“2021 ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ತಮ್ಮ ಕಾಲಿಗೆ ಗಾಯವಾಗಿದೆ ಎಂದು ‘ಸುಳ್ಳು ನಾಟಕ’ ಆಡಿದ್ದರು. ಅವರ ಈ ಸುಳ್ಳು ಹಕ್ಕುಗಳ ಕುರಿತು ಸರ್ಕಾರದಿಂದ ತನಿಖೆ ನಡೆಸಲಾಗುವುದು” ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.
ನಂದಿಗ್ರಾಮ ಮತ್ತು ರೇಜಿನಗರ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವುದರಿಂದ, ಅಕ್ಟೋಬರ್ 9 ರ ನಂತರ ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನೀಡುವುದಾಗಿ ಅಧಿಕಾರಿ ತಿಳಿಸಿದ್ದಾರೆ.
“2021 ರಲ್ಲಿ ನಂದಿಗ್ರಾಮದಲ್ಲಿ ಪ್ರಚಾರ ನಡೆಸುವಾಗ ಮಮತಾ ಬ್ಯಾನರ್ಜಿ ತಮ್ಮ ಕಾಲಿನ ಗಾಯದ ಸುಳ್ಳು ನಾಟಕ ಆಡಿದ್ದರು. ಅವರ ಮೂಳೆ ಮುರಿತ ಅಥವಾ ಕೀಲು ತಪ್ಪಿದ ಬಗ್ಗೆ ಯಾವುದೇ ಆಧಾರಗಳಿಲ್ಲ ಎಂದು ತಿಳಿಸುವ ವೈದ್ಯಕೀಯ ವರದಿ ನಮ್ಮ ಬಳಿಯಿದೆ. ನಾವು ಈ ವಿಷಯದ ಕುರಿತು ತನಿಖೆಯನ್ನು ಪ್ರಾರಂಭಿಸುತ್ತೇವೆ” ಎಂದಿದ್ದಾರೆ.
2021 ರಲ್ಲಿ ಬ್ಯಾನರ್ಜಿ ಅವರ ಕಾಲಿಗೆ ಗಾಯ
ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರು ಮಾರ್ಚ್ 10, 2021 ರಂದು ನಂದಿಗ್ರಾಮದ ಬಿರುಲಿಯಾದ ರೇಯಾಪಾರ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಅವರ ಎಡಗಾಲಿಗೆ ಗಾಯವಾಗಿತ್ತು. ಆರಂಭದಲ್ಲಿ, ಕೆಲವು ಅಪರಿಚಿತ ವ್ಯಕ್ತಿಗಳು ತಮ್ಮನ್ನು ತಳ್ಳಿದ್ದರಿಂದ ಕಾರಿನ ತೆರೆದ ಬಾಗಿಲಿಗೆ ಡಿಕ್ಕಿ ಹೊಡೆದು ಎಡಗಾಲಿಗೆ ಗಾಯವಾಯಿತು ಎಂದು ಅವರು ಪ್ರತಿಪಾದಿಸಿದ್ದರು.
ನಂತರ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದ ಅವರು, ಪ್ರಚಾರದ ಸಮಯದಲ್ಲಿ ಬೃಹತ್ ಜನಸಂದಣಿಯು ತಮ್ಮತ್ತ ನುಗ್ಗಿದ್ದರಿಂದ ಹೀಗಾಯಿತು ಎಂದು ಹೇಳಿದ್ದರು. ನಂತರ ಅವರನ್ನು ಎಸ್ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರ ಎಡ ಹಿಮ್ಮಡಿ ಮತ್ತು ಪಾದದ ಮೂಳೆ ಹಾಗೂ ಲಿಗಮೆಂಟ್ ಗೆ ತೀವ್ರ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದರು.
ಮಮತಾ ಬ್ಯಾನರ್ಜಿ ನಂತರ ಗಾಲಿಕುರ್ಚಿಯಲ್ಲಿ ಕುಳಿತು ಪ್ರಚಾರ ನಡೆಸುತ್ತಿರುವುದು ಕಂಡುಬಂದಿತ್ತು. ತದನಂತರ, 2021 ರ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ 210 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಐತಿಹಾಸಿಕ ಜಯ ಬಾರಿಸಿತ್ತು, ಭಾರತೀಯ ಜನತಾ ಪಾರ್ಟಿ ಕೇವಲ 77 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.
ಅಧಿಕಾರಿ ಆರೋಪ ತಳ್ಳಿಹಾಕಿದ ಟಿಎಂಸಿ
ಟಿಎಂಸಿ ಶಾಸಕ ಕುನಾಲ್ ಘೋಷ್ ಅವರು ಅಧಿಕಾರಿ ಅವರ ಆರೋಪಗಳನ್ನು ತಳ್ಳಿಹಾಕಿದ್ದು, ಪ್ರಸ್ತುತ ರಾಜ್ಯದಲ್ಲಿ ಅವರ ಸರ್ಕಾರವಿರುವುದರಿಂದ ಮುಖ್ಯಮಂತ್ರಿ ಏನೆಲ್ಲಾ ಪ್ರತಿಪಾದನೆಗಳನ್ನು ಬೇಕಾದರೂ ಮಾಡಬಹುದು ಎಂದಿದ್ದಾರೆ.
“ಮೂಳೆ ಮುರಿದಿದ್ದರೆ ಮಾತ್ರ ಬ್ಯಾಂಡೇಜ್ ಹಾಕಬೇಕು ಎಂದು ಮುಖ್ಯಮಂತ್ರಿಗೆ ಯಾರು ಹೇಳಿದರು? ಯಾರಿಗಾದರೂ ತೀವ್ರ ಗಾಯವಾದರೆ ಅಥವಾ ಗಾಯವು ಮೂಳೆ ಮುರಿತದಷ್ಟೇ ತೀವ್ರವಾಗಿದ್ದರೆ, ಆವಾಗಲೂ ಬ್ಯಾಂಡೇಜ್ ಅಗತ್ಯವಿರುತ್ತದೆ. ಮೂಳೆ ಮುರಿತ ಸಂಭವಿಸಿಲ್ಲ ಎಂದು ಅವರಿಗೆ ಹೇಗೆ ಖಚಿತವಾಯಿತು? ಅವರು ಸರ್ಕಾರವನ್ನು ನಡೆಸುತ್ತಿದ್ದಾರೆ, ಹಾಗಾಗಿ ಯಾವುದೇ ಪ್ರತಿಪಾದನೆಗಳನ್ನು ಮಾಡಬಹುದು” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.


