ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬೆಳಗಾವಿಯ ವಿವಿಧ ಭಾಗಗಳಲ್ಲಿ ಸೋಮವಾರ (ಜೂ.15) ಜನಜಾಗೃತಿ ಜಾಥಾ ನಡೆಯಿತು.
ಬಾಗಲಕೋಟೆಯಿಂದ ಆಗಮಿಸಿದ ಜಾಥಾ ತಂಡವನ್ನು ಯರಗಟ್ಟಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಸ್ಥಳೀಯ ನಾಯಕರು ಹಾಗೂ ಸಾರ್ವಜನಿಕರು ಸ್ವಾಗತಿಸಿದರು. ಬಳಿಕ ಯರಗಟ್ಟಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಾಗೃತಿ ಭಾಷಣ ನಡೆಯಿತು.
ಜಾಥಾ ನಾಯಕ ಯೂಸುಫ್ ಕನ್ನಿ ಮಾತನಾಡಿ, ಎಸ್‌ಐಆರ್ ಯಾವುದೇ ಒಂದು ಕೋಮಿಗೆ ಸೀಮಿತವಲ್ಲ. ಈಗಾಗಲೇ ಎಸ್‌ಐಆರ್ ನಡೆದಿರುವ ರಾಜ್ಯಗಳಲ್ಲಿ ಬರೋಬ್ಬರಿ 6.5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಒಂದು ಕೋಟಿ ಚಿಲ್ಲರೆ ಮಾತ್ರ ಮುಸ್ಲಿಮರು, ಉಳಿದವರು ಹಿಂದೂ, ಕ್ರೈಸ್ತ ಸೇರಿದಂತೆ ಇತರ ಧರ್ಮೀಯರು, ಅದರಲ್ಲೂ ದಲಿತರು, ಆದಿವಾಸಿಗಳು, ಕೂಲಿ ಕಾರ್ಮಿಕರು ಎಂದರು.
ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಲ್ಲಿ ಈಗಾಗಲೇ ಎಸ್‌ಐಆರ್ ನಡೆಸಿರುವ ಅವಾಂತರಗಳನ್ನು ವಿವರಿಸಿದ ಯೂಸುಫ್ ಕನ್ನಿ, ಇದೇ ತಿಂಗಳ 30ರಿಂದ ಪ್ರಾರಂಭಗೊಳ್ಳುವ ಎಸ್‌ಐಆರ್ ಅನ್ನು ಸೂಕ್ತವಾಗಿ ಎದುರಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಸ್ಥಳೀಯ ನಾಯಕರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ ಕರೆ ನೀಡಿದರು.
ಸಾಮಾಜಿಕ ಹೋರಾಟಗಾರ್ತಿ ಇಸಾಬೆಲ್ಲ ಝೇವಿಯರ್ ಮಾತನಾಡಿ, ಎಸ್‌ಐಅರ್‌ನಲ್ಲಿ ಹೆಣ್ಣು ಮಕ್ಕಳನ್ಮು ಹೆಚ್ಚಾಗಿ ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಹೆಣ್ಣು ಮಕ್ಕಳಿಗೆ ಮದುವೆಗಿಂತ ಮೊದಲು ಒಂದು ಹೆಸರಿದ್ದರೆ, ಮದುವೆ ಬಳಿಕ ಇನ್ನೊಂದು ಹೆಸರಿಡಲಾಗುತ್ತದೆ. ಇಂತವರ ದಾಖಲೆಗಳಲ್ಲಿ ಒಂದು ಅಕ್ಷರ ತಪ್ಪು ಇರಬಾರದು ಎಂದರೆ ಹೇಗೆ ಎಂದು ಪ್ರಶ್ನಿಸಿದರು. ದಾಖಲೆ ಇಲ್ಲದವರನ್ನು ದೇಶದವರೇ ಅಲ್ಲಾ ಅಂತಿದ್ದಾರೆ. ಬಡ ಹೆಣ್ಣು ಮಕ್ಕಳು ಎಲ್ಲಿಂದ ದಾಖಲೆ ತರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಅವ್ಯವಸ್ಥೆ ವಿರುದ್ದ ಎಲ್ಲ ಜನ ಸಮುದಾಯ ಒಂದಾಗಿ ಧ್ವನಿ ಎತ್ತಬೇಕು. ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಮುಖಂಡ ಭಾಸ್ಕರ್ ಹಿರೇಮೈತ್ರಿ ಮಾತನಾಡಿ, ಎಸ್‌ಐಅರ್ ವೇಳೆ 12 ದಾಖಲೆಗಳನ್ನು ಕೇಳ್ತಿದಾರೆ. ಅಂತಹ ಯಾವುದೇ ದಾಖಲೆಗಳು ನಮ್ಮ ಜನರಲ್ಲಿ ಇಲ್ಲ. ಚುನಾವಣಾ ಆಯೋಗ ದಾಖಲೆ ಸಿದ್ದಪಡಿಸಲು ಅವಕಾಶವನ್ನೂ ಕೊಡ್ತಿಲ್ಲ ಎಂದರು.
ನಮ್ಮ ದೇಶದ ಸ್ವಾತಂತ್ರ್ಯ ಪಡೆಯುವ ಮುನ್ನ ಎಲ್ಲರಿಗೂ ಮತದಾನದ ಹಕ್ಕು ಇರಲ್ಲಿಲ್ಲ. ಕೆಲವರಿಗೆ ಮಾತ್ರ ಇತ್ತು. ಅಂಬೇಡ್ಕರ್ ಅವರ ಸಂವಿಧಾನ ಎಲ್ಲಾ ಜನರಿಗೆ ಮತದಾನದ ಹಕ್ಕು ಕೊಟ್ಟಿತು. ಅದನ್ನು ಎಸ್‌ಐಅರ್ ಮೂಲಕ ಕಿತ್ತುಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಿದರು.
ಎಸ್‌ಐಆರ್ ವಿಷಯದಲ್ಲಿ ಹಿಂದೂ, ಮುಸ್ಲಿಂ ಎನ್ನುವಂತಹ ಜಾತಿ, ಧರ್ಮಗಳ ಬೇಧವಿಲ್ಲ. ಇದು ಎಲ್ಲಿರಿಗೂ ಅಪಾಯಕಾರಿ. ತಳ ಮಟ್ಟದ ಜನರೇ ಇದರ ಮುಖ್ಯ ಗುರಿ ಎಂದರು.

ಯರಗಟ್ಟಿ ಬಳಿಕ ಬೆಳಗಾವಿ ನಗರದ ಅಂಬೇಡ್ಕರ್ ಪಾರ್ಕ್‌ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಜಾಥಾ ತಂಡ ಮತ್ತು ಸ್ಥಳೀಯ ನಾಯಕರು ಮಾಲಾರ್ಪಣೆ ಮಾಡಿದರು. ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.

ಬಳಿಕ ಅಂಬೇಡ್ಕರ್ ಪಾರ್ಕ್‌ನಿಂದ ರಾಣಿ ಚೆನ್ನಮ್ಮ ಸರ್ಕಲ್ ಮೂಲಕ ಕನ್ನಡ ಭವನಕ್ಕೆ ಕಾಲ್ನಡಿಗೆ ಜಾಥಾ ನಡೆಯಿತು. ಕನ್ನಡ ಭವನದಲ್ಲಿ ವಿವಿಧ ಧರ್ಮಗಳ ಮುಖಂಡರು, ಸಮುದಾಯ ನಾಯಕರ ನೇತೃತ್ವದಲ್ಲಿ ಜಾಗೃತಿ ಸಭೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಜಾಥಾ ತಂಡದ ಇಸಾಬೆಲ್ಲ ಝೆವಿಯರ್, ಯೂಸುಫ್ ಕನ್ನಿ, ಸರೋವರ್ ಬೆಂಕಿಕೆರೆ ಮತ್ತು ಆರಿಫುಲ್ಲಾ ಮಾತನಾಡಿದರು.

ಯೋಗಾನಂದ ಸ್ವಾಮೀಜಿ, ಸಾಜಿದ್ ಮೌಲಾನ, ಪಾಸ್ಟರ್ ಶಾಂತಪ್ಪ, ಸ್ಥಳೀಯ ಹೋರಾಟಗಾರರಾದ ಮಂದಾ, ಶಿವಲೀಲ, ಅಯ್ನ ಶೇಕ್, ಬಂಡಾಯ ಸಾಹಿತ್ಯದ ಡಾ. ಹಿಮ್ಮಡಿ, ಜನಶಕ್ತಿಯ ರವಿ, ಜಮಾಅತೆ ಇಸ್ಲಾಮಿ ಹಿಂದ್‌ನ ಮುಖಂಡ ಯಾಸಿನ್ ಮಕಾನದಾರ ಸೇರಿದಂತೆ ಹಲವರು ಹಾಜರಿದ್ದರು

ಸಂಜೆ ಜಾಥಾ ತಂಡ ಬಿಷಪ್ ಹೌಸ್‌ನಲ್ಲಿ ಬೆಳಗಾವಿ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮ ಗುರುಗಳಾದ ಫಾದರ್ ಡೆರೆಕ್ ಅವರನ್ನು ಭೇಟಿಯಾಗಿ ಎಸ್‌ಐಅರ್ ಕುರಿತು ಮಹತ್ವದ ಚರ್ಚೆ ನಡೆಸಿತು.
ನಂತರ ಸಾಯಿನಗರದ ನೇಕಾರ ಗಲ್ಲಿಯಲ್ಲಿ ಸ್ಥಳೀಯ ನೇಕಾರ ಸಮುದಾಯದ ಜನರಿಗೆ ಎಸ್‌ಐಆರ್ ಕುರಿತು ಜಾಗೃತಿ ಮೂಡಿಸಲಾಯಿತು.


