Homeಕರ್ನಾಟಕಮನೆ ಮಟ್ಟದಲ್ಲಿ ಹಸಿ ತ್ಯಾಜ್ಯ ನಿರ್ವಹಣೆ ಪೌರಕಾರ್ಮಿಕರ ಹೊರೆ ತಗ್ಗಿಸಬಹುದು

ಮನೆ ಮಟ್ಟದಲ್ಲಿ ಹಸಿ ತ್ಯಾಜ್ಯ ನಿರ್ವಹಣೆ ಪೌರಕಾರ್ಮಿಕರ ಹೊರೆ ತಗ್ಗಿಸಬಹುದು

- Advertisement -
- Advertisement -

ಆಗತಾನೇ ಅಡುಗೆಮನೆಯಲ್ಲಿದ್ದ ಕಾಂಪೋಸ್ಟ್ ಡಬ್ಬವನ್ನು ಮೂಗು ಮುಚ್ಚಿಕೊಂಡು ಕಂಬಕ್ಕೆ ರವಾನಿಸಿ ಕೂತಿದ್ದೆ; ಅದೇ ಸಮಯಕ್ಕೆ ಫೋನ್ ಬಂತು; ನಿಮ್ಮನೇಲಿ ಹಸಿ ಕಸ ಕಾಂಪೋಸ್ಟ್ ಮಾಡ್ತೀರಲ್ಲ, ಅದರ ಬಗ್ಗೆ ಲೇಖನ ಬರೆದು ಕೊಡಿ ಅಂತ.

ಮೂವ್ವತ್ತು ವರ್ಷಗಳ ಹಿಂದೆ ನಾವು ಈಗಿರುವ ಮನೆಗೆ ಬಂದಾಗ ಅಕ್ಕಪಕ್ಕದ ಸೈಟುಗಳು ಖಾಲಿ ಇದ್ದವು. ತುಸು ದೂರದಲ್ಲಿದ್ದ ಹೊಲಗಳು ಕಣ್ಣಿಗೆ ಬೀಳ್ತಾ ಇದ್ದವು. ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಅಜ್ಜಅಜ್ಜಿಯರು ತಮ್ಮ ದನಕರುಗಳನ್ನು ನಮ್ಮ ಪಕ್ಕದ ಸೈಟಿನಲ್ಲಿ ಮೇಯಿಸುತ್ತಾ ತಮ್ಮ ಕಷ್ಟಸುಖ ಮಾತಾಡಿಕೊಳ್ತಾ, ಅಮ್ಮನ ಜೊತೆ ಆಗೀಗ ಕುಶಲೋಪರಿ ಮಾತುಕತೆ ಆಡ್ತಾ ಇದ್ದರು. ಅವರೆಕಾಯಿ, ಅಲಸಂದೆಕಾಯಿ ಸಿಪ್ಪೆ, ಹಲಸಿನ ಸಿಪ್ಪೆ, ಮಿಕ್ಕಿದ ಅನ್ನ-ಸಾರು ಇವೆಲ್ಲವೂ ಹಸುಗಳಿಗೆ ಆಹಾರವಾಗ್ತಾ ಇತ್ತು. ಕಾಲಕ್ರಮೇಣ ಸೈಟುಗಳಿದ್ದ ಕಡೆ ಮನೆಗಳೆದ್ದವು. ಅಜ್ಜ-ಅಜ್ಜಿಯರು ಹಸು ಮೇಯಿಸಲು ಶಕ್ತಿಯಿಲ್ಲದೆ ತಾವೇ ಹಾಲು ಕೊಳ್ಳುವ ಸ್ಥಿತಿಗೆ ತಲುಪಿದರು. ತರಕಾರಿ ಸಿಪ್ಪೆ ಕಸದಗಾಡಿಗೆ, ತಂಗಳು ಬಚ್ಚಲ ಕಿಂಡಿಯ ಮೂಲಕ ಚರಂಡಿ ಸೇರಲಾರಂಭಿಸಿತು. ಸುಮಾರು ಹತ್ತು ವರ್ಷಗಳ ಹಿಂದೆ ಇರ್ಬೇಕು, ಕೃಷಿ ವಿಜ್ಞಾನಿಯಾಗಿರುವ ನಮ್ಮಣ್ಣ ತರಕಾರಿ ಸಿಪ್ಪೆಯನ್ನು ಇನ್ಮೇಲೆ ಮಹಡಿ ಮೇಲೆ ಖಾಲಿ ಪಾಟ್‌ಗಳಿಗೆ ಹಾಕಿ ಮಣ್ಣು ತುಂಬಿ ಅಂದ್ರು. ಅದಾದಮೇಲೆ ಮನೆಯ ಎಲ್ಲಾ ಹಸಿ ಕಸವನ್ನು ಹೊರಗೆ ಹಾಕೋದು ಬೇಡ ಅಂದ್ರು. ಏನೋ ದೊಡ್ಡ ಕ್ರಾಂತಿ ಮಾಡುವ ಉತ್ಸಾಹದಲ್ಲಿ ಅಡುಗೆ ಮನೆಯ ಸಿಂಕ್ ಹತ್ತಿರ ೭-೮ ಕೆಜಿ ತುಂಬುವ ಡಬ್ಬ ಇಟ್ಟುಕೊಂಡು ತರಕಾರಿ ಸಿಪ್ಪೆ, ಅಳಿದುಳಿದ ಊಟ ತಿಂಡಿ ಎಲ್ಲಾ ಅದರಲ್ಲಿ ಹಾಕತೊಡಗಿದೆವು. ಮೂರನೇ ದಿವಸಕ್ಕೆ ಡಬ್ಬದ ಮುಚ್ಚಳ ತೆಗೆದರೆ ಸಹಿಸಲಾರದ ವಾಸನೆ, ಜೊತೆಗೆ ಪಿತಗರೆಯುವ ಬಿಳಿ ಹುಳುಗಳು. ಅವಾದರೋ ಜಿಗಿಯುವ ಸಾಮರ್ಥ್ಯವುಳ್ಳವು! ಫ್ರೂಟ್ ಫ್ಲೈಗಳ ಲಾರ್ವಾಗಳಂತೆ ಅವು! ಮಹಡಿಯ ಮೇಲಿನ ಪಾಟ್‌ಗಳಿಗೆ ಹಾಕಿ ಮಣ್ಣು ಸುರಿದರೂ ದುರ್ವಾಸನೆ. ಅಕ್ಕಪಕ್ಕದ ಮನೆಯವರು ಕೆಲವೊಮ್ಮೆ ಮೆಲ್ಲಗೆ, ಕೆಲವೊಮ್ಮೆ ಕೇಳುವ ಹಾಗೆ ಬೈದುಕೊಂಡದ್ದೂ ಉಂಟು. ಯಾರೂ ನೇರವಾಗಿ ಕೇಳಲಿಲ್ಲ ಸದ್ಯ!

ಇದನ್ನೂ ಓದಿ : ಹೈದ್ರಾಬಾದ್‌: ಮಹಿಳೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಸರ್ಕಲ್‌ ಇನ್‌ಸ್ಪೆಕ್ಟರ್‌‌

ಅಲ್ಲಿಇಲ್ಲಿ ಲೇಖನ ಓದಿ, ಮನೆಯ ಹಾಲ್‌ನಲ್ಲೆ ಇಟ್ಕೋಬಹುದಾದ, ವಾಸನೆ ಬರದ ಕಾಂಪೋಸ್ಟ್ ನಿರ್ವಹಣೆಯ ಬಗ್ಗೆ ತಿಳಿದುಕೊಂಡದ್ದಾಯ್ತು. ಮುಂದಿನ ಹಂತ: ಸಾವಿರಾರು ರೂಪಾಯಿ ಕೊಟ್ಟು ಮೂರು ಪಾಟ್‌ಗಳ ಕಂಬ ತಂದಿದ್ದಾಯ್ತು. ಆದರೆ ಮೂರೇ ಮಂದಿಯ ನಮ್ಮ ಪುಟ್ಟ ಮನೆಯ ಅಡುಗೆಮನೆ ಹಸಿ ಕಸಕ್ಕೆ ಆ ಕಂಬ ವಾರಕ್ಕೂ ಮುಂಚೆ ತುಂಬಿಹೋಗುತ್ತಿತ್ತು! ಮತ್ತದೇ ಪುನರಾವರ್ತನೆ. ಹೈಡ್ರೋಜನ್ ಸಲ್ಫೈಡ್ ವಾಸನೆಯನ್ನು ಬೀರುವ ಮಹಡಿ ಮೇಲಿನ ಪಾಟ್‌ಗಳಲ್ಲಿ ಕಾಂಪೋಸ್ಟ್ ಮಾಡುವ ಕೆಲಸ ಮತ್ತೆ ಶುರು. ಪಾಟ್‌ಗಳು ಸಾಲದೆಂದು ಪ್ಲಾಸ್ಟಿಕ್ ಚೀಲಗಳನ್ನೂ ಕೆಲ ಸಮಯ ಉಪಯೋಗಿಸಲಾಯ್ತು. ಆದರೆ ಕಾಂಪೋಸ್ಟ್ ಚೀಲವನ್ನು ಆಚೀಚೆ ಸರಿಸಿ ಇಡುವಾಗ ಚೀಲ ಹರಿದು, ಅರೆಬರೆ ಕೊಳೆತ ಕಾಂಪೋಸ್ಟ್ ಸುರಿದು, ಅದನ್ನು ಶುಚಿ ಮಾಡುವ ಮತ್ತೊಂದು ಕೆಲಸದ ಹೊರೆ ಆಗುತ್ತಿತ್ತು. ಹಸಿ ಕಸ ಸಂಗ್ರಹಿಸಿದ ಡಬ್ಬದಲ್ಲಿ ಗಾಳಿ ಆಡದೆ ಇದ್ದರೆ ಕಾಂಪೋಸ್ಟ್ ತಯಾರಿಕೆ ಕ್ರಿಯೆ ತುಸು ಇರಿಸುಮುರಿಸು ತರುತ್ತದೆ, ಮನೆಯವರಿಗೂ, ಅಕ್ಕಪಕ್ಕದವರಿಗೂ.
ಕೊನೆಗೂ ಈ ದುರ್ವಾಸನೆಯುಕ್ತ ಕಾಂಪೋಸ್ಟ್ ಮಾಡುವ ವಿಧಾನ ಕೊನೆಯಾಗಿದ್ದು ಏರೋಬಿಕ್ ವಿಧಾನವನ್ನು ಅಳವಡಿಸಿಕೊಂಡಾಗ.

ಹೆಸರಿನಿಂದ ಇದೇನೋ ಭಾರೀ ಕಷ್ಟದ ವಿಧಾನ ಅನಿಸಿರಬಹುದು! ಹಾಗೇನೂ ಇಲ್ಲ. ದೊಡ್ಡದೊಡ್ಡ ಅಂಗಡಿಗಳಲ್ಲಿ, ಹಾಪ್ಕಾಮ್ಸ್ ಅಂಗಡಿಗಳಲ್ಲಿ ನೋಡಿಯೇ ಇರುತ್ತೀರಿ ಪ್ಲಾಸ್ಟಿಕ್ ಕ್ರೇಟ್‌ಗಳನ್ನು. 200-300 ರೂಪಾಯಿಗಳಿಗೆ ದೊರಕುವ ಈ ಕ್ರೇಟ್‌ಗಳಿಗೆ ತಳದಲ್ಲಿ ತೂತು ಮಾಡಿ, ಕಬ್ಬಿಣದ ಸ್ಟಾಂಡ್ ಮೇಲೆ ಅವನ್ನಿಟ್ಟು ಅದರಲ್ಲಿ ಹಸಿ ಕಸವನ್ನು ಸಂಗ್ರಹಿಸಲು ಆರಂಭಿಸಿದೆವು. ಇದು ಪ್ರಾರಂಭಿಸಿ 4-5 ವರ್ಷಗಳಾಯ್ತು. ನಮ್ಮ ಬಿಲ್ಡಿಂಗ್‌ನಲ್ಲಿರುವ ಮೂರು ಮನೆಗಳಿಂದ ಏನಿಲ್ಲವೆಂದರೂ ವಾರಕ್ಕೆ 15-20 ಕೆಜಿ ಹಸಿ ಕಸ ಸಂಗ್ರಹವಾಗುತ್ತದೆ. ಅದನ್ನು ದಿನಾ ದಿನ ಕ್ರೇಟ್‌ನಲ್ಲಿ ತುಂಬಿ, ಅದರ ಮೇಲೆ ಈಗಾಗಲೇ ತಯಾರಾಗಿರುವ ಕಾಂಪೋಸ್ಟ್, ಅಥವಾ
ಮಣ್ಣು, ಜೊತೆಗೆ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಡಿಕಂಪೋಸರ್‌ಅನ್ನು ಬೆರೆಸಿ ಮಳೆ ನೀರು ಬೀಳದ ಹಾಗೆ ಮುಚ್ಚಿಟ್ಟರೆ, ಸುಮಾರು ಒಂದು ತಿಂಗಳಲ್ಲಿ ಹಸಿ ಕಸದ ಶೇ.೧೦ರಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರ ತಯಾರು. ನಮ್ಮ ಟೆರೇಸ್ ಗಾರ್ಡನ್‌ನಲ್ಲಿನ ಗಿಡಗಳಿಗೂ ಆಗಿ ಮಿಗುವಷ್ಟು ಕಾಂಪೋಸ್ಟ್ ತಯಾರಾಗುತ್ತದೆ. ಕಾಂಪೋಸ್ಟ್ ತಯಾರಿಯಲ್ಲಿ ಸ್ವಾಭಾವಿಕವಾಗಿ ಸಹಾಯ ಮಾಡುವ ಇತರೆ ಜೀವಿಗಳೆಂದರೆ ಎರೆಹುಳುಗಳು, ಸೋಲ್ಜರ್ ಹುಳುಗಳು, ಜಿರಳೆ, ಇರುವೆಗಳು. 10 ವರ್ಷಗಳಲ್ಲಿ ಸಂಗ್ರಹಿಸಿದ ಹಸಿ ಕಸ ವರ್ಷಕ್ಕೆ 1000 ಕೆಜಿಯಂತೆ 10 ಟನ್. ತನ್ಮೂಲಕ ತಯಾರಾದ ಸಾವಯವ ಗೊಬ್ಬರ ವರ್ಷಕ್ಕೆ 100 ಕೆಜಿಯಂತೆ 1 ಟನ್.

ಹಸಿಕಸವನ್ನು ಗೊಬ್ಬರವನ್ನಾಗಿಸುವುದು ಸುಲಲಿತವಾದ ಪಯಣವೇನಲ್ಲ. ಅಡುಗೆ ಮನೆಯಲ್ಲಿ ತರಕಾರಿ, ಊಟದ ತ್ಯಾಜ್ಯ ಸಂಗ್ರಹಿಸುವ ಜಾಗದಲ್ಲಿ ಯಾವಾಗಲೂ ಸೊಳ್ಳೆ, ಇರುವೆ ಮುಸುರುತ್ತವೆ. ಕಸವನ್ನು ಮಹಡಿಗೆ ಸಾಗಿಸುವುದು ನಿಧಾನಿಸಿದಷ್ಟು ಹೆಚ್ಚೆಚ್ಚು ದುರ್ಗಂಧ ಆವರಿಸುತ್ತದೆ. ಮಹಡಿಯ ಮೇಲೂ ಕೂಡ ಈ ಹಸಿ ಕಸವನ್ನು ತಿನ್ನಲೆಂದೇ ಹೇರಳವಾಗಿ ಇರುವೆ, ಜಿರಳೆ, ಹಲ್ಲಿ, ಹೆಗ್ಗಣ ಮುಗಿಬೀಳುತ್ತವೆ. ಒಂದು ಸಣ್ಣ ಮಳೆ ಬಿದ್ದರೂ ಸಾಕು ಸೋಲ್ಜರ್ ಹುಳುಗಳು ಮಹಡಿ, ಮೆಟ್ಟಿಲು ಎಲ್ಲೆಲ್ಲೂ ಹರಡಿ ತಮ್ಮ ಇರವನ್ನು ಖಚಿತಪಡಿಸುತ್ತವೆ. ಮಳೆಗಾಲದಲ್ಲಿ ಕಸ ಬೇಗ ಒಣಗುವುದಿಲ್ಲ. ಕ್ರೇಟ್‌ಗಳ ತಳದಿಂದ ಸೋರಿದ ನೀರು ಸರಿಯಾದ ವಾಟರ್ ಪ್ರೂಫಿಂಗ್ ಇಲ್ಲದಲ್ಲಿ ಗೋಡೆಗೆ ಇಳಿದು ಹಾನಿ ಮಾಡಬಹುದು. ಕಸ ಒಣಗಿದ ಮೇಲೆ ಗಾಳಿಗೆ ಹಾರಿ ಮಹಡಿಯೆಲ್ಲ ಹರಡಬಹುದು. ನಿತ್ಯ ಅದನ್ನು ಗುಡಿಸುವುದೂ ಸಹ ದಿನಚರಿಯಲ್ಲಿ
ಸೇರಿಸಿಕೊಳ್ಳಬೇಕಾಗುತ್ತದೆ.

ಇಷ್ಟೆಲ್ಲಾ ಅಡಚಣೆಗಳ ಮಧ್ಯೆಯೂ ಒಂದು ಸುಂದರ ಪರಿಸರ ವ್ಯವಸ್ಥೆ (eco system) ರೂಪುಗೊಳ್ಳುತ್ತದೆ. ಕಾಂಪೋಸ್ಟ್‌ನಲ್ಲಿರುವ ಹುಳುಗಳನ್ನು ತಿನ್ನಲೆಂದೇ ಕಾಗೆ, ಗೊರವಂಕಗಳು ಬರುತ್ತವೆ. ಪುಟಾಣಿ ಸನ್ ಬರ್ಡ್ ಗೂಡು ಕಟ್ಟಲು ಒಣಗಿದ ಕಡ್ಡಿಯ ಹುಡುಕಾಟದಲ್ಲಿ, ಗಿಡಗಳ ಮೇಲಿನೆ ಹುಳು-ಹುಪ್ಪಟೆ ತಿನ್ನಲು ಅಥವಾ
ನೀರಿಗಾಗಿ ದಿನಾಲು ನಿಗದಿತ ಸಮಯದಲ್ಲಿ ಹಾಜರಾಗುತ್ತವೆ. ಟೆರೇಸ್ ಗಾರ್ಡನ್‌ನಲ್ಲಿನ ಹೂವುಗಳನ್ನರಸಿ ಜೇನುನೊಣ, ಬಣ್ಣಬಣ್ಣದ ಚಿಟ್ಟೆಗಳು, ಕೆಲವೊಮ್ಮೆ ಕಣಜಗಳು ಕೂಡ ಆಗಮಿಸುತ್ತವೆ. ನೀರು ತುಂಬಿಟ್ಟ ಪಾತ್ರೆಗಳಲ್ಲಿ ಸ್ನಾನ ಮಾಡಲು ಬುಲ್ಬುಲ್ ಜೋಡಿ ಕೂಡ ಹಾಜರ್. ಬೇರೆ ಪಕ್ಷಿಗಳು ಬಂದರೆ ತುಸು ದೂರವೇ ನಿಂತು ತಮ್ಮ ಸರತಿ ಬರುವವರೆಗೂ ಕಾದು ಯಾವುದೇ ಜಗಳವಿಲ್ಲದೆ ನೀರಿನ ದಾಹ ಪರಿಹರಿಸಿಕೊಂಡು ಮನಸೋ ಇಚ್ಛೆ ಸ್ನಾನ ಮಾಡಿ ತೆರಳುತ್ತವೆ. ಆಗೀಗ ಮಾನವನ ಉಗಮ ಪ್ರಕ್ರಿಯೆಯಲ್ಲಿ ಕೊಂಡಿ ಎನ್ನಲಾಗುವ ಪೂರ್ವಜರು ಕೂಡ ಬರುವುದೂ ಉಂಟು. ಹಣ್ಣುಗಳನ್ನು ತಿಂದು ನಮಗೂ ಸ್ವಲ್ಪ ಉಳಿಸಿಯೇ ಸಾಗುತ್ತವೆ!
ಉದ್ಯಾನ ನಗರಿ ಬೆಂಗಳೂರಿನ ಹಸಿ ತ್ಯಾಜ್ಯಕ್ಕೆ ಕೆಲವು ಟನ್‌ಗಳಷ್ಟು ಹೊರೆ ಇಳಿಸಿದ್ದೇವೆ ಅನ್ನುವುದೇ ಸಮಾಧಾನದ ವಿಷಯ. ಅನುಕೂಲವಿದ್ದ ವಸತಿ ಪ್ರದೇಶಗಳಲ್ಲಿ ನಿಯಮಿತವಾಗಿ ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವ ವ್ಯವಸ್ಥೆ ಸಾರ್ವಜನಿಕವಾಗಿ ಲಭ್ಯವಿದ್ದಲ್ಲಿ ಅಥವಾ ಮಹಡಿಯ ಮೇಲೆ ಜಾಗದ ಅನುಕೂಲವಿರುವವರು ತಾವೇ ಕಾಂಪೋಸ್ಟ್ ಮಾಡುವ ಮನಸ್ಸು ಮಾಡಿ ಸೂಕ್ತ ವ್ಯವಸ್ಥೆ ಮಾಡಿಕೊಂಡರೂ ಸಹ ಹಲವಾರು ಟನ್ ಹಸಿ ಕಸದ ವಿಲೇವಾರಿ ಕಡಿಮೆಯಾಗುತ್ತದೆ. ಪರಿಸರಕ್ಕೂ ಒಳ್ಳೆಯದು, ಪೌರಕಾರ್ಮಿಕರಿಗೂ ತುಸು ಶ್ರಮ ಕಡಿಮೆಯಾಗಬಹುದು.

ರಾಧಿಕಾ ಗಂಗಣ್ಣ
ವೃತ್ತಿಯಲ್ಲಿ ಎಂಜಿನಿಯರ್. ಸಾಹಿತ್ಯ ಆಸಕ್ತಿಯ ಕ್ಷೇತ್ರ.
ಗೆಳೆಯರೊಂದಿಗೆ ಸೇರಿ ಕನ್ನಡ ಪುಸ್ತಕಗಳ ಬಗ್ಗೆ ಪ್ರತಿ ವಾರ
ಕ್ಲಬ್ ಹೌಸ್ ಕಾರ್ಯಕ್ರಮವೊಂದನ್ನು ನಿರ್ವಹಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...