ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಹೆಸರಿನಲ್ಲಿ ಅರ್ಹ ಬಡವರು, ಅಲ್ಪಸಂಖ್ಯಾತರು ಹಾಗೂ ಅವಿದ್ಯಾವಂತ ಮತದಾರರ ಹೆಸರುಗಳನ್ನು ಯೋಜಿತವಾಗಿ ಡಿಲೀಟ್ ಮಾಡಲು ಹೊರಟ ಬೃಹತ್ ಜಾಲವೊಂದು ಬೀದರ್ ಜಿಲ್ಲೆಯಲ್ಲಿ ಬಯಲಾಗಿದೆ. ಯಾವುದೇ ಆಧಾರ ಹಾಗೂ ದೃಢೀಕೃತ ದಾಖಲೆಗಳಿಲ್ಲದೆ ಫಾರಂ-7ರ ಅಡಿಯಲ್ಲಿ ಸುಳ್ಳು ಆಕ್ಷೇಪಣೆಗಳನ್ನು ಸಲ್ಲಿಸಿ 3,244 ಮತದಾರರನ್ನು ‘ಸ್ಥಳಾಂತರ’ ಹಾಗೂ ‘ಗೈರು’ ಎಂದು ನಮೂದಿಸಿ ಮತಹಕ್ಕು ಕಸಿಯಲು ಒಳಸಂಚು ರೂಪಿಸಿದ ಆರೋಪದಡಿ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ 32 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಭಾಲ್ಕಿ ನಗರಸಭೆಯ ನಾಮನಿರ್ದೇಶಿತ ಸದಸ್ಯರೂ ಆಗಿರುವ ಸ್ಥಳೀಯ ನಿವಾಸಿ ಮೊಹಮ್ಮದ್ ಅತೀಕ್ ಅಹಮದ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. “ಬೂತ್ ನಂಬರ್ 1ರ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿದ್ದು, 2004ರಿಂದಲೂ ಸಾರ್ವತ್ರಿಕ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ನಿರಂತರವಾಗಿ ಮತದಾನ ಮಾಡುತ್ತಿದ್ದೇನೆ. ಆದರೆ, ಎಸ್‌ಐಆರ್ ಅಭಿಯಾನದ ವೇಳೆ ಫಾರಂ-7 ಬಳಸಿ ನನ್ನ ಹೆಸರು ಸೇರಿದಂತೆ ಬರೋಬ್ಬರಿ 3,244 ಮತದಾರರನ್ನು ‘ಸ್ಥಳಾಂತರಗೊಂಡಿದ್ದಾರೆ’ ಹಾಗೂ ‘ಗೈರಾಗಿದ್ದಾರೆ’ ಎಂದು ಸುಳ್ಳು ಮಾಹಿತಿ ನೀಡಿ ಕ್ಷೇತ್ರದ ಮತದಾರರ ನೋಂದಣಾಧಿಕಾರಿ (ERO) ಮುಂದೆ ಅರ್ಜಿ ಸಲ್ಲಿಸಲಾಗಿತ್ತು,” ಎಂದು ಅತೀಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಆಕ್ಷೇಪಣಾ ಅರ್ಜಿಗಳನ್ನು ಪರಿಶೀಲಿಸಿದ ತಹಶೀಲ್ದಾರ್ ಹಾಗೂ ನೋಂದಣಾಧಿಕಾರಿಗಳು ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿ ನೋಟಿಸ್ ನೀಡಿದಾಗ ಅಸಲಿ ಅಕ್ರಮ ಬೆಳಕಿಗೆ ಬಂದಿದೆ. ಶಿವರಾಜ, ದೀಪಕ, ಗೌಸೋದ್ದಿನ್ ಸಾಬ್, ಜಗದೀಶ, ಯೋಗೇಶ, ಕಲ್ಯಾಣರಾವ ಸೇರಿದಂತೆ ಸುಮಾರು 32 ಜನರು ಸಂಘಟಿತವಾಗಿ ದೊಡ್ಡ ಪ್ರಮಾಣದಲ್ಲಿ ಈ ಸುಳ್ಳು ಆಕ್ಷೇಪಣಾ ಅರ್ಜಿಗಳನ್ನು ಹೂಡಿರುವುದು ಪತ್ತೆಯಾಗಿದೆ. ಮತದಾರರ ಗಮನಕ್ಕೂ ಬಾರದಂತೆ ಅವರ ನಕಲಿ ಸಹಿಗಳನ್ನು ಮಾಡಿ, ಮನಬಂದಂತೆ ನಕಲಿ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿ ಸಾಂವಿಧಾನಿಕ ಮತದಾನದ ಹಕ್ಕನ್ನು ಕಸಿಯಲು ಅಪರಾಧಿಕ ಸಂಚು ರೂಪಿಸಿರುವುದು ತನಿಖೆಯಲ್ಲಿ ಶಂಕಿಸಲಾಗಿದೆ.
32 ಮಂದಿ ವಿರುದ್ಧ ಬಿಎನ್‌ಎಸ್ ಅಡಿಯಲ್ಲಿ ಎಫ್‌ಐಆರ್ ದಾಖಲು
ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಮತದಾರರನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಿಂದ ಹೊರಹಾಕಲು ವ್ಯವಸ್ಥಿತ ಸಂಚು ನಡೆಸಿದ 32 ಜನರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ನೀಡಲಾಗಿದ್ದು, ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 61(2), 319(2), 336(2), 336(3), 340(2) ಹಾಗೂ 190 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.


