ರಾಜ್ಯಾದ್ಯಂತ ನಡೆಯುತ್ತಿರುವ ಎಸ್‌ಐಆರ್ (SIR) ವಿರೋಧಿ ಜನಜಾಗೃತಿ ಜಾಥಾದ ನಾಲ್ಕನೇ ದಿನದ ಪಯಣ ಇಂದು ತರೀಕೆರೆಗೆ ತಲುಪಿತು. ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಜಾಥಾವನ್ನು, ತರೀಕೆರೆಯ ಜಾಗೃತ ನಾಗರಿಕರು ಮತ್ತು ಹೋರಾಟಗಾರರು ಗಂಭೀರ ಚಿಂತನೆಯೊಂದಿಗೆ ಸ್ವಾಗತಿಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆ: ಪ್ರಜೆಯ ಜವಾಬ್ದಾರಿ
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಜಿ.ಎಚ್. ಶ್ರೀನಿವಾಸ್ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣಾ ಪ್ರಕ್ರಿಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ನಮ್ಮ ಹೆಸರು ಪಟ್ಟಿಯಲ್ಲಿದೆ ಎಂದು ನಿಷ್ಕಾಳಜಿ ವಹಿಸುವಂತಿಲ್ಲ. ಇದೇ ತಿಂಗಳ 30ರಿಂದ ನಡೆಯಲಿರುವ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಕ್ರಿಯವಾಗಿ ಭಾಗವಹಿಸಬೇಕು. ಬಿಎಲ್‌ಒ (BLO)ಗಳು ನೀಡುವ ನಮೂನೆಗಳನ್ನು ಪೂರ್ಣಗೊಳಿಸಿ ಸಲ್ಲಿಸುವುದು ಪ್ರತಿಯೊಬ್ಬ ಅರ್ಹ ಮತದಾರನ ಆದ್ಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು.

ಮುಂದುವರೆದು ಮಾತನಾಡುತ್ತಾ, ನಮ್ಮ ತಾಲೂಕಿನಾದ್ಯಂತ ಬಿಎಲ್‌ಎ (BLA)ಗಳಿಗೆ ಸೂಕ್ತ ತರಬೇತಿ ನೀಡಲಾಗಿದ್ದು, ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ನಡೆಯುತ್ತಿದೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋದರೆ ಅದು ಕೇವಲ ಮತದಾನದ ಹಕ್ಕಿನ ಕಸಿಯುವಿಕೆಯಲ್ಲ, ಬದಲಾಗಿ ಸರ್ಕಾರದ ವಿವಿಧ ಕಲ್ಯಾಣ ಸೌಲಭ್ಯಗಳಿಂದಲೂ ವಂಚಿತರಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಎಚ್ಚರದಿಂದಿದ್ದು, ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸಂವಿಧಾನದ ಆಶಯ ಮತ್ತು ಆತಂಕ:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಲಿತ ಮುಖಂಡ ತರೀಕೆರೆ ವೆಂಕಟೇಶ್ ಅವರು, ಸಂವಿಧಾನದ ಆಶಯಗಳನ್ನು ಸ್ಮರಿಸುತ್ತಾ ಆತಂಕ ವ್ಯಕ್ತಪಡಿಸಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಾರ್ವತ್ರಿಕ ಮತದಾನದ ಹಕ್ಕು ಭಾರತೀಯ ಪ್ರಜಾಪ್ರಭುತ್ವದ ಜೀವಾಳ. ಆದರೆ, ಇಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಪ್ರಭಾವದಿಂದ ಚುನಾವಣಾ ಆಯೋಗದ ನಿಷ್ಪಕ್ಷಪಾತ ಕಾರ್ಯನಿರ್ವಹಣೆಯ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಸಂಶಯಗಳು ವ್ಯಕ್ತವಾಗುತ್ತಿವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ‘ಪ್ರಜೆಗಳೇ ಪ್ರಭುಗಳು’ ಎಂಬ ತತ್ವವು ಗೌಣವಾಗುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಕಳವಳಕಾರಿ ಸಂಗತಿ ಎಂದು ಅವರು ವಿಶ್ಲೇಷಿಸಿದರು.
ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಹಾಲ ವಜ್ರಪ್ಪ ಮಾತನಾಡಿ SIR ವಿರೋಧಿ ಜಾಥಾದ ಸದುದೇಶವನ್ನು ನಾವೆಲ್ಲರು ಅರ್ಥ ಮಾಡಿಕೊಳ್ಳಬೆಕು, ಸರ್ಕಾರಗಳು ಪ್ರಜೆಗಳ ರಕ್ಷಣೆಗೆ ನಿಲ್ಲಬೇಕು ಆದರೆ ಅವುಗಳು ತಮ್ಮ ಜವಾಬ್ದಾರಿ ಮರೆತಾಗ ಹೀಗೆ ನಾಗರಿಕ ಸಮಾಜ ಜನರ ಬೆಂಬಲವಾಗಿ ನಿಲ್ಲಬೇಕಾಗುತ್ತದೆ. ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಲ್ಲಿ ಆಗಿರುವ ಅನಾಹುತಗಳು ಕರ್ನಾಟಕದಲ್ಲಿ ಆಗದಂತೆ ನಾವು ತಡೆಯೊಡ್ಡಬೇಕೆಂದು ಕರೆ ನೀಡಿದರು.

ಈ ಜಾಗೃತಿ ಸಭೆಯಲ್ಲಿ ಎಪಿಸಿಆರ್ (APCR) ಜಿಲ್ಲಾಧ್ಯಕ್ಷ ಸಮೀವುಲ್ಲಾ, ಡಿಎಸ್‌ಎಸ್ ರಾಜ್ಯ ಸಂಚಾಲಕ ಎನ್. ವೆಂಕಟೇಶ್, ಸ್ಥಳೀಯ ಮುಖಂಡರು ಮತ್ತು ಜನಪ್ರತಿನಿಧಿಗಳಾದ ವರ್ಮ ಪ್ರಕಾಶ್, ದಾದಾಫೀರ್, ಗಿರೀಶ್, ಆದಿಲ್ ಪಾಷಾ, ರೋಷನ್, ಟಿ.ಜಿ. ಮಂಜುನಾಥ, ಟಿ.ಡಿ. ಮಂಜುನಾಥ, ಟಿ.ಆರ್. ಶ್ರೀಧರ್ ಹಾಗೂ ರಾಜು ಉಪಸ್ಥಿತರಿದ್ದರು. ಆದಿಲ್ ಪಾಷಾ ಸ್ವಾಗತಿಸಿದರೆ, ಸಾಹಿತಿ ಮನಸುವಳ್ಳಿ ಮೋಹನ್ ಅವರು ವಂದನಾರ್ಪಣೆ ಸಲ್ಲಿಸಿದರು. ಜಾಥಾದ ನೇತೃತ್ವವನ್ನು ಸುರೇಶ್ ನಾಯ್ಕ್, ಮುನ್ನ ಕಡೂರು, ರಾಮು ಕೌಳಿ, ಸುಮಂತ್, ರಾಜೀತ್ ಮತ್ತು ಸಂದೀಪ್ ಅವರು ವಹಿಸಿದ್ದರು.


