Homeಮುಖಪುಟಹುಸಿ ಭರವಸೆ, ಸುಳ್ಳುಗಳ ಆಧಾರದ ಮೇಲೆ ನಡೆದ ಈ ಇವಿಎಂ ಚುನಾವಣೆ : 'ಠಕ್ಕ'ರಿಗೆ ಈಗಲೂ...

ಹುಸಿ ಭರವಸೆ, ಸುಳ್ಳುಗಳ ಆಧಾರದ ಮೇಲೆ ನಡೆದ ಈ ಇವಿಎಂ ಚುನಾವಣೆ : ‘ಠಕ್ಕ’ರಿಗೆ ಈಗಲೂ ಭಾರತ ಫಲವತ್ತಾದ ಭೂಮಿ!

ಠಕ್ಕರಲ್ಲಿ ಕೆಲವರು ಬಣ್ಣದ ಮಾತುಗಳಿಂದ ಗೆಳೆತನ ಬೆಳೆಸಿ ಮಾಹಿತಿ ಸಂಗ್ರಹಿಸುತ್ತಿದ್ದರು. ನಂತರ ಠಕ್ಕರು ಪರಸ್ಪರ ಪರಿಚಯ ಇಲ್ಲದವರಂತೆ ಗುಂಪುಗಳಲ್ಲಿ ಸೇರಿಕೊಳ್ಳುತ್ತಿದ್ದರು. ಎಲ್ಲಿ ಕೊಲ್ಲಬೇಕೆಂದು ಮೊದಲೇ ನಿಲ್ಲಿಸಿ ಗುಂಡಿ ತೋಡುವವರನ್ನು ಮೊದಲೇ ಕಳಿಸುತ್ತಿದ್ದರು.

- Advertisement -
| ನಿಖಿಲ್ ಕೋಲ್ಪೆ |
ಶಾಲೆಯಲ್ಲಿ ಇತಿಹಾಸ ಓದುವಾಗ ಭಾರತದ ಗವರ್ನರ್ ಜನರಲ್ “ಲಾರ್ಡ್ ವಿಲಿಯಂ ಬೆಂಟಿಂಕನು ಠಕ್ಕರನ್ನು ಅಡಗಿಸಿದನು” ಎಂಬ ಒಂದು ವಾಕ್ಯ ನಮ್ಮ ಪುಸ್ತಕದಲ್ಲಿತ್ತು. ಅದು ಈಗಲೂ ಅಚ್ಚೊತ್ತಿದಂತೆ ಮನಸಿನಲ್ಲಿ ಕೂತಿದೆ. ಆದರೆ ಆಗ ಈ ಠಕ್ಕರು ಯಾರು, ಈ ‘ಅಡಗಿಸಿದನು’ ಎಂದರೆ ಏನು ಎಂಬ ಕುತೂಹಲಕ್ಕೆ ಅಧ್ಯಾಪಕರೂ ಮದ್ದು ಮಾಡಲಿಲ್ಲ. ಠಕ್ಕರೆಂದರೆ ವಂಚಕರು ಮತ್ತು ಅಡಗಿಸುವುದೆಂದರೆ ಅಡಗಿಸಿ ಇಡುವುದಲ್ಲ: ಹುಟ್ಟಡಗಿಸುವ ರೀತಿಯಲ್ಲಿ ನಾಶ ಮಾಡುವುದು ಎಂದು ನಂತರ ಗೊತ್ತಾದರೂ ಇಂಟರ್ನೆಟ್ ಇತ್ಯಾದಿಗಳೂ, ಒಳ್ಳೆಯ ಪುಸ್ತಕ ಭಂಡಾರವೂ ಇಲ್ಲದ ಕಾಲದಲ್ಲಿ ಈ ಕುತೂಹಲ ತಣಿಯಲಿಲ್ಲ.
ಮುಂದೆ ಹೈಸ್ಕೂಲು ಸೇರಿದ ಹೊತ್ತಿನಲ್ಲಿ ತಂದೆಯವರ ಬಳಿ ಇದ್ದ ಜಾನ್ ಮಾಸ್ಟರ್ಸ್ಸ್ ಎಂಬ ನಾಲ್ಕನೇ ತಲೆಮಾರಿನ, ಭಾರತದಲ್ಲೇ ಹುಟ್ಟಿ ಬೆಳೆದ ಬ್ರಿಟಿಷ್ ಲೇಖಕನ ‘ಡಿಸೀವರ್ಸ್’ (ವಂಚಕರು) ಎಂಬ ಪುಸ್ತಕ ಓದಿದಾಗ ಅರೆಬರೆ ಅರ್ಥವಾಗಿ ಕುತೂಹಲ ಇನ್ನಷ್ಟು ಹೆಚ್ಚಾಯಿತು. ಅದನ್ನು ಮತ್ತೆ ಮತ್ತೆ ಓದಿದೆ. ಫಿಲಿಪ್ ಮೆಡೋಸ್ ಟೇಲರ್‌ನ ‘ಕನ್‌ಫೆಷನ್ಸ್ ಆಫ್ ಎ ಥಗ್’ ಎಂಬ ಪುಸ್ತಕ ಓದಿದಾಗ ಈ ಠಕ್ಕರ ಭಯಾನಕ ಪ್ರಪಂಚದ ಅರಿವಾಯಿತು. ಬ್ರಿಟಿಷರ ಕೈಗೆ ಸಿಕ್ಕಿ ಮಾಫಿ ಸಾಕ್ಷಿಯಾದ ಸೈಯ್ಯದ್ ಅಮೀರ್ ಆಲಿ ಎಂಬ ಠಕ್ಕನ ಆತ್ಮಕಥೆಯ ರೂಪದಲ್ಲಿ ಈ ಪುಸ್ತಕವಿದೆ. ಅದನ್ನು ಡೌನ್‌ಲೋಡ್ ಮಾಡಿ ಮೊನ್ನೆ ತಾನೆ ಮತ್ತೆ ಓದಲು ಆರಂಭಿಸಿದಾಗ, ಈಗ ನಾವಿರುವ ಭಾರತದ ಪರಿಸ್ಥಿತಿಯಲ್ಲಿ ಚಿತ್ರವಿಚಿತ್ರ ಯೋಚನೆಗಳು ತಲೆಗೆ ಹತ್ತಿಕೊಂಡವು. ಅವುಗಳನ್ನು ವಿವರಿಸುವ ಮೊದಲು ಠಕ್ಕರ ಈ ಪ್ರಪಂಚವನ್ನು ಸ್ವಲ್ಪ ವಿವರಿಸುವುದು ಅಗತ್ಯ.
ಠಕ್ಕರು ಎಂದರೆ ಬ್ರಿಟಿಷರ ಕಾಲದಲ್ಲಿ ಇದ್ದ ಒಂದು ಗುಪ್ತ ಪಂಥ. ಹಿಂದಿಯ ‘ತುಗ್‌ನಾ’ ಅಂದರೆ ವಂಚಿಸುವುದು ಎಂಬ ಪದವೇ ಇದರ ಮೂಲ. ಠಕ್ಕರನ್ನು ‘ಥಗ್ಗಿ’ ಎನ್ನುತ್ತಾರೆ. ಇಂಗ್ಲಿಷ್‌ನ Thug ಎಂಬ ಪದದ ಮೂಲ ಇದೇ ಆಗಿದೆ. ಆದರೆ, ಈ ಪಂಥದ ಆರಂಭ ಎಲ್ಲಾಯಿತು, ಯಾವತ್ತಾಯಿತೆಂದು ಯಾರಿಗೂ ಸ್ಪಷ್ಟವಾಗಿ ಗೊತ್ತಿರುವಂತಿಲ್ಲ. ಅಷ್ಟಕ್ಕೂ ಬ್ರಿಟಿಷ್ ಸೈನಿಕರು ಮತ್ತು ಅಧಿಕಾರಿಗಳನ್ನು ಆಡಳಿತದ ಗಮನಸೆಳೆಯುವ ಭಯದಿಂದ ಮುಟ್ಟದೇ ಇದ್ದ ಠಕ್ಕರು, ಒಮ್ಮೆ ಬ್ರಿಟಿಷ್ ಸೇನಾಧಿಕಾರಿ ಮತ್ತು ಬೆಂಗಾವಲಿನ ಭಾರತೀಯ ಸೈನಿಕರನ್ನು ಕೊಂದಾಗಲೇ ಬ್ರಿಟಿಷರಿಗೆ ಇದರ ಸುಳಿವು ಹತ್ತಿ ಅವರು ಈ ಕುರಿತು ಗಂಭೀರವಾದದ್ದು! ಕೆಲವರ ಪ್ರಕಾರ ಇದು ಅಕ್ಬರನ ಕಾಲದಲ್ಲಿ ಆರಂಭವಾಯಿತು. ಮತ್ತು ಬ್ರಿಟಿಷರ ಆಳ್ವಿಕೆ ಬಂದ ಬಳಿಕ ಸಣ್ಣಪುಟ್ಟ ರಾಜರು ಬೇಡವೆಂದು ವಜಾ ಮಾಡಿದ ಸೈನಿಕರು ಸೇರಿ ಇದು ಬೆಳೆಯಿತು ಎಂದೂ ಹೇಳಲಾಗುತ್ತದೆ.
ಮೊದಲೇ ಹೇಳಿದಂತೆ ಬೆಂಟಿಂಕ್ ಈ ಕುರಿತು ಗಂಭೀರವಾಗಿ ಗಮನಹರಿಸಿ ಮೇಜರ್ ಜನರಲ್ ವಿಲಿಯಂ ಹೆನ್ರಿ ಸ್ಲೀಮನ್ ಎಂಬ ಅಧಿಕಾರಿಯನ್ನು ನೇಮಿಸಿದ. ಈತನ ಶತಪ್ರಯತ್ನದಿಂದ ಠಕ್ಕರ ಜಾಲಗಳನ್ನು ಬೇಧಿಸಿ 3,226 ಮಂದಿಯನ್ನು ಬಂಧಿಸಿ 412 ಮಂದಿಯನ್ನು ನೇಣಿಗೇರಿಸಲಾಯಿತು. ಈ ಗುಂಪುಗಳು ಇದ್ದದ್ದು ಮಧ್ಯಭಾರತ, ರಾಜಸ್ತಾನ ಸೇರಿದಂತೆ ಹಿಂದಿ ರಾಜ್ಯಗಳಲ್ಲಿ ಮತ್ತು ಬಂಗಾಳದಲ್ಲಿ. ಸ್ಲೀಮನ್ ಈ ಕುರಿತು ಹಲವು ದಾಖಲೆಗಳನ್ನು ಪ್ರಕಟಿಸಿದ್ದಾನೆ.
ಇವರ ಉದ್ಯೋಗ ಪ್ರಯಾಣಿಕರ ಗುಂಪುಗಳಲ್ಲಿ ಬೇರೆ ಬೇರೆ ವೇಷಗಳಲ್ಲಿ ಸೇರಿಕೊಂಡು ಅವರ ವಿಶ್ವಾಸಗಳಿಸಿ ಒಂದೇ ಒಂದು ಸಾಕ್ಷಿ ಉಳಿಯದಂತೆ ಎಲ್ಲರನ್ನೂ ಕೊಲ್ಲುವುದು ಮತ್ತು ಹಣ, ಚಿನ್ನಾಭರಣ ಮತ್ತು ಸರಕುಗಳನ್ನು ದೋಚುವುದು. ಆದರೆ ಇವರು ಮಾಮೂಲಿ ದರೋಡೆಕೋರರಲ್ಲ. ಹೆಚ್ಚಾಗಿ ಇದು ವಂಶಪಾರಂಪರ್ಯವಾದ ಉದ್ಯೋಗ. ಇದರಲ್ಲಿ ಹಿಂದೂಗಳು ಮಾತ್ರವಲ್ಲದೇ, ಮುಸ್ಲಿಮರೂ ಇದ್ದರು. ಇನ್ನೂ ವಿಶೇಷವೆಂದರೆ ಹಿಂದೂಗಳಲ್ಲಿ ಬ್ರಾಹ್ಮಣರೂ ಸೇರಿದಂತೆ ಎಲ್ಲಾ ಜಾತಿಗಳವರೂ, ಎಲ್ಲಾ ಉದ್ಯೋಗಗಳವರು ಇದ್ದದ್ದು. ಇವರೆಲ್ಲಾ ಈ ದರೋಡೆ ಯಾತ್ರೆ ನಡೆಯದ ಸಮಯದಲ್ಲಿ ಅವರವರ ಉದ್ಯೋಗಳಲ್ಲಿ ತೊಡಗಿದ್ದು ಇವರು ಠಕ್ಕರೆಂದು ಯಾರಿಗೂ ಗೊತ್ತೇ ಇರುತ್ತಿರಲಿಲ್ಲ. ಕೆಲವು ಜಮೀನ್ದಾರರೂ, ಪುಡಿ ರಾಜರುಗಳೂ ಠಕ್ಕರಾಗಿದ್ದುದು. ಕೆಲವು ರಾಜರು ಇವರಿಂದ ಪಾಲು ಪಡೆದು ಆಶ್ರಯವನ್ನೂ ನೀಡುತ್ತಿದ್ದರು. ಇಂತವರಲ್ಲಿ ಸಿಂಧಿಯಾ, ಹೋಳ್ಕರ್ ಮತ್ತು ಮರಾಠ ಪೇಶ್ವೆಗಳ ಹೆಸರು ಪ್ರಮುಖವಾಗಿ ಉಲ್ಲೇಖವಾಗಿದೆ.
ಅದಕ್ಕಿಂತಲೂ ವಿಶೇಷ ಎಂದರೆ, ಹಿಂದೂ-ಮುಸ್ಲಿಂ ಎನ್ನದೇ ಎಲ್ಲರೂ ವೈಯಕ್ತಿಕವಾಗಿ ತಮ್ಮತಮ್ಮ ಧರ್ಮಗಳನ್ನು ಅನುಸರಿಸುತ್ತಲೇ ಕಾಳಿಯ ಆರಾಧಕರಾಗಿದ್ದುದು. ಆಕೆಯ ಪೂಜೆ ಮಾಡಿ ಶಕುನ ನೋಡದೆ ಇವರು ಯಾವ ಕೆಲಸವನ್ನೂ ಮಾಡುವುದಿಲ್ಲ! ಅವರ ಲಾಂಛನವಾಗಿರುವುದು ಒಂದು ಪಿಕಾಸಿ. ಕಾಳಿಯು ರಕ್ತ ಬೀಜಾಸುರನನ್ನು ರಕ್ತ ನೆಲಕ್ಕೆ ಬೀಳದಂತೆ ಕೊಲ್ಲುವ ಕಥೆಯನ್ನೇ ಇವರು ನಂಬಿ ರಕ್ತ ಹರಿಸದೆಯೇ ಕೊಲ್ಲುತ್ತಾರೆ.
ಹಿಂದೆ ಪ್ರಯಾಣಿಕರು ಹೋದಲ್ಲೇ ರಸ್ತೆ. ವ್ಯಾಪಾರಿಗಳು ಸರಕುಗಳನ್ನು ಕುದುರೆ, ಹೇರೆತ್ತು, ಗಾಡಿಗಳಲ್ಲಿ ಸಾಗಿಸುತ್ತಿದ್ದರು. ಊರ ಹೊರಗೆ ತೋಪುಗಳಲ್ಲಿ ತಂಗುತ್ತಿದ್ದರು. ಗುಂಪಾಗಿ ಇದ್ದರೆ ಹೆಚ್ಚು ರಕ್ಷಣೆ ಎಂದು ಗುಂಪುಗಳಲ್ಲಿ ಪ್ರಯಾಣಿಸುತ್ತಿದ್ದರು. ಈ ಠಕ್ಕರಲ್ಲಿ ಕೆಲವರು ಬಣ್ಣದ ಮಾತುಗಳಿಂದ ಗೆಳೆತನ ಬೆಳೆಸಿ ಮಾಹಿತಿ ಸಂಗ್ರಹಿಸುತ್ತಿದ್ದರು. ನಂತರ ಠಕ್ಕರು ಪರಸ್ಪರ ಪರಿಚಯ ಇಲ್ಲದವರಂತೆ ಗುಂಪುಗಳಲ್ಲಿ ಸೇರಿಕೊಳ್ಳುತ್ತಿದ್ದರು. ಎಲ್ಲಿ ಕೊಲ್ಲಬೇಕೆಂದು ಮೊದಲೇ ನಿಲ್ಲಿಸಿ ಗುಂಡಿ ತೋಡುವವರನ್ನು ಮೊದಲೇ ಕಳಿಸುತ್ತಿದ್ದರು. ಹೂಳುವ ಕೆಲಸವೂ ಅವರದ್ದೇ. ನಿರ್ದಿಷ್ಟ ಸ್ಥಳ ಬಂದಾಗ ಭುತ್ತೋಟಿ ಎಂದು ಕರೆಯಲ್ಪಡುವವರು ಜಮಾದಾರನ ನಿರ್ದಿಷ್ಟ ಸಂಜ್ಞೆಯ ಮಾತು ಬಂದಾಗ ಏಕ ಕಾಲಕ್ಕೆ ಎಲ್ಲಾ ಪ್ರಯಾಣಿಕರನ್ನು ಕೊಲ್ಲುತ್ತಿದ್ದರು. ರುಮಾಲಿನ ಒಂದು ತುದಿಯಲ್ಲಿ ಬೆಳ್ಳಿ ರೂಪಾಯಿಯ ಗಂಟುಕಟ್ಟಿ ಹಿಂದಿನಿಂದ ಕುತ್ತಿಗೆ ಬಿಗಿದು ಕೊಲ್ಲುವುದು ಇವರ ವಿಧಾನ. ನಂತರ ಎಲ್ಲವನ್ನೂ ದೋಚಿ, ಶವಗಳನ್ನು ಹೂಳಿ, ಗುರುತೇ ಸಿಗದಂತೆ ಮಾಡುತ್ತಿದ್ದರು. ಯಾರಿಗೂ ಸಂಶಯವೇ ಬರುತ್ತಿರಲಿಲ್ಲ. ಬ್ರಿಟಿಷರು ನಂತರ ಬಂಧಿತ ಠಕ್ಕರ ಮಾಹಿತಿಯಂತೆ ತೋಪುಗಳನ್ನು ಅಗೆದಾಗ ನೂರಾರು ಸಾಮೂಹಿಕ ಸಮಾಧಿಗಳು ಸಿಕ್ಕಿದ್ದವು. ಕನಿಷ್ಟ ಎರಡು ಶತಮಾನಗಳ ಕಾಲ ಈ ಠಕ್ಕರು ಲಕ್ಷಾಂತರ ಪ್ರಯಣಿಕರನ್ನು ಕೊಂದಿದ್ದರು. ಅದರೂ ಯಾರಿಗೂ ಗೊತ್ತಾಗುತ್ತಿರಲಿಲ್ಲ.
ವಿಲಿಯಂ ಬೆಂಟಿಂಕನು ಠಕ್ಕರನ್ನು ‘ಅಡಗಿಸಿದನು’ ಎಂಬುದು ಸುಳ್ಳೆಂದು ನನಗನಿಸುತ್ತಿದೆ. ಇವತ್ತಿನ ಸಮಾಜದಲ್ಲಿ ಇಂದಿಗೂ ಈ ಠಕ್ಕರು ರಾಜಕಾರಣಿಗಳು, ಡೋಂಗಿ ವರ್ತಕರು ಮತ್ತು ಉದ್ಯಮಿಗಳು, ವಿವಿಧ ಧರ್ಮಗಳ ಪುರೋಹಿತರು, ಜ್ಯೋತಿಷಿಗಳು, ಮಂತ್ರವಾದಿಗಳು… ಹೀಗೆ ವಿವಿಧ ವೇಷಗಳಲ್ಲಿ ಜನರನ್ನು ವಂಚಿಸುತ್ತಲೇ ಇದ್ದಾರೆ. ಠಕ್ಕರಂತೆ ಬಣ್ಣಬಣ್ಣದ ಸುಳ್ಳುಗಳಿಂದ ಜನರನ್ನು ವಂಚಿಸುತ್ತಾ ದೋಚುತ್ತಲೇ ಇದ್ದಾರೆ. ಸಂಚುಗಳನ್ನು ರೂಪಿಸುತ್ತಲೇ ಇದ್ದಾರೆ. ಯಾವುದೇ ಧರ್ಮ ಭೇದವಿಲ್ಲ! ಆದರೆ, ಜನರನ್ನು ಮಾತ್ರ ಜಾತಿ ಧರ್ಮಗಳ ಹೆಸರಿನಲ್ಲಿ ಒಡೆಯುತ್ತಲೇ ಇದ್ದಾರೆ. ಠಕ್ಕರಿಗೆ ತಮ್ಮ ಕೃತ್ಯಗಳ ಬಗ್ಗೆ ಎಳ್ಳಷ್ಟೂ ಪಶ್ಚಾತ್ತಾಪ ಇರಲಿಲ್ಲ. ಕೊಲ್ಲುವುದು, ದೋಚುವುದು ತಮ್ಮ ಹಕ್ಕೆಂದೇ ಅವರು ಭಾವಿಸುತ್ತಿದ್ದರು. ಇವರೂ ಹಾಗೆಯೇ. ಈಗಿನ ಠಕ್ಕರೂ ದೇವರು, ಧರ್ಮಗಳ ಹೆಸರಿನಲ್ಲಿ ಜನರನ್ನು ಹೊಡೆದಾಡಿಸಿ ಕೊಲ್ಲುತ್ತಿದ್ದಾರೆ.
ಕುರಿಗಳು ನಂಬುವುದು ಕಟುಕನನ್ನೇ ಎಂಬ ಮಾತಿನಂತೆ ಜನರು ಹಿಂದಿನ ಠಕ್ಕರನ್ನು ನಂಬುತ್ತಿದ್ದಂತೆ ಇವರನ್ನೂ ನಂಬುತ್ತಿದ್ದಾರೆ. ಇಲ್ಲವಾದಲ್ಲಿ ಪೊಳ್ಳು ಜ್ಯೋತಿಷಿಗಳಿಗೆ, ಮೂಢನಂಬಿಕೆಗಳಿಗೆ ಸುಲಭದ ತುತ್ತಾಗುತ್ತಿರಲಿಲ್ಲ. ಹಿಂದೂ ಒಂದು ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಉಪಾಯದಿಂದ ಮೀಸಲಾತಿ ಕಸಿದರೂ, ಇಪ್ಪತ್ತಕ್ಕೂ ಹೆಚ್ಚು ಬ್ರಾಹ್ಮಣರನ್ನು ಮಂತ್ರಿ ಮಾಡಿದರೂ, ಜೈಲಿಗೆ ಹೋದ ಕ್ರಿಮಿನಲ್‌ಗಳಿಗೆ ಮನೆ ಕಾಯುವ ಜವಾಬ್ದಾರಿ ನೀಡಿದರೂ, ದಲಿತರ, ಅಲ್ಪಸಂಖ್ಯಾತರ, ಮಹಿಳೆಯರ ಮೇಲೆ ರಾಜಾರೋಷವಾಗಿ ದಾಳಿ ನಡೆಸಿದರೂ ಎಚ್ಚತ್ತುಕೊಳ್ಳದೇ ಸುಮ್ಮನಿರುವುದು ಮಾತ್ರವಲ್ಲದೇ, ಕಳ್ಳರ ಕೈಗೆ ಖಜಾನೆಯ ಬೀಗದ ಕೈ ಕೊಡುತ್ತಿರಲಿಲ್ಲ. ಹಾಗೆ ನೋಡಿದರೆ ಹುಸಿ ಭರವಸೆ, ಸುಳ್ಳುಗಳ ಆಧಾರದ ಮೇಲೆ ನಡೆದ ಈ ಇವಿಎಂ ಚುನಾವಣೆ ಈ ತನಕದ ಅತ್ಯಂತ ದೊಡ್ಡ ಠಕ್ಕತನದ ಕೃತ್ಯ ಎನ್ನಬಹುದು. ಆದರೂ ಠಕ್ಕರು ಸಿಕ್ಕಿಬೀಳುತ್ತಿಲ್ಲ! ಠಕ್ಕರಿಗೆ ಹಲವು ಬಣ್ಣ!
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. The man is changig India is not a common poltician ‘ Who ruled india have more than 60 years are done indians get hinderns in the world. Now India get prolific Fame.Some people are slaves that party ,That always With his famalies member wil be a prime minister So we get thiking about The Prime Minister is in right way; He has given freedom to Indian soldiers,So now indains free from heritage politics , So please think ,

  2. So when India voted criminal INC party it is ok …and uplift of secularism but same people voted their choice it becomes vote given to #Takkaru hypocrisy at height by writer…

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...