ಬೆಂಗಳೂರು: ದೇಶದ ಪ್ರತಿಷ್ಠಿತ ಕಾನೂನು ಶಿಕ್ಷಣ ಸಂಸ್ಥೆಯಾದ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU), ತನ್ನ 34ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ದಿಢೀರ್ ರದ್ದುಗೊಳಿಸಿದೆ. ಸೆಪ್ಟೆಂಬರ್ 12 ರಂದು ನಡೆಯಬೇಕಿದ್ದ ಈ ಸಮಾರಂಭವನ್ನು “ಅನಿವಾರ್ಯ ಕಾರಣಗಳಿಂದ” ರದ್ದುಗೊಳಿಸಲಾಗುತ್ತಿದ್ದು, 2026ರ ಬ್ಯಾಚ್‌ನ ಪದವೀಧರರು ಪ್ರಮಾಣಪತ್ರಗಳನ್ನು ಕೊರಿಯರ್ ಮೂಲಕ ಸ್ವೀಕರಿಸಬಹುದು ಅಥವಾ ಕ್ಯಾಂಪಸ್‌ನಲ್ಲಿ ಸಂಗ್ರಹಿಸಬಹುದು, ಇದಕ್ಕೆ ಸಂಬಂಧಿಸಿದ ಹೊಸ ಫಾರ್ಮ್ ಶೀಘ್ರದಲ್ಲೇ ಹಂಚಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಆಡಳಿತ ಮಂಡಳಿಯು ತಾಂತ್ರಿಕ ಕಾರಣಗಳನ್ನು ನೀಡಿದ್ದರೂ, ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ಆಹ್ವಾನಕ್ಕೆ ಸಂಬಂಧಿಸಿದಂತೆ ಎದ್ದಿರುವ ಭಾರಿ ವಿವಾದವೇ ಈ ರದ್ದತಿಗೆ ಪ್ರಮುಖ ಕಾರಣ ಎನ್ನಲಾಗಿದೆ.
ವಿವಾದದ ಹಿನ್ನೆಲೆ ಏನು?
ಈ ವಿವಾದದ ಕಿಡಿ ಹೊತ್ತಿಕೊಂಡಿದ್ದು ಹೈದರಾಬಾದ್‌ನ ‘ನಾಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದಲ್ಲಿ. ಅಲ್ಲಿನ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಸಿಜೆಐ ಸೂರ್ಯ ಕಾಂತ್ ಅವರನ್ನು ಆಹ್ವಾನಿಸುವುದಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಮುಖ್ಯಸ್ಥ ಮನನ್ ಕುಮಾರ್ ಮಿಶ್ರಾ ಅವರು ನಾಲ್ಸಾರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಕೀಲರಾಗಿ ನೋಂದಣಿ ಮಾಡಿಕೊಳ್ಳುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ವಿವಾದಾತ್ಮಕ ಆದೇಶ ಹೊರಡಿಸಿದ್ದರು. ಈ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ, ಕೆಲವೇ ಗಂಟೆಗಳಲ್ಲಿ ಆದೇಶವನ್ನು ಹಿಂಪಡೆದು ವಿದ್ಯಾರ್ಥಿಗಳ ಕ್ಷಮೆಯಾಚಿಸಿದ್ದರು.
ಬೆಂಗಳೂರು ಲಾ ಸ್ಕೂಲ್ ವಿದ್ಯಾರ್ಥಿಗಳ ಆಕ್ರೋಶ
ಹೈದರಾಬಾದ್‌ನ ನಾಲ್ಸಾರ್ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ ಬೆಂಗಳೂರಿನ NLSIU ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಒಟ್ಟುಗೂಡಿ ಬಹಿರಂಗ ಪತ್ರವೊಂದನ್ನು ಬರೆದಿದ್ದರು.
- 700ಕ್ಕೂ ಹೆಚ್ಚು ಜನರ ಸಹಿ: ಈ ಪತ್ರಕ್ಕೆ 165 ಪದವಿ ಪಡೆಯಲಿರುವ ವಿದ್ಯಾರ್ಥಿಗಳು, 409 ಪ್ರಸ್ತುತ ವಿದ್ಯಾರ್ಥಿಗಳು ಮತ್ತು 128 ಹಳೆಯ ವಿದ್ಯಾರ್ಥಿಗಳು ಸಹಿ ಹಾಕಿದ್ದರು.
- ಆಹ್ವಾನಕ್ಕೆ ವಿರೋಧ: ವಿದ್ಯಾರ್ಥಿಗಳ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಯತ್ನಿಸಿದ ಬಾರ್ ಕೌನ್ಸಿಲ್ ಮುಖ್ಯಸ್ಥ ಮನನ್ ಕುಮಾರ್ ಮಿಶ್ರಾ ಮತ್ತು ಸಿಜೆಐ ಸೂರ್ಯ ಕಾಂತ್ ಅವರು ತಮ್ಮ ಘಟಿಕೋತ್ಸವಕ್ಕೆ ಬರುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು ಹಾಗೂ ವಿದ್ಯಾರ್ಥಿಗಳ ಹೋರಾಟವನ್ನು ಕೀಳಾಗಿ ಕಂಡು, ಅವರ ವಿರುದ್ಧ ಅಸಂವಿಧಾನಿಕ ಕ್ರಮ ಕೈಗೊಂಡ ಗಣ್ಯರಿಂದ ಪದವಿ ಸ್ವೀಕರಿಸುವುದು ನಮಗೆ ಮಾಡುವ ಅಪಮಾನ” ಎಂದು ವಿದ್ಯಾರ್ಥಿ ಸಮೂಹ ಆಕ್ರೋಶ ಹೊರಹಾಕಿತ್ತು.
ಆಡಳಿತ ಮಂಡಳಿಯ ಅಂತಿಮ ನಿರ್ಧಾರ
ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಅಂತಿಮವಾಗಿ ಇಡೀ ಘಟಿಕೋತ್ಸವ ಕಾರ್ಯಕ್ರಮವನ್ನೇ ರದ್ದುಗೊಳಿಸುವ ತೀರ್ಮಾನಕ್ಕೆ ಬಂದಿದೆ. ಆದಾಗ್ಯೂ, ಆಡಳಿತ ಮಂಡಳಿಯು ತನ್ನ ಅಧಿಕೃತ ನೋಟಿಸ್‌ನಲ್ಲಿ ‘ಅನಿವಾರ್ಯ ಕಾರಣಗಳಿಂದ’ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ವಿದ್ಯಾರ್ಥಿಗಳಿಗೆ ನೇರವಾಗಿ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು ಮತ್ತು ಹೊಸ ಅರ್ಜಿ ನಮೂನೆಯನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಈ ಬೆಳವಣಿಗೆಯು ಪ್ರಸ್ತುತ ದೇಶದ ಕಾನೂನು ಮತ್ತು ಉನ್ನತ ಶಿಕ್ಷಣ ವಲಯದಲ್ಲಿ ಭಾರಿ ಚರ್ಚೆಗೆ ಒಳಪಟ್ಟಿದೆ.


