Homeನ್ಯಾಯ ಪಥ’ಎಸ್‌ಐಆರ್' ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

- Advertisement -
- Advertisement -

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ. ಪಶ್ಚಿಮ ಬಂಗಾಳದಲ್ಲಿ ಸುಮಾರು 27 ರಿಂದ 30 ಲಕ್ಷ ಮತದಾರರನ್ನು ’ತಾರ್ಕಿಕ ವ್ಯತ್ಯಾಸ’ ಹೆಸರಿನಲ್ಲಿ ಈಗ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಮತದಾನದಿಂದ ದೂರ ಇಡಲಾಗಿದೆ. ಕರ್ನಾಟಕದಲ್ಲೂ ಅನರ್ಹ ಮತದಾರರ ಹೆಸರಿನಲ್ಲಿ ಲಕ್ಷಾಂತರ ಜನರನ್ನು ಮ್ಯಾಪಿಂಗ್ ಮಾಡಲಾಗಿದೆ ಎಂಬ ಸುದ್ದಿ ಬರುತ್ತಿದೆ. ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಹೊರಟಿರುವ ಬಿಜೆಪಿ ಸರ್ಕಾರವು ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದೆ. ’ತಾರ್ಕಿಕ ವ್ಯತ್ಯಾಸ’ದ ಹೆಸರಿನಲ್ಲಿ ಮತದಾನದಿಂದ ವಂಚಿತರಾಗಿರುವ, ಆ ಮೂಲಕ ಪೌರತ್ವವನ್ನೇ ಅನುಮಾನಿಸಲಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಲಕ್ಷಾಂತರ ಮತದಾರರು ಚಿಂತಾಕ್ರಾಂತರಾಗಿದ್ದಾರೆ. ಇದೀಗ, ಕರ್ನಾಟಕದ ಹಲವು ಜನಪರ ಸಂಘಟನೆಗಳು ಎಸ್‌ಐಆರ್ ವಿರೋಧಿಸಿದ್ದು, ಬಂಗಾಳದ ಜನರೊಂದಿಗೆ ನಿಲ್ಲುವುದಾಗಿ ’ಶಪಥ’ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕಿನಲ್ಲಿ ಗುರುವಾರ (23-04-2026) ಎಸ್‌ಐಆರ್ ವಿರೋಧಿ ಪ್ರತಿರೋಧ ಸಮಾವೇಶ ನಡೆಯಿತು. ಎನ್‌ಡಿಎ ಮಿತ್ರಪಕ್ಷಗಳನ್ನು ಹೊರತುಪಡಿಸಿ ರಾಜ್ಯದ ಸರ್ವಪಕ್ಷಗಳ ಪ್ರತಿನಿಧಿಗಳು, ಜಾತ್ಯತೀತ ಸಂಘಟನೆಗಳು, ಯುವಜನರು, ವಿದ್ಯಾರ್ಥಿ ಸಂಘಟನೆಗಳು ಭಾಗವಹಿಸಿದ್ದವು. NO to SIR, NO to EVM, No to BJP Agent ECI and No to Delimitation ಪೋಸ್ಟರ್‌ಗಳನ್ನು ಹರಿದು ಬೆಂಕಿಯಲ್ಲಿ ಸುಡುವ ಮೂಲಕ, ಬಂಗಾಳದ ಜನತೆ ಜೊತೆಗೆ ನಾವಿದ್ದೇವೆ ಎಂದು ಘೋಷಣೆ ಕೂಗಿದರು. ಕರ್ನಾಟಕದಲ್ಲಿ ಎಸ್‌ಐಆರ್ ನಡೆಯಲು ಬಿಡುವುದಿಲ್ಲ ಎಂಬ ಘೋಷಣಾ ಬ್ಯಾನರ್ ಅನ್ನು ವೇದಿಕೆ ಮೇಲೆ ಬಿಡುಗಡೆಗೊಳಿಸಲಾಯಿತು. ಪಶ್ಚಿಮ ಬಂಗಾಳದ ಸಾಮಾಜಿಕ ಕಾರ್ಯಕರ್ತ ಶೇಖ್ ಫರೀದುಲ್ಲಾ ಇಸ್ಲಾಂ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವ ಹಂಚಿಕೊಂಡರು.



ಕರ್ನಾಟಕದಲ್ಲಿ ಆರಂಭವಾಗಿರುವ ಎಸ್‌ಐಆರ್ ಪ್ರತಿರೋಧದ ಕುರಿತು ಆರಂಭಿಕ ಮಾತುಗಳನ್ನಾಡಿದ ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್, ಕರ್ನಾಟಕ ಐತಿಹಾಸಿಕವಾದ ಹೆಜ್ಜೆಯೊಂದನ್ನಿಡುತ್ತಿದೆ. ಏಕೆಂದರೆ, ತಮ್ಮ ಕುದುರೆಯನ್ನು ಯಾರೂ ಹಿಡಿಯಬಾರದು ಎಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ‘ಅಶ್ವಮೇಧ ಯಾಗ’ವೊಂದನ್ನು ಪ್ರಾರಂಭ ಮಾಡಿದ್ದಾರೆ. ಒಂದು ರಾಜ್ಯದ ಬಳಿಕ ಮತ್ತೊಂದು ರಾಜ್ಯ ಎಂಬಂತೆ ಸತ್ಯವೋ-ಸುಳ್ಳೊ, ಕುತಂತ್ರವೋ ಯಾವುದಾದರೊಂದು ಮಾರ್ಗದ ಮೂಲಕ ಆ ರಾಜ್ಯದ ಅಧಿಕಾರ ಕಸಿಯುವ ಕೆಲಸ ಮಾಡುತ್ತಿದ್ದಾರೆ. 2024ರ ಚುನಾವಣೆಯಲ್ಲಿ ಆ ಶಕ್ತಿಗಳು ಸೋತವು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. 79 ಕ್ಷೇತ್ರದಲ್ಲಿ ಓಟ್ ಚೋರಿ ಹಾಗೂ ಮಾಡಬಾರದ ಅಪರಾಧಗಳನ್ನು ಮಾಡಿಯೂ ಕೂಡ ಅವರಿಗೆ ಬಹುಮತಕ್ಕೆ ಬೇಕಾದಂತಹ 272 ಸೀಟುಗಳು ಬರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಸೋತರೂ, ಅವಕಾಶವಾದಿಗಳನ್ನು ಜೊತೆಯಲ್ಲಿ ಸೇರಿಸಿಕೊಂಡು ದೊಡ್ಡ ಮಟ್ಟದ ಓಟ್ ಹಗರಣದ ಮೂಲಕ ಅಧಿಕಾರ ಹಿಡಿದರು. ಆದಾದಬಳಿಕ ಪ್ರಜಾತಂತ್ರವನ್ನು ಅಪಹರಿಸಲು ಆಕ್ರಮಣಕಾರಿಯಾಗಿ ಒಂದಾದಮೇಲೊಂದರಂತೆ ಹೆಜ್ಜೆ ಇಡುತ್ತಿದ್ದಾರೆ ಎಂದರು.

“ಇವರನ್ನು ಹೇಗೆ ಹಿಮ್ಮೆಟ್ಟಿಸಬೇಕು ಎಂಬುದೇ ಜಾತ್ಯತೀತ ನಿಲುವಿನ ಗುಂಪಿಗೆ ಸವಾಲಾಗಿದೆ. ಈ ಸವಾಲನ್ನು ಕರ್ನಾಟಕ ತೆಗೆದುಕೊಳ್ಳಬೇಕು. ಬಿಜೆಪಿಯ ಅಶ್ವಮೇಧ ಕುದುರೆಯನ್ನು ಕರ್ನಾಟಕದಲ್ಲಿ ನಾವು ಗೂಟಕ್ಕೆ ಕಟ್ಟೇಕಟ್ಟುತ್ತೇವೆ ಎನ್ನುವ ತೀರ್ಮಾನ ಮಾಡಬೇಕಾಗಿದೆ. ಮೊಟ್ಟಮೊದಲ ಬಾರಿಗೆ ಕರ್ನಾಟಕದ ಸಮಸ್ತ ರೈತ, ದಲಿತ, ಮಹಿಳಾ, ಅಲ್ಪಸಂಖ್ಯಾತ ಸಂಘಟನೆಗಳು ಒಟ್ಟಿಗೆ ಸೇರಿವೆ. ಬಿಜೆಪಿ- ಜೆಡಿಎಸ್ ಹೊರತುಪಡಿಸಿ ಉಳಿದ ಎಲ್ಲಾ ಜಾತ್ಯತೀತ ಪಕ್ಷಗಳು ಒಂದೇ ವೇದಿಕೆಗೆ ಬಂದು, ನಾವು ಎಸ್‌ಐಆರ್‌ಗೆ ಅವಕಾಶ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಬಿಜೆಪಿಯ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕುವುದಕ್ಕೆ ನಿರ್ಧರಿಸಿದ್ದೇವೆ” ಎಂದು ಹೇಳುವ ಮೂಲಕ ಎಸ್‌ಐಆರ್ ವಿರುದ್ಧದ ’ಕರ್ನಾಟಕದ ಘೋಷಣೆ’ ಮಂಡಿಸಿದರು.

’ಮತ’ ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಹಕ್ಕು: ಜಿಸಿ ಚಂದ್ರಶೇಖರ್

ಕಾಂಗ್ರೆಸ್ ಪಕ್ಷದ ಮುಖಂಡರು, ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್ ಮಾತನಾಡಿ, “ಮೊಟ್ಟಮೊದಲ ಬಾರಿಗೆ ಇಡೀ ಕರ್ನಾಟಕದ ಇಷ್ಟೂ ಸಂಘಟನೆಗಳು ಒಟ್ಟಾಗಿ ಸೇರಿರುವುದುನ್ನು ನೋಡಿದರೆ, ಹೊಸ ಮೈಲುಗಲ್ಲನ್ನು ಸೃಷ್ಟಿಸಿದಂತೆ ಭಾಸವಾಗುತ್ತಿದೆ. ನಮ್ಮನಮ್ಮ ಪಕ್ಷ ಅಥವಾ ಸಂಘಟನೆಗಳ ವಿಚಾರಗಳು ಬೇರೆಬೇರೆ ಇರಬಹುದು. ಆದರೆ, ’ಸಾಮಾನ್ಯ ಕಾರ್ಯಸೂಚಿ’ ವಿಷಯದಲ್ಲಿ ನಮ್ಮನ್ನೆಲ್ಲಾ ಒಟ್ಟಿಗೆ ಸೇರಿಸುವ ಕೆಲಸ ಮಾಡಿದವರಿಗೆ ನಾನು ಅಭಿನಂದಿಸುತ್ತೇನೆ. ಹೀಗೆ ಭಿನ್ನ ಜನರನ್ನೆಲ್ಲಾ ಒಟ್ಟಿಗೆ ಸೇರಿಸುವುದು ಬಹಳ ಸವಾಲಿನ ಕೆಲಸ. ಎಲ್ಲಾ ಸಮಸ್ಯೆಗಳ ನಡುವೆಯೂ ಬಿಜೆಪಿ ಮತ್ತು ಜೆಡಿಎಸ್ ಹೊರತುಪಡಿಸಿ ಇತರೆ ಪಕ್ಷಗಳನ್ನು ಒಟ್ಟಿಗೆ ಸೇರಿಸಿರುವುದು ಹೋರಾಟದ ಹಾದಿಗೆ ಮುನ್ನುಡಿ ಬರೆದಿದೆ ಎಂದು ನಾನು ಭಾವಿಸುತ್ತೇನೆ. ಹೋರಾಟಕ್ಕೆ ಬಂದಿರುವ ಎಲ್ಲ ಸಂಘಟನೆಗಳ ಮುಖಂಡರಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ” ಎಂದರು.



“ನಮ್ಮ ನಮ್ಮ ಮತ ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಹಕ್ಕು, ನಮ್ಮ ಹಕ್ಕನ್ನೇ ರಕ್ಷಸಿಕೊಳ್ಳುವಂತಹ ದುಸ್ಥಿತಿ ಮುಂದೆ ಬರುವುದಕ್ಕೆ ಸಾಧ್ಯವಿಲ್ಲ. ಆರೂವರೆ ಕೋಟಿ ಮತದಾರರ ಹೆಸರನ್ನು ಇಂದು ಡಿಲೀಟ್ ಮಾಡಲಾಗಿದೆ. ಅವರೆಲ್ಲರೂ ಭಾರತದ ಪ್ರಜೆಗಳಲ್ಲವೇ? ಅದರಲ್ಲಿ ಎಸ್ಸಿ-ಎಸ್ಟಿ ಸಮುದಾಯ, ಹಿಂದೂ ಅಥವಾ ಮುಸ್ಲಿಂ ಎಲ್ಲರೂ ಇದ್ದಾರೆಲ್ಲವೇ? ಹೇಗಾದರೂ ಮಾಡಿ ಚುನಾವಣೆ ಗೆಲ್ಲಲೇಬೇಕೆಂಬ ಏಕೈಕ ದುರುದ್ದೇಶದಿಂದ ಚುನಾವಣೆ ಹತ್ತಿರ ಬಂದಾಗ ಬಿಜೆಪಿ ಏನಾದರೂ ಮಾಡುತ್ತದೆ. ಚುನಾವಣೆ ಗೆದ್ದಬಳಿಕ ದೇಶದ ವಿರೋಧ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೆ ಅಧಿಕಾರ ನಡೆಸಲಾಗುತ್ತಿದೆ. ’ಬುಲ್ಡೋಜ್ ಮೂಲಕ ಅಧಿಕಾರ ನಡೆಸುತ್ತಿರುವ ಬಿಜೆಪಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಬುಡಮೇಲು ಮಾಡುತ್ತಿದೆ. ಭಾರತ ದೇಶ ಇಡೀ ಪ್ರಪಂಚದಲ್ಲಿ ನಾನಾ ಧರ್ಮ, ನಾನಾ ಭಾಷೆಗಳ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವಂತಹ ದೊಡ್ಡ ಗುಣವುಳ್ಳ ಬೃಹತ್ ರಾಷ್ಟ್ರ. ಇಂಥ ರಾಷ್ಟ್ರದ ಏಕತೆಗೆ ಧಕ್ಕೆ ತರುವಂತಹ ಕೆಲಸವನ್ನು ಎಸ್‌ಐಆರ್ ಮೂಲಕ ಬಿಜೆಪಿ ಮಾಡುತ್ತಿದೆ” ಎಂದು ಆರೋಪಿಸಿದರು.

“ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಮತದಾನ ನಡೆಯುತ್ತಿರುವ ಈ ಹೊತ್ತಿನಲ್ಲಿ ಜನಪರ ಸಂಘಟನೆಗಳು ಹೋರಾಟ ಆರಂಭಿಸಿರುವುದು ಶ್ಲಾಘನೀಯ. ಈ ಪ್ರತಿರೋಧ ಸಂದೇಶ ದೇಶದ ಜನಕ್ಕೆಲ್ಲಾ ತಲುಪಲೇಬೇಕು; ಬಿಜೆಪಿಯವರು ಮಾಡುತ್ತಿರುವುದು ತಪ್ಪು ಎಂಬುದು ಜನರ ಭಾವನೆಗೆ ಬರಬೇಕು” ಎಂದರು.

ಎಸ್‌ಐಆರ್ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ಶ್ರೀಪಾದ್ ಭಟ್

ಚಿಂತಕರಾದ ಬಿ.ಶ್ರೀಪಾದ ಭಟ್ ಮಾತನಾಡಿ, “ಕರ್ನಾಟಕದಲ್ಲಿರುವ ಎಲ್ಲ ಸಂಘಟನೆ ಹಾಗೂ ಮುಖ್ಯವಾಹಿನಿ ಪಕ್ಷಗಳು, ಅಂಬೇಡ್ಕರ್ ಕೊಟ್ಟಂತಹ ’ಒಂದು ಮತ, ಒಂದು ಮೌಲ್ಯ ಇದನ್ನು ಕಸಿದುಕೊಳ್ಳುತ್ತಿರುವ ಎಸ್‌ಐಆರ್ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ನಾನು ಮನವಿ ಮಾಡುತ್ತಿದ್ದೇನೆ” ಎಂದರು.

“ಎಸ್‌ಐಆರ್ ರದ್ದಾಗಬೇಕು ಎಂದು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ, ಇತ್ತೀಚೆಗೆ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ತೆಗೆದುಕೊಳ್ಳುವ ವಿಷಯಗಳಿಗೆ ತಡೆಯಾಜ್ಞೆ ನೀಡುತ್ತಿಲ್ಲ. ಉದಾಹರಣೆಗೆ, ಶೇ.10 ರಷ್ಟು ಇಡಬ್ಲ್ಯೂಎಸ್ ಮೀಸಲಾತಿ ಕುರಿತ ವಿಷಯ, ವಿಚಾರಣೆಗೆ ಒಪ್ಪಿದ ನ್ಯಾಯಾಲಯ ತಡೆಯಾಜ್ಞೆ ನೀಡಲಿಲ್ಲ. ಆದರೆ, ’ಯುಜಿಸಿ ಈಕ್ವಿಟಿ’ ಬಿಲ್‌ಗೆ ಕೂಡಲೇ ತಡೆಯಾಜ್ಞೆ ನಿಡಿದೆ. ಎಸ್‌ಐಆರ್ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಬಳಿಕ ಯಾವ ತೀರ್ಪು ಬರುತ್ತದೆಯೋ ಗೊತ್ತಿಲ್ಲ. ಒಂದುವೇಳೆ, ಎಸ್‌ಐಆರ್ ರದ್ದುಗೊಳಿಸದೆ ಮುಂದುವರಿಸಬೇಕು ಎಂದು ತೀರ್ಪು ಬಂದರೆ, ಅದಕ್ಕೆ ನಾವು ಈಗಲೇ ಚರ್ಚಿಸಿ ಒಂದನ್ನು ಕಾರ್ಯಯೋಜನೆ ರೂಪಿಸಿಕೊಳ್ಳಬೇಕಿದೆ” ಎಂದು ಕರೆ ನೀಡಿದರು.

ಚಿಂತಕ ಬಿ.ಶ್ರೀಪಾದ್ ಭಟ್‌



“ಮುಖ್ಯವಾಗಿ, ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಕುರಿತು ನಾವು ಮಾತನಾಡಲೇಬೇಕು. ಕಾಂಗ್ರೆಸ್ ಪಕ್ಷದ ಮೇಲೆ ನಮಗೆ ಇದ್ದ ನಿರೀಕ್ಷೆಗಳನ್ನು ಅವರು ಮುಟ್ಟಿಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ. ಈ ರಾಜ್ಯದ ದಲಿತರು, ಮುಸ್ಲಿಮರು ಮತ್ತು ಮಹಿಳೆಯರು ಒಗ್ಗಟ್ಟಿನಿಂದ ಮತ ಕೊಟ್ಟಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ 135 ಸೀಟು ಬರಲು ಸಾಧ್ಯವಾಯಿತು. ಆದರೆ, ಎಸ್‌ಐಆರ್ ಕಾರಣಕ್ಕೆ ದಲಿತರು, ಮುಸ್ಲಿಮರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಹೋಗುತ್ತಿದ್ದಾರೆ. ಕಾಂಗ್ರೆಸ್ ಈಗ ಮಾಡುತ್ತಿರುವುದು ಸಾಲದು. ಅದರ ಹತ್ತುಪಟ್ಟು ಹೆಚ್ಚಿನ ಮಟ್ಟದಲ್ಲಿ ಕಾಂಗ್ರೆಸ್ ಕೆಲಸ ಮಾಡಬೇಕಿದೆ. ತಮಿಳುನಾಡಿನಲ್ಲಿ ಡಿಎಂಕೆ ಮಾಡುತ್ತಿರುವ ಸಂಘಟನೆಯನ್ನು ನೀವೊಮ್ಮೆ ಪರಿಶೀಲನೆ ಮಾಡಬೇಕು. ಪ್ರತಿ ಬೂತ್‌ನಲ್ಲಿ ಬಿಎಲ್‌ಓಗಳನ್ನ ನೇಮಕ ಮಾಡಿ ಕಣ್ಣಿಟ್ಟಿದ್ದಾಗಲೂ 70 ಲಕ್ಷ ಮತದಾರರನ್ನು ಪಟ್ಟಿಯಿಂದ ಅಳಿಸಿದ್ದಾರೆ. ಜನರ ಜೊತೆಗೆ ಸಂಪರ್ಕ ಸಾಧಿಸಿಲು ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಸುವರ್ಣಾವಕಾಶ. ಎಸ್‌ಐಆರ್ ಕುರಿತು ಕಾಂಗ್ರೆಸ್ ಮಾಡುತ್ತಿರುವ ತಯಾರಿ ಸಾಕಾಗುತ್ತಿಲ್ಲ. ಅದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲೇಬೇಕಿದೆ” ಎಂದು ಆಡಳಿತ ಪಕ್ಷಕ್ಕೆ ಕಿವಿಮಾತು ಹೇಳಿದರು.

“ಕಮ್ಯುನಿಸ್ಟ್ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ ಕಾಂಗ್ರೆಸ್ಸೇತರ ಇತರೆ ಪಕ್ಷಗಳು ಸಹ ಈ ಕುರಿತು ತಮ್ಮ ಕೆಲಸಗಳನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕಿದೆ. ನಾಗರಿಕ ಸಮಾಜ ಮತ್ತು ಸಾಮಾಜಿಕ ಸಂಘಟನೆಗಳ ಜವಾಬ್ದಾರಿ ಸಹ ದೊಡ್ಡದಿದೆ. ನಾವು ಬಿಎಲ್‌ಒ ಮತ್ತು ಬಿಎಲ್‌ಇಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿವುದು ಮುಖ್ಯವಾಗುತ್ತದೆ. ಕಾರ್ಮಿಕರು ಮತ್ತು ದುರ್ಬಲರು ಮತದಾನದಿಂದ ವಂಚಿತರಾಗುತ್ತಿದ್ದಾರೆ; ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ” ಎಂದರು.

ಮೋಸಕ್ಕೆ ಒಳಗಾಗುತ್ತಿರುವ ಜನರನ್ನು ಜಾಗೃತಿಗೊಳಿಸಬೇಕಿದೆ: ಬಡಗಲಪುರ ನಾಗೇಂದ್ರ

ರಾಜ್ಯ ರೈತ ಸಂಘದ ಹಿರಿಯ ನಾಯಕರಾದ ಬಡಗಲಪುರ ನಾಗೇಂದ್ರ ಮಾತನಾಡಿ, “ಕರ್ನಾಟಕ ಯಾವಾಗಲೂ ದೇಶಕ್ಕೆ ಮಾದರಿಯಾಗಿದೆ. ಸಾಧು-ಸೂಫಿಗಳು, ತತ್ವಪದಕಾರರು, ಶರಣರು ಮತ್ತು ಸಂತರು ತಿರುಗಾಡಿರುವ ನೆಲ ಇದು. ಸಾಮರಸ್ಯಕ್ಕೆ ಹೆಚ್ಚು ಒತ್ತು ಕೊಟ್ಟಿರುವ ಬಸವಣ್ಣ ನಡೆದಾಡಿದ ನಾಡು. ಯಾವುದೇ ವಿಚಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿ ಇರುತ್ತದೆ. ಎಸ್‌ಐಆರ್ ವಿಚಾರದಲ್ಲಿ ಕರ್ನಾಟಕ ಭಿನ್ನ ಎಂಬುದನ್ನು ತೋರಿಸಿಕೊಟ್ಟಿದೆ. ಈ ಬಗ್ಗೆ ಸಂಘಟಕರಿಗೆ ಅಭಿನಂದಿಸಲೇಬೇಕಿದೆ” ಎಂದರು.

“2014ರಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ಮತ್ತು ವ್ಯಕ್ತಿಗಳು, ತಮ್ಮ ವಿಚಾರವನ್ನು ಮೊದಲೇ ನಿರ್ಧರಿಸುತ್ತಾರೆ. ಯಾವುದೇ ಪ್ರತಿಭಟನೆಗೆ ಅವರು ಜಗ್ಗುವುದಿಲ್ಲ. ತಮ್ಮ ವಿಚಾರಗಳು ಸರಿ ಇದೆ ಎಂಬುದನ್ನು ಮೆಚ್ಚಿಸಲು ತಯಾರಿ ಮಾಡಿಕೊಂಡೇ ಬರುತ್ತಿದ್ದಾರೆ; ಮಾಧ್ಯಮಗಳು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಮೋಸಕ್ಕೆ ಒಳಗಾಗುತ್ತಿರುವ ಜನರನ್ನು ಜಾಗೃತಿಗೊಳಿಸುವ ಕೆಲಸವನ್ನು ನಾವು ಮಾಡಬೇಕಿದೆ” ಎಂದರು.

ಕೃಷಿ ಕಾನೂನುನಿನ ಡೆತ್‌ ಸರ್ಟಿಫಿಕೇಟ್‌ ಕೊಡಿ ಎಂದು ಹೋರಾಟ ಮಾಡುತ್ತಿದ್ದೇವೆ: ಬಡಗಲಪುರ ನಾಗೇಂದ್ರ |Naanu Gauri



“ಎರಡು ಕಡೆ ಮತ ಇದ್ದರೆ ತೆಗೆಯಬಾರದಾ? ಸತ್ತ ವ್ಯಕ್ತಿಗಳನ್ನು ಪಟ್ಟಿಯಿಂದ ತೆಗೆಯಬಾರದಾ ಎಂದು ಜನ ಕೇಳುತ್ತಾರೆ.. ಇದಕ್ಕೆ ನಾವ್ಯಾರೂ ವಿರೋಧ ಇಲ್ಲ ಎಂಬುದನ್ನು ಹೇಳಬೇಕು. ಪರಿಷ್ಕರಣೆ ಸದುದ್ದೇಶದಿಂದ ಕೂಡಿರಬೇಕು ಎಂದು ನಾವು ಹೇಳಬೇಕಿದೆ. ಪರಿಷ್ಕರಣೆ ಹೆಸರಿನಲ್ಲಿ 6.5 ಕೋಟಿ ಜನರನ್ನು ಪಟ್ಟಿಯಿಂದ ತೆಗೆದಿದ್ದಾರೆ. ತನ್ನ ಪಕ್ಷಕ್ಕೆ ಮತ ನೀಡುವುದಿಲ್ಲ ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ವ್ಯಕ್ತಿಯೊಬ್ಬರಿಗೆ ಮತದಾನದಿಂದ ವಂಚಿತರಾಗಿಸುವುದನ್ನು ನಾವು ವಿರೋಧಿಸುತ್ತಿದ್ದೇವೆ. ಸ್ವಾಯತ್ತ ಸಂಸ್ಥೆಯೊಂದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ನಾವು ವಿರೋಧಿಸುತ್ತಿದ್ದೇವೆ” ಎಂದು ಹೇಳಿದರು.

ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದೇವೆ: ನಜೀರ್ ಅಹ್ಮದ್

ಕಾಂಗ್ರೆಸ್ ಪಕ್ಷದ ಮುಖಂಡರು, ವಿಧಾನಪರಿಷತ್ ಸದಸ್ಯರಾದ ನಜೀರ್ ಅಹ್ಮದ್ ಮಾತನಾಡಿ, “ಎಸ್‌ಐಆರ್ ಕುರಿತು ಇಡೀ ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲೂ ಈಗಾಗಲೇ ನಾವೇ ಮ್ಯಾಪಿಂಗ್ ಆರಂಭಿಸಿದ್ದೇವೆ. ಜೊತೆಜೊತೆಯಲ್ಲಿ ನಮ್ಮಲ್ಲಿರುವ ಬಿಎಲ್‌ಒ ಮತ್ತು ಪಕ್ಷದ ಕಾರ್ಯಕರ್ತರಿಗೆ ತರಬೇತಿ ಸಹ ನೀಡುತ್ತಿದ್ದೇವೆ. ಇದರ ಬಗ್ಗೆ ಆಳವಾಗಿ ನೋಡಿದಾಗ, ಹೆಚ್ಚಾಗಿ ಕಾರ್ಮಿಕರು ರೈತರು ಬಡಜನರು, ಸ್ಲಂ ನಿವಾಸಿಗಳು ಬದುಕಿಗಾಗಿ ಬೇರೆಬೇರೆ ಕಡೆಗೆ ಆಗಾಗ ಪ್ರಯಾಣಿಸುತ್ತಾರೆ. ಅವರಿಗೆ ತಮ್ಮ ಹೆಸರು ನವೀಕರಿಸಬೇಕು ಎಂಬ ಅರಿವು ಇರುವುದಿಲ್ಲ. ನಮ್ಮ ಹೆಸರು ಪಟ್ಟಿಯಲ್ಲಿ ಇದ್ದೇ ಇರುತ್ತದೆ ಎಂದುಕೊಳ್ಳುತ್ತಾರೆ. ಆ ಗುಂಪಿನ ಜನರ ಸಮಸ್ಯೆಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಹೆಚ್ಚಾಗಿ, ದಲಿತರು, ಒಬಿಸಿ ಮತ್ತು ಮುಸಲ್ಮಾನರು ತೊಂದರೆಗೆ ಒಳಗಾಗುತ್ತಿದ್ದಾರೆ” ಎಂದರು.



“ಪಶ್ಚಿಮ ಬಂಗಾಳದಲ್ಲಿ ಸಹ ಮೇಲ್ಮನವಿ ಸಲ್ಲಿಸಿರುವ ಹೆಚ್ಚಿನವರಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರಿದ್ದಾರೆ. ನಮ್ಮ ಪಕ್ಷ ಖಾಯಂ ಆಗಿ ಅಧಿಕಾರದಲ್ಲಿ ಇರಬೇಕು ಎಂಬ ಕಾರಣಕ್ಕೆ ನರೇಂದ್ರ ಮೋದಿ, ಅಮಿತ್ ಶಾ ಸಂಚು ಮಾಡುತ್ತಿದ್ದಾರೆ. ಮತಗಳ್ಳತನ ಮಾಡಿ ನೋಡಿದರು, ಅದರಲ್ಲಿ ಅವರಿಗೆ ಸಾಕಷ್ಟು ಪ್ರಯೋಜನ ಆಗಿಲ್ಲ. ಯಾರು ನಮಗೆ ಓಟು ಕೊಡುವುದಿಲ್ಲ ಅವರ ಹೆಸರನ್ನೇ ಕಿತ್ತೊಗೆಯಬೇಕು ಎಂದು ಎಸ್‌ಐಆರ್ ಮೂಲಕ ಈಗ ಮತ್ತೊಂದು ಸಂಚು ಮಾಡುತ್ತಿದ್ದಾರೆ. ಪ್ರತಿಯೊಂದು ತಾಲ್ಲೂಕಿನಲ್ಲೂ ನಾವು ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ. ಮತ ತಮ್ಮ ಹಕ್ಕು ಎಂಬುದನ್ನು ಅವರಿಗೆ ತಿಳಿಸಬೇಕಿದೆ” ಎಂದು ಹೇಳಿದರು.

ಲಕ್ಷಾಂತರ ಜನರನ್ನು ’ಮತಹೀನ’ರನ್ನಾಗಿ ಮಾಡುತ್ತಿರುವ ಕೇಂದ್ರ ಸರ್ಕಾರ: ಬಿಟಿ ಲಲಿತಾ ನಾಯ್ಕ್

ಪ್ರಗತಿಪರ ಚಿಂತಕರು, ಹಿರಿಯ ಲೇಖಕರು ಬಿ.ಟಿ. ಲಲಿತಾ ನಾಯ್ಕ್ ಮಾತನಾಡಿ, “ಕೇಂದ್ರ ಸರ್ಕಾರ ಯಾವ ಆಧಾರದಲ್ಲಿ ಲಕ್ಷಾಂತರ ಜನರನ್ನು ಮತಹೀನರನ್ನಾಗಿ ಮಾಡುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ! ಬಿಜೆಪಿಗೆ ಓಟು ಕೊಡುವುದಿಲ್ಲ ಎಂದು ಅವರಿಗೆ ಹೇಳಿದ್ದಾದರೂ ಯಾರು? ಮುಂದೆ ಒಂದು ಹೇಳುತ್ತಾ ಹಿಂದೆ ಇನ್ನೊಂದು ಮಾಡುತ್ತಿದ್ದಾರೆ. ದೇಶದಲ್ಲಿ ಅಪ್ಪಟ ಮನುವಾದಿ ಸರ್ಕಾರವಿದೆ. ಹೆಜ್ಜೆಹೆಜ್ಜೆಗೂ ಅವರಿಗೆ ದೇವಸ್ಥಾನ ಇರಬೇಕು, ಸನಾತನ ಸಂಪ್ರದಾಯ ನಡೆಯಬೇಕು ಎಂದು ಈಗ ಆಡಳಿತ ನಡೆಸುತ್ತಿರುವವರು ಯೋಚಿಸುತ್ತಾರೆ. ಈ ದೇಶದ್ರೋಹ ಕೆಲಸವನ್ನು ನಾವು ಖಂಡಿಸಬೇಕು. ಮತ ಕೊಡುವವರ ಕುರಿತ ಪೂರ್ವಾಪರಗಳನ್ನು ಆಳವಾಗಿ ಪರಿಶೀಲಿಸಬಾರದು. ಮಂಡ್ಯದಲ್ಲಿ ಆನೆ, ತುಮಕೂರಿನಲ್ಲಿ ಜಿಂಕೆಗಳು ಬೆಳೆಗಳನ್ನು ಹಾಳು ಮಾಡುತ್ತಿವೆ. ಅವರೆಲ್ಲಾ ಊರು ಬಿಟ್ಟಿದ್ದಾರೆ. ಮಹಾನಗರಗಳಲ್ಲಿ ಕೆಲಸ ಮಾಡುತ್ತಿರುವವರ ಹೆಸರು ಕಿತ್ತಾಕುವುದು ಸರಿಯಲ್ಲ. ಜನ ನಿಮ್ಮ ತರಹ ಸುಖವಾಗಿಲ್ಲ, ಅವರೆಲ್ಲಾ ಬಹಳ ಕಷ್ಟದಲ್ಲಿದ್ದಾರೆ. ಇವತ್ತು ಇಲ್ಲಿದ್ದವರು ತಿಂಗಳ ಬಳಿಕ ಬೇರೆಲ್ಲೋ ಹೋಗಿರುತ್ತಾರೆ. ಮನೆಯಲ್ಲಿ ವಯಸ್ಸಾದವರು ಇರುತ್ತಾರೆ. ನೀವು ಕೇಳುವ ಪ್ರಶ್ನೆಗೆ ಅವರು ಸೂಕ್ತ ಉತ್ತರ ಕೊಡುವುದಕ್ಕೆ ಸಾಧ್ಯವಿಲ್ಲ. ಈ ದೇಶದಲ್ಲಿ ಸಂವಿಧಾನ ಆಳ್ವಿಕೆ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿ” ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಎಸ್‌ಐಆರ್ ಜಾರಿಗೆ ಅವಕಾಶ ನೀಡಬೇಡಿ: ಬಂಗಾಳ ನಿವಾಸಿ ಶೇಖ್ ಫರೀದುಲ್ಲಾ ಇಸ್ಲಾಂ

ಪಶ್ಚಿಮ ಬಂಗಾಳದ ಸಾಮಾಜಿಕ ಕಾರ್ಯಕರ್ತ ಶೇಖ್ ಫರೀದುಲ್ಲಾ ಇಸ್ಲಾಂ ಮಾತನಾಡಿ, “ಬಂಗಾಳದ ಮುಖ್ಯವಾಹಿನಿ ರಾಜಕೀಯ ಪಕ್ಷಗಳು ಎಸ್‌ಐಆರ್ ವಿರೋಧಿ ನಿಲುವು ತೆಗೆದುಕೊಳ್ಳಲಿಲ್ಲ. ಬದಲಿಗೆ, ’ಗುಡ್ ಎಸ್‌ಐಆರ್ ಬೇಕು ಎಂದು ಪ್ರತಿಪಾದಿಸಿದವು. ಬಂಗಾಳದಲ್ಲಿ ಎಸ್‌ಐಆರ್ ಜಾರಿಗೆ ಇದೂ ಒಂದು ಕಾರಣವಾಯಿತು. ಕರ್ನಾಟಕದ ಜನರಲ್ಲಿ ಕೇಳಿಕೊಳ್ಳುವುದೇನೆಂದರೆ, ಇಲ್ಲಿನ ರಾಜಕೀಯ ಪಕ್ಷಗಳ ಮೇಲೆ ನೀವು ಒತ್ತಡ ತನ್ನಿ; ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಎಸ್‌ಐಆರ್ ಜಾರಿಗೆ ಅವಕಾಶ ನೀಡುವುದಿಲ್ಲ ಎಂಬ ನಿಲುವು ತೆಗೆದುಕೊಳ್ಳಬೇಕು. ಹಾಗೇನಾದರೂ ಮಾಡದೇ ಇದ್ದರೆ, ಅವರನ್ನು ಒಳಗಡೆ ಬಿಟ್ಟುಕೊಂಡರೆ ತೊಂದರೆಯಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

“ಎಸ್‌ಐಆರ್ ಮೊದಲ ಹಂತದಲ್ಲಿ ಡಿಲೀಟ್ ಆದವರು ಕೇವಲ ನಾಲ್ಕು ಲಕ್ಷ ಜನರು ಮಾತ್ರ, ಇದು ಬಹಳ ಕಡಿಮೆ ಎಂದುಕೊಂಡೆವು. ಎರಡನೇ ಹಂತದಲ್ಲಿ 50 ಲಕ್ಷ ಜನರ ಹೆಸರು ಡಿಲೀಟ್ ಆಯಿತು, ಇದರಲ್ಲಿ ಬಹುತೇಕರು ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದರು. ಹಿಂದೂ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಮೊದಲು ಬಲಿ ಕೊಟ್ಟಿದ್ದೇ ಹಿಂದೂಗಳನ್ನು. ಮೂರನೇ ಹಂತದಲ್ಲಿ ’ತಾರ್ಕಿಕ ವ್ಯತ್ಯಾಸ’ ಹೆಸರಿನಲ್ಲಿ 77 ಲಕ್ಷ ಜನರನ್ನು ಪಟ್ಟಿ ಮಾಡಿದ್ದರು, ಅದರಲ್ಲಿ ಬಹುತೇಕರು ಮುಸಲ್ಮಾನರು. ಒಂದು ಕೋಟಿಗೂ ಹೆಚ್ಚಿನ ಜನರನ್ನು ಮತದಾನದಿಂದ ಹೊರಗಿಡಲಾಗಿದೆ. 37 ಲಕ್ಷ ಜನರ ಮೇಲ್ಮನವಿ ಪರಿಶೀಲಿಸಲು ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. ಈಗ ಬಹುತೇಕರು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುತ್ತಿಲ್ಲ. 37 ಲಕ್ಷ ಮೇಲ್ಮನವಿ ಸಲ್ಲಿಕೆಯಾಗಿದ್ದು, ಮತದಾನಕ್ಕೆ ಅವಕಾಶ ಸಿಕ್ಕಿರುವುದು ಕೇವಲ 138 ಜನಕ್ಕೆ ಮಾತ್ರ. ಓರ್ವ ನ್ಯಾಯಾಧೀಶರು ಒಂದು ದಿನಕ್ಕೆ ಹತ್ತು ಜನರಿಗಿಂತ ಹೆಚ್ಚಿನ ಅರ್ಜಿಗಳನ್ನು ತಪಾಸಣೆ ಮಾಡಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗೆ ಆದರೆ, 37 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲು 40 ಸಾವಿರ ವರ್ಷಗಳು ಬೇಕಾಗುತ್ತದೆ. ಆದ್ದರಿಂದ, ಕರ್ನಾಟಕದ ಜನರು ಎಸ್‌ಐಆರ್ ಅನ್ನು ಒಳಗೆ ಬಿಟ್ಟುಕೊಳ್ಳಬೇಡಿ” ಎಂದು ಮನವಿ ಮಾಡಿದರು.

ಎಸ್‌ಐಆರ್ ಪ್ರಕ್ರಿಯೆ ಕುರಿತ ’ಕರ್ನಾಟಕ ಘೋಷಣೆ’

ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳು ಹಾಗೂ ಎಲ್ಲಾ ಜಾತ್ಯತೀತ ಪಕ್ಷಗಳು ಜೊತೆಗೂಡಿ, ಏಪ್ರಿಲ್ 23, 2026 ರಂದು, ಬೆಂಗಳೂರಿನ ಫ್ರೀಡಂಪಾರ್ಕಿನಲ್ಲಿ ಆಯೋಜಿಸಿರುವ SIR ವಿರೋಧಿ ಸಮಾವೇಶದಲ್ಲಿ, ಒಕ್ಕೊರಲ ಜೊತೆ ಈ ಕೆಳಕಂಡ “ಕರ್ನಾಟಕ ಘೋಷಣೆ”ಯನ್ನು ಮಾಡುತ್ತಿದ್ದೇವೆ. ಎಸ್‌ಐಆರ್ (Special Intensive revision-ವಿಶೇಷ ತೀವ್ರ ಪರಿಷ್ಕರಣೆ) ಎಂಬುದು ನಮ್ಮ ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಕೊಲ್ಲಲು ಸಂವಿಧಾನ ವಿರೋಧಿ ಶಕ್ತಿಗಳು ರೂಪಿಸಿರುವ ಷಡ್ಯಂತ್ರದ ಒಂದು ಮುಖ್ಯ ಅಸ್ತ್ರವಾಗಿದೆ. ಇದನ್ನು ಈ ಸಮಾವೇಶ ಒಕ್ಕೊರಲ ಜೊತೆ ಧಿಕ್ಕರಿಸುತ್ತದೆ.

ಎಸ್‌ಐಆರ್ ಸಂಚನ್ನು ಬಳಸಿ ಬಿಜೆಪಿ ಬಿಹಾರವನ್ನು ವಶಪಡಿಸಿಕೊಂಡಿತು. ಅಲ್ಲಿನ ಚುನಾವಣೆಗಳ ಮುನ್ನ ಓಟ್ ಚೋರಿ ಬಗ್ಗೆ ಸಾಕಷ್ಟು ದನಿ ಎತ್ತಿದ ವಿರೋಧ ಪಕ್ಷಗಳು, ಫಲಿತಾಂಶ ಬಂದನಂತರ “ಓಟ್ ದರೋಡೆ”ಯ ಬಗ್ಗೆ ಮಾತನಾಡದೆ ಮೌನ ವಹಿಸಿದವು. ಈ ಮೌನ ಇಡೀ ಎಸ್‌ಐಆರ್ ವಿರೋಧಿ ಹೋರಾಟಕ್ಕೆ ದೊಡ್ಡ ಹಿನ್ನಡೆ ತಂದುಕೊಂಡಿತು. ವಿರೋಧ ಪಕ್ಷಗಳು ಈ ತಪ್ಪನ್ನು ಕರ್ನಾಟಕದಲ್ಲೂ ಪುನರಾವರ್ತನೆ ಮಾಡಬಾರದು ಎಂದು ಈ ಸಮಾವೇಶ ಒತ್ತಾಯಿಸುತ್ತದೆ.



ಎಸ್‌ಐಆರ್ ಹೆಬ್ಬಾವು ಬಂಗಾಳವನ್ನು ನುಂಗಲು ಇಂದು ಬಾಯಿತೆರೆದು ಕುಳಿತಿದೆ. ರಾಜ್ಯದ 91 ಲಕ್ಷ ಜನರನ್ನು ಮತಪಟ್ಟಿಯಿಂದ ಹೊರದಬ್ಬಲಾಗಿದೆ. ಇದನ್ನು ವಿರೋಧಿಸಿ ಬಂಗಾಳದ ಜನ ಎಸ್‌ಐಆರ್ ವಿರುದ್ಧ ವೀರೋಚಿತ ಹೋರಾಟ ನಡೆಸಿದ್ದಾರೆ. ಅಲ್ಪಾವಧಿಯಲ್ಲಿ 34 ಲಕ್ಷ ಜನ ಟ್ರಿಬ್ಯೂನಲ್ ಮುಂದೆ ಲಿಖಿತ ಅಪೀಲ್ ದಾಖಲಿಸಿದ್ದಾರೆ. “ನೀವು ಮುಂದಿನ ಚುನಾವಣೆಯಲ್ಲಿ ಓಟು ಹಾಕಿ” ಎಂದು ಅವರನ್ನೆಲ್ಲಾ ಪಕ್ಕಕ್ಕೆ ತಳ್ಳಿ ಮತದಾನವನ್ನು ಇಂದು ನಡೆಸಲಾಗುತ್ತಿದೆ. ಪ್ರಜಾತಂತ್ರದ ಈ ನಗ್ನ ಕಗ್ಗೊಲೆಯನ್ನು ಈ ಸಮಾವೇಶ ತೀವ್ರ ನೋವು ಮತ್ತು ಆಕ್ರೋಶದ ಜೊತೆ ಖಂಡಿಸುತ್ತದೆ. ಬಂಗಾಳದ ಜೊತೆ ಕರ್ನಾಟಕ ಇದೆ ಎಂದು ಒಕ್ಕೊರಲ ಜೊತೆ ಘೋಷಿಸುತ್ತದೆ.

ಎಸ್‌ಐಆರ್ ಪ್ರಕ್ರಿಯೆ ಈಗಾಗಲೇ 13 ರಾಜ್ಯಗಳ 6.5 ಕೋಟಿ ಜನರ ಮತದಾನದ ಹಕ್ಕನ್ನು ಕಸಿದುಕೊಂಡಿದೆ. ಕರ್ನಾಟಕವನ್ನೂ ಒಳಗೊಂಡಂತೆ ಮಿಕ್ಕ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಹೊರಟಿದೆ. ಇದುವರೆಗೆ ನಡೆದಿರುವ ಪ್ರಕ್ರಿಯೆಯಲ್ಲಿ ಎಸ್‌ಐಆರ್ ಮಾಡಿರುವ ಅನಾಹುತಗಳ ಸಮಗ್ರ ಅವಲೋಕನವಾಗದೆ, ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಮುಕ್ತಾಯಗೊಳ್ಳದೆ ಕರ್ನಾಟಕ ಮತ್ತು ಇತರೆ ರಾಜ್ಯಗಳಲ್ಲಿ ಎಸ್‌ಐಆರ್ ಅನ್ನು ಜಾರಿಗೆ ತರಬಾರದು ಎಂದು ಈ ಸಮಾವೇಶ ಒತ್ತಾಯಿಸುತ್ತದೆ.

ಎಸ್‌ಐಆರ್ ಅನ್ನು ಬಲವಂತವಾಗಿ ಕರ್ನಾಟಕದ ಮೇಲೆ ಹೇರಲು ಬಂದರೆ ಕರ್ನಾಟಕ ಸಹಿಸುವುದಿಲ್ಲ. ಅಂಬೇಡ್ಕರ್ ಮತ್ತು ಸಂವಿಧಾನ ನೀಡಿದ “ಸಾರ್ವತ್ರಿಕ ಮತದಾನ”ದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ.

ಕರ್ನಾಟದಲ್ಲಿ ಒಬ್ಬ ಅರ್ಹ ಮತದಾರರನ್ನೂ ಮತ ಪಟ್ಟಿಯಿಂದ ತೆಗೆಯಲು ನಿಮಗೆ ಅವಕಾಶ ನೀಡುವುದಿಲ್ಲ. ರಾಜ್ಯದಲ್ಲಿ ಎಷ್ಟು ಜನ ವಯಸ್ಕ ಮತದಾರರಿದ್ದಾರೋ ಅಷ್ಟೂ ಜನರು ಮತದಾರರ ಪಟ್ಟಿಯಲ್ಲಿ ಇರಬೇಕು. ಇಲ್ಲವೇ ಹೊರಗುಳಿದವರು ‘ನುಸುಳುಕೋರರು? ಎಂಬುದನ್ನು ನೀವು ಸಾಬೀತುಪಡಿಸಬೇಕು.

ಎಸ್‌ಐಆರ್ ಪ್ರಕ್ರಿಯೆಯನ್ನು ನಮ್ಮೆಲ್ಲಾ ಪ್ರತಿರೋಧದ ಹೊರತಾಗಿಯೂ ಯಾವುದೇ ಮೂಲಭೂತ ಬದಲಾವಣೆ ಮಾಡದೆ ‘ನ್ಯಾಯಾಂಗದ ಆದೇಶದ ಹೆಸರಿನಲ್ಲಿ ರಾಜ್ಯದ ಮೇಲೆ ಹೇರಿದಲ್ಲಿ ರಾಜ್ಯದ ಮತದಾರರ ಹಕ್ಕನ್ನು ಕಾಪಾಡಲು ರಾಜ್ಯ ಸರ್ಕಾರ ಈ ಕೆಳಕಂಡ ಆರು ಕ್ರಮಗಳಿಗೆ ಮುಂದಾಗಬೇಕು ಎಂದು ಈ ಸಮಾವೇಶ ಒತ್ತಾಯಿಸುತ್ತದೆ.

1. ವಿಧಾನಸಭಾ ಹಾಗೂ ರಾಜ್ಯಸಭಾ ಚುನಾವಣೆಗಳು ದೂರವಿರುವುದರಿಂದ ಕರ್ನಾಟಕದಲ್ಲಿ ಗಡಿಬಿಡಿಯ ಎಸ್‌ಐಆರ್ ನಡೆಸಬಾರದು. ಮೂರು ತಿಂಗಳ ಅವಧಿಯ ಬದಲು ಪ್ರಕ್ರಿಯೆಯ ಅವಧಿಯನ್ನು 6 ತಿಂಗಳಿಗೆ ವಿಸ್ತರಿಸಬೇಕು. ಅಪೀಲ್ ಹೋಗುವ ಸಮಯವನ್ನೂ 6 ತಿಂಗಳಿಗೆ ವಿಸ್ತರಿಸಬೇಕು ಎಂದು ನ್ಯಾಯಾಂಗಕ್ಕೆ ಅಪೀಲ್ ಸಲ್ಲಿಸಬೇಕು.

2. ಈ ಸಂಕೀರ್ಣ ಪ್ರಕ್ರಿಯೆಯಲ್ಲಿ ಜನರಿಗೆ ನೆರವಾಗಲು ಎಲ್ಲಾ ಗ್ರಾಮಪಂಚಾಯಿತಿ ಮತ್ತು ವಾರ್ಡ್‌ಗಳಲ್ಲಿ “ಮತದಾರ ನೆರವು ಕೇಂದ್ರ”ಗಳನ್ನು ಸ್ಥಾಪಿಸಬೇಕು.

3. ಜನರ ಬಳಿ ಸೂಕ್ತ ದಾಖಲೆಗಳು ಇಲ್ಲದಿದ್ದಲ್ಲಿ “ವಾಸ ದೃಢೀಕರಣ ಪತ್ರ ಮತ್ತು ಜಾತಿಪ್ರಮಾಣಪತ್ರ”ಗಳನ್ನು ತ್ವರಿತವಾಗಿ, ಜನರನ್ನು ಕಾಡಿಸದೆ, ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು.

4. ಕೇಂದ್ರ ತಯಾರಿಸುವ ಎಸ್‌ಐಆರ್ ಪರಿಷ್ಕೃತ ಮತಪಟ್ಟಿಯ ಮೇಲೆ ಅವಲಂಬಿಸದೆ (ಸ್ಥಳೀಯ ಚುನಾವಣೆಗಳು ಸಹ ಬರುತ್ತಿರುವುದರಿಂದ) ಸ್ವತಂತ್ರವಾಗಿ ಮತಪಟ್ಟಿಯ ಪರಿಷ್ಕರಣೆ ನಡೆಸಿ “ರಾಜ್ಯದ ಮತದಾರರ ಪಟ್ಟಿಯನ್ನು” ಸೂಕ್ತ ವಿಧಾನಗಳ ಮೂಲಕ ಸಮರ್ಥ ರೀತಿಯಲ್ಲಿ ಸಿದ್ಧಪಡಿಸುವಂತೆ ರಾಜ್ಯಸರ್ಕಾರ “ರಾಜ್ಯ ಚುನಾವಣಾ ಆಯೋಗ”ವನ್ನು ಕೋರಬೇಕು.

5. ಕೊನೆಯದಾಗಿ ಮತ್ತು ಬಹಳ ಮುಖ್ಯವಾಗಿ ಚುನಾವಣಾ ಆಯೋಗದ ಮ್ಯಾನ್ಯುಯಲ್ ನಲ್ಲೆ ಇರುವಂತೆ “ಕರಡಪಟ್ಟಿ ತಯಾರಾದ ನಂತರ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳನ್ನು ಕರೆದು ಅದನ್ನು ಎಲ್ಲರ ಸಮ್ಮುಖದಲ್ಲಿ ಮಂಡಿಸಿ ಸಾರ್ವಜನಿಕವಾಗಿ ತಿದ್ದುಪಡಿಗಳ ಪರಿಶೀಲನೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಬೇಕು. (The ECI’s ‘Manual on Electoral Rolls’ (December 2023) – Para 11.2.4(vi) and Para 24.1.2) ಎಂದು ಕೇಂದ್ರ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗ ಎರಡನ್ನೂ ಬಲವಾಗಿ ಒತ್ತಾಯಿಸಬೇಕು.

ಎಸ್‌ಐಆರ್ ಷಡ್ಯಂತ್ರವನ್ನು ವಿಫಲಗೊಳಿಸಲು ಈ ಸಮಾವೇಶದಲ್ಲಿ ಸಮಾಗಮಗೊಂಡಿರುವ ನಾವೆಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಹೋರಾಡುತ್ತೇವೆ. ನಮ್ಮ ಯಾವ ಆಗ್ರಹಗಳಿಗೂ ಕಿವಿಗೊಡದೆ ಬಲವಂತವಾಗಿ, ಅಕ್ರಮವಾಗಿ, ನಮ್ಮ ರಾಜ್ಯದ ಜನರ ಸಂವಿಧಾನಿಕ ಹಕ್ಕನ್ನು ಕಸಿದುಕೊಂಡಿದ್ದೇ ಆದಲ್ಲಿ ಬೀದಿಗಳನ್ನು ನಮ್ಮದಾಗಿಸಿಕೊಳ್ಳುವ ನಮ್ಮ ಹಕ್ಕನ್ನು ನಾವು ಚಲಾಯಿಸುತ್ತೇವೆ ಎಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರಕ್ಕೆ ಈ ಸಮಾವೇಶದ ಮೂಲಕ ರವಾನಿಸುತ್ತಿದ್ದೇವೆ.

ಜನಪರ ಸಂಘಟನೆಗಳು ಮತ್ತು ಜಾತ್ಯತೀತ ರಾಜಕೀಯ ಪಕ್ಷಗಳು ಆಯೋಜಿಸಿದ್ದ ‘ಎಸ್‌ಐಆರ್ ವಿರೋಧಿ ಪ್ರತಿರೋಧ’ ಕಾರ್ಯಕ್ರಮವನ್ನು ಜನಶಕ್ತಿಯ ಕೆ.ಎಲ್. ಆಶೋಕ್ ನಿರ್ವಹಿಸಿದರು.


ಇದನ್ನೂ ಓದಿ: ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ....

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...