Homeಅಂಕಣಗಳುಗುಜರಾತ್ ಮತ್ತೆ ಬಿಜೆಪಿ ಪಾಲಾಗುವ ಮುನ್ಸೂಚನೆ; ಬದಲಾಗಬೇಕಿರುವ ಕಾಂಗ್ರೆಸ್

ಗುಜರಾತ್ ಮತ್ತೆ ಬಿಜೆಪಿ ಪಾಲಾಗುವ ಮುನ್ಸೂಚನೆ; ಬದಲಾಗಬೇಕಿರುವ ಕಾಂಗ್ರೆಸ್

- Advertisement -
- Advertisement -

ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆದು ಈ ರಾಜ್ಯಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವವರ್‍ಯಾರು ಎಂಬುದು ನಿರ್ಧಾರವಾಗುತ್ತದೆ. ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವುದು ನಿಚ್ಚಳ ಎನ್ನುತ್ತವೆ ಎಕ್ಸಿಟ್ ಪೋಲ್‌ಗಳು. ಅಷ್ಟೇ ಅಲ್ಲ, ಇದು ಬಿಜೆಪಿಗೆ ಭರ್ಜರಿ ಜಯವಾಗಲಿದ್ದು, ಪ್ರತಿಪಕ್ಷ ಕಾಂಗ್ರೆಸ್ ಮತ್ತಷ್ಟು ಕೃಶಗೊಂಡಿರುವ ಸೂಚನೆಗಳನ್ನು ನೀಡಿವೆ. 25 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಆಡಳಿತ ನಡೆಸಿದರೂ, ಅಧಿಕಾರ ವಿರೋಧಿ ಅಲೆ ಬಿಜೆಪಿ ಯಶಸ್ಸನ್ನು ಅಲ್ಪಸ್ವಲ್ಪವೂ ಮುಕ್ಕಾಗಿಸಿಲ್ಲ ಎಂಬುದು ಒಂದೆಡೆಯಾದರೆ, ಕಾಂಗ್ರೆಸ್ ಹಿಂದಿನ ಚುನಾವಣೆಯಲ್ಲಿ ನೀಡಿದಷ್ಟು ಸ್ಪರ್ಧೆಯನ್ನೂ ಈ ಬಾರಿ ಒಡ್ಡಿಲ್ಲ ಎಂಬುದು ಕಳವಳಕಾರಿ ಸಂಗತಿ. ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ ತನ್ನ ಅಧ್ಯಕ್ಷಗಾದಿಯನ್ನು ಬದಲಿಸಿದ್ದು, ದಕ್ಷಿಣ ಭಾರತದಿಂದ ಮೂರುವರೆ ಸಾವಿರ ಕಿಲೋಮೀಟರ್‌ಗಳ ಮಹತ್ವಾಕಾಂಕ್ಷೆಯ ಯಾತ್ರೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೈಗೊಂಡಿರುವುದು- ಇವ್ಯಾವುವೂ ಗುಜರಾತ್ ಚುನಾವಣೆಯಲ್ಲಿ ಮ್ಯಾಜಿಕ್ ಮಾಡಲಾರದೆ ಹೋಗಿವೆ. ಹಿಂದುತ್ವದ ದ್ವೇಷ ಭಾಷಣಗಳು ಈ ಬಾರಿ ಬಿಜೆಪಿ ಪ್ರಚಾರದಲ್ಲಿ ಅಷ್ಟು ಸದ್ದುಮಾಡದೆ ಹೋದರೂ, ಅದರ ಮೌನ ಒಳಹರಿವನ್ನು ನಿರ್ಲಕ್ಷಿಸುವಂತಿಲ್ಲ. ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮೋದಿಯವರನ್ನು ರಾವಣನಿಗೆ ಹೋಲಿಸಿ ಆಡಿದ ಒಂದು ಮಾತನ್ನೇ ಹಿಡಿದು, ಮತ್ತೆ ಹುಸಿ ’ರಾಮಭಕ್ತತನ’ವನ್ನು ಉದ್ದೀಪಿಸಿ ಪ್ರಚಾರ ನಡೆಸಿದ್ದು ಇದಕ್ಕೆ ಸಾಕ್ಷಿ. ಒಟ್ಟಿನಲ್ಲಿ ಗುಜರಾತ್‌ನಲ್ಲಿ ಮೋದಿ-ಷಾ ಅವರ ಹಿಡಿತವನ್ನು ಸಡಿಲಿಸುವುದು ಸಾಮಾನ್ಯ ಮಾತಲ್ಲ ಎಂಬುದು ಈ ಚುನಾವಣೆಗಳಲ್ಲಿ ವ್ಯಕ್ತವಾಗಿದೆ. ಜನಸಾಮಾನ್ಯರನ್ನು ಇಷ್ಟು ಸುಲಭವಾಗಿ ಮತ್ತು ಇಷ್ಟು ದೀರ್ಘ ಕಾಲ ಹೇಗೆ ಮರಳು ಮಾಡಬಹುದು ಎಂಬುದು ಬಿಡಿಸಲಾಗದ ಒಗಟಾಗಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕತ್ತುಕುತ್ತಿನ ಸ್ಪರ್ಧೆಯಿರುವಂತೆ ಎಕ್ಸಿಟ್ ಪೋಲ್‌ಗಳು ಬಿಂಬಿಸಿವೆ. ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾದರೆ, ಹಿಮಾಚಲದಲ್ಲಿ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಿದ ದಾಖಲೆ ಅದರದ್ದಾಗುತ್ತದೆ.

ಮಲ್ಲಿಕಾರ್ಜುನ್ ಖರ್ಗೆ

ಖರ್ಗೆಯವರು ಮಾಡಿದ ಒಂದು ಸಾಮಾನ್ಯ ಟೀಕೆಯನ್ನು ಹಿಡಿದು ಬಿಜೆಪಿ ಪಕ್ಷ ಅವರನ್ನು ಇನ್ನಿಲ್ಲದಂತೆ ಹಂಗಿಸಿತು. “ಮೋದಿ ಯಾವಾಗಲೂ ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ’ಬೇರೆ ಯಾರನ್ನೂ ನೋಡಬೇಡಿ, ಬರೀ ಮೋದಿ ನೋಡಿ ವೋಟು ಹಾಕಿ’. ಎಷ್ಟು ಬಾರಿ ನಾವು ನಿಮ್ಮನ್ನು ನೋಡಬೇಕು? ಕಾರ್ಪೊರೇಷನ್ ಚುನಾವಣೆ, ಎಂಎಲ್‌ಎ ಮತ್ತು ಎಂಪಿ ಚುನಾವಣೆಯಲ್ಲಿಯೂ ನಿಮ್ಮ ಮುಖವನ್ನೇ ನೋಡಬೇಕು. ನಿಮಗೇನು ರಾವಣನ ರೀತಿಯಲ್ಲಿ 100 ಮುಖಗಳಿವೆಯೇ? ಏನದು?” ಎಂದಿದ್ದರು ಖರ್ಗೆ. ಜನಪ್ರಿಯ ಧಾಟಿಯಲ್ಲಿ ಯಾವುದೇ ರಾಜಕಾರಣಿ ಮತ್ತೊಬ್ಬ ರಾಜಕಾರಣಿಯನ್ನು ಟೀಕಿಸುವ ಸಾಮಾನ್ಯ ಸಂಗತಿಯಿದು. ಆದರೆ, ಈ ಆರೋಗ್ಯಕರವಾದ ಟೀಕೆಯನ್ನೇ ಬಿಜೆಪಿ ಮತ್ತು ಮೋದಿಯವರು ತಿರುಚಿದರು. ಮೋದಿ ತಮ್ಮ ರ್‍ಯಾಲಿಯೊಂದರಲ್ಲಿ, “ಲಾರ್ಡ್ ರಾಮನನ್ನು ಎಂದಿಗೂ ನಂಬದವರು ಈಗ ರಾಮಾಯಣದಿಂದ ರಾವಣನನ್ನು ಎಳೆದು ತಂದಿದ್ದಾರೆ. ನನ್ನ ವಿರುದ್ಧ ಆ ಬೈಗುಳವನ್ನು ಉಪಯೋಗಿಸಿದ ಮೇಲೆ ಕ್ಷಮೆ ಕೇಳುವುದಿರಲಿ, ಅವರು ವಿಷಾದವನ್ನೂ ವ್ಯಕ್ತಪಡಿಸಿಲ್ಲ ಎಂಬುದು ನನಗೆ ಆಶ್ಚರ್ಯವನ್ನುಂಟುಮಾಡಿದೆ” ಎಂದು ಹೇಳಿದ್ದರು. ರಾವಣನೆಂದು ಕರೆದದ್ದು ಯಾವ ರೀತಿಯಲ್ಲಿಯೂ ಬೈಗುಳವಲ್ಲ; ಕೆಲವೊಂದು ರಾಮಾಯಣಗಳಲ್ಲಿ ರಾವಣನ ಅವಗುಣಗಳನ್ನು ಚಿತ್ರಿಸಿದ್ದರೆ, ಇನ್ನೂ ಕೆಲವು ರಾವಣನ ಗುಣಗಳನ್ನು ಕೊಂಡಾಡಿವೆ. ರಾವಣನನ್ನು ಆರಾಧಿಸುವ ಸಂಸ್ಕೃತಿಯ ಸಮುದಾಯಗಳಿವೆ. ಅವೆಲ್ಲವನ್ನೂ ಹೊರತುಪಡಿಸಿ ಯೋಚಿಸಿದರೂ, ಒಬ್ಬ ಕೆಟ್ಟ ಆಡಳಿತ ನಡೆಸುತ್ತಿದ್ದ ಪುರಾಣದ ರಾಜನಿಗೆ ಇಂದಿನ ಪ್ರಧಾನಿಯವರನ್ನು ಹೋಲಿಸುವುದು ಮಹಾಪರಾಧವೇ? ಇಲ್ಲ ಎಂಬ ವಿವೇಕವನ್ನು ಜನಸಾಮಾನ್ಯರಲ್ಲಿ ಬಿತ್ತುವವರ್‍ಯಾರು?

ಇದನ್ನೂ ಓದಿ: ಗುಜರಾತ್ – ಹಿಮಾಚಲ ಪ್ರದೇಶ: ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಎಂದ ಎಕ್ಸಿಟ್ ಪೋಲ್‌ಗಳು

ಇರಲಿ, ತಾವೇ ಆರೋಪಿಸಿಕೊಂಡ ಆದರ್ಶಪುರುಷ ರಾಮನನ್ನು ಆರಾಧಿಸುವ ಬಿಜೆಪಿ ಮುಖಂಡರಿಗೆ, ಬಿಲ್ಕಿಸ್ ಬಾನೋರನ್ನು ಅತ್ಯಾಚಾರವೆಸಗಿದ, ಆಕೆಯ ಕಂದಮ್ಮನನ್ನು ನೆಲಕ್ಕೆ ಜಜ್ಜಿ ಸಾಯಿಸಿದ ಅಪರಾಧಿಗಳನ್ನು ಅವರ ಜೈಲುಶಿಕ್ಷೆ ಪೂರ್ಣವಾಗುವುದಕ್ಕೂ ಮುನ್ನಾ ಬಿಡುಗಡೆಗೊಳಿಸಿ ಹಾರ ತುರಾಯಿ ಹಾಕಲು ರಾಮಭಕ್ತಿ ಅಡ್ಡಬರಲಿಲ್ಲವೇ? ಬಿಜೆಪಿಯವರ ’ರಾಮಭಕ್ತಿಗೆ’ ಸೋತುಹೋಗಿರುವ ಗುಜರಾತ್ ಜನತೆಯ ಒಂದು ಭಾಗಕ್ಕೆ ಇದು ಅಸಹ್ಯವೆನಿಸಲಿಲ್ಲ ಏಕೆ? ಮೊರ್ಬಿ ಸೇತುವೆಯ ನವೀಕರಣದಲ್ಲಿ ಮೋಸವೆಸಗಿದ ಕಾರಣಕ್ಕೆ ಅದು ಕುಸಿದು ನೂರಾರು ಜನರ ಸಾವಿಗೆ ಕಾರಣವಾದ ದುರಾಡಳಿತ ಬಿಜೆಪಿಯನ್ನು ಬೆಂಬಲಿಸುವ ಜನರಿಗೆ ಕಾಡಲಿಲ್ಲವೇಕೆ? ನಿರುದ್ಯೋಗ, ಬೆಲೆಯೇರಿಕೆ, ಅಸಮಾನತೆಯ ಕಂದರ ಇವೆಲ್ಲ ’ರಾಮಭಕ್ತಿ’ಯ ಕಣ್ಕಟ್ಟಿನಲ್ಲಿ ಕಾಣೆಯಾದವೇ? ಬಹುಶಃ ರಾವಣ ರಾಜ್ಯದಲ್ಲಿಯೂ ಇಷ್ಟು ಭೀಕರ ಬಿಕ್ಕಟ್ಟುಗಳು ತಲೆದೋರಿರಲಿಲ್ಲವೇನೋ! ಅದಕ್ಕೆ ಪುಷ್ಠಿ ನೀಡುವಂತಹ ಕಥಾನಕಗಳೂ ನಮ್ಮಲ್ಲಿವೆ.

ಅರವಿಂದ್ ಕ್ರೇಜಿವಾಲ್

ಕವಿ ಸಿದ್ಧಲಿಂಗಯ್ಯನವರು ಹಲವೆಡೆ ಈ ಪ್ರಸಂಗವನ್ನು ಅವರ ಭಾಷಣಗಳಲ್ಲಿ ಹೇಳುತ್ತಿದ್ದರು; 90ರ ದಶಕದಲ್ಲೊಮ್ಮೆ ಅವರು ಮೈಸೂರು ಭಾಗದಲ್ಲಿ ಸಂಚರಿಸುತ್ತಿದ್ದರಂತೆ. ಆಗ ಒಂದೂರಿನಲ್ಲಿ ಒಂದಜ್ಜಿ ಗೊಳೋ ಎಂದು ಅಳಲು ಶುರುಮಾಡಿತಂತೆ. ‘ಅಯ್ಯೋ ಟಿವಿಯಲ್ಲಿ ನಮ್ಮಪ್ಪಂದು ಏನೂ ಹಾಕಲ್ಲವೆಲ್ಲಪ್ಪ, ಎಲ್ಲಾ ಅವನದ್ದೇ ಅಗೋಯ್ತು’ ಎಂದು ಗೋಳಾಡಿತಂತೆ. ಆಗ ರಾಮಾಯಣ ಟಿವಿಯಲ್ಲಿ ಬರುತ್ತಿದ್ದ ಕಾಲ; ಅದರಲ್ಲಿ ರಾವಣನನ್ನು ವೈಭವೀಕರಿಸಿಲ್ಲ ಎಂಬುದು ಆ ಅಜ್ಜಿಯ ಅಳಲಾಗಿತ್ತು. ಹೀಗೆ ರಾವಣನನ್ನು ಪೂಜಿಸುವ ರಾವಣನ ಒಕ್ಕಲು ಸಮುದಾಯಗಳು ಮೈಸೂರು ಭಾಗದ ಹಲವು ಪ್ರದೇಶಗಳಲ್ಲಿವೆ ಎಂದು ಸಿದ್ದಲಿಂಗಯ್ಯನವರು ಹೇಳುತ್ತಿದ್ದರು. ಇನ್ನು ಎಷ್ಟೋ ಬೌದ್ಧ ಮತ್ತು ಜೈನ ರಾಮಾಯಣಗಳಲ್ಲಿ ರಾವಣನನ್ನು ಕೆಟ್ಟದಾಗಿ ಚಿತ್ರಿಸಿರದ ನಿರೂಪಣೆಗಳಿವೆ. ಖ್ಯಾತ ಸಂಸ್ಕೃತ ವಿದ್ವಾಂಸ ಎಸ್ ಕೆ ರಾಮಚಂದ್ರ ರಾವ್ ಅವರು ’ರಾಮಾಯಣ ಸಮೀಕ್ಷೆ’ ಎಂಬ ಒಂದು ಪುಟ್ಟ ಪುಸ್ತಕದಲ್ಲಿ ಜಗತ್ತಿನ ಹಲವು ಸಂಸ್ಕೃತಿಗಳಲ್ಲಿರುವ ನೂರಾರು ವಿಭಿನ್ನ ರಾಮಾಯಣಗಳ ಬಗ್ಗೆ ಬರೆಯುತ್ತಾರೆ. ’ಬೌದ್ಧರ ರಾಮಾಯಣ’ ಎಂಬ ಮೊದಲ ಅಧ್ಯಾಯದಲ್ಲಿ ಹೀಗೆ ಬರೆಯುತ್ತಾರೆ: “ರಾವಣನ ಪ್ರಸ್ತಾಪ ಇನ್ನಷ್ಟು ಸ್ಪಷ್ಟವಾಗಿ ಬರುವುದು ಮಹಾಯಾನ ಬೌದ್ಧರ ’ಲಂಕಾವತಾರ ಸೂತ್ರ’ದಲ್ಲಿ. ಕ್ರಿಸ್ತಾಬ್ಧ ಐದು ಅಥವಾ ಆರನೆಯ ಶತಮಾನದಲ್ಲಿ ವಿರಚಿತವಾದ ಈ ಸಂಸ್ಕೃತ ಗ್ರಂಥ ವಿಜ್ಞಾನ ವಾದವನ್ನು ಎತ್ತಿಹಿಡಿಯುತ್ತದೆ. ಚೀಣೀ ಮತ್ತು ಜಪಾನೀ ಬೌದ್ಧ ವಾಙ್ಮಯದಲ್ಲಿ ಈ ಗ್ರಂಥಕ್ಕೆ ತುಂಬ ಮಾನ್ಯತೆಯುಂಟು. ಮಹಾಮತಿಯೆಂಬ ಬೋಧಿ ಸತ್ತ್ವನಿಂದ ಪ್ರಚೋದಿತನಾದ ರಾವಣನು ಬುದ್ಧನನ್ನು ಸಂಧಿಸುವ ವಿಸ್ತಾರವಾದ ವಿವರದಿಂದ ಈ ಸೂತ್ರ ಆರಂಭವಾಗುತ್ತದೆ. ರಾವಣನು ಇಲ್ಲಿ ಲಂಕೆಯ ರಾಕ್ಷಸೇಶ್ವರನಾದ ಜಿಜ್ಞಾಸು, ಜ್ಞಾನಸಂಪನ್ನ, ಶೀಲವಂತ. ಬುದ್ಧನಲ್ಲಿಯೂ ಬೌದ್ಧಧರ್ಮದಲ್ಲಿಯೂ ಶ್ರದ್ಧಾಳು. ಈ ಗ್ರಂಥದ ಮೂರನೇ ಪರಿಚ್ಛೇದದಲ್ಲಿ ಬುದ್ಧನ ಹಲವಾರು ಹೆಸರುಗಳನ್ನು ಹೇಳಿದ್ದಾರೆ. ತಥಾಗತ, ಸ್ವಯಂಭೂ, ವಿನಾಯಕ, ಬ್ರಾಹ್ಮಣ, ವಿಷ್ಣು, ಈಶ್ವರ, ಪ್ರಧಾನ, ಅರಿಷ್ಟನೇಮಿ, ಭಾಸ್ಕರ ಇತ್ಯಾದಿ, ಇತ್ಯಾದಿ. ಈ ಪರ್ಯಾಯನಾಮಗಳ ಪಟ್ಟಿಯಲ್ಲಿ ರಾಮನೆಂಬ ಹೆಸರೂ ಸೇರಿರುವುದು ಸ್ವಾರಸ್ಯವಾಗಿದೆ. ಮುಂದೆ ಹತ್ತನೆಯ ಪರಿಚ್ಛೇದ ಕಲಿಯುಗದ ಅವಧಿಯಲ್ಲಿ ವಾಸನೂ, ಪಾಂಡವ ಕೌರವರೂ, ರಾಮನೂ, ಮೌರ್ಯರಾಜರೂ, ನಂದರಾಜರೂ, ಗುಪ್ತ ರಾಜರೂ ಅನುಕ್ರಮವಾಗಿ ಬರುತ್ತಾರೆಂದು ಹೇಳುತ್ತದೆ. ಆದರೆ ರಾವಣನ ವಿಚಾರ ಹೇಳುತ್ತ ಸೀತಾಪಹರಣ, ರಾಮನೊಂದಿಗೆ ಸಮರವೇ ಮುಂತಾದ ಯಾವ ವಿವರವೂ ಬರುವುದಿಲ್ಲ. ಹೀಗೆ ಸಾವಿರಾರು ರಾಮಾಯಣಗಳಲ್ಲಿ ಏಕರೂಪತೆಯ ರಾಮನಿಲ್ಲ, ಅಥವಾ ಏಕರೂಪತೆಯ ರಾವಣನೂ ಇಲ್ಲ. ಇನ್ನು ರಾಮನನ್ನು ಪ್ರಶ್ನಿಸುವ ಪಠ್ಯಗಳಿಗೂ ಕೊರತೆಯೇನಿಲ್ಲ. ಕನ್ನಡ ಬರಹಗಾರ ಗೌರೀಶ ಕಾಯ್ಕಿಣಿ ಅವರ ಒಂದು ಪುಸ್ತಕದ ಹೆಸರು ’ವಾಲ್ಮೀಕಿ ತೂಕಡಿಸಿದಾಗ’. ಅದರಲ್ಲಿನ ’ಶೂರ್ಪಣಖೀ ಪ್ರಸಂಗ’ ಎಂಬ ಒಂದು ಪ್ರಬಂಧದಲ್ಲಿ “ಬೆಕ್ಕು ಇಲಿಯೊಂದಿಗೆ ಚಿನ್ನಾಟವಾಡುವಂತೆ ಆ ರಾಕ್ಷಸಿಯೊಂದಿಗೆ ರಾಮ ವ್ಯಂಗ್ಯ ವಿನೋದಕ್ಕೆ ತೊಡಗಿದನು. ಪ್ರಕೃತಿಯಿಂದಲೂ ಗಂಭೀರವೃತ್ತಿಯ ವ್ಯಕ್ತಿ ವಿನೋದಕ್ಕೆ ಇಳಿದರೆ ಕೆಲ ಸಲ ವಿಪರೀತಕ್ಕೆ ಮುಳುಗುತ್ತದೆ. ಏಕೆಂದರೆ ಇತರರು ಅದನ್ನು ಗಂಭೀರವಾಗಿಯೇ ಗ್ರಹಿಸುತ್ತಾರೆ. ಅದೊಂದು ’ಪರಿಹಾಸ ವಿಜಲ್ಪಿತ’ ’ಪರಮಾರ್ಥದಲ್ಲಿ ತೆಗೆದುಕೊಳ್ಳುವುದರಲ್ಲಿ ಎಂದು ತಿಳಿಯುವುದಿಲ್ಲ” ಎನ್ನುತ್ತಾರೆ. ರಾಮನ ಬಗ್ಗೆ ಇದೊಂದು ಸೌಮ್ಯವಾದ ಪ್ರತಿಭಟನೆ. ಇಂತಹ ಟೀಕೆಗಳಿಂದ ಹಿಡಿದು, ಮಾನವಶಾಸ್ತ್ರ-ಸಮಾಜಶಾಸ್ತ್ರಗಳ ನೆಲೆಯಲ್ಲಿ ರಾಮ ಮತ್ತು ರಾಮಾಯಣಗಳನ್ನು ವಿಶ್ಲೇಷಿಸಿರುವ ಪಠ್ಯಗಳಿವೆ. ರಾಮಾಯಣ ಕಥೆಯ ಪುರಾಣಗಳಲ್ಲಿನ ವ್ಯತ್ಯಾಸಗಳನ್ನು ಗುರುತಿಸಿ ರಾಮನನ್ನು ಬಾಬಾಸಾಹೇಬರೂ ತೀವ್ರವಾಗಿ ವಿಮರ್ಶೆಗೆ ಒಡ್ಡಿದ್ದರು. ಇಷ್ಟೆಲ್ಲಾ ಹೇಳಿದ್ದು, ಇಂತಹ ವಿಮರ್ಶೆಗೆ ಒಡ್ಡುವ ಪರಂಪರೆ ಹಿಂದಿನಿಂದಲೂ ಇದೆ ಎಂಬ ಕಾರಣಕ್ಕೆ. ಇಂತಹ ಬಹುತ್ವದ ಮತ್ತು ಪ್ರಶ್ನಿಸುವ ಪರಂಪರೆಯಿಂದ ಬಿಜೆಪಿಯಂತೂ ದೂರಕ್ಕೆ ಜಿಗಿದಿದೆ. ಆದರೆ, ಜಾತ್ಯತೀತ ಪರಂಪರೆಯ ಮಾತುಗಳನ್ನಾಡುತ್ತಿದ್ದ ಕಾಂಗ್ರೆಸ್‌ಗೆ ಏನಾಗಿದೆ?

ಇದನ್ನೂ ಓದಿ: ’ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ ಮಾತುಕತೆ

ಚುನಾವಣೆಯಿಂದ ರಾಮಾಯಣಕ್ಕೆ ಜಿಗಿದಿದ್ದಕ್ಕೆ ಕಾರಣವಿದೆ ಮತ್ತು ಸಂಬಂಧವೂ ಇದೆ. ಹಲವು ರಾಜ್ಯಗಳಲ್ಲಿ ಬಿಜೆಪಿಯನ್ನು ಎದುರಿಸಲು ಶಕ್ತಿಯಿರುವ ಕಾಂಗ್ರೆಸ್ ಪಕ್ಷ ಸಂಘ ಪರಿವಾರದ ಸಿದ್ಧಾಂತವನ್ನು ವಿರೋಧಿಸಿ ತರಾಟೆಗೆ ತೆಗೆದುಕೊಳ್ಳುವ ಪೊಸಿಷನ್‌ಅನ್ನು ಆಯ್ದುಕೊಳ್ಳಲು ಹಿಂಜರಿಯುತ್ತಿದೆ. ಖರ್ಗೆ ಅವರ ಹೇಳಿಕೆ ತಾಜಾ ಉದಾಹರಣೆಯಾಗಿದ್ದರೆ, ರಾಮಮಂದಿರ ಕಟ್ಟುವ ವಿಚಾರದಲ್ಲಿಯೂ ಸಂಘ ಪರಿವಾರದ ಕುತ್ಸಿತ ನಿಲುವಿಗೆ ಗಟ್ಟಿಯಾದ ವಿರೋಧಿ ನಿಲುವನ್ನು ತಳೆಯಲು ಕಾಂಗ್ರೆಸ್ ವಿಫಲವಾಯಿತು. ಖರ್ಗೆಯವರ ಟೀಕೆಯನ್ನು ಕೂಡ ಇನ್ನಷ್ಟು ತೀವ್ರವಾಗಿ ಈ ಸಂದರ್ಭದಲ್ಲಿ ಸಮರ್ಥಿಸಿಕೊಳ್ಳಬೇಕಿತ್ತು. ಅದು ಆಗಲೇ ಇಲ್ಲ. ಈಗಾಗಲೆ ಎಎಪಿ ಪಕ್ಷ ಮೃದು ಹಿಂದುತ್ವ ಧೋರಣೆಯನ್ನು ತಳೆದು ಬಿಜೆಪಿಯ ಪ್ರತಿಪಕ್ಷವಾಗಲು ಅಥವಾ ಅವರಿಂದ ಅಧಿಕಾರ ಕಸಿಯಲು ಹಲವೆಡೆ ಪ್ರಯತಿಸುತ್ತಿದೆ. ಇಂತಹ ಸಂದರ್ಭದಲ್ಲಿ, ಎಲ್ಲಾ ಸಂಗತಿಗಳಲ್ಲಿಯೂ, ಕಟ್ಟಾ ಜಾತ್ಯತೀತವಾದ, ಬಹುತ್ವದ ತಿಳಿವಿನ, ಅಲ್ಪಸಂಖ್ಯಾತ ಹಾಗೂ ದಮನಿತರನ್ನು ಪ್ರತಿನಿಧಿಸುವ ಪಕ್ಷವಾಗಿ ಕಾಂಗ್ರೆಸ್ ರೂಪಾಂತರ ಹೊಂದದ ಹೊರತು ಇಂತಹ ಗುಜರಾತ್ ಬಿಜೆಪಿ ಗೆಲುವುಗಳನ್ನು ಇನ್ನೆಷ್ಟು ಎಣಿಸಬೇಕೋ? ರಾಜಕೀಯ ಸ್ಪೆಕ್ಟ್ರಂನಲ್ಲಿ ಕಾಂಗ್ರೆಸ್ ಹಿಂದುತ್ವದ ಆಸುಪಾಸಿನಲ್ಲಿಯೇ ತನ್ನ ಸ್ಥಾನವನ್ನು ಹುಡುಕಹೊರಟರೆ ಕೋಮುವಾದಿಗಳ ಕೆಲಸ ಇನ್ನಷ್ಟು ಸುಲಭವಾದೀತಷ್ಟೇ! ಅಲ್ಲಿಂದ ದೂರ ಸರಿದು ತರ್ಕ, ವಿವೇಕ, ಬಹುತ್ವಗಳ ಆಧಾರದ ಮೇಲೆ ಸಂವಿಧಾನ ಪ್ರಣೀತ ಭಾರತ ಕಟ್ಟಲು ಮುಂದಾಗುವುದೊಳಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಉತ್ತಮ ವಿಮರ್ಶೆ..,
    ಆದರೆ ಬಿಜೆಪಿ ನಿಮ್ಮ ನೀರೀಕ್ಷೆಗೆ ಸರಿಯಾಗಿ ಇರಬೇಕು ಎಂದರೆ ಹೇಗೆ…!!!???

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...