Homeಅಂಕಣಗಳುಕಳೆದುಹೋದ ದಿನಗಳು -22: ದಲಿತರಿಗೆ ಭೂಮಿ ಮತ್ತು ರೈತ ಸಂಘದ ಹುಟ್ಟು

ಕಳೆದುಹೋದ ದಿನಗಳು -22: ದಲಿತರಿಗೆ ಭೂಮಿ ಮತ್ತು ರೈತ ಸಂಘದ ಹುಟ್ಟು

- Advertisement -
- Advertisement -

ಈ ಎಲ್ಲ ಮನೆಗಳು ಮೇಲೇಳುತ್ತಿದ್ದಂತೆ ಗಣಪಯ್ಯ ಪ್ರತಿ ಮನೆಗೂ ಎರಡೆರಡರಂತೆ ತೆಂಗಿನ ಗಿಡಗಳನ್ನು ತಂದುಕೊಟ್ಟರು. ಮನೆಯ ಸುತ್ತ ಖಾಲಿ ಇರುವ ಸರ್ಕಾರಿ ಸ್ಥಳ ಎಷ್ಟಿದೆಯೋ ಅಷ್ಟು ಜಾಗಕ್ಕೆ ಬೇಲಿ ಹಾಕಿಕೊಳ್ಳಿ ಸರ್ಕಾರ ಮುಂದೆ ನಿಮಗೇ ಮಂಜೂರು ಮಾಡಬಹುದು. ಗಿಡಗಳನ್ನು ನೆಡಿ, ತರಕಾರಿ ಹಣ್ಣು ಬೆಳೆಯಿರಿ, ಮನೆಯ ಸ್ನಾನದ ಮತ್ತು ಬಟ್ಟೆ ಒಗೆಯುವ ನೀರನ್ನು ಬಳಸಿ ಎಂದೆಲ್ಲ ಹೇಳುತ್ತಿದ್ದರು.

ಜಮೀನು ಮಂಜೂರಾತಿಗೆ ಅರ್ಜಿ ಕೊಡಲು ಹೇಳಿದಾಗ ಕೆಲವು ಕಡೆಗಳಲ್ಲಿ ಯಾರೂ ಅರ್ಜಿಗೆ ರುಜು ಮಾಡಲಿಲ್ಲ. ಅದಕ್ಕೆ ಕಾರಣ ಅಲ್ಲೇ ಕೆಲವರು ಭೂಮಾಲಿಕರು ಇವರಿಗೆ ಜಮೀನು ಸಿಗಬಾರದು ಎಂಬ ಉದ್ದೇಶದಿಂದಲೇ. “ನೀವು ಸೈನ್ ಮಾಡಿ ಕೊಟ್ರೆ ಜಮೀನೆಲ್ಲ ಗಣಪಯ್ಯನ ಪಾಲಾಗುತ್ತೆ ನೋಡಿ” ಎಂದು ಹೆದರಿಸಿದ್ದರು. ಹಿಂದೆ ಇದೇ ರೀತಿ ದಲಿತರ ಹೆಸರಿನಲ್ಲಿ ಬೇರೆಯವರು ಜಮೀನು ಪಡೆದುಕೊಂಡಿರುವುದು ಅನೇಕ ಕಡೆಗಳಲ್ಲಿ ನಡೆದ ಸಂಗತಿಯೇ ಆಗಿದ್ದರಿಂದ ಅವರು ಸಹಜವಾಗಿಯೇ ಅನುಮಾನಕ್ಕೊಳಗಾಗಿದ್ದರು.

ಸ್ವಲ್ಪ ತಿಳುವಳಿಕೆಯಿದ್ದ ಕೆಲವರ ಮಕ್ಕಳು ಇತ್ತೀಚಿನ ವರ್ಷಗಳಲ್ಲಿ ಆ ಜಮೀನಿಗಳಿಗೆ ತಮ್ಮ ಸ್ವಂತ  ಪ್ರಯತ್ನದಿಂದ ಮಂಜೂರಾತಿಯನ್ನು ಪಡೆದುಕೊಂಡಿದ್ದಾರೆ ಮತ್ತು ಕೃಷಿ ಮಾಡಿದ್ದಾರೆ.

ಹಲವರಿಗೆ ಹಾಗೆ ಸಿಕ್ಕಿದ ನೆಲ ಅರ್ಧ ಎಕರೆಯಿಂದ ಎರಡು ಎಕರೆಗಳವರೆಗೆ ಇದೆ. ಇನ್ನು ಕೆಲವರು ಏನೂ ಮಾಡದೆ ಕುಳಿತವರಿಗೆ ಮನೆ, ಹಿತ್ತಿಲು ಮಾತ್ರ ಇದೆ.

ಆದರೆ ಒಂದು ವಿಚಾರವನ್ನು ಇಲ್ಲಿ ಹೇಳಲೇಬೇಕು. ಗಣಪಯ್ಯನವರ ಬೇರೆ ಎಲ್ಲ ಸಾರ್ವಜನಿಕ ಕೆಲಸಗಳನ್ನು ಹಾಡಿ ಹೊಗಳುತ್ತಿದ್ದ ಅನೇಕರು ಅವರು ಈ ರೀತಿ ದಲಿತರಿಗೆ ಭೂಮಿ ಕೊಡಿಸಲು ಪ್ರಾರಂಭಿಸಿದಾಗ ನೇರವಾಗಿ ಅವರನ್ನು ಎದುರಿಸಿ ನಿಲ್ಲದಿದ್ದರೂ ಅವರನ್ನು ಹಿಂದಿನಿಂದ ದೂರತೊಡಗಿದರು. ಆ ಕಾಲದಲ್ಲಿ ಎಷ್ಟೋ ಊರುಗಳಲ್ಲಿ ದಲಿತರಿಗೆ ಕೂಲಿ ಕಾರ್ಮಿಕರಿಗೆ ಕೃಷಿ ಜಮೀನಿರಲಿ, ಮನೆ ಕಟ್ಟಿಕೊಳ್ಳಲು ಎರಡು ಗುಂಟೆ ಜಮೀನೂ ಸಿಗುವುದು ಕಷ್ಟವಿತ್ತು. ಬಡವರಿಗೆ ಮನೆ ಕಟ್ಟಿಕೊಳ್ಳಲು ಎರಡು ಗುಂಟೆ ಭೂಮಿ ಕೊಡಬೇಕೆಂಬ ದೇವರಾಜ ಅರಸು ಸರ್ಕಾರದ ಕಾನೂನು ಇದ್ದರೂ, ಅದನ್ನು ಜಾರಿಗಳಿಗೊಳಿಸಲು ಅಧಿಕಾರಿಗಳೂ ಅಷ್ಟೇನೂ ಉತ್ಸಾಹ ತೋರುತ್ತಿರಲಿಲ್ಲ.

ಕೆಲವರು ಗಣಪಯ್ಯನವರಿಂದ ಪ್ರೇರಣೆ ಪಡೆದೋ ಅಥವಾ ತಮ್ಮ ಸ್ಥಳೀಯ ರಾಜಕಾರಣದ ಬಲವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದಲೋ ಒಂದಷ್ಟು ಜನರಿಗೆ ಸಹಾಯ ಮಾಡಿದ್ದುಂಟು. ಆದರೆ ಗಣಪಯ್ಯನಂತವರ ಈ ರೀತಿ ಕೆಲಸಗಳನ್ನು ಕಂಡು ನೂರಾರು ಜನರು ತಮ್ಮ ಜಮೀನಿನ ಪಕ್ಕದಲ್ಲಿದ್ದ ಖಾಲಿ ಸರ್ಕಾರಿ ಜಾಗಕ್ಕೆ ಬೇಲಿ ಸುತ್ತಿ ಒತ್ತುವರಿ ಮಾಡಿ ಕುಳಿತರು. ಆ ಕಾಲದಲ್ಲಿ ಈ ರೀತಿ ಒತ್ತುವರಿಯಾದ ಜಮೀನು ಸಾವಿರಾರು ಎಕರೆಗಳು. ಈ ರೀತಿಯ ಒತ್ತುವರಿಗೆ ಹಲವು ಕಡೆಗಳಲ್ಲಿ ಅಧಿಕಾರಿಗಳೇ ಬೆಂಬಲವಾಗಿ ನಿಂತದ್ದು ಮತ್ತು ಅವರಲ್ಲಿ ಕೆಲವರು ದಲಿತ ಅಧಿಕಾರಿಗಳೇ ಇದ್ದುದು ವಿಪರ್ಯಾಸದ ಸಂಗತಿ.

ಆಗ ಹಾರ್ಲೆ ಕೂಡಿಗೆಯಲ್ಲಿ ನಡೆದ ಒಂದು ಪ್ರಸಂಗವಿದು. ಅಲ್ಲಿ ಇಪ್ಪತ್ತನಾಲ್ಕು ಮನೆಗಳನ್ನು ಕಟ್ಟಲಾಯಿತು ಅಲ್ಲಿಯೂ ಹಾಗೆ ಅರ್ಧ ಎಕರೆಯಿಂದ ಎರಡು ಎಕರೆಗಳಷ್ಟು ಜಾಗ ಪ್ರತಿಯೊಂದು ಮನೆಗೂ ಇತ್ತು. ಇದರಿಂದಾಚೆ ಸುಮಾರು ನಲುವತ್ತು ಎಕರೆಗಳಷ್ಟು ಖಾಲಿ ಜಾಗವಿತ್ತು. ಅದು ಸಾಮಾಜಿಕ ಸಿ ಮತ್ತು ಡಿ ವರ್ಗದ ಜಮೀನಾಗಿದ್ದು ಸಾಮಾಜಿಕ ಅರಣ್ಯೀಕರಣಕ್ಕೆಂದು ಮೀಸಲಿಟ್ಟಿದ್ದರು. ಅದರ ಒಂದು ಭಾಗವೇ ನಾನು ಈ ಹಿಂದೆ ಉಲ್ಲೇಖಿಸಿದ ಮೇಲಳ್ಳಿ ಆಟದ ಮೈದಾನವಿತ್ತು. ಅದನ್ನು ಹೇಗೂ ಉಳಿಸಿಕೊಂಡಿದ್ದೆವು.

ಈ ಇಪ್ಪತ್ತ ನಾಲ್ಕು ಮನೆಗಳಲ್ಲಿರುವವರು ತಮಗೆ ಸಿಕ್ಕಿದ ಜಾಗದಲ್ಲಿ ಅನೇಕ ತರದ ಗಿಡಮರಗಳನ್ನು ನೆಟ್ಟಿದ್ದರು.

ಪಕ್ಕದ ಸ್ಥಳದಲ್ಲಿ ಅಕೇಸಿಯಾ ಗಿಡಗಳನ್ನು ನೆಡಲು ಅರಣ್ಯ ಇಲಾಖೆಯವರು ಬಂದರು. ಒಟ್ಟು ಜಮೀನನ್ನು ಅಳತೆ ಮಾಡಿದಾಗ ಈ ಮನೆಗಳನ್ನು ಕಟ್ಟಿಕೊಂಡವರು ನೆಲವನ್ನು ಒತ್ತುವರಿ ಮಾಡಿದ್ದಾರೆಂದು ಕಂಡಿತು. ಕೂಡಲೇ ಅಧಿಕಾರಿಗಳು ಇವರು ಹಾಕಿದ ಬೇಲಿಯನ್ನು ಕಡಿದು ಜಾಗ ತೆರವು ಮಾಡಲು ಹೇಳಿದರು. ಆದರೆ ಯಾರೂ ಕಡಿಯಲು ಮುಂದಾಗಲಿಲ್ಲ ಆಗ ಅರಣ್ಯ ಇಲಾಖೆಯವರು ತಾವೇ ಮುಂದೆ ನಿಂತು ಹೊರಗಿನಿಂದ ಜನರನ್ನು ಕರೆಸಿ ಬೇಲಿಯನ್ನು ಕಡಿಸತೊಡಗಿದರು. ಇದಕ್ಕೆ ಬೇರೆ ಕೆಲವರ ಕುಮ್ಮಕ್ಕಿತ್ತೆಂದು ನಂತರ ತಿಳಿಯಿತು.

ಯಾರೋ ಹೋಗಿ ಗಣಪಯ್ಯನವರಿಗೆ ಈ ವಿಚಾರವನ್ನು ತಿಳಿಸಿದರು. ಅಲ್ಲಿಗೆ ಗಣಪಯ್ಯ ಬರುವಾಗ ಅರಣ್ಯ ಅಧಿಕಾರಿಯೊಬ್ಬರು ಸ್ಥಳದಲ್ಲಿ ನಿಂತು ಬೇಲಿ ಕಡಿಸುತ್ತಿದ್ದರು. ಗಣಪಯ್ಯ ಅಷ್ಟೊಂದು ಸಿಟ್ಟಿಗೆದ್ದುದನ್ನು ಯಾರೂ ಅದುವರೆಗೆ ಕಂಡಿರಲಿಲ್ಲ.

ಆಟದ ಬಯಲಿನ ಪಕ್ಕದಲ್ಲಿ ಅಕೇಶಿಯ ತೋಪು , ಪಕ್ಕದಲ್ಲಿ ಫಲಾನುಭವಿಗಳ ಮನೆಗಳು,ಕೃಷಿ.ಅರಣ್ಯಾಧಿಕಾರಿಯನ್ನು ಗಣಪಯ್ಯ ತರಾಟೆಗೆ ತೆಗೆದುಕೊಂಡ ಸ್ಥಳ

“ಅವರು ಜಾಗದಲ್ಲಿ ಒಳ್ಳೆಯ ಗಿಡಗಳನ್ನು ನೆಟ್ಟಿದ್ದಾರೆ. ನೀವು ನೆಡುವುದು ಅಕೇಸಿಯ ಗಿಡ. ಅವರ ಬೇಲಿ ಕಡಿಯಲು ನಿನಗೇನು ಅಧಿಕಾರ? ನೆಲದ ಹಕ್ಕು ಕೊಡುವುದೂ ಬಿಡುವುದೂ ಸರ್ಕಾರ, ನೀನು ಯಾರು ? ನಿನ್ನನ್ನು ಈಗಿಂದೀಗಲೇ ಟ್ರಾನ್ಸ್ ಫರ್ ಮಾಡಿಸುತ್ತೇನೆ ನೋಡು” ಎಂದು ಏಕವಚನದಲ್ಲಿಯೇ ಕೂಗಾಡಿದರು. ನಂತರ “ಕಡಿದ ಬೇಲಿಯನ್ನು ನೀನೇ ಹಾಕಿಸಿ ಕೊಡಬೇಕು” ಎಂದರು.

ಇದೇನೋ ವಿಕೋಪಕ್ಕೆ ಹೋಯಿತೆಂದು ಆ ಅಧಿಕಾರಿಗೂ ಅರಿವಾಗಿರಬೇಕು. ಆತ ನಂತರ ಈ ಮನೆಗಳವರ ಬೇಲಿಯ ಒಳಗೆ ಕಾಲಿಡಲಿಲ್ಲ. ಉಳಿದ ಸ್ಥಳ ಮಾತ್ರ ಅಕೇಸಿಯಾ ವನವಾಯಿತು.

ಅಂದು ಗಣಪಯ್ಯನವರು ನಿಂತು ಬೇಲಿ ಹಾಕಿಸಿದ ನೆಲ ಇತ್ತೀಚೆಗೆ ಅಲ್ಲಿ ವಾಸವಿರುವ ಬಡವರಿಗೆ ಮಂಜೂರಾಗಿದೆ.

ನರಗುಂದ ನವಲಗುಂದ ಘಟನೆಯ ನಂತರ ಇಡೀ ರಾಜ್ಯದಲ್ಲಿ ನಂಜುಂಡ ಸ್ವಾಮಿಯವರ ನೇತೃತ್ವದ ಕರ್ನಾಟಕ ರಾಜ್ಯ ರೈತಸಂಘ ಪ್ರಬಲವಾಗಿ ಬೆಳೆಯಿತು. ಹಾಸನಜಿಲ್ಲೆಯಲ್ಲಿ ಹಲವಾರು ಹೋರಾಟಗಾರರು ರೈತಸಂಘದಡಿಯಲ್ಲಿ ಸಂಘಟಿತರಾದರು. ನಮ್ಮ ಕ್ಯಾಮನಹಳ್ಳಿ ಪಂಚಾಯತ್ ಕೇಂದ್ರವಾದ ಬೆಳ್ಳೇಕೆರೆಯನ್ನು ಕೇಂದ್ರವಾಗಿಟ್ಟುಕೊಂಡು ನಾವು ಹಲವರು ಗೆಳೆಯರು ರೈತ ಸಂಘವನ್ನು ಸ್ಥಾಪಿಸಿದೆವು. ನಮ್ಮಲ್ಲಿ ಹಲವರ ಕಾರ್ಯಕ್ಷೇತ್ರ ಗಾಣದ ಹೊಳೆಯಿಂದ ಬೆಳ್ಳೇಕೆರೆಗೆ ವರ್ಗಾವಣೆಯಾಯಿತು.

ರೈತ ಸಂಘಕ್ಕೂ ಮುಂದೆ ಹಲವಾರು ಸಂಘಟನಾತ್ಮಕ ಸಮಸ್ಯೆಗಳು ಎದುರಾದವು. ರೈತಸಂಘವೆಂದರೆ ಭೂಮಿಯನ್ನು ನಂಬಿ ಬದುಕುವವರೆಲ್ಲರೂ ರೈತರೆಂದು ರಾಜ್ಯದ ನಾಯಕರು ಹೇಳುತ್ತಿದ್ದರೆ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಕಾರ್ಮಿಕರು ಮತ್ತು ದಲಿತರು ರೈತ ಸಂಘಗಳಿಂದ ದೂರವೇ ಇದ್ದರು. ನಾವು ಬೆಳ್ಳೇಕೆರೆಯ ಸಂಘಟನೆಯಲ್ಲಿ ಕಾರ್ಮಿಕರನ್ನೂ ಒಳಗೊಂಡು ಅವರ ಸಮಸ್ಯೆಗಳ ಪರಿಹಾರಕ್ಕೂ ಪ್ರಯತ್ನಿಸುತ್ತಿದ್ದರೆ ಪಕ್ಕದಲ್ಲೇ ಇನ್ನೊಂದು ಕಡೆ ರೈತಸಂಘದ ಸದಸ್ಯರು ಏಕಪಕ್ಷೀಯವಾಗಿ ದಿನಗೂಲಿಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದರು. ಕೂಲಿ ಕಾರ್ಮಿಕರಲ್ಲಿ ಮೊದಲೇ ಇದು ಭೂಮಾಲಿಕರ ಸಂಘವೆಂಬ ಭಾವನೆ ಇದ್ದುದರಿಂದ ಇಂತಹ ನಡವಳಿಕೆ ಅವರನ್ನು ರೈತಸಂಘದಿಂದ ಮತ್ತಷ್ಟು ದೂರ ನಿಲ್ಲುವಂತೆ ಮಾಡಿತು.

ರೈತಸಂಘದೊಳಗೇ ನಮ್ಮ ಸಂಘಟನೆಗೂ ಪಕ್ಕದ ಹಳ್ಳಿಗಳ ಸಂಘಟನೆಗಳಿಗೂ ಇಂಥ ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿತ್ತು. ಅದರಿಂದ ಘರ್ಷಣೆಗಳೂ ಆದವು.

ಸ್ವಂತಕ್ಕೆ ಮರ ಮುಟ್ಟು ಬೇಕಾದಲ್ಲಿ ರೈತರು ತಮ್ಮ ಜಮೀನಿನಲ್ಲಿ ಮರವನ್ನು ಕೊಯ್ದು ನಾಟಾ ಮಾಡಿಕೊಳ್ಳಬಹುದೆಂದು ಇದಕ್ಕೆ ಯಾರ ಅನುಮತಿಯನ್ನೂ ಪಡೆಯುವ ಅಗತ್ಯ ಇಲ್ಲವೆಂದೂ ರೈತಸಂಘ ಹೇಳಿತ್ತು. ರೈತಸಂಘ ಬಲವಾಗಿದ್ದ ಕಡೆಗಳಲ್ಲಿ ಅರಣ್ಯ ಇಲಾಖೆ  ನಮಗೇಕೆ ತೊಂದರೆ ಎಂದು ಸುಮ್ಮನೇ ಕುಳಿತರು. ಕೆಲವರು ಅತಿ ಬುದ್ಧಿವಂತರು ಅರಣ್ಯ ಇಲಾಖೆಯವರಿಗೂ ಕಾಣಿಕೆ ಒಪ್ಪಿಸಿ, ರೈತ ಸಂಘಕ್ಕೂ ಅರ್ಜಿ ಸಲ್ಲಿಸಿ ಎರಡೂ ಕಡೆ ಒಳ್ಳೆಯವರಾಗಿ ಮರ ಕಡಿದರು. ಇದೇ ಸಂದರ್ಭವೆಂದು ಕಳ್ಳ ನಾಟಾದವರು ಕೂಡಾ ರೈತಸಂಘದ ಹೆಸರಿನಲ್ಲಿ ಕಾಡು ಬೋಳಿಸಿದರು. ಅರಣ್ಯ ಇಲಾಖೆಯವರು ರೈತ ಸಂಘದವರು ನಮ್ಮನ್ನು ಹಳ್ಳಿಗೆ ಕಾಲಿಡಲು ಬಿಡುತ್ತಿಲ್ಲ ಆದ್ದರಿಂದ ಅರಣ್ಯವೆಲ್ಲಾ ನಾಶವಾಯ್ತೆಂದು ಹುಯಿಲೆಬ್ಬಿಸುತ್ತಾ ತಾವೂ ಮರಕಡಿಯುವವರ ಜೊತೆ ಶಾಮೀಲಾಗಿ ಇನ್ನೊಂದಿಷ್ಟು ಮರಗಳ ನಾಶಕ್ಕೆ ಕಾರಣರಾದರು. ಎಲ್ಲಾ ಒಟ್ಟು ಗೊಂದಲವಾಯ್ತು.

ನಾವು ಪಕ್ಕದ ಒಂದು ಗ್ರಾಮದಲ್ಲಿ ಕೆಲವರು ದಲಿತ ಕೂಲಿ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಡಲು ಹೊರಟೆವು. ಇದರಿಂದ ಆ ಗ್ರಾಮದ ಕೆಲವರು ನಮ್ಮ ಮೇಲೆ ಸಿಟ್ಟಾಗಿ ಹೊಡೆದಾಟಕ್ಕೆ ಬಂದರು. ನಾವು ಅದಕ್ಕೆ ಬಗ್ಗಲಿಲ್ಲ. ಅವರಿಗೆ ನಮ್ಮ ತಂಡದ ಉಳಿದವರಿಗೆ ಏನೂ ಮಾಡಲಾಗಲಿಲ್ಲ. ಆದರೆ ಇದಕ್ಕೆಲ್ಲ ನಾನು ಕಾರಣವೆಂದೂ ನಾನು ಊರಿನಲ್ಲಿ ರಾಜಕೀಯ ಮಾಡಿಕೊಂಡು ತಿರುಗುತ್ತಿದ್ದೇನೆಂದೂ ನನ್ನನ್ನು ಹದ್ದುಬಸ್ತಿನಲ್ಲಿ ಇಡಬೇಕೆಂದೂ ಗಣಪಯ್ಯನವರಲ್ಲಿ ದೂರು ಕೊಟ್ಟರು.

ಗಣಪಯ್ಯನವರು ನನ್ನನ್ನು ಕರೆದು ವಿಚಾರಿಸಿದರು, ನಾನು ವಿಷಯ ವಿವರಿಸಿದೆ. ಆಗ ಅವರು “ನೀವು  ರೈತ ಸಂಘಟನೆ ಮಾಡಿ. ಆದರೆ ನೀವು  ಕೆಲಸ ಮಾಡುತ್ತಿರುವ ರೀತಿ ಸರಿ ಇಲ್ಲ. ಎಲ್ಲ ಕಡೆ ಬೆದರಿಕೆ ಹಾಕುತ್ತ ಅರಾಜಕತೆ ಸೃಷ್ಟಿ ಮಾಡ್ತೀರಿ” ಎಂದರು. ಇದೇ ಮಾತನ್ನು ಬೇರೊಂದು ಸಂದರ್ಭದಲ್ಲಿ ರೈತಸಂಘದ ಬಗ್ಗೆ ಪೂರ್ಣಚಂದ್ರ ತೇಜಸ್ವಿಯವರೂ ಹೇಳಿದ್ದರು. ಪ್ರಾರಂಭದ ಹಂತದಲ್ಲಿ ಗಣಪಯ್ಯ ರೈತಸಂಘಕ್ಕೆ ಸ್ಥಳೀಯವಾಗಿ ಒಂದಷ್ಟು ಹಣ ಸಹಾಯ ಮಾಡಿದರೂ  ನಂತರ ರೈತ ಸಂಘದಿಂದ ದೂರವೇ ಉಳಿದರು.

ರಕ್ಷಿದಿ ದೀಣೆಯಲ್ಲಿ ನಾವು ಬೆಂಬಲಿಸಿ ಮಾಡಿದ ನೆಡುತೋಪು ಈಗ ಸಹಜ ಕಾಡಾಗುವ ಹಾದಿಯಲ್ಲಿ

ಹಿಂದೊಮ್ಮೆ ಗಣಪಯ್ಯನವರು ಗಿಡನೆಡಲು ಉದ್ದೇಶಿಸಿದ್ದ ರಕ್ಷಿದಿ ಬಾರೆಯಲ್ಲೆ ನಾವು ಅರಣ್ಯ ಇಲಾಖೆಯ ಜೊತೆ ಸೇರಿ ಗಿಡನೆಡಲು ಬೆಂಬಲ ನೀಡಿದೆವು. ಆ ಸ್ಥಳ ಎಷ್ಟು ಬೋಳಾಗಿತ್ತೆಂದರೆ ಮಳೆಗಾಲದಲ್ಲಿ ಕೂಡಾ ಹೆಚ್ಚು ಹುಲ್ಲು ಬೆಳೆಯುತ್ತಿರಲಿಲ್ಲ. ಅಲ್ಲಿ ಗಿಡ ನೆಡಲು ಸುತ್ತಲಿನ ಬೇರೆ ಗ್ರಾಮಗಳ ರೈತಸಂಘಗಳು ವಿರೋಧವಿದ್ದರು ಸಹ ನಮಗೆ ಅರಣ್ಯೀಕರಣ ಅಗತ್ಯ ಮನವರಿಕೆಯಾಗಿತ್ತು. ಆಗ ಸಕಲೇಶಪುರದಲ್ಲಿ ಮರಿಗೌಡರು ಎಂಬ ಒಳ್ಳೆಯ ಅರಣ್ಯಾಧಿಕಾರಿ ಇದ್ದರು. ಅವರು ತಾಲ್ಲೂಕಿನಲ್ಲಿ ಯಾರ ಯಾರ ಮೇಲೆ ಕಳ್ಳ ನಾಟಾ ಕಡಿದ ಕೇಸುಗಳಿದ್ದವೋ ಅವರನ್ನು ಕರೆಸಿ  ಗುದ್ದಲಿ ಕೊಟ್ಟು, “ಎಷ್ಟು ಮರ ಕಡಿದಿದ್ದೀರೋ ಏನೋ ಈಗ ಆ ಪಾಪ ಪರಿಹಾರ ಮಾಡಿಕೊಳ್ಳಿ” ಎಂದು ಹೇಳಿ ಅವರ ಕೈಯಲ್ಲೇ  ನೂರಾರು ಗಿಡಗಳನ್ನು ನೆಡಿಸಿದರು!

ಪ್ರಾರಂಭದ ಹಂತದಲ್ಲಿ ಸುತ್ತಲಿನ ಗ್ರಾಮಗಳ ಕೆಲವರು, ಅಲ್ಲಿ ನೆಟ್ಟಿದ್ದ ಗಿಡಗಳನ್ನು ಕಿತ್ತೆಸೆದರೂ, ನಂತರ ನಾವು ಅರಣ್ಯ ಇಲಾಖೆಯ ಪರವಾಗಿ ಗಟ್ಟಿಯಾಗಿ ನಿಂತೆವು. ಒಂದೆರಡು ವರ್ಷಗಳಲ್ಲಿ ಸುಮಾರು ಮೂರು ನಾಲ್ಕು ಗ್ರಾಮಗಳಲ್ಲಿ ನಾಲ್ಕು ನೂರು ಎಕರೆಗೂ ಹೆಚ್ಚು ನೆಲ ಅರಣ್ಯೀಕರಣವಾಯಿತು. ಆಗ ಇವೆಲ್ಲ ಅಕೇಶಿಯಾ ತೋಪುಗಳಾದರೂ ಒಂದು ಸಲ ಕಟಾವು ಆದ ನಂತರ ಮತ್ತೆ ಅಕೇಸಿಯಾ ನೆಡಲು ಬಿಡದೆ ಇದ್ದುದರಿಂದ, ಈಗ ಸಹಜ ಅರಣ್ಯದ ರೀತಿಯಲ್ಲಿ ಪರಿವರ್ತನೆ ಆಗಿವೆ, ಆಗುತ್ತಿವೆ. ಅಂದು ಅಕೇಶಿಯಾ ಮರಗಳ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿರಲಿಲ್ಲ. ಅದರೆ ಅದನ್ನಾದರೂ ನೆಟ್ಟಿದ್ದರಿಂದ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಭೂಮಿ  ಭೂಮಾಲಿಕರಿಂದ ಒತ್ತುವರಿಯಾಗದೆ ಉಳಿಯುವಂತಾಯಿತು. ಈಗ ಅದರಲ್ಲಿ ಕೆಲವು ಭಾಗಗಳಾದರೂ ಸಹಜ ಕಾಡಾಗಿ ಪರಿವರ್ತನೆ ಆಗುತ್ತಿದೆ. ಆದರೆ ಈಗ ಸರ್ಕಾರವೇ ಅದರಲ್ಲಿ ಬಹುಭಾಗವನ್ನು ಹೇಮಾವತಿ ಜಲಾಶಯ ನಿರ್ವಸಿತರಿಗೆ ಮೀಸಲೆಂದು (HRP grant) ಇಟ್ಟು ಕಾಡು ನಾಶ ಮತ್ತ ಭೂ ದಂಧೆಗೆ ಅವಕಾಶ ಮಾಡಿಕೊಡುತ್ತಿದೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಸಕಲೇಶಪುರಕ್ಕೆ ಬ್ರಿಟಿಷ್ ಪ್ಲಾಂಟರ್‌ಗಳ ಕೊಡುಗೆಗಳಿವು: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...