಾ.ಪಿ. ಮಹಾದೇವಯ್ಯ ಮತ್ತು ಸಿದ್ದಗಂಗಮ್ಮ ಅಧಿಕಾರದಲ್ಲಿದ್ದರು.

ಇದೆಷ್ಟೆಲ್ಲ ತನಿಖಾ ವರದಿಯ ಸಾರಾಂಶ. ಈಗ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಜನರ ತೆರಿಗೆ ಹಣಕ್ಕೆ ವಂಚಿಸಿದವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕಾಗಿದೆ.

ಹಗರಣಗಳನ್ನು ಬಯಲಿಗೆಳೆಯುತ್ತಿರುವ ಸೋಮನಾಥ

ನಿಯಮಾವಳಿಗಳ ಉಲ್ಲಂಘನೆಯಾದಾಗಲೆಲ್ಲ ಕನ್ನಡ ವಿವಿಯ ಕಾನೂನು ಸಲಹಾ ಘಟಕದ ಅಧೀಕ್ಷಕ ಎಚ್. ಎಂ. ಸೋಮನಾಥ್ ಪಟ್ಟಭದ್ರ ಶಕ್ತಿಗಳ ದೂರು ದಾಖಲಿಸಿ ತಮಿಖೆ ಆಗುವಂತೆ ನೋಡಿಕೊಂಡಿದ್ದಾರೆ. ನಕಿ ಪದವಿ ಪ್ರಮಾಣ ಪತ್ರ ಸಲ್ಲಿಸಿ ಕನ್ನಡ ವಿವಿಯಿಂದ ಪಿಎಚ್‍ಡಿ ಪಡೆದಿದ್ದ ಅಬ್ದುಲ್ ಹಕೀಂ ವಿರುದ್ಧ ದೂರು ದಾಖಲಿಸಿದ್ದು ಇದೇ ಸೋಮನಾಥ್ ಅವರು. ಈ ಕಟ್ಟಡ ಕಸುಬಿನ ವಿರುದ್ಧವೂ ದೂರು ದಾಖಲಿಸಿದ್ದೂ ಅವರೇ. ಅದು ಅವರ ಕರ್ತವ್ಯ. ಅದರಲ್ಲ ವಿಶೇಷವೇನೂ ಇಲ್ಲ. ಆದರೆ ಬಹುಪಾಲು ವಿವಿಗಳಲ್ಲಿ ಈ ಹುದ್ದೆಯಲ್ಲಿ ಇರುವವರೆಲ್ಲ ವಿವಿಯ ಹಣ ಲಪಟಾಯಿಸುವ ದೊಡ್ಡವರೊಂದಿಗೆ ಶಾಮೀಲಾಗಿದ್ದಾರೆ. ಆ ಕಾರಣಕ್ಕೆ ಸೋಮನಾಥ್ ಕಾರ್ಯಕ್ಕೆ ವಿಶೇಷ ಮೆಚ್ಚುಗೆ ಸಲ್ಲಬೇಕು. ಈ ಪ್ರಕರಣದ ಕುರಿತಂತೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ತನಿಖೆಯಲ್ಲಿ ಸರಕಾರದ ಆದೇಶಗಳನ್ನು ಉಲ್ಲಂಘಿಸಿರುವುದು ಸಾಬೀತಾಗಿದೆ. ಅಂದು ಅಧಿಕಾರದಲ್ಲಿದ್ದ ಕುಲಪತಿ ಡಾ. ಘಂಟಿಯವರನ್ನು ಒಳಗೊಂಡಂತೆ ಇತರೆ ಬಾಧ್ಯಸ್ಥ ಅಧಿಕಾರಿಗಳೆಲ್ಲರ ವಿರುದ್ಧ ಕೆ.ಟಿ.ಪಿ.ಪಿ. ಕಾಯ್ದೆಯ ನಿಯಮ 23ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾದ ಕ್ರಮದ ಹೊರತಾಗಿ ಲೋಕಾಯುಕ್ತಕ್ಕಾಗಲೀ ರಾಜ್ಯ ಸರಕಾರಕ್ಕಾಗಲೀ, ವಿಶ್ವವಿದ್ಯಾಲಯಕ್ಕಾಗಲೀ ಪರ್ಯಾಯ ಮಾರ್ಗಗಳಿಲ್ಲ. ತಪ್ಪಿತಸ್ಥರು ನುಣುಚಿಕೊಳ್ಳಲು ಕಾನೂನಿನಲ್ಲಿ ಅವಕಾಶಗಳಿಲ್ಲ’ ಎಂದು ಸ್ಷಷ್ಟವಾಗಿ ಹೇಳಿದರು.

ಮಲ್ಲಿಕಾ ಮೇಡಂಗೆ ಒಂದಷ್ಟು ಪ್ರಶ್ನೆಗಳು

ತನಿಖಾ ಸಮಿತಿಯ ಶಿಫಾರಸುಗಳು ಪತ್ರಿಕೆಯೊಂದರಲ್ಲಿ ಬಂದ ತಕ್ಷಣವೇ ಮಲ್ಲಿಕಾ ಘಂಟಿ ಅವರು ಸ್ಪಷ್ಟೀಕರಣ ನೀಡಿ, ಎಲ್ಲ ನಿಯಮಗಳ ಪ್ರಕಾರವೇ ನಡೆದಿವೆ, 16ಕ್ಕೂ ಹೆಚ್ಚು ವಿವಿಗಳ ಕುಲಪತಿಗಳು ಭೇಟಿ ಕೊಟ್ಟು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದ್ದಾರೆ, ಈ ಕಾರಣಕ್ಕಾಗಿ ಮತ್ತೆ 5 ಕೋಟಿ ಹಣ ಬಿಡುಗಡೆ ಆಗಿದೆ ಎಂದೆಲ್ಲ ಹೇಳಿದ್ದಾರೆ. ಆದರೆ ಇದಕ್ಕೆ ಯಾವುದೇ ದಾಖಲೆ ಒದಗಿಸಿಲ್ಲ. ಈ ಕುರಿತಂತೆ ವಿವಿಯ ದಾಖಲೆಗಳನ್ನು ಪರಿಶೀಲಿಸಿದ ಮೇಲೆ ಈ ಪ್ರಶ್ನೆಗಳು ಹುಟ್ಟುತ್ತವೆ:

1. ಕೆ.ಆರ್.ಐ.ಡಿ.ಎಲ್. ಸರ್ಕಾರಿ ಸಂಸ್ಥೆಯಾದ ಮಾತ್ರಕ್ಕೆ, ಕಾಯ್ದೆ ಉಲ್ಲಂಘಿಸಿ ವಿಶ್ವವಿದ್ಯಾಲಯಗಳು ಇದೇ ಸಂಸ್ಥೆಗೇ ಕಾಮಗಾರಿಗಳನ್ನು ನೀಡತಕ್ಕದ್ದೆಂದು ಕೆ.ಟಿ.ಪಿ.ಪಿ. ಕಾಯ್ದೆಯಲ್ಲಿ ಇದೆಯೇ?

2. ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ಕಾಮಗಾರಿಗಳನ್ನು ಕೊಡಬಹುದೆಂದು ಸರಕಾರ ಅನುಮತಿ ನೀಡಿದ್ದ ಮಾತ್ರಕ್ಕೆ, ಆ ಸಂಸ್ಥೆಗೆ ಶೇ. 8 ರಷ್ಟು ಸೇವಾ ಶುಲ್ಕವನ್ನು ಹೆಚ್ಚು ಖರ್ಚು ಮಾಡಲು ಕೆ.ಟಿ.ಪಿ.ಪಿ. ಕಾಯ್ದೆಯಲ್ಲಿ ಅವಕಾಶವಿದೆಯೇ?

3. ಎಲ್ಲ ಕಾಮಗಾರಿಗಳನ್ನು ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ಕೊಡುವುದು ಸರಿ ಎನ್ನುವುದಾದರೆ, ಕಡಿಮೆ ದರದಲ್ಲಿ ಕೆಲಸ ಮಾಡಿಕೊಡಬಲ್ಲ ಗುತ್ತಿಗೆದಾರರು ರಾಜ್ಯದಲ್ಲಿ ಯಾಕೆ ಬೇಕು? ದೇಶಕ್ಕೆ ಕೆ.ಟಿ.ಪಿ.ಪಿ. ಕಾಯ್ದೆ ಯಾಕೆ ಬೇಕು?

4. ರೂಸಾ ಅನುದಾನದ ವೀಕ್ಷಣೆಗೆ ಪ್ರೊ. ಸುಭಾಷ್ (ವಿವಿಯೊಂದರ ಕುಲಪತಿ) ಹಂಪಿ ವಿವಿಗೆ ಭೇಟಿ ಕೊಟ್ಟಿದ್ದು ದಾಖಲೆಗಳಲ್ಲಿ ಸ್ಪಷ್ಟವಿದೆ. ಆದರೆ, ತಮ್ಮ ಪತ್ರಿಕಾ ಸ್ಪಷ್ಟನೆಯಲ್ಲಿ 16ಕ್ಕೂ ಹೆಚ್ಚು ಕುಲಪತಿಗಳು ವಿವಿಗೆ ಭೇಟಿ ಮಾಡಿ ತೃಪ್ತಿ ವ್ಯಕ್ತಪಡಿಸಿದ್ದಾರೆಂದೂ, ಅವರು ಬಂದು ಹೋದ ನಂತರ ಬಿಡಿಗಾಸು ಬಿಡಗಡೆಯಾಗದಿದ್ದರೂ 5 ಕೋಟಿ ಬಿಡುಗಡೆ ಮಾಡಿದ್ದಾರೆಂದೂ ಹೇಳಿದ್ದಕ್ಕೆ ಮೇಡಂ ಸಾಕ್ಷ್ಯಗಳನ್ನು ಏಕೆ ಒದಗಿಸಿಲ್ಲ? ಪ್ರೊ. ಸುಭಾಷ್ ವಿವಿಗೆ ಭೇಟಿ ಮಾಡಿ ಹೋದ ನಂತರವಷ್ಟೇ ತನಿಖಾ ಸಮಿತಿಯು ವರದಿ ಸಲ್ಲಿಸಿದೆ ಎಂಬುದನ್ನು ಬಹಿರಂಗಪಡಿಸಿಲ್ಲವೇಕೆ? ಪ್ರೊ. ಸುಭಾಷ್ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ಯಾವ ನಿಯಮಗಳಲ್ಲಿ ಅವಕಾಶವಿದೆ? ಮೇಡಂ, ನೀವು ಕೊಡುವ ಸ್ಪಷ್ಟನೆಗಳನ್ನು ಲೆಕ್ಕ ತಪಾಸಣೆಯಲ್ಲಿ ಒಪ್ಪದೆ ನಿರಾಕರಿಸಿರುವುದೇಕೆ?
ಸರಕಾರವು ಡಾ. ಘಂಟಿಯವರಿಗೆ ಅಧಿಕಾರ ಮತ್ತು ಅನುದಾನ ಎರಡನ್ನೂ ಕೊಟ್ಟಾಗ ನಿಯಮಗಳನ್ನು ಉಲ್ಲಂಘಿಸಿ ನಿರ್ವಹಣೆ ಮಾಡಿರುವುದನ್ನು ಈ ಒಂದು ಪ್ರಕರಣವೇ ತೋರಿಸುತ್ತಿದೆ. ಈಗ ವಿಚಾರಣೆಗೆ ಒಳಗಾಗಬೇಕಾದ ಅವರನ್ನು ಲಲಿತ ಅಕಾಡೆಮಿ ವಿವಿಯ ವಿಶೇಧಾಕಾರಿಯನ್ನಾಗಿ ನೇಮಿಸಲಾಗಿದೆ. ಈಗಲಾದರೂ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಅವರನ್ನು ಮತ್ತೊಮ್ಮೆ ವಿಶೇಷಾಧಿಕಾರಿ ಹುದ್ದೆಯಲ್ಲಿ ಕೂರಿಸಿರುವುದು ಎಷ್ಟು ಕಾಯ್ದೆಬದ್ಧ ಎಂಬುದನ್ನು ಮರುಪರಿಶೀಲಿಸುವುದು ನಾಡಿನ ಹಿತದೃಷ್ಟಿಯಿಂದ ಒಳಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...