Homeನ್ಯಾಯಪಥ ಇ ಪೇಪರ್ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

- Advertisement -
- Advertisement -

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ. ಸ್ವಾತಂತ್ರ್ಯ ನಂತರದ ಭಾರತದ ಇತಿಹಾಸದಲ್ಲಿ ಒಂದು ವಿಚಾರಕ್ಕಾಗಿ ಸುದೀರ್ಘವಾಗಿ ನಡೆದ ಆಂದೋಲನ ಯಾವುದಾದರೂ ಇದ್ದರೆ ಒಳಮೀಸಲಾತಿ ಚಳವಳಿ ಎಂದು ನಿಸ್ಸಂಶಯವಾಗಿ ಹೇಳಿಬಿಡಬಹುದು.

ಅವಕಾಶವಂಚಿತ, ಅನ್ಯಾಯಕ್ಕೆ ಒಳಗಾದ ಸಮುದಾಯಗಳು ತಮ್ಮ ಹಸಿವಿನ ಪ್ರಶ್ನೆಯನ್ನು ಸರ್ಕಾರದ ಮುಂದೆ ಇಟ್ಟ ತಕ್ಷಣ ಜಡ್ಡುಗಟ್ಟಿದ ಶ್ರೇಣೀಕೃತ ವ್ಯವಸ್ಥೆ ಅಷ್ಟು ಸುಲಭವಾಗಿ ಸ್ಪಂದಿಸುವುದಿಲ್ಲ. ಅಲ್ಲಿ ಒಬ್ಬರನ್ನೊಬ್ಬರನ್ನು ಎತ್ತಿಕಟ್ಟಿ ಸಮಾನತೆಯ ಪ್ರಶ್ನೆಯನ್ನು ಅಣಕ ಮಾಡುವ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಕರುಳಬಳ್ಳಿಗಳನ್ನು ಒಡೆದು ಆಳುವ ಪಿತೂರಿಗಳೂ ಜರುಗುತ್ತಿರುತ್ತವೆ. ಶಂಕೆಗಳನ್ನು ಬಿತ್ತಿ, ಅಸಮಾನತೆಯನ್ನು ಪೋಷಿಸುವ ಬಲಾಢ್ಯರ ಹಿಕಮತ್ತುಗಳನ್ನು ಅರ್ಥಮಾಡಿಕೊಳ್ಳಲು ಕಾಲ ಕೂಡಿಬರಬೇಕು. ಒಳಮೀಸಲಾತಿ ವಿಚಾರದಲ್ಲಿ ಆದದ್ದೂ ಇದೆ.

ಪರಿಶಿಷ್ಟ ಜಾತಿಗಳು ಇತರರಿಗೆ ಹೋಲಿಸಿದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದವರು ಎಂಬುದು ನಿಜ. ದುರದೃಷ್ಟವಶಾತ್ ಇಂತಹ ಪರಿಶಿಷ್ಟರೊಳಗೆಯೂ ತಾರತಮ್ಯ ನಡೆಯುತ್ತಿದೆ ಎಂಬ ಅಸಮಾಧಾನ ನಿಧಾನಕ್ಕೆ ಹೊಗೆಯಾಡಲು ಶುರುವಾದ ಮೇಲೆ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಜನಸಂಖ್ಯಾವಾರು ವಿಭಾಗಿಸಬೇಕು ಎಂಬ ಕೂಗು ಎದ್ದಿತು. ಪರಿಶಿಷ್ಟರನ್ನು ವಿಭಜಿಸಿದರೆ ಕೋಮುವಾದಿ ರಾಜಕಾರಣದ ಬೇಳೆ ಬೇಯಿಸಬಹುದೆಂಬ ಪಿತೂರಿ ಅಜೆಂಡಾಗಳೂ ಮತೀಯವಾದಿ ಶಕ್ತಿಗಳ ಹಿಂದಿತ್ತು ಎಂಬುದೂ ಸತ್ಯ. ಆದರೆ ಒಳಮೀಸಲಾತಿ ಚಳವಳಿ ಬಿತ್ತಿದ ಬಹುದೊಡ್ಡ ಪ್ರಜ್ಞೆ ಎಂದರೆ, “ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣವೇ, ಪರಿಶಿಷ್ಟರ ನಿಜವಾದ ಏಕೀಕರಣ”, “ಕಂಡವರ ಮನೆ ಹಾಳಾದರೆ ಕರ ಕಟ್ಟುತ್ತಾರೆ ಕೋಮುವಾದಿಗಳು” ಎಂಬ ಜಾಗೃತಿ ಮೂಡಿ, ಅಂತಿಮವಾಗಿ ಮೀಸಲಾತಿಯನ್ನು ಹಂಚಿಕೊಳ್ಳುವಲ್ಲಿಗೆ ಪರಿಶಿಷ್ಟರು ಒಮ್ಮತಕ್ಕೆ ಬರುವುದಕ್ಕೆ ದಶಕಗಳೇ ಬೇಕಾದವು ಎಂದು ವಿಷಾದದಿಂದ ಹೇಳಲೇಬೇಕು. ಆದರೆ ಅಂತಿಮವಾಗಿ ಆಳುವ ಸರ್ಕಾರಗಳು ಸಾಂವಿಧಾನಿಕ ಹಕ್ಕಿಗೆ ಮಣಿಯಲೇಬೇಕಾಯಿತು. ಕೊನೆಕ್ಷಣದವರೆಗೂ ಅಸ್ಪೃಶ್ಯರನ್ನು ವಿಭಾಗಿಸಿ ನೋಡುವ ಮತ್ತು ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವ ಕುತಂತ್ರಗಳನ್ನು ಕೋಮುವಾದಿ ಶಕ್ತಿಗಳು ನಡೆಸಿದ್ದೂ ನಡೆದುಹೋಯಿತು. ಈಗ ನಡೆದ ಹೆಜ್ಜೆಗಳನ್ನು ಹಿಂತಿರುಗಿ ನೋಡಿ, ಆಗಿರುವ ಗಾಯಗಳನ್ನು ವಾಸಿ ಮಾಡಿಕೊಳ್ಳಬೇಕಾದ ಸಮಯ ಬಂದಿದೆ.

ಉತ್ತರ ಭಾರತದಲ್ಲಿ ಒಳಮೀಸಲಾತಿ ಹೋರಾಟ

’ಒಳಮೀಸಲಾತಿ’ ಎಂಬ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮುನ್ನಡೆಸಿದ ಕೀರ್ತಿ ಮರುಮಾತಿಲ್ಲದೆ ’ಮಾದಿಗ ಸಮುದಾಯ’ಕ್ಕೆ ಸಲ್ಲುತ್ತದೆ. ಉತ್ತರ ಭಾರತದಲ್ಲಿ ಅಷ್ಟು ತೀವ್ರತೆಯನ್ನು ಒಳಮೀಸಲಾತಿ ಹೋರಾಟ ಪಡೆಯದಿದ್ದರೂ, ದಕ್ಷಿಣ ಭಾರತದ ಅವಿಭಜಿತ ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳ ಒಳಮೀಸಲಾತಿ ಹೋರಾಟಗಳು ದಲಿತ ಚಳವಳಿಯ ಬಹುಮುಖ್ಯ ಧಾರೆಯಾಗಿ ರೂಪುಗೊಂಡವು.

ಗ್ಯಾನಿ ಜೈಲ್‌ಸಿಂಗ್

1960 ಮತ್ತು 1970ರ ವೇಳೆಗೆ ಒಳಮೀಸಲಾತಿ ಚರ್ಚೆ ಎದ್ದಿದ್ದೇ ಉತ್ತರ ಭಾರತದಲ್ಲಿ. ಪಂಜಾಬ್‌ನಲ್ಲಿ ರಾಜಕೀಯ ಕಾರಣಕ್ಕಾಗಿ 1975ರಲ್ಲಿ ’ಆದಿಧರ್ಮಿ ರವಿದಾಸಿ ಸಮೂಹ ಮತ್ತು ಮುಜಾಬಿ ಬಾಲ್ಮಿಕಿ’ ಎಂದು ದಲಿತರನ್ನು ಎರಡು ವಿಭಾಗವಾಗಿ ಮಾಡುವ ನಿರ್ಧಾರವನ್ನು ಅಂದಿನ ಮುಖ್ಯಮಂತ್ರಿ ಗ್ಯಾನಿ ಜೈಲ್‌ಸಿಂಗ್ ಕೈಗೊಂಡರು. ಪಂಜಾಬ್‌ನಿಂದ ಹರ್ಯಾಣವನ್ನು ವಿಭಜಿಸಿದ ನಂತರವೂ ಈ ವರ್ಗೀಕರಣ ಮುಂದುವರಿಯಿತು. ಬ್ಲಾಕ್ ಎ ನಲ್ಲಿ ಬಾಲ್ಮಿಕಿ, ಧನಕ್, ನಾಟ್‌ಗಳನ್ನು ಸೇರಿಸಿದರೆ, ಬ್ಲಾಕ್ ಬಿ ನಲ್ಲಿ ರಫಗಾರರು, ರಂದಾಸಿಗರು, ರವಿದಾಸಿಗಳನ್ನು ಸೇರಿಸಲಾಯಿತು. ಉತ್ತರ ಪ್ರದೇಶದಲ್ಲಿ 2001ರಲ್ಲಿ ಅಂದಿನ ಮುಖ್ಯಮಂತ್ರಿ ರಾಜನಾಥ್ ಸಿಂಗ್ ಅವರು ಮೀಸಲಾತಿ ವರ್ಗೀಕರಣಕ್ಕೆ ಹುಕ್ಕುಂ ಸಿಂಗ್ ಸಮಿತಿಯನ್ನು ನೇಮಿಸಿದ್ದರು. ಶೆಡ್ಯೂಲ್ ಎನಲ್ಲಿ ಚಮ್ಮಾರ, ಚಾಟ್ವಾ, ದುಸಿಯಾಗಳನ್ನು, ಇನ್ನುಳಿದ 65 ಜಾತಿಗಳನ್ನು ಬಿ ಶೆಡ್ಯೂಲ್‌ಗೆ ಸೇರಿಸಿತ್ತು ಸಮಿತಿ. ಒಳಮೀಸಲಾತಿ ಚಿಂತನೆ ಕೇವಲ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಾತ್ರ ಸೀಮಿತವಾಗಿರಲಿಲ್ಲ ಎಂಬುದನ್ನು ಇವೆಲ್ಲವೂ ತೋರಿಸುತ್ತವೆ. ಆದರೆ ಅವಿಭಜಿತ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ನಡೆದ ಒಳಮೀಸಲಾತಿ ಮಾತ್ರ ತೀವ್ರತರನಾಗಿ ಕಾಣುತ್ತವೆ. ರಾಜಕಾರಣವನ್ನು ತಲೆಕೆಳಗು ಮಾಡುವಷ್ಟು ಬಲ ಇಲ್ಲಿನ ಒಳಮೀಸಲಾತಿ ಹೋರಾಟಕ್ಕೆ ಇತ್ತೆಂಬುದೇ ಇಷ್ಟು ಕಾಲ ಚಳವಳಿ ಮುಂದುವರಿಯಲು ಕಾರಣವೂ ಆಯಿತು.

ಆಂಧ್ರಪ್ರದೇಶದಲ್ಲಿ ಒಳಮೀಸಲಾತಿ

ಒಳಮೀಸಲಾತಿಯು ತೀವ್ರ ಸ್ವರೂಪವನ್ನು ಪಡೆದದ್ದು ಅವಿಭಜಿತ ಆಂಧ್ರದಲ್ಲಿ ಎಂಬುದರಲ್ಲಿ ಎರಡು ಮಾತಿಲ್ಲ. ಮಾಲಾ ಸಮುದಾಯದವು ಪ್ರಾತಿನಿಧ್ಯದಲ್ಲಿ ಹಿಡಿತ ಸಾಧಿಸಿದೆ ಮತ್ತು ಮಾದಿಗ ಸಮುದಾಯವು ಹಿಂದುಳಿದಿದೆ ಎಂಬ ಕೂಗು ದಟ್ಟವಾಯಿತು. ಅದರ ಭಾಗವಾಗಿ ಹುಟ್ಟಿಕೊಂಡಿದ್ದೇ ಮಾದಿಗ ಮೀಸಲಾತಿ ಪೋರಾಟ ಸಮಿತಿ (ಎಂಆರ್‌ಪಿಎಸ್). 1994ರ ಜುಲೈ 27ರಂದು ಪ್ರಕಾಶಂ ಜಿಲ್ಲೆಯ ಇಡುಮುಡು ಗ್ರಾಮದಲ್ಲಿ ಸ್ಥಾಪಿತವಾದ ಎಂಆರ್‌ಪಿಎಸ್ ಮುಂದಿನ ದಿನಗಳಲ್ಲಿ ಆಂಧ್ರದಾದ್ಯಂತ ವ್ಯಾಪಿಸಿತು. ಅದರಲ್ಲೂ ರಾಯಲು‘ಸೀಮೆಯಲ್ಲಿನ ಮಾದಿಗ ಸಮುದಾಯವನ್ನು ಪ್ರಭಾವಿಸಿದ್ದರಿಂದ, ಕರ್ನಾಟಕಕ್ಕೂ ಒಳಮೀಸಲಾತಿಯ ಹೋರಾಟ ಪಾದಾರ್ಪಣೆ ಮಾಡಿತು. ಆಂಧ್ರದಲ್ಲಿನ ಎಂಆರ್‌ಪಿಎಸ್ ಹೋರಾಟವು ’ಮಾದಿಗ ದಂಡೋರ’ ಚಳವಳಿಯೆಂದೇ ಜನಪ್ರಿಯತೆ ಗಳಿಸಿತು. ಊರುಗಳಲ್ಲಿ ಘೋಷಣೆಗಳನ್ನು ಕೂಗಲು ಬಳಸುತ್ತಿದ್ದ ’ತಮಟೆ’ಯೇ ಈ ’ದಂಡೋರ’ದ ಅನ್ವರ್ಥ. ಮಾದಿಗರ ಕೂಗು (ದಂಡೋರ) ಹನಿಹನಿ ಕೂಡಿ ಹಳ್ಳವಾದಂತೆ, ಝರಿಯಾಗಿ, ತೊರೆಯಾಗಿ, ನದಿಯಾಗಿ ಸಾಗರವಾಯಿತು. ಹೆಸರುಗಳ ಮುಂದೆ ಮಾದಿಗ ಎಂಬ ಉಪನಾಮಗಳನ್ನು ಸೇರಿಸಿಕೊಂಡು ಸ್ವಾಭಿಮಾನ ಮೆರೆಯುವುದು ಆರಂಭವಾಯಿತು. ಕೃಷ್ಣ ಮಾದಿಗ, ಕೃಪಾಕರ ಮಾದಿಗ- ಹೀಗೆ ಹೆಸರುಗಳು ಚಾಲ್ತಿಗೆ ಬಂದವು. ಹೋರಾಟ ಬಿರುಸಾದ್ದರಿಂದ ಆಂಧ್ರ ಸರ್ಕಾರವು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಾಮಚಂದ್ರರಾಜು ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 10, 1996ರಲ್ಲಿ ಸಮಿತಿಯನ್ನು ನೇಮಿಸಿತು. ಮಾದಿಗ ಮೀಸಲಾತಿ ಪೋರಾಟ ಸಮಿತಿಯ ಬೇಡಿಕೆಯನ್ನು ಪರಿಶೀಲಿಸುವುದು ಸಮಿತಿಯ ಉದ್ದೇಶವಾಗಿತ್ತು. ಎಲ್ಲ ಸಂಘ- ಸಂಸ್ಥೆಗಳ, ಹೋರಾಟಗಾರರ ಮನವಿಗಳನ್ನು ಅವಲೋಕಿಸಿ, ಸರ್ಕಾರಿ ದಾಖಲೆಗಳನ್ನು ಪರಿಶೀಲಿಸಿದ ಸಮಿತಿಯು 59 ಪರಿಶಿಷ್ಟ ಜಾತಿಗಳನ್ನು ಎ,ಬಿ,ಸಿ,ಡಿ ಎಂದು ವರ್ಗೀಕರಿಸಿ ಶಿಫಾರಸ್ಸು ಮಾಡಿತು.

ಜಸ್ಟಿಸ್ ರಾಮಚಂದ್ರರಾಜು ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ 1014 ಕಿಲೋಮೀಟರ್ ದೂರದಷ್ಟು ಪಾದಯಾತ್ರೆ ಕೈಗೊಂಡಿದ್ದ ಆಂಧ್ರದ ಮಾದಿಗರು, 53 ದಿನ ಹೋರಾಟ ಮಾಡಿ, ರಾಜಧಾನಿ ಹೈದ್ರಾಬಾದ್ ತಲುಪಿದ್ದರು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನದಂದು, ಅಂದರೆ 1997ರ ಏಪ್ರಿಲ್ 14ರಂದು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಚಿತ್ತೂರು ಜಿಲ್ಲೆಯ ನರವಾರಿಪಲ್ಲಿ ಗ್ರಾಮದಿಂದ ಆರಂಭಿಸಿದ್ದ ಈ ’ಮಹಾಪಾದಯಾತ್ರೆ ಒಳಮೀಸಲಾತಿ ಹೋರಾಟದಲ್ಲಿ ಒಂದು ಅಚ್ಚಳಿಯದ ಮೈಲುಗಲ್ಲು. ಒತ್ತಡಕ್ಕೆ ಮಣಿದ ಸರ್ಕಾರ ಕ್ಯಾಬಿನೆಟ್ ಉಪಸಮಿತಿಯನ್ನು ಮಾಡಿ, ರಾಮಚಂದ್ರರಾಜು ಅವರ ಶಿಫಾರಸ್ಸುಗಳನ್ನು ಯಥಾವತ್ತು ಜಾರಿಗೆ ತರಲು ನಿರ್ಧರಿಸಿತು. ’ಮಾಲಾ ಮಹಾನಾಡು’ ಸಂಘಟನೆ ಹೆಸರಿನಲ್ಲಿ ಸಂಘಟಿತರಾದ ಮಾಲಾಗಳು ಸರ್ಕಾರಿ ಆದೇಶವನ್ನು ಪ್ರಶ್ನಿಸಿದರು. ಪರಿಶಿಷ್ಟ ಜಾತಿಗಳ ಆಯೋಗವನ್ನಾಗಲೀ, ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆಯನ್ನಾಗಿ ಮಾಡದೆ ಕೇವಲ 1981ರ ಜನಗಣತಿ ಆಧರಿಸಿ ವರ್ಗೀಕರಣ ಮಾಡಿರುವುದು ನ್ಯಾಯೋಚಿತವಲ್ಲ ಎಂಬುದು ಅವರ ತಕರಾರಾಗಿತ್ತು. 1997ರ ಜುಲೈ 21ರಂದು ಹೈಕೋರ್ಟ್‌ನ ಏಕಸದಸ್ಯ ಪೀಠ ತಾತ್ಕಾಲಿಕವಾಗಿ ಸರ್ಕಾರಿ ಆದೇಶವನ್ನು ಅಮಾನತ್ತಿನಲ್ಲಿಟ್ಟಿತು. ಸರ್ಕಾರ ಆದೇಶವನ್ನು ಹಿಂಪಡೆಯಬೇಕೆಂದು ಮಾಲಾ ಸಮುದಾಯದವರು ಆಗ್ರಹಿಸಿದರು. ಸರ್ಕಾರ ಅದಕ್ಕೆ ಒಪ್ಪದಿದ್ದಾಗ 1988 ಆಗಸ್ಟ್ 11ರಂದು ರಾಜ್ಯ ಸಚಿವಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಲಾಯಿತು. ಈ ರ್‍ಯಾಲಿಯ ವೇಳೆ ಓರ್ವ ಬಾಲಕ ಅಸುನೀಗಿದ. ಹೀಗೆ ಆರಂಭದಿಂದಲೇ ಆಂಧ್ರದ ಹೋರಾಟ ಹಿಂಸಾಚಾರ ಮತ್ತು ಸಮುದಾಯಗಳ ನಡುವೆ ಅಪಕಲ್ಪನೆಗಳನ್ನು ಬಿತ್ತುತ್ತಾಹೋಯಿತು. ಮಾಲಾ ಮಹಾನಾಡಿನ ಇ.ವಿ.ಚಿನ್ನಯ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಮೂಲಕ ಹೋರಾಟವು ಮತ್ತೊಂದು ದಿಕ್ಕಿಗೆ ಹೊರಳಿತು (ಕಾನೂನು ಹೋರಾಟದ ಏಳುಬೀಳುಗಳನ್ನು ಕೊನೆಯಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ).

ಆಂಧ್ರದ ಹೋರಾಟ ಮತ್ತು ಆನಂತರ ನಡೆದ ಕಾನೂನು ಸಮರ ಈ ಎಲ್ಲವೂ ಒಟ್ಟಾರೆ ಒಳಮೀಸಲಾತಿ ಚರಿತ್ರೆಯ ತ್ರಾಸದಾಯಕ ಪಯಣವೇ ಸರಿ. ಚಳವಳಿಯಲ್ಲಿ ಬಳಸಿದ ಭಾಷೆ ಮತ್ತು ಅಸೂಕ್ಷ್ಮ ನಡೆಗಳಿಂದಾಗಿ ಮಾಲಾ ಮತ್ತು ಮಾದಿಗರ ನಡುವೆ ವಿಶ್ವಾಸಗಳು ಕಡಿಮೆಯಾಗುತ್ತಾ ಹೋದದ್ದೂ ಚಾರಿತ್ರಿಕವಾಗಿ ಆದ ಪ್ರಮಾದವೂ ಹೌದು. ಆದರೆ ಕರ್ನಾಟಕ ಮಟ್ಟಿಗೆ ಚಳವಳಿಯು ಇಂತಹ ಸಮುದಾಯ ವಿಭಜನೆ ಪ್ರವೃತ್ತಿಗೆ ಹೊರಳದೆ, ಎಂತಹ ಬಿಕ್ಕಟ್ಟಿನ ನಡುವೆಯೂ ಮಾದಿಗ ಮತ್ತು ಹೊಲೆಯ ಸಮುದಾಯಗಳು ಮಾತುಕತೆಯ ಮೂಲಕ, ನಾವೆಲ್ಲ ಅಸ್ಪೃಶ್ಯರೆಂಬ ವಿಶಾಲ ತಳಹದಿಯ ಮೂಲಕವೇ ಸಮಸ್ಯೆಯನ್ನು ಬಗೆಹರಿಸಿಕೊಂಡು ಮುಂದಿನ ಸಾಂವಿಧಾನಿಕ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಮುಂದುವರಿದದ್ದು ಈ ನಾಡಿನ ಹೆಗ್ಗಳಿಕೆ. ಹಾಗೆಂದು ಕರ್ನಾಟಕದಲ್ಲಿ ಒಳಮೀಸಲಾತಿ ವಿಚಾರದಲ್ಲಿ ಸಮುದಾಯಗಳೆಲ್ಲವೂ ಒಮ್ಮತದಿಂದಲೇ ಇದ್ದವು ಎಂದು ಹೇಳಿಬಿಡುವುದು ಆತ್ಮವಂಚನೆಯಾಗುತ್ತದೆ. ಆದರೆ ಆಂಧ್ರದಲ್ಲಿ ಕಾಣುವಂತಹ ವಿಭಜನೆ ಇಲ್ಲಿ ಕಾಣದೆ ಇರುವುದಕ್ಕೆ ಕಾರಣ- ದಲಿತ ಚಳವಳಿ ಮತ್ತು ಅದರ ಧಾರೆಯಾದ ಒಳಮೀಸಲಾತಿಯು ಒಂದು ಮಟ್ಟಿಗಿನ ಕರುಳ ಸಂಬಂಧವನ್ನು ಗಟ್ಟಿಯಾಗಿ ಬೆಸೆದುಕೊಂಡು ನಡೆದವು. ಆದರೂ ಕರ್ನಾಟಕದಲ್ಲಿ ದಲಿತ ಚಳವಳಿಯು ಒಳಮೀಸಲಾತಿ ವಿಚಾರವನ್ನು ಆರಂಭದಲ್ಲೇ ಸರಿಯಾಗಿ ನೋಡದೆ ಇದ್ದದ್ದರಿಂದ ಇಲ್ಲಿಯೂ ದಲಿತರಲ್ಲಿ ಭಿನ್ನಾಭಿಪ್ರಾಯಗಳು ಮೂಡಲು ಕಾರಣವಾಯಿತು. ದಸಂಸ ಅದನ್ನು ಕೊನೆಯವರೆಗೂ ಸಮರ್ಪಕವಾಗಿ ನಿರ್ವಹಿಸಿದ್ದರೆ ಇಲ್ಲಿ ಆರ್‌ಎಸ್‌ಎಸ್ ಮಧ್ಯಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬ ಅಭಿಪ್ರಾಯಗಳೂ ಹೋರಾಟದ ವಲಯದಲ್ಲಿ ಇವೆ.

ಕರ್ನಾಟಕದಲ್ಲಿ ಒಳಮೀಸಲಾತಿ ಹೋರಾಟ

ನೊಂದ ಸಮುದಾಯಗಳು ಕೇಳಿದ್ದನ್ನು ಸರ್ಕಾರಗಳು ಸುಖಾಸುಮ್ಮನೆ ಕೊಟ್ಟುಬಿಡುವುದಿಲ್ಲ. ನಾವು ಏನನ್ನು ಪಡೆದಿದ್ದೇವೆಯೋ ಅದಕ್ಕೊಂದು ಇತಿಹಾಸವಿದೆ. ಅದಕ್ಕೊಂದು ಸುದೀರ್ಘ ಸಂವಾದದ ಪರಂಪರೆ ಇದೆ. ಸಮುದಾಯಗಳಲ್ಲಿ ಅಪಕಲ್ಪನೆಗಳು ಮೂಡುವ ಹೊತ್ತಿನಲ್ಲಿ ಬಗೆಹರಿಸಿಕೊಂಡು ನಡೆಯುವ ಎಚ್ಚರಿಕೆಯ ಪ್ರಜ್ಞೆಯೂ ಇದೆ.

ಆಂಧ್ರದಲ್ಲಿ ಆಗುತ್ತಿದ್ದ ಬೆಳವಣಿಗೆಗಳನ್ನು ಕರ್ನಾಟಕ ದಲಿತ ಚಳವಳಿಯ ಮುಂದಾಳುಗಳು ಗಮನಿಸದೇ ಇರಲಿಲ್ಲ. ಕರ್ನಾಟಕ ದಲಿತ ಚಳವಳಿಯು ಎಡ (ಮಾದಿಗ) ಮತ್ತು ಬಲ (ಹೊಲೆಯ) ಸಮುದಾಯಗಳು ಸೇರಿ ಕಟ್ಟಿದ ಅಂತಃಕರಣದ ಆಂದೋಲನವಾಗಿತ್ತು. ಇದರೊಟ್ಟಿಗೆ ಎಲ್ಲ ಪ್ರಗತಿಪರ ಧಾರೆಗಳೂ ಇದ್ದವು. ಬ್ರಾಹ್ಮಣ್ಯ ವಿರೋಧಿ ಚಿಂತಕ ವಲಯವಿತ್ತು. ಯಾವುದೇ ಸಮುದಾಯದ ನೊಂದವರು ನಮ್ಮವರೇ ಎಂಬ ತಾಯ್ತನವಿತ್ತು. ಇಂತಹ ವಿಶಾಲ ತಳಹದಿಯ ದಲಿತ ಚಳವಳಿಯೊಳಗೆ ಒಳಮೀಸಲಾತಿ ವಿಚಾರ ಕಾಲಿಟ್ಟಾಗ ಅದು ದಲಿತ ಎಂಬ ಮಹಾಕಲ್ಪನೆಯನ್ನು ಒಡೆದು ಬಿಡುತ್ತದೆಯೇ, ಅಸ್ಪೃಶ್ಯರನ್ನು ವಿಭಾಗಿಸಿ ಬಿಡುತ್ತದೆಯೇ ಎಂಬ ಆತಂಕವಂತೂ ಎಡ ಮತ್ತು ಬಲ ಸಮುದಾಯದ ಮುಖಂಡರಲ್ಲಿ ಇತ್ತು. ಇದನ್ನು ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳುವ ಪ್ರಯತ್ನಗಳು ಆರಂಭದಲ್ಲೇ ನಡೆದವು. 1992ರಲ್ಲೇ ಬೆಂಗಳೂರಿನಲ್ಲಿ ಒಳಮೀಸಲಾತಿ ಸಂಬಂಧ ಬಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ ನಡೆದಿತ್ತು. ಆ ಮೂಲಕ ಮೀಸಲಾತಿ ಹಂಚಿಕೆಯಲ್ಲಿ ಸಮುದಾಯಗಳು ಒಮ್ಮತಕ್ಕೆ ಬರುವ ಪ್ರಯತ್ನ ಮಾಡಿದ್ದಂತೂ ಸುಳ್ಳಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ಕರ್ನಾಟಕ ಒಳಮೀಸಲಾತಿ ಹೋರಾಟಗಾರರು. ಆದರೆ ಬೃಹತ್ ಚಳವಳಿಯ ಒಳಗೆ ಹುಟ್ಟಿಕೊಂಡ ಕವಲುಗಳು ಒಂದು ರೀತಿಯಲ್ಲಿ ಹಳೆಯ ಆಲದಮರದ ಬಿಳಲುಗಳೇ ಮೂಲ ಬೇರನ್ನು ಮರೆಸುವಂತೆ ಕಾಣಲಾರಂಭಿಸಿದವು. ಮೂಲಬೇರನ್ನು ಬಿಡಬಾರದು, ಬಿಳಲಿಗೆ ಆ ತಾಯಿಬೇರೆ ಮೂಲ ಎಂದು ನೆನಪಿಸುವ ಪ್ರಯತ್ನಗಳು ನಿರಂತರ ನಡೆದು ಅಂತಿಮವಾಗಿ ಕರುಳುಗಳು ತಮ್ಮ ಸಂಬಂಧಗಳನ್ನು ಪರಾಮರ್ಶೆ ಮಾಡಿಕೊಳ್ಳುವ ಕಾಲ ಬಂದಿರುವುದು ಮತ್ತೊಂದು ಪರ್ವ.

ಬಿ. ಕೃಷ್ಣಪ್ಪ

ಕಳೆದ ಐವತ್ತು ವರ್ಷಗಳ ಕರ್ನಾಟಕ ದಲಿತ ಚಳವಳಿಯ ಚರಿತ್ರೆಯಲ್ಲಿ ಒಳಮೀಸಲಾತಿ ಹೋರಾಟಗಾಥೆಗೆ ಅದರದ್ದೇ ಆದ ಮಹತ್ವವಿದೆ. 70ರ ದಶಕದಲ್ಲಿ ಹುಟ್ಟಿಬಂದ ದಲಿತ ಚಳವಳಿಯು ಎಲ್ಲ ತಳಸಮುದಾಯಗಳ ನೋವಿಗೆ ಸ್ಪಂದಿಸಿತ್ತು. ಭೂಮಿಯ ಹಕ್ಕಿಗಾಗಿ, ಅಸ್ಪೃಶ್ಯತೆಯ ನಿವಾರಣೆಗಾಗಿ, ಸ್ವಾಭಿಮಾನಕ್ಕಾಗಿ ಹಾಗೂ ಸಂವಿಧಾನದ ಆಶಯಗಳ ಉಳಿವಿಗಾಗಿ ದಲಿತ ಚಳವಳಿ ಹೋರಾಟ ನಡೆಸಲಾಯಿತು. ರಾಜ್ಯದ ಪ್ರಧಾನ ದಲಿತ ಸಮುದಾಯಗಳಾದ ಹೊಲೆಯ ಮತ್ತು ಮಾದಿಗ ಸಂಬಂಧಿತ ಜಾತಿಗಳಷ್ಟೇ ಅಲ್ಲದೆ ಎಲ್ಲ ಶೋಷಿತ ಸಮುದಾಯಗಳ ವೇದಿಕೆಯಾಗಿ ರೂಪುಗೊಂಡ ದಲಿತ ಸಂಘರ್ಷ ಸಮಿತಿಯಲ್ಲಿ ಕಾಲಕ್ರಮೇಣ ಭಿನ್ನಾಭಿಪ್ರಾಯಗಳು ಮೊಳೆತವು. ಇಂತಹ ಸನ್ನಿವೇಶದಲ್ಲಿ ಮಾದಿಗ ಸಮುದಾಯವು ತನಗೆ ಸರಿಯಾದ ಪ್ರಾತಿನಿಧ್ಯ ದೊರಕುತ್ತಿಲ್ಲ ಎಂಬ ಕೂಗು ಆರಂಭಿಸಿತು. ಆಂಧ್ರಪ್ರದೇಶದಲ್ಲಿ ಎದ್ದಿದ್ದ ಪರಿಶಿಷ್ಟ ಮೀಸಲಾತಿ ವರ್ಗೀಕರಣದ ಕೂಗು ಕರ್ನಾಟಕಕ್ಕೂ ಕಾಲಿಟ್ಟು ಬಹುಮುಖ್ಯವಾಗಿ ರಾಯಚೂರು ಭಾಗಕ್ಕೆ ಈ ಹೋರಾಟದ ಕಾವು ವ್ಯಾಪಿಸುತ್ತಾ ಹೋಯಿತು. ಇನ್ನೊಂದೆಡೆ ದಲಿತ ಚಳವಳಿಯು ಒಳಮೀಸಲಾತಿ ವಿಚಾರದಲ್ಲಿ ಸ್ಪಷ್ಟ ನಿಲುವು ತಾಳದೆ, ಗೊಂದಲಗೊಂಡು ಮೌನಕ್ಕೆ ಸಂದಿತ್ತು. ಇಂತಹ ಸಂದರ್ಭದಲ್ಲಿ ಮಾದಿಗ ಸಮುದಾಯ ಸಂಬಂಧಿತ ಸಂಘಟನೆಗಳು ರೂಪುಗೊಂಡವು. ಅವು ಒಳಮೀಸಲಾತಿಗಾಗಿ ಮುನ್ನುಡಿ ಬರೆದವು. ಪ್ರಾತಿನಿಧ್ಯದ ವಿಚಾರದಲ್ಲಿ ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯವು ಚರ್ಚೆಯ ವಿಷಯವಾಗುತ್ತಾ ಹೋಯಿತು. ಈ ನಡುವೆ ಸರ್ಕಾರಗಳು ಬಂದವು, ಸರ್ಕಾರಗಳು ಹೋದವು, ಸಮುದಾಯಕ್ಕೆ ಸಿಗಬೇಕಾದ ನ್ಯಾಯ ಮುಂದೂಡುತ್ತಲೇ ಹೋಯಿತು. ಇರಲಿ. ಅಂತೂ ಸುಮಾರು ಮೂರು ದಶಕ ನಡೆದ ಈ ಚಳವಳಿಯಲ್ಲಿ ಅಂತಿಮವಾಗಿ ಒಂದು ಸ್ಪಷ್ಟ ರೂಪ ಸಿಕ್ಕಿದೆ. ಒಳಮೀಸಲಾತಿಯ ನೋವಿಗೆ ಒಂದು ಪರಿಹಾರ ದೊರೆತಿರುವ ಹೊತ್ತಿನಲ್ಲಿ ಕರ್ನಾಟಕದಲ್ಲಿ ನಡೆದ ಹೋರಾಟದ ದಾರಿಗಳನ್ನು ಮೆಲುಕು ಹಾಕಬೇಕಿದೆ.

ತ್ರಾಸದಾಯಕ ಕಾನೂನು ಹೋರಾಟ, ಅದರ ನೆಪದಲ್ಲಿ ಸರ್ಕಾರಗಳು ಆಡಿದ ನವರಂಗಿ ಆಟಗಳು, ಪರಿಶಿಷ್ಟರಲ್ಲಿನ ಸ್ಪೃಶ್ಯ ಜಾತಿಗಳಿಗೆ ಮನವರಿಕೆ ಮಾಡಲು ನಡೆದ ಪ್ರಯತ್ನ, ಮಾದಿಗ ಮತ್ತು ಹೊಲೆಯರ ನಡುವೆ ಬೆಳೆದಿದ್ದ ಅವಿಶ್ವಾಸವನ್ನು ಹೋಗಲಾಡಿಸಿ, ಮತ್ತೆ ಒಂದಾಗಿ ಇಟ್ಟ ಮಹತ್ವದ ನಡೆಗಳು- ಇವೆಲ್ಲವೂ ಕರ್ನಾಟಕದಲ್ಲಿ ನಡೆದ ಒಳಮೀಸಲಾತಿ ಹೋರಾಟದ ಅವಿಸ್ಮರಣೀಯ ಹೆಜ್ಜೆಗುರುತುಗಳು. ಈ ಕಲ್ಲುಮುಳ್ಳಿನ ಹಾದಿಯಲ್ಲಿ ಸವೆಸಿದ ಪಾದಗಳೆಷ್ಟು, ಹರಿದ ಕಣ್ಣೀರೆಷ್ಟು, ಹಸಿದ ಹೊಟ್ಟೆಗಳೆಷ್ಟು, ಪೆಟ್ಟು ತಿಂದ ಮೈಗಳೆಷ್ಟು? ಲೆಕ್ಕ ಇಟ್ಟವರ್‍ಯಾರು? ಕೋರ್ಟ್ ಒಪ್ಪಿಕೊಳ್ಳುವ ತನಕ, ಆ ನಂತರ ಜಸ್ಟಿಸ್ ನಾಗಮೋಹನ ದಾಸ್ ಆಯೋಗದ ವರದಿ ಬಂದು, ಸರ್ಕಾರ ಅದನ್ನೂ ಪರಿಷ್ಕರಣೆ ಮಾಡಿ ಜಾರಿಗೊಳಿಸುವ ತನಕ ನಡೆದ ಮೂವತ್ತು ವರ್ಷಗಳ ಈ ಸುದೀರ್ಘ ಹೋರಾಟದ ಏಳುಬೀಳುಗಳು ಮೈ ನಡುಗಿಸುತ್ತವೆ. ಇದು ಅಕ್ಷರಶಃ ಸಮುದಾಯದ ಗೆಲುವು, ಸ್ವಾಭಿಮಾನದ ಅಚ್ಚಳಿಯದ ಅಸ್ಮಿತೆ.

ಮಾದಿಗರ ಸ್ವಾಭಿಮಾನದ ಹೋರಾಟ

ಆಂಧ್ರದಲ್ಲಿ ಆರಂಭವಾದ ದಂಡೋರ, ಕರ್ನಾಟಕಕ್ಕೂ ಕಾಲಿಟ್ಟಿತು. ಮೊದಲೇ ಹೇಳಿದಂತೆ ಈ ಚರ್ಚೆ ಬಿರುಸು ಪಡೆದದ್ದು ರಾಯಚೂರಿನಲ್ಲಿ. ಮಾದಿಗ ಸಮುದಾಯ ಹೆಚ್ಚಿರುವ ಜಿಲ್ಲೆಗಳಲ್ಲಿ ಒಂದಾದ ರಾಯಚೂರು, ಸಹಜವಾಗಿಯೇ ಹೋರಾಟಕ್ಕೆ ಶಕ್ತಿ ತುಂಬಿತು. ಮಂದಕೃಷ್ಣ ಮಾದಿಗ ಅವರು ಮೊದಲಿನಿಂದಲೂ ರಾಜಕೀಯ ಪಕ್ಷಗಳ ಮರ್ಜಿಯಲ್ಲಿ ಇದ್ದಾರೆಂದು ಗುರುತಿಸಿದ ಕರ್ನಾಟಕದ ಮಾದಿಗ ಮೀಸಲಾತಿ ಹೋರಾಟಗಾರರು ಭಿನ್ನ ಹೆಜ್ಜೆಗಳನ್ನು ಇಟ್ಟಿದ್ದರು. 1997ರ ಸೆಪ್ಟೆಂಬರ್ 5ರಂದು ’ದಂಡೋರ’ ರಾಜಧಾನಿ ಬೆಂಗಳೂರಲ್ಲಿ ಉದ್ಘಾಟನೆಯಾಯಿತು. ಮಂದಕೃಷ್ಣರ ರಾಜಕೀಯ ನಿಲುವುಗಳು ಇಂದು ಹೇಗಿವೆಯೋ ಅಂದು ಕೂಡ ಹಾಗೇ ಇದ್ದವು ಎಂಬುದನ್ನು ಹೋರಾಟಗಾರರು ಮೆಲುಕು ಹಾಕುತ್ತಾರೆ. ಹೀಗಾಗಿ 1997ರ ಅದೇ ದಿನ ರಾಯಚೂರಿನಲ್ಲಿ ’ಮಾದಿಗರ ಸ್ವಾಭಿಮಾನದ ಹೋರಾಟ’ ಶುರುವಾಯಿತು. ಅದರ ಮುಂದುವರಿದ ಭಾಗವಾಗಿ 1998ರಲ್ಲಿ ಎರಡು ದಿನಗಳ ಕಾರ್ಯಾಗಾರ ರಾಯಚೂರಲ್ಲಿ ನಡೆಯಿತು. ಹುಬ್ಬಳ್ಳಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಮೂಲೆಮೂಲೆಗಳಿಂದ ಸಮುದಾಯದ ಜನ ಹರಿದಬಂದಿದ್ದರು. ಆಗ ಮಾದಿಗರನ್ನು ಸಂಘಟಿಸುತ್ತಿದ್ದವರು ಕಾಂಗ್ರೆಸ್ಸಿನ ಹಿರಿಯ ನಾಯಕ ಜಿ.ರಾಮಕೃಷ್ಣ. ಆದರೆ ಪಕ್ಷಕ್ಕಿಂತ ಸಮುದಾಯ ಮುಖ್ಯ ಎಂಬ ಖಚಿತತೆ ಅವರಿಗಿತ್ತು. ಅಂಬೇಡ್ಕರ್, ಕಾನ್ಶಿರಾಮ್ ಹಾದಿಯಲ್ಲಿ ಚಳವಳಿ ನಡೆಯಬೇಕು, ಸಾಂಸ್ಕೃತಿಕ ತಳಹದಿಯೇ ಪ್ರಧಾನವಾಗಿರಬೇಕು ಎಂಬ ಸ್ಪಷ್ಟತೆ ಹೋರಾಟಗಾರರಿಗಿತ್ತು. ಕಾರ್ಯಾಗಾರದ ಆ ರಾತ್ರಿ ಜಿ.ರಾಮಕೃಷ್ಣ ಅಕ್ಷರಶಃ ಕಣ್ಣೀರು ಹಾಕಿದ್ದರು. ಗದ್ಗದಿತರಾದ ಅವರು ಯುವ ಮಿತ್ರರ ಕೈ ಹಿಡಿದು ಗಳಗಳನೆ ಅಳುತ್ತಾ, “ಈವರೆಗೆ ಒಬ್ಬನೇ ಇದ್ದೀನಿ ಅನಿಸಿತ್ತು. ನೀವೆಲ್ಲ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದು ನನ್ನನ್ನು ಭಾವುಕನನ್ನಾಗಿಸಿದೆ” ಎಂದಿದ್ದರು. ದಂಡೋರ ಮತ್ತು ಸ್ವಾಭಿಮಾನಿ ಮಾದಿಗ ಹೋರಾಟ ಪ್ರತ್ಯೇಕವಾಗಬಾರದು, ಒಟ್ಟಿಗೆ ನಡೆಯಬೇಕೆಂಬ ಆಶಯಗಳನ್ನು ಹೋರಾಟಗಾರರು ಹೊಂದಿದ್ದು ಸುಳ್ಳಲ್ಲ. 1999ರಲ್ಲಿ ಸಮಿತಿಯೊಂದು ರಚನೆಯಾಯಿತು. ಜಿ.ರಾಮಕೃಷ್ಣ, ಎಚ್.ಆಂಜನೇಯ ಅದರ ಮುಂದಾಳತ್ವ ವಹಿಸಿದರು. ಕೆ.ಎಚ್.ಮುನಿಯಪ್ಪ ಅದರ ಭಾಗವಾಗಿದ್ದರು. ತಮ್ಮ ಜಾತಿಯ ರಾಜಕೀಯ ಮಿತ್ರರು ಅಗ್ರೆಸಿವ್ ಆಗದಿದ್ದಾಗಲೆಲ್ಲ ರಾಮಕೃಷ್ಣ ಅವರು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದರು. “ನೀವು ಜಾತಿ ಸಂಘಟನೆಗಳನ್ನು ಮಾಡುತ್ತಿದ್ದೀರಿ” ಎಂದು ರಾಮಕೃಷ್ಣ ಅವರಿಗೆ ಕಾಂಗ್ರೆಸ್ಸಿನಿಂದ ನೋಟಿಸ್‌ಗಳು ಬಂದಾಗ, ಚಳವಳಿಯನ್ನು ಹುಡುಗರಿಗೆ ವಹಿಸುವ ನಿರ್ಧಾರಕ್ಕೆ ಬಂದರು. ಸರ್ಕಾರಿ ಉದ್ಯೋಗಗಳಿಂದ ಬಂದಂತಹ ಹೋರಾಟಗಾರರೂ ಇದ್ದರು. ಅಂಥವರ ಕೈಗೆ ಸಂಘಟನೆಯನ್ನು ಒಪ್ಪಿಸಿದರು.

ಕಪ್ಪು ಬಾವುಟ ಪ್ರದರ್ಶನ

2002ರಲ್ಲಿ ’ಮಾದಿಗ ಮೀಸಲಾತಿ ಹೋರಾಟ ಸಮಿತಿ’ (ಎಂಆರ್‌ಎಚ್‌ಎಸ್) ಚಳವಳಿಯನ್ನು ತೀವ್ರಗೊಳಿಸಿತು. ಅದು 2002ರ ಆಗಸ್ಟ್ 15ರಂದು ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಂಡ ’ಕಪ್ಪು ಬಾವುಟ’ ಪ್ರದರ್ಶನವು ಚಳವಳಿಯ ಮಹತ್ವದ ಹೆಜ್ಜೆಗಳಲ್ಲಿ ಒಂದು. ಸ್ವಾತಂತ್ರ್ಯ ದಿನದಂದು ಅಪಾರ ಸಂಖ್ಯೆಯ ಕಪ್ಪು ಬಾವುಟಗಳು ಹಾರಾಡಿದ್ದು ನೋಡಿ ಅಂದಿನ ಕಾಂಗ್ರೆಸ್ ಸರ್ಕಾರ ಬೆಚ್ಚಿತು. “ನಿನ್ನ ಎದುರಾಳಿಯನ್ನು ಸೋಲಿಸಲಾಗದಿದ್ದರೂ ಅವನ ಎದೆಯಲ್ಲಿ ನಡುಕ ಹುಟ್ಟಿಸುವುದನ್ನು ಬಿಡಬೇಡ” ಎಂದಿದ್ದ ಕಾನ್ಶಿರಾಮ್ ಅವರ ಎಚ್ಚರಿಕೆ ನುಡಿಗೆ ಅನುಗುಣವಾಗಿ ರಾಜಕೀಯ ನಿರ್ಧಾರವನ್ನು ತೆಗೆದುಕೊಂಡಿತ್ತು ಸಮುದಾಯ.

ಉಪಚುನಾವಣೆಯಲ್ಲಿ ಸೋಲಿಸಿದ ಸಮುದಾಯ

2002ರಲ್ಲಿ ಎದುರಾದ ಹುಮನಾಬಾದ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುತ್ತೇವೆ ಎಂಬ ನಿರ್ಧಾರಕ್ಕೆ ಹೋರಾಟಗಾರರು ಬಂದಿದ್ದಕ್ಕೆ ಸರ್ಕಾರ ಬೆಚ್ಚಿತ್ತು. ಒಂದು ಸಣ್ಣ ರಾಜಕೀಯ ನಡೆ ಆಳುವ ಪಕ್ಷಕ್ಕೆ ನಡುಕವನ್ನು ಹುಟ್ಟಿಸಿತ್ತು. ರಾಜ್ಯದ ದೊಡ್ಡ ದಲಿತ ಸಮುದಾಯವನ್ನು ಎದುರು ಹಾಕಿಕೊಂಡರೆ ಪರಿಣಾಮ ಏನಾಗುತ್ತೆ ಎಂಬ ಆತಂಕ ಸರ್ಕಾರಕ್ಕಿತ್ತು. ಕಾಂಗ್ರೆಸ್ ವಿರುದ್ಧ ಅಭಿಯಾನ ನಡೆಯುತ್ತಿರುವುದನ್ನು ಗಮನಿಸಿದ ಎಚ್.ಡಿ.ದೇವೇಗೌಡರು, ಒಳಮೀಸಲಾತಿ ಹೋರಾಟಗಾರರ ಜೊತೆ ಮಾತನಾಡಲು ಮುಂದಾಗಿ, ಅಂದು ಸಿದ್ದರಾಮಯ್ಯನವರು ಹೋರಾಟಗಾರರಿಗೆ ಕರೆ ಮಾಡಿದ್ದನ್ನು ಚಳಿವಳಿಯ ಮುಂದಾಳುಗಳು ನೆನಪಿಸಿಕೊಳ್ಳುತ್ತಾರೆ. ಹುಮನಾಬಾದ್‌ನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿತ್ತು.

ಇದರ ಅನುಭವದ ಆಧಾರದಲ್ಲಿ ಮತ್ತೊಮ್ಮೆ ಸರ್ಕಾರವನ್ನು ನಡುಗಿಸಲು ಹೆಜ್ಜೆ ಇಟ್ಟಿದ್ದು ಹುನಗುಂದ ಉಪಚುನಾವಣೆಯಲ್ಲಿ. ಕಾಂಗ್ರೆಸ್ ಕ್ಯಾಂಡಿಡೇಟ್ ಸೋಲಿಸುತ್ತೇವೆ ಎಂಬ ಬಿರುಸಿನ ಪ್ರಚಾರಕ್ಕೆ ಮಾದಿಗ ಸಮುದಾಯ ಮುಂದಾಯಿತು. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರಲ್ಲಿ ನಡುಕ ಹುಟ್ಟಿತ್ತು. ರಾಮಕೃಷ್ಣ ಅವರಿಗೆ ಕರೆ ಬಂದಿತ್ತು. ಹುಡುಗರನ್ನೆಲ್ಲ ತೋಟದ ಮನೆಯೊಂದಕ್ಕೆ ಕರೆದೊಯ್ದು ಒಂದೇಸಮನೆ ಕಣ್ಣೀರು ಹಾಕಿದ್ದ ರಾಮಕೃಷ್ಣ, “ಸಿಎಂ ನಮ್ಮನ್ನು ಕರೆದಿದ್ದಾರೆ. ಆಲಮಟ್ಟಿ ಐ.ಬಿ.ಯಲ್ಲಿ ಮಾತುಕತೆ ನಡೆಯುತ್ತೆ” ಎಂದಿದ್ದರು.

ಜಿ.ರಾಮಕೃಷ್ಣ

ಆಗ ಮುಖ್ಯಮಂತ್ರಿ ಕೃಷ್ಣ, “ಮಾದಿಗರು ಇಷ್ಟು ಬಡವರಿದ್ದೀರಾ?” ಎಂಬ ಪ್ರಶ್ನೆಯನ್ನು ಕೇಳಿದ್ದರು. ಆಗ ಹೋರಾಟಗಾರರು ಕೊಟ್ಟ ಉತ್ತರಕ್ಕೆ ಮುಖ್ಯಮಂತ್ರಿ ತಬ್ಬಿಬ್ಬಾಗಿದ್ದರು. “ಸಾರ್, ಒಕ್ಕಲಿಗರು ಜಮೀನುದಾರರಿದ್ದೀರಿ. ಮಿಲ್ಲರ್ ಆಯೋಗ ಒಕ್ಕಲಿಗರಿಗೆ ಮೀಸಲಾತಿ ಕೊಡಲು ಮುಂದಾದಾಗ ಅದನ್ನು ವಿರೋಧಿಸಿ ಬ್ರಾಹ್ಮಣರು ಬೀದಿಗಿಳಿದಿದ್ದರು. ಆಗ ಒಕ್ಕಲಿಗರು ಬ್ರಾಹ್ಮಣರ ವಿರುದ್ಧ ಹೋರಾಟ ಮಾಡಿದ್ದರು. ಇದು ಇತಿಹಾಸ” ಎಂಬ ಮಾತು ಕೇಳಿ ಸಿಎಂ, “ಎಸ್. ಎಸ್ ಎಂದಿದ್ದರು. ಮುಂದುವರಿದು, “ದಯವಿಟ್ಟು ಹೋರಾಟವನ್ನು ನಿಲ್ಲಿಸಿ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಕರಿಸಿ. ಚುನಾವಣೆ ಮುಗಿದ ಮೇಲೆ ಸಮಿತಿ ರಚನೆ ಮಾಡುತ್ತೇವೆ” ಎಂಬ ಭರವಸೆ ನೀಡಿದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತು.

ಸಮಿತಿಗಳು ಮತ್ತು ಆಯೋಗಗಳು

ಚುನಾವಣೆಯಲ್ಲಿ ಗೆದ್ದ ಬಳಿಕ ತಕ್ಷಣ ಕ್ರಮ ತೆಗೆದುಕೊಳ್ಳದಿದ್ದಾಗ ಸಮುದಾಯ 2003ರಲ್ಲಿ ಸಿಎಂ ಮನೆ ಮುತ್ತಿಗೆ ಮಾಡಿತ್ತು. ಅದರ ಭಾಗವಾಗಿ ಎನ್.ವೈ.ಹನುಮಂತಪ್ಪ ಅವರ ಏಕಸದಸ್ಯ ಸಮಿತಿ ರಚನೆಯಾಯಿತು. ಆದರೆ ಇದು ಕಣ್ಣೊರೆಸುವ ತಂತ್ರ, ಹನುಮಂತಪ್ಪ ಮುಂದಿನ ಎಂಪಿ ಎಲೆಕ್ಷನ್ ಕ್ಯಾಂಡಿಡೇಟ್ ಎಂಬ ಆಕ್ರೋಶ ವ್ಯಕ್ತವಾಯಿತು. ಆಮೇಲೆ ಬಂದಿದ್ದು ಎಸ್.ಜಿ. ಬಾಲಕೃಷ್ಣ ಸಮಿತಿ. ಅದು ಸರಿಯಾಗದಿದ್ದಾಗ ಮಳೀಮಠರನ್ನು ನೇಮಕ ಮಾಡಲಾಯಿತು. ಆದರೆ ಅನಾರೋಗ್ಯ ಕಾರಣ ಮಳೀಮಠ ಅವರು ಹಿಂದೆ ಸರಿದುಬಿಟ್ಟರು. 2004ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣ ಅಧಿಕಾರ ಕಳೆದುಕೊಂಡಾಗ, “ಕೇವಲ 2% ವೋಟ್ ಚದುರಿದ್ದರಿಂದ ನಾವು ಸೋಲು ಕಂಡೆವು” ಎಂದು ಹಳಹಳಿಸಿದ್ದರು.

ಮುಂದೆ ಆಗಿದ್ದು ಜಸ್ಟಿಸ್ ಎ.ಜೆ.ಸದಾಶಿವ ಆಯೋಗ. ಆಗ ಧರಂಸಿಂಗ್ ಮುಖ್ಯಮಂತ್ರಿ. ಸದಾಶಿವ ಅವರ ಮನೆಗೆ ಹೋದ ಹೋರಾಟಗಾರರು, “ನೀವಷ್ಟೇ ನಿಷ್ಪಕ್ಷಪಾತವಾಗಿ ನ್ಯಾಯ ದೊರಕಿಸಿಕೊಡಲು ಸಾಧ್ಯ” ಎಂದು ಮನವೊಲಿಸಿ ಕರೆದುಕೊಂಡು ಬಂದರು.

ಸದಾಶಿವ ಆಯೋಗದ ನಂತರದ ಹೋರಾಟ

ಸದಾಶಿವ ಆಯೋಗದ ರಚನೆಯವರೆಗಿನ ಹೋರಾಟ ಒಂದು ಘಟ್ಟವಾದರೆ ಅದರ ನಂತರದ ಚಳವಳಿ ಮತ್ತೊಂದು ಘಟ್ಟ. 2005ರಲ್ಲಿ ರಚನೆಯಾದ ಆಯೋಗ 2 ವರ್ಷದ ಸಮೀಕ್ಷಾ ಕಾರ್ಯದ ಮಿತಿ ಹೊಂದಿತ್ತಾದರೂ, ಹಣಕಾಸು ಹಾಗೂ ಇನ್ನಿತರ ಸಮರ್ಪಕ ಸೌಲಭ್ಯ ದೊರೆಯದೆ 7 ವರ್ಷಗಳ ನಂತರ ವಿಳಂಬವಾಗಿ 2012ರ ಜೂನ್‌ನಲ್ಲಿ ತನ್ನ ಶಿಫಾರಸ್ಸಿನ ವರದಿ ನೀಡಿತು. ಆಗ ಸದಾನಂದಗೌಡರು ಸಿಎಂ. ವರದಿ ತೆರೆಯಲೇ ಇಲ್ಲ. ಅದರಲ್ಲಿನ ವರ್ಗೀಕರಣ ಸಾರಾಂಶ ರೂಪದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಮಾದಿಗ ಸಂಬಂಧಿತ ಜಾತಿಗಳಿಗೆ ಶೇ. 6, ಹೊಲೆಯ ಸಂಬಂಧಿತ ಜಾತಿಗಳಿಗೆ ಶೇ. 5, ಸ್ಪೃಶ್ಯರಾದ ಭೋವಿ, ಲಂಬಾಣಿ, ಕೊರಚ, ಕೊರಮರಿಗೆ ಶೇ.3, ಅಲೆಮಾರಿಗಳಿಗೆ ಶೇ. 1ರಷ್ಟು ಮೀಸಲಾತಿಯನ್ನು ಸದಾಶಿವ ಆಯೋಗ ಹಂಚಿಕೆ ಮಾಡಿತ್ತು. ವರದಿ ಜಾರಿಗೆ ಮತ್ತೊಂದು ಸುತ್ತಿನ ಹೋರಾಟಕ್ಕೆ ಮಾದಿಗ ಸಮುದಾಯ ಮುಂದಾಗಬೇಕಾಯಿತು. ಸರ್ಕಾರ ಜಪ್ಪೆನ್ನಲಿಲ್ಲ.

ಬೆಳಗಾವಿ ಚಲೋ

ಸದಾನಂದಗೌಡರ ನಂತರ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದರು. ಆಗ ನಡೆದ ಬೆಳಗಾವಿ ಚಲೋದ ದುರಂತವನ್ನು ಚಳವಳಿ ಮರೆಯುವುದಿಲ್ಲ. ಡಿಸೆಂಬರ್ 11 ರಂದು ಬೆಳಗಾವಿ ಅಧಿವೇಶನದ ದಿನ. ರಾಜ್ಯದ ಮೂಲೆಮೂಲೆಯಿಂದ ಹೆಂಗಸರು, ಮಕ್ಕಳೆಲ್ಲ ಬೆಳಗಾವಿಗೆ ಧಾವಿಸಿದ್ದರು. ಸರ್ಕಾರ ಅವರನ್ನು ತಡೆಯಿತು. ರೊಚ್ಚಿಗೆದ್ದ ಸಮುದಾಯ ಪೊಲೀಸರನ್ನು ಓಡಿಸಿಕೊಂಡು ಹೋಗಿತ್ತು. ಭೀಕರ ಲಾಠಿ ಚಾರ್ಜ್‌ನಲ್ಲಿ ನೂರಾರು ಜನ ಗಾಯಗೊಂಡರು. ಮುಖಂಡರು ಅರೆಸ್ಟ್ ಆದರು. ಕನಕೇಹಳ್ಳಿ ಲಕ್ಕಪ್ಪ ಎಂಬವರು ಗಂಭೀರವಾಗಿ

ಥಳಿತಕ್ಕೊಳಗಾದರು. ತಿಂಗಳುಗಟ್ಟಲೆ ಸಮುದಾಯದ ಹೋರಾಟಗಾರರೇ ಅವರ ಮನೆಗೆ ರೇಷನ್ ಸರಬರಾಜು ಮಾಡಿದ್ದನ್ನು ಮರೆಯಲಾಗದು. ಡಿಸೆಂಬರ್ 11 ರಂದು. ತಾರೀಖನ್ನು ಸಮುದಾಯ ’ಕರಾಳ ದಿನ’ ಎಂದು ಪರಿಗಣಿಸಲಿಲ್ಲ. ಸ್ವಾಭಿಮಾನದ ಕಿಚ್ಚನ್ನು ಹೆಚ್ಚಿಸಿದ ದಿನವಾಗಿ ಡಿಸೆಂಬರ್ 11 ದಾಖಲಾಯಿತು. ಇದನ್ನು ’ಬೆಳಗಾಂ ಕೋರೆಗಾಂವ್ ಎಂದು ಒಳಮೀಸಲಾತಿ ಚಳವಳಿಗಾರರು ಬಣ್ಣಿಸಿಕೊಂಡರು. ನ್ಯಾಯ ಕೇಳಿದ ಮಾದಿಗ ಸಮುದಾಯಕ್ಕೆ ’ಲಾಠಿ ಮತ್ತು ಬೂಟು’ ಏಟಿನ ಕ್ರೌರ್ಯ ತೋರಿಸಿತ್ತು ಬಿಜೆಪಿ ಸರ್ಕಾರ.

ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ…

ಬಿಜೆಪಿ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳು ಆಗಿ ಹೋದರು. ಒಳಮೀಸಲಾತಿ ವಿಚಾರ ಮುಖ್ಯವಾಗಲೇ ಇಲ್ಲ. ಯಾವ ಮುಖ್ಯಮಂತ್ರಿಯೂ ಸದಾಶಿವ ಆಯೋಗದ ಗಂಟು ಬಿಚ್ಚಲೇ ಇಲ್ಲ. ಸ್ವಜನ ಪಕ್ಷಪಾತ, ಭಾರೀ ಭ್ರಷ್ಟಾಚಾರ, ಅಧಿಕಾರದ ಕಚ್ಚಾಟದಿಂದ ನೆಲ ಕಚ್ಚಿದ ಬಿಜೆಪಿ ಸೋಲಿಗೆ ಮಾದಿಗ ಸಮುದಾಯದ ಆಕ್ರೋಶವೂ ಕಾರಣವಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೇರಿತು. ಸಾಮಾಜಿಕ ನ್ಯಾಯದ ಮಾತನಾಡುತ್ತಿದ್ದ ಸಿದ್ದರಾಮಯ್ಯನವರು ಮೊದಲ ಅವಧಿಯಲ್ಲಿ ಸಿಎಂ ಆಗಿದ್ದಾಗ ಸೂಕ್ತ ಕ್ರಮ ತೆಗೆದುಕೊಳ್ಳಲೇ ಇಲ್ಲ. 2017ರಲ್ಲಿ ಮತ್ತೊಮ್ಮೆ ಪಾದಯಾತ್ರೆಗೆ ಸಮುದಾಯ ಕರೆಕೊಟ್ಟಿತು. ಕೂಡಲಸಂಗಮದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಸುದೀರ್ಘ ಕಾಲ್ನಡಿಗೆ ಹಮ್ಮಿಕೊಳ್ಳಲಾಯಿತು. ನವೆಂಬರ್ 29ರಿಂದ ಆರಂಭವಾಗಿ ಡಿಸೆಂಬರ್ 11ಕ್ಕೆ ಬೆಂಗಳೂರು ತಲುಪಿತು. ಆಗಲೂ ಸರ್ಕಾರ ಕಿವಿಗೊಡಲಿಲ್ಲ. ಸಿದ್ದರಾಮಯ್ಯನವರಂತಹ ಸಿದ್ದರಾಮಯ್ಯನವರೇ ಒಳಮೀಸಲಾತಿ ವಿಚಾರವನ್ನು ಅಡ್ರೆಸ್ ಮಾಡಲಾಗಿರಲಿಲ್ಲ. ಅವರನ್ನು ಕಾಣದ ಕೈಗಳು ಕಟ್ಟಿ ಹಾಕಿದ್ದವು. ಇದರ ಸನ್ನಿವೇಶವನ್ನು ಪಡೆದುಕೊಳ್ಳಲು ಕೋಮುವಾದಿ ಶಕ್ತಿಗಳು ಎಂಟ್ರಿಯಾಗಿದ್ದು ಸುಳ್ಳಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

‘ಗೋಮಾಂಸ’ ತಂದ ನೆಪ: ಅಸ್ಸಾಂನಲ್ಲಿ ಐವರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕ್ರಮ; ಸುಳ್ಳು ಪ್ರಕರಣದಡಿ ಒಂಟಿ ತಾಯಿ ಮತ್ತು ಅಪ್ರಾಪ್ತ ಮಗನ ಬಂಧನ

ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಹೆಸರಿನಲ್ಲಿ ಶಾಲಾ ಆವರಣಗಳೂ ಸಹ ಕೋಮು ರಾಜಕಾರಣದ ಪ್ರಯೋಗಶಾಲೆಗಳಾಗುತ್ತಿರುವುದಕ್ಕೆ ಅಸ್ಸಾಂನಿಂದ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರಲ್ಲಿ ಮುಸ್ಲಿಂ...

ಪ್ರಧಾನಿ ನರೇಂದ್ರ ಮೋದಿಯ 12 ವರ್ಷದ ಸಾಧನೆ ಏನು? ಅವರು ಮುರಿದ ದಾಖಲೆಯಾದರೂ ಯಾವುದು?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ಸತತ 12ವರ್ಷಗಳು (4,399 ದಿನಗಳು) ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಬಿಜೆಪಿ...

ಉತ್ತರಾಖಂಡ: ಮೇಲ್ಜಾತಿ ಯುವತಿ ಜೊತೆ ಸ್ನೇಹ ಬೆಳೆಸಿದ 18 ವರ್ಷದ ದಲಿತ ಯುವಕನ ಹತ್ಯೆ, ಸ್ನೇಹಿತನ ಮೇಲೂ ಮಾರಣಾಂತಿಕ ಹಲ್ಲೆ 

ದೇಶದಲ್ಲಿ ಜಾತಿ ವ್ಯವಸ್ಥೆಯ ಕರಾಳ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಉತ್ತರಾಖಂಡದ ನ್ಯೂ ತೆಹ್ರಿ ಜಿಲ್ಲೆಯ ಪ್ರತಾಪ್ ನಗರ ಬ್ಲಾಕ್ ವ್ಯಾಪ್ತಿಯಲ್ಲಿ ಮೇಲ್ಜಾತಿಯ ಅಪ್ರಾಪ್ತ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ 18 ವರ್ಷದ ದಲಿತ ಹದಿಹರೆಯದ...

ಟಿಎಂಸಿ ಬಂಡಾಯ : 20 ಸಂಸದರು ಪಕ್ಷ ತೊರೆದರೂ ಅನರ್ಹತೆ ತಪ್ಪಿದ್ದಲ್ಲ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸುಮಾರು 20 ಲೋಕಸಭಾ ಸಂಸದರು ಪಕ್ಷದಿಂದ ಬೇರ್ಪಟ್ಟು ಪ್ರತ್ಯೇಕ ಗುಂಪು ರಚಿಸಲು ಸಜ್ಜಾಗಿದ್ದಾರೆ ಎಂಬ ವರದಿಗಳ ನಡುವೆ, ಕೇವಲ ಮೂರನೇ ಎರಡರಷ್ಟು ಸಂಸದರ ಬೆಂಬಲ ಹೊಂದಿರುವುದರಿಂದ ಮಾತ್ರ...

ಕಚ್ಚಿದ ಸೇಬನ್ನು ಅಭಿಮಾನಿಗಳತ್ತ ಎಸೆದ ಸಿಎಂ ಡಿ.ಕೆ. ಶಿವಕುಮಾರ್: ವಿಡಿಯೋ ವೈರಲ್

ರಾಜಕೀಯ ನಾಯಕರು ತಮಗೆ ಸಿಕ್ಕ ಹಾರ, ತುರಾಯಿ ಅಥವಾ ಹಣ್ಣುಗಳನ್ನು ಅಭಿಮಾನಿಗಳಿಗೆ ಹಂಚುವುದು ಹೊಸದೇನಲ್ಲ. ಆದರೆ, ತಾನು ಕಚ್ಚಿದ ಹಣ್ಣನ್ನು ಸಾರ್ವಜನಿಕವಾಗಿ ಜನರತ್ತ ಎಸೆಯುವುದು ಯಾವ ರೀತಿಯ ಸಂಸ್ಕೃತಿ ಎಂಬ ಪ್ರಶ್ನೆ ಮೂಡುತ್ತದೆ....

ವೈಜಾಗ್ ಸ್ಟೀಲ್ ಅಪಘಾತಕ್ಕೆ 8 ಮಂದಿ ಬಲಿ: ಸಿಬ್ಬಂದಿ ಕೊರತೆಯ ಬಗ್ಗೆ ಕಾರ್ಮಿಕ ಸಂಘಗಳ ಆರೋಪ: ಸಾವಿನ ಅಂಚಿನಲ್ಲೂ ಕುಟುಂಬಕ್ಕಾಗಿ ಮಿಡಿದ ಕಾರ್ಮಿಕ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಪ್ರಸಿದ್ಧ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಉಕ್ಕು ಸ್ಥಾವರದಲ್ಲಿ ಸೋಮವಾರ (ಜೂನ್ 8, 2026) ಸಂಜೆ ಭೀಕರ ಕೈಗಾರಿಕಾ ದುರಂತವೊಂದು ಸಂಭವಿಸಿದೆ. ಸ್ಥಾವರದ ಸ್ಟೀಲ್ ಮೆಲ್ಟ್ ಶಾಪ್-1 (SMS-1)...

ಅಂದು ಪಿಣರಾಯಿ ಮನೆ ಮೇಲೆ ದಾಳಿ; ಈಗ ವೀಣಾ ವಿಜಯನ್‌ಗೆ ಸಮನ್ಸ್‌: ಹಿರಿಯ ಕಮ್ಯುನಿಸ್ಟ್‌ ನಾಯಕನ ಕುಟುಂಬದ ಮೇಲೆ ಇಡಿ ಕಣ್ಣು

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನೆ ಮೇಲೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಕೊನೆಗೆ ಅಲ್ಲಿ ಏನೂ ಸಿಗದೆ ಬರಿಗೈನಲ್ಲಿ ಅಧಿಕಾರಿಗಳು...

ಮೋದಿ ಸರ್ಕಾರಕ್ಕೆ 12 ವರ್ಷ : 12 ರಿಂದ 4ಕ್ಕೆ ಇಳಿದ ಉಜ್ವಲ ಯೋಜನೆ ಸಿಲಿಂಡರ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ 12 ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿದೆ ಅಥವಾ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ 2026ರ ಜೂನ್ 9ಕ್ಕೆ ಎರಡು ವರ್ಷಗಳು ಪೂರ್ಣಗೊಂಡಿವೆ....

ಬಿರ್ಸಾ ಮುಂಡಾ 150ನೇ ಜಯಂತಿ ಹೆಸರಿನಲ್ಲಿ ಆದಿವಾಸಿ ಹಕ್ಕುಗಳ ಮೇಲೆ ಸಂಘ ಪರಿವಾರದ ಕಣ್ಣು?

ಮೇ 24 ರಂದು ನವದೆಹಲಿಯ ಕೆಂಪುಕೋಟೆಯಲ್ಲಿ (Red Fort) ಭಾರತದಾದ್ಯಂತದ ಲಕ್ಷಾಂತರ ಪರಿಶಿಷ್ಟ ಪಂಗಡದ (ST) ಸಮುದಾಯಗಳ ಜನರು ಒಟ್ಟಿಗೆ ಸೇರಿದ್ದರು. ‘ಜಂಜಾತಿ ಸುರಕ್ಷಾ ಮಂಚ್’ (ಬುಡಕಟ್ಟು ರಕ್ಷಣಾ ವೇದಿಕೆ) ಆಯೋಜಿಸಿದ್ದ ಈ...