ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ ಬದಲಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಈ ಬಾರಿ ಪಶ್ಚಿಮ ಬಂಗಾಳದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ, ‘ಸ್ಪೆಷಲ್ ಇಂಟೆನ್ಸಿವ್ ರಿವಿಷನ್’ (SIR) ಹೆಸರಿನಲ್ಲಿ ರೂಪಿಸಿದ ಕುತಂತ್ರ ಪೂರ್ಣ ಫಲ ನೀಡಿದೆ. ಚುನಾವಣಾ ಆಯೋಗದ ಸಹಕಾರದೊಂದಿಗೆ ನಡೆದ ಈ ವಿಶೇಷ ತೀವ್ರ ಪರಿಶೀಲನೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಒಂದೇ ರಾಜ್ಯದಲ್ಲಿ ಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು ವೋಟರ್ ಪಟ್ಟಿಯಿಂದ ಕತ್ತರಿಸಲಾಗಿದೆ. ಇದು ರಾಜ್ಯದ ಒಟ್ಟು ಮತದಾರರ ಪಟ್ಟಿಯಲ್ಲಿ ಸುಮಾರು 10.9% ಭಾರಿ ಇಳಿಕೆಯನ್ನು ಉಂಟುಮಾಡಿದೆ. ಪ್ರಾರಂಭದಲ್ಲಿ 7.66 ಕೋಟಿ ಇದ್ದ ಮತದಾರರ ಸಂಖ್ಯೆ ಅಂತಿಮವಾಗಿ 6.75 ಕೋಟಿಗೆ ಕುಸಿದಿದೆ. ಇದರಲ್ಲಿ ಮೃತರು, ಡ್ಯುಪ್ಲಿಕೇಟ್ ಹೆಸರುಗಳು ಮತ್ತು ವರ್ಗಾವಣೆಯಾದವರಿದ್ದರೂ, “ಲಾಜಿಕಲ್ ಡಿಸ್‌ಕ್ರೆಪೆನ್ಸಿ” ಎಂಬ ಹೊಸ ವರ್ಗದಲ್ಲಿ 27 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ನಿರ್ವಾಕ್ಷಣೆಯಿಂದ ಕತ್ತರಿಸಲಾಗಿದೆ. ಇದು ಸಾಮಾನ್ಯ ಶುದ್ಧೀಕರಣವಲ್ಲ, ಬದಲಿಗೆ ರಾಜಕೀಯ ಲಾಭಕ್ಕಾಗಿ ಯೋಜಿತವಾಗಿ ನಡೆಸಲಾಗಿರುವ ಮತದಾರರ ನಿರ್ಮೂಲನೆಯ ಕಾರ್ಯಾಚರಣೆ ಎಂದು ವಿರೋಧ ಪಕ್ಷಗಳು ಮತ್ತು ಜನಪರ ಸಂಘಟನೆಗಳು ಆರೋಪಿಸುತ್ತಿವೆ.
ಇದೇ ಪ್ರಕ್ರಿಯೆ ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲೂ ನಡೆದಿದೆ. ಈ ಪ್ರಕ್ರಿಯೆಯಲ್ಲಿ ತಮಿಳುನಾಡುನಲ್ಲಿ 97 ಲಕ್ಷ, ಕೇರಳದಲ್ಲಿ 9 ಲಕ್ಷ, ಪುದುಚೇರಿಯಲ್ಲಿ 77,000 ಮತದಾರರ ಹೆಸರುಗಳು ತೆಗೆದುಹಾಕಲ್ಪಟ್ಟಿವೆ. ಈ ಎಲ್ಲಾ ರಾಜ್ಯಗಳಲ್ಲಿ SIR ಮೂಲಕ ಮತದಾರ ಪಟ್ಟಿಯನ್ನು ಶುದ್ಧೀಕರಿಸಲಾಗಿದೆ ಎಂದು ECI ವಾದಿಸುತ್ತಿದೆ. ಆದರೆ ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಇದನ್ನು “ಕುಟಿಲ ಉದ್ದೇಶ”ದೊಂದಿಗೆ ನಡೆಸಲಾಗಿದೆ ಎನ್ನುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ BJP ಗೆಲುವು ಸಾಧಿಸಿರುವುದು SIR ಪ್ರಕ್ರಿಯೆಯ ಪರಿಣಾಮವಾಗಿದೆ ಎಂದು ಹಲವು ರಾಜಕೀಯ ಪಕ್ಷಗಳು, ಜನಪರ ಸಂಘಟನೆಗಳು, ಹೋರಾಟಗಾರರು ಹೇಳುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ವಿಶೇಷವಾಗಿ ಮುಸ್ಲಿಂ-ಪ್ರಧಾನ ಪ್ರದೇಶಗಳು (ಉದಾ. ಮುರ್ಷಿದಾಬಾದ್), ಮಹಿಳೆಯರು, ಆದಿವಾಸಿಗಳು, ದಲಿತರು, ವಲಸೆ ಕಾರ್ಮಿಕರು ಮತ್ತು ಹಿಂದುಳಿದ ವರ್ಗಗಳ ಮತದಾರರು ಹೆಚ್ಚು ಪ್ರಭಾವಿತರಾಗಿದ್ದಾರೆ. ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಯನ್ನು ಅನುಮೋದಿಸಿದ್ದರೂ, ಈ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗದವರು ಮುಂದಿನ ಚುನಾವಣೆಗೆ ಅರ್ಜಿ ಹಾಕಬಹುದು ಎಂದು ಹೇಳಿದೆ.
ಭಾರತ ಸಂವಿಧಾನದ 324ನೇ ವಿಧಿಯನ್ವಯ ಚುನಾವಣಾ ಆಯೋಗವು ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎಂಬ ಆರೋಪಗಳು ತೀವ್ರವಾಗಿವೆ. ಎಲ್ಲರನ್ನೂ ಒಳಗೊಳ್ಳುವಂತಹ ಮತದಾರರ ಪಟ್ಟಿ ನೀಡುವಲ್ಲಿ SIRನ ಅಸಮರ್ಥತೆ ಸಾಬೀತಾಗಿದೆ ಎಂದು ಎದ್ದೇಳು ಕರ್ನಾಟಕ, ಎಸ್‌ಐಆರ್ ವಿರೋಧಿ ಹೋರಾಟ ವೇದಿಕೆ, ಸೇರಿದಂತೆ ಹಲವು ನಾಗರಿಕ ಸಂಘಟನೆಗಳು, ಹೋರಾಟಗಾರರ ಗುಂಪುಗಳು ಚುನಾವಣಾ ಆಯೋಗದ ಎಸ್ಐಆರ್ ಅನ್ನು ವಿರೋಧಿಸುತ್ತಿವೆ.
ಇದೇ ಕಾರಣಕ್ಕೆ ಈಗ ಪಶ್ಚಿಮ ಬಂಗಾಳದ ಫಲಿತಾಂಶ ಇಡೀ ದೇಶಕ್ಕೆ ಒಂದು ಪಾಠವಾಗಿದ್ದು, ಇದು ಕರ್ನಾಟಕಕ್ಕೆ ಕಾಲಿಡದಂತೆ ನೋಡಿಕೊಳ್ಳಬೇಕು ಎಂದು ಹಲವು ಜನಪರ ಸಂಘಟನೆಗಳು, ಹೋರಾಟಗಾರರು ಎಸ್ಐಆರ್ ವಿರೋಧಿಸಲು ಕರೆ ನೀಡುತ್ತಿದ್ದಾರೆ.
ಕರ್ನಾಟಕದಲ್ಲಿ SIR ಜಾರಿಯಾದರೆ, ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮತಗಳ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಇದು 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಸಮೀಕರಣಗಳನ್ನು ಬದಲಾಯಿಸುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಇದು ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಸಾರ್ವತ್ರಿಕ ವಯಸ್ಕ ಮತಾದಾನದ ಹಕ್ಕು ಮತ್ತು ರಾಜಕೀಯ ಸಮಾನತೆಯ ಭರವಸೆಯನ್ನು ಈ ಅಪಾಯಕ್ಕೆ ಒಳಪಡಿಸುತ್ತಿದೆ. ಎಂದು ನಾಡಿನ ಪ್ರಮುಖ ಚಿಂತಕರು, ಹೋರಾಟಗಾರರು ಬೃಹತ್ ಹೋರಾಟವೊಂದನ್ನ ರೂಪಿಸುವತ್ತ ಗಮನ ಹರಿಸುತ್ತಿದ್ದಾರೆ. ಈ ಬಗ್ಗೆ ಹಲವು ಸಾಮಾಜಿಕ ಚಿಂತಕರು, ಹೋರಾಟಗಾರರು, ರಾಜಕಾರಣಿಗಳು ನಾನು ಗೌರಿ.ಕಾಮ್ ನೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
SIR ಒಂದು ಫ್ಯಾಸಿಸ್ಟ್, ಮನುವಾದಿ ಪ್ರಕ್ರಿಯೆ
ಪಂಚರಾಜ್ಯ ಚುನಾವಣೆ ಫಲಿತಾಂಶ ಅದರಲ್ಲೂ ಮುಖ್ಯವಾಗಿ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದ ಮೇಲೆ ಎಸ್ಐಆರ್ ಪ್ರಭಾವದ ಕುರಿತು ನಾನು ಗೌರಿ. ಕಾಮ್ ನೊಂದಿಗೆ ಮಾತನಾಡಿರುವ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ಫೆಡರೇಷನ್ ನೂತನ ಅಧ್ಯಕ್ಷರಾದ ಜ್ಯೋತಿ ಅನಂತಸುಬ್ಬರಾವ್ ಅವರು, “SIR ಒಂದು ಫ್ಯಾಸಿಸ್ಟ್, ಮನುವಾದಿ ಪ್ರಕ್ರಿಯೆ” ಎಂದಿದ್ದಾರೆ.
“ದಲಿತರು, ಮುಸ್ಲಿಮರು, ಆದಿವಾಸಿಗಳು, ಮಹಿಳೆಯರು, ಟ್ರಾನ್ಸ್‌ಜೆಂಡರ್‌ಗಳು ಮತ್ತು ಕಾರ್ಮಿಕರ ಮತದಾನ ಹಕ್ಕನ್ನು ಕಸಿದುಕೊಳ್ಳುವ ಬಿಜೆಪಿ-ಆರ್‌ಎಸ್‌ಎಸ್‌ನ ಹಿಂದೂತ್ವ ತಂತ್ರವಿದು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ SIR ಪ್ರಮುಖ ಕಾರಣ.ಕರ್ನಾಟಕ ಕಾಂಗ್ರೆಸ್ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮತ್ತು ದುಡಿಯುವ ವರ್ಗದ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮೃಷ್ಟಾನ್ನ ತಿನಿಸಿದಂತಾಗುತ್ತದೆ.” ಎಂದು ಜ್ಯೋತಿ ಅನಂತಸುಬ್ಬರಾವ್ ಹೇಳಿದ್ದಾರೆ.

ಬಂಗಾಳದಲ್ಲಿ ನಡೆದದ್ದು ಮುಕ್ತ ಮತ್ತು ಸಂವಿಧಾನಬದ್ಧ ಚುನಾವಣೆಯೇ?
‘ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ SIR (Special Intensive Revision) ಕಾರಣವೇ ಎಂಬ ಚರ್ಚೆಯೇ ಅರ್ಥಹೀನ’ ಎಂದಿರುವ ಸಾಮಾಜಿಕ ಹೋರಾಟಗಾರರಾದ ನೂರ್ ಶ್ರೀಧರ್ ಅವರು, “ಮೊದಲು ನಾವು ಕೇಳಬೇಕಾದ ಪ್ರಶ್ನೆ, ಬಂಗಾಳದಲ್ಲಿ ನಡೆದದ್ದು ಮುಕ್ತ ಮತ್ತು ಸಂವಿಧಾನಬದ್ಧ ಚುನಾವಣೆಯೇ?” ಎಂದು ಪ್ರಶ್ನಿಸಿದ್ದಾರೆ.
ಅವರ ಪ್ರಕಾರ, ಈ ಚುನಾವಣೆಯಲ್ಲಿ ಸುಮಾರು 90 ಲಕ್ಷಕ್ಕೂ ಹೆಚ್ಚಿನ ಮತದಾರರ ಹೆಸರುಗಳನ್ನು ವೋಟರ್ ಪಟ್ಟಿಯಿಂದ ಅಳಿಸಲಾಗಿದೆ. ಇದರಲ್ಲಿ 27 ಲಕ್ಷ ಜನರು ಅಪೀಲ್ ಸಲ್ಲಿಸಿದ್ದಾರೆ. ಒಟ್ಟು 35 ಲಕ್ಷ ಜನರು ದಾಖಲೆಗಳೊಂದಿಗೆ ಅರ್ಜಿ ಹಾಕಿದ್ದರೂ, ಆ ಅರ್ಜಿಗಳ ಪರಿಶೀಲನೆಯೇ ನಡೆಯಲಿಲ್ಲ. ಚುನಾವಣಾ ಆಯೋಗಕ್ಕೆ ಇಷ್ಟು ದೊಡ್ಡ ಸಂಖ್ಯೆಯ ಅರ್ಜಿಗಳನ್ನು ಪರಿಶೀಲಿಸುವ ವ್ಯವಸ್ಥೆಯೇ ಇರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮತದಾರರ ಪಟ್ಟಿ ಮ್ಯಾಪಿಂಗ್‌ನಲ್ಲಿ ಸ್ಪಷ್ಟತೆ ಇಲ್ಲದ ಕಾರಣ 27 ಲಕ್ಷ ಜನರನ್ನು ಹೊರಗಿಡಲಾಗಿದೆ. ಈ ಅಳಿಸುವಿಕೆ ಅಲ್ಪಸಂಖ್ಯಾತರು ಹೆಚ್ಚಿರುವ ಕ್ಷೇತ್ರಗಳಲ್ಲಿ ಹೆಚ್ಚಾಗಿ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಚುನಾವಣೆಯನ್ನು ‘ಫ್ರೀ ಅಂಡ್ ಫೇರ್’ ಎಂದು ಕರೆಯುವುದು ಸಾಧ್ಯವೇ?” ಎಂದು ಶ್ರೀಧರ್ ಪ್ರಶ್ನಿಸಿದ್ದಾರೆ.
ಚುನಾವಣಾ ಆಯೋಗದ ರಚನೆಯನ್ನು ತೀವ್ರವಾಗಿ ಟೀಕಿಸಿರುವ ನೂರ್ ಶ್ರೀಧರ್, ಆಯೋಗದಲ್ಲಿ ಆಳುವ ಪಕ್ಷದ ಇಬ್ಬರು ಪ್ರತಿನಿಧಿಗಳು ಮತ್ತು ವಿರೋಧ ಪಕ್ಷದ ಒಬ್ಬರು ಇರುವುದು ಸ್ಪಷ್ಟ ಪಕ್ಷಪಾತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ SIR ಪ್ರಕ್ರಿಯೆಯಲ್ಲಿ ‘ಲಾಜಿಕಲ್ ಡಿಸ್‌ಕ್ರೆಪೆನ್ಸಿ’ಯಂತಹ ಹೊಸ ನಿಯಮಗಳನ್ನು ಸೇರಿಸಿ, ಬಿಜೆಪಿ ಆಡಳಿತ ರಾಜ್ಯಗಳಿಂದ ಅಬ್ಸರ್ವರ್‌ಗಳನ್ನು ಕಳುಹಿಸಿ ದೋಷ ಹುಡುಕಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಬಂಗಾಳದ ಘಟನೆ ಕರ್ನಾಟಕಕ್ಕೆ ದೊಡ್ಡ ಪಾಠ ಎಂದು ಎಚ್ಚರಿಸಿರುವ ಶ್ರೀಧರ್, “ಕರ್ನಾಟಕ ಮುಂದಿನ ಟಾರ್ಗೆಟ್ ರಾಜ್ಯ. ಬೆಂಗಾಳ ಮತ್ತು ಅಸ್ಸಾಂನಂತೆ ಇಲ್ಲಿ ಸಹ SIR ಮೂಲಕ ರಾಜ್ಯವನ್ನು ಕೈವಶ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ” ಎಂದು ಹೇಳಿದ್ದಾರೆ. ಇದಕ್ಕೆ ಪರಿಹಾರವಾಗಿ ಅವರು ಮೂರು ಮುಖ್ಯ ನಿಲುವುಗಳನ್ನು ಮುಂದಿಟ್ಟಿದ್ದಾರೆ:
- SIR ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸುವುದು,
- ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಳಿಸುವುದು,
- ಜನಪರ ಮತ್ತು ಪಾರದರ್ಶಕ ವ್ಯವಸ್ಥೆಯ ಮೂಲಕ ಹೊಸ ನಿಯಮಗಳನ್ನು ರೂಪಿಸಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದು.
“ಇದು ಕರ್ನಾಟಕದ ಜನ ಚಳವಳಿಗಳು, ರಾಜಕೀಯ ಪಕ್ಷಗಳು ಮತ್ತು ವಿಶೇಷವಾಗಿ ಆಳುವ ಕಾಂಗ್ರೆಸ್ ಪಕ್ಷದ ನಿಲುವಾಗಬೇಕು. ಈ ವಿಚಾರದ ಮೇಲೆ ತೀವ್ರ ಒತ್ತಡ ಹೇರಬೇಕು” ಎಂದು ಅವರು ಒತ್ತಾಯಿಸಿದ್ದಾರೆ. ಬಂಗಾಳದಲ್ಲಿ ಟಿಎಂಸಿ ಹೊಂದಿರುವ ಬೂತ್‌ಲೆವೆಲ್ ನೆಟ್‌ವರ್ಕ್ ಮತ್ತು ಕೆಡರ್ ಬಲವನ್ನು ಉಲ್ಲೇಖಿಸಿದ ಶ್ರೀಧರ್, ಕರ್ನಾಟಕದಲ್ಲಿ ಅಂತಹ ಸಂಘಟನಾತ್ಮಕ ಬಲ ಮತ್ತು ಇಚ್ಛಾಶಕ್ತಿ ಕೊರತೆ ಇದೆ ಎಂದು ಹೇಳಿದ್ದಾರೆ. ಬಿಎಲ್‌ಎ ತರಬೇತಿ ಮತ್ತು ಬಿಎಲ್‌ಓಗಳ ಮೂಲಕ ಮಾತ್ರ SIR ಅನ್ನು ತಡೆಯುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆ: SIR ಪ್ರಕ್ರಿಯೆಯ ಅಪಾಯಕಾರಿ ಮುಖ
ಬಿಜೆಪಿಯ ಸ್ಟ್ರಾಟೆಜಿಕ್ ನಡೆಗಳು ಪ್ರಜಾಪ್ರಭುತ್ವಕ್ಕೆ ತೀವ್ರ ಬೆದರಿಕೆಯಾಗಿವೆ ಎಂದಿರುವ ಜನವಾದಿ ಮಹಿಳಾ ಸಂಘಟನೆಯ ನಾಯಕಿ ವಿಮಲಾ ಕೆ.ಎನ್ ಅವರು, ‘ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶ ಎಸ್ಐಆರ್ ಪ್ರಕ್ರಿಯೆಯ ಅಪಾಯಕಾರಿ ಮುಖ’ ಎಂದಿದ್ದಾರೆ.
ಈ ಕುರಿತು ನಾನು ಗೌರಿ. ಕಾಮ್ ನೊಂದಿಗೆ ಮಾತನಾಡಿರುವ ಅವರು, ‘ಪಶ್ಚಿಮ ಬಂಗಾಳದಲ್ಲಿ SIR (Special Intensive Revision) ಮೂಲಕ ಲಕ್ಷಾಂತರ ಮತದಾರರನ್ನು ಹೊರತಳ್ಳಲಾಗಿದೆ. ಹೊರತಳ್ಳಲ್ಪಟ್ಟ ಮತದಾರರ ಸಂಖ್ಯೆ ಮತ್ತು ಬಿಜೆಪಿ-ಟಿಎಂಸಿ ನಡುವಿನ ಸೋಲು-ಗೆಲುವಿನ ಅಂತರ ಸರಿಸುಮಾರು ಸಮಾನವಾಗಿರುವುದು ಆಕಸ್ಮಿಕವಲ್ಲ. ಟಿಎಂಸಿ ಸರ್ಕಾರದ ವಿರುದ್ಧ ವ್ಯಾಪಕ ಆಡಳಿತ ವಿರೋಧಿ ಅಲೆ ಇದ್ದರೂ, ಆರ್.ಜಿ.ಕರ್, ಸಂದೇಶ್‌ಖಾಲಿ ಘಟನೆಗಳು ಮತ್ತು ಭ್ರಷ್ಟಾಚಾರಗಳು ಸೋಲಿಗೆ ಕಾರಣವಾದವು. ಆದರೆ ಬಿಜೆಪಿಯ ಸ್ಟ್ರಾಟೆಜಿಕ್ ನಡೆಗಳು ಪ್ರಜಾಪ್ರಭುತ್ವಕ್ಕೆ ತೀವ್ರ ಬೆದರಿಕೆಯಾಗಿವೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈಗಲಾದರೂ ಎಚ್ಚರಗೊಳ್ಳಬೇಕು’ ಎಂದು ಹೇಳಿದ್ದಾರೆ.
ತಮಿಳುನಾಡು-ಕೇರಳದಲ್ಲಿ ಬಿಜೆಪಿ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದರೆ ಕರ್ನಾಟಕ ದಕ್ಷಿಣ ಭಾರತಕ್ಕೆ ಹೆಬ್ಬಾಗಿಲಾಗಿದೆ. ಬಿಜೆಪಿ ಈಗಾಗಲೇ ತಳಮಟ್ಟದಲ್ಲಿ SIR ಕೆಲಸಕ್ಕೆ ಕಾರ್ಯಕರ್ತರನ್ನು ನಿಯೋಜಿಸಿದೆ. ಅಲಕ್ಷ್ಯ ಮಾಡಿದರೆ ಪರಿಣಾಮ ವಿಪರೀತವಾಗಲಿದೆ ಎಂದು ವಿಮಲಾ ಎಚ್ಚಸಿದ್ದಾರೆ.
SIR ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೇಲಿನ ದಾಳಿ
ಸಿಪಿಐ(ಎಂ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಪ್ರಕಾಶ್ ಕೆ. ಅವರು ಮಾತನಾಡಿ “ಬಿಜೆಪಿಯ ಮೂಲ ಉದ್ದೇಶ ಭಾರತದ ಪ್ರಜಾಸತ್ತಾತ್ಮಕ, ಜಾತ್ಯತೀತ ಸಂವಿಧಾನವನ್ನು ಬದಲಾಯಿಸಿ ಹಿಂದೂ ರಾಷ್ಟ್ರ ಸ್ಥಾಪಿಸುವುದು. ಇದನ್ನು ನೇರ ಚುನಾವಣೆಗಳಲ್ಲಿ ಸಾಧಿಸಲು ಕಷ್ಟವಾಗುತ್ತಿರುವುದರಿಂದ ಅವರು ಚುನಾವಣಾ ಆಯೋಗವನ್ನೇ ತಮ್ಮ ಟೂಲ್‌ಕಿಟ್ ಆಗಿ ಬಳಸುತ್ತಿದ್ದಾರೆ. SIR (Special Intensive Revision) ಅನ್ನು ಹೆಚ್ಚುವರಿ ಆಯುಧವಾಗಿ ಬಳಸಿ ಲಕ್ಷಾಂತರ ಮತದಾರರನ್ನು ವ್ಯವಸ್ಥಿತವಾಗಿ ಹೊರತಳ್ಳುತ್ತಿದ್ದಾರೆ.”ಎಂದಿದ್ದಾರೆ.
ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂನಂತಹ ರಾಜ್ಯಗಳಲ್ಲಿ ವೋಟ್ ಅಂತರಕ್ಕಿಂತ ಹೆಚ್ಚು ಮತದಾರರನ್ನು ಅಳಿಸುವ ಮೂಲಕ ಬಿಜೆಪಿ ಬಹುಮತ ಸಾಧಿಸುತ್ತಿದೆ ಎಂದು ಪ್ರಕಾಶ್ ಕೆ. ಆರೋಪಿಸಿದ್ದಾರೆ.
ಇದು ಸಂಸತ್ತಿನಲ್ಲಿ 2/3 ಬಹುಮತ ಸಾಧಿಸಿ ಸಂವಿಧಾನ ಬದಲಾವಣೆ ಮಾಡುವ ಅವರ ದೀರ್ಘಕಾಲೀನ ತಂತ್ರದ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
ಮಹಿಳೆಯರ ಮೇಲಿನ ಪರಿಣಾಮ
ಈ SIR ಪ್ರಕ್ರಿಯೆಯಿಂದ ಪ್ರಮುಖವಾಗಿ ಮಹಿಳೆಯರು ಅತ್ಯಂತ ಹೆಚ್ಚು ಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಮದುವೆಯ ನಂತರ ಸೊಸೆಯರ ಹೆಸರು ವೋಟರ್ ಪಟ್ಟಿಯಲ್ಲಿ ಮ್ಯಾಪಿಂಗ್ ಆಗದ ಸಮಸ್ಯೆ, ದಾಖಲೆಗಳ ಕೊರತೆ, ತಂದೆ-ತಾಯಿ ಮನೆಯ ದಾಖಲೆಗಳ ಅಗತ್ಯ, ಭೂರಹಿತ ಮಹಿಳೆಯರು, ಅರಣ್ಯ ಭೂಮಿಯಲ್ಲಿ ವಾಸಿಸುವ ಮಹಿಳೆಯರು, ಇವರೆಲ್ಲರೂ ತಮ್ಮ ಮತದಾರ ಹಕ್ಕನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಬಡವರು, ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮತದಾರ ಹಕ್ಕುಗಳನ್ನು ತೆಗೆದುಕೊಳ್ಳುವ ಮೂಲಕ ಬಿಜೆಪಿ ತನ್ನ ಕೋಮುವಾದಿ ಅಜೆಂಡಾವನ್ನು ಸಾಧಿಸುತ್ತಿದೆ ಎಂದಿರುವ ಪ್ರಕಾಶ್ ಕೆ. ಅವರು “ಸುಪ್ರೀಂ ಕೋರ್ಟ್ SIRನ ಸಾಂವಿಧಾನಿಕತೆಯನ್ನು ತ್ವರಿತವಾಗಿ ತೀರ್ಮಾನಿಸಬೇಕು. ಕರ್ನಾಟಕದಲ್ಲಿ ಈಗಾಗಲೇ ಮ್ಯಾಪಿಂಗ್ ಸಮಸ್ಯೆ ತೀವ್ರವಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಸುಮ್ಮನೆ ನೋಡುತ್ತಾ ಕುಳಿತಿರಬಾರದು. ಜನರಿಗೆ ದಾಖಲೆಗಳನ್ನು ಒದಗಿಸುವ ಕಾನೂನುಬದ್ಧ ಕ್ರಮಗಳನ್ನು ತೆಗೆದುಕೊಳ್ಳಬೇಕು. SIR ಅನ್ನು ತಿರಸ್ಕರಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸುವ ರಾಜಕೀಯ ಸಂಘರ್ಷವನ್ನು ನಡೆಸಬೇಕು.” ಎಂದು ಹೇಳಿದ್ದಾರೆ.

SIR ಪ್ರಕ್ರಿಯೆಯು ವಿರೋಧ ಪಕ್ಷಗಳ ನಿರ್ಮೂಲನೆಯ ತಂತ್ರ
ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ಮತ್ತು ಎಸ್ಐಆರ್ ಕುರಿತು ನಾನು ಗೌರಿ.ಕಾಮ್ ನೊಂದಿಗೆ ಮಾತನಾಡಿದ ಸಿಪಿಐ ರಾಜ್ಯ ಸಮಿತಿ ಸದಸ್ಯರು ಮತ್ತು ಚಿಂತಕರಾದ ಸಿದ್ದನಗೌಡ ಪಾಟೀಲರು, “ವಿಶೇಷ ಮತದಾರರ ಪರಿಷ್ಕರಣೆ (SIR) ಎಂಬುದು ಸಂವಿಧಾನಾತ್ಮಕವಾಗಿ ಮತದಾರರ ಹಕ್ಕುಗಳನ್ನು ರಕ್ಷಿಸುವ ಉದ್ದೇಶಕ್ಕಾಗಿ ಇರಬೇಕಿತ್ತು. ಆದರೆ ಬಿಜೆಪಿ ಇದನ್ನು ವಿರೋಧ ಪಕ್ಷಗಳ ವೋಟ್ ಬ್ಯಾಂಕ್‌ನ್ನು ನಿರ್ಮೂಲನೆ ಮಾಡುವ ಅಸ್ತ್ರವಾಗಿ ಬಳಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ 90 ಲಕ್ಷಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಹೊರಹಾಕಿರುವುದು ಈ ತಂತ್ರದ ಸ್ಪಷ್ಟ ನಿದರ್ಶನವಾಗಿದೆ.” ಎಂದಿದ್ದಾರೆ.
ಬಿಜೆಪಿ ‘ಒಂದು ದೇಶ, ಒಂದು ಸಂಸ್ಕೃತಿ, ಒಂದು ಭಾಷೆ’ಯ ಅಜೆಂಡಾವನ್ನು ಸಾಧಿಸಲು ಮೊದಲು ಕಾಂಗ್ರೆಸ್ ಮುಕ್ತ ಭಾರತವನ್ನು, ಈಗ ವಿರೋಧ ಮುಕ್ತ ರಾಜಕಾರಣವನ್ನು ಗುರಿಯಾಗಿಟ್ಟುಕೊಂಡಿದೆ ಎಂದು ಸಿದ್ದನಗೌಡ ಪಾಟೀಲರು ಆರೋಪಿಸಿದ್ದಾರೆ.
ಆರ್‌ಎಸ್‌ಎಸ್‌ನ ಬೂತ್‌ಲೆವೆಲ್ ಸಂಘಟನೆಯ ಮೂಲಕ ವಿರೋಧ ಪಕ್ಷಗಳ ಬೆಂಬಲ ಕ್ಷೇತ್ರಗಳನ್ನು ಗುರುತಿಸಿ, ಪ್ರತಿ ಕ್ಷೇತ್ರದಲ್ಲಿ 5-10 ಸಾವಿರ ಮತಗಳನ್ನು ತೆಗೆದುಹಾಕುವ ಮೂಲಕ ಫಲಿತಾಂಶ ಬದಲಾಯಿಸುವ ವ್ಯವಸ್ಥಿತ ತಂತ್ರವನ್ನು ಅನುಸರಿಸುತ್ತಿದೆ ಎಂದಿರುವ ಅವರು “ಇದು ಅಸಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕ ನಡೆ. ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಮತ್ತು ವಿರೋಧ ಪಕ್ಷಗಳ ಬೆಂಬಲಿಗರನ್ನು ಗುರಿಯಾಗಿಟ್ಟುಕೊಂಡು ಮತದಾರರ ಪಟ್ಟಿಯಿಂದ ಹೊರಗಿಡಲಾಗುತ್ತಿದೆ. ಇದು ನ್ಯಾಯಯುತ ಚುನಾವಣೆಯಲ್ಲ, ಮೋಸದ ಮೂಲಕ ಅಧಿಕಾರ ಗೆಲ್ಲುವ ತಂತ್ರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ 224 ಕ್ಷೇತ್ರಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ 5-10 ಸಾವಿರ ಮತಗಳ ಅಂತರವಿದೆ. ಶೃಂಗೇರಿ ಕ್ಷೇತ್ರದಂತೆ ನೂರು ಮತಗಳ ಅಂತರವೂ ಸಾಕು ಸ್ಥಾನಪಲ್ಲಟಕ್ಕೆ. ಆದ್ದರಿಂದ ಕರ್ನಾಟಕ ಬಿಜೆಪಿಯ ಮುಂದಿನ ಟಾರ್ಗೆಟ್ ಎಂದು ಸಿದ್ದನಗೌಡ ಪಾಟೀಲರು ಎಚ್ಚರಿಸಿದ್ದಾರೆ. “ಬಿಜೆಪಿ ಎಂದಿಗೂ ಏಕಪಕ್ಷೀಯ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ವಿಭಜನೆ, ಆಪರೇಷನ್ ಕಮಲ ಮತ್ತು SIR ಮೂಲಕ ಅಧಿಕಾರ ಗೆಲ್ಲುವ ತಂತ್ರವನ್ನು ಅನುಸರಿಸುತ್ತಿದೆ. ಕರ್ನಾಟಕ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಈ ಪ್ರಜಾತಂತ್ರದ ಕಗ್ಗೊಲೆಯನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಕಾಂಗ್ರೆಸಿಗೆ SIR ಮತ್ತು ಧ್ರುವೀಕರಣ ರಾಜಕಾರಣದ ಅಪಾಯ ಇನ್ನೂ ಅರ್ಥವಾಗಿಲ್ಲ
ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು ನಾನುಗೌರಿ.ಕಾಮ್‌ನೊಂದಿಗೆ ಮಾತನಾಡಿ, “ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ರಾಜ್ಯಗಳಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ಸುಮಾರು 30% ಇದ್ದರೂ ಬಿಜೆಪಿ ದೊಡ್ಡ ಬಹುಮತ ಪಡೆದಿರುವುದು ಆಘಾತಕಾರಿ. ಇಲ್ಲಿ SIR (Special Intensive Revision) ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬಿಜೆಪಿ ವಿರೋಧಿ ಮುಸ್ಲಿಮರು, ದುರ್ಬಲ ಸಮುದಾಯಗಳ ಮತಗಳನ್ನು SIR ನೆಪದಲ್ಲಿ ಕಡಿತಗೊಳಿಸಲಾಗಿದೆ. ಬಿಹಾರದಲ್ಲೂ ಇದೇ ರೀತಿ ನಡೆದಿದೆ. SIR ಸಂದರ್ಭದಲ್ಲಿ ಮುಸ್ಲಿಂ ವಿರೋಧಿ ಭಾವನೆಯನ್ನು ಬಲಗೊಳಿಸಿ ಬಹುಸಂಖ್ಯಾತರನ್ನು ಧ್ರುವೀಕರಿಸುವಲ್ಲಿ ಬಿಜೆಪಿ ಪರಿವಾರ ಯಶಸ್ವಿಯಾಗಿದೆ ಎಂದು ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿಯ ಸರ್ವಾಧಿಕಾರಿ ಆಡಳಿತವೂ ಟಿಎಂಸಿ ಸೋಲಿಗೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ SIR ಮತ್ತು ಧ್ರುವೀಕರಣ ರಾಜಕಾರಣದ ಅಪಾಯ ಇನ್ನೂ ಅರ್ಥವಾಗಿಲ್ಲ. ಅದು ಬಿಜೆಪಿಯನ್ನು ಸಾಮಾನ್ಯ ಎದುರಾಳಿಯಾಗಿ ಮಾತ್ರ ನೋಡುತ್ತಿದೆ. ಜಾತ್ಯತೀತ ಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿಯ ಫ್ಯಾಸಿಸಂ ವಿರುದ್ಧ ವಿಶಾಲ ಮೈತ್ರಿಕೂಟ ರಚಿಸುವತ್ತ ಗಮನ ಹರಿಸುತ್ತಿಲ್ಲ. ಇದು ರಾಹುಲ್ ಗಾಂಧಿಯಲ್ಲೂ ಕಾಣುವ ಕೊರತೆ. SIR ಮೂಲಕ ವಿರೋಧಿ ಮತದಾರರನ್ನು ಹೊರಗಿಡುವ ಬಿಜೆಪಿಯ ಷಡ್ಯಂತ್ರಕ್ಕೆ ದೇಶದ ಜನಪರ ಚಳವಳಿಗಳು ಮೌನ ಪ್ರೇಕ್ಷಕರಾಗುವಂತಾಗಿದೆ.” ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆ: ಪ್ರಜಾಪ್ರಭುತ್ವಕ್ಕೆ ಎಚ್ಚರಿಕೆ
‘ಬಂಗಾಳದಲ್ಲಿ ನಡೆದಿರುವ ಘಟನೆಗಳನ್ನು ಗಮನಿಸಿದರೆ, ನಾವು ಯಾವುದೇ ರಾಜ್ಯದವರಾಗಿರಲಿ, ಪ್ರತಿಯೊಬ್ಬ ನಾಗರಿಕರೂ ತೀವ್ರವಾಗಿ ಆತಂಕಪಡಬೇಕಾದ ವಿಷಯ’ ಎಂದಿರುವ ತಾರಾ ರಾವ್ ಅವರು ‘ಒಂದು ವಿಶಿಷ್ಟವಾದ ಧ್ವನಿ ಎದ್ದೇಳಬೇಕಿದೆ ಮತ್ತು ಅದು ದೇಶದ ಪ್ರತಿಯೊಬ್ಬ ನಾಗರಿಕನಲ್ಲೂ ಪ್ರತಿಧ್ವನಿಸಬೇಕಿದೆ. ‘ನಾವು ಭಾರತದ ಜನರು’ ಎಂದು ನಂಬುವ ನಮ್ಮೆಲ್ಲರ ಧ್ವನಿ ಇದಾಗಬೇಕು’ ಎಂದಿದ್ದಾರೆ.
‘ಎದ್ದೇಳು ಕರ್ನಾಟಕ’ ಒಕ್ಕೂಟದ ಮುಖಂಡರಾಗಿರುವ ತಾರಾ ರಾವ್ ಅವರು ‘ನಮ್ಮ ಪ್ರಜಾಪ್ರಭುತ್ವದ ಬಗೆಗಿನ ಕಳಕಳಿಯೇ ಇಲ್ಲಿ ಕೇಂದ್ರಬಿಂದುವಾಗಬೇಕು. ಇದು ನಮ್ಮ ಜನ್ಮಸಿದ್ಧ ಹಕ್ಕು ಎಂಬುದು ನಮಗೆ ಅರ್ಥವಾಗಬೇಕು; ಈಗ ಅದೇ ಅಪಾಯದಲ್ಲಿದೆ. ಇದು ನಮ್ಮ ಪ್ರಜಾಪ್ರಭುತ್ವದ ಮೇಲೆ ನೇರ ಪರಿಣಾಮ ಬೀರಲಿದೆ. ಇದು ಯಾವ ರಾಜಕೀಯ ಪಕ್ಷ ಗೆಲ್ಲುತ್ತದೆ ಅಥವಾ ಸೋಲುತ್ತದೆ ಎಂಬುದರ ಬಗ್ಗೆಯಲ್ಲ, ಅಥವಾ ಅವರು ಹೇಗೆ ಗೆಲ್ಲುತ್ತಾರೆ ಎಂಬುದರ ಬಗ್ಗೆಯೂ ಅಲ್ಲ. ಬದಲಾಗಿ, ಇಷ್ಟು ದೊಡ್ಡ ಮಟ್ಟದಲ್ಲಿ ಜನರು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿರುವುದು ಮತ್ತು ಭಾರತದ ಮೂಲ ಸ್ವರೂಪವೇ ಬದಲಾಗುತ್ತಿರುವುದರ ಬಗ್ಗೆ ನಾವು ಯೋಚಿಸಬೇಕಿದೆ. ಆದ್ದರಿಂದ, ನಾಗರಿಕರಾಗಿ ನಾವು ಧರಿಸಿರುವ ಕೆಲವು ಸುಳ್ಳು ಮುಖವಾಡಗಳನ್ನು ಕಳಚಿಹಾಕಬೇಕಿದೆ. ಅಂದರೆ, ಕೇವಲ ಕ್ರಿಕೆಟ್ ಪಂದ್ಯವನ್ನು ನೋಡುವ ‘ಪ್ರೇಕ್ಷಕರಂತೆ’ ಇರುವುದನ್ನು ಅಥವಾ ಸರ್ಕಾರಗಳು ರೂಪಿಸುವ ವಿವಿಧ ಯೋಜನೆಗಳ ಫಲಾನುಭವಿಗಳಾಗಿ ಮಾತ್ರ ಗುರುತಿಸಿಕೊಳ್ಳುವುದನ್ನು ನಿಲ್ಲಿಸಬೇಕು. ನಾವು ಒಂದು ನಿಲುವನ್ನು ತೆಗೆದುಕೊಳ್ಳಬೇಕಿದೆ, ನಮ್ಮ ಧ್ವನಿ ಕೇಳಿಸಬೇಕಿದೆ. ನಮ್ಮ ಕ್ರಿಯೆಗಳ ಮೂಲಕವೇ ಈ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕಿದೆ’ ಎಂದು ಕರೆ ನೀಡಿದ್ದಾರೆ.
ಒಟ್ಟಿನಲ್ಲಿ ಪ್ರಜಾತಂತ್ರವೇ ಜೀವಾಳವಾಗಿರುವ ಭಾರತದಲ್ಲಿ ಧರ್ಮಾಂಧ ಸಂಘಟನೆಯೊಂದರ ಭಾಗವಾಗಿರುವ ಪಕ್ಷವೊಂದು ಹೇಗೆ ಇಲ್ಲಿನ ಭಿನ್ನತೆ, ವೈವಿಧ್ಯತೆಗಳನ್ನು ಇಲ್ಲವಾಗಿಸಲು ಕೀಳು ತಂತ್ರಗಳನ್ನು ರೂಪಿಸುತ್ತಿಲೇ ಇದೆ. ಒಕ್ಕೂಟ ವ್ಯವಸ್ಥೆಯಾಗಿರುವ ಸರ್ವಧರ್ಮಸಮನ್ವಯ ದೇಶವೊಂದನ್ನು ಹಿಂದೂ ರಾಷ್ಟ್ರವಾಗಿಸಲು ಅದು ಬಳಸುತ್ತಿರುವ ಎಸ್ಐಆರ್ ಅನ್ನುವ ಕುತಂತ್ರ ಪಂಚರಾಜ್ಯ ಚುನಾವಣಾ ಫಲಿತಾಂಶದ ಮೂಲಕ ಜಗಜ್ಜಾಹಿರಾಗಿದೆ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಜನರ ಧ್ವನಿಯನ್ನು ಹತ್ತಿಕ್ಕುವ ಈ ಪ್ರಯತ್ನಗಳು ಭಾರತದ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ತೀವ್ರ ಬೆದರಿಕೆಯಾಗಿವೆ. ಇಂತಹ ಅಪಾಯಗಳ ವಿರುದ್ಧ ಎಲ್ಲಾ ಜನಪರ ಶಕ್ತಿಗಳು ಒಗ್ಗಟ್ಟಿನಿಂದ ಹೋರಾಡದಿದ್ದರೆ, ನಮ್ಮ ಸಂವಿಧಾನದ ಸ್ವರೂಪವೇ ಬದಲಾಗುವ ಅಪಾಯವಿದೆ ಹಾಗಾಗಿ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
ಎಸ್ಐಆರ್ ವಿರುದ್ಧ ಕರ್ನಾಟಕ ಅಂಥಹದ್ದೊಂದು ಮಾದರಿ ಹೋರಾಟವನ್ನು ರೂಪಿಸುತ್ತದೆಯೇ ಹಣಬಲ, ಅಧಿಕಾರ ಬಲದ ಮೂಲಕ ದೇಶವನ್ನೇ ಕಬಳಿಸಲು ಹೊರಟಿಸುವ ಸರ್ವಾಧಿಕಾರವನ್ನು ಮೆಟ್ಟಿಸುವಲ್ಲಿ ಈ ಜನಹೋರಾಟಗಳು ಯಶಸ್ವಿಯಾಗುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ.


