Homeಮುಖಪುಟಒಟಿಟಿಗೆ ಬಂದ ಎರಡೇ ದಿನಕ್ಕೆ ದಿಲ್ಜಿತ್ ದೋಸಾಂಜ್ ನಟನೆಯ ‘ಸಟ್ಲಜ್’ ಸಿನಿಮಾ ಔಟ್! ಜೀ5 ವಿರುದ್ಧ...

ಒಟಿಟಿಗೆ ಬಂದ ಎರಡೇ ದಿನಕ್ಕೆ ದಿಲ್ಜಿತ್ ದೋಸಾಂಜ್ ನಟನೆಯ ‘ಸಟ್ಲಜ್’ ಸಿನಿಮಾ ಔಟ್! ಜೀ5 ವಿರುದ್ಧ ಆಕ್ರೋಶ, ಕಾನೂನು ಹೋರಾಟದ ಭರವಸೆ

- Advertisement -
- Advertisement -

ತೀವ್ರ ವಿವಾದ ಹಾಗೂ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗದ ನಡುವೆಯೂ ಕೊನೆಗೂ ಒಟಿಟಿ ಪರದೆಯ ಮೇಲೆ ಬಿಡುಗಡೆಯಾಗಿದ್ದ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ ‘ಸಟ್ಲಜ್’ (ಮೂಲ ಶೀರ್ಷಿಕೆ: ಪಂಜಾಬ್ 95) ಚಿತ್ರವನ್ನು ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ‘ಜೀ5’ (ZEE5) ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಿಂದ ದಿಢೀರ್ ಆಗಿ ತೆಗೆದುಹಾಕಲಾಗಿದೆ. 

ಸದ್ಯ ಭಾರತದಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿಲ್ಲದಿರುವುದು ಚಿತ್ರಪ್ರೇಮಿಗಳಲ್ಲಿ ತೀವ್ರ ಆಘಾತ ಮೂಡಿಸಿದ್ದು, ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಪ್ರಜಾಪ್ರಭುತ್ವದ ಹಿನ್ನಡೆ ಮತ್ತು ಬೆಳೆಯುತ್ತಿರುವ ಸೆನ್ಸಾರ್‌ಶಿಪ್‌ನ ದಬ್ಬಾಳಿಕೆಗೆ ಇದು ಮತ್ತೊಂದು ಸಾಕ್ಷಿ ಎಂದು ಹಲವರು ಬಣ್ಣಿಸಿದ್ದಾರೆ. 

ಈ ಚಿತ್ರವು ಪಂಜಾಬ್‌ನ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಅವರ ನೈಜ ಜೀವನದ ರೋಮಾಂಚಕ ಹಾಗೂ ಧೈರ್ಯಶಾಲಿ ಕಥೆಯನ್ನು ಆಧರಿಸಿದೆ. ಚಿತ್ರದಲ್ಲಿ ಜಸ್ವಂತ್ ಸಿಂಗ್ ಖಲ್ರಾ ಅವರ ಮುಖ್ಯ ಪಾತ್ರಕ್ಕೆ ದಿಲ್ಜಿತ್ ದೋಸಾಂಜ್ ಜೀವ ತುಂಬಿದ್ದಾರೆ.

1990ರ ದಶಕದಲ್ಲಿ ಪಂಜಾಬ್ ದಂಗೆಯ ಸಂದರ್ಭದಲ್ಲಿ ಪೊಲೀಸರು ಹಾಗೂ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆದ ಕಾನೂನುಬಾಹಿರ ಹತ್ಯೆಗಳು ಮತ್ತು ಗುರುತೇ ಸಿಗದಂತೆ ಸಾವಿರಾರು ವ್ಯಕ್ತಿಗಳ ಶವಗಳನ್ನು ರಹಸ್ಯವಾಗಿ ಸಾಮೂಹಿಕ ದಹನ ಮಾಡಿದ ಭೀಕರ ಸತ್ಯವನ್ನು ಜಸ್ವಂತ್ ಸಿಂಗ್ ಖಲ್ರಾ ಅವರು ಜಗತ್ತಿನೆದುರು ತರಲು ಯತ್ನಿಸಿದ್ದರು. ಈ ಚಿತ್ರವು ಪ್ರಮುಖವಾಗಿ ಖಲ್ರಾ ಅವರ ತನಿಖೆಯನ್ನು ಚಿತ್ರಿಸುತ್ತದೆ. ಅವರು ಮುನ್ಸಿಪಲ್ ದಾಖಲೆಗಳು ಮತ್ತು ಸ್ಮಶಾನದ ದಹನ ನೋಂದಣಿಗಳನ್ನು (ರಿಜಿಸ್ಟರ್) ಆಳವಾಗಿ ಅಧ್ಯಯನ ಮಾಡಿ, ಸುಮಾರು 25,000ಕ್ಕೂ ಹೆಚ್ಚು ಜನರ ಕಣ್ಮರೆ ಮತ್ತು ಅಕ್ರಮ ಶವಸಂಸ್ಕಾರದ ಆಘಾತಕಾರಿ ಸತ್ಯವನ್ನು ಬಯಲು ಮಾಡಿದ್ದರು. ಜೊತೆಗೆ ಈ ಕರಾಳ ಕೃತ್ಯದ ಹಿಂದೆ ಹಿರಿಯ ಪೊಲೀಸ್ ಅಧಿಕಾರಿಗಳ ಭಾಗಿಯಾಗುವಿಕೆ ಇರುವುದನ್ನು ಸಾಕ್ಷ್ಯಸಮೇತ ಬಹಿರಂಗಪಡಿಸಲು ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು.

ಆರಂಭದಿಂದಲೂ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಪ್ರಮಾಣೀಕರಣದ ಸಮಸ್ಯೆಗಳನ್ನು ಒಡ್ಡಿ ತೀವ್ರ ಅಡ್ಡಿಪಡಿಸಿತ್ತು. ಈ ಕಾರಣದಿಂದಾಗಿ ವರ್ಷಗಳ ಕಾಲ ವಿಳಂಬದ ನಂತರ ಚಿತ್ರವು ಅಂತಿಮವಾಗಿ ಪ್ರೇಕ್ಷಕರನ್ನು ತಲುಪಿತ್ತು. ಚಿತ್ರಕ್ಕೆ ಪ್ರದರ್ಶನದ ಅನುಮತಿ ನೀಡುವ ಮುನ್ನ ಸೆನ್ಸಾರ್ ಮಂಡಳಿಯು ಬರೋಬ್ಬರಿ 120 ಕ್ಕೂ ಹೆಚ್ಚು ಕಡಿತಗಳನ್ನು (Cuts) ಕೋರಿತ್ತು ಎಂದು ಈ ಹಿಂದೆ ವರದಿಗಳು ಹೇಳಿದ್ದವು. 

ವರದಿಗಳ ಪ್ರಕಾರ, ಸಿಬಿಎಫ್‌ಸಿ ಚಿತ್ರದ ಮೂಲ ಶೀರ್ಷಿಕೆಯನ್ನು ಬದಲಾಯಿಸುವುದು, ಪಂಜಾಬ್‌ನ ಉಲ್ಲೇಖಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಮತ್ತು ಅದರ ಕೇಂದ್ರ ಪಾತ್ರದ ನಿಜ ಜೀವನದ ಗುರುತನ್ನು ಮರೆಮಾಚುವುದು ಸೇರಿದಂತೆ 100 ಕ್ಕೂ ಹೆಚ್ಚು ಮಾರ್ಪಾಡುಗಳನ್ನು ಪ್ರಸ್ತಾಪಿಸಿತ್ತು. ಆದರೆ ಚಿತ್ರದ ನಿರ್ದೇಶಕ ಹನಿ ಟ್ರೆಹಾನ್ ಮತ್ತು ನಿರ್ಮಾಪಕರು ಈ ಚಿತ್ರವು ಸಂಪೂರ್ಣವಾಗಿ ದಾಖಲಿತ ಘಟನೆಗಳು ಮತ್ತು ಸತ್ಯವನ್ನು ಆಧರಿಸಿದೆ ಎಂದು ಬಲವಾಗಿ ವಾದಿಸಿದ್ದರು. ಇದು ಪ್ರಮಾಣೀಕರಣ ಮಂಡಳಿಯೊಂದಿಗೆ ದೀರ್ಘಕಾಲದ ಬಿಕ್ಕಟ್ಟಿಗೆ ಕಾರಣವಾಯಿತು ಮತ್ತು ಚಿತ್ರದ ಬಿಡುಗಡೆ ಪದೇ ಪದೇ ವಿಳಂಬವಾಗುತ್ತಾ ಹೋಯಿತು. ಈ ವಿವಾದವು ಚಿತ್ರದ ಅಂತರರಾಷ್ಟ್ರೀಯ ಬಿಡುಗಡೆಯ ಮೇಲೂ ಗಂಭೀರ ಪರಿಣಾಮ ಬೀರಿತು. ಪ್ರಮಾಣೀಕರಣದ ವಿವಾದ ಇನ್ನೂ ಜೀವಂತವಾಗಿದ್ದಾಗಲೇ ವಿಶ್ವಪ್ರಸಿದ್ಧ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಚಿತ್ರದ ನಿಗದಿತ ಪ್ರಥಮ ಪ್ರದರ್ಶನದಿಂದಲೂ ಇದನ್ನು ಹಿಂತೆಗೆದುಕೊಳ್ಳಲಾಗಿತ್ತು.

ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದು ಸಾಧ್ಯವಾಗದಿದ್ದಾಗ, ಚಿತ್ರತಂಡವು ನೇರ ಡಿಜಿಟಲ್ ಪ್ರೀಮಿಯರ್ (Direct OTT Release) ಹಾದಿ ಆರಿಸಿಕೊಂಡು ಜೀ5 ಮೂಲಕ ಪ್ರೇಕ್ಷಕರ ಮುಂದೆ ತಂದಿತ್ತು. ಆದರೆ ಈಗ ಅಲ್ಲಿಯೂ ಚಿತ್ರವನ್ನು ದಿಢೀರ್ ಆಗಿ ಹಿಂತೆಗೆದುಕೊಳ್ಳಲಾಗಿದೆ.

ಈ ಆಘಾತಕಾರಿ ಬೆಳವಣಿಗೆಯನ್ನು ಖಚಿತಪಡಿಸಿರುವ ಜೀ5 ಸಂಸ್ಥೆ, ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಚಿತ್ರ ಮತ್ತು ಅದರ ಸೃಷ್ಟಿಕರ್ತರಿಗೆ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದು, ವೇದಿಕೆಯಲ್ಲಿ ಚಿತ್ರವನ್ನು ಪುನಃಸ್ಥಾಪಿಸಲು ಪ್ರತಿಯೊಂದು ಕಾನೂನು ಆಯ್ಕೆಗಳನ್ನು ಅನುಸರಿಸುತ್ತಿರುವುದಾಗಿ ವೀಕ್ಷಕರಿಗೆ ಭರವಸೆ ನೀಡಿದೆ. 

“ಸಟ್ಲಜ್ ಬಿಡುಗಡೆಯಾದಾಗಿನಿಂದ ಚಿತ್ರಕ್ಕೆ ಬಂದಿರುವ ಪ್ರತಿಕ್ರಿಯೆ ನಿಜಕ್ಕೂ ಅಗಾಧವಾಗಿದೆ. ಚಿತ್ರವನ್ನು ಚಂದಾದಾರರಾಗಿ, ವೀಕ್ಷಿಸಿ ಮತ್ತು ಬೆಂಬಲಿಸಿದ ಪ್ರತಿಯೊಬ್ಬ ವೀಕ್ಷಕರಿಗೂ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ನಿಮ್ಮ ಪ್ರೀತಿ ಮತ್ತು ಬೆಂಬಲ ನಮಗೆ ಮತ್ತು ಈ ಕಥೆಯನ್ನು ಜೀವಂತಗೊಳಿಸಿದ ಎಲ್ಲರಿಗೂ ಬಹಳ ಮುಖ್ಯ. ಜೀ5 ನಲ್ಲಿ, ನಾವು ಸಟ್ಲಜ್ ಮತ್ತು ಅದರ ಹಿಂದಿನ ಸೃಜನಶೀಲ ದೃಷ್ಟಿಕೋನಕ್ಕೆ ದೃಢವಾಗಿ ನಿಲ್ಲುತ್ತೇವೆ. ಶಕ್ತಿಯುತವಾದ ಕಥೆ ಹೇಳುವಿಕೆಯು ಸ್ಫೂರ್ತಿ ನೀಡುವ, ಸಹಿಸಿಕೊಳ್ಳುವ ಮತ್ತು ಶಾಶ್ವತವಾದ ಪರಿಣಾಮವನ್ನು ಬಿಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಾವು ನಂಬುತ್ತೇವೆ. ಅಧಿಕೃತ ಮತ್ತು ಅರ್ಥಪೂರ್ಣ ನಿರೂಪಣೆಗಳನ್ನು ಪ್ರತಿಪಾದಿಸಲು ನಾವು ಬದ್ಧರಾಗಿದ್ದೇವೆ” ಎಂದು ಒಟಿಟಿ ಸಂಸ್ಥೆ ಹೇಳಿದೆ. ಮುಂದುವರಿದು, “ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದರೆ, ಮುಂದಿನ ಸೂಚನೆ ಬರುವವರೆಗೂ ಸಟ್ಲಜ್ ಭಾರತದಲ್ಲಿ ಲಭ್ಯವಿರುವುದಿಲ್ಲ. ಸಾಧ್ಯವಾದಷ್ಟು ಬೇಗ ಚಿತ್ರವನ್ನು ನಮ್ಮ ಪ್ರೇಕ್ಷಕರಿಗೆ ಮರಳಿ ತರಲು ನಾವು ಪ್ರತಿಯೊಂದು ಸೂಕ್ತ ಕಾನೂನು ಮಾರ್ಗವನ್ನು ಅನ್ವೇಷಿಸಲು ಬದ್ಧರಾಗಿದ್ದೇವೆ” ಎಂದು ವಿವರಿಸಿದೆ. 

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ತನ್ನ ಟಿಪ್ಪಣಿಯನ್ನು ಚಲನಚಿತ್ರ ನಿರ್ಮಾಪಕರು ಮತ್ತು ಕಲಾತ್ಮಕ ಸಮಗ್ರತೆ ಹಾಗೂ ಉದ್ದೇಶದಿಂದ ನಡೆಸಲ್ಪಡುವ ಕಥೆಗಳಿಗೆ ತನ್ನ ಬೆಂಬಲವನ್ನು ಪುನರುಚ್ಚರಿಸುವ ಮೂಲಕ ಕೊನೆಗೊಳಿಸಿದೆ. ಜೊತೆಗೆ ತನ್ನ ಪೋಸ್ಟ್‌ಗೆ ಶೀರ್ಷಿಕೆ ನೀಡಿ, “ಸಟ್ಲಜ್ ವಿರಾಮಗೊಂಡಿರಬಹುದು, ಆದರೆ ಅದು ಪ್ರಾರಂಭಿಸಿದ ಸಂಭಾಷಣೆ ಇನ್ನೂ ನಿಂತಿಲ್ಲ. ಅದ್ಭುತ ಪ್ರೀತಿಗೆ ಧನ್ಯವಾದಗಳು, ಶೀಘ್ರದಲ್ಲೇ ಅದನ್ನು ಮರಳಿ ತರುತ್ತೇವೆ ಎಂದು ಭಾವಿಸುತ್ತೇವೆ” ಎಂದಿದೆ. 

ಭಾರತದಲ್ಲಿ ಚಿತ್ರವನ್ನು ತೆಗೆದುಹಾಕಿರುವ ಮತ್ತು ಪರೋಕ್ಷವಾಗಿ ನಿಷೇಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಟ ದಿಲ್ಜಿತ್ ದೋಸಾಂಜ್ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರವು ದಿವಂಗತ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನವನ್ನು ಆಧರಿಸಿದಂತೆಯೇ, ಈಗ ಸ್ವತಃ ‘ಸಟ್ಲಜ್’ ಸಿನಿಮಾ ಕೂಡ ಅದೇ ರೀತಿಯ ದಬ್ಬಾಳಿಕೆಯನ್ನು ಎದುರಿಸುತ್ತಿದೆ ಎಂದು ಬೇಸರ ಸೂಚಿಸಿದ್ದಾರೆ.

ಇತ್ತ ಜೀ5 ಸಂಸ್ಥೆಯಿಂದ ಸಟ್ಲಜ್ ಚಿತ್ರವನ್ನು ದಿಢೀರ್ ತೆಗೆದುಹಾಕಿದ್ದಕ್ಕೆ ದೇಶಾದ್ಯಂತ ರಾಜಕಾರಣಿಗಳು, ಪತ್ರಕರ್ತರು ಮತ್ತು ಲೇಖಕರು ತೀವ್ರ ಆಕ್ರೋಶ ಹಾಗೂ ಟೀಕೆ ವ್ಯಕ್ತಪಡಿಸಿದ್ದಾರೆ. ಈ ಕ್ರಮವನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಎಂದು ಬಣ್ಣಿಸಿರುವ ಗಣ್ಯರು, ಈ ನಿರ್ಧಾರದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಹೆಚ್ಚಿನ ಪಾರದರ್ಶಕತೆ ಬೇಕು ಎಂದು ಒತ್ತಾಯಿಸಿದ್ದಾರೆ. 

ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ ಈ ಬಗ್ಗೆ ಮಾತನಾಡಿ, “ಪಂಜಾಬ್‌ನಲ್ಲಿ ನಡೆದ ಭೀಕರ ಕಾನೂನುಬಾಹಿರ ಹತ್ಯೆಗಳನ್ನು ಬಹಿರಂಗಪಡಿಸಲು ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಮಾಡಿದ ಐತಿಹಾಸಿಕ ಪ್ರಯತ್ನಗಳ ಬಗ್ಗೆ ಈ ಚಿತ್ರವು ಪ್ರಬಲವಾದ ಸತ್ಯವನ್ನು ಜಗತ್ತಿನೆದುರು ಇಡುತ್ತದೆ. ಈ ತೆಗೆದುಹಾಕುವಿಕೆಯು ನಮ್ಮ ಪ್ರಜಾಪ್ರಭುತ್ವದ ಹಿನ್ನಡೆಯ ಸ್ಪಷ್ಟ ಸಂಕೇತವಾಗಿದೆ. ಈ ಕ್ರಮವನ್ನು ಬಲವಾಗಿ ವಿರೋಧಿಸಿ ನಾನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಐಟಿ ಸಚಿವೆ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದೇನೆ. ಇಂತಹ ಸಂದರ್ಭದಲ್ಲಿ ನಾವು ಮೌನವಾಗಿರಲು ಆರಿಸಿಕೊಂಡರೆ ಇತಿಹಾಸವು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ. ನಮ್ಮ ಸಾಂಸ್ಥಿಕ ವ್ಯವಸ್ಥೆಗಳು ಶೋಚನೀಯವಾಗಿ ವಿಫಲವಾದ ಪೈಶಾಚಿಕ ಯುಗವನ್ನು ಈ ಚಿತ್ರ ಬಯಲು ಮಾಡಿದೆ. ಈ ಚಿತ್ರವನ್ನು ನಿಷೇಧಿಸಲಾಗಿದೆ ಎಂಬ ಅಂಶವೇ ಮೋದಿ ಸರ್ಕಾರದ ಅಡಿಯಲ್ಲಿ ನಮ್ಮ ಪ್ರಜಾಪ್ರಭುತ್ವ ಎಷ್ಟು ಮತ್ತಷ್ಟು ಕ್ಷೀಣಿಸಿದೆ ಎಂಬುದನ್ನು ತೋರಿಸುತ್ತದೆ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರು ಕೂಡ ಚಿತ್ರವನ್ನು ಒಟಿಟಿಯಿಂದ ತೆಗೆದುಹಾಕಿದ ನಿರ್ಧಾರದಿಂದ ತಮಗೆ “ಆಘಾತ ಮತ್ತು ತೀವ್ರ ದುಃಖ ಉಂಟಾಗಿದೆ” ಎಂದು ಹೇಳಿದ್ದಾರೆ. ಇದನ್ನು “ನಮ್ಮ ಸಾಮೂಹಿಕ ಸ್ಮರಣೆ, ಸತ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ವ್ಯವಸ್ಥಿತ ದಾಳಿ” ಎಂದು ಕರೆದಿರುವ ಅವರು, ಜಸ್ವಂತ್ ಸಿಂಗ್ ಖಲ್ರಾ ಅವರ ಮಹಾನ್ ತ್ಯಾಗವನ್ನು ಗೌರವಿಸುವ ಇಂತಹ ಚಲನಚಿತ್ರವನ್ನು “ಈ ರೀತಿ ಮೌನಗೊಳಿಸಲು ಎಂದಿಗೂ ಸಾಧ್ಯವಿಲ್ಲ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 

ಮತ್ತೊಂದೆಡೆ, ಚಲನಚಿತ್ರವನ್ನು ಅಧಿಕೃತವಾಗಿ ಸರ್ಕಾರವೇ ನಿಷೇಧಿಸಿದೆಯೇ ಎಂದು ಖ್ಯಾತ ಲೇಖಕಿ ಸಬಾ ನಖ್ವಿ ಪ್ರಶ್ನಿಸಿದ್ದಾರೆ. ಚಿತ್ರವನ್ನು ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕುವುದು ಸರ್ಕಾರದ ನಿರ್ಧಾರವೋ ಅಥವಾ ಸ್ವತಃ ಒಟಿಟಿ ವೇದಿಕೆಯ ಸ್ವಯಂ ನಿರ್ಧಾರವೋ ಎಂಬುದರ ಕುರಿತು ಅಧಿಕಾರಿಗಳು ಸ್ಪಷ್ಟತೆ ನೀಡಬೇಕು ಎಂದು ಕೋರಿರುವ ಅವರು, “ನಮಗೆ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳು ಬೇಕಾಗುತ್ತವೆ. ನಾಗರಿಕರ ಸ್ವಾತಂತ್ರ್ಯಗಳು ಯಾವುದೇ ಪ್ರತಿರೋಧವಿಲ್ಲದೆ ಹೀಗೆ ಕಣ್ಮರೆಯಾಗಲು ನಾವು ಬಿಡಬಾರದು” ಎಂದು ಬರೆದುಕೊಂಡಿದ್ದಾರೆ.

ಭೋಲಾತ್ ಕ್ಷೇತ್ರದ ಶಾಸಕ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಸುಖ್‌ಪಾಲ್ ಸಿಂಗ್ ಖೈರಾ ಅವರು ಚಿತ್ರವನ್ನು ತೆಗೆದುಹಾಕುವುದನ್ನು ಕಠಿಣ ಪದಗಳಲ್ಲಿ ಖಂಡಿಸಿದ್ದಾರೆ. ಜಸ್ವಂತ್ ಸಿಂಗ್ ಖಲ್ರಾ ಅವರ ಅಪಹರಣ ಮತ್ತು ಹತ್ಯೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ಶಿಕ್ಷೆಯನ್ನು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಎತ್ತಿಹಿಡಿದಿದೆ. ಹೀಗಿರುವಾಗ ಚಿತ್ರವನ್ನು ತಡೆಯುವುದು ಸುಪ್ರೀಂ ತೀರ್ಪಿಗೆ ವಿರುದ್ಧವಾಗಿದೆ ಎಂದಿರುವ ಅವರು, “ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಅಂದಿನ ಪೊಲೀಸ್ ರಾಜ್ಯ ಎಂದರೆ ಏನು, ಕಾನೂನುಬಾಹಿರ ಆಡಳಿತ ಹೇಗಿತ್ತು ಎಂದು ತಿಳಿಯುವಂತೆ ಮಾಡಲು” ಚಿತ್ರವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಖ್ಯಾತ ಪತ್ರಕರ್ತೆ ರಾಣಾ ಅಯ್ಯೂಬ್ ಕೂಡ ಈ ಕ್ರಮವನ್ನು ತೀಕ್ಷ್ಣವಾಗಿ ಟೀಕಿಸಿದ್ದು, “ಹೇಡಿಗಳು ಮತ್ತೆ ದಾಳಿ ನಡೆಸುತ್ತಿದ್ದಾರೆ. ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಸಟ್ಲಜ್/ಪಂಜಾಬ್ 95 ಚಿತ್ರವನ್ನು ಜೀ5 ನಿಂದ ತೆಗೆದುಹಾಕಲಾಗಿದೆ. ಇದು ಇಂದಿನ ಭಾರತದಲ್ಲಿ ಮುಕ್ತ ಅಭಿವ್ಯಕ್ತಿಯ ದುಃಸ್ಥಿತಿಯನ್ನು ತೋರಿಸುತ್ತದೆ” ಎಂದು ಆಕ್ರೋಶ ಹೊರಹಾಕಿದ್ದಾರೆ. 

ಸಮಾಜದಲ್ಲಿ ದ್ವೇಷ ಮತ್ತು ಸುಳ್ಳು ಪ್ರಚಾರ (Propaganda) ಹರಡುವ ಚಲನಚಿತ್ರಗಳನ್ನು ಸರ್ಕಾರಗಳು ತೆರಿಗೆ ಮುಕ್ತಗೊಳಿಸಿ ಪ್ರೋತ್ಸಾಹಿಸುತ್ತಿವೆ, ಆದರೆ ದೇಶದ ಕಹಿ ಮತ್ತು ಅಹಿತಕರ ವಾಸ್ತವಗಳನ್ನು ಸತ್ಯಸಂಧವಾಗಿ ಬಹಿರಂಗಪಡಿಸುವ ಇಂತಹ ಉತ್ತಮ ಚಲನಚಿತ್ರಗಳನ್ನು ವ್ಯವಸ್ಥಿತವಾಗಿ ನಿಷೇಧಿಸಲಾಗುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. 

ಒಟ್ಟಾರೆಯಾಗಿ, ಕೇವಲ ಕಲಾಕೃತಿಯಾಗಿ ಉಳಿಯದೆ ಇತಿಹಾಸದ ಕರಾಳ ಪುಟಗಳನ್ನು ಬಿಚ್ಚಿಟ್ಟಿದ್ದ ‘ಸಟ್ಲಜ್’ ಸಿನಿಮಾದ ನಿಷೇಧದ ವಿವಾದ ಈಗ ದೇಶಾದ್ಯಂತ ದೊಡ್ಡ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...