ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಭಾಗವಾಗಿ ಮತದಾರರಿಗೆ ನೋಟಿಸ್ ನೀಡಲು ಮುಂದಾಗಿರುವ ಚುನಾವಣಾ ಆಯೋಗದ ಕ್ರಮವನ್ನು ನಾಗರಿಕ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ.
ಆಗಸ್ಟ್ 25ರಂದು ಎಸ್ಐಆರ್ಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ವಿರುದ್ದ ಎಫ್ಐಆರ್ ಬಿಡುಗಡೆ ಮಾಡಿರುವ ಸಂಘಟನೆಗಳು, ನಿರ್ದೋಷಿಗಳು ಯಾಕೆ ನಿಮ್ಮ ದಾಖಲೆಗಳಿಗಾಗಿ ಅಲೆಯಬೇಕು? ಅಧಿಕಾರಿಗಳ ಮುಂದೆ ಯಾಕೆ ಕೈ ಕಟ್ಟಿ ನಿಲ್ಲಬೇಕು? ಎಂದು ಪ್ರಶ್ನಿಸಿವೆ.
ಲಾಜಿಕಲ್ ಡಿಸ್ಕ್ರಿಪೆನ್ಸಿ ಸಾಫ್ಟ್ವೇರ್ ಅನ್ನು ಬಿಎಲ್ಒ ಆಪ್ಗಳಲ್ಲಿ ಹಾಕಲಾಯಿತು. ಆದರೆ ಇದರ ಬಗ್ಗೆ ಬಿಎಲ್ಒಗಳಿಗೆ ಯಾವುದೇ ತರಬೇತಿ ನೀಡಿರಲಿಲ್ಲ. ಲಿಖಿತ ಸೂಚನೆಗಳನ್ನು ಕಳುಹಿಸಿರಲಿಲ್ಲ. ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಯಾವ ಪ್ರಯತ್ನವನ್ನೂ ಮಾಡಿರಲಿಲ್ಲ. ಕನಿಷ್ಟ ಒಂದೇ ಒಂದು ಪ್ರಕಟಣೆಯನ್ನೂ ನೀಡಿಲ್ಲ. ಒಂದು ಕೋಟಿಗಿಂತಲೂ ಹೆಚ್ಚಿನ ಸಂಖ್ಯೆಯ ಲಾಜಿಕಲ್ ಡಿಸ್ಕ್ರಿಪೆನ್ಸಿಯನ್ನು ಬಿಎಲ್ಇಒ ಆಪ್ ತೊರಿಸತೊಡಗಿತು. ಇದನ್ನು ಹೀಗೇ ಪ್ರಕಟಿಸಿದರೆ ಕರ್ನಾಟಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ ಎಂದು ಹೆದರಿ ಕೊನೆಗಳಿಗೆಯಲ್ಲಿ ಹಡಾಹುಡಿಯಲ್ಲಿ ಸಾಧ್ಯವಾದಷ್ಟನ್ನು ಡಿಲೀಟ್ ಮಾಡುವಂತೆ ಬಿಎಲ್ಒಗಳಿಗೂ ಸೂಚಿಸಲಾಯಿತು. ಕೊನೆಗೂ 20 ಲಕ್ಷ ಅನುಮಾನಾಸ್ಪದ ಮತದಾರರೆಂದು ಪಟ್ಟಿ ಮಾಡಿ ನೋಟೀಸ್ ನೀಡಲಾಗುತ್ತಿದೆ ಎಂದು ಸಂಘಟನೆಗಳು ಹೇಳಿವೆ.
ಮುಂದುವರಿದು, ಇವರು ಯಾರು ಎಂಬುದನ್ನೂ ಬಹಿರಂಗ ಪಡಿಸಲು ಚುನಾವಣಾ ಆಯೋಗ ರೆಡಿ ಇಲ್ಲ. ಅವರ ವಿವರಗಳಲ್ಲಿ ಇರುವ ದೋಷವೇನು ಎಂಬ ಯಾವ ಮಾಹಿತಿಯನ್ನೂ ಸಮಾಜಕ್ಕೆ ನೀಡಿಲ್ಲ. ಏನಿದು ಸೀಕ್ರಿಟ್ ಆಪರೇಷನ್. ನಾವೇಕೆ ಇದನ್ನು ಒಪ್ಪಬೇಕು? ಎಂದು ಪ್ರಶ್ನಿಸಿವೆ.
ದಾಖಲೆ ಕೊಟ್ಟ ಬಳಿಕವೂ ಬಂಗಾಳದಂತೆ ಇಲ್ಲಿಯೂ ಮತದಾರರನ್ನು ಅನರ್ಹಗೊಳಿಸಿದರೆ ಅವರೇನು ಮಾಡಬೇಕು? ಅಲ್ಲಿನಂತೆ ಕೋರ್ಟಿಗೆ ಅಲೆಯಬೇಕಾ? ಈ ಯಾವ ಪ್ರಶ್ನೆಗಳಿಗೂ ಚುನಾವಣಾ ಆಯೋಗದ ಬಳಿ ಉತ್ತರವೂ ಇಲ್ಲ ಎಂದಿದೆ.
ಕರ್ನಾಟಕದ 2025ರ ಮತದಾರರ ಪಟ್ಟಿಯಲ್ಲಿದ್ದ 5.54ಕೋಟಿ ಮತಗಳ ಪೈಕಿ 1.08 ಕೋಟಿ ಮತಗಳನ್ನು ಎಎಸ್ಡಿಡಿಒ ಕೆಟಗರಿಗಳ ಅಡಿ ಶಾಶ್ವತವಾಗಿ ಡಿಲೀಟ್ ಮಾಡಲಾಗಿದೆ ಮತ್ತು ಕರಡು ಪಟ್ಟಿಯಲ್ಲಿ ಬಂದಿರುವ ಮತದಾರರ ಪೈಕಿ 43.8 ಲಕ್ಷ ಮತದಾರರನ್ನು ಅನುಮಾನಾಸ್ಪದ ಮತದಾರರೆಂದು ಪರಿಗಣಿಸಿರುವ ಚುನಾವಣಾ ಆಯೋಗ, ಅವರಿಗೆ ತಮ್ಮ ನಾಗರಿಕತ್ವವನ್ನು ಸಾಬೀತುಪಡಿಸುವಂತೆ ನೋಟೀಸ್ ಕಳಿಸುವ ತೀರ್ಮಾನ ಮಾಡಿದೆ.


