Homeಕರ್ನಾಟಕಕ್ಯಾಬಿನೆಟ್ ಸಚಿವರಿವರು; ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ, ಸಮರ್ಥ ಪಕ್ಷ ಸಂಘಟಕ ಡಿ.ಕೆ. ಶಿವಕುಮಾರ್ ಬೆಳೆದುಬಂದಿದ್ದು...

ಕ್ಯಾಬಿನೆಟ್ ಸಚಿವರಿವರು; ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ, ಸಮರ್ಥ ಪಕ್ಷ ಸಂಘಟಕ ಡಿ.ಕೆ. ಶಿವಕುಮಾರ್ ಬೆಳೆದುಬಂದಿದ್ದು ಹೀಗೆ..

- Advertisement -
- Advertisement -

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುತ್ತಿದ್ದಂತೆ ಅತಿ ಹೆಚ್ಚು ಕೇಳಿಬಂದ ಹೆಸರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್. ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗುವುದರಿಂದ ಪ್ರಾರಂಭವಾಗಿ, ಮುಖ್ಯಮಂತ್ರಿ ಯಾರಾಗಬೇಕು ಎಂಬುದರವರೆಗೂ ಇವರಿಬ್ಬರೂ ಪ್ರತಿದಿನದ ಸುದ್ದಿಗಳಾಗಿದ್ದರು. ಈಗ ಸಿದ್ದರಾಮಯ್ಯ ಸಿಎಂ ಆದರೆ ಡಿಕೆಶಿ ಡಿಸಿಎಂ ಆಗಿದ್ದಾರೆ. ಸಾಕಷ್ಟು ಪ್ರಯತ್ನದ ನಂತರ ಸಿಎಂ ಆಗದಿದ್ದರೂ ಸರ್ಕಾರದಲ್ಲಿ ಪ್ರಬಲ ಅಧಿಕಾರ ಹೊಂದಿದವರಾಗಿ ಡಿಕೆಶಿ ಗುರುತಿಸಿಕೊಳ್ಳುತ್ತಿದ್ದಾರೆ. ಸಮರ್ಥ ಪಕ್ಷ ಸಂಘಟಕ, ಪ್ರಬಲ ಒಕ್ಕಲಿಗ ಮುಖಂಡ ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ಎಂತಹ ಸಂಕಷ್ಟದ ಸಮಯದಲ್ಲಿಯೂ ಪಕ್ಷ ನಿಷ್ಠೆ ಬದಲಿಸದಿರುವುದು ಅವರಿಗೆ ವರವಾಗಿ ಪರಿಣಮಿಸಿದೆ. ಅಂತಹ ಡಿ.ಕೆ. ಶಿವಕುಮಾರ್ ಬೆಳೆದುಬಂದಿದ್ದರ ನೋಟ ಇಲ್ಲಿದೆ.

ಎಚ್.ಡಿ. ದೇವೇಗೌಡ

ಸದ್ಯ ರಾಮನಗರ ಜಿಲ್ಲೆಗೆ ಸೇರಿರುವ ಕನಕಪುರ ತಾಲ್ಲೂಕಿನ ದೊಡ್ಡ ಆಲಹಳ್ಳಿಯ ಕೆಂಪೇಗೌಡ ಮತ್ತು ಗೌರಮ್ಮ ದಂಪತಿಗಳ ಹಿರಿಯ ಪುತ್ರನಾಗಿ 15 ಮೇ 1962ರಲ್ಲಿ ಜನಿಸಿದ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಆರ್.ಸಿ ಕಾಲೇಜಿನಲ್ಲಿ ಪದವಿ ಮತ್ತು ಮೈಸೂರು ವಿವಿಯಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ 18 ವಯಸ್ಸಿನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದ ಅವರು ಎನ್‌ಎಸ್‌ಯುಐ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಲೇ ತಮ್ಮ 23ನೇ ವಯಸ್ಸಿಗೆ ಎಂಎಲ್‌ಎ ಅಭ್ಯರ್ಥಿಯಾಗಿದ್ದರು. ಅದು ಕೂಡ ರಾಜಕೀಯ ದಿಗ್ಗಜ ಎಚ್.ಡಿ. ದೇವೇಗೌಡರ ಎದುರಿಗೆ! 1985ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದ ಡಿಕೆಶಿ, ಜನತಾಪಕ್ಷದಿಂದ ಸ್ಪರ್ಧಿಸಿದ್ದ ದೇವೇಗೌಡರ ಎದುರು ಸೆಣೆಸಿ 29,809 ಮತಗಳನ್ನು ಪಡೆದು 15,803 ಮತಗಳ ಅಂತರದಿಂದ ಸೋಲು ಕಂಡಿದ್ದರು.

ಗೆಲುವಿನ ಪರ್ವ ಆರಂಭ

ಚುನಾವಣೆಯಲ್ಲಿ ಸೋತರೂ ದಿಟ್ಟ ಹೋರಾಟ ನೀಡಿದ್ದ ಡಿ.ಕೆ. ಶಿವಕುಮಾರ್‌ರವರ ಸಂಘಟನಾ ಸಾಮರ್ಥ್ಯವನ್ನು ಅರಿತ ಕಾಂಗ್ರೆಸ್ ಪಕ್ಷ ಅವರಿಗೆ ಹಲವಾರು ಅವಕಾಶಗಳನ್ನು ನೀಡಿತು. 1987ರಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಾತನೂರಿನಲ್ಲಿ ಸ್ಪರ್ಧಿಸಿ ಗೆಲುವು ಕಂಡರು. ಎರಡೇ ವರ್ಷಕ್ಕೆ 1989ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಜನತಾ ಪಕ್ಷದ ಯು.ಕೆ ಸ್ವಾಮಿ ಎದುರು 13,650 ಮತಗಳ ಅಂತರದಲ್ಲಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಅಂದಿನ ಸಿ.ಎಂ. ವೀರೇಂದ್ರ ಪಾಟೀಲ್‌ರವರು ಅನಾರೋಗ್ಯದಿಂದ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಗಿಬಂತು; 1991ರಲ್ಲಿ ಸಿ.ಎಂ. ಆದ ಎಸ್.ಬಂಗಾರಪ್ಪನವರು ಡಿ.ಕೆ ಶಿವಕುಮಾರ್‌ರವರಿಗೆ ಬಂದೀಖಾನೆ ಸಚಿವ ಸ್ಥಾನ ನೀಡಿದರು. ಹೀಗೆ ಮೊದಲ ಬಾರಿ ಗೆದ್ದಾಗಲೇ ಸಚಿವರಾಗುವ ಭಾಗ್ಯ ಡಿಕೆಶಿಯವರದ್ದಾಗಿತ್ತು.

1994ರ ಚುನಾವಣೆಯಲ್ಲಿ ಡಿಕೆಶಿಗೆ ಸಾತನೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗುವುದಿಲ್ಲ. ಪಕ್ಷೇತರರಾಗಿ ಕಣಕ್ಕಿಳಿದ ಡಿಕೆಶಿ ಮತ್ತೆ ಯು.ಕೆ ಸ್ವಾಮಿ ಎದುರು ಗೆಲುವು ಸಾಧಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾರೆ. ಆಗ ಕಾಂಗ್ರೆಸ್ ಪಕ್ಷ ಅವರನ್ನು ಮತ್ತೆ ಪಕ್ಷಕ್ಕೆ ಬರಮಾಡಿಕೊಳ್ಳುತ್ತದೆ.

ಹೆಚ್.ಡಿ. ಕುಮಾರಸ್ವಾಮಿ ಎದುರು ಜಯ

1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮತ್ತೆ ಸಾತನೂರು ಕ್ಷೇತ್ರದಿಂದ ಕಣಕ್ಕಿಳಿದ ಡಿಕೆಶಿ, ಜೆಡಿಎಸ್‌ನಿಂದ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಸೋಲಿನ ರುಚಿ ತೋರಿಸುತ್ತಾರೆ. ಆ ಮೂಲಕ ದೇವೇಗೌಡರ ಎದುರು ಮೊದಲ ಚುನಾವಣೆಯಲ್ಲಿ ಕಂಡಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾರೆ. ಅದು ಅವರ ಹ್ಯಾಟ್ರಿಕ್ ಜಯವಾಗಿರುತ್ತದೆ. ಹಾಗಾಗಿ ಎಸ್.ಎಂ ಕೃಷ್ಣರವರ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಹಕಾರ ಸಚಿವರಾದರು. 2002ರಲ್ಲಿ ನಗರಾಭಿವೃದ್ದಿ ಖಾತೆಯ ಸಚಿವರಾದರು. ಜೊತೆಗೆ ರಾಜ್ಯ ನಗರ ಯೋಜನಾ ಮಂಡಳಿಯ ಅಧ್ಯಕ್ಷರಾಗುತ್ತಾರೆ. ಹೀಗೆ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತಾರೆ.

ಲೋಕಸಭೆಯಲ್ಲಿ ಸೋಲು

2002ರಲ್ಲಿ ಕನಕಪುರ ಲೋಕಸಭಾ ಸ್ಥಾನಕ್ಕೆ ಉಪ ಚುನಾವಣೆ ಎದುರಾಗುತ್ತದೆ. ಜೆಡಿಎಸ್‌ನಿಂದ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿದರೆ ಕಾಂಗ್ರೆಸ್‌ನಿಂದ ಡಿ.ಕೆ. ಶಿವಕುಮಾರ್ ಎದುರಾಳಿಯಾಗುತ್ತಾರೆ. ಆದರೆ, 1999ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಗನನ್ನು ಸೋಲಿಸಿದ್ದ ಡಿಕೆಶಿ ವಿರುದ್ಧ ಸದರಿ ಚುನಾವಣೆಯಲ್ಲಿ ದೇವೇಗೌಡರು ವಿಜಯಿಯಾಗುವ ಮೂಲಕ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ.

ಹೆಚ್.ಡಿ. ಕುಮಾರಸ್ವಾಮಿ

ಅದನ್ನು ಸವಾಲಾಗಿ ಸ್ವೀಕರಿಸುವ ಡಿ.ಕೆ. ಶಿವಕುಮಾರ್ 2004ರ ಲೋಕಸಭಾ ಚುನಾವಣೆಯಲ್ಲಿ (ಕನಕಪುರ) ಅದೇ ದೇವೇಗೌಡರ ವಿರುದ್ಧ ಹೆಚ್ಚೇನೂ ಪರಿಚಿತರಲ್ಲದ ತೇಜಸ್ವಿನಿಗೌಡ ಎಂಬ ಮಹಿಳೆಯನ್ನು ಅಭ್ಯರ್ಥಿಯನ್ನಾಗಿಸಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ದೇವೇಗೌಡರನ್ನು ಸೋಲಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು.

2004ರ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಸಾತನೂರಿನಿಂದ ನಾಲ್ಕನೇ ಬಾರಿ ಆರಿಸಿಬರುತ್ತಾರೆ. ಆಗ ಯಾವ ಪಕ್ಷಕ್ಕೂ ಬಹುಮತ ಬಾರದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸುತ್ತವೆ. ಆದರೆ ತಮ್ಮ ಸೋಲಿಗೆ ಕಾರಣವಾಗಿದ್ದ ಡಿ.ಕೆ. ಶಿವಕುಮಾರ್‌ರವರಿಗೆ ಯಾವುದೇ ಮಂತ್ರಿ ಸ್ಥಾನ ಸಿಗದಂತೆ ದೇವೇಗೌಡರು ನೋಡಿಕೊಳ್ಳುತ್ತಾರೆ. ಬೇಸರ ಮಾಡಿಕೊಳ್ಳದ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷ ನಿಷ್ಠರಾಗಿ ಉಳಿಯುತ್ತಾರೆ.

ಟ್ರಬಲ್ ಶೂಟರ್ ಗರಿಮೆ

ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ ಸಿಎಂ ವಿಲಾಸ್‌ರಾವ್ ದೇಶ್‌ಮುಖ್‌ರವರ ನೇತೃತ್ವದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿತ್ತು. ಆದರೆ ಎನ್‌ಸಿಪಿ ಪಕ್ಷವು ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆದುಕೊಳ್ಳಲು ಕಾರ್ಯತಂತ್ರ ರೂಪಿಸಿತ್ತು. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಶಾಸಕರನ್ನು ಕಾಪಾಡುವ ಹೊಣೆಯನ್ನು ಡಿಕೆಶಿ ಹೆಗಲಿಗೇರಿಸಿತು. ಆಗ ಡಿಕೆಶಿಯವರು ಕಾಂಗ್ರೆಸ್‌ನ ಹಲವಾರು ಶಾಸಕರನ್ನು ಬೆಂಗಳೂರಿಗೆ ಕರೆತಂದು ಸರ್ಕಾರ ಉಳಿಯುವಂತೆ ಮಾಡಿದರು. ಆಗಿನಿಂದ ಅವರಿಗೆ ಟ್ರಬಲ್ ಶೂಟರ್ ಎಂಬ ಗರಿಮೆ ಪ್ರಾಪ್ತವಾಯಿತು.

ಇದನ್ನೂ ಓದಿ: ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ಹೇಳಿದ್ದೇನೆ: ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ’ ಹೇಳಿಕೆಗೆ ಎಂಬಿ ಪಾಟೀಲ್ ಸ್ಪಷ್ಟನೆ

 

ಕನಕಪುರ ಕ್ಷೇತ್ರಕ್ಕೆ ಎಂಟ್ರಿ

ಕ್ಷೇತ್ರ ಮರುವಿಂಗಡಣೆಯಿಂದಾಗಿ ಸಾತನೂರು ವಿಧಾನಸಭಾ ಅಸ್ತಿತ್ವ ಕಳೆದುಕೊಂಡಿತು. ಹಾಗಾಗಿ ಡಿ.ಕೆ. ಶಿವಕುಮಾರ್ 2008ರಿಂದ ಕನಕಪುರಕ್ಕೆ ಬಂದು ಗೆಲುವಿನ ಓಟ ಮುಂದುವರಿಸಿದರು. ತಮ್ಮ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. 2008ರಲ್ಲಿ ಅವರು ಜೆಡಿಎಸ್‌ನ ಡಿ.ಎಂ. ವಿಶ್ವನಾಥ್ ಎದುರು 7,179 ಮತಗಳ ಅಂತರದ ಪ್ರಯಾಸದ ಜಯಗಳಿಸಿದರು. 2013ರಲ್ಲಿ ಪಿಜಿಆರ್ ಸಿಂಧ್ಯಾ ವಿರುದ್ಧ 31,424 ಮತಗಳ ಅಂತರದ ಗೆಲುವು ಕಂಡರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಡಿ.ಕೆ. ಶಿವಕುಮಾರ್‌ರವರ ವಿರುದ್ಧ ಇದ್ದ ಅಕ್ರಮ ಗಣಿಗಾರಿಕೆ ಮತ್ತು ಭ್ರಷ್ಟಾಚಾರದ ಆರೋಪಗಳ ಕಾರಣಕ್ಕೆ ಅವರಿಗೆ ಮಂತ್ರಿ ಸ್ಥಾನ ನೀಡಬಾರದು ಎಂಬ ಕೂಗೆದ್ದಿತು. 7 ತಿಂಗಳ ಕಾಲ ಸಚಿವ ಸ್ಥಾನದಿಂದ ವಂಚಿತರಾಗಿದ್ದರೂ, ನಂತರ ಮಂತ್ರಿಯಾದ ಡಿಕೆಶಿ ಇಂಧನ ಖಾತೆ ಪಡೆದರು.

ಕಾಂಗ್ರೆಸ್ ಪಾಲಿನ ಆಪತ್ಬಾಂಧವ

2017ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿ ಅಲ್ಪ ಅಂತರದಲ್ಲಿ ಸೋಲು ಕಂಡಿತು. ಬಿಜೆಪಿ ಗೆದ್ದರೂ ಸಾಕಷ್ಟು ಸ್ಥಾನ ಕಳೆದುಕೊಂಡಿತ್ತು. ಆಗ ಜರುಗಿದ ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದುಕೊಳ್ಳಲು ತನ್ನ ಶಾಸಕರ ಸಂಖ್ಯೆ ಕಡಿಮೆ ಇದ್ದುದರಿಂದ ಬಿಜೆಪಿ ಕುದುರೆ ವ್ಯಾಪಾರಕ್ಕೆ ಇಳಿಯಿತು. ಆಗ ಹೈಕಮಾಂಡ್ ಮತ್ತೊಮ್ಮೆ ಶಾಸಕರನ್ನು ರಕ್ಷಿಸಿಕೊಳ್ಳಲು ಡಿಕೆಶಿ ಮೊರೆಹೋಯಿತು. ಕೂಡಲೇ ಕಾರ್ಯಪ್ರವೃತ್ತರಾದ ಡಿಕೆಶಿ 44 ಗುಜರಾತ್ ಶಾಸಕರಿಗೆ ಆಶ್ರಯ ನೀಡಿ ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಗೆಲ್ಲುವಂತೆ ನೋಡಿಕೊಂಡರು. ಆಗ ಅಹ್ಮದ್ ಪಟೇಲ್ ಜೊತೆಗೆ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಡಿಕೆಶಿಗೆ ಕೃತಜ್ಞತೆ ಸಲ್ಲಿಸಿದ್ದರು.

2018ರಲ್ಲಿ ಕನಕಪುರದಿಂದ ಕಣಕ್ಕಿಳಿದ ಡಿಕೆಶಿ ಜೆಡಿಎಸ್‌ನ ನಾರಾಯಣಗೌಡರ ಎದುರು 79,909 ಮತಗಳ ಬೃಹತ್ ಅಂತರದ ಜಯ ದಾಖಲಿಸಿ 7ನೇ ಬಾರಿಗೆ ಶಾಸಕರಾದರು. ಅತಂತ್ರ ಫಲಿತಾಂಶದ ಕಾರಣದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗುತ್ತದೆ. ಸರ್ಕಾರದಲ್ಲಿ ಅವರನ್ನು ನಿರ್ಲಕ್ಷ್ಯ ಮಾಡಲಾಗದಂತೆ ಬೆಳೆದು ನಿಂತಿದ್ದರ ಪರಿಣಾಮ ಜಲಸಂಪನ್ಮೂಲ ಖಾತೆ ಸಚಿವರಾದರು.

ಅಕ್ರಮ ಹಣ ವರ್ಗಾವಣೆ ಆರೋಪ- ಇಡಿ ದಾಳಿ- 50 ದಿನ ಜೈಲಿನಲ್ಲಿ

2019ರಲ್ಲಿ ಡಿ.ಕೆ. ಶಿವಕುಮಾರ್ ಮೇಲೆ ಇಡಿ (ಎನ್ಫೋರ್ಸ್‌ಮೆಂಟ್ ಡೈರೆಕ್ಟೊರೆಟ್) ಸೇರಿದಂತೆ ಕೇಂದ್ರ ತನಿಖಾ ದಳಗಳು ದಾಳಿ ನಡೆಸಿದವು. ಅವರನ್ನು ಬಂಧಿಸಿ 50 ದಿನಗಳ ಕಾಲ ತಿಹಾರ್ ಜೈಲಿನಲ್ಲಿರಿಸಲಾಯಿತು. ಸೋನಿಯಾ ಗಾಂಧಿ ಖುದ್ದು ಜೈಲಿಗೆ ಹೋಗಿ ಭೇಟಿ ಮಾಡಿ ಧೈರ್ಯ ತುಂಬಿದರು. ಡಿಕೆಶಿ ವಿರುದ್ಧ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಪ್ರಚಾರ ಮಾಡಿತು. ಇದರಿಂದ ಡಿಕೆಶಿ ಜನರ ಅನುಕಂಪ ಗಳಿಸಿದರು. ಜೈಲಿನಿಂದ ಬಿಡುಗಡೆಯಾದಾಗ ಅಭಿಮಾನಿಗಳ ಮಹಾಪೂರವೇ ಹರಿದುಬಂದಿತ್ತು.

ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ

ಜೈಲಿನಿಂದ ಬಿಡುಗಡೆಯಾಗುತ್ತಲೇ ಡಿಕೆಶಿ ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊತ್ತುಕೊಂಡರು. ಅದ್ದೂರಿ ಕಾರ್ಯಕ್ರಮದ ಮೂಲಕ ಪದಗ್ರಹಣ ಮಾಡಿದರು. ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ ಮಾಡಿದರು. ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿ ಕರ್ನಾಟಕದಲ್ಲಿ 78 ಲಕ್ಷ ಸದಸ್ಯರ ನೋಂದಣಿ ಮಾಡಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದರು. ಮೇಕೆದಾಟು ಯೋಜನೆ ಜಾರಿಗಾಗಿ ಒತ್ತಾಯಿಸಿ ಅವರ ಅಧ್ಯಕ್ಷತೆಯಲ್ಲಿ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು. ಕೋವಿಡ್ ಕಾರಣದಿಂದ ಬಿಜೆಪಿ ಸರ್ಕಾರ ಅನುಮತಿ ನಿರಾಕರಿಸಿದರೂ ಪಟ್ಟು ಬಿಡದೆ ಎರಡು ಕಂತಿನಲ್ಲಿ ಪಾದಯಾತ್ರೆ ಮಾಡಿಯೇ ತೀರಿದರು.

ಭಾರತ್ ಜೋಡೋ-ಪ್ರಜಾಧ್ವನಿ ಯಾತ್ರೆಯ ಹಿಂದಿನ ಸಂಘಟಕ

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಕರ್ನಾಟಕದ ಸಂಘಟನಾ ಕೆಲಸವನ್ನು ಡಿಕೆಶಿ ವಹಿಸಿಕೊಂಡು ಯಶಸ್ವಿಗೊಳಿಸಿದರು. ಬೆಂಗಳೂರಿನಲ್ಲಿ ಸ್ವಾತಂತ್ರ್ಯ ನಡಿಗೆ ಎಂಬ ವಿಭಿನ್ನ ಕಾರ್ಯಕ್ರಮ ನಡೆಸಿದರು. ಚುನಾವಣಾ ಸಂದರ್ಭದಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಪ್ರಜಾಧ್ವನಿ ಯಾತ್ರೆ ಸಂಘಟಿಸಿದರು.

ದೊಡ್ಡ ಅಂತರದ ಜಯ

2023ರ ಚುನಾವಣೆಯಲ್ಲಿ ಕನಕಪುರದಿಂದ ಸ್ಪರ್ಧಿಸಿ 1,22,392 ಮತಗಳ ಭಾರೀ ಅಂತರದಿಂದ ಜಯಗಳಿಸಿದರು. ಅವರನ್ನು ಮಣಿಸಲು ಬಿಜೆಪಿ ಮತ್ತೊಬ್ಬ ಒಕ್ಕಲಿಗ ಮುಖಂಡ ಆರ್.ಅಶೋಕ್‌ರವರನ್ನು ಕಣಕ್ಕಿಳಿಸಿತ್ತು. ಆದರೆ ಹೀನಾಯ ಸೋಲು ಕಂಡ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಅಷ್ಟು ಮಾತ್ರವಲ್ಲದೇ ಜೆಡಿಎಸ್ ಭದ್ರಕೋಟೆಯಾಗಿದ್ದ ರಾಮನಗರ ಜಿಲ್ಲೆಯಲ್ಲಿ 4ಕ್ಕೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸುವಂತೆ ಡಿಕೆಶಿ ನೋಡಿಕೊಂಡರು.

ವಿವಾದಗಳು- ಆರೋಪಗಳು

ವಿರೋಧಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು, ಅವರು ಒಪ್ಪದಿದ್ದರೆ ನಿರ್ನಾಮ ಮಾಡುವುದು ಡಿ.ಕೆ ಸಹೋದರರ ರಾಜಕೀಯ ಎಂಬ ಆರೋಪವೂ ಅವರ ಮೇಲಿದೆ. ಡಿ.ಕೆ.ಶಿಗೆ ಪೈಪೋಟಿ ನೀಡುತ್ತಿದ್ದ ಪಿ.ಜಿ.ಆರ್ ಸಿಂಧ್ಯಾರವರು ಕೊನೆಗೆ ಕಾಂಗ್ರೆಸ್ ಸೇರಬೇಕಾಯಿತು. ಎಚ್.ಕೆ ಶ್ರೀಕಂಠು ಎಂಬುವವರು ಎಂಎಸ್‌ಸಿಯಲ್ಲಿ ಚಿನ್ನದ ಪದಕ ಗೆದ್ದಿದ್ದ ಪ್ರಗತಿಪರ ರೈತರಾಗಿದ್ದರು. ಡಿ.ಕೆ ಸಹೋದರರು ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪಗಳಿದ್ದ ಸಮಯದಲ್ಲಿಯೇ ಅವರು ಕಾಂಗ್ರೆಸ್ ಸೇರಿದರು. ಇನ್ನು ತೋಟಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಕೀರಣಗೆರೆ ಜಗದೀಶ್ ಎಂಬುವವರು ಕೀರಣಗೆರೆಯಲ್ಲಿ ದೊಡ್ಡ ರೇಷ್ಮೆ ಹುಳು ಸಾಕಾಣಿಕೆ ಕೇಂದ್ರ ನಡೆಸುತ್ತಿದ್ದಾರೆ. ನೂರಾರು ಜನರಿಗೆ ಉದ್ಯೋಗ ನೀಡಿರುವ ಅವರು ಆರಂಭದಲ್ಲಿ ಡಿ.ಕೆ. ಸಹೋದರರ ವಿರುದ್ಧವಿದ್ದವರು; ನಂತರ ಅವರು ಕೂಡ ಕಾಂಗ್ರೆಸ್ ಸೇರಿದ್ದಾರೆ. ಇಲ್ಲಿಯವರೆಗೆ ಜೆಡಿಎಸ್‌ನಲ್ಲಿದ್ದ ಬಾಲನರಸಿಂಹೇಗೌಡರು ಕಾಂಗ್ರೆಸ್ ಸೇರಿದ್ದಾರೆ. ಅಲ್ಲಿಗೆ ಡಿ.ಕೆ ಸಹೋದರರಿಗೆ ಪ್ರಬಲ ವಿರೋಧವೇ ಇಲ್ಲದ ಕ್ಷೇತ್ರವಾಗಿದೆ ಕನಕಪುರ.

ಇಡೀ ಕನಕಪುರದ ರಾಜಕೀಯ ಉಸ್ತುವಾರಿ ನೋಡಿಕೊಳ್ಳುವುದು ಡಿ.ಕೆ. ಶಿವಕುಮಾರ್ ಸಹೋದರ ಸಂಸದ ಡಿ.ಕೆ. ಸುರೇಶ್. ಸಾಕಷ್ಟು ಬೆಂಬಲಿಗ ಪಡೆಯನ್ನು ಹೊಂದಿರುವ ಡಿ.ಕೆ ಸುರೇಶ್ ಅವರಿಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ ಎನ್ನಲಾಗುತ್ತಿದೆ. ಕ್ಷೇತ್ರದ ಕಲ್ಲು ಗಣಿಗಾರಿಕೆಯ ಮೇಲೆ ಈ ಸಹೋದರರು ಹಿಡಿತ ಹೊಂದಿದ್ದರಿಂದಲೇ ಭಾರೀ ಶ್ರೀಮಂತರಾಗಲು ಕಾರಣವಾಗಿದೆ. ಹಣ, ಅಧಿಕಾರ ಹೊಂದಿರುವ ಇವರನ್ನು ಕ್ಷೇತ್ರದಲ್ಲಿ ಪ್ರಶ್ನಿಸುವವರೇ ಇಲ್ಲವಾಗಿದೆ ಎನ್ನುವುದು ಸಾಮಾನ್ಯ ಆರೋಪ.

ಇದನ್ನೂ ಓದಿ: ಬಿಕ್ಕಟ್ಟಿನಲ್ಲೂ ಸೆಕ್ಯುಲರ್ ಮೌಲ್ಯಗಳನ್ನು ಬಿಡದ ಎತ್ತರದ ನಾಯಕ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...