ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಮರ್ಯಾದೆಗೇಡು ಕೊಲೆಯ ಶಂಕೆ ವ್ಯಕ್ತವಾಗಿದೆ.
ಆಗಸ್ಟ್ 16 ರಂದು ರಾತ್ರಿ ಚೆಂಗಲ್ಪಟ್ಟುವಿನ ಕೇಳಂಬಾಕ್ಕಂ ನಿವಾಸಿ ಪ್ರವೀಣ್ ಅವರ ಮೇಲೆ ದಾಳಿಕೋರರಾದ ಮಣಿಕಂಡನ್, ಎಳುಮಲೈ, ನಂದೀಶ್ ಮತ್ತು ಗೌತಮ್ ಎಂಬುವವರು ಮಚ್ಚುಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್, ಆಗಸ್ಟ್ 20 ರಂದು ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.
ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿರುವ ಪೊಲೀಸರು, ಆಗಸ್ಟ್ 17 ರಂದು ಅವರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ತಲೆಮರೆಸಿಕೊಂಡಿರುವ ಐದನೇ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಆರೋಪಿ ಏಳುಮಲೈ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸದಸ್ಯನಾಗಿದ್ದು, ಆತನ ಮಗಳು ಅಶ್ವಥಿ ಹಾಗೂ ಪ್ರವೀಣ್ ಪ್ರೀತಿಸುತ್ತಿದ್ದರು ಎಂದು ಹಲವಾರು ವರದಿಗಳು ತಿಳಿಸಿವೆ. ಏಳುಮಲೈ ಮತ್ತು ಪ್ರವೀಣ್ ಇಬ್ಬರೂ ಪರಿಶಿಷ್ಟ ಜಾತಿಗೆ ಸೇರಿದ ಆದಿ ದ್ರಾವಿಡ ಸಮುದಾಯದವರಾಗಿದ್ದರೂ, ಮೃತ ಪ್ರವೀಣ್ ಅತ್ಯಂತ ಬಡ ಕುಟುಂಬಕ್ಕೆ ಸೇರಿದವನಾಗಿದ್ದ ಎಂದು ನೆರೆಹೊರೆಯವರಾದ ಸತೀಶ್ ಕುಮಾರ್ ತಿಳಿಸಿದ್ದಾರೆ.
ಕೊಲೆಗೂ ಮುನ್ನ ಹಲವು ಬಾರಿ ದಾಳಿ
ಆಗಸ್ಟ್ 16 ರ ದಾಳಿಯು ಮೊದಲಿನದ್ದೇನೂ ಅಲ್ಲ. ಅಶ್ವಥಿ ಕುಟುಂಬದವರು ಪ್ರವೀಣ್ಗೆ ಹಲವು ಬಾರಿ ಬೆದರಿಕೆ ಹಾಕಿದ್ದರು. “ಹಿಂದೊಮ್ಮೆ ಅಶ್ವಥಿಯ ಸಂಬಂಧಿಯೊಬ್ಬ ಮಾರಕಾಸ್ತ್ರದೊಂದಿಗೆ ಪ್ರವೀಣ್ ಮನೆಗೆ ಬಂದು, ಬೆದರಿಕೆ ಹಾಕಿ, ಚಾಕುವಿನಿಂದ ಇರಿಯಲು ಯತ್ನಿಸಿದ್ದ. ನಂತರ ಅಲ್ಲಿಂದ ಹೊರಟುಹೋದ” ಎಂದು ಸತೀಶ್ ಹೇಳಿದ್ದಾರೆ.
ಸುಮಾರು ಆರು ತಿಂಗಳ ಹಿಂದೆ ಏಳುಮಲೈ ಮತ್ತು ಇತರ ಆರೋಪಿಗಳು ಪ್ರವೀಣ್ನನ್ನು ಕಟ್ಟಿಹಾಕಿ ಥಳಿಸಿದ್ದರು. ಆದರೆ, ಪ್ರವೀಣ್ ಕುಟುಂಬದವರು ಪ್ರಕರಣ ದಾಖಲಿಸದಿರಲು ನಿರ್ಧರಿಸಿದ್ದರು ಎಂದು ಸತೀಶ್ ತಿಳಿಸಿದ್ದಾರೆ.
ಕೊಲೆಯಾದ ದಿನದಂದು, ಮೂರು ತಿಂಗಳ ಹಿಂದೆ ಪ್ರವೀಣ್ ಜೊತೆ ಸ್ನೇಹ ಬೆಳೆಸಿದ್ದ ಆರೋಪಿ ಮಣಿಕಂಡನ್ನನ್ನು ಭೇಟಿಯಾಗಲು ಪ್ರವೀಣ್ ಹೋಗಿದ್ದ. ಈ ವೇಳೆ ಕಾರಿನಲ್ಲಿ ಆತನನ್ನು ಅಪಹರಿಸಿ, ಮತ್ತೊಂದು ಸ್ಥಳಕ್ಕೆ ಕರೆದೊಯ್ದು ದಾಳಿ ನಡೆಸಲಾಗಿದೆ.
ಮರ್ಯಾದಾ ಹತ್ಯೆ ವಿರೋಧಿ ಕಾಯ್ದೆಗೆ ಆಗ್ರಹ
ಜಾತಿ ವಿರೋಧಿ ಹೋರಾಟಗಾರರ ಪ್ರಕಾರ, 2026 ರ ಜನವರಿಯಿಂದ ಮಾರ್ಚ್ ಅವಧಿಯಲ್ಲೇ ತಮಿಳುನಾಡಿನಲ್ಲಿ 59 ಮರ್ಯಾದೆಗೇಡು ಕೊಲೆಗಳು ದಾಖಲಾಗಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆಯು ಗೌರವ ಕೊಲೆಗಳನ್ನು ತಡೆಯಲು ಸಾಲುತ್ತಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ವಿಶೇಷ ಮರ್ಯಾದಾ ಹತ್ಯೆ ವಿರೋಧಿ ಕಾಯ್ದೆಗೆ ಆಗ್ರಹಿಸಿರುವ ಹೋರಾಟಗಾರರು, ಇಂತಹ ಅಪರಾಧಗಳಿಗೆ ಕೇವಲ ಜಾತಿ ಶ್ರೇಷ್ಠತೆಯಷ್ಟೇ ಕಾರಣವಲ್ಲ; ವರ್ಗ (ಆರ್ಥಿಕ ಸ್ಥಿತಿ), ಧರ್ಮ ಮತ್ತು ಲಿಂಗ ಗುರುತುಗಳೂ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದ್ದಾರೆ. ಪ್ರವೀಣ್ ಕೊಲೆಯಂತೆಯೇ, ದಲಿತ ಸಮುದಾಯಗಳ ಒಳಗೇ ನಡೆಯುವ ಕೊಲೆಗಳಲ್ಲಿ ಎಸ್ಸಿ/ಎಸ್ಟಿ ಕಾಯ್ದೆಯನ್ನು ಜಾರಿಗೆ ತರುವುದು ಕಷ್ಟಕರವಾಗಿದೆ. ಅಲ್ಲದೆ, ಕ್ರಿಶ್ಚಿಯನ್ ಅಥವಾ ಮುಸ್ಲಿಂ ದಲಿತರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸದಿರುವುದರಿಂದ ಅವರಿಗೂ ಈ ಕಾಯ್ದೆಯಡಿ ರಕ್ಷಣೆ ಸಿಗುವುದಿಲ್ಲ ಎಂದು ಹೋರಾಟಗಾರರು ತಿಳಿಸಿದ್ದಾರೆ.


