ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ (ಕೆಸಿಸಿಡಿಸಿ) ತನ್ನ ಹೊಸ ಸಾಲ, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳು ಮತ್ತು ಅಧಿಕೃತ ವೆಬ್ ಪೋರ್ಟಲ್‌ನ ಲೋಕಾರ್ಪಣೆಯನ್ನು 2025ರ ಅಕ್ಟೋಬರ್ 17ರಂದು ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಕೆಎಂಡಿಸಿ ಭವನದಲ್ಲಿ ನೆರವೇರಿಸಿತು.
ಕಾರ್ಯಕ್ರಮವನ್ನು ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು, “ಕರ್ನಾಟಕ ಸರ್ಕಾರವು ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಿ, ವಿಶೇಷ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.
ಅದೇ ರೀತಿಯಲ್ಲಿ, ಕ್ರಿಶ್ಚಿಯನ್ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಹಿತಕ್ಕಾಗಿ ಮತ್ತು ಅವರ ಸಂಸ್ಥೆಗಳ ಬಲವರ್ಧನೆಗಾಗಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಮುಖ್ಯಮಂತ್ರಿ ನಿಗಮಕ್ಕೆ ನೀಡಿರುವ 250 ಕೋಟಿ ರೂಪಾಯಿ ಅನುದಾನ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಉಪಯೋಗವಾಗಲೆಂದು ನಾನು ಆಶಿಸುತ್ತೇನೆ ಎಂದು ಹೇಳಿದರು.
ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ನಿಗಮದ ಹೊಸ ಯೋಜನೆಗಳು ಕ್ರಿಶ್ಚಿಯನ್ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದು ಶುಭ ಕೋರಿದರು.
ನಿಗಮದ ಅಧ್ಯಕ್ಷ ಪ್ರೊ. ಎಸ್. ಜಾಫೆಟ್ ಮಾತನಾಡಿ, ನಿಗಮದ ಸ್ಥಾಪನೆಗೆ ಕಾರಣರಾದ ಮುಖ್ಯಮಂತ್ರಿ, ಸಚಿವರು, ಸರ್ಕಾರ ಹಾಗೂ ಕ್ರಿಶ್ಚಿಯನ್ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು. ನಿಗಮದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಬದ್ಧರಾಗಿರುವುದಾಗಿ ತಿಳಿಸಿದರು. ನಿಗಮದ ಯೋಜನೆಗಳ ಬಗ್ಗೆ ಚರ್ಚ್‌ಗಳು, ಕ್ರೈಸ್ತ ಸಂಸ್ಥೆಗಳು ಮತ್ತು ಮುಖಂಡರು ಹೆಚ್ಚಿನ ಪ್ರಚಾರ ನೀಡುವುದರ ಮೂಲಕ ಅರ್ಹ ವ್ಯಕ್ತಿಗಳು ಯೋಜನೆಗಳ ಪ್ರಯೋಜನವನ್ನು ಪಡೆಯಲು ಸಹಕಾರ ನೀಡುವಂತೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಟೋನಿ ಮರಿಯಾ ಇಮ್ಯಾನ್ಯುಯಲ್, ನಿರ್ದೇಶಕ ಮಂಡಳಿಯ ಸದಸ್ಯರಾದ ಸಂಜೀವ್ ಕುಮಾರ್ ಜಾಗೀರ್ದಾರ್, ಪ್ರಶಾಂತ್ ರಾಜ್ ಜತ್ತನ್ನ, ಹರ್ಷ ಮೆಲ್ವಿನ್ ಲಾಸ್ರಾದೊ, ಸಂದೀಪ್ ಕೆ.ಸಿ, ಜೋಸೆಫ್ ಕುಮಾರ್, ಜಿ.ಜೆ. ರವಿಕುಮಾರ್, ಜೆ. ಕ್ಷೇವಿಯರ್ ಹಾಗೂ ಅಲ್ಪಸಂಖ್ಯಾತ ಅಯೋಗ್ಯದ ಅಧ್ಯಕ್ಷರು, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಅಲ್ಪಸಂಖ್ಯಾತರ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


