Homeಕರ್ನಾಟಕಗಂಗಾವತಿ ಸೀಮೆಯ ಬೀದಿಹೋರಾಟಗಾರ

ಗಂಗಾವತಿ ಸೀಮೆಯ ಬೀದಿಹೋರಾಟಗಾರ

- Advertisement -
- Advertisement -

ನಾನು ಹಂಪಿ ಸೀಮೆಗೆ ಅಧ್ಯಾಪಕನಾಗಿ ಬಂದ ಬಳಿಕ, ಭಾರದ್ವಾಜರನ್ನು ಅನೇಕ ಕಾರ್ಯಕ್ರಮಗಳಲ್ಲಿ ಭೇಟಿ ಆಗುತ್ತಿದ್ದೆ. ಅವರ ಹೆಗ್ಗುರುತೆಂದರೆ ಕಪ್ಪುಪ್ಯಾಂಟು, ಬಿಳಿಅಂಗಿ, ಹೆಗಲಿಗೆ ಕೆಂಪು ಟವೆಲು. ಹೋರಾಟದ ತ್ರಿವರ್ಣಕ್ಕೆ ಮನುಷ್ಯರೂಪ ಬಂದಂತೆ ಕಾಣುವ ವ್ಯಕ್ತಿ. ಇವರ ಜತೆ ಚರ್ಚೆ ಮಾಡುವಾಗ, ಹೋರಾಟದ ವಿವರಗಳು, ದಮನಿತರ ಕಷ್ಟ, ವ್ಯವಸ್ಥೆಯನ್ನು ಕುರಿತ ಸಿಟ್ಟುಗಳು ಸಿಗುತ್ತಿದ್ದವು. ಇವರಿಗೆ ಹೋರಾಟದ ಪರಂಪರೆ ಪಿತ್ರಾರ್ಜಿತವಾಗಿ ಬಂದಿದೆ. ಆಂಧ್ರದ ಕಮ್ಯುನಿಸ್ಟ್ ಚಳವಳಿಯಲ್ಲಿ ಹುತಾತ್ಮರಾದ ಒಬ್ಬರ ಹೆಸರನ್ನು ಅವರ ತಂದೆಯವರು ಅವರಿಗಿಟ್ಟಿದ್ದಾರೆ. ಆದರೆ ಅವರ ಜೀವನ ಚರಿತ್ರೆ ನೋಡಿದರೆ, ಸನ್ನಿವೇಶದ ಒತ್ತಡಗಳೇ ಅವರನ್ನು ಹೋರಾಟಗಾರನನ್ನಾಗಿ ರೂಪಿಸಿವೆ ಎಂದು ಮನವರಿಕೆಯಾಗುತ್ತದೆ.

ನಮ್ಮ ದೈನಿಕ ನುಡಿಗಟ್ಟಿನಲ್ಲಿ ಬೀದಿಹೋರಾಟ ಬೀದಿನಾಟಕ ಬೀದಿಕಾವ್ಯ ಬೀದಿಗಾಯಕರು ಬೀದಿಹೋಟೆಲು- ಮುಂತಾದ ಶಬ್ದಗಳನ್ನು ಬಳಸುತ್ತೇವೆ. ಇಲ್ಲೆಲ್ಲ ಬೀದಿ ಎಂದರೆ ಧೂಳಿನ ಜಾಗ, ಸಾಮಾನ್ಯ ಜನರು ಹರಿದಾಡುವ ಸ್ಥಳ, ಪ್ರತಿಷ್ಠಿತ ನೆಲೆಯಲ್ಲಿರುವುದಕ್ಕೆ ಪರ್ಯಾಯವಾಗಿ ನೆಲದ ಮೇಲೆ ಬೇರುಬಿಟ್ಟಿರುವುದಕ್ಕೆ ಪ್ರತೀಕ ಎಂದೆಲ್ಲ ಅರ್ಥಗಳಿವೆ. ಸಿದ್ಧಲಿಂಗಯ್ಯನವರ ಕವಿತೆಯಲ್ಲಿ ‘ಬೀದಿಯಲ್ಲಿ ಬಿದ್ದೋರು’ ಎನ್ನುವುದು ನೆಲೆಕಳೆದುಕೊಂಡಿರುವ ತಬ್ಬಲಿ ಅವಸ್ಥೆಯನ್ನು ಸೂಚಿಸುತ್ತದೆ. ‘ಬೀದಿಗೆ ತಳ್ಳಿದರು’ ಎನ್ನುವ ಪದಪ್ರಯೋಗದಲ್ಲಿ ತಳ್ಳುವವರ ಕ್ರೌರ್ಯವೂ ಇದೆ. ತಳ್ಳಿಸಿಕೊಂಡವರಿಗೆ ಬೀದಿ ಅಂತಃಕರಣದಿಂದ ಆಶ್ರಯದಾತನಾಗುತ್ತಿರುವ ದನಿಯೂ ಇದೆ. ತಮ್ಮ ಬಾಳನ್ನೆಲ್ಲ ಭಾರದ್ವಾಜರು ಬೀದಿಗಳಲ್ಲೇ ಕಳೆದವರು. ಬೀದಿಯಲ್ಲಿ ಬಿದ್ದವರ ಪರವಾಗಿ, ಅವರನ್ನು ಹಾಗೆ ಬೀಳಿಸಿದವರ ಮುಂದೆ ಬೀದಿಯಲ್ಲಿ ಧರಣಿಕೂರುವ, ಮನವಿಪತ್ರ ಸಲ್ಲಿಸುವ, ಜೈಲ್‌ಭರೊ ಮಾಡುವ, ಕಚೇರಿಗೆ ಮುತ್ತಿಗೆಹಾಕುವ, ಮುಖ್ಯಮಂತ್ರಿಗಳಿಗೆ ಘೇರಾವ್ ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು. ತಮ್ಮ ಬೀದಿ ಹೋರಾಟಗಳ ಫಲವಾಗಿ ಜೈಲು ಕಂಡವರು. ಬೀದಿ ಹೋರಾಟಕ್ಕೆ ಘನತೆ ಮತ್ತು ನಿರಂತರತೆಯನ್ನು ತಂದಕೊಟ್ಟ ವ್ಯಕ್ತಿ ಅವರು.

ಭಾರದ್ವಾಜರು ಮೂಲತಃ ಒಬ್ಬ ಟ್ರೇಡ್ ಯೂನಿಯನಿಸ್ಟ್. ಟ್ರೇಡ್ ಯೂನಿಯನ್ ಸಂಸ್ಕೃತಿಯೇ ದೇಶದ ನಕ್ಷೆಯಿಂದ ಕಣ್ಮರೆಯಾಗುತ್ತಿರುವ ಕಾಲದಲ್ಲಿ, ಅವರೊಬ್ಬ ಅಳಿವಿನಂಚಿನಲ್ಲಿರುವ ಜೀವಿಯಂತೆ ತೋರುತ್ತಾರೆ. ಅವರು ತಮ್ಮ ಅರ್ಧಶತಮಾನದ ಬದುಕಿನಲ್ಲಿ ಕಟ್ಟಿರುವ ಹೋರಾಟಗಳ ಪಟ್ಟಿ ನೋಡಿದರೆ ಸೋಜಿಗ ಮತ್ತು ಅಭಿಮಾನ ಹುಟ್ಟುತ್ತದೆ. ಹೋಟೆಲ್ ಕಾರ್ಮಿಕರು, ಇಟ್ಟಿಗೆ ಭಟ್ಟಿಯವರು, ಸೈಕಲ್ ರಿಕ್ಷಾದವರು, ರೈಸ್‌ಮಿಲ್ ಕಾರ್ಮಿಕರು, ಬಸ್ ಕಾರ್ಮಿಕರು, ಟ್ರ್ಯಾಕ್ಟರ್ ಅವಘಡದಲ್ಲಿ ನೀರುಪಾಲಾದ ಕೂಲಿಕಾರ ಕುಟುಂಬಗಳು, ಹಮಾಲರು, ಕೋಮುವಾದಕ್ಕೆ ಬಲಿಪಶುಗಳಾದ ಮುಸ್ಲಿಮರು, ಅಸ್ಪೃಶ್ಯತೆಗೆ ಈಡಾಗುವ ದಲಿತರು, ರೈತರು, ಕುಯಿಲಾದ ಭತ್ತದ ಗದ್ದೆಯಲ್ಲಿ ಇಲಿ ಹಿಡಿಯುವವರು-ಹೀಗೆ ಅವರ ಜೊತೆಗೆಲ್ಲಾ ಹೋರಾಟ ನಡೆಸಿದ್ದಾರೆ. ಈ ಹೋರಾಟದ ಪಟ್ಟಿಯಲ್ಲಿ ಅವರು ಉಳಿಸಿದ ಬಸನಾಳ ಕೆರೆಯೂ, ಅಪರಾಧಿಗಳಿಗೆ ಶಿಕ್ಷೆಯಾಗಲು ಚಳವಳಿ ಮಾಡುತ್ತ ಕೊಲೆಯಾದ ಯಲ್ಲಾಲಿಂಗನ ಕುಟುಂಬವೂ ಸೇರಿವೆ. ದೊಡ್ಡ ಕಾರ್ಖಾನೆಯಲ್ಲಿ ಟ್ರೇಡ್ ಯೂನಿಯನಿಸ್ಟ್ ಆಗುವುದು ಸುಲಭ ಮತ್ತು ಲಾಭದಾಯಕ. ಆದರೆ ಅಸಂಘಟಿತ ಕಾರ್ಮಿಕರ ಪರವಾಗಿ ಸ್ಥಳೀಯ ಅಡಚಣೆಗಳ ಜೊತೆಗೆ ಕೆಲಸ ಮಾಡುವುದು ಸವಾಲು. ಈ ಸವಾಲನ್ನು ಎತ್ತಿಕೊಂಡು ಭಾರದ್ವಾಜರು ಆಳುವ ವ್ಯವಸ್ಥೆಯ ವಿರುದ್ಧ ಚಳವಳಿ ಮತ್ತು ಕಾನೂನಾತ್ಮಕ ಹೋರಾಟಗಳನ್ನು ಮಾಡಿದವರು. ಅವರು ಯಾರೆಲ್ಲರ ಪರವಾಗಿ ಮತ್ತು ವಿರುದ್ಧವಾಗಿ, ಯಾವ್ಯಾವ ಕಾರಣಗಳಿಂದ ಹೋರಾಟ ಮಾಡಿದ್ದಾರೆ ಎಂಬ ವಿವರಗಳು, ಪರೋಕ್ಷವಾಗಿ ಅಮಾನುಷಗೊಂಡಿರುವ ಭಾರತದ ಸಾಮಾಜಿಕ ರಾಜಕೀಯ ವಾಸ್ತವಿಕತೆಯ ಚಿತ್ರಗಳೂ ಆಗಿವೆ. ಯಾಕೆಂದರೆ, ಈ ವಿವರಗಳು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯಾಲಯ, ಪೊಲೀಸು, ಸರ್ಕಾರ ಮತ್ತು ಅಧಿಕಾರಿಗಳ ಅದಕ್ಷತೆ ಮತ್ತು ವಿಫಲತೆಯ ಕಥೆಯನ್ನು ನಿರೂಪಿಸುತ್ತವೆ. ತಮ್ಮ ಒಂದು ಸಂದರ್ಶನದಲ್ಲಿ ಭಾರದ್ವಾಜರು ಭಾರತದ ಆರ್ಥಿಕ ಸಾಮಾಜಿಕ ರಾಜಕೀಯ ವಾಸ್ತವತೆಯನ್ನು ‘ಒಳ್ಳೆಯ ಮುಖಲಕ್ಷಣವಿದ್ದು ಮೈತುಂಬ ರೋಗಗಳನ್ನೂ ಹೊಂದಿರುವ ವ್ಯಕ್ತಿ’ಗೆ ಹೋಲಿಸುತ್ತಾರೆ. ವೈರುಧ್ಯಗಳನ್ನು ಕಟುವಾಗಿ ಕಾಣಿಸುವ ರೂಪಕವಿದು.

ದೇಶವ್ಯಾಪೀ ಪ್ರಭಾವ ಬೀರಬಹುದಾದ ಪಕ್ಷ ಸಂಘಟನೆ ಮತ್ತು ನಾಯಕತ್ವಗಳ ರೂಪದಲ್ಲಿ, ಎದುರಿಗಿರುವ ಸಮಾಜವನ್ನು ಬದಲಾಯಿಸಲು ಮಾಡುವ ಹೋರಾಟಗಳ ಒಂದು ಮಾದರಿಯಿದೆ. ಸ್ಥಳೀಯವಾದ ಪರಿಮಿತವಾದ ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ನೆಚ್ಚಿಕೊಂಡು, ಸ್ಥಳೀಯ ವ್ಯಕ್ತಿಗಳ ಮತ್ತು ಸಂಘಟನೆಗಳ ಸಹಭಾಗಿತ್ವದಲ್ಲಿ ಸಮಸ್ಯೆಗಳನ್ನು ನಿವಾರಿಸುವ ಇನ್ನೊಂದು ಮಾದರಿಯಿದೆ. ಮ್ಯಾಕ್ರೋ ಹೋರಾಟಗಳ ಮಾದರಿಗಳ ಹಾಗೆ ಈ ಮೈಕ್ರೊ ಹೋರಾಟಗಳ ಮಾದರಿಯ ಕೆಲಸಗಳು ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ವರದಿಯಾಗುವುದಿಲ್ಲ. ಟಿವಿಗಳಲ್ಲಿ ಬರುವುದಿಲ್ಲ. ಭಾರದ್ವಾಜರದು ಎರಡನೆಯ ಮಾದರಿಯ ಹೋರಾಟ. ಅವರೊಬ್ಬ ಎಲೆಮರೆಯ ಕಾಯಿಯಂತಹ ನಾಯಕ. ಅಧ್ಯಾತ್ಮವಾದಿಯಾದ ಕೊಪ್ಪಳದ ವಿಠ್ಠಪ್ಪ ಗೋರಂಟ್ಲಿ ಮತ್ತು ಭಾರದ್ವಾಜರಂತಹ ಎಡಪಂಥೀಯ ಚಳವಳಿಗಾರರು ಕೂಡಿ ಮಾಡಿದ ಜಂಟಿ ಹೋರಾಟಗಳು ಸೋಜಿಗದ ಸಂಗತಿ. ಇದನ್ನು ಒರಟು ವೈಚಾರಿಕತೆಯ ಕಣ್ಣಲ್ಲಿ ಹೋರಾಟಗಳಲ್ಲಿರುವ ವೈರುಧ್ಯವೆಂದು ನೋಡುವ ಸಾಧ್ಯತೆಯಿದೆ. ಆದರೆ ಇದನ್ನು ನಮ್ಮ ಮುಂದೆ ತೆರೆದಿರುವ ಹೊಸಸಾಧ್ಯತೆ ಎಂದು ನೋಡಬೇಕು. ನಾನು ಈಚೆಗೆ ಓದಿದ ದಲಿತ ಚಳವಳಿಗಾರ ಚಂದ್ರಪ್ಪನವರ ಬಗೆಗಿನ ‘ಚಂದ್ರಶಿಕಾರಿ’ ಮತ್ತು ದಾವಣಗೆರೆಯ ಕಾರ್ಮಿಕ ಚಳವಳಿ ಕುರಿತ ಇಮ್ತಿಯಾಜ್ ಅಹಮದರ ‘ಕಪ್ಪುನೆಲದ ಕೆಂಪುಗಾಥೆ’ ಕೃತಿಗಳಲ್ಲೂ ಇಂತಹುದೇ ಸ್ಥಳೀಯ ವೈರುಧ್ಯಗಳ, ಸೋಲುಗೆಲುವುಗಳ ಸಮ್ಮಿಶ್ರ ಸನ್ನಿವೇಶಗಳಿವೆ. ನಾವು ನೈತಿಕ ಆದರ್ಶಗಳಲ್ಲಿ ತೀರ್ಪುಕೊಡುವ ವಿಧಾನವನ್ನು ಬಿಟ್ಟು, ಭಾರತೀಯ ಸಮಾಜ ಮತ್ತು ರಾಜಕಾರಣದ ಸುಡು ವಾಸ್ತವವು ಸೃಷ್ಟಿಸುವ ವೈರುಧ್ಯಗಳಲ್ಲೇ ಚಳವಳಿಗಳನ್ನು ವಿಶ್ಲೇಷಿಸಬೇಕೆಂಬ ಎಚ್ಚರವನ್ನು ಈ ಕೃತಿಗಳು ಕಾಣಿಸುತ್ತವೆ.

ಭಾರತದಲ್ಲಿ ಮತೀಯವಾದ ಮತ್ತು ಕಾರ್ಪೊರೆಟ್ ಬಂಡವಾಳದ ಅಪವಿತ್ರ ಕೂಡಿಕೆಯ ದಿನಗಳು ಶುರುವಾದ ಬಳಿಕ, ಜನಪರ ಚಳವಳಿಗಳು ಹಿನ್ನಡೆ ಅನುಭವಿಸಿವೆ. ಎಡಪಕ್ಷಗಳು ಚುನಾವಣ ರಾಜಕಾರಣದಲ್ಲಿ ಅಪ್ರಸ್ತುತಗೊಳ್ಳುವಂತಹ ಸನ್ನಿವೇಶವು ಎದುರಾಗುತ್ತಿದೆ. ಕೆಲವು ಚಳವಳಿಗಾರರು ವ್ಯವಸ್ಥೆಯ ಮಧ್ಯವರ್ತಿಗಳಾಗುತ್ತಿರುವ ಮತ್ತು ಬಿಕರಿಯಾಗುತ್ತಿರುವ ಸುದ್ದಿಗಳನ್ನು ಕೇಳುತ್ತಿದ್ದೇವೆ. ಇಂತಹ ಕೆಟ್ಟಕಾಲದಲ್ಲೂ ಮುಕ್ಕಾಗದೆ ಉಳಿದುಕೊಂಡ ಚಳವಳಿಗಾರರಲ್ಲಿ ಭಾರದ್ವಾಜರೂ ಒಬ್ಬರು. ಇವರ ನೈತಿಕ ಛಲವನ್ನು, ಇವರ ಸರಳತೆ, ಬದ್ಧತೆ, ದಿಟ್ಟತನ, ಸಿಟ್ಟು, ಅಂತಃಕರಣಗಳು ಕಾಪಾಡಿರಬಹುದು. ಜೀವನದಲ್ಲಿ ಸರ್ಕಾರಿ ನೌಕರ, ಕಾರ್ಮಿಕ, ಮೆಕ್ಯಾನಿಕ್, ರೈತ, ಡೆಲಿವರಿಬಾಯ್, ಕಾರ್ಮಿಕ ನಾಯಕ ಮುಂತಾದ ಅವಸ್ಥೆಗಳನ್ನು ಹಾಯುತ್ತ ಪಡೆದಿರುವ ಅನುಭವವು ರಕ್ಷಿಸಿರಬಹುದು. ಗಡಿಪಾರು ಜೈಲು ಬಹಿಷ್ಕಾರ ಬಡತನಗಳ ಕಷ್ಟಗಳು ಉಳಿಸಿರಬಹುದು. ಅರ್ಧಶತಮಾನ ಕಾಲ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ಸಮಾಜದ ತಬ್ಬಲಿಗಳ ಪರವಾಗಿ ಹೋರಾಡುವುದು ಸಣ್ಣ ಸಂಗತಿಯಲ್ಲ.

ಭಾರದ್ವಾಜರಂತಹ ಸ್ಥಳೀಯ ಹೋರಾಟಗಾರರು, ತಮ್ಮ ಬದ್ಧತೆ ಮತ್ತು ನೈತಿಕತೆಯಿಂದ ಮಾಡಿರುವ ಕೆಲಸ, ಜನರ ಬಗ್ಗೆ ಕಳಕಳಿಸಿ ಆಡಿರುವ ಮಾತು, ಮತೀಯವಾದಕ್ಕೂ ಮಾರುಕಟ್ಟೆ ಸಂಸ್ಕೃತಿಗೂ ಜಾತಿಮತಗಳ ಅಸ್ಮಿತೆಯ ರಾಜಕಾರಣಕ್ಕೂ ತೆತ್ತುಕೊಂಡಿರುವ ಸಮುದಾಯಕ್ಕೆ ಅಪೀಲಾಗದೆ, ಅರಣ್ಯದಲ್ಲಿ ಮಾಡುವ ಕೂಗುಗಳಾಗುತ್ತವೆಯೇ ಎಂಬ ಆತಂಕ ಉಂಟಾಗುತ್ತದೆ. ಇದನ್ನು ಓದುವಾಗ, ನಮ್ಮ ಮುಂದೆ ಬೆಳೆದುನಿಂತಿರುವ ಫ್ಯಾಸಿಸಂ ಮತ್ತು ಕಾರ್ಪೊರೆಟ್ ಯಜಮಾನಿಕೆಗಳನ್ನು ಮುಖಾಮುಖಿ ಮಾಡಲಾದರೂ, ಭಾರತದ ಎಡಪಕ್ಷಗಳು ಒಗ್ಗೂಡದೆ ಬಿಡಿಬಿಡಿಯಾಗಿ ನಿಂತಿರುವ ವೈರುಧ್ಯಕ್ಕೆ ಮನಸ್ಸು ಭಾರವಾಗುತ್ತದೆ. ಅವರ ಬದುಕು ಈಗಿನ ಚಳವಳಿಗಾರರಿಗೆ ಮಾತ್ರವಲ್ಲ, ಮುಂದಿನ ತಲೆಮಾರಿಗೂ ಲೋಕದ ನೋವಿಗೆ ಮಿಡುಕುವ ಜೀವವೊಂದು ಇತ್ತು ಎಂದು ಕಾಣಿಸುತ್ತದೆ. ಆಂಧ್ರದಿಂದ ಬಂದ ಲಕ್ಷ್ಮಣ ಭಾರದ್ವಾಜ ಕರ್ನಾಟಕ ಆಂಧ್ರದ ಬಾಂಧವ್ಯವನ್ನು ನಾವು ಭೀಮಕವಿಯ ‘ಬಸವಪುರಾಣ’, ತೆಲುಗು ಸಿನಿಮಾಗಳ ಮತ್ತು ಎನ್‌ಟಿಆರ್ ರಾಜಕಾರಣದ ಮೂಲಕ ಕಟ್ಟಿರುವುದುಂಟು. ಆದರೆ ಎರಡೂ ರಾಜ್ಯಗಳಲ್ಲಿ ನಡೆದ ಹೋರಾಟ ಪರಂಪರೆಯಲ್ಲಿ ಆಗಿರುವ ಕೊಡುಪಡೆಯ ವಿವರಗಳ ಕಟ್ಟಿದರೆ, ಅದರಲ್ಲಿ ಭಾರದ್ವಾಜರ ಪಾತ್ರವೂ ಇರುತ್ತದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ಬಿಲ್ಕಿಸ್ ಬಾನೋಳ ಮುಗಿಯದ ವನವಾಸ ಮತ್ತು ಸಂಸ್ಕಾರವಂತ ಅತ್ಯಾಚಾರಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿಖ್ ಪೊಲೀಸ್ ಅಧಿಕಾರಿಗೆ “ಖಲಿಸ್ತಾನಿ” ಹಣೆಪಟ್ಟಿ ಕಟ್ಟಿದ ಬಿಜೆಪಿಗರು; ಸುವೇಂದು ಅಧಿಕಾರಿ ವಿರುದ್ಧ ಭುಗಿಲೆದ್ದ...

0
ಪ.ಬಂಗಾಳದ ಸಿಖ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ "ಖಲಿಸ್ತಾನಿ" ಎಂದು ಕರೆದಿದ್ದು, ತಮ್ಮದೇ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ಸಿಖ್‌ ಸಮುದಾಯಕ್ಕೆ ಸೇರಿದ ಐಪಿಎಸ್‌ ಅಧಿಕಾರಿಯನ್ನು ಸಿಖ್‌ ಪ್ರತ್ಯೇಕತಾವಾದಿಗಳಿಗೆ ಹೋಲಿಕೆ ಮಾಡಿದ್ದಾರೆ,...