“ಶೋಷಿತ ಸಮುದಾಯದಲ್ಲಿ ಹುಟ್ಟಿದ ನನ್ನ ತಂದೆಗೆ 12 ಜನ ಮಕ್ಕಳು. ಐದು ತಲೆಮಾರು ಬದಲಾದರೂ..ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ಇಂದಿಗೂ ನಮ್ಮ ಜನರಿಗೆ ನೆಲೆ ಸಿಕ್ಕಿಲ್ಲ. ಭೂಮಾಲೀಕರು ಹೇಳಿದಂತೆ ಕೇಳಿದರೆ ಮಾತ್ರ ನಮಗೆ ಕೆಲಸ ಇರುತಿತ್ತು. ನನ್ನ ತಂದೆ ಒಂದು ವರ್ಷ ಮಾತ್ರ ಒಂದು ತೋಟದಲ್ಲಿ ಕೆಲಸ ಮಾಡಿದ್ದರು. ನಮಗೆ ಸತ್ತಾಗ ಹೂಳುವುದಕ್ಕೂ ಜಾಗವಿರಲಿಲ್ಲ, ಇನ್ನು ದಾಖಲೆ ಎಲ್ಲಿಂದ ಬರಬೇಕು? ಕೊಡಗು ಎಂದರೆ ಸಂಪತ್ಭರಿತ ನಾಡು, ಕಾಶ್ಮೀರ ಎಂದೆಲ್ಲ ಹೇಳುತ್ತಾರೆ. ಆದರೆ, ಇಲ್ಲಿ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಬಹಳಷ್ಟಿದೆ ಎಂದು ವಸತಿ ಮತ್ತು ಭೂಮಿ ಹಕ್ಕು ವಂಚಿತರ ಹೋರಾಟಗಾರ ಕೆ.ಮೊಣ್ಣಪ್ಪ ಹೇಳಿದರು.
ಎಸ್‌ಐಆರ್ ಪರಿಶೋಧನೆ ಮತ್ತು ಪ್ರತಿರೋಧ ಜಾಥಾದ ಭಾಗವಾಗಿ ಮಂಗಳವಾರ (ಸೆ.29) ಕೊಡಗಿನ ಪಾಲೆಮಾಡಿನಲ್ಲಿ ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ಆದಿವಾಸಿ ನಿರಾಶ್ರಿತರ ಬೃಹತ್ ಪಬ್ಲಿಕ್ ಹಿಯರಿಂಗ್ ನಡೆಯಿತು.
“ಸಂವಿಧಾನ ಇಲ್ಲಿನ ಬಡವರ ಮನೆಗೆ ತಲುಪಿಲ್ಲ, ಅವರಿಗೆ ಸಾಂವಿಧಾನಿಕ ಹಕ್ಕುಗಳು ಸಿಕ್ಕಿಲ್ಲ. ಹಕ್ಕು ಕೊಡಿಸಲು ನಾವು ಸಾಕಷ್ಟು ಹೋರಾಟ ಮಾಡಬೇಕಾಯಿತು. ನಾವು 20 ವರ್ಷಗಳ ಹಿಂದೆ ಕಾನ್ಶಿರಾಮ್ ನಗರ ಕಟ್ಟಿದ್ದೇವೆ. 119 ಎಕರೆ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಹೋರಾಟ ಪ್ರಾರಂಭ ಮಾಡಿದಾಗ, ಇಲ್ಲಿನ ಭೂಮಾಲೀಕರಿಗೆ ಅಂದಿನ ಸರ್ಕಾರ ಸಾಕಷ್ಟು ಬೆಂಬಲ ನೀಡುತ್ತಿತ್ತು. ನಮ್ಮ ಗಂಜಿ ಕೇಂದ್ರಕ್ಕೆ ರೇಷನ್ ತರುವುದಕ್ಕೆ ತೆರಳಿದ್ದ ಯುವಕರ ಮೇಲೆ ನೂರ್ನಾಡಿನಲ್ಲಿ ಹಲ್ಲೆ ನಡೆಸಿದ್ದರು. ಭೂಮಾಲೀಕರು ಅಲ್ಲಿ ಓರ್ವ ಯುವಕನ ಮೇಲೆ ಗುಂಡು ಹಾರಿಸಿದ್ದರು. ಇಂತಹ ಘಟನೆಗಳು ಸಾಕಷ್ಟಿವೆ” ಎನ್ನುತ್ತಾರೆ ಮೊಣ್ಣಪ್ಪ.
“ನಮಗೆ ಕುಡಿಯುವ ನೀರನ್ನೂ ಸಹ ಬಂದ್ ಮಾಡಿದ್ದರು. ಪಕ್ಕದ ಮಸೀದಿಯವರು ನಮಗೆ ನೀರು ಕೊಟ್ಟಾಗ ಅವರಿಗೂ ಇಲ್ಲಿನ ಭೂಮಾಲೀಕರು ಬಹಿಷ್ಕಾರದ ಬೆದರಿಕೆ ಹಾಕಿ ನೀರು ಕೊಡುವುದನ್ನು ನಿಲ್ಲಿಸಿದರು. ನಾವು ಕೆರೆ ನೀರು ಕುಡಿಯಲು ಪ್ರಾರಂಭಿಸಿದಾಗ, ಅದನ್ನೂ ದನಗಳನ್ನು ಬಿಟ್ಟು ಮಲೀನ ಮಾಡಿದರು. ನಮ್ಮ ಗುಡಿಸಲುಗಳಿಗೆ ಬೆಂಕಿ ಇಟ್ಟು ನಮ್ಮನ್ನು ಇಲ್ಲಿಂದ ಓಡಿಸುವ ಬೆದರಿಕೆ ಹಾಕಿದರು” ಎಂದು ನೋವು ತೋಡಿಕೊಂಡರು.
“ನಮ್ಮ ಅಹವಾಲು ಹೇಳಿಕೊಳ್ಳಲು ಗ್ರಾಮಸಭೆಗೆ ತೆರಳಿದ್ದಾಗ, ನಮ್ಮನ್ನು ಅಲ್ಲಿಂದ ಪೊಲೀಸ್ ದೌರ್ಜನ್ಯದ ಮೂಲಕ ಹೊರಗೆ ಕಳುಹಿಸಿದ್ದರು. ನಮ್ಮ ಮೇಲೆ ಕೇಸ್ ದಾಖಲಿಸುವಂತೆ, ಸಭೆಯಿಂದ ಹೊರಗೆ ಕಳುಹಿಸುವಂತೆ ಒತ್ತಡ ಹೇರಿದ್ದರು. ಇದೀಗ 25 ಎಕರೆಯ ಕಾನ್ಶಿರಾಮ್ ನಗರದಲ್ಲಿ ಅಂಬೇಡ್ಕರ್, ಬುದ್ಧ, ಬಸವ, ಫುಲೆ ಹೆಸರು ಇಟ್ಟಿದ್ದೇವೆ. ಈ ಹೆಸರುಗಳಿಗೂ ಇಲ್ಲಿನ ಕೆಲವರು ಹೊರಗಿನವರು ಎಂದು ಆಕ್ಷೇಪ ಎತ್ತಿದ್ದರು. ಬಳಿಕ ನಾವು ಒಂದು ರಸ್ತೆಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರು ಇಟ್ಟಿದ್ದೇವೆ” ಎಂದರು.
“ನಮಗೆ ಬೇರೆ ಜಾಗ ಕೊಡುವುದಾಗಿ ಹೇಳಿ ಇಲ್ಲಿಂದ ತೆರಳುವಂತೆ ಮಾಡಿ, ನಂತರ ಕೊಡುವುದಾಗಿ ಹೇಳಿದ್ದ ಜಾಗವನ್ನೇ ಕ್ರಿಕೆಟ್ ಸ್ಟೇಡಿಯಂ ಮಾಡಲು ಕೊಟ್ಟರು. ಇದನ್ನು ಪ್ರಶ್ನೆ ಮಾಡಿದ ನಮ್ಮ ಮೇಲೆ ಕೇಸ್ ದಾಖಲಿಸಿದರು. ವಿನಾಕಾರಣ ನಮ್ಮ ಮೇಲೆ ರೌಡಿ ಶೀಟ್ ತೆರೆದಿದ್ದಾರೆ. ಇಲ್ಲಿ ಬಹಳಷ್ಟು ಜನರಿಗೆ ಕೃಷಿ ಭೂಮಿಯಿಲ್ಲ, ವಸತಿಗೆ ಜಾಗವಿಲ್ಲ. ಎಲ್ಲಾ ಭೂಮಿ ಬಲಾಡ್ಯರ ವಶದಲ್ಲಿದೆ. ಅದನ್ನು ಬಿಡಿಸಿಕೊಳ್ಳುವ ಧೈರ್ಯ ಸರ್ಕಾರಕ್ಕಿಲ್ಲ. ನಾವು ಇಲ್ಲಿನ ಎಲ್ಲ ವಸತಿ ರಹಿತರ ಪಟ್ಟಿ ಮಾಡಿದ್ದೇವೆ. ಅವರಲ್ಲಿ ಬಹುತೇಕರು ಭೂಮಾಲೀಕರ ಲೈನ್ ಮನೆಗಳಲ್ಲಿದ್ದಾರೆ” ಎಂದು ವಿವರಿಸಿದರು.
“ನಿವೇಶನ ಮತ್ತು ಎಸ್‌ಐಆರ್‌ಗೆ ನೇರ ಸಂಬಂಧ ಇದೆ. ಇಲ್ಲಿ ಹೋರಾಟ ಮಾಡಬೇಕಾದರೆ ಮತದಾರರ ಗುರುತಿನ ಚೀಟಿ ಬೇಕು. ಅದನ್ನು ಇಟ್ಟುಕೊಂಡು ನಮಗೂ ಹಕ್ಕು ಕೊಡಿ ಎಂದು ಕೇಳುವ ಅಧಿಕಾರವಿತ್ತು. ಆದರೆ ಎಸ್‌ಐಆರ್ ಮೂಲಕ ಆ ಹಕ್ಕುಗಳನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಶೋಷಿತ ದಲಿತ, ಕಾರ್ಮಿಕ ಮತ್ತು ಅಲ್ಪಸಂಖ್ಯಾತರು ಎಸ್‌ಐಆರ್‌ನಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಬಹುತೇಕರು ಕೂಲಿ ಕೆಲಸಕ್ಕಾಗಿ ಜಾಗ ಮತ್ತು ಊರುಗಳನ್ನು ಬದಲಾಯಿಸುತ್ತಾರೆ. ಇವರನ್ನು ಉದ್ದೇಶಪೂರ್ವಕವಾಗಿ ಹೆಸರು ಅಥವಾ ವಯಸ್ಸಿನ ಕಾರಣಕ್ಕೆ ನೋಟಿಸ್ ನೀಡಿ ಹತ್ತಿಕ್ಕಲಾಗುತ್ತಿದೆ” ಎಂದು ಮೊಣ್ಣಪ್ಪ ಹೇಳಿದರು.


