ರಾಜ್ಯದಲ್ಲಿ ತೀವ್ರ ಚರ್ಚೆ, ರಾಜಕೀಯ ವಿವಾದ ಹಾಗೂ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಅಧಿಕೃತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ನಾಯಕರ ಬೃಹತ್ ಧರಣಿ ಹಾಗೂ ಫಾರಂ ನಂಬರ್ 7ರ ದುರುಪಯೋಗದ ಗಂಭೀರ ಆರೋಪಗಳ ಬೆನ್ನಲ್ಲೇ ಚುನಾವಣಾ ಆಯೋಗವು ಈ ವಿವರಗಳನ್ನು ಪ್ರಕಟಿಸುವ ಮೂಲಕ ಸಾರ್ವಜನಿಕ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.
ಕಳೆದ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಚುನಾವಣಾ ಆಯೋಗದ ಕಚೇರಿ ಎದುರು ಧರಣಿ ನಡೆಸಿದ್ದರು. ರಾಜ್ಯದಲ್ಲಿ ಫಾರಂ ನಂಬರ್ 7 ದುರುಪಯೋಗಪಡಿಸಿಕೊಂಡು ಸುಮಾರು 50 ಲಕ್ಷ ಮತದಾರರ ಹೆಸರುಗಳನ್ನು, ವಿಶೇಷವಾಗಿ ಅಲ್ಪಸಂಖ್ಯಾತರ ವೋಟ್ಗಳನ್ನು ಪಟ್ಟಿಯಿಂದ ತೆಗೆದುಹಾಕಲು ಷಡ್ಯಂತ್ರ ನಡೆಯುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಬಿಡುಗಡೆ ಮಾಡಿರುವ ನೈಜ ಅಂಕಿ-ಅಂಶಗಳು ಮಹತ್ವ ಪಡೆದುಕೊಂಡಿವೆ.
ಚುನಾವಣಾ ಆಯೋಗ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಲು ಇಡೀ ರಾಜ್ಯಾದ್ಯಂತ ಸಲ್ಲಿಕೆಯಾಗಿರುವ ಫಾರಂ ನಂಬರ್ 7ರ ಒಟ್ಟು ಅರ್ಜಿಗಳ ಸಂಖ್ಯೆ 84,900. ಇನ್ನು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಸಲ್ಲಿಕೆಯಾಗಿರುವ ಫಾರಂ ನಂಬರ್ 6ರ ಅರ್ಜಿಗಳ ಸಂಖ್ಯೆ 8,85,952 ತಲುಪಿದ್ದರೆ, ವಿದೇಶದಲ್ಲಿರುವ ಅನಿವಾಸಿ ಭಾರತೀಯರು ಸಲ್ಲಿಸಿರುವ ಫಾರಂ 6A ಅರ್ಜಿಗಳ ಸಂಖ್ಯೆ 4,648 ಆಗಿದೆ. ಮತದಾರರ ಪಟ್ಟಿಯಲ್ಲಿನ ಅನ್-ಮ್ಯಾಪಿಂಗ್, ಹೆಸರು ಅಥವಾ ದಾಖಲೆಗಳಲ್ಲಿನ ವ್ಯತ್ಯಾಸ ಹಾಗೂ ಅನುಮಾನಾಸ್ಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಒಟ್ಟು 43,43,137 ನೋಟೀಸ್ಗಳನ್ನು ಸಿದ್ಧಪಡಿಸಲಾಗಿತ್ತು. ಇವುಗಳಲ್ಲಿ ಶೇಕಡಾ 99ರಷ್ಟು ನೋಟೀಸ್ಗಳು ಸಾರ್ವಜನಿಕರಿಗೆ ತಲುಪಿದ್ದು, ಈ ಪೈಕಿ 35,60,833 ಜನರು ಅಗತ್ಯ ದಾಖಲೆಗಳನ್ನು ಒದಗಿಸಿ ವಿಚಾರಣೆಗೆ ಒಳಪಟ್ಟಿದ್ದಾರೆ ಹಾಗೂ ಉಳಿದ 7,82,304 ನೋಟೀಸ್ಗಳ ವಿಚಾರಣೆ ಪ್ರಕ್ರಿಯೆ ಬಾಕಿ ಉಳಿದಿದೆ.
ಜಿಲ್ಲಾವಾರು ಫಾರಂ 7 ಅರ್ಜಿಗಳ ಸ್ಥಿತಿಗತಿಯನ್ನು ನೋಡಿದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ 5,760 ಫಾರಂ ನಂಬರ್ 7 ಅರ್ಜಿಗಳು ಸಲ್ಲಿಕೆಯಾಗಿವೆ. ತುಮಕೂರು ಜಿಲ್ಲೆಯಲ್ಲಿ 4,350, ದಾವಣಗೆರೆಯಲ್ಲಿ 3,747, ರಾಜಧಾನಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 3,026, ಬಿಬಿಎಂಪಿ ನಾರ್ತ್ನಲ್ಲಿ 1,689, ಬೆಳಗಾವಿಯಲ್ಲಿ 3,539, ಮೈಸೂರಿನಲ್ಲಿ 2,828 ಹಾಗೂ ಗುಲ್ಬರ್ಗದಲ್ಲಿ 1,040 ಅರ್ಜಿಗಳು ಬಂದಿವೆ. ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಇದೇ ತಿಂಗಳ 22ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದ್ದು, ಸೋಮವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮತ್ತಷ್ಟು ವಿವರ ನೀಡಲಿದ್ದಾರೆ ಎಂದು ತಿಳಿಸಿದೆ.


