Homeಕರ್ನಾಟಕಜಿ ರಾಜಶೇಖರ್‌ರವರಿಗೆ ಎಪ್ಪತ್ತೈದು; ರಾಜಶೇಖರರ ‘ತಿರುಕನ ಕನಸು’

ಜಿ ರಾಜಶೇಖರ್‌ರವರಿಗೆ ಎಪ್ಪತ್ತೈದು; ರಾಜಶೇಖರರ ‘ತಿರುಕನ ಕನಸು’

- Advertisement -
- Advertisement -

ರಾಜಶೇಖರರ ಜೊತೆ ನನಗೆ ಇರುವ ಮೂವತ್ತು ವರ್ಷಗಳ ವಿಚಿತ್ರ ಗೆಳೆತನದ ಪ್ರಭಾವವೇ, ಅವರ ಬಗ್ಗೆ ಬರೆಯುವುದಕ್ಕೆ ತೀರಾ ಹಿಂಜರಿಯುವಂತೆ ಮಾಡುತ್ತಿದೆ. ಹಲವು ಜಗಳ, ವಕ್ರ ಹಾಸ್ಯಗಳ ರಕ್ಷಣಾ ಕವಚದಲ್ಲಿ ಬಚ್ಚಿಟ್ಟಿರುಂತಿರುವ ಆಪ್ತತೆಯನ್ನು ಆಡಿದರೆ ಅದು ‘ಶಬ್ದದೆಂಜಲು’ ಎನಿಸುವ ಹಾಗೆ ನಾವಿಬ್ಬರೂ ಬದುಕಿದ್ದೇವೆ. ಇಬ್ಬರಿಗೂ ಮೆಚ್ಚುಗೆಯಾದ ಬೇರೆಯವರ ಮಾತು-ಬರಹಗಳ ಬಗ್ಗೆ, ಯಾಕೆ ಮೆಚ್ಚುಗೆ ಆಯ್ತು ಎಂದು ಪರಸ್ಪರ ಗಂಟೆಗಟ್ಟಲೇ ಮಾತಾಡಿಕೊಂಡಿದ್ದೇವೆ; ಹಿಡಿಸದ ಬರಹಗಳ ಬಗ್ಗೆ ಯಾಕೆ ಹಿಡಿಸಿಲ್ಲವೆಂಬುದಾಗಿ ಟೀಕೆಗಳನ್ನು ಹಂಚಿಕೊಂಡಿದ್ದೇವೆ; ಆದರೆ, ಪರಸ್ಪರರ ಬರಹಗಳಲ್ಲಿ ಹಿಡಿಸದ್ದು ಇದ್ದರೆ, ಆ ಬರಹಗಳು ಪ್ರಕಟವಾದ ಪತ್ರಿಕೆಗಳಿಗೆ ನಮ್ಮ ನೇರ ಪ್ರತಿಕ್ರಿಯೆ ಕಳಿಸುವಂತಹ ಪರಿಪಾಠವನ್ನೂ ಕಲಿಸಿದ್ದೂ ರಾಜಶೇಖರರೇ; ಒಬ್ಬರ ಪ್ರತಿಕ್ರಿಯೆಯು ಇನ್ನೊಬ್ಬರಿಗೆ ಸರಿ ಅನಿಸಿದಾಗ ‘ಯು ಆರ್ ರೈಟ್. ಐ ಸ್ಟಾಂಡ್ ಕರೆಕ್ಟೆಡ್’ ಅಂತ ನೇರ ಮುಖಕ್ಕೆ ಹೇಳಬಲ್ಲ ಪ್ರಾಮಾಣಿಕತೆಯನ್ನು ಕಲಿಸಿದ್ದೂ ಅವರೇ.

ರಾಜಶೇಖರರ ಬರಹಗಳನ್ನು ಓದಿ ಬೆಳೆದಿರುವ ನನಗೆ, ಅವರ ಬರಹ ಇಷ್ಟವಾದಾಗ ‘ಹೇ! ನಂಗೆ ಹಿಡಿಸ್ತು. ಅದ್ರಲ್ಲೂ..’ ಅಂತ ಹೇಳ್ತಿರುವಾಗಲೇ ಅವರು ಬಹಳ ತಣ್ಣಗಿನ ದನಿಯಲ್ಲಿ ‘ಹೌದಾ? ಮತ್ತೇ ಇವತ್ತು ಕಾಲೇಜಿನ ಕೆಲಸ ಇಲ್ಲ್ವಾ. ಬಿಡುವಿದ್ರೆ (ಇಂಥಾ ಪತ್ರಿಕೆಯಲ್ಲಿ, ಇಂಥವರ) ಒಳ್ಳೆ ಬರಹವಿದೆ. ಓದಿ. ಛೇ! ನಾವೆಲ್ಲ ಸುತ್ತಲ ಸಂಗತಿಗಳ ಬಗ್ಗೆ ಎಷ್ಟು ಪೆದ್ದರಾಗಿದ್ದೀವಿ ಅಂತ ನಮಗೇ ಗೊತ್ತಾಗ್ತದೆ?’ ಅಂದು ಆ ಬರಹಗಳ ವಿಷಯವಾಗಿ ಚರ್ಚೆ ಶುರು ಮಾಡ್ತಾರೆ. ಹಾಗೆಯೇ, ಅವರಿಗೆ ಯಾವುದೇ ಬರಹ ಇಷ್ಟವಾದರೆ, ಬರೆದವರ ಪರಿಚಯವಿದ್ದರೆ ಅವರಿಗೆ ಫೋನಿನ ಅಥವ ಪತ್ರದ ಮೂಲಕ ‘ನಿಮ್ಮ ಬರಹ ಓದಿದೆ; ತುಂಬಾ ಚೆನ್ನಾಗಿದೆ’ ಎಂದು ಹೇಳ್ತಾರೆ ಅಂತ ತಿಳಿದಿರುವೆ; ಪರಿಚಯ ಇರದಿದ್ದರೆ ಬರೆದ ಪತ್ರಿಕೆಗೆ ತಮ್ಮ ಮೆಚ್ಚುಗೆಯ ಪತ್ರ ಬರೆದದ್ದನ್ನೂ ನೋಡಿರುವೆ; ಮತ್ತೂ ಹಲವಾರು ಗೆಳೆಯರಿಗೆ ಖುದ್ದಾಗಿ ಆ ಬರಹ ಓದಿರೆಂದು ಶಿಫಾರಸ್ಸು ಮಾಡಿರುವುದನ್ನೂ ಕಂಡಿರುವೆ.

ಆದರೆ, ನನ್ನ ಸ್ವತಂತ್ರ ಬರಹಗಳ ಬಗ್ಗೆ ಅವರ ವರಸೆ ಬೇರೆಯೇ. ‘ಫಣಿರಾಜ್, (ಇಂಥಲ್ಲಿ ಪ್ರಕಟವಾದ) ನಿಮ್ಮ ಬರಹ ಓದಿದೆ, ಮತ್ತೇ ಏನು ಸಮಾಚಾರ?’ ಅಂತಲೋ, ಮೂಡ್ ಇದ್ದರೆ ‘ಹಾಡಿ ಹಾಡಿ ರಾಗ ಬಂತು ಅನ್ನೋ ಹಾಗೆ, ನೀವು ನನ್ನ ಕಾಪಿ ಮಾಡಿ ಮಾಡಿ ಬರೆಯೋದನ್ನ ಒಂದಿಷ್ಟು ಕಲ್ತಿದ್ದೀರಾ..’ ಅಂದು ಜೋರಾಗಿ ನಗುತ್ತಲೋ ತಿಳಿಸುವುದು ವಾಡಿಕೆ-ಅಷ್ಟರಿಂದ ಅವರಿಗೆ ಬರಹ ಹಿಡಿಸಿದೆ ಅಂದ್ಕೋಬೇಕು! ಇಲ್ಲ ಯಾರೋ ಮತ್ತೊಬ್ಬರು ಗೆಳೆಯರಿಗೆ ಇವರೇ ನನ್ನ ಬರಹ ಶಿಫಾರಸ್ಸು ಮಾಡಿ, ಅವರು ಓದಿ ‘ರಾಜಶೇಖರ್ ಓದಿ ಅಂದ್ರು? ಹುಡುಕಿ ಓದಿದೆ..’ ಎಂದಾಗ ಮಾತ್ರ, ಈ ಆಸಾಮಿಗೆ ಹಿಡಿಸಿದೆ ಅಂತ ತಿಳಿಯುವುದು. ಇಷ್ಟು ಮಾತ್ರವಲ್ಲದೇ, ಹೆಸರುಳ್ಳ ಬರಹಗಾರರು, ತಾವು ಖ್ಯಾತರು ಎಂಬ ಅಹಂ ಕಳೆದುಕೊಂಡ ಪ್ರಸಂಗಗಳನ್ನು, ರಾಜಶೇಖರ ಸಾಕಷ್ಟು ಸಾರಿ ನನಗೆ ಮಜಕೂರವೆಂಬಂತೆ ನಿರೂಪಿಸಿದ್ದು ಇದೆ. ಹಾಗೆಯೇ, ರಾಜಶೇಖರರ ಜೊತೆ ನಾನು ಹಲವು ಸ್ಥಳ ಅಧ್ಯಯನ ಮಾಡಿದ್ದೇನೆ; ಇಬ್ಬರೂ ನಮ್ಮ ಕರಡು ಬರೆದು, ಪರಸ್ಪರ ತಿದ್ದಿ, ಒಟ್ಟಂದದ ಬರಹಗಳನ್ನು ಬರೆದಿದ್ದೇವೆ; ಆದರೆ, ಪ್ರಕಟಣೆಯಾಗುವ ವೇಳೆ, ಮೂರನೆಯವರು ಯಾರಾದರೂ ಸ್ಥಳ ಅಧ್ಯಯನದಲ್ಲಿ ಜೊತೆಗಿದ್ದರೆ, ಬರಹಗಾರರಾಗಿ ಅವರ ಹೆಸರನ್ನೂ ಸೇರಿಸಬೇಕು ಎಂಬ ನಿಯಮವನ್ನು ರೂಪಿದವರು ರಾಜಶೇಖರ. ಹೊಗಳಿಕೆಯನ್ನು ಕಡ್ಡಿತುಂಡು ಮಾಡಿದಂತೆ ನಿರಾಕರಿಸುವ, ಬರೆದವರ ಹೆಸರಿಗಿಂತ ಬರಹದ ವಸ್ತು-ವಿಷಯದ ನೈಜತೆ ಮುಖ್ಯ ಎಂಬ ನಿಲುವಿನ ವ್ಯಕ್ತಿಯೊಬ್ಬ ತನ್ನ ಸಹಜೀವಿಗಳಿಗೂ ಈ ಗುಣ ರೂಢಿಯಾಗಲಿ ಎಂಬಂತೆ ವರ್ತಿಸಿ, ಪೋಷಿಸುವುದಕ್ಕಿಂತ ದೊಡ್ಡ ಗೆಳೆತನವನ್ನು ನಾ ಕಾಣೆ.

PC : Avadhi Mag

ಇಂತು, ಕನ್ನಡದ ಬರಹಗಾರರಾಗಿ, ಸಹ ಚಳವಳಿಗಾರರಾಗಿ, ರಾಜಶೇಖರರ ಬದುಕು-ಬರಹಗಳನ್ನು, ನಾನಾದರೂ, (ಗೆಳೆತನದ ಸಮೀಪ ನೋಟದ ಅನುಕೂಲದೊಂದಿಗೆ) ಕನ್ನಡದ ಸಹ ಓದುಗರಂತೇ ಓದಬಯಸುತ್ತೇನೆ. ರಾಜಶೇಖರರನ್ನು ಹಲವು ಸಾರಿ ‘ಮಾರ್ಕ್ಸ್‌ವಾದಿ ವಿಮರ್ಶಕ/ಚಿಂತಕ’ ಎಂದು ಗುರುತಿಸಲಾಗುತ್ತದೆ – ಇದು ಖಂಡಿತ ಸರಿಯಾದುದಲ್ಲ (ಕನ್ನಡದ ಸಾಹಿತ್ಯ-ಸಂಸ್ಕೃತಿ-ಸಾಮಾಜಿಕ ವಿಮರ್ಶೆ/ಚಿಂತನೆಗಳಲ್ಲಿ ‘ಮಾರ್ಕ್ಸ್‌ವಾದಿ ಧಾರೆ’ ಎಂಬಂಥದ್ದು ಒಂದು ಇದೆಯೋ? ಎಂದು ಚರ್ಚಿಸಲಿಕ್ಕೆ ಇಲ್ಲಿ ಅವಕಾಶವಿಲ್ಲ). ರಾಜಶೇಖರ, ಶಿವರಾಮ ಕಾರಂತರಂತೆ (ಮತ್ತೂ ಅವರಿಂದ ಪ್ರಭಾವಿತರಾದ), ಒಬ್ಬ ‘ಲಿಬರಲ್’- ತನ್ನ ಬದುಕಿನಿಂದ ಕಂಡುಕೊಂಡ ದೇಶ ಅನುಭವ, ತನ್ನ ಕೋಶಗಳ ಓದಿನಿಂದ ಪಡೆದ ವಿಚಾರಗಳ ಕಂಣ್ಣೋಟದಲ್ಲಿ, ತನ್ನ ಕಾಲದ ಸುತ್ತಮುತ್ತಲಿನ ವಿದ್ಯಮಾನಗಳನ್ನು, ತನಗೆ ಖಚಿತವೆಂದು ಪ್ರಮಾಣಿಸಿಕೊಂಡು ವ್ಯಾಖ್ಯಾನಿಸುವ/ ಟೀಕಿಸುವ ವೈಚಾರಿಕ ಬಗೆ ಇದು; ತಾವು ಮೆಚ್ಚುವ ಬರಹಗಾರರಾದ ಲಂಕೇಶ್ ಮತ್ತು ಗಿರೀಶ್ ಕಾರ್ನಾಡರಂತೆ, ತನ್ನ ‘ಲಿಬರಲ್’ ವಿಚಾರಗಳನ್ನು ಅಧಿಕಾರಸ್ಥರನ್ನು ಎದುರಿಸುವ ಹಾಗು ಅಧಿಕಾರಹೀನರಿಗೆ ಬೆಂಬಲವಾಗಿ ನಿಲ್ಲುವಂತೆ ತೊಡಗಿಸಲು ಉತ್ಸಾಹಿಯಾಗಿರುವ ‘ಸೋಷಿಯಲ್ ಲಿಬರಲ್’; ಇವರಿಬ್ಬರಿಗಿಂತ ಹತ್ತು ಹೆಜ್ಜೆ ಮುಂದೆ ಹೋಗಿ, ತನ್ನಂತೆ ಅಧಿಕಾರಸ್ತರನ್ನು ವಿರೋಧಿಸುವ-ಅಧಿಕಾರಹೀನರಿಗೆ ಬೆಂಬಲವಾಗಿ ಹೋರಾಡುವ ಚಳವಳಿಗಳಲ್ಲಿ ತೊಡಗಿಸಿಕೊಳ್ಳುವ ‘ಸೋಷಿಯಲ್ ಲಿಬರಲ್ ಯಾಕ್ಟಿವಿಸ್ಟ್’.

ಪದೇ ಪದೇ ‘ಲಿಬರಲ್’ ಎಂದು ವಿವರಿಸುತ್ತಿರುವುದಕ್ಕೆ ಕಾರಣ, ಲಿಬರಲ್ ವ್ಯಕ್ತಿ ಎಷ್ಟೇ ಸಮಾಜಮುಖಿ ಆಗಿದ್ದರೂ, ಎಷ್ಟೇ ಚಳವಳಿಗಳ ಸಖರಾಗಿದ್ದರೂ ಸಂಸ್ಥೆ/ಸಂಘಟನೆಗಳು ಕಟ್ಟಿಕೊಟ್ಟ ಸಾಮಾಜಿಕ ಕಂಣ್ಣೋಟಗಳಿಗೆ ಬುದ್ಧಿ ಕೊಡದೇ, ತನ್ನ ವೈಯಕ್ತಿಕ ವಿಚಾರ ಪ್ರಮಾಣಗಳಲ್ಲಿ ಗಟ್ಟಿ ನಂಬಿಕೆಯುಳ್ಳವರು-ರಾಜಶೇಖರ ಅಂಥಾ ವೈಚಾರಿಕರು. ಇಂಥಾ ವೈಚಾರಿಕರಲ್ಲಿ ವ್ಯಕ್ತಿನಿಷ್ಠತೆ ಮತ್ತು ಸ್ವಂತದ ಅಹಂ ಒಂದು ತೂಕ ಜಾಸ್ತಿಯೇ ಇರುತ್ತದೆ; ಆದರೆ, ರಾಜಶೇಖರರ ಬದುಕಿನ ಬವಣೆ ಹಾಗು ಚಳವಳಿಯ ಸಖ್ಯತೆಯ ಕಾರಣವಾಗಿ- ‘ಸಮಾಜದಲ್ಲಿ ಬದುಕುವ ಪ್ರತಿ ಜೀವಿಯೂ ಸಮಾಜ ಜೀವಿ; ಸಮಾಜದ ಕಾಲ-ದೇಶಗಳ ಶಕ್ತಿ, ಮಿತಿಗಳೆರಡೂ ಸಮಾಜ ಜೀವಿಗಳ ನಡೆ-ನುಡಿಗಳ ಶಕ್ತಿ-ಮಿತಿಗಳಾಗಿ ಪ್ರಕಟವಾಗಿ ಸಮಾಜ ದರ್ಶನ ಪಡೆಯಬಹುದೇ ಹೊರತು ವ್ಯಕ್ತಿ ವಿಶಿಷ್ಠ ವಿಚಾರಗಳಿಂದಲ್ಲ’ ಎಂಬ- ಮಾರ್ಕ್ಸ್‌ನ ಮಹತ್ವದ ತತ್ವಶಾಸ್ತ್ರ ಕಂಣ್ಣೋಟವು ರಾಜಶೇಖರರ ಬರಹ-ಆಚರಣೆಗಳಲ್ಲಿ ಹಾಸುಹೊಕ್ಕಾಗಿ ಹೋಗಿದೆ.

ಒಬ್ಬ ‘ಸೋಷಿಯಲ್ ಲಿಬರಲ್’ ಆಗಿ ಅವರು ತನ್ನ ಸುತ್ತಲಿನ ವಿದ್ಯಮಾನಗಳನ್ನು, ತನಗೆ ದಕ್ಕಿದ ಅರಿವಿನ
ಶಕ್ತಿ-ಮಿತಿಗಳಲ್ಲಿ ಗ್ರಹಿಸಿ, ಖಚಿತ ನುಡಿಗಳಲ್ಲಿ ವಿವರಿಸುವರು; ಅದಕ್ಕೆ ತನ್ನ ಸಾಮಾಜಿಕ ಸ್ಥಿತಿಗತಿಯ ಅರಿವಿನ ಮಿತಿ ಇದ್ದರೆ ಇರಲಿ, ಹೇಳುವುದನ್ನು ಈಗಲೇ ಹೇಳಿ ವಾಸ್ತವಕ್ಕೆ ಮುಖಾಮುಖಿಯಾಗುವ ಜರೂರಿದೆ; ತಪ್ಪಾಗಿದ್ದರೆ ಅದು ಬಹಿರಂಗದಲ್ಲೇ ಇರುವುದರಿಂದ ತಿದ್ದಿ ಎಂಬ ವಾಗ್ವಾದಕ್ಕೆ ಆಹ್ವಾನವಿದೆ. ತನ್ನ ವೈಚಾರಿಕತೆಯನ್ನು ತಾನೇ ಹಾಗೆ ಗ್ರಹಿಸಿ ಬರೆಯುವ ಕಾರಣಕ್ಕೆ, ರಾಜಶೇಖರ ತನ್ನ ಬರಹ ಪ್ರಕಟವಾಗಿ ಸಾರ್ವಜನಿಕವಾದ ನಂತರ ಬರಹದ ಆಯುಷ್ಯವು ಮುಗಿದುಹೋಯಿತು ಎಂದೇ ತಿಳಿದಿದ್ದಾರೆ. ಇವತ್ತಿಗೂ ಅವರು, ತಮ್ಮ ಹಿಂದಿನ ಬರಹಗಳ ಬಗ್ಗೆ ಹೊಗಳಿದರೂ-ಟೀಕಿಸಿದರೂ ಯಾವ ಆಸಕ್ತಿಯನ್ನೂ ತೋರುವುದಿಲ್ಲ. ಅವುಗಳಲ್ಲಿ ಇಂದಿಗೂ ಚರ್ಚಾರ್ಹವಿರುವ ಸಂಗತಿಗಳನ್ನು ಎತ್ತಿ ತೋರಿದರೆ, ಇಂದಿನ ವಾಸ್ತವದ ಅರಿವಿನಲ್ಲಿ ಮರುವ್ಯಾಖ್ಯಾನ ಮಾಡುವುದು ಮಾತ್ರ ಅವರಿಗೆ ಆಸಕ್ತಿಯ ಸಂಗತಿ.

ರಾಜಶೇಖರರ ಸಂಸಾರದ ಸ್ಥಿತಿಯ ಕಾರಣವಾಗಿ ಕಷ್ಟದಲ್ಲಿ ಪದವಿ ಶಿಕ್ಷಣ ಮುಗಿಸಿ, ದೊಡ್ಡ ಸಂಸಾರದ ಭಾರ ಹೊರಲು ಮಾಸ್ತರಿಕೆ, ಜೀವ ವಿಮಾ ನಿಗಮದಲ್ಲಿ ಗುಮಾಸ್ತೆಯಾಗಿ ದುಡಿದವರು. ಅವರಿಗೆ ಬರುವ ಸಂಬಳದಲ್ಲಿ ಪುಸ್ತಕಗಳನ್ನು ಕೊಂಡು ಓದುವ ಸವಲತ್ತು ಇರಲಿಲ್ಲ. ಉಡುಪಿಯ ಎಂ.ಜಿ.ಎಂ. ಕಾಲೇಜು, ಗೋವಿಂದ ಪೈ ಸಂಶೋಧನಾ ಕೇಂದ್ರದ ಗ್ರಂಥಾಲಯಗಳು ಹಾಗು ಉಡುಪಿಯ ಸಾರ್ವಜನಿಕ ಗ್ರಂಥಾಲಯಗಳು ಮಾತ್ರವೇ ಅವರ ಕೈಗೆಟುಕುವ ಕೋಶ ಭಂಡಾರಗಳಾಗಿದ್ದವು. ಉಡುಪಿಯೆಂಬ ಊರೇ ಬದುಕಿನ ಮಿತಿಯಾದ ಸ್ಥಿತಿಯಲ್ಲಿ ರಾಜಶೇಖರ ಓದಿ ಸಂಪಾದಿಸಿದ ಜ್ಞಾನವು ಹಲವರಿಗೆ ವಿಶೇಷವೆನಿಸಿದ್ದರೆ ಅದು ಸರಿಯೇ. ಆದರೆ, ಅವರು ಮಾತ್ರ ತಮ್ಮನ್ನು ತಾವು ‘ಕಂಡ ಕಂಡ ಕಾಗದಗಳನ್ನು ಮೇಯುವ ಕತ್ತೆ’ ಎಂದು ಸ್ವವ್ಯಂಗ್ಯ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇಂಥ ವ್ಯಕ್ತಿಗೆ ಕನ್ನಡದ ಖ್ಯಾತ ಮಕ್ಕಳ ಪದ್ಯ ‘ತಿರುಕನ ಕನಸು’ ಬಹಳ ಪ್ರಿಯ; ಸಮಾಜದ ಪ್ರತಿ ಜೀವಿಗೂ ಒಂದು ‘ತಿರುಕನ ಕನಸು’ ಇರುತ್ತದೆ ಎನ್ನುವುದು ಅವರ ಗಟ್ಟಿ ನಂಬಿಕೆ.

ಅಂತೆಯೇ ಅವರು ತಮ್ಮ ‘ತಿರುಕನ ಕನಸು’ ಎಂದು ಹೇಳಿಕೊಳ್ಳುವ ಸಂಗತಿ ಕುತೂಹಲಕರವಾದ್ದು: ‘ಬ್ರಿಟನ್ನಿನ ತತ್ವಜ್ಞಾನಿ ವೈಟ್ಹೆಡ್ ಸಂಸಾರಸ್ಥ; ಪ್ರತಿ ದಿನವೂ ಅವನು ವಿಶ್ವವಿದ್ಯಾಲಯದಿಂದ ಮನೆಗೆ ವಾಪಾಸು ಬರುವಾಗ ತರಬೇಕಾದ ಮನೆವಾಳ್ತೆಯ ಸಾಮಾನುಗಳ ಪಟ್ಟಿಯನ್ನು ಅವನ ಕೋಟಿನ ಕಿಸೆಯಲ್ಲಿಟ್ಟು ಮರೆಯದೇ ತರುವಂತೆ ಅವನ ಹೆಂಡತಿ ಜೋರಲ್ಲಿ ಹೇಳುತ್ತಿದ್ದಳು; ಅವನು ಮಾತ್ರ ಪ್ರತಿ ದಿನವೂ ಬರಿಗೈಯಲ್ಲೇ ಬರುವನು; ವಾರಕ್ಕೊಮ್ಮೆ ಅವನ ಕೋಟನ್ನು ಲಾಂಡ್ರಿಗೆ ಕೊಡುವಾಗ, ಕೋಟಲ್ಲಿ ಅವಳು ತುರುಕಿದ ಸಾಮಾನುಗಳ ಪಟ್ಟಿಯ ರಾಶಿಯನ್ನು ಬಯ್ಯುತ್ತಾ ಖಾಲಿ ಮಾಡುವುದು ಅವನ ಹೆಂಡತಿಗೆ ವಾಡಿಕೆಯಾಗಿ ಹೋಗಿತ್ತು. ಅಂಥಾ ಪಂಡಿತನ ಬದುಕು ನನ್ನಂಥ ತಿರುಕನ ಕನಸು’. ಸದಾ ತನ್ನ ಪಾಡಿಗೆ ತಾನು ಒಂಟಿಯಾಗಿರಲು ಬಯಸುವ ಅವರ ಜೊತೆ ಒಂದಷ್ಟು ದೂರ ನಡೆಯುವಾಗ ಇಂಥಾ ಹತ್ತಾರು ಅಹಂಕಾರ ವಿಸರ್ಜನೆಯ ಕಥನಗಳನ್ನು ಕೇಳಿರುವುದಷ್ಟೇ ಗೆಳೆತನ ಭಾಗ್ಯ. ‘ರಾಜಶೇಖರ್, ಸಂಜೆ ನಿಮ್ಮತ್ರ ಬರ್ತೇನೆ…’ ಅಂದ್ರೆ, ಅದಕ್ಕೆ ಅವರ ಕಟು ಹಾಸ್ಯದ ಉತ್ತರ- ‘ಏನೋ ಸ್ಕೆಚ್ ಹಾಕ್ಕೊಂಡು ಬರ್ತೀದ್ದೀರಾ ನಂಗೊತ್ತು! ನನ್ನಂಥ ಕಲರ್ಲೆಸ್, ಎಮೋಷನ್‌ಲೆಸ್ ಮನುಷ್ಯನ ಕಂಡ್ರೆ ನಿಮಗೆಷ್ಟು ಪ್ರೀತಿ ಇದೆ ಅಂತ ನಂಗೊತ್ತಿಲ್ಲ್ವಾ!’.

ಕೆ.ಫಣಿರಾಜ್

ಕೆ.ಫಣಿರಾಜ್
ಕೋಮು ಸೌಹಾರ್ದ ಚಳವಳಿಯಲ್ಲಿ ತಳಮಟ್ಟದ ಆಕ್ಟವಿಸ್ಟ್ ಆಗಿ ಕೆಲಸ ಮಾಡುತ್ತಾ, ಅದರ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಕೆ.ಫಣಿರಾಜ್ ಅವರ ಆಸಕ್ತಿ ಮತ್ತು ಕಾಳಜಿಯ ಕ್ಷೇತ್ರಗಳು ಹಲವು. ನಮ್ಮ ಕಾಲದ (ಗ್ರಾಮ್ಶಿ ಹೇಳಿದ) ಆರ್ಗ್ಯಾನಿಕ್ ಇಂಟಲೆಕ್ಚುವಲ್‌ಗಳಲ್ಲಿ ಅವರೊಬ್ಬರು ಎಂದರೆ, ಗ್ರಾಮ್ಶಿ ಬಗ್ಗೆ ಪುಸ್ತಕ ಬರೆದ ಫಣಿರಾಜ ಅವರು ಮುನಿಸು ತೋರಬಹುದು.


ಇದನ್ನೂ ಓದಿ: ರಾಜಶೇಖರ ಹಳೆಮನೆ ಅವರ ಹೊಸ ಸಣ್ಣ ಕಥೆ ‘ಸೂತಕ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...