Homeರಾಜಕೀಯಸೊರಗುತ್ತಿದೆ ಪ್ರಜಾತಂತ್ರ - ಗಹಗಹಿಸುತ್ತಿದೆ ಮತಯಂತ್ರ

ಸೊರಗುತ್ತಿದೆ ಪ್ರಜಾತಂತ್ರ – ಗಹಗಹಿಸುತ್ತಿದೆ ಮತಯಂತ್ರ

- Advertisement -
- Advertisement -

ನಮ್ಮ ದೇಶದ ಪ್ರಜಾಪ್ರಭುತ್ವದ ತಳಹದಿಯಂತಿರುವ ಚುನಾವಣಾ ಪ್ರಕ್ರಿಯೆಯ ಬಗ್ಗೆ ಮೊದಲಿನಿಂದಲೂ ಒಂದಲ್ಲಾ ಒಂದು ವಿವಾದ ಇದ್ದೇ ಇದೆ. ಪ್ರಸ್ತುತ ಚುನಾವಣೆಗಳಲ್ಲಿ ಬಳಕೆಯಾಗುತ್ತಿರುವ ಮತಯಂತ್ರಗಳ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆ ಬಗ್ಗೆಯೇ ಪ್ರಶ್ನೆಗಳೆದ್ದಿವೆ. ವಿವಿಧ ಸಂಘಟನೆಗಳು ಹಾಗೂ ಪಕ್ಷಗಳು ಮತಯಂತ್ರದ ಬಳಕೆಯ ವಿರುದ್ಧ ಬೀದಿಗಿಳಿದಿವೆ. ಕೆಲವು ವರ್ಷ ಪ್ರಕಾಶ್ ಅಂಬೇಡ್ಕರ್ ಅವರ ನಾಯಕತ್ವದಲ್ಲಿ ಪೂನಾದಲ್ಲಿ ದೊಡ್ಡ ರ್‍ಯಾಲಿಯೇ ನಡೆಯಿತು. ವಿವಿಧ ಪಕ್ಷಗಳು ಒಟ್ಟಾಗಿ ಇಡೀ ಮಹಾರಾಷ್ಟ್ರದಾದ್ಯಂತ ಏಕಕಾಲದಲ್ಲಿ ಪ್ರತಿಭಟನೆ ನಡೆಸಿದ್ದವು; ಮತಯಂತ್ರದ ಬೃಹತ್ ಪ್ರತಿಕೃತಿಯನ್ನು ಸುಟ್ಟುಹಾಕಿದವು. 
೨೦೧೭ರ ಮಾರ್ಚ್‌ನಲ್ಲಿ ರಾಜ್ಯಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದು, ವಿವಿದ ಪಕ್ಷಗಳ ಮುಖಂಡರು ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್) ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಪಕ್ಷ ಚುನಾವಣಾ ಆಯೋಗದ ಮೇಲೆ ನಿಯಂತ್ರಣ ಹೊಂದಿದ್ದು, ಇವಿಎಂ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ಈಗ ವ್ಯಕ್ತವಾಗುತ್ತಿರುವ ಅನುಮಾನಗಳ ಸಾರಾಂಶ. ಹಾಗೆ ನೋಡಿದರೆ ಈ ಇವಿಎಂ ವಿಶ್ವಾಸಾರ್ಹವಲ್ಲವೆಂದು ಗದ್ದಲ ಎಬ್ಬಿಸಿದ್ದು ಮೊಟ್ಟಮೊದಲಿಗೆ ಬಿಜೆಪಿ ಪಕ್ಷವೇ.  ಆದರೆ ಬಿಜೆಪಿ ಆಗ ಅಧಿಕಾರದಲ್ಲಿರಲಿಲ್ಲ, ಅಷ್ಟೆ.
೨೦೦೯ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಮತ್ತೊಮ್ಮೆ ಜಯಭೇರಿ ಬಾರಿಸಿತ್ತು. ಬಿಜೆಪಿ ಪಕ್ಷ ಈ ಫಲಿತಾಂಶವನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ. ಇವಿಎಂಗಳನ್ನು ಆಡಳಿತ ಪಕ್ಷ ದುರ್ಬಳಕೆ ಮಾಡಿಕೊಂಡ ಪರಿಣಾಮವಾಗಿಯೇ ಚುನಾವಣೆಗಳಲ್ಲಿ ತಾವು ಸೋತಿದ್ದಾಗಿ ಪ್ರಚಾರ ಶುರುವಿಟ್ಟುಕೊಂಡರು. ಈ ವಿಷಯದ ಬಗ್ಗೆ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ’ಡೆಮಾಕ್ರಸಿ ಅಟ್ ರಿಸ್ಕ್’ ಎಂಬ ಒಂದು ಗ್ರಂಥವನ್ನೇ ರಚಿಸಿದ್ದರು. ಅದರಲ್ಲಿ ಇವಿಎಂಗಳನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಬಹುದೆಂಬ ವಿವರಗಳು, ಹಲವು ಪರಿಣತರ ಅಭಿಪ್ರಾಯಗಳನ್ನೂ ಉದ್ಧರಿಸಿದ್ದಾರೆ. ಸದರಿ ಪುಸ್ತಕಕ್ಕೆ ಮಾನ್ಯ ಅಡ್ವಾಣಿಯವರೇ ಮುನ್ನುಡಿ ಬರೆದಿದ್ದು ಮಾತ್ರವಲ್ಲದೆ ’ನಾವು ಮತ್ತೆ ವಿಶ್ವಾಸಾರ್ಹವಾದ ಬ್ಯಾಲಟ್ ಪೇಪರ್‌ಗಳ ಬಳಕೆಯನ್ನೇ ಜಾರಿಗೆ ತರಬೇಕೆಂಬ’ ಬೇಡಿಕೆಯ ಮೇಲೆ ಆಂದೋಲನವನ್ನೇ ಶುರುಮಾಡಿದರು. ಈ ವಾದಕ್ಕೆ ಸಿಪಿಎಂ ಒಳಗೊಂಡು ವಿವಿಧ ಪಕ್ಷಗಳ ನಾಯಕರೂ ದನಿಗೂಡಿಸಿದ್ದರು.

ಹೀಗೇ ೨೦೧೪ರ ಲೋಕಸಭೆ ಚುನಾವಣೆ ನಡೆದುಹೋಯಿತು. ಬಿಜೆಪಿ ಸಂಖ್ಯಾಬಲದಲ್ಲಿ ಬಹುಮತ ಪಡೆದು ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ಅದಾದ ನಂತರ ಕೆಲವಾರು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಬಂದವು. ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು. ನಿರ್ದಿಷ್ಟವಾಗಿ ಉತ್ತರಪ್ರದೇಶದಲ್ಲಿ ಬಿಜೆಪಿ ಪಕ್ಷ ಅನಿರೀಕ್ಷಿತವಾಗಿ ಭಾರೀ ಬಹುಮತದೊಂದಿಗೆ ಗೆದ್ದು ಬಂದನಂತರ ಇವಿಎಂ ದುರ್ಬಳಕೆಯ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿಧಾನಸಭಾ ಚುನಾವಣೆಯ ನಂತರದಲ್ಲಿ ಕರ್ನಾಟಕದಲ್ಲೂ ಇವಿಎಂ ಬಗ್ಗೆ ಅಲ್ಲಲ್ಲಿ ಅಪಸ್ವರ ಕೇಳಿಬರುತ್ತಿದೆ.
ಈ ಇವಿಎಂ ಪ್ರಶ್ನೆ ಬೀದಿ ಆರೋಪಗಳಿಗೆ ಮಾತ್ರ ಸೀಮಿತವಾಗದೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲೂ ಪ್ರತಿಧ್ವನಿಸಿದೆ. ರಾಜ್ಯ ಸಭೆಯಲ್ಲಿ ಮಾಯಾವತಿಯವರು ’ಸಂಸತ್ತಿನಲ್ಲಿ ಕೂರುವವರು ಜನರ ಪ್ರತಿನಿಧಿಗಳಾಗಿರಬೇಕೇ ಹೊರತು ಮಿಷಿನ್‌ಗಳ ಪ್ರತಿನಿಧಿಯಾಗಿರಬಾರದು’ ಎಂದು ನೇರವಾಗಿಯೇ ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಾದ ಗುಲಾಮ್ ನಬಿ ಆಜಾದ್, ಸಿಪಿಎಂನ ಸೀತಾರಾಮ್ ಯಚೂರಿ ಮುಂತಾದವರು ಇವಿಎಂ ಬಳಕೆಯ ವಿರುದ್ಧ ವಾದ ಮಂಡಿಸಿದ್ದಾರೆ. ಈ ವಾದಗಳಿಗೆ ಬಿಜೆಪಿ ಮುಖಂಡರು ’ನೀವು ಗೆದ್ದಾಗ ಇವಿಎಂ ಸರಿ, ಸೋತಾಗ ಸರಿಯಿಲ್ಲ ಎಂದು ಛೇಡಿಸಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಇಂಥದೇ ಕುಹಕಗಳ ಮಹಾಪೂರವಿದೆ.
ರಾಜಕೀಯ ಪಕ್ಷಗಳ ಕೆಸರೆರಚಾಟದಾಚೆಗೆ ಹಲವು ಚಿಂತಕರು, ಸಾಮಾಜಿಕ ಕಾರ್ಯಕರ್ತರೂ ಕೂಡ ಇವಿಎಂ ವಿವಾದವನ್ನು ಸೋತ ಪಕ್ಷದವರ ಹತಾಶ ವಾದ ಎಂಬಂತೆಯೇ ಪರಿಗಣಿಸಿರುವಂತೆ ಕಾಣುತ್ತದೆ. ಮಾಧ್ಯಮಗಳು, ಅದರಲ್ಲೂ ಟಿವಿ ಚಾನೆಲ್‌ಗಳಂತೂ ಇವಿಎಂ ಬಗ್ಗೆ ಬಂದ ಎಲ್ಲಾ ಟೀಕೆಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿ ಬಿಜೆಪಿ ಮತ್ತು ಚುನಾವಣಾ ಆಯೋಗದ ವಾದಗಳನ್ನು ಸರ್ವಶ್ರೇಷ್ಠ ಎಂಬಂತೆ ಮೆರೆಸುತ್ತಿವೆ; ಮತ್ತೊಂದೆಡೆ ಪ್ರಶ್ನೆ ಎತ್ತಿದವರನ್ನು ಹಾಸ್ಯದ ವಸ್ತುಗಳನ್ನಾಗಿ ಮಾಡಿವೆ. ಆದರೆ ಇವೇ ಮಾಧ್ಯಮಗಳು ೨೦೧೪ಕ್ಕೆ ಮುಂಚೆ ಭಿನ್ನ ರಾಗ ಹಾಡಿದ್ದವು ಎಂಬುದು ಬೇರೆ ವಿಷಯ.
ಈ ಎಲ್ಲ ಹಿನ್ನೆಲೆಯಲ್ಲಿ ಇವಿಎಂ ಸಮಸ್ಯೆಯ ಒಳಹೊರಗನ್ನು ವಸ್ತುನಿಷ್ಠವಾಗಿ ಪರಿಶೀಲಿಸಬೇಕಾದ ಜರೂರಿದೆ.

ಒಂದು ಫ್ಯಾಕ್ಟ್ ಶೀಟ್
ಉತ್ತರಾಖಂಡದಲ್ಲಿ ೨೦೧೭ರ ಫೆಬ್ರವರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆಯೆಂದು ಕಾಂಗ್ರೆಸ್‌ನ ಅಭ್ಯರ್ಥಿ ಹಾಗೂ ಮಾಜಿ ಸಚಿವ ನವಪ್ರಭಾತ್ ಅವರು ಹೈಕೋರ್ಟ್ ಮೆಟ್ಟಿಲೇರಿದರು. ಆ ಕ್ಷೇತ್ರಗಳಿಗೆ ಆಯೋಗದಿಂದ ಒದಗಿಸಲಾದ ಮತಯಂತ್ರಗಳಲ್ಲದೆ, ಬೇರೆ ಯಂತ್ರಗಳನ್ನು ಬಳಸಲಾಗಿತ್ತು ಹಾಗೂ ಇದರಲ್ಲಿ ಅಕ್ರಮ ನಡೆದಿದೆಯೆಂಬುದು ಅವರ ತಕರಾರು. ಸಾಂದರ್ಭಿಕ ಸಾಕ್ಷಿಗಳನ್ನು ಪರಿಗಣಿಸಿದ ಕೋರ್ಟ್ ಸಂಬಂಧಿತ ಇವಿಎಂ ಯಂತ್ರಗಳನ್ನು ವಶಪಡಿಸಿಕೊಳ್ಳಲು ಆದೇಶಿಸಿತ್ತು. ನಂತರ ೧೩ ಜಿಲ್ಲೆಗಳಿಂದ ಇಂಥದೇ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಇವಿಎಂಗಳನ್ನು ಕೋರ್ಟ್ ಸುಪರ್ದಿಗೆ ಒಪ್ಪಿಸುವಂತೆ ಆದೇಶಿಸಲಾಯ್ತು. ಆಶ್ಚರ್ಯವೆಂದರೆ ಆ ಇವಿಎಂಗಳನ್ನು ಆಗಲೇ ಬೇರೆಡೆಗೆ ಸಾಗಿಸಲಾಗಿತ್ತು. ಚುನಾವಣಾ ಆಯೋಗದ ಪ್ರೋಟೋಕಾಲ್ ಪ್ರಕಾರ ಎಣಿಕೆ ಮುಗಿದನಂತರ ೪೫ ದಿನಗಳ ಕಾಲ ಇವಿಎಂಗಳನ್ನು ಅದೇ ಸ್ಥಳದಲ್ಲಿ ಸುರಕ್ಷಿತವಾಗಿಡಬೇಕು. ಆದರೆ ಮರುದಿನವೇ ಅವುಗಳನ್ನು ಸಾಗಿಸಿದ್ದೇಕೆ ಎಂಬುದು ಪ್ರಶ್ನೆ. ಕೊನೆಗೆ ದೆಹಲಿಯಲ್ಲಿ ಪತ್ತೆಯಾದ ಈ ಇವಿಎಂ ಯಂತ್ರಗಳ ಸೀಲ್‌ಗಳನ್ನು ಓಪನ್ ಮಾಡಲಾಗಿತ್ತು. ಈ ಬಗ್ಗೆ ತನಿಖೆಗೆ ಚುನಾವಣಾ ಆಯೋಗ ಆದೇಶಿಸಿತ್ತು.

ಈ ಇವಿಎಂ ಮಿಷಿನ್‌ಗಳನ್ನು ಬೆಂಗಳೂರಿನಲ್ಲಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು ಹೈದರಾಬಾದ್‌ನಲ್ಲಿರುವ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಇಸಿಐಎಲ್) ಎಂಬ ಎರಡು ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ತಯಾರಿಸಿ ಚುನಾವಣಾ ಆಯೋಗಕ್ಕೆ ಸರಬರಾಜು ಮಾಡುತ್ತವೆ. ಈ ತಯಾರಿಕೆ ಮತ್ತು ಸರಬರಾಜಿಗೆ ಸಂಬಂಧಿಸಿ ಆರ್‌ಟಿಐ ಅರ್ಜಿಗಳಿಗೆ ಬಂದ ವಿಚಿತ್ರ ಮಾಹಿತಿಗಳು ಹೇಗಿವೆ ನೋಡಿ.ಮುಂಬೈನ ಆರ್‌ಟಿಐ ಕಾರ್ಯಕರ್ತ ಮನೋರಂಜನ್ ರಾಯ್ ಎಂಬುವವರು ಈ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಆಯೋಗ ಒದಗಿಸಿರುವ ಲೆಕ್ಕದ ಪ್ರಕಾರ ೧೯೮೯-೯೦ ರಿಂದ ೨೦೧೪-೧೫ ರವರೆಗೆ ೧೦,೦೫,೬೬೨ ಮತಯಂತ್ರಗಳನ್ನು ಬಿಇಎಲ್‌ನಿಂದ ತರಿಸಿಕೊಂಡಿದ್ದಾರಂತೆ.
ಆದರೆ ಬಿಇಎಲ್ ಕೊಟ್ಟಿರುವ ಲೆಕ್ಕಗಳ ಪ್ರಕಾರ ಈ ಅವಧಿಯಲ್ಲಿ ೧೯,೬೯,೯೩೨ ಇವಿಎಂಗಳನ್ನು ಸರಬರಾಜು ಮಾಡಿದೆ. ವ್ಯತ್ಯಾಸ ಎಷ್ಟು? ಬರೋಬ್ಬರಿ ೯,೬೪,೨೭೦ ಯಂತ್ರಗಳು. ಆಯೋಗದ ಬಳಿಯಿರುವ ಇವಿಂಎಂಗಳ ಸಂಖ್ಯೆಗಿಂತ ಲಕ್ಷಾಂತರ ಸಂಖ್ಯೆಯ ಹೆಚ್ಚುವರಿ ಯಂತ್ರಗಳನ್ನು ಬಿಇಎಲ್ ತಯಾರಿಸಿದೆ ಮತ್ತು ಅವುಗಳನ್ನು ಸಪ್ಲೈ ಮಾಡಿದೆ. ಹಾಗಿದ್ದರೆ ಈ ಹೆಚ್ಚುವರಿ ಯಂತ್ರಗಳು ಎಲ್ಲಿಗೆ ಹೋಗಿರಬಹುದು? ಈ ಇವಿಎಂಗಳ ಅವಶ್ಯಕತೆಯಾದರೂ ಯಾರಿಗಿದೆ? ಪ್ರತಿ ವರ್ಷದ ಲೆಕ್ಕದಲ್ಲೂ ಹೀಗೆ ಭಾರೀ ವ್ಯತ್ಯಾಸ ಇದ್ದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿ ಇಡೀ ವ್ಯವಹಾರವನ್ನು ತನಿಖೆ ಮಾಡುವಂತೆ ಕೋರಿದ್ದಾರೆ.
ಇಸಿಐಎಲ್ ಕೊಟ್ಟಿರುವ ಲೆಕ್ಕದ ಕತೆ ಇನ್ನೂ ಅಧ್ವಾನ. ೨೦೧೩-೧೪ರಲ್ಲಿ ಚುನಾವಣಾ ಆಯೋಗ ೧,೯೧,೪೩೮ ಯಂತ್ರಗಳನ್ನು ಪಡೆದುಕೊಂಡಿದೆ, ಆದರೆ ಇಸಿಐಎಲ್ ಪ್ರಕಾರ ಆ ವರ್ಷ ಒಂದೇ ಒಂದು ಯಂತ್ರವನ್ನೂ ಸಪ್ಲೈ ಮಾಡಿಲ್ಲ. ಹಾಗಿದ್ದರೆ ಆ ಯಂತ್ರಗಳು ಬಂದಿದ್ದು ಎಲ್ಲಿಂದ ?
ಆರ್‌ಟಿಐ ಮಾಹಿತಿ ಪ್ರಕಾರ ಉತ್ತರಾಖಂಡದ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರಗಳನ್ನು ನಿರ್ವಹಿಸಲು ೮ ಮಂದಿ ತಾಂತ್ರಿಕ ಸಿಬ್ಬಂದಿಗಳನ್ನು ಕಳಿಸಿದ್ದಾಗಿ ಯಂತ್ರಗಳನ್ನು ತಯಾರಿಸಿದ ಇಸಿಐಎಲ್ ತಿಳಿಸಿತ್ತು. ಆದರೆ ಚುನಾವಣಾ ಆಯೋಗ ಕೊಟ್ಟ ಮಾಹಿತಿ ಪ್ರಕಾರ ೭೦ ಮಂದಿ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆಯೋಗ ಒದಗಿಸಿದ ಪಟ್ಟಿಯಲ್ಲಿದ್ದ ಬಹುತೇಕ ’ತಂತ್ರಜ್ಞ’ರಿಗೂ ಆ ಕೆಲಸಕ್ಕೂ ಸಂಬಂಧವೇ ಇರಲಿಲ್ಲ. ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಪೆಟಿಷನ್ ಪ್ರಕಾರ ಈ ’ತಂತ್ರಜ್ಞ’ರ ಪಟ್ಟಿಯಲ್ಲಿ ಕಾರ್ ಡೀಲರ್, ಚೈಲ್ಡ್ ಕೇರ್ ಸರ್ವೀಸ್ ನಡೆಸುತ್ತಿದ್ದವರು, ರೈಲ್ವೆ ಸೇವಾಕಾರ್ಯದಲ್ಲಿದ್ದವರು, ಮೊಬೈಲ್ ಆಪರೇಟರ್, ಮಾರ್ಕೆಟಿಂಗ್ ಏಜೆಂಟ್‌ಗಳು, ಲೈಬ್ರರಿಯನ್‌ಗಳು, ಹೋಟೆಲ್ ಸಿಬ್ಬಂದಿ… ಹೀಗೆ ತರಹೇವಾರಿ ಮಂದಿ ಇದ್ದರು.
ಇದಲ್ಲದೆ ಇವಿಎಂ ಯಂತ್ರಗಳು ಕಳುವಾದ ಬಗ್ಗೆ ೭೦ ಪ್ರಕರಣಗಳು ದಾಖಲಾಗಿವೆ. ಅಷ್ಟೇ, ಆದರೆ ಇದುವರೆಗೆ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ಈ ಎಲ್ಲ ಕಳವು ಪ್ರಕರಣಗಳು ದಖಲಾಗಿರುವುದು ಈಗ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಎಂಬುದು ಕುತೂಹಲಕಾರಿ.
ಹಾಸ್ಯಾಸ್ಪದವಾಗಿ ಕಾಣುವ ಈ ಮಾಹಿತಿಗಳು ಇರುವ ಅನುಮಾನಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿವೆ. ಇವುಗಳ ಒಳಮರ್ಮ ಏನಿರಬಹುದು?
ತಾಂತ್ರಿಕ ದೋಷಗಳು ವರದಿಯಾಗಿರುವ ಕಡೆಗಳಲ್ಲಿ ಬೇರೆಬೇರೆ ಪಕ್ಷದ ಬಟನ್ ಒತ್ತಿದಾಗ ಕಮಲದ ಚಿಹ್ನೆ ಬೆಳಗುವಂತೆ ತೋರಿಸಿರುವ ವರದಿಗಳು ಬಂದಿವೆಯೇ ಹೊರತು ಕಮಲದ ಚಿಹ್ನೆಯ ಮತ ಬೇರೆಯ ಪಕ್ಷಕ್ಕೆ ಹೋದ ಬಗ್ಗೆ ವರದಿಯಾಗಿದ್ದನ್ನು ಯಾರಾದರೂ ಕೇಳಿದ್ದೀರಾ?
ಮೊನ್ನೆ ನಡೆದ ಚುನಾವಣೆಯಲ್ಲಿ ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಲೊಟ್ಟೆ ಗೊಲ್ಲಹಳ್ಳಿಯ ಬೂತ್‌ನಲ್ಲಿ ಕಾಂಗ್ರೆಸ್‌ನ ಕಾರ್ಯಕರ್ತರು ಹಸ್ತದ ಗುರುತಿನ ಬಟನ್ ಒತ್ತಿದರು. ಆದರೆ ಮತಯಂತ್ರ ಕಮಲದ ಗುರುತಿನ ಚಿಹ್ನೆಯನ್ನು ತೋರಿಸಿತು. ಈ ಬಗ್ಗೆ ಪೋಲಿಂಗ್ ಆಫೀಸರ್ ಬಳಿ ದೂರಿದ ಕಾರ್ಯಕರ್ತರು ಮತ್ತೊಮ್ಮೆ ಮತ ಚಲಾವಣೆ ಮಾಡಿದರು. ಮತ್ತದೇ ಪುನರಾವರ್ತನೆ. ವಿಧಿಯಿಲ್ಲದೆ ಮತದಾನ ಸ್ಥಗಿತಗೊಳಿಸಿ ಮೇಲಧಿಕಾರಿಗಳಿಗೆ ದೂರು ನೀಡಲಾಯ್ತು.
ಮಧ್ಯಪ್ರದೇಶ ಭೀಂಡ್‌ನಲ್ಲೂ ಇಂಥದೇ ಘಟನೆ ವರದಿಯಾಗಿತ್ತು. ಸ್ವಾರಸ್ಯವೆಂದರೆ ಚುನಾವಣೆಯ ಪೂರ್ವದಲ್ಲಿ ಎಲ್ಲಾ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಚುನಾವಣಾಧಿಕಾರಿಗಳು ಇವಿಎಂ ಕಾರ್ಯಕ್ಷಮತೆಯ ಬಗ್ಗೆ ಅಣಕು ಮತದಾನ ಪ್ರದರ್ಶನ ನಡೆಸುತ್ತಿದ್ದರು. ಯಾವುದೇ ಬಟನ್ ಒತ್ತಿದರೂ ಓಟು ಬೀಳುತ್ತಿದ್ದದ್ದು ಮಾತ್ರ ಕಮಲಕ್ಕೆ! ಈ ಸುದ್ದಿ ಹಾಗೂ ಸಂಬಂಧಿತ ವಿಡಿಯೋ ದೇಶಾದ್ಯಂತ ಸಂಚಲನ ಉಂಟುಮಾಡುತ್ತಿದ್ದಂತೆಯೇ ದೆಹಲಿಯಿಂದ ಆಯೋಗದ ಅಧಿಕಾರಿಗಳು ಭಿಂಡ್‌ಗೆ ಧಾವಿಸಿದರು. ಗಂಭೀರ ’ತನಿಖೆ’ ನಡೆಯಿತು. ಇಂಥಾ ದುರವಸ್ಥೆ ಹೇಗೆ ಸಂಭವಿಸಿತ್ತೋ ಏನು ಕತೆಯೋ? ಅಂತೂ ಆ ಜಿಲ್ಲೆಯ ಎಸ್‌ಪಿ ಮತ್ತು ಡಿಸಿಯನ್ನು ಸಸ್ಪೆಂಡ್ ಮಾಡಿ, ಪ್ರಕರಣಕ್ಕೆ ’ಸುಖಾಂತ್ಯ ಹಾಡಲಾಯ್ತು.
ಮುಂಬೈ ಮತ್ತು ನಾಸಿಕ್‌ಗಳಲ್ಲಿ ಚಲಾವಣೆಯಾದ ಮತಗಳಿಗಿಂತಲೂ ಇವಿಎಂ ಮಿಷಿನ್ ಕೊಟ್ಟ ಮತಗಳು ಹೆಚ್ಚಾಗಿದ್ದವು. ಕರ್ನಾಟಕದ ಧಾರವಾಡದಲ್ಲಿ ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲೂ ಇದೇ ಕತೆಯಾಗಿತ್ತು. ಎರಡು ದಿನ ಫಲಿತಾಂಶವನ್ನು ತಡೆಹಿಡಿದು, ನಂತರ ಪ್ರಕಟಿಸಲಾಯ್ತು. ಇದಲ್ಲದೆ, ಕೆಲವು ಅಭ್ಯರ್ಥಿಗಳು ’ಸೊನ್ನೆ’ ಮತಗಳನ್ನು ಪಡೆದಿರುವುದು ಇವಿಎಂ ಅವಾಂತರಕ್ಕೆ ಸಾಕ್ಷಿಯಲ್ಲವೆ?
ಹೀಗೆ ಇವಿಎಂ ಕಾರ್ಯನಿರ್ವಹಣೆ ಸುತ್ತ ಹತ್ತು ಹಲವು ಶಂಕಾಸ್ಪದ ಪ್ರಕರಣಗಳಿವೆ. ಏನೇ ಆದರೂ ಇವಿಎಂಗಳನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಆಯೋಗ ’ಇವಿಎಂ ಯಂತ್ರಗಳ ಸಾರ್ವಜನಿಕ ಟೆಸ್ಟ್’ ಎಂಬ ಏಕಪಕ್ಷೀಯ ಪ್ರಹಸನ ನಡೆಸಿ ಮುಖ ಉಳಿಸಿಕೊಳ್ಳಲು ಯತ್ನಿಸಿದೆ.
ಇವಿಎಂಗಳು ಎಷ್ಟು ಸುರಕ್ಷಿತ?
’ಇವಿಎಂ ವಿರೋಧಿಗಳು ಆಧುನಿಕ ತಂತ್ರಜ್ಞಾನದ ವಿರೋಧಿಗಳು, ಇವರು ದೇಶವನ್ನು ಕತ್ತಲ ಯುಗಕ್ಕೆ ಕೊಂಡೊಯ್ಯಲು ಬಯಸಿದ್ದಾರೆ’ ಎಂತಲೂ, ’ಇವಿಎಂನಲ್ಲಿ ದೋಷಾರೋಪಣೆ ಮಾಡುವುದು ಸೋತ ಪಕ್ಷಗಳ ಮಾಮೂಲಿ ವಾದ’ ಎಂತಲೂ, ’ಇವಿಎಂ ಗಳನ್ನು ಹ್ಯಾಕ್ ಮಾಡಲು ಅಥವ ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ, ಇಡೀ ಜಗತ್ತು ಇವಿಎಂಗಳನ್ನು ಒಪ್ಪಿಕೊಂಡಿದೆ’ ಎಂತಲೂ ಇವಿಎಂ ಪರ ವಕಾಲತ್ತು ವಹಿಸುವವರ ವಾದ. ಈ ವಾದ ಸರಣಿಯನ್ನು ಬೆಂಬಲಿಸುವವರಲ್ಲಿ ಬಹಳಷ್ಟು ಜನಪರ ಚಿಂತಕರು ಹಾಗೂ ಸಾಮಾಜಿಕ ಕಾರ್ಯಕರ್ತರೂ ಕೂಡ ಇದ್ದಾರೆ.
ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವೆ, ಇಲ್ಲವೆ ಎಂಬುದನ್ನು ತೀರ್ಮಾನಿಸಬೇಕಾದವರು ರಾಜಕಾರಣಿಗಳೋ ಅಥವ ಮಾಧ್ಯಮದವರೋ ಅಲ್ಲ. ಚುನಾವಣಾ ಆಯೋಗದ ಅಧಿಕಾರಿಗಳೂ ಅಲ್ಲ. ಈ ತೀರ್ಮಾನ ಕೈಗೊಳ್ಳಬೇಕಾದವರು ಈ ಕ್ಷೇತ್ರದಲ್ಲಿ ಪರಿಣತಿಯುಳ್ಳ ತಂತ್ರಜ್ಞರು, ವಿಜ್ಞಾನಿಗಳು.
ಆದರೆ ನಮ್ಮಲ್ಲಿ ಇವಿಎಂಗಳ ವಿಶ್ವಾಸಾರ್ಹತೆಯನ್ನು ಸಮರ್ಥಿಸಿ ದೊಡ್ಡ ಗಂಟಲಿನಲ್ಲಿ ವಾದ ಮಂಡಿಸುತ್ತಿರುವವರು ರಾಜಕಾರಣಿಗಳು ಹಾಗೂ ಚುನಾವಣಾ ಆಯೋಗದ ಪ್ರಭೃತಿಗಳು. ಮಾಧ್ಯಮದವರು ಕೂಡ ಆಡಳಿತಾರೂಢ ಪಕ್ಷದ ಪರ ಬ್ಯಾಟಿಂಗ್‌ಗೆ ಇಳಿದಿರುವುದರಲ್ಲಿ ಯಾರಿಗೂ ಆಶ್ಚರ್ಯವಿಲ್ಲ.
ಆದರೆ ಎಲೆಕ್ಟ್ರಾನಿಕ್ ತಂತ್ರಜ್ಞಾನ ಕ್ಷೇತ್ರದ ಪರಿಣಿತರು ಈ ಬಗ್ಗೆ ಏನನ್ನುತ್ತಾರೆ? ೨೦೧೦ರ ಜುಲೈನಲ್ಲಿ ವಿಜ್ಞಾನ ವಿಷಯಗಳ ವರದಿಗಾರ ಜೂಲಿಯನ್ ಸಿಡಲ್ ಭಾರತದಲ್ಲಿ ಬಳಸಲಾಗುತ್ತಿರುವ ಇವಿಎಂಗಳ ಬಗ್ಗೆ ಬಿಬಿಸಿಗೆ ಒಂದು ವಿಸ್ತೃತ ವರದಿ ಮಾಡಿದರು. ಆ ವರದಿ ಹೇಳುವಂತೆ ಅಮೆರಿಕದ ಮಿಚಿಗನ್ ಯೂನಿವರ್ಸಿಟಿಯ ಸಂಶೋಧಕರ ತಂಡ ಭಾರತದ ಇವಿಎಂಗಳ ಕಾರ್ಯಕ್ಷಮತೆ ಬಗ್ಗೆ ಒಂದು ತನಿಖೆ ನಡೆಸಿ, ಯಾವುದೇ ಮೊಬೈಲ್‌ಗಳ ಮೂಲಕ ಇವಿಎಂ ಕೋಡ್ (ಆ ಕೋಡ್ ಗೊತ್ತಿರುವವರು) ಬಳಸಿ ಇವಿಎಂಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಮತ್ತು ಫಲಿತಾಂಶವನ್ನು ತಮಗೆ ಬೇಕಾದ ಹಾಗೆ ಬದಲಿಸಬಹುದು ಎಂಬುದನ್ನು ಸಾಬೀತು ಮಾಡಿದ್ದರು.
೨೦೦೯ರ ಜೂನ್ ೨೧ರಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಹೀಗೆ ಬರೆದಿದೆ: “ಕಾಗದ ರಹಿತ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಮತದಾರರು ತಮ್ಮ ಆಯ್ಕೆಯ ಮತ ಚಲಾವಣೆ ಮಾಡುತ್ತಾರೆ. ಎಲ್ಲ ಮತಗಳ ಚಲಾವಣೆ ಮುಗಿದ ಮೇಲೆ ಮತಯಂತ್ರ ಫಲಿತಾಂಶ ತೋರಿಸುತ್ತದೆ. ಆದರೆ ಕುತಂತ್ರಪೂರಿತ ಸಾಫ್ಟ್‌ವೇರ್‌ಗಳ ಮೂಲಕ ಅಥವ ಇವಿಎಂ ಹ್ಯಾಕಿಂಗ್ ಮೂಲಕ ಅಕ್ರಮಗಳನ್ನೆಸಗುವುದು, ಮತಗಳನ್ನು ಕದಿಯುವುದು ಸಾಧ್ಯವಿಲ್ಲ ಎಂಬ ಯಾವ ಭರವಸೆಯೂ ಇಲ್ಲ. ಮತ್ತು ಅನುಮಾನ ಬಂದಾಗ ಮತಗಳ ಮರುಎಣಿಕೆಯೂ ಸಾಧ್ಯವಿಲ್ಲ.”

ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೊರ್ಡ್ ಯೂನಿವರ್ಸಿಟಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ವಿಜ್ಞಾನಿ ಡೇವಿಡ್.ಎಲ್.ಡಿಲ್ ಅವರು ಇವಿಎಂ ಮತಯಂತ್ರ ಮತ್ತು ಆನ್‌ಲೈನ್ ವೋಟಿಂಗ್ ವಿರುದ್ಧದ ಚಳವಳಿಯಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಸಕ್ರಿಯವಾಗಿದ್ದಾರೆ. ತಮ್ಮ ಈ ಹೋರಾಟದಲ್ಲಿ ಬಹುತೇಕ ಯಶಸ್ವಿಯೂ ಆಗಿದ್ದಾರೆ. ಅವರ ಮಾತುಗಳನ್ನೇ ಕೇಳೋಣ. “ಪ್ರೋಗ್ರಾಮಿಂಗ್‌ನಲ್ಲಿ ತಪ್ಪುಗಳು, ಉಪಕರಣಗಳು ತಪ್ಪಾಗಿ ಕಾರ್ಯನಿರ್ವಹಿಸುವುದು (mಚಿಟಜಿuಟಿಛಿಣioಟಿiಟಿg), ದುರುದ್ದೇಶಪೂರ್ವಕ ಟ್ಯಾಂಪರಿಂಗ್‌ಗಳಿಗೆ ತುತ್ತಾಗುವ ಅಪಾಯ ಯಾವುದೇ ಕಂಪ್ಯೂಟರೀಕೃತ ಮತಯಂತ್ರಗಳ ಅಂತರ್ಗತ ಗುಣವಾಗಿರುತ್ತದೆ. ಕಾಗದರಹಿತ ಇವಿಎಂ ಉಪಕರಣಗಳ ಮೇಲೆ ಸಾರ್ವಜನಿಕರು ವಿಶ್ವಾಸವಿಡಲು ಯಾವುದೇ ಸ್ಪಷ್ಟ ಆಧಾರವಿಲ್ಲ ಎಂಬ ಅಂಶವನ್ನು ಒಪ್ಪಿಕೊಳ್ಳಲು ಇದು ಸರಿಯಾದ ಸಮಯ.”
ನಮ್ಮ ದಿನನಿತ್ಯದ ಅನುಭವಗಳನ್ನೆ ಒಮ್ಮೆ ನೋಡೋಣ.
ಈಗ ನಮ್ಮ ಎಲ್ಲರ ಕೈಯಲ್ಲೂ ಮೊಬೈಲ್‌ಗಳಿವೆ. ನಮ್ಮ ಅನುಮತಿಯೂ ಇಲ್ಲದೆ, ನಮಗೆ ತಿಳಿಯದಂತೆ ಅನೇಕ ಅಪ್ಲಿಕೇಷನ್‌ಗಳು/ ವೈರಸ್‌ಗಳು ನಮ್ಮ ಮೊಬೈಲ್‌ಗೆ ಬಂದು ಕೂರುತ್ತವೆ. ನಮ್ಮ ಖಾಸಗಿ ಮಾಹಿತಿಗಳನ್ನೂ ಒಳಗೊಂಡು ಆಯಾ ಕಂಪನಿಗೆ ಬೇಕಾದ ಎಲ್ಲವನ್ನೂ ಕದಿಯುತ್ತವೆ. ನಾವು ಮಾಡಿದ್ದ ಆಂತರಿಕ ಸೆಟ್ಟಿಂಗ್‌ಗಳನ್ನೂ ತಮಗೆ ಬೇಕಾದ ಹಾಗೆ ಬದಲಾಯಿಸುವ ವೈರಸ್‌ಗಳೂ ಎಲ್ಲೆಡೆ ಹರಿದಾಡುತ್ತಿವೆ; ನಾವು ಯಾರಿಗೋ ಫೋನ್ ಮಾಡಿದಾಗ ಅದು ಮತ್ಯಾರಿಗೋ ಹೋಗಿ ಮುಜುಗರ ಅನುಭವಿಸುತ್ತೇವೆ. ಈ ಸ್ಮಾರ್ಟ್ ಫೋನ್‌ಗಳಲ್ಲಿ ಬಳಕೆಯಾಗುವ ತಂತ್ರಜ್ಞಾನ ಇವಿಎಂ ತಂತ್ರಜ್ಞಾನಕ್ಕಿಂತ ಕಳಪೆ ಎನ್ನಲು ಸಾಧ್ಯವಿಲ್ಲ. ಮೊಬೈಲ್ ಕಂಪನಿಗಳ ಪೈಪೋಟಿಯಲ್ಲಿ ತಮ್ಮ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಲು ಸತತವಾಗಿ ನೂರಾರು ಕೋಟಿಗಳನ್ನು ಸುರಿಯುತ್ತಿರುತ್ತಾರೆಂಬುದೂ ನಮಗೆ ಗೊತ್ತು. ಆದರೂ ಈ ಎಲೆಕ್ಟ್ರಾನಿಕ್ ಉಪಕರಣ ಸಮಸ್ಯೆಯಿಂದ ಮುಕ್ತವಾಗಿಲ್ಲ.
ನಾವು ಇಂಟರ್‌ನೆಟ್‌ನಲ್ಲಿ ಯಾವುದೋ ವೆಬ್‌ಸೈಟ್‌ನಲ್ಲಿದ್ದರೆ ಇದ್ದಕ್ಕಿದ್ದಂತೆ ಮತ್ಯಾವುದೋ ಅನಗತ್ಯವಾದ ವೆಬ್‌ಪೇಜ್‌ಗಳು ಧುತ್ತನೆ ಮೂಡಿಬಂದು ಕಿರಿಕಿರಿಯುಂಟುಮಾಡುತ್ತವೆ. ಯಾರದೋ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಯಾವುದೋ ದೇಶದಲ್ಲಿರುವ ಚಾಣಾಕ್ಷ ಹ್ಯಾಕರ್‌ಗಳು ಲಪಟಾಯಿಸುತ್ತಿದ್ದಾರೆಂಬ ಸುದ್ದಿಯನ್ನು ನಾವು ನಿತ್ಯವೂ ಓದುತ್ತಿದ್ದೇವೆ. ಅಷ್ಟೇ ಯಾಕೆ, ಕೆಲವು ವರ್ಷಗಳ ಹಿಂದೆ ಅಮೆರಿಕದ ರಕ್ಷಣಾ ಇಲಾಖೆಯ ಕೇಂದ್ರಕಚೇರಿ ಪೆಂಟಗಾನ್‌ನ ವೆಬ್‌ಸೈಟ್‌ಗೆ ಹದಿಹರೆಯದ ಪೋರನೊಬ್ಬ ಪ್ರವೇಶಿಸಿ, ರಕ್ಷಣಾ ರಹಸ್ಯಗಳನ್ನು ವೀಕ್ಷಿಸಿದ್ದು ಭಾರೀ ಸುದ್ದಿಯಾಗಿತ್ತು. ಪ್ರಯತ್ನಪಟ್ಟರೆ ಭಾರೀ ಭದ್ರತಾ ವ್ಯವಸ್ಥೆಯುಳ್ಳ ಅಮೆರಿಕದ ರಕ್ಷಣಾ ಇಲಾಖೆಯ ವೆಬ್‌ಸೈಟ್‌ಗೂ ನುಗ್ಗಬಹುದು ಎಂಬುದು ನಿರ್ವಿವಾದಿತ. ಆದರೆ ಆಡಳಿತಾರೂಢ ಬಿಜೆಪಿ ಮತ್ತು ಚುನಾವಣಾ ಆಯೋಗದ ವಾದಗಳ ಪ್ರಕಾರ ಇವಿಎಂ ಯಂತ್ರಗಳನ್ನು ಹ್ಯಾಕ್ ಮಾಡಲು ಸಾಧ್ಯವೇ ಇಲ್ಲವಂತೆ!

ನಾವು ಎಂತಹ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆಂದರೆ ಮೊಬೈಲ್ ಅಥವ ಕಂಪ್ಯೂಟರ್ ಸಾಫ್ಟ್‌ವೇರ್‌ಗಳನ್ನು ತಯಾರಿಸುವ ಕಂಪನಿಗಳೇ, ನಮ್ಮ ಉಪಕರಣಗಳನ್ನು ಹಾಳುಗೆಡಹುವ ವೈರಸ್‌ಗಳನ್ನೂ ತಯಾರಿಸಿ ಹರಡುತ್ತಾರೆ. ಅಷ್ಟು ಮಾತ್ರವಲ್ಲ, ಆ ವೈರಸ್‌ಗಳನ್ನು ನಿವಾರಿಸುವ ವೈರಸ್-ಪ್ರತಿರೋಧಕಗಳನ್ನೂ ತಯಾರಿಸಿ ನಮ್ಮಿಂದ ಹಣ ಪೀಕುತ್ತಾರೆ. ಇದೊಂದು ಓಪನ್ ಸೀಕ್ರೆಟ್. ಆದರೆ ಇಂಥಹ ಅನೈತಿಕ ಹಾಗೂ ಅಪಾಯಕಾರಿ ವಿದ್ಯಮಾನವನ್ನು ತಡೆಗಟ್ಟುವ ಬಗ್ಗೆ ಇಡೀ ಜಗತ್ತಿನಾದ್ಯಂತ ಎಲ್ಲೂ ಗಟ್ಟಿಯಾದ ಪ್ರತಿರೋಧ ಕೇಳಿಬರುತ್ತಿಲ್ಲ. ಹೀಗಿರುವಾಗ ಸರ್ಕಾರಗಳು ಕ್ರಮ ಕೈಗೊಳ್ಳುತ್ತವೆ ಎಂಬುದು ಕನಸಿನ ಮಾತು.
ಅದರಲ್ಲೂ ಅಧಿಕಾರದಲ್ಲಿರುವ ಕೂಟವೇ ಈ ಎಲೆಕ್ಟ್ರಾನಿಕ್ ಉಪಕರಣಗಳನ್ನು ದುರ್ಬಳಕೆ ಮಾಡಿಕೊಳ್ಳಲು ಸಂಚು ರೂಪಿಸಿಬಿಟ್ಟರೆ ಅಲ್ಲಿಗೆ ಕತೆ ಮುಗಿದಂತೆಯೇ. ಈಗ ಕೇಳಿಬರುತ್ತಿರುವ ಆರೋಪಗಳು ಆಳುವ ಸರ್ಕಾರದತ್ತಲೇ ಬೊಟ್ಟು ಮಾಡುತ್ತವೆ.
ಟೈಪ್‌ರೈಟಿಂಗ್ ಯಂತ್ರದ ಜಾಗದಲ್ಲಿ ಕಂಪ್ಯೂಟರ್ ಬಂದಿರುವುದರಿಂದ ಬಳಕೆದಾರರ ಕಾರ್ಯಕ್ಷಮತೆ ನೂರಾರು ಪಟ್ಟು ಹೆಚ್ಚಾಗಿದೆ ಅಲ್ಲವೆ? ಹಾಗೆಯೇ ಬ್ಯಾಲಟ್ ಪೇಪರ್ ಜಾಗದಲ್ಲಿ ಇವಿಎಂ ಬಂದಿರುವುದರಿಂದ ಓಟು ರಿಗ್ಗಿಂಗ್ ಮಾಡುವವರ ದಕ್ಷತೆ ಕೂಡ ನೂರಾರು ಪಟ್ಟು ಹೆಚ್ಚಾಗುತ್ತದೆ. ಯಾಕೆಂದರೆ ಓಟು ರಿಗ್ಗಿಂಗ್ ಮಾಡಲು ಒಂದು ಬೂತ್‌ಗೆ ಕನಿಷ್ಟ ಐದಾರು ಮಂದಿ ಗೂಂಡಾಗಳಂತೆ ಲಕ್ಷಾಂತರ ಗೂಂಡಾ ಪಡೆ ಕಾರ್ಯಾಚರಣೆ ಮಾಡಬೇಕಾಗುತ್ತದೆ. ಈಗಿನ ಕಾಲಘಟ್ಟದಲ್ಲಿ ಹಾಗೆ ರಿಗ್ಗಿಂಗ್ ನಡೆಸುವುದು ಸಾಧ್ಯವೂ ಇಲ್ಲ.
ಪ್ರಸ್ತುತ ಇವಿಎಂಗಳಲ್ಲಿ ಮೊದಲೇ ಒಂದು ರಹಸ್ಯ ಚಿಪ್ ಅಳವಡಿಸಿ ಚುನಾವಣೆ ಮುಗಿದನಂತರ ಹೊರಗಿನಿಂದ ಮೊಬೈಲ್‌ಗಳ ಮೂಲಕವೇ ಸಂಕೇತಗಳನ್ನು ಕಳಿಸಿ ಫಲಿತಾಂಶವನ್ನು ಉಲ್ಟಾಪಲ್ಟಾ ಮಾಡಬಹುದು. ಅಳವಡಿಸಲಾಗುವ ಸಾಫ್ಟ್‌ವೇರ್‌ಗಳಲ್ಲಿ ರಹಸ್ಯ ಪ್ರೋಗ್ರಾಮಿಂಗ್ ಮಾಡಿ, ವೈರಸ್ ಕೆಲಸ ಮಾಡುವ ರೀತಿಯಲ್ಲಿ ನಿರ್ದಿಷ್ಟ ಅಭ್ಯರ್ಥಿಗೆ ಇತರೆ ಅಭ್ಯರ್ಥಿಗಳ ಮತವನ್ನು ವರ್ಗಾಯಿಸಬಹುದು. ಆ ’ವೈರಸ್ ನಿರ್ದಿಷ್ಟ ದಿನಾಂಕದಂದು, ನಿರ್ದಿಷ್ಟ ಅವಧಿಯಲ್ಲಿ ತನ್ನ ಕೆಲಸ ಮುಗಿಸಿ ತನ್ನಿಂತಾನೇ ಮಾಯವಾಗುವಂತೆಯೂ ಮಾಡಬಹುದೆಂದು ಸಾಪ್ಟ್‌ವೇರ್ ಕ್ಷೇತ್ರದ ತಂತ್ರಜ್ಞರು ಹೇಳುತ್ತಾರೆ. ಮತ ಎಣಿಕೆ ಕೇಂದ್ರದಿಂದ ಕೆಲವಾರು ಕಿಲೋಮೀಟರ್ ದೂರದಿಂದಲೆ ರೇಡಿಯೋ ತರಂಗಗಳ ಮೂಲಕವೂ ಫಲಿತಾಂಶಗಳನ್ನು ತಿರುಚಬಹುದೆಂದು ಕೆಲವು ತಜ್ಞರು ವಾದಿಸುತ್ತಾರೆ. ಆದರೆ ಇದೆಲ್ಲಾ ಮಾಡಬೇಕೆಂದರೆ ಮೊದಲೇ ಅದಕ್ಕೆ ಸೂಕ್ತವಾದ ರಹಸ್ಯ ಚಿಪ್ ಅಳವಡಿಸಬೇಕಾಗುತ್ತದಂತೆ.
ಸಾರಾಂಶದಲ್ಲಿ ಹೇಳುವುದಾದರೆ, ಇವಿಎಂ ಒಳಗೊಂಡಂತೆ ಯಾವುದೇ ಕಂಪ್ಯೂಟರ್ ಉಪಕರಣ ದೋಷಗಳಿಂದ ಮುಕ್ತವಾಗಿ, ಹ್ಯಾಂಕಿಂಗ್ ಅಥವ ದುರ್ಬಳಕೆಗಳಿಂದ ಮುಕ್ತವಾಗಿರಲು ಸಾಧ್ಯವಿಲ್ಲ ಎಂಬುದು ತಂತ್ರಜ್ಞರ ಅಭಿಪ್ರಾಯ. ಅಧಿಕಾರ ಹಿಡಿಯಲು ಏನೆಲ್ಲ ಅಕ್ರಮಗಳನ್ನು ನಡೆಸುತ್ತಿರುವ ಈ ದೇಶದ ಪಟ್ಟಭದ್ರ ಶಕ್ತಿಗಳು ಇಂತಹ ಟೆಕ್ನಿಕಲ್ ಅಕ್ರಮಗಳನ್ನು ನಡೆಸುವುದಿಲ್ಲ ಎಂದು ಭರವಸೆಯಿಡಬಹುದೆ?
ಇಂತಹ ಗೊಂದಲಮಯ ಸಂದರ್ಭದಲ್ಲೇ ’ಜನತಾ ಕಾ ರಿಪೋರ್ಟರ್ ಎಂಬ ಜಾಲತಾಣ ಬಹಿರಂಗಗೊಳಿಸಿದ ಸುದ್ದಿ ಆಘಾತಕಾರಿಯಾಗಿದೆ.
ಮೋದಿ ಗುಜರಾತ್ ಸಿಎಂ ಆಗಿದ್ದಾಗ ಅಲ್ಲಿ ಭಾರೀ ಹಗರಣವೊಂದು ನಡೆದಿತ್ತು. ಸರ್ಕಾರಿ ಸ್ವಾಮ್ಯದ ಜಿಎಸ್‌ಪಿಸಿ ಕಂಪನಿಗೆ ಸೇರಿದ ೨೦,೦೦೦ ಕೋಟಿ ಮೌಲ್ಯದ ಷೇರುಗಳನ್ನು ಜಿಯೋ ಗ್ಲೋಬಲ್ ರಿಸೋರ್ಸಸ್ ಎಂಬ ಕಂಪನಿಯೊಂದಕ್ಕೆ ಅನಾಮತ್ತು ವರ್ಗಾಯಿಸಲಾಗಿತ್ತು. ಈಗ ಇವಿಎಂಗಳಲ್ಲಿ ಅಳವಡಿಸುತ್ತಿರುವ ಮೈಕ್ರೋಚಿಪ್‌ಗಳನ್ನು ಹಾಗೂ ಪ್ರೋಗ್ರಾಮಿಂಗ್ ಸಾಫ್ಟ್‌ವೇರ್‌ಗಳನ್ನು ಸಪ್ಲೈ ಮಾಡಲು ’ಮೈಕ್ರೋಚಿಪ್ಸ್ ಇಂಕ್ ಎಂಬ ಅಮೆರಿಕದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಆಘಾತಕಾರಿ ವಿಷಯವೆಂದರೆ ಜಿಎಸ್‌ಪಿಸಿಯ ೨೦,೦೦೦ ಕೋಟಿ ಮೊತ್ತವನ್ನು ಗುಳುಂಮಾಡಿದ ಜಿಯೋ ರಿಸೋರ್ಸ್ ಮತ್ತು ಈ ಮೈಕ್ರೋ ಚಿಪ್ಸ್ ಇಂಕ್ ಕಂಪನಿಗಳೆರಡೂ ಅಮೆರಿಕದ ’ಕೀ ಕ್ಯಾಪಿಟಲ್ ಕಾರ್ಪೊರೇಷನ್ನ ಒಡೆತನದಲ್ಲಿವೆ ಎಂದು ನಾಸ್ಡಾಕ್‌ನ ದಾಖಲೆಗಳು ಹೇಳುತ್ತವೆ.
ತೆರೆಮರೆಯಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ಬಲ್ಲವರಾರು?

ಪ್ರಜಾಪ್ರಭುತ್ವದ ತಳಹದಿಯಾದ ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸುವುದು, ಪ್ರಜೆಗಳ ವಿಶ್ವಾಸಕ್ಕೆ ಅರ್ಹವಾದ ವಿಧಾನಗಳನ್ನು ಅಳವಡಿಸುವುದು ಚುನಾವಣಾ ಆಯೋಗದ ಕರ್ತವ್ಯ. ಹಳೆಯ ಇವಿಎಂಗಳನ್ನೇ ಬಳಸಲು ಹೆಣಗಾಡುವುದು, ಬೇರೆ ವಿಧಿಯೇ ಇಲ್ಲವೆಂದಾಗ ವಿವಿಪಿಎಟಿ ಅಳವಡಿಸುವ ತಂತ್ರವನ್ನು ಆಯೋಗ ಮತ್ತು ಸರ್ಕಾರ ಅನುಸರಿಸುತ್ತಿವೆ. ಆದರೆ ಅಳವಡಿಸಿದ ವಿವಿಪಿಎಟಿ ಕೂಡ ನಿಷ್ಟ್ರಯೋಜಕ. ಯಾಕೆಂದರೆ ಇವಿಎಂಗಳ ಫಲಿತಾಂಶದ ಬಗ್ಗೆ ದೂರುಗಳು ಬಂದಾಗ ಡಬ್ಬದಲ್ಲಿ ಶೇಖರವಾಗಿರುವ ಪೇಪರ್‌ಮತಗಳನ್ನು ಕನಿಷ್ಟ ಪ್ರತಿ ಕ್ಷೇತ್ರದಲ್ಲಿ ಶೇಕಡ ೨೫ ರಷ್ಟನ್ನಾದರೂ ಎಣಿಕೆ ಮಾಡಬೇಕೆಂಬ ಗುಜರಾತ್‌ನ ವಿರೋಧ ಪಕ್ಷಗಳ ಬೇಡಿಕೆಯನ್ನು ಆಯೋಗ ತಿರಸ್ಕರಿಸಿದೆ. ಕನಿಷ್ಟ ೧೦% ಪೇಪರ್ ಮತಗಳನ್ನಾದರೂ ಎಣಿಕೆ ಮಾಡಬೇಕೆಂಬ ಬೇಡಿಕೆಗೂ ಸೊಪ್ಪು ಹಾಕಿಲ್ಲ. ಸುಪ್ರೀಂ ಕೋರ್ಟ್ ಕೂಡ ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿದೆ. ಹಾಗಿದ್ದರೆ ವಿವಿಪಿಎಟಿ ಕಸರತ್ತು ನಡೆಸುತ್ತಿರುವುದು ಕೇವಲ ಕಣ್ಣೊರೆಸಲಿಕ್ಕಾಗಿ ಮಾತ್ರವೇ ಎಂಬುದು ಅಸಲಿ ಪ್ರಶ್ನೆ.
ಜರ್ಮನಿ, ಅಮೆರಿಕದಂತಹ ದೇಶಗಳು ಇವಿಎಂ ಪಾರದರ್ಶಕವಲ್ಲ ಹಾಗೂ ಮತದಾರರಿಗೆ ವಿಶ್ವಾಸಾರ್ಹವಲ್ಲ ಎಂಬ ಕಾರಣದಿಂದ ಮತ್ತೆ ಬ್ಯಾಲಟ್ ಪೇಪರ್‌ಗೆ ಮರಳಿವೆ. ವಿಷಯ ಇಷ್ಟು ಸ್ಪಷ್ಟವಾಗಿರುವಾಗ ನಮ್ಮ ಚುನಾವಣಾ ಆಯೋಗ ನಮ್ಮ ತಂತ್ರಜ್ಞಾನ ಎಲ್ಲರಿಗಿಂತಲೂ ಉತ್ಕೃಷ್ಟವಾದುದು ಎಂಬ ಸಮರ್ಥನೆಯಲ್ಲಿ ತೊಡಗಿರುವುದೇಕೆ? ಜನರಿಗೆ ವಿಶ್ವಸನೀಯ, ಪಾರದರ್ಶಕ ಹಾಗೂ ಕಡಿಮೆ ವೆಚ್ಚದ ಆಯ್ಕೆಯಾದ ಬ್ಯಾಲಟ್ ಪೇಪರ್‌ಗಳಿಗೆ ಮರಳುವುದು ಸೂಕ್ತ. ಇದರಿಂದ ಹೆಚ್ಚೆಂದರೆ ಮತ ಎಣಿಕೆಗೆ ಒಂದೆರಡು ದಿನ ಹೆಚ್ಚಿಗೆ ತೆಗೆದುಕೊಳ್ಳಬಹುದು, ಅಷ್ಟೆ.
@ ದೊಡ್ಡಿಪಾಳ್ಯ ನರಸಿಂಹಮೂರ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...