ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತೆಲಂಗಾಣ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದ್ದ ‘ಫ್ಯಾಮಿಲಿ ರಿಜಿಸ್ಟರ್ ಸರ್ಟಿಫಿಕೇಟ್’ (FRC) ಅನ್ನು ಮತದಾರರ ದಾಖಲೆಯನ್ನಾಗಿ ಸ್ವೀಕರಿಸಲು ಕೇಂದ್ರ ಚುನಾವಣಾ ಆಯೋಗ ನಿರಾಕರಿಸಿದೆ. FRC ಅನ್ನು ಎಸ್‌ಐಆರ್ ಪ್ರಕ್ರಿಯೆಗೆ ‘ಅಸಿಂಧು/ಅಮಾನ್ಯ’ ಎಂದು ಇಸಿಐ ಸ್ಪಷ್ಟಪಡಿಸಿದೆ. ಇದು ರೇಷನ್ ಕಾರ್ಡ್ ಆಧಾರಿತ ಖಾಸಗಿ ಡೇಟಾಬೇಸ್‌ನಂತೆ ಕಾಣುತ್ತದೆ ಎಂಬುದು ಆಯೋಗದ ವಾದವಾಗಿದೆ.
ಆಯೋಗದ ಈ ನಿರ್ಧಾರದ ವಿರುದ್ಧ ತೆಲಂಗಾಣ ಸರ್ಕಾರ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದು, ಅರ್ಹ ಮತದಾರರಿಗೆ, ವಿಶೇಷವಾಗಿ ಬಡ ಹಾಗೂ ಹಿಂದುಳಿದ ವರ್ಗದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕಾನೂನು ತಜ್ಞರ ಸಲಹೆ ಪಡೆಯಲು ನಿರ್ಧರಿಸಿದೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸರ್ಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಲಹೆಗಾರ ಮೊಹಮ್ಮದ್ ಅಲಿ ಶಬ್ಬೀರ್, “ನಾವು ಚುನಾವಣಾ ಆಯೋಗದ ಸಾಂವಿಧಾನಿಕ ಅಧಿಕಾರವನ್ನು ಗೌರವಿಸುತ್ತೇವೆ. ಆದರೆ, ‘ಫ್ಯಾಮಿಲಿ ರಿಜಿಸ್ಟರ್’ ಮತ್ತು ‘ರೇಷನ್ ಕಾರ್ಡ್’ ವಿಷಯದಲ್ಲಿ ಆಯೋಗ ನೀಡಿರುವ ವಿವರಣೆ ಹಾಗೂ ನಿಲುವನ್ನು ಕಾನೂನಾತ್ಮಕವಾಗಿ ಪರಿಶೀಲಿಸುವ ಅಗತ್ಯವಿದೆ” ಎಂದು ತಿಳಿಸಿದ್ದಾರೆ.
ರೇಷನ್ ಕಾರ್ಡ್‌ಗಳ ಮಹತ್ವವನ್ನು ಎತ್ತಿಹಿಡಿದ ಶಬ್ಬೀರ್, ಪಡಿತರ ಚೀಟಿಗಳು ಖಾಸಗಿ ಅಥವಾ ಸಾಮಾನ್ಯ ದಾಖಲೆಗಳಲ್ಲ. ಸರ್ಕಾರವೇ ನಿಗದಿತ ಪರಿಶೀಲನಾ ಪ್ರಕ್ರಿಯೆಯ ನಂತರ ಅವುಗಳನ್ನು ಸಾರ್ವಜನಿಕರಿಗೆ ನೀಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟ್ಯಂತರ ಬಡ ಫಲಾನುಭವಿಗಳಿಗೆ ಆಹಾರ ಭದ್ರತೆ ಯೋಜನೆಯಡಿ ಧಾನ್ಯ ವಿತರಿಸಲು ಇದೇ ರೇಷನ್ ಕಾರ್ಡ್ ವ್ಯವಸ್ಥೆಯನ್ನು ನಂಬಿವೆ. ಹಾಗಿರುವಾಗ, ಅದೇ ಸರ್ಕಾರಿ ದಾಖಲೆಯನ್ನು ಮತದಾರರ ಪರಿಶೀಲನೆಗೆ ಬಳಸಿದಾಗ ಆಯೋಗ ಅನುಮಾನದಿಂದ ನೋಡುವುದು ಸಮಂಜಸವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ತೆಲಂಗಾಣ ಸರ್ಕಾರವು ಕಟ್ಟುನಿಟ್ಟಿನ ಮತದಾರರ ಪರಿಶೀಲನಾ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಸಡಿಲಗೊಳಿಸಲು ಬಯಸುವುದಿಲ್ಲ. ಆದರೆ, ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಬಡ ಮತದಾರರು ಅತಿಯಾದ ಅಲೆದಾಟ ಮತ್ತು ಕಿರುಕುಳ ಅನುಭವಿಸುವುದನ್ನು ತಪ್ಪಿಸಲು ಕಾನೂನುಬದ್ಧ ಹಾಗೂ ಖಾಯಂ ಪರಿಹಾರ ಕಂಡುಕೊಳ್ಳುವುದು ನಮ್ಮ ಮುಖ್ಯ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಿನ್ನೆಲೆ ಏನು?
ಜನರಿಗೆ ಸರ್ಕಾರಿ ಸೇವೆಗಳನ್ನು ತಲುಪಿಸಲು ಹಾಗೂ ಕುಟುಂಬದ ವಿವರಗಳನ್ನು ಏಕರೂಪದಲ್ಲಿ ನಮೂದಿಸಲು ತೆಲಂಗಾಣ ಸರ್ಕಾರವು ಇತ್ತೀಚೆಗೆ ‘ಮೀಸೇವ’ (MeeSeva) ಪೋರ್ಟಲ್ ಮೂಲಕ ‘ಫ್ಯಾಮಿಲಿ ರಿಜಿಸ್ಟರ್ ಸರ್ಟಿಫಿಕೇಟ್’ ವಿತರಿಸುವ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ಈ ಪ್ರಮಾಣಪತ್ರವನ್ನು ಯಾವುದೇ ಕಾರಣಕ್ಕೂ ಸಿಂಧು ಅಥವಾ ಅಧಿಕೃತ ಗುರುತಿನ ದಾಖಲೆಯಾಗಿ ಬಳಸಲು ಬರುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗವು ರಾಜ್ಯದ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿಗೆ ಸ್ಪಷ್ಟಪಡಿಸಿದೆ. ಆಯೋಗದ ಈ ನಡೆ ಇದೀಗ ತೆಲಂಗಾಣ ಸರ್ಕಾರ ಮತ್ತು ಆಯೋಗದ ನಡುವೆ ಹೊಸ ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿದೆ.


