Homeಅಂಕಣಗಳುಕಂಗೆಟ್ಟಿದ್ದ ಬಿಜೆಪಿಗೆ ಸಿಕ್ಕ ಭಜರಂಗಿ ಭಜನೆ!

ಕಂಗೆಟ್ಟಿದ್ದ ಬಿಜೆಪಿಗೆ ಸಿಕ್ಕ ಭಜರಂಗಿ ಭಜನೆ!

- Advertisement -
- Advertisement -

ಕರ್ನಾಟಕದ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿರುವ ವಿವಿಧ ಪಕ್ಷಗಳು ಭರವಸೆಗಳ ಮಹಾಪೂರವನ್ನೇ ಹರಿಸಿವೆ ಮತ್ತು ಆ ಭರವಸೆಗಳ ವಿಮರ್ಶೆಯಲ್ಲಿ ಪರಸ್ಪರ ನಿರತವಾಗಿವೆ. ಇದು ಅಗತ್ಯವಾದದ್ದೇ. ಆದರೆ ಮಂಗಳವಾರ ಬೆಳಗ್ಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾಗುತ್ತಿದ್ದಂತೆಯೇ, ’ಇದಕ್ಕೇ ಕಾಯುತ್ತಿದ್ದೆವು’ ಎಂಬಂತೆ ಬಿಜೆಪಿ ಮತ್ತು ಸಂಘ ಪರಿವಾರ, ಅದರೊಳಗಿನ ಒಂದು ಭರವಸೆಯನ್ನು ಹೆಕ್ಕಿ ತೆಗೆದು ಅದನ್ನೇ ತನ್ನ ಚುನಾವಣೆಯ ಪ್ರಮುಖ ವಿಷಯವನ್ನಾಗಿಸಿಕೊಳ್ಳಲು ಮುಂದಾಗಿದೆ. ’ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಅದರಲ್ಲಿ “ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಭಜರಂಗದಳ ಮತ್ತು ಪಿ.ಎಫ್.ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ, ಆದಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು” ಎಂಬ ಸಾಲುಗಳನ್ನು ಸೇರಿಸಿದೆ. ಕೋಮು ಧ್ರುವೀಕರಣವನ್ನೇ ಬಲವಾಗಿ ನಂಬಿರುವ ಬಿಜೆಪಿ ಈ ಅಂಶವನ್ನು ಅಸ್ತ್ರವನ್ನಾಗಿಸಿಕೊಳ್ಳಲು ತೊಡಗಿದೆ. ಇಲ್ಲಿಯವರೆಗೂ ಭಜರಂಗ ದಳದ ಸದಸ್ಯರನ್ನು ಕಾಲಾಳುಗಳಾಗಿ ಬಳಸಿಕೊಂಡು ಕಷ್ಟದ ಸಂದರ್ಭಗಳಲ್ಲಿ ಫ್ರಿಂಜ್‌ಗಳೆಂದು ದೂರವಿಡುತ್ತಿದ್ದ ಬಿಜೆಪಿ ಈಗ ಚುನಾವಣಾ ಸಂದರ್ಭದಲ್ಲಿ ಆ ಸಂಘಟನೆಯನ್ನು ರಕ್ಷಿಸುವುದು ತನ್ನ ಪರಮ ಕರ್ತವ್ಯ ಎಂಬಂತೆ ಬಗೆದು, ಅದರ ಮುಖಂಡರೆಲ್ಲಾ ಭಜರಂಗಿ ಭಜನೆಯಲ್ಲಿ ಮುಳುಗಿದ್ದಾರೆ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಿ ಹಲವು ಚುನಾವಣಾ ರ್‍ಯಾಲಿಗಳಲ್ಲಿ ಭಾಗವಹಿಸಿ, ತಾನು ಹೇಗೆ ಕಾಂಗ್ರೆಸ್ ಕಾರ್ಯಕರ್ತರಿಂದ ನಿಂದನೆಗೆ ಗುರಿಯಾಗಿದ್ದೇನೆ ಎಂದು ಲೆಕ್ಕ ಹೇಳಿದ ಮೇಲೆಯೂ ಬಿಜೆಪಿ ಪ್ರಚಾರ ಚುರುಕು ಪಡೆದಿರಲಿಲ್ಲ. ಬಹುತೇಕ ಒಪಿನಿಯನ್ ಪೋಲ್‌ಗಳು ಕಾಂಗ್ರೆಸ ಸ್ಪಷ್ಟ ಬಹುಮತ ಗಳಿಸುತ್ತದೆಂಬ ಸುಳಿವು ನೀಡಿದ್ದವು. ಈದಿನ.ಕಾಂ ತನ್ನ ಸಮೀಕ್ಷೆಯಲ್ಲಿ ಕಾಂಗ್ರೆಸ್ 132-140 ಸ್ಥಾನಗಳನ್ನು ಗಳಿಸಿತ್ತದೆ ಎಂದು ಅಂದಾಜಿಸಿದರೆ, ಬಿಜೆಪಿ 57-65 ಸ್ಥಾನಗಳಿಗೆ ಕುಸಿಯುತ್ತದೆ ಎಂದಿತ್ತು. ಇನ್ನು ಸಿ-ವೋಟರ್ ವಿವಿಧ ಮಾಧ್ಯಮ ಸಂಸ್ಥೆಗಳ ಜೊತೆಗೆ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಅಂದಾಜು 107-119 ಸ್ಥಾನಗಳನ್ನು ನೀಡಿ ಬಹುಮತದತ್ತ ದಾಪುಗಾಲು ಹಾಕುತ್ತಿರುವುದನ್ನು ಸೂಚಿಸಿತ್ತು. ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳ ಕೊನೆಯಲ್ಲಿ ನಡೆಸಿದ ಪ್ರತ್ಯೇಕ ಒಪಿನಿಯನ್ ಪೋಲ್‌ಗಳಲ್ಲಿ ಕಾಂಗ್ರೆಸ್ ಬಹುಮತದ ಸ್ಥಾನಗಳನ್ನು ಉಳಿಸಿಕೊಳ್ಳುವುದರಲ್ಲಿ ಹೆಚ್ಚುಕಮ್ಮಿ ಯಾವುದೇ ಬದಲಾವಣೆಯಿಲ್ಲವೆಂದು ಬಿಂಬಿತವಾಗುತ್ತಿದ್ದುದು ಬಿಜೆಪಿ ಮುಖಂಡರು ಇನ್ನಷ್ಟು ಅಗ್ರೆಸ್ಸಿವ್ ಆಗಿ ಪ್ರಚಾರ ಮಾಡಲು ಹಾತೊರೆಯುವಂತೆ ಮಾಡಿತ್ತು. ಅದರ ಪರಿಣಾಮವಾಗಿಯೇ ಈಗ ಭಜರಂಗಿ ಮತ್ತು ಹನುಮಂತನ ಅಸ್ಮಿತೆಯನ್ನು ಹಿಡಿದುಕೊಂಡು, ಹಿಂದೂ ಉಗ್ರವಾದಿ ಬಣವಾದ ಭಜರಂಗ ದಳದ ನಿಷೇಧದ ಬಗ್ಗೆ ಕಾಂಗ್ರೆಸ್ ನೀಡಿರುವ ಆಶ್ವಾಸನೆಯನ್ನು, ಧಾರ್ಮಿಕ ಯುದ್ಧವಾಗಿ ಪರಿವರ್ತಿಸುವುದಕ್ಕೆ ಪ್ರಯತ್ನಿಸುತ್ತಿರುವುದು.

ಇದನ್ನೂ ಓದಿ: ಬಜರಂಗದಳ, ಪಿಎಫ್‌ಐ ನಿಷೇಧ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ಕಾಂಗ್ರೆಸ್ ಮೊದಲಿನಿಂದಲೂ ತನ್ನ ಪ್ರಚಾರವನ್ನು ಬೆಲೆಯೇರಿಕೆ, ಭ್ರಷ್ಟಾಚಾರದ ಸಮಸ್ಯೆಗಳು ಹಾಗೂ ವಿದ್ಯುತ್, ಪ್ರಯಾಣ, ಪಡಿತರ ಮುಂತಾದವುಗಳ ಬಗ್ಗೆ ಕಲ್ಯಾಣ ಯೋಜನೆಗಳ ಭರವಸೆಯನ್ನು ನೀಡುವುದರ ಕಡೆಗೆ ತಿರುಗಿಸಿತ್ತು. ಬಿಜೆಪಿ ಇದನ್ನು ಮೊದಮೊದಲಿಗೆ ’ಬಿಟ್ಟಿ’, ’ಫ್ರೀಬೀಸ್’ ಎಂಬಿತ್ಯಾದಿಯಾಗಿ ಜರೆಯುವ ಮಾತನಾಡುತ್ತಿದ್ದರೂ, ಕೊನೆಗೆ, ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ಕೊಡುವ, ಐದು ಕೆ.ಜಿ ಅಕ್ಕಿ ಮತ್ತು ಸಿರಿಧಾನ್ಯವನ್ನು ನೀಡುವ, ಅಟಲ್ ಆಹಾರ ಕೇಂದ್ರಗಳನ್ನು ತೆರೆಯುವ ಕಲ್ಯಾಣ ಯೋಜನೆಗಳಿಗೆ ತನ್ನ ಪ್ರಣಾಳಿಕೆಯಲ್ಲಿ ಮಣೆ ಹಾಕಬೇಕಾದ ಒತ್ತಡಕ್ಕೆ ಒಳಗಾಯಿತು. ಆದರೆ, ಹಿಂದಿನಿಂದಲೂ ಇಂದಿರಾ ಕ್ಯಾಂಟೀನ್ ಅನ್ನು ವಿರೋಧಿಸಿಕೊಂಡು, ಅವಮಾನಿಸಿಕೊಂಡು, ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯ ಬಗ್ಗೆ ಕುಹಕ ವಾಡಿಕೊಂಡು ಬಂದಿದ್ದ ಬಿಜೆಪಿ ಪಕ್ಷದ ಈ ಹೊಸ ಭರವಸೆಗಳನ್ನು ನಂಬುವ ಮಟ್ಟಕ್ಕೆ ಜನರಿರಲಿಲ್ಲ. ಅಲ್ಲದೆ, 2018ರ ಭರವಸೆಗಳು ಈಡೇರಿಸಿರುವ ಬಗ್ಗೆ ರಿಪೋರ್ಟ್ ಕಾರ್ಡ್ ನೀಡಿ ಎಂಬ ಆಗ್ರಹವನ್ನು ಜನರು ಮಾಡಲಾರಂಭಿಸಿದರು. ಇನ್ನೂ ಒಂದು ಹೆಜ್ಜೆ ಮುಂದುಹೋಗಿ, ಉತ್ತರಪ್ರದೇಶದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಬಗ್ಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ಯೋಗಿ ಸರ್ಕಾರ ಒಂದು ವರ್ಷ ಕಳೆದರೂ ಇನ್ನೂ ಯಾರಿಗೂ ಸಿಲಿಂಡರ್ ವಿತರಿಸದ ಬಗ್ಗೆ ಪ್ರಶ್ನೆಗಳು ತೂರಿ ಬರಲಾರಂಭವಾದವು. ಇಂತಹ ಸಮಯದಲ್ಲಿ ಕೈಚೆಲ್ಲಿ ಕಂಗೆಟ್ಟು ಕೂತಿದ್ದ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಪ್ರಣಾಳಿಕೆಯ ಕೆಲವು ಮಾತುಗಳೇ ಬೇಕಾಗಿದ್ದವು. ಜನ ಕಲ್ಯಾಣ, ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಕೊಚ್ಚಿಕೊಳ್ಳಲು ಏನೂ ಇಲ್ಲದಿರುವಾಗ, ತಮ್ಮ ಹಳೇ ಚಾಳಿಯೇ ಗತಿಯೆಂದು ಹನುಮನ ಹೆಸರಿನಲ್ಲಿ ಧ್ರುವೀಕರಣಕ್ಕೆ ಮುಂದಾಗಿದೆ ಬಿಜೆಪಿ ಪಕ್ಷ.

ಆಗಲೇ ಮೋದಿಯವರು ತಮ್ಮ ಚುನಾವಣಾ ರ್‍ಯಾಲಿಯೊಂದರ ಭಾಷಣದಲ್ಲಿ ಭಜರಂಗಿಯನ್ನು ಭಜಿಸಿದ್ದಾರೆ. ಇನ್ನು ಮುಖ್ಯಮಂತ್ರಿ ಬೊಮ್ಮಾಯಿಯವರು “ಭಯೋತ್ಪಾದನೆ, ಹಿಂಸೆ ಹಾಗೂ ದೇಶದ್ರೋಹದ ಚಟುವಟಿಕೆ ನಡೆಸುವ ಪಿ.ಎಫ್.ಐ ಜೊತೆ ಧರ್ಮ, ಪರಂಪರೆ ಹಾಗೂ ಇತಿಹಾಸವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವ ಭಜರಂಗದಳವನ್ನು ತುಲನೆ ಮಾಡುವುದು ದೊಡ್ಡ ಅಪರಾಧ. ಆದರೆ ಕಾಂಗ್ರೆಸ್ ಇಂತಹ ತಪ್ಪು ಮಾಡಿ, ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಹೇಳಿದೆ. ಹನುಮ ಭಕ್ತರು ಸಿಡಿದು ನಿಂತರೇ, ಈಗಾಗಲೇ ಅವಸಾನದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಈ ದೇಶದಿಂದ ಕಿತ್ತೆಸೆಯುತ್ತಾರೆ. ಉತ್ತರದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ದಕ್ಷಿಣದ ಅಂಜನಾದ್ರಿಯಲ್ಲಿ ಶ್ರೀ ಹನುಮ ಮಂದಿರ ನಿರ್ಮಾಣ ನಮ್ಮ ಧ್ಯೇಯವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ. ತೇಜಸ್ವಿ ಸೂರ್ಯನಿಂದ ಹಿಡಿದು ಬಿಜೆಪಿ ಮುಖಂಡರು ಲೀಲಾಜಾಲವಾಗಿ ಭಜರಂಗದಳದ ಸಮರ್ಥನೆಗೆ ನಿಂತಿದ್ದಾರೆ. ಅಂದರೆ ಇದರರ್ಥ ದೇಶದಾದ್ಯಂತ ನೂರಾರು ಗಲಭೆ-ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಭಜರಂಗದಳದ ಪಾಪಕರ್ಮಗಳನ್ನೂ ಇವರು ಹೊತ್ತುಕೊಳ್ಳಲಿದ್ದಾರೆಯೇ? ಇವುಗಳಿಗೆ ತಾವೂ ಕಾರಣ ಎಂದು ಆ ಕೃತ್ಯಗಳಿಗೆ ಉತ್ತರದಾಯಿಯಾಗಲಿದ್ದಾರೆಯೇ?

ಕಾಂಗ್ರೆಸ್‌ನ ಒಂದು ವಲಯದಲ್ಲಿ ’ಇದು ಬೇಕಾಗಿತ್ತಾ’ ಎಂಬ ಅಪಸ್ವರದ ಚರ್ಚೆಗಳು ವೇಗ ಪಡೆಯುತ್ತಿವೆ. ಇಂತಹ ಕರಾಳ ಸಮಯದಲ್ಲಿ ಇಂತಹ ಗಟ್ಟಿ ನಿಲುವನ್ನು ತೆಗೆದುಕೊಂಡಿರುವ ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಹಿಂದಡಿಯಿಡಬಾರದು. ಸಂವಿಧಾನದ ಉದಾತ್ತ ಧ್ಯೇಯಗಳ ಬಗ್ಗೆ ಬರೆದುಕೊಂಡಿರುವ ಪ್ರಣಾಳಿಕೆಯನ್ನು ಮುಂದೆ ಅಕ್ಷರಶಃ ಜಾರಿಗೆ ತರಲು ಪ್ರಯತ್ನಿಸಬೇಕು. ಯಾರಾದರೂ ಕಾಂಗ್ರೆಸ್ ಕಾರ್ಯಕರ್ತರು ಇದರ ಬಗ್ಗೆ ಗೊಂದಲಗೊಂಡಿದ್ದರೆ ಸೂಕ್ತ ಮಾತು ಮತ್ತು ವಿಧಾನಗಳಲ್ಲಿ ಸಂವಿಧಾನ ವಿರೋಧಿ ಗುಂಪುಗಳನ್ನು ನಿಷೇಧಿಸುವ ಅಗತ್ಯವನ್ನು ಮನಗಾಣಿಸಬೇಕು. ಜನಸಾಮಾನ್ಯರ ವಿವೇಕ ಇಂಥಹ ಸಂಘಟನೆಗಳನ್ನು ನಿಷೇಧಿಸುವ ಕಡೆಗಿದೆ ಎಂಬುದನ್ನು ಮನಗಂಡು ಬಿಜೆಪಿ ಪಕ್ಷದ ಅಪಪ್ರಚಾರಕ್ಕೆ ಹೆದರಬಾರದು. ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಲು ತಾವು ನೀಡಿರುವ ಭರವಸೆಗೆ ಬದ್ಧರಾಗಿರಬೇಕು. ಇಂತಹ ಶಾಂತಿಯ ತೋಟದಲ್ಲಷ್ಟೆ ಯಾವುದೇ ಪಕ್ಷ ನೀಡುವ ಜನಪರವಾದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...