Homeಕರ್ನಾಟಕಗಂಗಾವತಿ ಸೀಮೆಯ ಬೀದಿಹೋರಾಟಗಾರ

ಗಂಗಾವತಿ ಸೀಮೆಯ ಬೀದಿಹೋರಾಟಗಾರ

- Advertisement -
- Advertisement -

ನಾನು ಹಂಪಿ ಸೀಮೆಗೆ ಅಧ್ಯಾಪಕನಾಗಿ ಬಂದ ಬಳಿಕ, ಭಾರದ್ವಾಜರನ್ನು ಅನೇಕ ಕಾರ್ಯಕ್ರಮಗಳಲ್ಲಿ ಭೇಟಿ ಆಗುತ್ತಿದ್ದೆ. ಅವರ ಹೆಗ್ಗುರುತೆಂದರೆ ಕಪ್ಪುಪ್ಯಾಂಟು, ಬಿಳಿಅಂಗಿ, ಹೆಗಲಿಗೆ ಕೆಂಪು ಟವೆಲು. ಹೋರಾಟದ ತ್ರಿವರ್ಣಕ್ಕೆ ಮನುಷ್ಯರೂಪ ಬಂದಂತೆ ಕಾಣುವ ವ್ಯಕ್ತಿ. ಇವರ ಜತೆ ಚರ್ಚೆ ಮಾಡುವಾಗ, ಹೋರಾಟದ ವಿವರಗಳು, ದಮನಿತರ ಕಷ್ಟ, ವ್ಯವಸ್ಥೆಯನ್ನು ಕುರಿತ ಸಿಟ್ಟುಗಳು ಸಿಗುತ್ತಿದ್ದವು. ಇವರಿಗೆ ಹೋರಾಟದ ಪರಂಪರೆ ಪಿತ್ರಾರ್ಜಿತವಾಗಿ ಬಂದಿದೆ. ಆಂಧ್ರದ ಕಮ್ಯುನಿಸ್ಟ್ ಚಳವಳಿಯಲ್ಲಿ ಹುತಾತ್ಮರಾದ ಒಬ್ಬರ ಹೆಸರನ್ನು ಅವರ ತಂದೆಯವರು ಅವರಿಗಿಟ್ಟಿದ್ದಾರೆ. ಆದರೆ ಅವರ ಜೀವನ ಚರಿತ್ರೆ ನೋಡಿದರೆ, ಸನ್ನಿವೇಶದ ಒತ್ತಡಗಳೇ ಅವರನ್ನು ಹೋರಾಟಗಾರನನ್ನಾಗಿ ರೂಪಿಸಿವೆ ಎಂದು ಮನವರಿಕೆಯಾಗುತ್ತದೆ.

ನಮ್ಮ ದೈನಿಕ ನುಡಿಗಟ್ಟಿನಲ್ಲಿ ಬೀದಿಹೋರಾಟ ಬೀದಿನಾಟಕ ಬೀದಿಕಾವ್ಯ ಬೀದಿಗಾಯಕರು ಬೀದಿಹೋಟೆಲು- ಮುಂತಾದ ಶಬ್ದಗಳನ್ನು ಬಳಸುತ್ತೇವೆ. ಇಲ್ಲೆಲ್ಲ ಬೀದಿ ಎಂದರೆ ಧೂಳಿನ ಜಾಗ, ಸಾಮಾನ್ಯ ಜನರು ಹರಿದಾಡುವ ಸ್ಥಳ, ಪ್ರತಿಷ್ಠಿತ ನೆಲೆಯಲ್ಲಿರುವುದಕ್ಕೆ ಪರ್ಯಾಯವಾಗಿ ನೆಲದ ಮೇಲೆ ಬೇರುಬಿಟ್ಟಿರುವುದಕ್ಕೆ ಪ್ರತೀಕ ಎಂದೆಲ್ಲ ಅರ್ಥಗಳಿವೆ. ಸಿದ್ಧಲಿಂಗಯ್ಯನವರ ಕವಿತೆಯಲ್ಲಿ ‘ಬೀದಿಯಲ್ಲಿ ಬಿದ್ದೋರು’ ಎನ್ನುವುದು ನೆಲೆಕಳೆದುಕೊಂಡಿರುವ ತಬ್ಬಲಿ ಅವಸ್ಥೆಯನ್ನು ಸೂಚಿಸುತ್ತದೆ. ‘ಬೀದಿಗೆ ತಳ್ಳಿದರು’ ಎನ್ನುವ ಪದಪ್ರಯೋಗದಲ್ಲಿ ತಳ್ಳುವವರ ಕ್ರೌರ್ಯವೂ ಇದೆ. ತಳ್ಳಿಸಿಕೊಂಡವರಿಗೆ ಬೀದಿ ಅಂತಃಕರಣದಿಂದ ಆಶ್ರಯದಾತನಾಗುತ್ತಿರುವ ದನಿಯೂ ಇದೆ. ತಮ್ಮ ಬಾಳನ್ನೆಲ್ಲ ಭಾರದ್ವಾಜರು ಬೀದಿಗಳಲ್ಲೇ ಕಳೆದವರು. ಬೀದಿಯಲ್ಲಿ ಬಿದ್ದವರ ಪರವಾಗಿ, ಅವರನ್ನು ಹಾಗೆ ಬೀಳಿಸಿದವರ ಮುಂದೆ ಬೀದಿಯಲ್ಲಿ ಧರಣಿಕೂರುವ, ಮನವಿಪತ್ರ ಸಲ್ಲಿಸುವ, ಜೈಲ್‌ಭರೊ ಮಾಡುವ, ಕಚೇರಿಗೆ ಮುತ್ತಿಗೆಹಾಕುವ, ಮುಖ್ಯಮಂತ್ರಿಗಳಿಗೆ ಘೇರಾವ್ ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು. ತಮ್ಮ ಬೀದಿ ಹೋರಾಟಗಳ ಫಲವಾಗಿ ಜೈಲು ಕಂಡವರು. ಬೀದಿ ಹೋರಾಟಕ್ಕೆ ಘನತೆ ಮತ್ತು ನಿರಂತರತೆಯನ್ನು ತಂದಕೊಟ್ಟ ವ್ಯಕ್ತಿ ಅವರು.

ಭಾರದ್ವಾಜರು ಮೂಲತಃ ಒಬ್ಬ ಟ್ರೇಡ್ ಯೂನಿಯನಿಸ್ಟ್. ಟ್ರೇಡ್ ಯೂನಿಯನ್ ಸಂಸ್ಕೃತಿಯೇ ದೇಶದ ನಕ್ಷೆಯಿಂದ ಕಣ್ಮರೆಯಾಗುತ್ತಿರುವ ಕಾಲದಲ್ಲಿ, ಅವರೊಬ್ಬ ಅಳಿವಿನಂಚಿನಲ್ಲಿರುವ ಜೀವಿಯಂತೆ ತೋರುತ್ತಾರೆ. ಅವರು ತಮ್ಮ ಅರ್ಧಶತಮಾನದ ಬದುಕಿನಲ್ಲಿ ಕಟ್ಟಿರುವ ಹೋರಾಟಗಳ ಪಟ್ಟಿ ನೋಡಿದರೆ ಸೋಜಿಗ ಮತ್ತು ಅಭಿಮಾನ ಹುಟ್ಟುತ್ತದೆ. ಹೋಟೆಲ್ ಕಾರ್ಮಿಕರು, ಇಟ್ಟಿಗೆ ಭಟ್ಟಿಯವರು, ಸೈಕಲ್ ರಿಕ್ಷಾದವರು, ರೈಸ್‌ಮಿಲ್ ಕಾರ್ಮಿಕರು, ಬಸ್ ಕಾರ್ಮಿಕರು, ಟ್ರ್ಯಾಕ್ಟರ್ ಅವಘಡದಲ್ಲಿ ನೀರುಪಾಲಾದ ಕೂಲಿಕಾರ ಕುಟುಂಬಗಳು, ಹಮಾಲರು, ಕೋಮುವಾದಕ್ಕೆ ಬಲಿಪಶುಗಳಾದ ಮುಸ್ಲಿಮರು, ಅಸ್ಪೃಶ್ಯತೆಗೆ ಈಡಾಗುವ ದಲಿತರು, ರೈತರು, ಕುಯಿಲಾದ ಭತ್ತದ ಗದ್ದೆಯಲ್ಲಿ ಇಲಿ ಹಿಡಿಯುವವರು-ಹೀಗೆ ಅವರ ಜೊತೆಗೆಲ್ಲಾ ಹೋರಾಟ ನಡೆಸಿದ್ದಾರೆ. ಈ ಹೋರಾಟದ ಪಟ್ಟಿಯಲ್ಲಿ ಅವರು ಉಳಿಸಿದ ಬಸನಾಳ ಕೆರೆಯೂ, ಅಪರಾಧಿಗಳಿಗೆ ಶಿಕ್ಷೆಯಾಗಲು ಚಳವಳಿ ಮಾಡುತ್ತ ಕೊಲೆಯಾದ ಯಲ್ಲಾಲಿಂಗನ ಕುಟುಂಬವೂ ಸೇರಿವೆ. ದೊಡ್ಡ ಕಾರ್ಖಾನೆಯಲ್ಲಿ ಟ್ರೇಡ್ ಯೂನಿಯನಿಸ್ಟ್ ಆಗುವುದು ಸುಲಭ ಮತ್ತು ಲಾಭದಾಯಕ. ಆದರೆ ಅಸಂಘಟಿತ ಕಾರ್ಮಿಕರ ಪರವಾಗಿ ಸ್ಥಳೀಯ ಅಡಚಣೆಗಳ ಜೊತೆಗೆ ಕೆಲಸ ಮಾಡುವುದು ಸವಾಲು. ಈ ಸವಾಲನ್ನು ಎತ್ತಿಕೊಂಡು ಭಾರದ್ವಾಜರು ಆಳುವ ವ್ಯವಸ್ಥೆಯ ವಿರುದ್ಧ ಚಳವಳಿ ಮತ್ತು ಕಾನೂನಾತ್ಮಕ ಹೋರಾಟಗಳನ್ನು ಮಾಡಿದವರು. ಅವರು ಯಾರೆಲ್ಲರ ಪರವಾಗಿ ಮತ್ತು ವಿರುದ್ಧವಾಗಿ, ಯಾವ್ಯಾವ ಕಾರಣಗಳಿಂದ ಹೋರಾಟ ಮಾಡಿದ್ದಾರೆ ಎಂಬ ವಿವರಗಳು, ಪರೋಕ್ಷವಾಗಿ ಅಮಾನುಷಗೊಂಡಿರುವ ಭಾರತದ ಸಾಮಾಜಿಕ ರಾಜಕೀಯ ವಾಸ್ತವಿಕತೆಯ ಚಿತ್ರಗಳೂ ಆಗಿವೆ. ಯಾಕೆಂದರೆ, ಈ ವಿವರಗಳು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯಾಲಯ, ಪೊಲೀಸು, ಸರ್ಕಾರ ಮತ್ತು ಅಧಿಕಾರಿಗಳ ಅದಕ್ಷತೆ ಮತ್ತು ವಿಫಲತೆಯ ಕಥೆಯನ್ನು ನಿರೂಪಿಸುತ್ತವೆ. ತಮ್ಮ ಒಂದು ಸಂದರ್ಶನದಲ್ಲಿ ಭಾರದ್ವಾಜರು ಭಾರತದ ಆರ್ಥಿಕ ಸಾಮಾಜಿಕ ರಾಜಕೀಯ ವಾಸ್ತವತೆಯನ್ನು ‘ಒಳ್ಳೆಯ ಮುಖಲಕ್ಷಣವಿದ್ದು ಮೈತುಂಬ ರೋಗಗಳನ್ನೂ ಹೊಂದಿರುವ ವ್ಯಕ್ತಿ’ಗೆ ಹೋಲಿಸುತ್ತಾರೆ. ವೈರುಧ್ಯಗಳನ್ನು ಕಟುವಾಗಿ ಕಾಣಿಸುವ ರೂಪಕವಿದು.

ದೇಶವ್ಯಾಪೀ ಪ್ರಭಾವ ಬೀರಬಹುದಾದ ಪಕ್ಷ ಸಂಘಟನೆ ಮತ್ತು ನಾಯಕತ್ವಗಳ ರೂಪದಲ್ಲಿ, ಎದುರಿಗಿರುವ ಸಮಾಜವನ್ನು ಬದಲಾಯಿಸಲು ಮಾಡುವ ಹೋರಾಟಗಳ ಒಂದು ಮಾದರಿಯಿದೆ. ಸ್ಥಳೀಯವಾದ ಪರಿಮಿತವಾದ ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ನೆಚ್ಚಿಕೊಂಡು, ಸ್ಥಳೀಯ ವ್ಯಕ್ತಿಗಳ ಮತ್ತು ಸಂಘಟನೆಗಳ ಸಹಭಾಗಿತ್ವದಲ್ಲಿ ಸಮಸ್ಯೆಗಳನ್ನು ನಿವಾರಿಸುವ ಇನ್ನೊಂದು ಮಾದರಿಯಿದೆ. ಮ್ಯಾಕ್ರೋ ಹೋರಾಟಗಳ ಮಾದರಿಗಳ ಹಾಗೆ ಈ ಮೈಕ್ರೊ ಹೋರಾಟಗಳ ಮಾದರಿಯ ಕೆಲಸಗಳು ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ವರದಿಯಾಗುವುದಿಲ್ಲ. ಟಿವಿಗಳಲ್ಲಿ ಬರುವುದಿಲ್ಲ. ಭಾರದ್ವಾಜರದು ಎರಡನೆಯ ಮಾದರಿಯ ಹೋರಾಟ. ಅವರೊಬ್ಬ ಎಲೆಮರೆಯ ಕಾಯಿಯಂತಹ ನಾಯಕ. ಅಧ್ಯಾತ್ಮವಾದಿಯಾದ ಕೊಪ್ಪಳದ ವಿಠ್ಠಪ್ಪ ಗೋರಂಟ್ಲಿ ಮತ್ತು ಭಾರದ್ವಾಜರಂತಹ ಎಡಪಂಥೀಯ ಚಳವಳಿಗಾರರು ಕೂಡಿ ಮಾಡಿದ ಜಂಟಿ ಹೋರಾಟಗಳು ಸೋಜಿಗದ ಸಂಗತಿ. ಇದನ್ನು ಒರಟು ವೈಚಾರಿಕತೆಯ ಕಣ್ಣಲ್ಲಿ ಹೋರಾಟಗಳಲ್ಲಿರುವ ವೈರುಧ್ಯವೆಂದು ನೋಡುವ ಸಾಧ್ಯತೆಯಿದೆ. ಆದರೆ ಇದನ್ನು ನಮ್ಮ ಮುಂದೆ ತೆರೆದಿರುವ ಹೊಸಸಾಧ್ಯತೆ ಎಂದು ನೋಡಬೇಕು. ನಾನು ಈಚೆಗೆ ಓದಿದ ದಲಿತ ಚಳವಳಿಗಾರ ಚಂದ್ರಪ್ಪನವರ ಬಗೆಗಿನ ‘ಚಂದ್ರಶಿಕಾರಿ’ ಮತ್ತು ದಾವಣಗೆರೆಯ ಕಾರ್ಮಿಕ ಚಳವಳಿ ಕುರಿತ ಇಮ್ತಿಯಾಜ್ ಅಹಮದರ ‘ಕಪ್ಪುನೆಲದ ಕೆಂಪುಗಾಥೆ’ ಕೃತಿಗಳಲ್ಲೂ ಇಂತಹುದೇ ಸ್ಥಳೀಯ ವೈರುಧ್ಯಗಳ, ಸೋಲುಗೆಲುವುಗಳ ಸಮ್ಮಿಶ್ರ ಸನ್ನಿವೇಶಗಳಿವೆ. ನಾವು ನೈತಿಕ ಆದರ್ಶಗಳಲ್ಲಿ ತೀರ್ಪುಕೊಡುವ ವಿಧಾನವನ್ನು ಬಿಟ್ಟು, ಭಾರತೀಯ ಸಮಾಜ ಮತ್ತು ರಾಜಕಾರಣದ ಸುಡು ವಾಸ್ತವವು ಸೃಷ್ಟಿಸುವ ವೈರುಧ್ಯಗಳಲ್ಲೇ ಚಳವಳಿಗಳನ್ನು ವಿಶ್ಲೇಷಿಸಬೇಕೆಂಬ ಎಚ್ಚರವನ್ನು ಈ ಕೃತಿಗಳು ಕಾಣಿಸುತ್ತವೆ.

ಭಾರತದಲ್ಲಿ ಮತೀಯವಾದ ಮತ್ತು ಕಾರ್ಪೊರೆಟ್ ಬಂಡವಾಳದ ಅಪವಿತ್ರ ಕೂಡಿಕೆಯ ದಿನಗಳು ಶುರುವಾದ ಬಳಿಕ, ಜನಪರ ಚಳವಳಿಗಳು ಹಿನ್ನಡೆ ಅನುಭವಿಸಿವೆ. ಎಡಪಕ್ಷಗಳು ಚುನಾವಣ ರಾಜಕಾರಣದಲ್ಲಿ ಅಪ್ರಸ್ತುತಗೊಳ್ಳುವಂತಹ ಸನ್ನಿವೇಶವು ಎದುರಾಗುತ್ತಿದೆ. ಕೆಲವು ಚಳವಳಿಗಾರರು ವ್ಯವಸ್ಥೆಯ ಮಧ್ಯವರ್ತಿಗಳಾಗುತ್ತಿರುವ ಮತ್ತು ಬಿಕರಿಯಾಗುತ್ತಿರುವ ಸುದ್ದಿಗಳನ್ನು ಕೇಳುತ್ತಿದ್ದೇವೆ. ಇಂತಹ ಕೆಟ್ಟಕಾಲದಲ್ಲೂ ಮುಕ್ಕಾಗದೆ ಉಳಿದುಕೊಂಡ ಚಳವಳಿಗಾರರಲ್ಲಿ ಭಾರದ್ವಾಜರೂ ಒಬ್ಬರು. ಇವರ ನೈತಿಕ ಛಲವನ್ನು, ಇವರ ಸರಳತೆ, ಬದ್ಧತೆ, ದಿಟ್ಟತನ, ಸಿಟ್ಟು, ಅಂತಃಕರಣಗಳು ಕಾಪಾಡಿರಬಹುದು. ಜೀವನದಲ್ಲಿ ಸರ್ಕಾರಿ ನೌಕರ, ಕಾರ್ಮಿಕ, ಮೆಕ್ಯಾನಿಕ್, ರೈತ, ಡೆಲಿವರಿಬಾಯ್, ಕಾರ್ಮಿಕ ನಾಯಕ ಮುಂತಾದ ಅವಸ್ಥೆಗಳನ್ನು ಹಾಯುತ್ತ ಪಡೆದಿರುವ ಅನುಭವವು ರಕ್ಷಿಸಿರಬಹುದು. ಗಡಿಪಾರು ಜೈಲು ಬಹಿಷ್ಕಾರ ಬಡತನಗಳ ಕಷ್ಟಗಳು ಉಳಿಸಿರಬಹುದು. ಅರ್ಧಶತಮಾನ ಕಾಲ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ಸಮಾಜದ ತಬ್ಬಲಿಗಳ ಪರವಾಗಿ ಹೋರಾಡುವುದು ಸಣ್ಣ ಸಂಗತಿಯಲ್ಲ.

ಭಾರದ್ವಾಜರಂತಹ ಸ್ಥಳೀಯ ಹೋರಾಟಗಾರರು, ತಮ್ಮ ಬದ್ಧತೆ ಮತ್ತು ನೈತಿಕತೆಯಿಂದ ಮಾಡಿರುವ ಕೆಲಸ, ಜನರ ಬಗ್ಗೆ ಕಳಕಳಿಸಿ ಆಡಿರುವ ಮಾತು, ಮತೀಯವಾದಕ್ಕೂ ಮಾರುಕಟ್ಟೆ ಸಂಸ್ಕೃತಿಗೂ ಜಾತಿಮತಗಳ ಅಸ್ಮಿತೆಯ ರಾಜಕಾರಣಕ್ಕೂ ತೆತ್ತುಕೊಂಡಿರುವ ಸಮುದಾಯಕ್ಕೆ ಅಪೀಲಾಗದೆ, ಅರಣ್ಯದಲ್ಲಿ ಮಾಡುವ ಕೂಗುಗಳಾಗುತ್ತವೆಯೇ ಎಂಬ ಆತಂಕ ಉಂಟಾಗುತ್ತದೆ. ಇದನ್ನು ಓದುವಾಗ, ನಮ್ಮ ಮುಂದೆ ಬೆಳೆದುನಿಂತಿರುವ ಫ್ಯಾಸಿಸಂ ಮತ್ತು ಕಾರ್ಪೊರೆಟ್ ಯಜಮಾನಿಕೆಗಳನ್ನು ಮುಖಾಮುಖಿ ಮಾಡಲಾದರೂ, ಭಾರತದ ಎಡಪಕ್ಷಗಳು ಒಗ್ಗೂಡದೆ ಬಿಡಿಬಿಡಿಯಾಗಿ ನಿಂತಿರುವ ವೈರುಧ್ಯಕ್ಕೆ ಮನಸ್ಸು ಭಾರವಾಗುತ್ತದೆ. ಅವರ ಬದುಕು ಈಗಿನ ಚಳವಳಿಗಾರರಿಗೆ ಮಾತ್ರವಲ್ಲ, ಮುಂದಿನ ತಲೆಮಾರಿಗೂ ಲೋಕದ ನೋವಿಗೆ ಮಿಡುಕುವ ಜೀವವೊಂದು ಇತ್ತು ಎಂದು ಕಾಣಿಸುತ್ತದೆ. ಆಂಧ್ರದಿಂದ ಬಂದ ಲಕ್ಷ್ಮಣ ಭಾರದ್ವಾಜ ಕರ್ನಾಟಕ ಆಂಧ್ರದ ಬಾಂಧವ್ಯವನ್ನು ನಾವು ಭೀಮಕವಿಯ ‘ಬಸವಪುರಾಣ’, ತೆಲುಗು ಸಿನಿಮಾಗಳ ಮತ್ತು ಎನ್‌ಟಿಆರ್ ರಾಜಕಾರಣದ ಮೂಲಕ ಕಟ್ಟಿರುವುದುಂಟು. ಆದರೆ ಎರಡೂ ರಾಜ್ಯಗಳಲ್ಲಿ ನಡೆದ ಹೋರಾಟ ಪರಂಪರೆಯಲ್ಲಿ ಆಗಿರುವ ಕೊಡುಪಡೆಯ ವಿವರಗಳ ಕಟ್ಟಿದರೆ, ಅದರಲ್ಲಿ ಭಾರದ್ವಾಜರ ಪಾತ್ರವೂ ಇರುತ್ತದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ಬಿಲ್ಕಿಸ್ ಬಾನೋಳ ಮುಗಿಯದ ವನವಾಸ ಮತ್ತು ಸಂಸ್ಕಾರವಂತ ಅತ್ಯಾಚಾರಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ; ಪ್ರತಿಭಟನಾ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ಸಾಧ್ಯತೆ

ಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡುವ ನಿರೀಕ್ಷೆಯಿರುವ ಬೆನ್ನಲ್ಲೇ, ವಿದ್ಯಾರ್ಥಿಗಳ ಹೋರಾಟಕ್ಕೆ ಪಕ್ಷವು ಬೆಂಬಲ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಸಂಘವನ್ನು (ಜೆಎಂಐಎಸ್‌ಯು)...

ಎಂಎಲ್‌ಸಿ ಚುನಾವಣೆ ಸೋಲಿನ ಹಿಂದಿರುವ ರಾಜಕೀಯ – ಸಂಘಟನಾತ್ಮಕ ಕಾರಣಗಳ ಕುರಿತು ಪರಾಮರ್ಶಿಸುತ್ತೇವೆ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್

ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಸೋಲಿನ ಹಿಂದಿರುವ ರಾಜಕೀಯ ಹಾಗೂ ಸಂಘಟನಾತ್ಮಕ ಕಾರಣಗಳ ಕುರಿತು ಸಮಗ್ರ ಪರಾಮರ್ಶೆ ನಡೆಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್...

ಸ್ಪೇನ್‌ನಲ್ಲಿ ಅತಿ ವೇಗದ ರೈಲುಗಳ ನಡುವೆ ಡಿಕ್ಕಿ; ಕನಿಷ್ಠ 46 ಮಂದಿ ಸಾವು

ಸ್ಪೇನ್‌ನ ಟೊಲೆಡೊ ಪ್ರಾಂತ್ಯದಲ್ಲಿ ಬುಧವಾರ ಬೆಳಿಗ್ಗೆ ಎರಡು ಅತಿ ವೇಗದ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 46 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಪೇನ್‌ನ ಎಬಿಸಿ (ಎಬಿಸಿ) ಸುದ್ದಿ ಸಂಸ್ಥೆ ವರದಿ ಮಾಡಿದೆ....

ಇಸ್ರೇಲ್ ಚುನಾವಣೆಯಲ್ಲಿ ಸಿಗದ ಬಹುಮತ; ಆದರೂ ಗೆಲುವಿನ ಹಕ್ಕು ಮಂಡಿಸಿದ ನೆತನ್ಯಾಹು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅರಬ್ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಜೆರುಸಲೇಮ್‌ನಲ್ಲಿರುವ ಲಿಕುಡ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಹೂದಿ ಮತ್ತು ಝಿಯೋನಿಸ್ಟ್...

ದೆಹಲಿ: 2020ರ ಮುಸ್ಲಿಂ ವಿರೋಧಿ ಹಿಂಸಾಚಾರದಲ್ಲಿ 22 ವರ್ಷದ ಯುವಕನ ಹತ್ಯೆ: ಐವರು ಹಿಂದುತ್ವವಾದಿಗಳಿಗೆ ಏಳು ವರ್ಷ ಜೈಲು ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಮುಸ್ಲಿಂ ವಿರೋಧಿ ಹಿಂಸಾಚಾರದ ಸಂದರ್ಭದಲ್ಲಿ 22 ವರ್ಷದ ಮುಸ್ಲಿಂ ಯುವಕ ಮೋನಿಷ್  ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಐವರು ಹಿಂದುತ್ವವಾದಿ ಪುರುಷರಿಗೆ ವಿಧಿಸಲಾಗಿದ್ದ ಏಳು ವರ್ಷಗಳ...

ಅರ್ನಬ್ ಚಂಡಮಾರುತ: ಆಂಧ್ರಪ್ರದೇಶದಲ್ಲಿ ಮೂವರ ಸಾವು; ಹಲವು ಮನೆಗಳಿಗೆ ಹಾನಿ

ಅರ್ನಬ್ ಚಂಡಮಾರುತವು ಆಂಧ್ರಪ್ರದೇಶದಲ್ಲಿ ಭಾರೀ ಹಾನಿಯನ್ನುಂಟುಮಾಡಿದೆ. ಚಂಡಮಾರುತದಿಂದಾಗಿ ಮೂವರು ಮೃತಪಟ್ಟಿದ್ದು, 31 ಮನೆಗಳು ಹಾನಿಗೀಡಾಗಿವೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್‌)ಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಚಂಡಮಾರುತವು ಪುದುಚೇರಿಯ ಯಾನಂ ಸಮೀಪದ...

ಉತ್ತರ ಪ್ರದೇಶದ ವಿಧಾನ ಪರಿಷತ್ತಿನ ಫಲಿತಾಂಶ: ವಾರಣಾಸಿಯ ಎರಡೂ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷಕ್ಕೆ ಭರ್ಜರಿ ಗೆಲುವು

ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (ಎಸ್‌ಪಿ) ಗಮನಾರ್ಹ ಸಾಧನೆ ಮಾಡಿದೆ. ವಾರಣಾಸಿ ಶಿಕ್ಷಕರ...

ಎಂಎಲ್‌ಸಿ ಚುನಾವಣೆ ಫಲಿತಾಂಶ: ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟಕ್ಕೆ ಜಯ; ಕಾಂಗ್ರೆಸ್‌ಗೆ ಭಾರೀ ಹಿನ್ನಡೆ

ಕರ್ನಾಟಕ ವಿಧಾನ ಪರಿಷತ್ತಿನ ಇತ್ತೀಚಿನ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ವಿಫಲವಾಗಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದರೆ, ಅದರ...

ಥೇಣಿ ಉಪಜೈಲಿನಿಂದ 17 ವಿಚಾರಣಾಧೀನ ಕೈದಿಗಳ ಪರಾರಿ ಪ್ರಕರಣ; ಡ್ರೋನ್ ತಂತ್ರಜ್ಞಾನದ ನೆರವಿನಿಂದ 13 ಮಂದಿ ಸೆರೆ

ತಮಿಳುನಾಡಿನ ಥೇಣಿ ಜಿಲ್ಲಾ ಜೈಲಿನಿಂದ 17 ಕೈದಿಗಳು ಪರಾರಿಯಾದ ಒಂದು ದಿನದೊಳಗೆ, ಮಂಗಳವಾರ ಸಂಜೆಯ ವೇಳೆಗೆ ತಮಿಳುನಾಡು ಪೊಲೀಸರು ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಅವರ ಪೈಕಿ 13 ಮಂದಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ವಲಯದ...

ಬೆಂಗಳೂರಿನಲ್ಲಿ 46.88 ಲಕ್ಷ ಮತದಾರರ ಹೆಸರು ಕಟ್‌: ಎಸ್‌ಐಆರ್‌ ಬಳಿಕ ಅರ್ಧದಷ್ಟು ಮತದಾರರು ಪಟ್ಟಿಯಿಂದ ಹೊರಕ್ಕೆ 

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಂಡಿದ್ದು, ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ಬರೋಬ್ಬರಿ 46.88 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಂದರೆ, ಎಸ್‌ಐಆರ್‌ ಆರಂಭಕ್ಕೂ ಮುನ್ನ ನಗರದಲ್ಲಿದ್ದ ಒಟ್ಟು...