ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ಬುಧವಾರ (ಆ.26) ಮುಂಜಾನೆ ಖಾಸಗಿ ಎಲೆಕ್ಟ್ರಿಕ್ ಬಸ್‌ವೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 12 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರಿಯ ಕೋದಾಡ ಮಂಡಲದಲ್ಲಿ ಮುಂಜಾನೆ ಸುಮಾರು 5.15 ಕ್ಕೆ ಅಪಘಾತ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, 42 ಪ್ರಯಾಣಿಕರನ್ನು ಹೊತ್ತ ಖಾಸಗಿ ಎಲೆಕ್ಟ್ರಿಕ್ ಬಸ್, ಹೈದರಾಬಾದ್‌ನಿಂದ ಆಂಧ್ರಪ್ರದೇಶದ ಏಲೂರು ಕಡೆಗೆ ಸಂಚರಿಸುತ್ತಿದ್ದಾಗ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಬಸ್ಸಿನ ಮುಂಭಾಗವು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಆರು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಕೋದಾಡ ಏರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋದಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಲಾರಿ ಭಾರೀ ಕೈಗಾರಿಕಾ ಕಂಬಗಳನ್ನು (ಪಿಲ್ಲರ್ಸ್) ಸಾಗಿಸುತ್ತಿತ್ತು ಎಂದು ಸೂರ್ಯಪೇಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ನರಸಿಂಹ ತಿಳಿಸಿದ್ದಾರೆ. ಬಸ್ ಲಾರಿಗೆ ಡಿಕ್ಕಿ ಹೊಡೆದಾಗ, ಕಂಬಗಳನ್ನು ಕಟ್ಟಿದ್ದ ಚೈನ್ ತುಂಡಾಗಿದ್ದು, ಅವು ಬಸ್ಸಿನ ಬಲಭಾಗಕ್ಕೆ ಬಲವಾಗಿ ಅಪ್ಪಳಿಸಿವೆ. ಈ ತೀವ್ರತೆಗೆ ಬಸ್ಸಿನ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವಿವರಿಸಿದ್ದಾರೆ.
ಗಾಯಗೊಂಡ ಕನಿಷ್ಠ 12 ಪ್ರಯಾಣಿಕರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಆಂಧ್ರಪ್ರದೇಶದ ವಿಜಯವಾಡದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.
ಮೃತರ ಕುಟುಂಬಗಳಿಗೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಸಂತಾಪ ಹೇಳಿದ್ದು, ಗಾಯಗೊಂಡವರಿಗೆ ಸುಧಾರಿತ ವೈದ್ಯಕೀಯ ಚಿಕಿತ್ಸೆಯನ್ನು ಖಚಿತಪಡಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ, ಬಸ್ ಡಿಕ್ಕಿ ಹೊಡೆಯುವ ಕೆಲವೇ ಕ್ಷಣಗಳ ಮುನ್ನ ಲಾರಿಯು ರಸ್ತೆ ವಿಭಜಕಕ್ಕೆ (ಡಿವೈಡರ್) ಡಿಕ್ಕಿ ಹೊಡೆದಿರಬಹುದು ಎಂದೂ ಅವರು ತಿಳಿಸಿದ್ದಾರೆ.


