- Advertisement -
- Advertisement -
ಛತ್ತೀಸ್‌ಗಢದ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಮತ್ತು 40ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ.
ಮಂಗಳವಾರ (ಏ.14) ಮಧ್ಯಾಹ್ನ ಸುಮಾರು 2:30ರ ವೇಳೆ ಕಾರ್ಮಿಕರು ಊಟ ಮಾಡುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ.
ರಾಜ್ಯ ರಾಜಧಾನಿ ರಾಯ್‌ಪುರದಿಂದ ಸುಮಾರು 230 ಕಿ.ಮೀ ದೂರದಲ್ಲಿರುವ ಸಿಂಘಿತರೈ ಗ್ರಾಮದಲ್ಲಿ ದುರಂತ ನಡೆದಿದೆ.
ಬಾಯ್ಲರ್ ಟ್ಯೂಬ್ ಅಥವಾ ಹೈ-ಪ್ರೆಶರ್ ಸ್ಟೀಮ್ ಟ್ಯೂಬ್‌ನಲ್ಲಿ ಉಂಟಾದ ಸೋರಿಕೆಯಿಂದಾಗಿ ಸುಮಾರು 600 ಡಿಗ್ರಿ ತಾಪಮಾನದ ಉಗಿ (steam) ಕಾರ್ಮಿಕರ ಮೇಲೆ ಹರಡಿದ್ದರಿಂದ ಸಾವು-ನೋವುಗಳು ಸಂಭವಿಸಿವೆ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.
ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.


