Homeಮುಖಪುಟಬಾಂಗ್ಲಾ ಗಡಿಯಾಚೆಗೆ ತಳ್ಳಿದವರ ವಾಪಸಾತಿ: ಭಾರತೀಯರನ್ನೇ ಗಡಿಪಾರು ಮಾಡುತ್ತಿರುವ ಕೇಂದ್ರ?

ಬಾಂಗ್ಲಾ ಗಡಿಯಾಚೆಗೆ ತಳ್ಳಿದವರ ವಾಪಸಾತಿ: ಭಾರತೀಯರನ್ನೇ ಗಡಿಪಾರು ಮಾಡುತ್ತಿರುವ ಕೇಂದ್ರ?

- Advertisement -
- Advertisement -

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶದ ಗಡಿಯಾಚೆಗೆ ‘ತಳ್ಳಿದ್ದ’ ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆ ತರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ (ಮೇ 22,2026) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿದೆ ಎಂದು ವರದಿಯಾಗಿದೆ.

2025ರ ಜೂನ್ 18 ರಂದು ಗಡಿಯಾಚೆಗೆ ಬಲವಂತವಾಗಿ ತಳ್ಳಿದ್ದವರನ್ನು ಸುಮಾರು 11 ತಿಂಗಳ ಬಳಿಕ ವಾಪಸ್ ಕರೆ ತರುವುದಾಗಿ ಕೇಂದ್ರ ಹೇಳಿದೆ.

thewire.in ವರದಿಯ ಪ್ರಕಾರ, “ಸರ್ಕಾರ ಮೊದಲು ಅವರನ್ನು (ಗಡಿಯಾಚೆಗೆ ತಳ್ಳಿದವರನ್ನು) ಮರಳಿ ಕರೆ ತರಲಿದೆ. ಆನಂತರ ಅವರ ಸ್ಥಿತಿಗತಿಯನ್ನು ಪರಿಶೀಲಿಸಲಿದೆ, ಹಾಗೂ ಆ ಪರಿಶೀಲನೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ” ಎಂದು ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ವಿಶೇಷ ಸಂಗತಿಗಳು ಮತ್ತು ಪ್ರಕರಣದ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು, ಹಾಗೂ ಇದನ್ನು ಇತರ ಸಂದರ್ಭಗಳಲ್ಲಿ ಪಾಲಿಸಬೇಕಾದ ಪೂರ್ವನಿದರ್ಶನ ಎಂದು ಪರಿಗಣಿಸದೇ, ಪ್ರತಿವಾದಿಗಳನ್ನು (ಗಡಿಯಾಚೆಗೆ ತಳ್ಳಿದವರನ್ನು) ಭಾರತಕ್ಕೆ ಮರಳಿ ಕರೆತರಲು ಮತ್ತು ಅವರ ಭಾರತೀಯ ಪೌರತ್ವದ ಹಕ್ಕನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತುಷಾರ್ ಮೆಹ್ತಾ ಸಲ್ಲಿಸಿದ ಹೇಳಿಕೆಯನ್ನು ನ್ಯಾಯಾಲಯ ಗಮನಿಸಿದೆ. ಅವರು (ಗಡಿಯಾಚೆಗೆ ತಳ್ಳಲ್ಪಟ್ಟವರು) ಭಾರತದಲ್ಲಿ ಮುಂದುವರಿಯುವುದು ವಿಚಾರಣೆಯ ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತದೆ” ಎಂಬುವುದನ್ನು ನ್ಯಾಯಾಲಯವು ತನ್ನ ಆದೇಶದಲ್ಲಿ ದಾಖಲಿಸಿದೆ.

ಸುಮಾರು ಒಂದು ವರ್ಷದ ಬಳಿಕ, ಗಡಿಯಾಚೆ ತಳ್ಳಲ್ಪಟ್ಟವರನ್ನು ವಾಪಸ್ ಕರೆತಂದು ಪೌರತ್ವ ಪರಿಶೀಲಿಸುತ್ತೇವೆ ಎಂಬ ತುಷಾರ್ ಮೆಹ್ತಾ ಅವರ ಹೇಳಿಕೆ ನಿಜಕ್ಕೂ ಆಶ್ಚರ್ಯಕರವಾಗಿದೆ ಮತ್ತು ಆತಂಕದಿಂದ ಕೂಡಿದೆ. ಹಾಗಾದರೆ, ಒಂದು ವರ್ಷದ ಹಿಂದೆ ಸರಿಯಾಗಿ ದಾಖಲೆ ಪರಿಶೀಲಿಸಿದೆ ಭಾರತೀಯರನ್ನು ಗಡಿಯಾಚೆಗೆ ತಳ್ಳಿದರೇ ಎಂಬ ಪ್ರಶ್ನೆ ಮೂಡುತ್ತದೆ.
ದೇಶದ ಪೌರತ್ವ ಎನ್ನುವುದು ಅತ್ಯಂತ ಮುಖ್ಯವಾದುದು. ಅದು ಕಳೆದುಕೊಂಡು ದೇಶದಲ್ಲಿ ಬದುಕಿ ಪ್ರಯೋಜನವಿಲ್ಲ. ಹೀಗಿರುವಾಗ, ತರಾತುರಿಯಲ್ಲಿ ಭಾರತೀಯರನ್ನು ಅಕ್ರಮ ವಲಸಿಗರು ಎಂದು ಘೋಷಿಸಿ, ಗಡಿಯಾಚೆ ತಳ್ಳಲಾಯಿತೇ? ಎಂಬ ಪ್ರಶ್ನೆ ಉದ್ಬವಿಸುತ್ತದೆ.

ಏನಿದು ಪ್ರಕರಣ?

ಜೂನ್ 2025ರಲ್ಲಿ, ದೆಹಲಿಯ ರೋಹಿಣಿ ಪ್ರದೇಶದಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಸುನಾಲಿ ಖಾತೂನ್, ಸ್ವೀಟಿ ಬೀಬಿ ಮತ್ತು ಅವರ ಕುಟುಂಬದ ಸದಸ್ಯರನ್ನು “ಅಕ್ರಮ ಬಾಂಗ್ಲಾ ವಲಸಿಗರು” ಎಂಬ ಶಂಕೆಯ ಮೇಲೆ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು.

ಗೃಹ ಸಚಿವಾಲಯದ ಮಾರ್ಗಸೂಚಿಗಳ ಅಡಿಯಲ್ಲಿ, ಯಾವುದೇ ಸೂಕ್ತ ವಿಚಾರಣೆ ನಡೆಸದೆ ಅತ್ಯಂತ ವೇಗವಾಗಿ, ಇವರನ್ನು ಜೂನ್ 27, 2025 ರಂದು ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಲಾಗಿತ್ತು (ಗಡಿಪಾರು ಮಾಡಲಾಗಿತ್ತು).

ತಾವು ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ಖಾಯಂ ನಿವಾಸಿಗಳು ಎಂದು ಆ ಕುಟುಂಬಗಳು ವಾದಿಸಿದ್ದವು. ತಮ್ಮ ಪೋಷಕರು ಮತ್ತು ಅಜ್ಜಂದಿರ ಮತದಾರರ ಗುರುತಿನ ಚೀಟಿ, ಜಮೀನಿನ ದಾಖಲೆಗಳು ಹಾಗೂ ಮಕ್ಕಳ ಜನನ ಪ್ರಮಾಣಪತ್ರಗಳನ್ನು ತೋರಿಸಿದರೂ ಅಧಿಕಾರಿಗಳು ಅವುಗಳನ್ನು ಪರಿಗಣಿಸಿಲ್ಲ ಎನ್ನಲಾಗಿದೆ. ಗಡಿಯಾಚೆಗೆ ತಳ್ಳಲ್ಪಟ್ಟವರು ಬಾಂಗ್ಲಾದೇಶ ತಲುಪಿದ ನಂತರ ಅಲ್ಲಿನ ಪೊಲೀಸರು ಅವರನ್ನು ಅಕ್ರಮ ನುಸುಳುಕೋರರೆಂದು ಬಂಧಿಸಿದ್ದರು.

ವಿಷಯ ತಿಳಿದು ಪಶ್ಚಿಮ ಬಂಗಾಳದಲ್ಲಿದ್ದ ಸುನಾಲಿ ಖಾತೂನ್ ಅವರ ತಂದೆ ಭೋದು ಶೇಖ್, ತಮ್ಮ ಮಗಳು ಮತ್ತು ಕುಟುಂಬದವರು ಹುಟ್ಟಿನಿಂದಲೇ ಭಾರತೀಯ ನಾಗರಿಕರು ಎಂದು ಪ್ರತಿಪಾದಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 

ಸೆಪ್ಟೆಂಬರ್ 2025ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಕಲ್ಕತ್ತಾ ಹೈಕೋರ್ಟ್, ಕೇಂದ್ರ ಸರ್ಕಾರದ ಗಡಿಪಾರು ಕ್ರಮವನ್ನು “ಅಕ್ರಮ” ಎಂದು ಘೋಷಿಸಿತ್ತು. ನಿಯಮಾವಳಿಗಳನ್ನು ಉಲ್ಲಂಘಿಸಿ, ಅತಿ ತರಾತುರಿಯಲ್ಲಿ ಅವರನ್ನು ಗಡಿಪಾರು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಕೋರ್ಟ್, ಒಂದು ತಿಂಗಳೊಳಗೆ ಅವರನ್ನು ವಾಪಸ್ ಕರೆತರಲು ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ಡಿಸೆಂಬರ್ 2025 ರಲ್ಲಿ ತುಂಬು ಗರ್ಭಿಣಿಯಾಗಿದ್ದ ಸುನಾಲಿ ಖಾತೂನ್ ಮತ್ತು ಅವರ 8 ವರ್ಷದ ಮಗನನ್ನು ಮಾತ್ರ ಮಾನವೀಯತೆಯ ಆಧಾರದ ಮೇಲೆ ಭಾರತಕ್ಕೆ ಮರಳಲು ಅನುಮತಿ ನೀಡಿತ್ತು. ನಂತರ ಆಕೆ ಬೀರ್‌ಭೂಮ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಆದರೆ, ಖಾತೂನ್ ಅವರ ಪತಿ ಬಾಂಗ್ಲಾದೇಶದಲ್ಲೇ ಬಾಕಿಯಾಗಿದ್ದರು.

ಇದೇ ಪ್ರಕರಣದ ಸುದೀರ್ಘ ವಿಚಾರಣೆಯ ನಂತರ, ಶುಕ್ರವಾರ ನಡೆದ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರವು ಸುನಾಲಿ ಅವರ ಪತಿ ಡ್ಯಾನಿಶ್ ಮತ್ತು ಸ್ವೀಟಿ ಬೀಬಿ ಅವರ ಕುಟುಂಬ ಸೇರಿದಂತೆ ಬಾಕಿ ಉಳಿದಿರುವ ನಾಲ್ಕೂ ಜನರನ್ನು ವಾಪಸ್ ಕರೆತರಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ಹೇಳಿದಂತೆ, ಗಡಿಯಾಚೆಗೆ ತಳ್ಳಲ್ಪಟ್ಟವರನ್ನು ಸರ್ಕಾರ ವಾಪಸ್ ಕರೆತಂದು ಪರಿಶೀಲನೆ ನಡೆಸಲಿದೆ. ಒಂದು ವೇಳೆ ಅವರು ಭಾರತೀಯರು ಎಂದು ಖಚಿತವಾದರೆ ಇಲ್ಲೇ ಉಳಿದುಕೊಳ್ಳಲಿದ್ದಾರೆ, ಇಲ್ಲದಿದ್ದರೆ ಅವರನ್ನು ಮತ್ತೆ ಗಡಿಪಾರು ಮಾಡಲಾಗುತ್ತದೆ.

ಮತ್ತೊಮ್ಮೆ ಪೌರತ್ವ ಪರಿಶೀಲಿಸುತ್ತೇವೆ ಎಂದು ಸಾಲಿಸಿಟರ್ ಜನರಲ್ ಹೇಳಿರುವುದು, ವರ್ಷದ ಹಿಂದೆ ಗಡಿಪಾರು ಮಾಡುವಾಗ ಸರಿಯಾಗಿ ಪರಿಶೀಲನೆ ನಡೆಸಿಲ್ಲ ಎಂಬುವುದನ್ನು ಪುಷ್ಠೀಕರಿಸುತ್ತದೆ. ಇದು ನಿಜವಾದರೆ ಅಧಿಕಾರಿಗಳು ಅಥವಾ ಸರ್ಕಾರ ತಪ್ಪು ಮಾಡಿದಂತಾಗುತ್ತದೆ. ಈ ರೀತಿ ಆಗಲು ಸರ್ಕಾರ ಅವಕಾಶ ಕೊಡುವ ಸಾಧ್ಯತೆ ಇಲ್ಲ. ಹಾಗಾಗಿ, ಗಡಿಯಾಚೆಗೆ ತಳ್ಳಲ್ಪಟ್ಟ ಕುಟುಂಬ ಭಾರತದ ಪೌರತ್ವ ಉಳಿಸಿಕೊಳ್ಳುವ ಸಾಧ್ಯತೆ ತೀರ ಕಡಿಮೆಯಿದೆ.

ಗಡಿಯಾಚೆಗೆ ತಳ್ಳಲ್ಪಟ್ಟವರು ನೈಜ ಭಾರತೀಯರಾಗಿದ್ದರೂ, ಸರ್ಕಾರ ನೆಪ ಹೇಳಿ ಅವರನ್ನು ದೇಶದಿಂದ ಹೊರಗಟ್ಟಿದರೆ ಅದು ದೇಶದ ಸಂವಿಧಾನ, ಮಾನವೀಯತೆಗೆ ಎಸಗುವ ದ್ರೋಹವಾಗುತ್ತದೆ. ಏಕೆಂದರೆ, ಗಡಿಯಾಚೆಗೆ ತಳ್ಳಿದವರನ್ನು ಸ್ವೀಕರಿಸಿ ಪೌರತ್ವ ಕೊಡಲು ಬಾಂಗ್ಲಾದೇಶದವರು ಹಾರ ಹಿಡಿದುಕೊಂಡು ನಿಂತಿರುವುದಿಲ್ಲ. ಅವರೂ ಅಕ್ರಮ ವಲಸಿಗರು ಎಂದು ಬಂಧಿಸಿ ಜೈಲಿಗಟ್ಟುತ್ತಾರೆ.

ಓದು ಬರಹ ಗೊತ್ತಿಲ್ಲದ, ಹೊರ ಜಗತ್ತಿನ ಜ್ಞಾನವಿಲ್ಲದ ದಿನಕೂಲಿ ಕಾರ್ಮಿಕರನ್ನು ಸ್ವಂತ ಊರಿನಿಂದ, ದೇಶದಿಂದ, ಕುಟುಂಬದಿಂದ ದೂರ ಮಾಡುವುದು, ಅವರ ಗುರುತು ಪರಿಚಯ ಇಲ್ಲದ ಯಾವುದೋ ದೇಶಕ್ಕೆ ತಳ್ಳುವುದು, ಅಲ್ಲಿ ಅವರನ್ನು ಭದ್ರತಾ ಪಡೆ ಬಂಧಿಸಿ ಜೈಲಿಗಟ್ಟಿದರೆ ಏನು ಮಾಡಿಯಾರು ಎಂಬುವುದು ಊಹಿಸುವುದು ನೋವಿನ ಸಂಗತಿಯಾಗಿದೆ.

ಈ ಪ್ರಕರಣದಲ್ಲಿ ಈಗಾಗಲೇ ಸುನಾಲಿ ಖಾತೂನ್, ಆಕೆಯ 8 ವರ್ಷದ ಮಗ ಮತ್ತು ಈ ವರ್ಷದ ಆರಂಭದಲ್ಲಿ ಜನ್ಮ ನೀಡಿದ ಮಗು ಒಂದೆಡೆಯಾದರೆ, ಆಕೆಯ ಗಂಡ ಬಾಂಗ್ಲಾದೇಶದಲ್ಲಿದ್ದಾರೆ. ಸುನಾಲಿ ಖಾತೂನ್ ಅವರು ಮಗುವಿಗೆ ಜನ್ಮ ನೀಡುವಾಗ ಆಕೆಯ ಗಂಡ ಜೊತೆಗಿರಲಿಲ್ಲ. ಮತ್ತೊಂದೆಡೆ ಟೈಲರಿಂಗ್ ಕೆಲಸ ಮಾಡುತ್ತಿದ್ದ ಸ್ವೀಟಿ ಬೀಬಿ ಮತ್ತು ಆಕೆಯ ಇಬ್ಬರು ಮಕ್ಕಳೂ ಕೂಡ ಬಾಂಗ್ಲಾ ಗಡಿಯಾಚೆಗೆ ತಳ್ಳಲ್ಪಟ್ಟಿದ್ದಾರೆ. ತಾಂತ್ರಿಕವಾಗಿ ಈ ಕ್ರಮ ಸರಿ ಎನಿಸಿದರೂ, ಮಾನವೀಯ ದೃಷ್ಠಿಯಿಂದ ಒಪ್ಪಿಕೊಳ್ಳಲಾಗದು.

ತುಷಾರ್ ಮೆಹ್ತಾ ಅವರು ಬಾಂಗ್ಲಾದಿಂದ ವಾಪಾಸ್ ಕರೆ ತರುವ ನಿರ್ಧಾರವು ಸುನಾಲಿ ಅವರ ಒಂದು ಪ್ರಕರಣಕ್ಕೆ ಮಾತ್ರ ಅನ್ವಯಿಸುತ್ತದೆ. ಇತರ ಗಡಿಪಾರು ಆದವರನ್ನು ವಾಪಾಸ್ ಕರೆ ತರುವುದಿಲ್ಲ ಎಂದಿದ್ದಾರೆ.

ವಿಚಾರಣೆ ಅಥವಾ ಸೂಚನೆ ಇಲ್ಲದೆ ಬಲವಂತವಾಗಿ ಬಾಂಗ್ಲಾ ಗಡಿಯಾಚೆಗೆ ತಳ್ಳಲ್ಪಟ್ಟ ಎರಡು ಗುಂಪಿನ ಪರ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ, ಕಪಿಲ್ ಸಿಬಲ್ ಮತ್ತು ಇತರ ಕಾನೂನು ದಿಗ್ಗಜರು ವಾದ ಮಂಡಿಸಿದ್ದಾರೆ.

ಸುನಾಲಿ ಖಾತೂನ್ ಅವರ ನೆರೆಯವರಾದ ಸ್ವೀಟಿ ಬೀಬಿ ಪಶ್ಚಿಮ ಬಂಗಾಳದ ಪೈಕರ್ ಗ್ರಾಮದವರು. ದೆಹಲಿಯಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದೆಹಲಿ ಪೊಲೀಸರು ‘ಅಕ್ರಮ ಬಾಂಗ್ಲಾ ವಲಸಿಗರು’ ಎಂಬ ಶಂಕೆ ಮೇಲೆ, ಸ್ವೀಟಿ ಬೀಬಿ ಮತ್ತು ಅವರ ಇಬ್ಬರು ಮಕ್ಕಳನ್ನು ಸುನಾಲಿ ಖಾತೂನ್ ಕುಟುಂಬದ ಜೊತೆ ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಾರೆ.

ಕಲ್ಕತ್ತಾ ಹೈಕೋರ್ಟ್ 2025ರ ಸೆಪ್ಟೆಂಬರ್ 26 ರಂದು ಸುನಾಲಿ ಮತ್ತು ಅವರ ಕುಟುಂಬ ಹಾಗೂ ಸ್ವೀಟಿ ಬೀಬಿ ಮತ್ತು ಅವರ ಕುಟುಂಬದ ಬಂಧನ ಮತ್ತು ಗಡಿಪಾರು ಕ್ರಮಗಳು ಕಾರ್ಯವಿಧಾನದ ದೃಷ್ಟಿಯಿಂದ ಅಸಿಂಧು ಮತ್ತು ಅವರ ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ತೀರ್ಪು ನೀಡಿತ್ತು. ನ್ಯಾಯಮೂರ್ತಿಗಳಾದ ತಪಬ್ರತ ಚಕ್ರವರ್ತಿ ಮತ್ತು ರೀತೋಬ್ರತ ಕುಮಾರ್ ಮಿತ್ರ ಅವರು ಅವರೆಲ್ಲರನ್ನೂ “ನಾಲ್ಕು ವಾರಗಳ ಒಳಗೆ” ಭಾರತಕ್ಕೆ ಮರಳಿ ಕರೆತರಬೇಕು ಎಂದು ಹೇಳಿದ್ದರು.

ಸ್ವೀಟಿ ಮತ್ತು ಅವರ ಗಂಡು ಮಕ್ಕಳ ಪೌರತ್ವದ ಸ್ಥಿತಿಗತಿಯು ಖಚಿತವಾಗುವವರೆಗೆ, ಅವರನ್ನು ‘ತಾತ್ಕಾಲಿಕ’ ಆಧಾರದ ಮೇಲೆ ಮರಳಿ ದೇಶಕ್ಕೆ ಕರೆತರಬಹುದು (ಸ್ವದೇಶಿ ವಾಪಸಾತಿ) ಎಂದು ನ್ಯಾಯಾಲಯವು ನಿರ್ದಿಷ್ಟವಾಗಿ ನಿರ್ದೇಶಿಸಿತ್ತು.

ಕೇಂದ್ರ ಸರ್ಕಾರವು ಹೈಕೋರ್ಟ್‌ನ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ನವೆಂಬರ್ ಕೊನೆಯ ವಾರದಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಮೊದಲು ಅವರನ್ನು ಮರಳಿ ಕರೆತರಲು ಮತ್ತು ಆ ನಂತರ ಅವರ ಪೌರತ್ವವನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಿತ್ತು.

ನವೆಂಬರ್‌ನ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಕೃಷ್ಣ ಕಾಂತ್ ಅವರು, ಸುನಾಲಿ ಅವರ ತಂದೆಯು ಭಾರತದಲ್ಲಿ ಅವರ ದೀರ್ಘಕಾಲದ ವಾಸಸ್ಥಳ ಮತ್ತು ಆಳವಾದ ಕೌಟುಂಬಿಕ ಸಂಬಂಧಗಳಿಗೆ ಸಂಬಂಧಿಸಿದ ದಾಖಲೆಗಳ ಪುರಾವೆಗಳನ್ನು ಹಾಜರುಪಡಿಸಿರುವುದರಿಂದ, ಅವರನ್ನು ಮರಳಿ ದೇಶಕ್ಕೆ ಕರೆತರಲು (ಸ್ವದೇಶಿ ವಾಪಸಾತಿ) ನಿಮ್ಮ ನಿರ್ದಿಷ್ಟ ಆಕ್ಷೇಪಣೆಗಳೇನು ಎಂದು ಕೇಂದ್ರ ಸರ್ಕಾರದ ಪರ ವಕೀಲರನ್ನು ಕೇಳಿದ್ದರು.

“ಈಗ ಜನನ ಪ್ರಮಾಣಪತ್ರ, ನಿಕಟ ಕುಟುಂಬ ಸದಸ್ಯರ ಭೂ ಮಾಲೀಕತ್ವದಂತಹ ಸಾಕಷ್ಟು ದಾಖಲೆಗಳು ಇವೆ. ಇವುಗಳು ಒಂದು ರೀತಿಯ ಪುರಾವೆಗಳಾಗಿವೆ. ಮತ್ತು ಇವು ಸಂಭಾವ್ಯತೆಯ ಪುರಾವೆಗಳಾಗಿವೆ. ಹಾಗಾದರೆ ನಿಮ್ಮನ್ನು ತಡೆಯುತ್ತಿರುವುದು ಯಾವುದು? ಈ ಹಿಂದೆ ನೀವು ಯಾವುದೇ ತನಿಖೆಯನ್ನು ನಡೆಸಿರಲಿಲ್ಲ. ಗಡಿಪಾರು ಮಾಡಿದವರ ಅಹವಾಲನ್ನು ಎಂದಿಗೂ ಆಲಿಸದೆ ನೀವು ಅವರನ್ನು ಕಳುಹಿಸಿದ್ದೀರಿ ಎಂಬ ಆರೋಪವಿದೆ. ಕನಿಷ್ಠ ತಾತ್ಕಾಲಿಕ ಕ್ರಮವಾಗಿಯಾದರೂ ನೀವು ಅವರನ್ನು ಏಕೆ ಮರಳಿ ಕರೆತರಬಾರದು, ಅವರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಬಾರದು, ಈ ಎಲ್ಲಾ ದಾಖಲೆಗಳು ಅಥವಾ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಒಂದು ಸಮಗ್ರ ನಿರ್ಧಾರವನ್ನು ಏಕೆ ತೆಗೆದುಕೊಳ್ಳಬಾರದು?” ಎಂದು ನ್ಯಾಯಮೂರ್ತಿ ಕಾಂತ್ ಪ್ರಶ್ನಿಸಿದ್ದರು.

“ಒಬ್ಬ ವ್ಯಕ್ತಿ ಬಾಂಗ್ಲಾದೇಶದಿಂದ ಅಕ್ರಮವಾಗಿ ಪ್ರವೇಶಿಸಿದ್ದರೆ, ನಿಮ್ಮ ಗಡಿಪಾರು ಕ್ರಮವು ನೂರಕ್ಕೆ ನೂರರಷ್ಟು ನ್ಯಾಯಸಮ್ಮತವಾಗಿದೆ. ಇದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ, ಯಾರಾದರೂ ನಿಮ್ಮ ಮುಂದೆ ನಿಂತು, ‘ಸ್ವಲ್ಪ ತಾಳಿ, ನಾನು ಭಾರತಕ್ಕೆ ಸೇರಿದವನು, ನಾನು ಇಲ್ಲೇ ಹುಟ್ಟಿ ಬೆಳೆದವನು ಮತ್ತು ನಾನು ನಿಜವಾಗಿಯೂ ಭಾರತೀಯ ಪ್ರಜೆ’ ಎಂದು ತೋರಿಸಲು ಪುರಾವೆಗಳನ್ನು ಹೊಂದಿದ್ದರೆ, ನಿಮ್ಮ ಮುಂದೆ ವಾದ ಮಂಡಿಸುವ ಹಕ್ಕು ಆ ವ್ಯಕ್ತಿಗಿದೆ” ಎಂದಿದ್ದರು.

“ತಾವು ಭಾರತೀಯ ನಾಗರಿಕರು ಎಂದು ಇ-ರಿಕ್ಷಾ ಚಾಲಕರಾಗಿರುವ ಸುನಾಲಿ ಅವರ ಅಣ್ಣ ಸುಜೋರ್ ಶೇಖ್ ಹೇಳಿರುವುದನ್ನು ದಿ ವೈರ್ ವರದಿ ಮಾಡಿದೆ: “2003 ರಲ್ಲಿ ನಮ್ಮ ತಂದೆ ಭೋದು ಶೇಖ್ ನಮ್ಮನ್ನು ದೆಹಲಿಗೆ ಕರೆದುಕೊಂಡು ಹೋದರು. ಅಲ್ಲಿ ಅವರು ರಿಕ್ಷಾ ಎಳೆಯುವ ಕೆಲಸ ಮಾಡುತ್ತಿದ್ದರು ಮತ್ತು ನನ್ನ ತಾಯಿ ಜನರ ಮನೆಗಳಲ್ಲಿ ಮನೆಗೆಲಸ ಮಾಡುತ್ತಿದ್ದರು. ಹಲವು ವರ್ಷಗಳ ನಂತರ ನಾವು ನಮ್ಮ ಹಳ್ಳಿಗೆ ಹಿಂತಿರುಗಿದೆವು. ನಾವು ಹೇಗೆ ಬಾಂಗ್ಲಾದೇಶಿಯರಾಗಲು ಸಾಧ್ಯ?” ಎಂದು ಸುಜೋರ್ ಶೇಖ್ ಪ್ರಶ್ನಿಸಿದ್ದಾರೆ.

ಗಡಿಯಾಚೆಗೆ ತಳ್ಳಲ್ಪಟ್ಟವರು ಹಲವರು..

ಮೇಲಿನ ವರದಿಯಲ್ಲಿ ನಾವು ಇತ್ತೀಚೆಗೆ ಸುದ್ದಿಯಲ್ಲಿರುವ ಸುನಾಲಿ ಖಾತೂನ್ ಮತ್ತು ಸ್ವೀಟಿ ಬೀಬಿ ಅವರ ಕುಟುಂಬ ಕಥೆಗಳನ್ನು ಮಾತ್ರ ವಿವರಿಸಿದ್ದೇವೆ. ಆದರೆ, ಇಂತಹದ್ದೇ ಹಲವು ಆರೋಪಗಳು ಕಳೆದ ಎರಡು ವರ್ಷಗಳಿಂದ ವರದಿಯಾಗಿವೆ.

ಪಶ್ಚಿಮ ಬಂಗಾಳದ 19 ವರ್ಷದ ವಲಸೆ ಕಾರ್ಮಿಕನನ್ನು ಬಂಧಿಸಿ ಎರಡು ತಿಂಗಳ ಕಾಲ ರಾಜಸ್ಥಾನದ ಬಂಧನ ಕೇಂದ್ರದಲ್ಲಿ ಇರಿಸಿದ್ದ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌), ನಂತರ ಬಂದೂಕು ತೋರಿಸಿ ಬಲವಂತವಾಗಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದೆ ಎಂದು 2025ರ ಜುಲೈನಲ್ಲಿ ಅವರ ಕುಟುಂಬ ಆರೋಪಿಸಿತ್ತು.

ಅಮೀರ್ ಶೇಖ್ ಗಡಿಪಾರು ಮಾಡಲಾಗಿರುವ ವಲಸೆ ಕಾರ್ಮಿಕ. ಅವರು ಬಾಂಗ್ಲಾದೇಶದಿಂದ ಅಲ್ಲಿನ ಜನರೊಂದಿಗೆ ಇದ್ದು ಮಾತನಾಡಿರುವ ವಿಡಿಯೋ ವೈರಲ್ ಆದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅಮೀರ್ ಅವರ ಚಿಕ್ಕಪ್ಪ ಮೊಹಮ್ಮದ್ ಅಜ್ಮಲ್ ಶೇಖ್ ಹೇಳಿದ್ದಾಗಿ scroll.in ವರದಿ ಮಾಡಿತ್ತು.

ವಿಡಿಯೋದಲ್ಲಿ, ಅಮೀರ್ ಶೇಖ್ ಅವರು ಪಶ್ಚಿಮ ಬಂಗಾಳದ ಮಾಲ್ಡಾ ನಿವಾಸಿ ಎಂದು ಹೇಳುವುದನ್ನು ನೋಡಬಹುದು. ಅವರು ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರು ಅವರನ್ನು ಬಾಂಗ್ಲಾದೇಶಿ ಎಂಬ ಅನುಮಾನದ ಮೇಲೆ ಬಂಧಿಸಿದ್ದರು ಎಂದು scroll.in ಹೇಳಿತ್ತು.

ತಪ್ಪಾಗಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆತರಲಾಗಿದೆ ಎಂದು 2025ರ ಜೂನ್‌ನಲ್ಲಿ ವರದಿಯಾಗಿತ್ತು.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಇಬ್ಬರು, ಬರ್ಧಮಾನ್ ಜಿಲ್ಲೆಯ ಒಬ್ಬ ವ್ಯಕ್ತಿಯನ್ನು ಗಡಿಪಾರು ಮಾಡಲಾಗಿತ್ತು. ಅಧಿಕಾರಿಗಳು ಅವರ ಪೌರತ್ವ ದಾಖಲೆಗಳನ್ನು ಸಾಬೀತುಪಡಿಸಿದ ಬಳಿಕ ವಾಪಸ್ ಕರೆತಂದಿದ್ದಾರೆ ಎಂದು ವರದಿಗಳು ಹೇಳಿತ್ತು.

ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗಿದ್ದ ಪಶ್ಚಿಮ ಬಂಗಾಳದ 36 ವರ್ಷದ ವ್ಯಕ್ತಿಯನ್ನು ಅಕ್ರಮ ಬಾಂಗ್ಲಾದೇಶ ವಲಸಿಗ ಎಂದು ಶಂಕಿಸಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಅವರನ್ನು ಬೆಳಗಿನ ಜಾವದ ಹೊತ್ತಿಗೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದೆ ಎಂದು indianexpress.com 2025ರ ಜೂನ್‌ನಲ್ಲಿ ವರದಿ ಮಾಡಿತ್ತು.

ಹೀಗೆ ಹಲವು ಜನರನ್ನು ಅಕ್ರಮ ಬಾಂಗ್ಲಾ ವಲಸಿಗರು ಎಂದು ಗಡಿಪಾರು ಮಾಡಿದ ಮತ್ತು ಇನ್ನೂ ಹಲವರನ್ನು ಗಡಿಪಾರು ಮಾಡಿದ ಬಳಿಕ ತಪ್ಪಾಗಿದೆ ಎಂದು ವಾಪಾಸ್ ಕರೆತಂದ ಬಗ್ಗೆ ವರದಿಯಾಗುತ್ತಲೇ ಇದೆ.



ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಜಾರಿಯಾದ್ರೆ ಗ್ಯಾರಂಟಿಯನ್ನು ಕಳೆದುಕೊಳ್ತೀರಿ!

"ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್‌ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು...

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು...

ತಾಯ್ತನ ಕ್ರೀಡೆಗೆ ಅಡ್ಡಿಯಾಗಬಾರದು: ಕುಸ್ತಿ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್ ಚಾಟಿ, ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್!

ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ "ಅನರ್ಹ" ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ....

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ...

ಪಶ್ಚಿಮ ಬಂಗಾಳ: ಬಿಜೆಪಿಗೆ ಉಲ್ಟಾ ಹೊಡೆಯುತ್ತಾ ಗೋ-ಹತ್ಯೆ ನಿಷೇಧ ಕಾಯ್ದೆ?

ಬಕ್ರೀದ್ (ಈದ್-ಉಲ್-ಅದ್ಹಾ) ಹಬ್ಬ ಹತ್ತಿರ ಬರುತ್ತಿದ್ದಂತೆ, ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಆಕ್ರೋಶ ಕೇವಲ ಧಾರ್ಮಿಕ ಕಾರಣಗಳಿಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ವ್ಯಾಪಾರಿಗಳು,...

ಪ.ಬಂಗಾಳ: ಮಮತಾ ಸರ್ಕಾರ ಜಾರಿ ಮಾಡಿದ್ದ OBC ಮೀಸಲಾತಿಯನ್ನು ಕಿತ್ತೆಸೆದ ಸುವೇಂದು ನೇತೃತ್ವದ ಬಿಜೆಪಿ ಸರ್ಕಾರ

ಪಶ್ಚಿಮ ಬಂಗಾಳದ ಒಬಿಸಿ (ಇತರ ಹಿಂದುಳಿದ ವರ್ಗಗಳು) ಪಟ್ಟಿಯಲ್ಲಿದ್ದ ಮುಸ್ಲಿಂ ಸಮುದಾಯಗಳನ್ನು ಕೈಬಿಡುವ ಮೂಲಕ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರವು ಭಾರಿ ರಾಜಕೀಯ ಸಂಚಲನ ಸೃಷ್ಟಿಸಿದೆ. ಈ ಹಿಂದೆ...

ಸಾಮಾಜಿಕ ಹೋರಾಟಗಾರ ‘ಫರಿದುಲ್ ಇಸ್ಲಾಂ’ರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿದ ಕೋಲ್ಕತ್ತಾ ಪೊಲೀಸರು

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇನ್ನು ಹತ್ತು ದಿನಗಳು ಕಳೆಯುವಷ್ಟರಲ್ಲೇ, ಸರ್ಕಾರದ ಆಡಳಿತವನ್ನು ಪ್ರಶ್ನಿಸುವವರ ಹಾಗೂ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಆರಂಭವಾಗಿದೆ ಎಂಬ...

ಉಪ್ಪಿನಂಗಡಿ: ಸೂರ್ಯ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಚಿಕಿತ್ಸೆಗೆಂದು ತೆರಳಿ ಶವವಾಗಿ ಮರಳಿದ ಬೀದಿಬದಿ ವ್ಯಾಪಾರಿ!

ಖಾಸಗಿ ಆಸ್ಪತ್ರೆಗಳ ಹಣದ ದಾಹ ಮತ್ತು ವೈದ್ಯಕೀಯ ಸಿಬ್ಬಂದಿಯ ಘೋರ ನಿರ್ಲಕ್ಷ್ಯಕ್ಕೆ ಮತ್ತೊಂದು ಬಡ ಜೀವ ಬಲಿಯಾಗಿದೆ. ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮೊಹಮ್ಮದ್ ಶರೀಫ್ (35) ಎಂಬ ಬೀದಿ ಬದಿ...

ಬಿಸಿಲಿನ ಬೆಂಕಿಗೆ ‘ಎಲ್ ನಿನೊ’ ತುಪ್ಪ: 2026ರ ಮುಂಗಾರು ಕಥೆ ಏನು?

ದೇಶಾದ್ಯಂತ ತಾಪಮಾನ ದಿನೇ ದಿನೇ ಏರುತ್ತಿದ್ದು, ಭೀಕರ ಶಾಖದ ಅಲೆಗಳಿಗೆ (Heatwaves) ಜನ ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಎಲ್ಲರ ಕಣ್ಣುಗಳು ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಹವಾಮಾನ ಬದಲಾವಣೆಯ...

ಸುಮಾರು 1 ಲಕ್ಷ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯವಿಲ್ಲ, 61,000 ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯಗಳಿಲ್ಲ: ನೀತಿ ಆಯೋಗ

ಶಿಕ್ಷಣವು ಒಂದು ದೇಶದ ಅಭಿವೃದ್ಧಿಯ ಬೆನ್ನೆಲುಬು ಅಂತಲೇ ಹೇಳಲಾಗುತ್ತದೆ. ಆದರೆ, ಭಾರತದ ಶಾಲಾ ಶಿಕ್ಷಣದ ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆಯ ಕುರಿತಾಗಿ ನೀತಿ ಆಯೋಗ ಹಾಗೂ ಯುಡಿಐಎಸ್ಇ+ (UDISE+ 2024–25) ಇತ್ತೀಚೆಗೆ ಬಿಡುಗಡೆ...